‘ಉಳಿದವರಿಗಿಂತ ಭಿನ್ನವಾಗಿರಬೇಕು ಎಂಬ ಹಟ ನನಗೆ ಇದ್ದೇ ಇದೆ’ – ಎಸ್‌ ದಿವಾಕರ್


ಹಿರಿಯ ಸಾಹಿತಿ, ಕನ್ನಡದ ಪ್ರಮುಖ ವಿಮರ್ಶಕರಾದ ಎಸ್‌ ದಿವಾಕರ್ ಅವರಿಗೆ 80. ಈ ಸಂದರ್ಭದಲ್ಲಿ ಅವರ ಸ್ನೇಹಿತರು ‘ನಮ್ಮ ದಿವಾಕರ್’ ಎಂಬ ಸಂಗೀತ-ಸಾಹಿತ್ಯದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ದಿವಾಕರ್ ಪ್ರಪಂಚಕ್ಕೆ ಪ್ರವೇಶಿಕೆ ಒದಗಿಸುವಂಥ ವಿಶಿಷ್ಟವಾದ ಪುಸ್ತಕ ‘ಪರಿಮಳದ ಪಡಸಾಲೆ’ ಬಿಡುಗಡೆಯಾಗುತ್ತಿದೆ. ವೀರಲೋಕ ಪುಸ್ತಕ ಇದನ್ನು ಪ್ರಕಟಿಸಿದೆ. ಈ ಪುಸ್ತಕಕ್ಕಾಗಿ ನಡೆಸಲಾದ ಸುದೀರ್ಘ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಛಾಯಾಚಿತ್ರಗಳು : ದಿನೇಶ್ ಹೆಗಡೆ ಮಾನೀರ್

• ಎಲ್ಲರಿಗೂ ಮೊದಲ ಬರವಣಿಗೆ ಅನ್ನುವುದು ಮರೆಯಲಾರದ್ದು. ನಿಮ್ಮ ಮೊದಮೊದಲ ಬರವಣಿಗೆ ಯಾವುದು? ಆ ಬರವಣಿಗೆಗಳು ಹುಟ್ಟಿಕೊಂಡ ಸಂದರ್ಭ ಎಂಥದ್ದು?

ನನ್ನ ಮೊದಲ ಬರವಣಿಗೆ ಕವನಗಳೇ. ಆಗ ಕೆ.ಎಸ್. ನರಸಿಂಹಸ್ವಾಮಿ ಅವರ ಕವನಗಳ ಹುಚ್ಚೂ ಇತ್ತು. ಒಂದಿಷ್ಟು ಕವನಗಳನ್ನು ಬರೆಯುತ್ತಿದ್ದೆ. ಹರೆಯ, ಪ್ರೇಮದ ಬಗ್ಗೆ ಬರೆಯುತ್ತಿದ್ದೆ. ಅದಕ್ಕೇನೂ ಅನುಭವ ಬೇಕಿಲ್ಲವಲ್ಲ. ಒಬ್ಬಳು ಹುಡುಗಿಯನ್ನು ಕಲ್ಪನೆ ಮಾಡಿಕೊಳ್ಳುವುದು, ಬರೆಯುವುದು. ಬಹುತೇಕ ಪದ್ಯಗಳು ಹಾಗೆಯೇ ಇರುತ್ತಿದ್ದವು. ಆಗ ‘ಮೈಸೂರ ಮಲ್ಲಿಗೆ’ ಬಹಳ ಪ್ರಖ್ಯಾತ ಕವನಸಂಕಲನ. ದೇವಂಗಿ ಚಂದ್ರಶೇಖರ್ ಅಂತೊಬ್ಬರು ಇದ್ದರು. ಅವರು ಕುವೆಂಪು ಅವರ ಸಂಬಂಧಿಕರು. ತುಂಬ ಸೊಗಸಾಗಿ ನರಸಿಂಹಸ್ವಾಮಿ ಅವರ ಹಾಡುಗಳನ್ನು ಹಾಡುತ್ತಿದ್ದರು. ನರಸಿಂಹಸ್ವಾಮಿ ‘ಮೈಸೂರ ಮಲ್ಲಿಗೆ’ಯ ಮುನ್ನುಡಿಯಲ್ಲಿ, ‘ಇಲ್ಲಿಯ ಕೆಲವು ಕವನಗಳನ್ನು ಅಲ್ಲಲ್ಲಿ ಹಾಡಿ ಪ್ರಚಾರ ಮಾಡಿದ ದೇವಂಗಿ ಚಂದ್ರಶೇಖರ್ ಅವರಿಗೆ’ ಎಂದು ಬರೆದಿದ್ದಾರೆ. ಆ ದೇವಂಗಿ ಚಂದ್ರಶೇಖರ್ ಸುಮಾರು ಮೂವತ್ತು ವರ್ಷಗಳ ನಂತರ ಆಕಾಶವಾಣಿ ಆಡಿಷನ್‌ಗೆ ಬಂದಿದ್ದರು. ಆಗ ನಾನು ಅವರನ್ನು ಭೇಟಿ ಮಾಡಿದ್ದೆ.

ನನಗೆ ಆಗ ‘ಮೈಸೂರ ಮಲ್ಲಿಗೆ’ ಪದ್ಯಗಳ ಥರ ಬರೆಯಬೇಕು ಎಂಬ ಹುಚ್ಚಿತ್ತು. ‘ಬೆಂಗಳೂರ ಚೆಂಗುಲಾಬಿ’ ಅಂತೊಂದು ಪದ್ಯ ಬರೆದಿದ್ದೆ. ಆ ರೀತಿಯ ಸೋ ಕಾಲ್ಡ್‌ ಪ್ರೇಮಪದ್ಯಗಳನ್ನು ಸಾಕಷ್ಟು ಬರೆಯುತ್ತಿದ್ದೆ. ಆಗ ಮಾಸ್ತಿ ಅವರು ‘ಜೀವನ’ ಪತ್ರಿಕೆ ನಡೆಸುತ್ತಿದ್ದರು. ಅದಕ್ಕೆ ಕಳಿಸುತ್ತಿದ್ದೆ. ಹತ್ತು ಪದ್ಯಗಳನ್ನು ಕಳಿಸಿದರೆ ಒಂದು ಪದ್ಯ ಪ್ರಕಟಿಸುತ್ತಿದ್ದರು. ನನ್ನ ಮೊದಲ ಬರಹಗಳನ್ನು ಪ್ರಕಟ ಮಾಡಿದ್ದು ಮಾಸ್ತಿ. ಹಾಗೆ ನನ್ನ ಏಳೆಂಟು ಕವನಗಳು ‘ಜೀವನ’ದಲ್ಲಿ ಪ್ರಕಟವಾಗಿದ್ದವು. ಆಗ ನನಗಿನ್ನೂ ಇಪ್ಪತ್ತೆರಡು ಇಪ್ಪತ್ಮೂರು ವರ್ಷ ಇರಬೇಕು. ಆ ಯಾವ ಪದ್ಯಗಳೂ ನೆನಪಿಲ್ಲ.

ನನ್ನ ಮೊದಲ ಪುಸ್ತಕ ಒಂದು ಅನುವಾದ. ಅದು ಇಬ್ಸನ್ನನ ‘ಎನಿಮಿ ಆಫ್‌ ದಿ ಪೀಪಲ್‌’. ಅದನ್ನು ಗೋಪಾಲಕೃಷ್ಣ ಅಡಿಗರೇ ಅನುವಾದಿಸಲು ಹೇಳಿ ಪ್ರಕಟಿಸಿದ್ದು. ಎರಡನೇ ಪುಸ್ತಕ ‘ಇತಿಹಾಸ’ ಕಥಾಸಂಕಲನ. ಅದನ್ನು ಬಾಕಿನ ಪ್ರಕಟಿಸಿದರು. ಆದರೆ ಮೊದಲು ಬರೆಯುತ್ತಿದ್ದದ್ದು ಪದ್ಯಗಳನ್ನೇ. ಆಗ ನವ್ಯ ಚಳವಳಿ ಶುರುವಾಗಿತ್ತು. ನಾಲ್ಕು ಶಬ್ದಗಳ ಒಂದು ಸಾಲಿನ ಕೆಳಗೆ ಇಪ್ಪತ್ತು ಶಬ್ದಗಳ ಇನ್ನೊಂದು ಉದ್ದನೆ ಸಾಲು. ಹೀಗೆಲ್ಲ ಬರೆದರೆ ನವ್ಯ ಸಾಹಿತ್ಯ ಅಂತ ತಿಳಿದುಕೊಂಡಿದ್ದ ಕಾಲ ಅದು. ನಾನು ‘ಸಾಕ್ಷಿ’, ‘ಸಂಕ್ರಮಣ’ ಪತ್ರಿಕೆಗಳ ಚಂದಾದಾರ ಆಗಿದ್ದೆ. ಅವುಗಳಲ್ಲೆಲ್ಲ ಇಂಥ ಪದ್ಯಗಳೇ ಬರುತ್ತಿದ್ದವು. ನಾನು ಹಾಗೆ ಬರೆದ ಕವನಗಳನ್ನೆಲ್ಲ ಒಮ್ಮೆ ಎ.ಕೆ. ರಾಮಾನುಜನ್ ಅವರಿಗೆ ತೋರಿಸಿದೆ. ಅವೆಲ್ಲ ಯಾಕೆ ಒಳ್ಳೆಯ ಪದ್ಯಗಳಲ್ಲ ಎಂದು ರಾಮಾನುಜನ್ ನನಗೆ ಕನ್ವಿನ್ಸ್ ಆಗುವ ಹಾಗೆ ಹೇಳಿದರು. ಹಾಗಾಗಿ ಪದ್ಯ ಬರೆಯುವುದನ್ನು ನಿಲ್ಲಿಸಿದೆ.

• ನಿಮ್ಮ ಮೊದಲ ಕವನ ಸಂಕಲನ ‘ಆತ್ಮಚರಿತ್ರೆಯ ಕೊನೆಯ ಪುಟ’. ಅದಕ್ಕೆ ಮುದ್ದಣ ಪ್ರಶಸ್ತಿ ಬಂತು, ಸಾಕಷ್ಟು ಒಳ್ಳೆಯ ವಿಮರ್ಶೆಗಳೂ ಬಂದವು. ಅದಾದ ಮೇಲೆ ನೀವು ಪದ್ಯ ಬರೆಯುವುದನ್ನೇ ಬಿಟ್ಟುಬಿಟ್ಟಿದ್ದಿರಿ. ಆಮೇಲೆ ಇದ್ದಕ್ಕಿದ್ದಂತೆ, 2019ರಲ್ಲಿ ‘ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ’ ಮತ್ತು 2020ರಲ್ಲಿ ‘ವಿಧಾನಸಭೆಯಲ್ಲೊಂದು ಹಕ್ಕಿ’ – ಹೀಗೆ ಎರಡು ಕವನಸಂಕಲನಗಳನ್ನು ಒಂದರ ಹಿಂದೊಂದು ಪ್ರಕಟಿಸಿದಿರಿ. ನಿಮ್ಮ ಒಟ್ಟಾರೆ ಬರವಣಿಗೆಯನ್ನು ನೋಡಿದರೆ ಹೀಗೆ ಪಟ್ಟುಬಿಡದೇ ಒಂದರ ಹಿಂದೆ ಇನ್ನೊಂದು ಪುಸ್ತಕ ಪ್ರಕಟವಾಗಿದ್ದು ತುಂಬ ಕಡಿಮೆ. ಅದರಲ್ಲಿಯೂ ಕಾವ್ಯವಂತೂ ಇರಲೇ ಇಲ್ಲ. ನಿಮಗೆ ಇದ್ದಕ್ಕಿದ್ದ ಹಾಗೆ ಮತ್ತೆ ಕವಿತೆ ಬರೆಯಬೇಕು ಅನಿಸಿದ್ದು ಯಾಕೆ?

ನಾನು ನನ್ನ ಆರಂಭಿಕ ಕವನಗಳನ್ನೆಲ್ಲ ರಾಮಾನುಜನ್ ಅವರಿಗೆ ತೋರಿಸಿದೆನೆಂದು ಹೇಳಿದೆನಲ್ಲ, ಆಗ ಅವರು ಅದನ್ನೆಲ್ಲ ಓದಿ, ‘ಈ ಸಾಲು ಏನು ಹೇಳುತ್ತದೆ? ಇದರಲ್ಲಿ ನಿಮ್ಮ ಸ್ವಂತಿಕೆ ಏನಿದೆ? ಇಡೀ ಕವನದ ಮೂಲಕ ನೀವು ಏನು ಹೇಳಲು ಹೊರಟಿದ್ದೀರಿ? ಕವನದಲ್ಲಿ ಒಂದು ಧ್ವನಿ ಅಂತ ಇರುತ್ತದಲ್ಲ, ಆ ಧ್ವನಿ ಎಲ್ಲಿದೆ ಇಲ್ಲಿ?’ ಎಂದೆಲ್ಲ ಕೇಳಿದರು. ಅವರು ತುಂಬ ಸೌಮ್ಯ ವ್ಯಕ್ತಿ. ಒಂದು ಮಾತು ಹೇಳಿದ್ರು: ‘ಏನೇ ಬರೆದರೂ ಬರೆದವರ ಧ್ವನಿ ಇರಬೇಕು. ನಮ್ಮದೇ ಒಂದು ಧ್ವನಿ ಬರುವವರೆಗೆ ನಾವು ಬರೆಯುವುದರಲ್ಲಿ ಅರ್ಥ ಇಲ್ಲ.’ ಅದಾಗಿ ಎಷ್ಟೋ ವರ್ಷಗಳಾದ ಮೇಲೆ ಅಡಿಗರ ‘ಭಾವತರಂಗ’ದ ಮೊದಲ ಪದ್ಯದಲ್ಲಿ–

‘ಅನ್ಯರೊರೆದುದನೆ ಬರೆದುದನೆ ನಾ ಬರೆಬರೆದು
ಬಿನ್ನಗಾಗಿದೆ ಮನವು ಬಗೆಯೊಳಗನೇ ತೆರೆದು
ನನ್ನ ನುಡಿಯನೆ ಬಣ್ಣ ಬಣ್ಣದಲಿ ಬಣ್ಣಿಸುವ
ಪನ್ನತಿಕೆ ಬರುವನಕ, ನನ್ನ ಬಾಳಿದು ನರಕ

ಎಂಬ ಸಾಲುಗಳನ್ನು ಓದಿದಾಗ ಅಚ್ಚರಿಯಾಗಿತ್ತು. ಅಡಿಗರಿಗೆ ಮೊದಲ ಕವನ ಬರೆಯುವಷ್ಟರಲ್ಲಿಯೇ ತಾವು ಏನು ಎಂಬುದು ಗೊತ್ತಾಗಿಬಿಟ್ಟಿತ್ತಲ್ಲ. ನಮ್ಮಲ್ಲಿ ಕಾರಂತ, ಕುವೆಂಪು, ಚಿತ್ತಾಲ, ಅನಂತಮೂರ್ತಿ, ಹೀಗೆ ದೊಡ್ಡ ಲೇಖಕರು ಯಾರನ್ನೇ ತೆಗೆದುಕೊಳ್ಳಿ. ತಮ್ಮ ಸಾಧ್ಯತೆ ಏನು ಎಂಬುದು ಅವರಿಗೆಲ್ಲ ಬಹಳ ಕಿರಿಯ ವಯಸ್ಸಿನಲ್ಲಿಯೇ ಗೊತ್ತಾಗಿಬಿಟ್ಟಿತ್ತು. ನಾನು ಅಷ್ಟು ಪುಣ್ಯವಂತ ಅಲ್ಲ.

ಅಡಿಗರ ‘ಭಾವತರಂಗ’, ‘ಕಟ್ಟುವೆವು ನಾವು’ ಸಂಕಲನಗಳ ನಂತರ ‘ಚೆಂಡೆಮದ್ದಳೆ’ ಬಂತಲ್ಲ, ಅದರಲ್ಲಿ ಕಾವ್ಯದ ಸ್ವರೂಪವೇ ಬದಲಾಗಿತ್ತು. ‘ಗೊಂದಲಪುರ’ ಅಥವಾ ‘ಹಿಮಗಿರಿಯ ಕಂದರ’ ಪದ್ಯದಲ್ಲಿ ಬರುವ ಸಾಲುಗಳು ಅದುವರೆಗಿನ ಕನ್ನಡ ಸಾಹಿತ್ಯದಲ್ಲಿಯೇ ನಿಮಗೆ ಸಿಗುವುದಿಲ್ಲ. ಅದು ಹೇಗೆ ಸಾಧ್ಯವಾಯ್ತ? ನಾವು ಪರಂಪರೆ ಎಂದು ಮಾತಾಡುತ್ತೇವೆ. ಆದರೆ ಪರಂಪರೆಯ ಜೊತೆಗೆ ಆಧುನಿಕತೆಯ ಅನುಸಂಧಾನ ನಡೆದಾಗಲೇ ಒಂದು ಹೊಸದು ಹುಟ್ಟುತ್ತದೆ. ಬರೀ ಪರಂಪರೆಗೇ ಅಂಟುಕೊಂಡಿದ್ದರೆ ಹಳೆಯ ಛಂದೋರೂಪಗಳಲ್ಲಿ ಬರೆದುಕೊಂಡು ಇರಬೇಕಾಗುತ್ತದೆ. ಅದು ಅಡಿಗರಿಗೆ ಗೊತ್ತಾಗಿತ್ತು. ಅದರ ಜೊತೆಗೆ ತನಗೇನು ಸಾಧ್ಯವಿದೆ ಎಂಬುದೂ ಅವರಿಗೆ ತಿಳಿದಿತ್ತು.

ಈ ಭಿನ್ನತೆಯ ಆಸೆ ನನಗೂ ಬಹಳ ಇದೆ. ನಾನು ಏನೂ ಮಾಡದೇ ಇದ್ದರೂ ಪರವಾಗಿಲ್ಲ. ಏನಾದರೂ ಮಾಡಿದರೆ ಅದು ಉಳಿದವರಿಗಿಂತ ಭಿನ್ನವಾಗಿರಬೇಕು ಎಂಬ ಹಟ ನನಗೆ ಇದ್ದೇ ಇದೆ. ಪೇಂಟಿಂಗ್‌, ಕಾರ್ಟೂನ್‌, ಇತ್ಯಾದಿ ರಚಿಸುವುದು; ಸಂಗೀತ ಕಲಿಯಲು ಹೋಗುವುದು – ಈ ಎಲ್ಲವೂ ನನ್ನನ್ನು ನಾನು ಕಂಡುಕೊಳ್ಳುವ ಪ್ರಯತ್ನಗಳು ಅನಿಸುತ್ತವೆ.

ನಾನು ಕಾರ್ಟೂನೇ ಮಾಡಿಕೊಂಡು ಇದ್ದಿದ್ದರೆ ಒಳ್ಳೆಯ ವ್ಯಂಗ್ಯಚಿತ್ರಕಾರ ಆಗಬಹುದಿತ್ತೇನೋ. ಆದರೆ ಅದು ನನ್ನ ಕ್ಷೇತ್ರವಲ್ಲ ಎಂದು ಬಹಳ ಬೇಗ ಅನಿಸಿತು. ಬಿಟ್ಟುಬಿಟ್ಟೆ. ಆ ಕಾಲದಲ್ಲಿ ಪತ್ರಿಕೆಗಳವರು ಒಂದು ಇಪ್ಪತ್ತೈದು ಮೂವತ್ತು ರೂಪಾಯಿ ಸಂಭಾವನೆ ಕೊಡುತ್ತಿದ್ದರು. ನನಗದು ದೊಡ್ಡ ಮೊತ್ತ ಆಗ. ಎರಡು ಮೂರು ವರ್ಷ ಕಾರ್ಟೂನ್ ರಚಿಸಿದೆ.

• ನಿಮ್ಮ ಕಾವ್ಯದ ಹಿನ್ನೆಲೆಯಲ್ಲಿ ಅಡಿಗರ ಪದ್ಯಗಳನ್ನು ನೆನಪಿಸಿಕೊಂಡಿರಿ. ಅಡಿಗರ ‘ಇಂದು ನಮ್ಮೀ ನಾಡು’ ಪದ್ಯವನ್ನು ಮತ್ತೆ ಈ ಕಾಲಕ್ಕೆ ಹೊಂದುವ ಹಾಗೆ ಬರೆದಿದ್ದೀರಿ? ಅಂಥದ್ದೊಂದು ಕವನವನ್ನು ಯಾಕೆ ಬರೆಯಬೇಕು ಅನ್ನಿಸಿತು ನಿಮಗೆ?

ಕರ್ನಾಟಕ ಸಂಗೀತದಲ್ಲಿ ಮೇಳಕರ್ತ ರಾಗಗಳು ಎಂದಿವೆ. ಒಟ್ಟು 72 ಮೇಳಕರ್ತ ರಾಗಗಳು. ಅವು ಒಂದೊಂದೂ ಒಬ್ಬೊಬ್ಬ ದೊರೆ ಇದ್ದ ಹಾಗೆ. ಆ ರಾಗಗಳಲ್ಲೇ ಒಂದು ರಾಗದ ಒಂದು ಸ್ವರ, ಇನ್ನೊಂದು ರಾಗದ ಮತ್ತೊಂದು ಸ್ವರ, ಮತ್ತೊಂದು ರಾಗದ ಮಗದೊಂದು ಸ್ವರವನ್ನು ತೆಗೆದುಕೊಂಡು ಒಂದು ಹೊಸ ರಾಗ ಸೃಷ್ಟಿಸಬಹುದು. ಅದನ್ನು ಜನ್ಯರಾಗ ಅನ್ನುತ್ತಾರೆ. ಬಹುತೇಕ ಸಿನಿಮಾಗಳಲ್ಲಿ ಅನೇಕ ರಾಗಗಳನ್ನು ತೆಗೆದುಕೊಂಡು ಕಸಿಮಾಡಿ ಒಂದು ಹೊಸ ರಾಗ ಸೃಷ್ಟಿಸಿರುತ್ತಾರೆ. ಅಂದರೆ, ಜನಕರಾಗಗಳು ಇರುವುದು 72, ಜನ್ಯರಾಗಗಳು ಸಾವಿರಾರು. ಈ ಒಂದು ಪರಿಕಲ್ಪನೆಯನ್ನು ನೀವು ಕಾವ್ಯಕ್ಕೆ ಅನ್ವಯಿಸಿದರೆ, ಜನಕಕವಿಗಳು ಕೆಲವೇ ಕೆಲವರು. ಜನ್ಯ ಕವಿಗಳು, ನಮ್ಮಂಥವರು, ಬೇಕಾದಷ್ಟು ಮಂದಿ. ಜನಕ ಕವಿ ಮಾಡಿದ ಒಂದು ಪ್ರಯೋಗ. ಜನ್ಯ ಕವಿ ಕೂಡ ಒಂದು ಪ್ರತಿಕ್ರಿಯೆ ಕೊಡುತ್ತಾನೆ. ಬಹುಶಃ ನಾನು ಅದನ್ನೇ ಮಾಡಿದೆ ಅನಿಸುತ್ತದೆ. ನೀವು ಆ ಎರಡೂ ಪದ್ಯಗಳನ್ನು ಓದಿಕೊಂಡರೆ ಅಡಿಗರು ಎಷ್ಟು ದೊಡ್ಡ ಕವಿ ಎಂದು ಗೊತ್ತಾಗುತ್ತದೆ.

• ಬಹಳಷ್ಟು ಬರಹಗಾರರ ಅನುಭವದ ಪ್ರಕಾರ, ಬರವಣಿಗೆ ಎನ್ನುವುದು ಒಂದು ಆಲೋಚನಾ ಕ್ರಮವೂ ಆಗಿರುತ್ತದೆ. ಬರೆಯುತ್ತಲೇ ಹೊಸತೇನೋ ಹುಟ್ಟುತ್ತಿರುತ್ತದೆ; ಬದಲಾಗುತ್ತಿರುತ್ತದೆ. ಮನಸಿನಲ್ಲಿರುವ ಎಷ್ಟೋ ಸಂಗತಿಗಳು ಕಾಗದದಲ್ಲಿ ಬರೆಯುವಾಗ ಬೇರೆಯೇ ಏನೋ ಆಗಿಬಿಡುತ್ತದೆ. ಈ ಬರವಣಿಗೆಯ ಪ್ರಕ್ರಿಯೆಯ ಕುರಿತು ನಿಮ್ಮ ಅನುಭವ ಏನು?

ಎಷ್ಟೋ ಸಲ ನನ್ನ ಕತೆಯೋ ಕವನವೋ ಶುರುವಾಗುವುದಕ್ಕೆ ಯಾವುದೋ ಒಂದು ಇಮೇಜ್ ಕಾರಣವಾಗುತ್ತದೆ. ಅದು ಸಿನಿಮಾದಲ್ಲಿ ನೋಡಿದ ಒಂದು ದೃಶ್ಯವಾದರೂ ಆಗಿರಬಹುದು..

ಈ ಸಾಹಿತ್ಯ ಪ್ರಕಾರಗಳ ಬಗ್ಗೆ ನಾನು ಇತ್ತೀಚೆಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಲೇ ಇಲ್ಲ. ಒಂದು ಕಥೆ ಬರೆದಷ್ಟೇ ಶ್ರಮವಹಿಸಿ, ಅಷ್ಟೇ ಮುತುವರ್ಜಿವಹಿಸಿ ಒಂದು ಪ್ರಬಂಧ ಯಾಕೆ ಬರೆಯಬಾರದು? ಒಂದು ಲೇಖನ ಯಾಕೆ ಬರೆಯಬಾರದು? ಒಂದು ವಿಮರ್ಶೆ ಯಾಕೆ ಬರೆಯಬಾರದು?

ಆಗಲೇ ಹೇಳಿದ ಹಾಗೆ ನನಗೆ ಬರವಣಿಗೆ ಶುರುವಾಗುವುದು ಒಂದು ಇಮೇಜ್‌ನಿಂದ. ಎಷ್ಟೋ ಇಮೇಜ್‌ಗಳನ್ನು ನಾವು ನೋಡುತ್ತಲೇ ಇರುತ್ತೇವೆ. ಅವುಗಳಲ್ಲಿ ಯಾವುದೋ ಒಂದು ಇಮೇಜ್‌ ನಿಮ್ಮನ್ನು ಸೆರೆಹಿಡಿದುಬಿಡುತ್ತದೆ. ಆ ಇಮೇಜ್ ಕುರಿತು ನೀವು ಮತ್ತೆ ಮತ್ತೆ ಯೋಚನೆ ಮಾಡಿದಾಗ, ಅದಕ್ಕೆ ಮತ್ತೇನೋ ಸೇರಿಕೊಂಡು, ಇನ್ನೇನೋ ಕೂಡಿಕೊಂಡು, ಮತ್ತೊಂದೇ ಏನೋ ಆಗಿ ಒಂದು ಹಂತPÉÌ ಬರುತ್ತದೆ; ‘ಓ… ಇದೊಂದು ಕಥೆ ಆಗಬಹುದು’, ‘ಇದೊಂದು ಕವನ ಆಗಬಹುದು’, ‘ಇದಕ್ಕೆ ಇಂಥದ್ದೊಂದು ಪಾತ್ರ ಸೇರಿದರೆ ಅಥವಾ ಇದರ ಮುಖ್ಯ ಪಾತ್ರ ಸ್ಕೂಲ್‌ ಮಾಸ್ಟ್ರೋ ಇನ್ನೇನೋ ಆಗಬಹುದು’ ಎಂದು ಅನಿಸುತ್ತದೆ. ಆಗ ಬರೆಯಲು ಕೂರುತ್ತೇನೆ. ಹಾಗೆ ಕೂತು ಬರೆಯುವ ಪ್ರಕ್ರಿಯೆಯಲ್ಲಿ ಅದು ಬೇರೆಯದೇ ಏನೋ ಆಗಿ ರೂಪುಗೊಳ್ಳುತ್ತದೆ. ಇದು ನನ್ನೊಬ್ಬನ ಅನುಭವ ಅಷ್ಟೇ ಅಲ್ಲ, ಎಲ್ಲ ಲೇಖಕರ ಅನುಭವವೂ ಹೌದು.

• ನೀವು ಮೊದಲು ಸಣ್ಣಕತೆ ಬರೆದಿದ್ದು ಯಾವಾಗ ಮತ್ತು ಅದಕ್ಕೆ ಪ್ರೇರಣೆಗಳೇನು? ಅದಕ್ಕೆ ಸಿಕ್ಕ ಸ್ಪಂದನ ಹೇಗಿತ್ತು?

ನಾನು ಆರಂಭದಲ್ಲಿ ಏಳೆಂಟು ಸಣ್ಣಕತೆಗಳನ್ನು ಬರೆದಿದ್ದೆ. ಅದರಲ್ಲಿ ಒಂದು ಕತೆ ನನಗೆ ನೆನಪಿದೆ. ‘ಮೌನ, ಸ್ತಬ್ಧ, ನೀರವ…’ ಅಂತ. ಅದನ್ನು ತೆಗೆದುಕೊಂಡು ಹೋಗಿ ‘ಪ್ರಜಾವಾಣಿ’ಯ ವೈಕುಂಠರಾಜು ಅವರಿಗೆ ಕೊಟ್ಟೆ. ಅವರು, ‘ಓಹ್, ನೀವು ಕತೆ ಬರ್ದಿದೀರಾ? ನೋಡ್ರೀ ರಂಗನಾಥ ರಾವ್’ ಎಂದು ಪಕ್ಕದಲ್ಲಿದ್ದ ಜಿ.ಎನ್. ರಂಗನಾಥ ರಾವ್ ಅವರಿಗೆ ಕೊಟ್ಟರು. ಮುಂದಿನ ವಾರ ಅದು ಪ್ರಕಟವಾಗಿತ್ತು. ಅದು ನನ್ನ ಮೊದಲ ಪ್ರಕಟಿತ ಕತೆ. ಆಮೇಲೆ ಒಂದು ಮೂರು ನಾಲ್ಕು ಕತೆ ಬರೆದೆ. ಸಮಸ್ಯೆ ಏನೆಂದರೆ, ಆಗಲೇ ನಾನು ಸಾಕಷ್ಟು ಓದಿಕೊಂಡಿದ್ದದ್ದು. ಮಾಸ್ತಿ, ಆನಂದ, ಅನಂತಮೂರ್ತಿ, ಚಿತ್ತಾಲ, ಕಾರಂತರು, ಅಡಿಗರು ಎಲ್ಲರನ್ನೂ. ಮನೋಹರ ಗ್ರಂಥಮಾಲೆ ಪ್ರಕಟಿಸಿದ್ದ ‘ಹೊಸ ಕ್ಷಿತಿಜ’ ಪುಸ್ತಕದ ಕತೆಗಳನ್ನೂ ಓದಿದ್ದೆ. ಆದ್ದರಿಂದ ನನಗೆ ಯಾರೂ ವಿಮರ್ಶಕರು ಬೇಕಿರಲಿಲ್ಲ. ನಾನು ಕಷ್ಟಪಟ್ಟು ಬರೆದ ಏಳೆಂಟು ಕತೆಗಳನ್ನು ಕನ್ನಡದ ಅತ್ಯುತ್ತಮ ಕತೆಗಳ ಪಕ್ಕದಲ್ಲಿಟ್ಟುಕೊಂಡು ನೋಡಿದರೆ, ಅವು ಎಷ್ಟು ಕೆಟ್ಟ ಕತೆಗಳು ಎಂದು ನನಗೇ ಗೊತ್ತಾಗುತ್ತಿತ್ತು.

• ‘ಕ್ರೌರ್ಯ’ ಕಥೆ ಬರೆದಿದ್ದು ಹೇಗೆ?
ನಾನು ಮೊದಲು ‘ಪ್ರಾಣದೇವರು’ ಅಂತೇನೋ ಒಂದು ಫ್ಯಾಂಟಸಿ ಬರೆದಿದ್ದೆ. ಅದನ್ನು ಉದಯವಾಣಿ ದೀಪಾವಳಿ ಸಂಚಿಕೆಗೆ ಕೊಟ್ಟೆ. ಅದು ಪ್ರಕಟವಾಯಿತು. ಅದರ ನಂತರ ‘ಅನಾಥರು’ ಅಂತ ಇನ್ನೊಂದು ಕಥೆ ಬರೆದೆ. ಅದಾದಮೇಲೆ, ‘ಕ್ರೌರ್ಯ’ ಬರೆಯಬೇಕು ಅನಿಸಿತು. ಬರೆಯುವುದಕ್ಕೂ ಮೊದಲೇ ಯಾರೋ ನೋಡಿದ ಹೆಳವಿ, ಅವಳಿಗೆ ಹೀಗಾದರೆ ಹೇಗೆ ಎಂಬ ಕಲ್ಪನೆ ಮಾಡಿಕೊಂಡೆ. ಅದೊಂದು ರೀತಿಯಲ್ಲಿ ಚೆಸ್ ಆಟ ಇದ್ದ ಹಾಗೆ.

ನಮ್ಮೊಳಗೆ ಒಂದು ಇಮೇಜ್‌ ಹುಟ್ಟಿಕೊಂಡು, ಅದನ್ನು ಹೀಗೆ ಮಾಡಿದರೆ ಏನಾಗಬಹುದು, ಹಾಗೆ ಮಾಡಿದರೆ ಏನಾಗಬಹುದು ಎಂಬುದನ್ನೆಲ್ಲ ಯೋಚಿಸಿ, ಚಿಂತಿಸುತ್ತ ಹೋದ ಹಾಗೆ ಅದು ಏನೇನೋ ಆಗಿ ಬದಲಾಗುತ್ತ ಹೋಗುತ್ತದೆ. ‘ಕ್ರೌರ್ಯ’ ಕೂಡ ಹಾಗೆಯೇ ಬರೆದಿದ್ದು. ಆಗ ನಾನು ‘ಮಲ್ಲಿಗೆ’ ಪತ್ರಿಕೆಯ ಸಂಪಾದಕ ಆಗಿದ್ದೆ. ಅಲ್ಲಿ ನನ್ನ ನೋಡಲಿಕ್ಕೆ ನಿಸಾರ್ ಅಹಮದ್ ಬರುತ್ತಿದ್ದರು. ಆ ಕಥೆ ಬರೆದು ಮುಗಿಸಿದಾಗ ನಿಸಾರ್‍ ಅಹಮದ್‌ ಅವರಿಗೆ ತೋರಿಸಿದೆ. ಅವರು ಅದನ್ನು ಅಲ್ಲಿಯೇ ಓದಿ, ‘ಏನ್ ಕಥೆ ಇದು… ಅದ್ಭುತವಾಗಿದೆ! ಇದನ್ನು ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಗೆ ಕಳಿಸಿ’ ಅಂತ ಹೇಳಿದರು. ಅವರೇ ಪೋಸ್ಟ್‌ ಆಫೀಸಿಗೆ ಹೋಗಿ ಕವರ್ ತೆಗೆದುಕೊಂಡು ಬಂದು, ಸ್ಟ್ಯಾಂಪ್ ಹಚ್ಚಿ, ಪೋಸ್ಟ್ ಮಾಡಿದರು ಕೂಡ! ಅದಕ್ಕೆ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂತು.

• ಎಂ.ಎಸ್.ಕೆ. ಪ್ರಭು ನಿಮಗೆ ಆಪ್ತಸ್ನೇಹಿತರು. ಕನ್ನಡದಲ್ಲಿ ಪ್ರಭು ಅವರನ್ನು ಬಿಟ್ಟರೆ ಫ್ಯಾಂಟಸಿಯನ್ನು ದೊಡ್ಡ ಪ್ರಮಾಣದಲ್ಲಿ ಮತ್ತು ಪರಿಣಾಮಕಾರಿಯಾಗಿ ಕಥೆಗಳಲ್ಲಿ ಬಳಸಿರುವವರು ನೀವು. ಈ ಫ್ಯಾಂಟಸಿ ಒಲವಿನ ಹಿಂದೆ ಏನಾದರೂ ಫ್ಯಾಂಟಸಿ ಕತೆ ಇದೆಯೆ?

ನಮ್ಮ ರಾಮಾಯಣ, ಮಹಾಭಾರತದ ಕಥೆಗಳಲ್ಲಿ ರಾಕ್ಷಸರು, ಹನುಮಂತ ಹಾರುವುದು, ಎಷ್ಟೋ ಜನ್ಮಾಂತರಗಳನ್ನು ದಾಟಿ ಬರುವುದು, ಇವೆಲ್ಲವೂ ಇವೆ. ಆದರೆ ಆ ಗ್ರಂಥಗಳಿಗೆ ಧಾರ್ಮಿಕ ಎಂಬ ಭಾವನೆ ಬಂದಿರುವುದರಿಂದ ಅವುಗಳನ್ನು ನಾವು ಫ್ಯಾಂಟಸಿ ಎಂದು ಕರೆಯುವುದಿಲ್ಲ. ಹಾಗೆಯೇ ಒಪ್ಪಿಕೊಂಡುಬಿಡುತ್ತೇವೆ.

ನಾನು ಮೊಟ್ಟಮೊದಲು ನಿಜವಾದ ಫ್ಯಾಂಟಸಿಯನ್ನು ನೋಡಿದ್ದು ಕಾಫ್ಕಾನ ‘ಮೆಟಮಾರ್ಫಸಿಸ್‌’ನಲ್ಲಿ. ಅದನ್ನು ಓದಿದಾಗ ಅದು ಸೋ ರಿಯಲಿಸ್ಟಿಕ್ ಅನಿಸಿತು! ಯಾಕೆ ಅಂದರೆ, ಒಂದು ಸಮಾಜದಲ್ಲಿ ನಮ್ಮಲ್ಲಿ ನಿಜವಾದ ದಲಿತರಿಗೆ, ಅವರು ಸೂಕ್ಷ್ಮಜ್ಞರೂ ಆದರೆ, ಜಾಗತಿಕ ಪ್ರಜ್ಞೆ ಇದ್ದರೆ, ಬಹುಶಃ ಕಾಪ್ಕಾನ ಹುಳುವಿನ ಥರವೇ ಅವರು ಫೀಲ್ ಮಾಡುತ್ತಿರಬೇಕು ಎಂದು ನನಗೆ ಅನಿಸುತ್ತದೆ. ಒಂದು ಬೆಳಿಗ್ಗೆ ಎದ್ದಾಗ ಕಾಪ್ಕಾನ ಕಥೆಯ ನಾಯಕ ಹುಳುವಾಗಿಬಿಟ್ಟಿರುತ್ತಾನೆ. ಕೊನೆಯಲ್ಲಿ ಅವನ ತಂಗಿಯೇ ಪೊರಕೆ ತೆಗೆದುಕೊಂಡು ಅವನನ್ನು ಗುಡಿಸಿಹಾಕುತ್ತಾಳೆ. ಅದು ಏನು ಅದ್ಭುತವಾದ ಕಥೆ ಎಂದರೆ ಮೊದಲ ಬಾರಿಗೆ ಅದನ್ನು ಓದಿದಾಗ ನನ್ನ ಮೈ ಜುಮ್ ಅಂದಿತ್ತು.

ಇನ್ನೊಂದು ಗೊಗೊಲ್‌ನ ‘ನೋಸ್’ ಅಂತೊಂದು ಕತೆ. 19ನೇ ಶತಮಾನದ ಬರಹಗಾರ ಅವನು. ಒಂದು ದಿನ ಬ್ರೆಡ್ ತಿನ್ನುತ್ತಿರಬೇಕಾದ ಆ ಕತೆಯ ನಾಯಕನ ಮೂಗು ಕಳೆದುಹೋಗಿಬಿಡುತ್ತದೆ. ಆ ಮೂಗು ನಗರದ ಒಳಗೆ ಎಲ್ಲೆಲ್ಲೋ ಅಡ್ಡಾಡುತ್ತಿರುತ್ತದೆ.

ಈ ಥರದ ಎರಡು ಮೂರು ಕತೆ ಓದಿದಾಗ ನನಗೆ ಬಹಳ ಇಷ್ಟವಾದವು. ಆ ಸಮಯದಲ್ಲಿಯೇ ನನಗೆ ಪ್ರಭು ಅವರ ಪರಿಚಯ ಆಯ್ತು. ಅವರು ತುಂಬ ಓದ್ತಾ ಇದ್ರು. ನಾನೂ ತುಂಬಾ ಓದುತ್ತಿದ್ದೆ ಆಗ. ನಾವಿಬ್ಬರೂ ಬೇಗ ಆಪ್ತರಾದೆವು. ನಾನು ಓದಿದ್ದನ್ನು ಅವರಿಗೆ ಹೇಳುತ್ತಿದ್ದೆ; ಅವರು ಓದಿದ್ದನ್ನು ನನಗೆ ಹೇಳುತ್ತಿದ್ದರು. ನಮ್ಮ ಜೊತೆಗೆ ಎಂ.ಕೆ. ಅನಿಲ್ ಅಂತ ಇಬ್ಬರು ಇದ್ದರು. ಅವರು ಎ.ಕೆ. ರಾಮಾನುಜನ್‌ ಅವರ ಬ್ರದರ್ ಇನ್‌ ಲಾ. ಅವರಿಗಂತೂ ಬೆಂಗಳೂರಿನಲ್ಲಿರುವ ಲೈಬ್ರರಿಗಳು ಸಾಕಾಗದೆ ಮದ್ರಾಸ್‌ಗೆ ಹೋಗಿ ಹೈದಾರಾಬಾದ್‌ಗೆಲ್ಲ ಹೋಗಿ ಓದುತ್ತಿದ್ದೆ.

ಫ್ಯಾಂಟಸಿ ಎಂದರೆ ಕೊನೆಗೂ ಒಂದನ್ನು ಹೇಳಿ ಇನ್ನೇನನ್ನೋ ತೋರಿಸುತ್ತಿರುತ್ತೇವೆ. ನನಗೆ ಪ್ರಭು ಅವರು ಪರಿಚಯವಾದಾಗ ಮೊಟ್ಟಮೊದಲು ಕೊಟ್ಟಿದ್ದ ಕಥೆ ‘ಎರಡು ತೆಂಗಿನ ಮರದುದ್ದದ ಮನುಷ್ಯ’. ಅದನ್ನು ಓದಿ ಇದರಲ್ಲಿ ಏನೋ ಹೊಸದಿದೆ ಎಂದು ಅನಿಸಿತು. ಹಾಗಾಗಿ ನಾನು ಓದಿದ ದಿನವೇ ಅಡಿಗರಿಗೆ ತೆಗೆದುಕೊಂಡು ಹೋಗಿ ಕೊಟ್ಟೆ. ಅವರು ಆ ಕಥೆಯನ್ನು ಓದಿ, ‘ನಿಜವಾಗಲೂ ಈ ಕಥೆ ಚೆನ್ನಾಗಿದೆ’ ಎಂದು ಹೇಳಿ ‘ಸಾಕ್ಷಿ’ ಪತ್ರಿಕೆಯಲ್ಲಿ ಪ್ರಕಟ ಮಾಡಿದರು. ‘ಸಾಕ್ಷಿ’ಯಲ್ಲಿ ಬಂದಿದ್ದರಿಂದ ಎಷ್ಟೋ ಜನರಿಗೆ ಪ್ರಭು ಅವರ ಹೆಸರು ಗೊತ್ತಾಯಿತು. ನಂತರ ಅವರು ಅದೇ ಥರದ ಕಥೆಗಳನ್ನು ಬರೆದರು.

ನನಗೆ ಆ ರೀತಿಯ ಕಥೆಗಳನ್ನು ಬರೆಯುವುದು ಸಾಧ್ಯವಿರಲಿಲ್ಲ. ನನಗೆ ಅವರಿಗಿಂತ ಭಿನ್ನವಾಗಿ ಬರೆಯಬೇಕಿತ್ತು. ನಾನು ನನ್ನ ಕಥೆಗಳಲ್ಲಿ ರಿಯಲಿಸ್ಟಿಕ್ ಮತ್ತು ಫ್ಯಾಂಟಸಿಗಳನ್ನು ಬೆಸೆಯಲು ಪ್ರಯತ್ನ ಮಾಡುತ್ತೇನೆ. ನನ್ನ ಇತ್ತೀಚೆಗಿನ ಕೆಲವು ಕಥೆಗಳನ್ನು ನೋಡಿದರೆ ಅವು ರಿಯಲಿಸ್ಟಿಕ್‌ ಎಳೆಯಿಂದ ಶುರುವಾಗಿ ಕೊನೆಗೆಲ್ಲೋ ಫ್ಯಾಂಟಾಸ್ಟಿಕ್‌ ಆಗಿ ಕೊನೆಗೊಳ್ಳುತ್ತದೆ.

• ನಿಮ್ಮ ಒಟ್ಟಾರೆ ಬದುಕಿನಲ್ಲಿ ಸಾಹಿತ್ಯ ಅಥವಾ ಸೃಜನಶೀಲ ಕಲೆಗಳು ವಹಿಸಿದ ಪಾತ್ರ ಎಂಥದ್ದು? ಅದನ್ನು ನೀವು ಹೇಗೆ ನೋಡುವಿರಿ?
ನನಗೆ ಸಂತೋಷ ಸಿಕ್ಕಿದೆ.

ಒಂದು ಮಾಡರ್ನ್‌ ಪೇಂಟಿಂಗ್‌ನಲ್ಲಿ ಸಿಗುವ ಅನುಭವ ನಿಮಗೆ ಒಂದು ಕಾದಂಬರಿಯಲ್ಲಿ ಸಿಗುವುದಿಲ್ಲ. ಒಂದು ಕಾವ್ಯದಲ್ಲಿ ಸಿಗುವುದಿಲ್ಲ. ಸಂಗೀತದಲ್ಲಿಯೂ ಸಿಗುವುದಿಲ್ಲ. ಆದ್ದರಿಂದಲೇ ನಾವು ಪೇಂಟಿಂಗ್ ನೋಡಬೇಕು. ಸಂಗೀತದಲ್ಲಿ ಸಿಗುವುದು ಕಾವ್ಯದಲ್ಲಿ ಸಿಗುವುದಿಲ್ಲ, ಕಾದಂಬರಿ–ಪೇಂಟಿಂಗ್‌ಗಳಲ್ಲಿ ಸಿಗುವುದಿಲ್ಲ. ನಾಟಕದಲ್ಲಿಯೂ ಸಿಗುವುದಿಲ್ಲ. ಕಾದಂಬರಿಯಲ್ಲಿ ಸಿಗುವುದು ಸಂಗೀತದಲ್ಲಿ ಖಂಡಿತ ಸಿಗುವುದಿಲ್ಲ. ಆದ್ದರಿಂದಲೇ ಎಲ್ಲ ರೀತಿಯ ಕಲೆಗಳೂ ಬೇಕು.

ನಾನು ಈ ಎಲ್ಲವನ್ನೂ ಎಂಜಾಯ್ ಮಾಡಿದ್ದೇನೆ.

‍ಲೇಖಕರು avadhi

November 23, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: