PERCEPTIONS & EXPLORATIONS
ಬೇರೆ ಬೇರೆ ಹಿನ್ನೆಲೆಯಿಂದ ಬಂದು ಒಟ್ಟು ಸೇರಿರುವ ಏಳು ಕಲಾವಿದರ ಅಪರೂಪದ ಸಂಗಮ ಈ ಚಿತ್ರಕಲಾ ಪ್ರದರ್ಶನ.
ಮುರಲೀಧರನ್ ಅಲಗಾರ್, ರಾಜಿ ಚಾಕೊ, ಸಂಜಯ್ ಚಪೋಲ್ಕರ್, ಶ್ಯಾಮಲಾ ರಮಾನಂದ್, ಉಷಾ ಶಾಂತಾರಾಮ್, ಉಷಾ ರೈ ಮತ್ತು ವಿದು ಪಿಳ್ಳೈ ಈ ಚಿತ್ರಕಲಾ ಪ್ರದರ್ಶನದಲ್ಲಿ ಭಾಗವಹಿಸುತ್ತಿರುವ ಕಲಾವಿದರು.
ತಮ್ಮ ಸುತ್ತಲಿನ ಪರಿಸರದಲ್ಲಿ ಅವರು ಕಂಡಿರುವ ಹಾಗೂ ಅವರನ್ನು ತೀವ್ರವಾಗಿ ಕಾಡಿರುವ ವಿಷಯಗಳನ್ನು ಅಯ್ದುಕೊಂಡು ಬೇರೆ ಬೇರೆ ಬಣ್ಣ, ಗೆರೆ, ಕುಂಚಗಳ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ ಈ ಕಲಾವಿದರು.
ಮುರಲೀಧರ್ ಅಲಗಾರ್ ಅವರನ್ನು ಚೆನೈ ಹಾಗೂ ಬೆಂಗಳೂರಿನ ಮಾರಾಟ ಸಮುಚ್ಛಯಗಳಲ್ಲಿ ಕಂಡ ಹೆಣ್ಣುಮಕ್ಕಳ ವಿವಿಧ ಭಾವನೆಗಳು ಬಹಳವಾಗಿ ಕಾಡಿವೆ. ’ಅವಳೊಡನೆ ಮಾತುಕತೆ” ಈ ಪ್ರದರ್ಶನದಲ್ಲಿ ಅವರ ಪೈಂಟಿಂಗ್ ಗಳ ಥೀಮ್ ಆಗಿದೆ. ಅವರದ್ದು ಕಂಟೆಂಪರರಿ ರೀತಿಯ ಅಭಿವ್ಯಕ್ತಿಗಳು.
ರಾಜಿ ಚಾಕೋ ಅವರಿಗೆ ಪರಂಪರೆಯಾಗಿ ಬಂದಿರುವ ಕಲೆಯ ಕಡೆ ಒಲವು ಜಾಸ್ತಿ . ಗಾಢವಾದ ಬಣ್ಣಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸುವ ಚಾಕಚಕ್ಯತೆ ಅವರದ್ದು. ಅವರ ಪೈಂಟಿಂಗ್ ಗಳು ’ಜೀವನದ ವಿಕಾಸ’ಗಳನ್ನು ಸೂಚಿಸುವ ಕಡೆ ಗಮನ ಸೆಳೆಯುತ್ತದೆ.
ಸಂಜಯ ಚಪೋಲ್ಕರ್ ಅವರನ್ನು ಜನರ ಮುಖ ಹಾಗೂ ಅಲ್ಲಿ ವ್ಯಕ್ತವಾಗುವ ಭಾವನೆಗಳು ಬಹಳ ಕಾಡುತ್ತವೆ. ಪ್ರತಿಯೊಂದು ಆಗು ಹೋಗುಗಳಲ್ಲಿ ಅವರು ಕಂಡಿರುವ ಜನರು ವ್ಯಕ್ತಪಡಿಸುವ ಭಾವಗಳನ್ನುಸೆರೆ ಹಿಡಿಯುವ ಪ್ರಯತ್ನ ಮಾಡಿದ್ದಾರೆ. ’ಮನುಷ್ಯತ್ವ ಹಾಗೂ ತಾನು’ ಎನ್ನುವುದು ಅವರ ಕಲಾಕೃತಿಗಳಲ್ಲಿ ಕಾಡುವ ಬಣ್ಣದ ಗೆರೆಗಳು.
ಶ್ಯಾಮಲಾ ರಮಾನಂದ್ ಅವರಿಗೆ ಸುತ್ತಲಿನ ಮರಗಳೇ ಪ್ರಮುಖ ಆಕರ್ಷಣೆ. ಮರಗಳಲ್ಲಿ ಮನುಷ್ಯರ ಧೈರ್ಯ, ಬೇಸರ, ಸಂತಸ, ಪ್ರತಿರೋಧ ಹೀಗೆ ಎಲ್ಲ ಭಾವನೆಗಳನ್ನು ಕಾಣುತ್ತಾರೆ ಶ್ಯಾಮಲಾ.ಈ ಪ್ರದರ್ಶನದಲ್ಲಿ ಅವರು ಬಣ್ಣಗಳಲ್ಲಿ ಹಾಗೂ ಕಪ್ಪು ಶಾಯಿಯಲ್ಲಿ ಮರಗಳು ವ್ಯಕ್ತಪಡಿಸುವ ಭಾವಗಳನ್ನು ಸೆರೆಹಿಡಿಯಲು ಪ್ರಯತ್ನಿಸಿದ್ದಾರೆ.
ಉಷಾ ಶಾಂತಾರಾಮ್ ಅವರಿಗೆ ಮನುಷ್ಯರೇ ಮುಖ್ಯ ಆಕರ್ಷಣೆ. ಬೇರೆ ಬೇರೆ ಕಡೆ ಅವರು ತೋರುವ ಹಾವಭಾವ, ಸುತ್ತಲಿನ ಸ್ಥಿತಿಗತಿಗಳಿಗೆ ಅವರು ತೋರುವ ಪ್ರತಿಕ್ರಿಯೆಗಳು ಅವರ ಪೈಂಟಿಂಗ್ ಗಳಲ್ಲಿನ ಜೀವಾಳ.
ಉಷಾ ರೈ ವಯಸ್ಸಿನಲ್ಲಿ ಹಿರಿಯ ಕಲಾವಿದೆಯಾದರೂ ಅವರು ಸುತ್ತಲಿನ ಜಗತ್ತನ್ನು ನೋಡುವ ರೀತಿ ಚಿಕ್ಕಮಕ್ಕಳಂತೆ. ಅವರ ಮನಸ್ಸು ಮತ್ತು ಕುಂಚಗಳು ಪ್ರಕೃತಿಯ ಕಡೆಗೇ ಹೆಚ್ಚಿನ ಒಲವು ತೋರಿಸುತ್ತವೆ. ಚರಿತ್ರೆಯ ಪಳೆಯುಳಿಕೆಗಳು ಅವರನ್ನು ಆಕರ್ಷಿಸುತ್ತವೆ. ಈ ಪ್ರದರ್ಶನದಲ್ಲಿ ಒಂದೆರಡು ಪಟ್ಟಣದ ಚಿತ್ರಗಳನ್ನೂ ನೋಡಬಹುದು. ಉಳಿದಂತೆ ಪ್ರಕೃತಿಯೇ ಅವರ ಮುಖ್ಯ ಆಕರ್ಷಣೆ ಅದನ್ನೇ ಬಣ್ಣಗಳಲ್ಲಿ ಸೆರೆಹಿಡಿಯುವ ಪ್ರಯತ್ನ ಮಾಡಿದ್ದಾರೆ.
ವಿದು ಪಿಳ್ಳೈ ಅವರು ತಮ್ಮ ಪೈಂಟಿಂಗ್ ಗಳ ಮೂಲಕ ಕಥೆ ಹೇಳ ಬಯಸುತ್ತಾರೆ. ಪ್ರವಾಸ ಪ್ರಿಯರಾದ ಅವರು ಅಲ್ಲಿ ಕಂಡ ವಿವಿಧ ಚಿತ್ರಗಳನ್ನು ಆಸ್ವಾದಿಸಿ ಮನದೊಳಗೆ ತುಂಬಿಕೊಂಡು ಬಂದು ಅದನ್ನು ತಮ್ಮದೇ ರೀತಿಯ ಕಲ್ಪನೆಯ ಬಣ್ಣಗಳಲ್ಲಿ ಅದ್ದಿ ತಮ್ಮ ಸಂತೋಷಕ್ಕಾಗಿ ಚಿತ್ರ ಬಿಡಿಸುತ್ತಾರೆ. ಇಲ್ಲಿ ಅವರು ಅಕ್ರೆಲಿಕ್ ಮತ್ತು ಕಪ್ಪು ಶಾಯಿಯಲ್ಲಿ ತಮ್ಮ ಕನಸುಗಳನ್ನು ಅಭಿವ್ಯಕ್ತಿಸಿದ್ದಾರೆ.
ಈ ಚಿತ್ರಕಲಾ ಪ್ರದರ್ಶನ ಜನವರಿ ೨೭ ರಂದು ಸಂಜೆ ನಾಲ್ಕು ಗಂಟೆಗೆ ಚಿತ್ರಕಲಾ ಪರಿಷತ್ತಿನಲ್ಲಿ ಅನಾವರಣಗೊಳ್ಳಲಿದ್ದು ಫೆಬ್ರವರಿ ೨ರವರೆಗೆ ನಡೆಯಲಿದೆ.
0 Comments