ಉಷಾನರಸಿಂಹನ್ ಹೊಸ ಕಥೆ- ಚಿಗುರಿದ ಕನಸು…

ಉಷಾನರಸಿಂಹನ್

ನಾನು ಮನೆ ಬದಲಿಸಿದೆ. ೫ ವರ್ಷಗಳಿಂದ ಬಾಡಿಗೆಗಿದ್ದ ಅಪಾರ್ಟ್ ಮೆಂಟನ್ನು ಬಿಟ್ಟು ನನ್ನದೇ ಹೊಸಮನೆಗೆ ಹೋಗಬೇಕಿತ್ತು. ಪ್ಯಾಕರ್ಸ್ ಎಂಡ್ ಮೂವರ್ಸ್ ಹೇಳಿ ಮೇಜು, ಕುರ್ಚಿ, ಬೀರು, ಫ್ರಿಡ್ಜ್, ಟಿ.ವಿ… ಸಾಮಾನು ಸರಂಜಾಮುಗಳನ್ನು ಸಾಗಿಸಿಯಾಗಿತ್ತು. ಅದನ್ನೆಲ್ಲ ಹೊಸ ಮನೆಯಲ್ಲಿ ಜೋಡಿಸಿಕೊಂಡೂ ಆಗಿತ್ತು. ಇದ್ದ ಮನೆಯನ್ನು ಚೊಕ್ಕಟಗೊಳಿಸಿ ಮಾಲೀಕರಿಗೆ ಥ್ಯಾಂಕ್ಸ್ ಹೇಳಿ ಕೀ ಕೊಟ್ಟು ಬರುವುದೊಂದೇ ಬಾಕಿಯಿತ್ತು. ಅದಕ್ಕಾಗಿ ಹಳೆಯ ಅಪಾರ್ಟ್ ಮೆಂಟಿಗೆ ಬಂದೆ. ನಾನಿದ್ದುದು ನೆಲ ಅಂತಸ್ತಿನಲ್ಲಿ. ಬೀಗ ತೆರೆದುಕೊಂಡು ಒಳಹೋದೆ. ಕೆಲಸದವಳು ಆಗಲೇ ಬಂದು ಕಾಯುತ್ತಿದ್ದಳು. ಬಚ್ಚಲು, ಕಕ್ಕಸು ಎಲ್ಲವನ್ನು ಫಳಗುಟ್ಟುವಂತೆ ತೊಳೆದು, ಧೂಳು ತೆಗೆದು ಗುಡಿಸಿ, ನೆಲ ಸಾರಿಸಿದ್ದಾಯ್ತು. ಅವಳನ್ನು ಕಳಿಸಿದೆ. ಉದ್ದೇಶಪೂರ್ವಕವಾಗಿಯೆ… ನಾನಿಲ್ಲಿಂದ ಅಮೂಲ್ಯವಾದದ್ದನ್ನೇನೋ ತೆಗೆದುಕೊಂಡು ಹೋಗಬೇಕಿತ್ತು! ಒಂದಿಷ್ಟು ನೆನಪುಗಳು… ಅದಂತೂ ನನ್ನ ಹೃದಯದೊಳಗೆ ಭದ್ರವಾಗಿ ಕೂತಿತ್ತು. ಅದಕ್ಕೂ ಮಿಗಿಲಾದ ನನ್ನ ಕನಸುಗಳನ್ನು ಕೊಂಡೊಯ್ಯಬೇಕಿತ್ತು.

ಈ ಮನೆಯ ಎಲ್ಲೆಂದರಲ್ಲಿ ನಾನವನ್ನು ಬಿತ್ತಿ ಬೆಳೆಸಿದ್ದೆ. ಛತ್ತಿನಲ್ಲಿ, ಕಿಟಿಕಿಯಲ್ಲಿ, ಗ್ರಿಲ್ಲುಗಳ ಮೇಲೆ, ಬಾಲ್ಕನಿಯ ಪಾಟುಗಳಲ್ಲಿ… ಎಲ್ಲ ಕಡೆಯು… ತನಿತೇವ, ಹೊಂಬಿಸಲು ಇರುವೆಡೆಯೆಲ್ಲ ಚೆಂದವಾಗಿ ಬೆಳೆಯುತ್ತವವು! ಬೀಜವಾಗಿದ್ದಾಗ ಕಪ್ಪು ಬಿಳುಪಿನಲ್ಲಿರುವ ಕನಸುಗಳು ಮೊಳಕೆಯೊಡೆದಾಗ ಹಸಿರೆಲೆ ನೂಕಿ ಕಾಂಡ ಬಲಿತಂತೆಲ್ಲ ಗುಲಾಬಿ ಕೆಂಪಿನ ಹೂಗಳಾಗಿ, ಕಾಯಿಗಳಾಗಿ ಕೆಂಪು, ನೇರಳೆ, ಗುಲಾಬಿ ಬಣ್ಣಗಳ ರಸಪುಷ್ಟ ಹಣ್ಣಾಗಿ ಕಣ್ಣೆಳೆಯುತ್ತದೆ. ಥೇಟ್ ಗಿಡಗಳಂತೆಯ ಅದು…

ಒಂದೊಂದನ್ನು ಜಾಗರೂಕವಾಗಿ ಎಬ್ಬಿಕೊಂಡೆ. ಒಂದು ಮೂಟೆಯಷ್ಟಾಯಿತು. ಅದನ್ನೆಲ್ಲ ಹುಷಾರಾಗಿ ಬಾಲ್ಕನಿಯಲ್ಲಿಟ್ಟಿದ್ದ ಮಣ್ಣಿನ ದೊಡ್ಡ ಕುಂಡದೊಳಗೆ ತುಂಬಿಕೊಂಡೆ. ಸ್ವಲ್ಪ ಭಾರವೇ ಆಯಿತು. ಹೊರಲಾರದೆ ಹೊತ್ತು ಹೊರಗಿಟ್ಟುಕೊಂಡೆ. ಓನರ್ ಮನೆಗೆ ಕೀ ತಲುಪಿಸಿ ಶಿಷ್ಟಾಚಾರ ಮುಗಿಸಿ ಬಂದು ಮಣ್ಣಿನ ಕುಂಡವನ್ನೆತ್ತಿ ಸೊಂಟಕ್ಕೆ ಇರುಕಿಕೊಂಡೆ. ಗೇಟಿನಾಚೆ ಬಂದು ಆಟೋ ಹುಡುಕತೊಡಗಿದ. ಆ ವಿಶಾಲ ವಿಭಜಿತ ರಸ್ತೆಯಲ್ಲಿ ನಾನಿದ್ದ ಕಡೆ ಆಟೋಗಳಿರುತ್ತಿರಲಿಲ್ಲ. ರಸ್ತೆ ದಾಟಿಯೇ ಎದುರು ಬದಿಯ ಫುಟ್‌ಪಾತಿನಲ್ಲಿ ನೂರೈವತ್ತು ಅಡಿಗೆ ಆಟೋ ನಿಲ್ದಾಣವಿತ್ತು.

ಈ ಪಲ್ಲಟದ ಅವಾಂತರದಲ್ಲಿ ಮೊದಲಿಗೇ ಸಾಗಿಸಬೇಕಿದ್ದ ಕನಸುಗಳನ್ನು ಇಷ್ಟು ತಡವಾಗಿ ಸಾಗಿಸಲು ಬಹಳ ಬೇಸರವಾಯಿತು. ರಸ್ತೆ ದಾಟಿ ಇನ್ನೇನು ಎದುರಿನ ಆ ಬದಿಗೆ ಹೋಗಬೇಕು… ಓಡುತ್ತಾ ಬಂದ ಹುಡುಗನೊಬ್ಬ ಡಿಕ್ಕಿ ಹೊಡೆದ ಪರಿಣಾಮ ಕುಂಡ ನಡುವಿಂದ ಜಾರಿ ರಸ್ತೆಗೆ ಬಿದ್ದು ಚುಪ್ಪಾಚೂರಾಯಿತು. ಎದೆ ಬಿರಿದ ಹಾಗಾಯಿತು… ಕಣ್ತುಂಬಿ ಮಂಜಾಯಿತು. ಅಲ್ಲೇ ಕುಸಿದು ಕುಳಿತೆ. ನನ್ನ ಕನಸುಗಳೆಲ್ಲ ದಿಕ್ಕಾಪಾಲಾಗಿ ಛಿದ್ರವಾಗಿ ಅಲ್ಲಲ್ಲಿ ಬಿದ್ದಿತ್ತು. ಹಾಗೇ ಸಾವರಿಸಿಕೊಂಡು ಆರಿಸಿಕೊಳ್ಳತೊಡಗಿದೆ. ಯಾವಕ್ಕೂ ಜೀವವಿರಲಿಲ್ಲ! ಬಹುತೇಕ ಸತ್ತೇ ಹೋಗಿದ್ದವು… ಕೆಲವು ಮಾತ್ರ ಆಗಲೋ ಈಗಲೋ ಎನ್ನುವಂತೆ ಉಸಿರಾಡುತ್ತಿದ್ದವು.

ನಾನು ರಸ್ತೆಯ ನಡುವೆ ಕನಸುಗಳನ್ನು ಹೆಕ್ಕುತ್ತ ಕೂತಾಗ ಎದುರಿಂದ ಬಂದ ವಾಹನ ಸವಾರರು ಅಸಹನೆಯಿಂದ ಫ್ರೀಂ ಫ್ರೀಂ… ಎಂದು ಹಾರ್ನ್ ಮಾಡಿದರು. ಒಬ್ಬ ಯುವಕ ಬೈಕನ್ನು ನನ್ನ ಬೆನ್ನಿಗೆ ತಾಗುವಂತೆ ನಿಲ್ಲಿಸಿ ‘ಏನಮ್ಮ ಮನೇಲಿ ಹೇಳಿ ಬಂದಿದೀಯ?’ ಅಂತ ಸಿಡುಕಿದ. ಪಾದಚಾರಿ ಹೆಣ್ಣೊಬ್ಬಳು ಫುಟ್‌ಪಾತಿನಿಂದಿಳಿದು ನನ್ನ ಬಳಿ ಬಂದು ಸಹಾನೂಭೂತಿಯಿಂದ ‘ಚ್ಚುಚ್ಚುಚ್ಚು… ಪಾಪ; ಎಲ್ಲ ಹೋಗಿ ಬಿಟ್ಟವ? ನೊಂದ್ಕೋಬೇಡಿ. ಬೇರೆ ಕಟ್ಟಿಕೊಳ್ಳಿ, ಹೋಗಿದ್ದು ಹೋಯ್ತು… ಇಲ್ಲೇ ಬಿಟ್ಟುಬಿಡಿ. ಈ ಚೂರುಗಳನ್ನಿಟ್ಟುಕೊಂಡು ಏನು ಮಾಡ್ತೀರ? ಅವೇನೂ ಉಪಯೋಗಕ್ಕೆ ಬರಲ್ಲ. ಏಳಿ… ಎಲ್ಲರೂ ಬೈತಿದಾರೆ. ಇಲ್ಲಿ ಕೂತ್ಕೋಬಾರದು’ ಅಂತ ಕೈ ಹಿಡಿದೆಬ್ಬಿಸಿದಳು.

ಫುಟ್‌ಪಾತಿನ ಕಲ್ಲಿಗೆ ಬಡಿದು ರಸ್ತೆಯಲ್ಲಿ ಒಡೆದು ಬಿದ್ದಿದ್ದ ಕುಂಡದ ಒಳಮೈ ನೋಡಿದೆ; ಒಂದಿಷ್ಟು ರಂಗಾಗಿ ಕಾಣಿಸಿತು. ನಾಕಾರು ಚೂರಾಗಿತ್ತು. ದೊಡ್ಡದಾಗಿದ್ದ ಮೂರು ಚೂರನ್ನೆತ್ತಿಕೊಂಡು ಫುಟ್‌ಪಾತಿನಲ್ಲಿ ಕುಳಿತೆ. ನನ್ನ ದುಪ್ಪಟ್ಟಾ ಹಾಸಿ ಕುಂಡದ ಒಳಮೈಗೆ ಅಂಟಿಕೊಂಡಿದ್ದ ರಂಗುಗಳನ್ನು ಕೆರೆದುಕೊಂಡೆ. ದುಪ್ಪಟ್ಟಾ ತುಂಬಿ ಭಾರವಾಗುವಷ್ಟು ಬಣ್ಣಗಳಿದ್ದವು. ತೀರಾ ತಳದಲ್ಲಿ ಒಂದಿಷ್ಟು ಬೀಜಗಳಿದ್ದವು. ಮನಸ್ಸಿಗೆ ಸಂತೋಷವಾಯಿತು.

ಬಣ್ಣಗಳ ಜೊತೆ ಬೀಜಗಳನ್ನೂ ಜತನದಿಂದ ಕಾಗದಕ್ಕೆ ತುಂಬಿಕೊಂಡು ಗಂಟುಕಟ್ಟಿಕೊಂಡು ಆಟೋ ಹಿಡಿದೆ. ನಾಜೂಕಾದ ಕುಂಡದಲ್ಲಿ ತರದೆ ದೊಡ್ಡ ದಪ್ಪ ಬೆಡ್‌ ಶೀಟಿನೊಳಗೆ ಹಾಕ್ಕೊಂಡು ಬಂದಿದ್ದರೆ, ನನ್ನ ಕನಸುಗಳು ಉಳಿಯುತ್ತಿತ್ತು ಅನ್ನಿಸಿತು. ಪಾಪದ ಕನಸುಗಳು… ಕೆಳ ಅಂತಸ್ತಿನ ಮನೆಯಲ್ಲಿದ್ದರೂ ನಾಲ್ಕನೇ ಮಹಡಿ ಮುಟ್ಟುವಷ್ಟು ಎತ್ತರಕ್ಕೆ ಬೆಳೆದಿದ್ದವು! ಇವಿಷ್ಟು ಸೂಕ್ಷ್ಮ ಅಂತ ಗೊತ್ತಿರಲಿಲ್ಲ. ರಂಗುಗಳ ಸಮೇತ ಹೊಸಮನೆಯ ಬಾಲ್ಕನಿಯಲ್ಲಿನ ಗೂಡಿನೊಳಗೆ ಒಂದು ಪಿಂಗಾಣಿ ದಾನಿಯೊಳಗೆ ಬೀಜಗಳನ್ನಿರಿಸಿದೆ. ನನ್ನ ಬದುಕಿನ ಧಾವಂತದಲ್ಲಿ ಅದನ್ನು ಮರೆತೂ ಬಿಟ್ಟೆ!

ಒಂದು ಮಳೆಗಾಲ ಮಕ್ಕಳಿಗೆ ರಜಾದಿನ. ಚೆನ್ನಾಗಿ ಮಳೆ ಸುರಿಯಿತು. ಬೆಳಬೆಳಗ್ಗೆ ಬೆಚ್ಚನ್ನ ಬಿಸಿಲು ಬೀಳುತ್ತಿತ್ತು… ಆಕಾಶದ ತುಂಬ ಒಳ್ಳೆಯ ಗಾಳಿ. ಆಷಾಡವೋ ಶ್ರಾವಣವೋ ಇರಬೇಕು. ಮಕ್ಕಳು ಅಪಾರ್ಟ್‌ಮೆಂಟಿನ ಮೇಲಂತಸ್ತಿನ ಬಿಸಿಲು ಮಚ್ಚಿಗೆ ಹೋಗಿ ಗಾಳಿಪಟ ಹಾರಿಸಬೇಕೆಂದರು. ನನಗೇನೂ ಆಸಕ್ತಿ ಇರಲಿಲ್ಲ. ʻಹೋಗಿ ಹಾರಿಸಿಕೊಳ್ಳಿʼ ಎಂದೆ. ದಾರ ಕೇಳಿದರು ಕೊಟ್ಟೆ. ಅಟ್ಟದಲ್ಲಿದ್ದ ಪಟ ಇಳಿಸಿಕೊಂಡರು. ತಮ್ಮೆಲ್ಲ ಕಪಿಸೈನ್ಯದೊಂದಿಗೆ ಮೇಲೇರಿದರು. ನನ್ನ ಪಾಡಿಗೆ ನಾನು ರೂಮಿನಲ್ಲಿ ಮಲಗಿದ್ದೆ. ಹಾಗೇ ನಾಕಾರು ಗಾಳಿಪಟಗಳು ಕಣ್ಮುಂದೆ ಹಾರತೊಡಗಿದ್ದು ಕಿಟಕಿಯಿಂದ ಕಾಣಿಸಿತು. ಬಹಳ ಎತ್ತರಕ್ಕೆ ಹೋಗಿ ಜೋಲಿ ಹೊಡೆದು ಕೆಳಗೆ ಬಂದು ಮತ್ತೆ ಮೇಲಕ್ಕೆ ಚಿಮ್ಮುತ್ತಿತ್ತು ಪಟಗಳು.

ಒಂದು ಬಾರಿ ನನ್ನ ಕಿಟಕಿಯ ಸಮೀಪವೇ ಹಾರಿತು. ತದೇಕವಾಗಿ ದಿಟ್ಟಿಸಿದೆ… ಅರೆ! ಇವು ನನ್ನ ಹಳೆಯ ಕನಸುಗಳು. ಸತ್ತು ಹೋಯಿತೆಂದುಕೊಂಡಿದ್ದು ಜೀವಂತವಾಗಿ ಹಾರಾಡುತ್ತಿದೆ… ಸಂತೋಷ ತಡೆಯಲಾಗಲಿಲ್ಲ. ರೆಕ್ಕೆ ಕಟ್ಟಿಕೊಂಡಂತೆ ಮೇಲಂತಸ್ತಿಗೆ ಓಡಿಹೋದೆ; ಮಕ್ಕಳು ಆನಂದದಿಂದ ಪಟ ಹಾರಿಸುತ್ತಿದ್ದರು. ‘ಇವೆಲ್ಲಿ ಸಿಕ್ಕವು ನಿಮಗೆ?’ ಎಂದೆ. ‘ನೀನೇ ಮಾಡಿಟ್ಟ ಪಟಗಳಲ್ಲವೆ? ಅಟ್ಟದಲ್ಲಿತ್ತು’ ಅಂದರು. ‘ಇಷ್ಟು ಕಲರ್‌ಫುಲ್ಲಾಗಿ ನಾನು ಮಾಡಿದೆನ?’ ಅಂದೆ ಉದ್ವೇಗದಿಂದ. ‘ಮತ್ತೇ… ನಾವು ಮಾಡಿದ್ದಾ?ʼ ʻನೀನು ಯಾವಾಗಲೋ ಮಾಡಿಟ್ಟಿದ್ದು. ಒಂಚೂರೂ ರಂಗು ಮಾಸಿಲ್ಲ. ಚೌಕಟ್ಟಿನ ಒಂದು ಕಡ್ಡಿಯೂ ಹಂದಿಲ್ಲ. ಅಚ್ಚುಕಟ್ಟಾಗಿದೆ’ ಎಂದವು. ಆಪ್ಯಾಯಮಾನವಾಗಿ ಕಣ್ಣಿನಿಂದ ಗಾಳಿಪಟವನ್ನೊಮ್ಮೆ ನೇವರಿಸಿದೆ. ಅದರ ತುಂಬ ನನ್ನ ಕನಸುಗಳೇ ಇದ್ದವು! ಎಲ್ಲವೂ ಹಳೆಯದೆ… ಯಾವತ್ತೋ ಕಂಡದ್ದು, ಕಟ್ಟಿದ್ದು, ಬೆಳೆಸಿದ್ದು, ಸಾಕಿದ್ದು! ಇಷ್ಟುಕಾಲ ಮರೆಯಾಗಿದ್ದು ಧುತ್ತೆಂದು ಬಂದು ಪಟದ ಕೋನಕೋನಗಳಲ್ಲಿ ರಂಗಾಗಿ ಆಡುತ್ತಿತ್ತು! ನಲಿಯುತ್ತಾ ಪುಟಿಯುತ್ತಿತ್ತು. ನನ್ನನ್ನು ನೋಡಿ ಖುಷಿಯಿಂದ ‘ಹಲೋ’ ಎಂದು ಕೈ ಬೀಸಿದವು. ಮತ್ತೊಂದಚ್ಚರಿ ಕಾದಿತ್ತು ನನಗೆ… ನನ್ನ ಹೊಸ ಕನಸುಗಳೆಲ್ಲ ಹಳೆಯ ಗಾಳಿಪಟಕ್ಕೆ ಬಾಲಂಗೋಚಿಯಾಗಿ ನಲಿಯುತ್ತಿದ್ದವು. ಎಲಾ ಕನಸುಗಳೆ! ಏನಿದು ನಿನ್ನ ಶಕ್ತಿ ಅಂದುಕೊಂಡೆ.

ನಾನು ಬಾಲ್ಕನಿಯಲ್ಲಿ ತುಂಬಿಟ್ಟ ಕನಸಿನ ಬೀಜಗಳಗೇನಾಯ್ತೆಂಬ ಕುತೂಹಲ ಬಂತು. ಹೋಗಿ ನೋಡಿದೆ ಅದರಲ್ಲಾಗಲೇ ಸಾಕಷ್ಟು ಮೊಳಕೆಯೊಡೆದಿದ್ದವು. ಮೊಳಕೆಯೊಡೆದವುಗಳನ್ನು ಪರೀಕ್ಷಿಸಿದೆ. ಎಲ್ಲವೂ ನಾನೇ ಸ್ವಂತ ಕಟ್ಟಿದ್ದು. ನನ್ನ ಎದೆಯ ಕಾವಿನಲ್ಲಿ ಕಲ್ಪನೆಯ ಬೀಜಗಳು ಕನಸಾಗಿ ಅರಳಿಕೊಂಡಂತವು! ಅಂದ-ಚೆಂದ ನೋಡಿ ಬೇರೆಡೆಯಿಂದ ತಂದವು, ಯಾರೋ ಒತ್ತಾಯದಿಂದ ತಗಲು ಹಾಕಿದ್ದು ತೇವವನ್ನು ಹೀರದೆ, ಬಿಸಿಲಿಗೆ ಅರಳದೆ ಬಿಗಿತುಕೊಂಡಿತ್ತು. ಮೊಳೆತ ಬೀಜಗಳು ಬಿಸಿಲಿನ ಕಡೆಗೆ ಜಿಗಿಯಲು ಆಗಲೇ ಸಜ್ಜಾಗುತ್ತಿತ್ತು. ಅದರ ಬೇರುಗಳು ಕುಂಡದೊಳಗಿನ ತೇವಾಂಶವನ್ನು ಹೀರಿಕೊಳ್ಳಲು ಹರಡತೊಡಗಿತ್ತು…

‍ಲೇಖಕರು Admin

October 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: