ಉಮೇಶ ದೇಸಾಯಿ ಹೊಸ ಕಥೆ- ಕತೆ ಕತೆ ಕಾರಣ…

ಉಮೇಶ ದೇಸಾಯಿ

ಸುಶೀಲಾದೇವಿ ಕನ್ನಡದ ಪ್ರಮುಖ ಲೇಖಕಿಯರಲ್ಲಿ ಒಬ್ಬರು. ಅನೇಕ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ. ಅವರ ಮುಕ್ತ ವಿಚಾರ ಲಹರಿ ಅವರು ಸೃಷ್ಟಿಸಿದ ವಿಪ್ಲವದ ಪಾತ್ರಗಳು ಅವರ ಆಧುನಿಕ ವಿಚಾರ ಲಹರಿ ಹೀಗೆ ಎಲ್ಲ ಅವರಿಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷವಾದ ಸ್ಥಾನ ದೊರಕಿಸಿಕೊಟ್ಟಿದೆ. ಅವರ ಹಲವು ಕಾದಂಬರಿಗಳು ಮರು ಮುದ್ರಣ ಕಂಡಿವೆ ಹಾಗೆಯೇ ಅನೇಕ ಭಾಷೆಗಳಿಗೆ ಅವರ ಕೃತಿ ಅನುವಾದವಾಗಿವೆ ಕೂಡ. ಕನ್ನಡದ ವಿಚಾರವಂತ ಲೇಖಕಿಯರಲ್ಲಿ ಅವರ ಹೆಸರು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಸುಶೀಲಾದೇವಿ ಅವರದು ಸಂತೃಪ್ತ ಕುಟುಂಬ. ಅವರ ಗಂಡ ಕೇಶವ ಮೂರ್ತಿ ಪೀಣ್ಯದ ಒಂದು ಕಂಪನಿಯಲ್ಲಿ ಪಾಲುದಾರ. ಹಾಗೆಯೇ ಮಗ ಸಾಂಬ ಹಾಗೂ ಮಗಳು ರಚನಾ ಇಬ್ಬರೂ ಅಮೇರಿಕ ವಾಸಿಗಳು. ಸಾಂಬ ತನ್ನ ನಂತರ ಕಂಪನಿ ನಡೆಸಿಕೊಂಡು ಹೋಗಲಿ ಇದು ಕೇಶವಮೂರ್ತಿಗೆ ಅನಿಸಿದ್ದು ನಿಜ ಈ ಬಗ್ಗೆ ಮಗನ ಜೊತೆ ವಾದವೂ ಆಗಿತ್ತು. ಒಬ್ಬನೇ ಮಗ ಹೀಗೆ ದೂರದೇಶದಲ್ಲಿ ಇರುವುದು ಅವರಿಗೆ ಸೇರಿರಲಿಲ್ಲ. ಮಗ ಹಟವಾದಿ ಹೋಗಿಯೇ ತೀರುವುದು ಅಂತ ಹಟ ಹಿಡಿದ. ಇಬ್ಬರ ಜಗಳ ಬಿಡಿಸಲು ಸುಶೀಲಾದೇವಿ ನಡುವೆ ಪ್ರವೇಶಿಸಬೇಕಾತು. ಮಗನಿಗೆ ಹೆಣ್ಣು ನೋಡಲು ಕೇಶವಮೂರ್ತಿ ತಯಾರಿ ನಡೆಸಿದಾಗ ಮಗ ಅಲ್ಲಿಯೇ ಸೆಟಲ್ ಆದ ಪಂಜಾಬಿ ಹುಡುಗಿಯೋರ್ವಳನ್ನು ಇಷ್ಟ ಪಟ್ಟಿದ್ದು ಅವಳನ್ನೇ ಮದುವೆಯಾಗುವುದಾಗಿ ಹೇಳಿದಾಗ ಅಪ್ಪ ಹಾಗೂ ಮಗನ ನಡುವಿನ ಬಿರುಕು ಇನ್ನೂ ದೊಡ್ಡದಾತು.

ವಾರದಲ್ಲಿ ಎರಡು ಮೂರು ಸಲ ಮಕ್ಕಳ ಜೊತ ವಿಡಿಯೋ ಕಾಲ್ ಅದರಲ್ಲಿಯೇ ಸುಖದುಃಖ ಹಂಚಿಕೊಂಡು ಖುಷಿಪಡುತ್ತಿದ್ದರು. ಮಗನೊಡನೆ ಎಷ್ಟು ಬೇಕೋ ಅಷ್ಟೇ ಮಾತು ಅದೂ ಮುಖ ಗಂಟು ಹಾಕಿಕೊಂಡು ಆಡುತ್ತಿದ್ದರು ಕೇಶವಮೂರ್ತಿ. ಸುಶೀಲಾದೇವಿ ಹೆಚ್ಚಿನ ವೇಳೆ ಓದುವುದರಲ್ಲಿ ಅಥವಾ ಬರೆಯುವುದರಲ್ಲಿ ಕಳೆಯುತ್ತಾರೆ. ಅಡಿಗೆ ಮಾಡಲು ಪಾರ್ವತಿ ಅಂತ ಮೇಡ್ ಇದ್ದಾಳೆ. ಇನ್ನು ಕೇಶವಮೂರ್ತಿ ವ್ಯವಹಾರದಲ್ಲಿ ಸದಾ ಬಿಸಿ. ಆಗಾಗ ಕೆಲಸದ ಮೇಲೆ ದೆಹಲಿ, ಮುಂಬೈಗೂ ಹೋಗಿ ಬರುವುದಿತ್ತು.

ಇಂತಹ ಸುಖಿ ಸಂಸಾರದಲ್ಲಿ ಒಂದು ಪಲ್ಲಟದ ಛಾಯೆ ಬಂತು. ಮಗಳು ರಚನಾಳ ಬಾಣಂತನದ ಸಲುವಾಗಿ ಅಮೇರಿಕಾಕ್ಕೆ ಹೋಗುವುದು ಅಂತ ಠರಾವಾತು ಹಾಗೆ ನೋಡಿದರೆ ಸುಶೀಲಾದೇವಿ ಮಗಳ ಕಡೆ ಅಂದರೆ ಅಮೇರಿಕಾಕ್ಕೆ ಹೋಗಿಯೇ ಇರಲಿಲ್ಲ. ಹೀಗಾಗಿ ಖುಷಿಯಿಂದಲೇ ಹೊರಡಲು ತಯಾರಾಗಿದ್ದರು. ಹೊರಡುವ ಕೊನೆದಿನಗಳಲ್ಲಿ ಕೇಶವಮೂರ್ತಿಯ ಆರೋಗ್ಯ ಹದಗೆಟ್ಟಿತು. ಹೀಗಾಗಿ ಸುಶೀಲಾದೇವಿ ಒಬ್ಬರೇ ಪ್ಲೇನ ಹತ್ತಿದರು. ಪಾರ್ವತಿಗೆ ಗಾರಮೆಂಟಿನಲ್ಲಿ ಕೆಲಸ ಸಿಕ್ಕಿತ್ತು. ಅವಳೇ ಅವಳ ಪರಿಚಯದ, ಅಪ್ಪ ಅಮ್ಮ ಇಲ್ಲದ ಸುಮಾಳನ್ನು ಅಡಿಗೆಗೆ ನೇಮಿಸಿದರು. ಸುಮಾ ಅವಳ ಚಿಕ್ಕಪ್ಪನ ಆಶ್ರಯದಲ್ಲಿದ್ದಳು. ಅವಳ ಗಂಡ ಬಿಟ್ಟುಹೋಗಿದ್ದ. ಹೋಗುವ ಮೊದಲು ಸುಮಾಗೆ ಗಂಡನಿಗೆ ಅಡಿಗೆ ಯಾವುದು ಸೇರುತ್ತದೆ, ಯಾವ ತರಕಾರಿ ತಿನ್ನುತ್ತಾರೆ ಇತ್ಯಾದಿ ಬಗ್ಗೆ ತಿಳಿಹೇಳಿದರು. ತಿಂಗಳುಗಳ ನಂತರ ವಾಪಸ್ಸಾದವರಿಗೆ ಪಲ್ಲಟದ ಛಾಯೆ ಹೋಗಿ ಒಂದು ವಿಪ್ಲವವೇ ನಡೆದ ಅನುಭವ ಆತು.

ಗಂಡ ಮೊದಲಿನಂತಿಲ್ಲ ಇದು ಮೊದಲು ಅನುಭವಕ್ಕೆ ಬಂದಿದ್ದು. ಮುಖ ಕೊಟ್ಟು ಮೊದಲಿನ ಹಾಗೆ ಗಂಡ ಮಾತನಾಡುತ್ತಿಲ್ಲ ಅನಿಸಿತು. ಹಾಗೆ ನೋಡಿದರೆ ಅವರ ದಾಂಪತ್ಯ ಪ್ರೌಢಾವಸ್ಥೆಗೆ ತಲುಪಿದ್ದು ಇಬ್ಬರೂ ಬೇರೆ ರೂಮಿನಲ್ಲಿ ಮಲಗುತ್ತಿದ್ದರು. ಮುಖ್ಯವಾಗಿ ಸುಶೀಲಾದೇವಿ ಲಹರಿ ಬಂದರೆ ತಡ ರಾತ್ರಿ ಬರೆಯಲು ಕೂರುತ್ತಿದ್ದರು. ಹೀಗಾಗಿ ತಮ್ಮದೇ ಒಂದು ಪ್ರತ್ಯೇಕ ಕೋಣೆಯಲ್ಲಿ ಮಲಗುತ್ತಿದ್ದರು. ಕೇಶವ ಮೂರ್ತಿ ಎರಡು ಪೆಗ್ ಹಾಕಿದ ನಂತರವೇ ಮಲಗುತ್ತಿದ್ದರು. ಪರಸ್ಪರ ಒಪ್ಪಿ ಗಂಡ ಹೆಂಡತಿ ಬೇರೆ ಮಲಗುತ್ತಿದ್ದರು. ಹಾಗೂ ಈ ಕ್ರಮಕ್ಕೆ ಗಂಡ ಹೆಂಡತಿ ಹೊಂದಿಕೊಂಡಿದ್ದರು.

.ಏನೋ ಸರಿ ಇಲ್ಲ ಅನಿಸಿ ಗಂಡನಿಗೆ ಕೇಳಿದಾಗ ಅವರಿಂದ ಹಾರಿಕೆಯ ಉತ್ತರ ಮಾತ್ರ ದೊರೆತಿತ್ತು ಸುಶೀಲಾದೇವಿಗೆ. ಆದರೆ ಆಸ್ಫೋಟಗೊಂಡಿದ್ದು ಒಂದು ದಿನ ಇವರು ಸ್ನಾನ ಮುಗಿಸಿ ಬಂದಾಗ ಕೇಳಿದ ಸುಮಾ ಹಾಗೂ ಗಂಡನ ವಾಗ್ವಾದದಿಂದ. ಸುಮಾ ದೈನ್ಯಳಾಗಿ ಕೇಳಿಕೊಳ್ಳುತ್ತಿದ್ದಳು ಕೇಶವಮೂರ್ತಿ ಸಹ ಅವಳೆದುರು ಕೈ ಮುಗಿದು ನಿಂತಿದ್ದರು. ಸುಮಾಳಿಗೆ ಜೋರುಮಾಡಿ ಕೇಳಿದಾಗ ಹೊರಬಿದ್ದ ಸತ್ಯ ಸುಶೀಲಾದೇವಿಗೆ ಆಘಾತ ತಂದಿತ್ತು.

ಅದೇಗೋ ಗೊತ್ತಿಲ್ಲ.. ಈ ಬೆಂಕಿ ತುಪ್ಪದ ಥಿಯರಿ ನೋ ..ಸುಮಾಳಿಗೆ ಕೇಶವಮೂರ್ತಿ ಕಾಮಿಸಿದ್ದರು. ಅದೆಷ್ಟು ತೀವ್ರವಾಗಿ ಅಂದರೆ ಆಫೀಸಿಗೆ ವಾರವಿಡೀ ರಜೆಹಾಕಿ ಅವಳೊಡನೆ ರಮಿಸಿದ್ದರು. ಪರಿಣಾಮ ಸುಮಾ ಈಗ ಗರ್ಭಿಣಿ. ಪರಿಣಾಮ ಹೀಗಾಗಬಹುದು ಅಂತ ಊಹಿಸದೇ ಕೇಶವಮೂರ್ತಿ ಎಡವಿದ್ದರು. ಈಗ ಸಮಸ್ಯೆ ಎದುರಾಗಿದೆ ಮೂರುತಿಂಗಳು ಕಳೆದಿದೆ.. ತಕ್ಷಣವೇ ಸುಶೀಲಾದೇವಿ ತಮ್ಮ ಪರಿಚಯದ ಲೇಡಿಡಾಕ್ಟರ್ ಕಡೆ ಸುಮಾಳಿಗೆ ಕರೆದೊಯ್ದರು. ಆದರೆ ಡಾಕ್ಟರ ರಿಸ್ಕಿ ಅಂತ ರಾಗ ಎಳೆದರು. ಇದು ಗೊತ್ತಾದ ಮೇಲೆ ಕೇಶವಮೂರ್ತಿ ಇನ್ನೂ ಕುಗ್ಗಿದರು.

ಗಂಡನಿಗೆ ಜರೆಯುವುದರಲ್ಲಿ ಅರ್ಥವಿಲ್ಲ ಮಾತಾಡಿದರೆ ಉತ್ತರವೂ ಇಲ್ಲ ಹಾಗಂತ ಗಂಡ ಮಾಡಿದ್ದು ತಪ್ಪುಅದು ಅವರಿಗೂ ಅರಿವಾಗಿದೆ ಆದರೆ ಸಮಸ್ಯೆ ಪಶ್ಚಾತ್ತಾಪ ಕೇಳುತ್ತಿರಲಿಲ್ಲ ಪರಿಹಾರ ಬೇರೆಯೇ ಹುಡುಕಬೇಕು ಮಕ್ಕಳ ಮುಂದೆ ಹೇಳಿಕೊಂಡರೇ ಹೇಗೆ ಎಂಬ ಗೊಂದಲ ಮೇಲಾಗಿ ಅವರು ತಮ್ಮ ಲೋಕದಲ್ಲಿ ಬಿಜಿ ಮೇಲಾಗಿ ಇಂತಹ ವಿಷಯ ಅವರೊಂದಿಗೆ ಹಂಚಿಕೊಳ್ಳುವುದು ಅಂದರೆ ಸಂಕೋಚ. ಬಿಸಿತುಪ್ಪ ನುಂಗಿದಹಾಗಾಗಿತ್ತು. ಏನು ಮಾಡೋದು ಈ ಪ್ರಶ್ನೆಯ ತೊಳಲಾಟದಲ್ಲಿ ಅನೇಕ ದಿನ ಕಳೆದಾತು. ಉತ್ತರ ಸಿಗಲಿಲ್ಲ. ಸುಮಾ ತಾವು ಈ ವರೆಗೆ ಸೃಷ್ಟಿಸಿಕೊಂಡು ಬಂದ ಪಾತ್ರಗಳ ಪ್ರತಿಬಿಂಬದಂತೆ ಕಂಡರೂ ಪಾತ್ರ ಬೇರೆ ಇದು ಕಟು ವಾಸ್ತವ. ಹೇಗೆ ನಿಭಾಯಿಸುವುದು ಗಂಡನೊಡನೆ ಚರ್ಚಿಸಿದರೆ ಅವರಿಂದ ಕಣ್ಣೀರೇ ಸಿಕ್ಕಿತ್ತು. ಗಂಡನಿಗೆ ಪಶ್ಚಾತ್ತಾಪ ಆಗಿದೆ ನಿಜ ಆದರೆ ಅದಕೂ ಮೊದಲೂ ತಪ್ಪು ಆಗಿದೆ.. ಅದ ಸರಿಪಡಿಸಬೇಕು. ಆದರೆ ಸಮಸ್ಯೆ ಇನ್ನೂ ಜಟಿಲವಾಗಿದ್ದು ಒಂದು ದಿನ ಗಂಡ ಎದೆನೋವು ಅಂತ ಕುಸಿದಾಗ.

ಗೆಳೆಯ ರಘುನ ಸಹಾಯದಿಂದ ಆಸ್ಪತ್ರೆಗೆನೋ ಸೇರಿಸಿದರು. ಹೃದಯಾಘಾತವಾಗಿದೆ ಅಂತ ಡಾಕ್ಟರ ಹೇಳಿದರು. ಮಕ್ಕಳಿಗೆ ತಿಳಿಸಿ ಐಸಿಯು ಹೊರಗೆ ಕಾದು ಕುಳಿತಾಗ ಬಂದಿದ್ದು ಕೇಶವಮೂರ್ತಿಯ ಸಾವಿನ ಸುದ್ದಿ. ರಘುನೇ ಅಂತಿಮಕರ್ಮ ಮಾಡಿದ್ದು ಮಕ್ಕಳಿಗೆ ವಿಡಿಯೋ ಮೂಲಕ ತಂದೆಯ ಅಂತಿಮ ಮುಖದರ್ಶನ ಮಾಡಿಸಲಾಯಿತು. ಒಂದು ವಾರ ರಜೆ ಹೊಂದಿಸಿ ಮಕ್ಕಳಿಬ್ಬರೂ ಧರ್ಮೋದಕಕೆ ಬಂದು ವೈಕುಂಠ ಮುಗಿಸಿ ವಾಪಸ ಹೋಗುವುದು ಅಂತ ಠರಾವಾತು.

ಸುಮಾಳೂ ವಿಹ್ವಲಗೊಂಡಿದ್ದಳು ಮೂರ್ತಿ ಅವರ ಸಾವಿನಿಂದ. ಸುಶೀಲಾದೇವಿ ಅವಳಿಗೆ ಅಭಯನೀಡಿದರಾದರೂ ಮುಂದೆಹೇಗೆ ಇದು ಅವಳ ಪ್ರಶ್ನೆ ಸುಶೀಲಾದೇವಿ ಬಳಿ ತಕ್ಷಣ ಉತ್ತರವಿರಲಿಲ್ಲ. ಮಕ್ಕಳೊಡನೆ ಹೇಳಲೇಬೇಕು ಇದು ಅವರಿಗೆ ಸರಿಹೊಂದೀತೇ ಇದು ಅವರಿಗೆ ಕಾಡಿದ ಪ್ರಶ್ನೆ. ಅವರಿಂದ ಏನಾದರೂ ಸಲಹೆ ಬರಬಹುದು ಈ ಇಕ್ಕಟ್ಟಿಗೆತಾವು ಬರೆದ ಕತೆ,ಕಾದಂಬರಿಯಲ್ಲಿ ಈ ತರದ ಸನ್ನಿವೇಶ ಎದುರಾದಾಗ ತಾವೇ ಬರೆದ ಪರಿಹಾರಗಳು ನೆನಪಾದವು. ಆದರೆ ಇದು ಬೇರೆ ಇಲ್ಲಿ ಮನುಷ್ಯರ ಅವರ ಜೀವನದ ಸವಾಲುಗಳಿವೆ. ಅವೋ ಕಲ್ಪನೆಯ ಪಾತ್ರಗಳು. ಒಂದು ರೀತಿಯಲ್ಲಿ ಸೂತ್ರಕ್ಕೆ ಸಿಕ್ಕ ಗೊಂಬೆಗಳು.

ಕಾಕಪಿಂಡ ಸಾಂಗವಾಗಿ ನೆರವೇರಿತು. ಮಗ, ಮಗಳು ಹಾಗೂ ಅಳಿಯ ಬಂದಿದ್ದರು. ಮೊಮ್ಮಗ ರುಚಿತ ಬಂದಿರಲಿಲ್ಲ ಅಂತೆಯೇ ಸೊಸೆ ಶಚಿ ಸಹ. ಮಗಳು ರಚನಾ ಪುಟ್ಟ ಕೂಸು ಕರೆದುಕೊಂಡು ದೇಶಾಂತರ ಬಂದಿದ್ದಳು. ವೈಕುಂಠದ ಕಾರ್ಯಕ್ರಮ ಸಾಂಗವಾಗಿ ನೆರೆವೇರಿತು. ಮಗ ಸಾಂಬ ಧಾರಾಳವಾಗಿಯೇ ಕೈ ಬಿಟ್ಟು ದಾನ ಮಾಡಿದ. ಎಲ್ಲ ಆಡಿಕೊಂಡರು ಕೇಶವಮೂರ್ತಿಯ ಆತ್ಮಕ್ಕೆ ಶಾಂತಿ ಸಿಕ್ಕಿತು ಅಂತ. ಕುದಿ ಇದ್ದಿದ್ದು ಸುಶೀಲಾದೇವಿ ಅವರಲ್ಲಿ..ವೈಕುಂಠಕ್ಕೆ ಸುಮಾಳಿಗೂ ಕರೆದಿದ್ದರು. ಅಪರಿಚಿತ ಹೆಂಗಸು ಸಂಬಂಧಿಕಳಲ್ಲ ಅವಳೊಡನೆ ತಮ್ಮತಾಯಿಯ ಒಡನಾಟ ಮಕ್ಕಳ ಹುಬ್ಬು ಏರುವಂತೆ ಮಾಡಿತ್ತು..

ಮರುದಿನ ಮಧ್ಯಾಹ್ನ ಊಟವಾದಮೇಲೆ ಸುಶೀಲಾದೇವಿ ಮಕ್ಕಳನ್ನು ಕರೆದರು.. ಮಾತನಾಡುವುದಿದೆ ಅಂತ ತಿಳಿಸಿದರು. ಎಲ್ಲ ಬಂದು ಕೂತರು.ಮುಂದಿನ ಇಪ್ಪತ್ತು ನಿಮಿಷ ಅವರು ಮಾತಾಡಿದರು. ಮಗಳ ಬಾಣಂತನಕ್ಕೆ ಬಂದಾಗಿನಿಂದ ಹಿಡಿದು ತಾವು ಗಂಡನಲ್ಲಿ ಕಂಡ ಬದಲಾವಣೆ, ತಮ್ಮ ಗಂಡ ಹಾಗೂ ಸುಮಾಳ ಸಂಬಂಧ, ಸುಮಾಳಿಗೆ ಡಾಕ್ಟರಗೆ ತೋರಿಸಿದ್ದು ಹೀಗೆ ಎಲ್ಲ ಏನೂ ಮುಚ್ಚಿಡದೇ ಹೇಳಿದರು. ಪ್ರತಿಕ್ರಿಯೆಗಾಗಿ ಕಾದು ಕುಳಿತರು. ತಮಗೆ ಕಾಡುತ್ತಿದ್ದ ಪ್ರಶ್ನೆ ಕೇಳಿದರು.

ಸಾಂಬ ಮೊದಲು ಮಾತಾಡಿದವ. ‘ಅಮ್ಮ ಒಬ್ಬ ಡಾಕ್ಟರ ಬೇಡ ಅಂದರೆ ಏನಾಯಿತು ಸೆಕೆಂಡ ಓಪಿನಿಯನ್ ತಗೋಬೇಕಾಗಿತ್ತು..ಹಣ ಕೊಟ್ಟರೆ ಯಾವ ಡಾಕ್ಟರನೂ ಬೇಡ ಅನ್ನಲಿಕ್ಕಿಲ್ಲ…ನನಗನಿಸುತ್ತದೆ ನೀನು ಆ ಹೆಂಗಸಿನ ವಿಷಯದಲ್ಲಿ ಸಾಫ್ಟಕಾರ್ನರ ತೋರಿಸಿದಹಾಗಿದೆ… ಅಪ್ಪ ಹೀಗೆ ಮಾಡಲೂಬಹುದಿತ್ತು ಅಂತ ನಿನಗೆ ಹೊಳೆಯಲಿಲ್ಲವೇ ಅಪ್ಪ ನೋಡಲು ಹ್ಯಾಂಡಸಮ್ ಚಾನ್ಸ ಸಿಕ್ಕಾಗ ಲಾಭ ತೆಗೆದುಕೊಂಡಿದ್ದಾನೆ ಅಷ್ಟೇ’ ಸಾಂಬನಿಗೆ ತನ್ನ ಅಪ್ಪನ ಮೇಲಿದ್ದ ಅಸಮಾಧಾನ ಈ ರೀತಿ ಮಾತನಾಡಿಸಿದೆಯೇ ಅವನಿಗೆ, ಸುಶೀಲಾದೇವಿ ಗೊಂದಲಕ್ಕೊಳಗಾದರು.

‘ಅಲ್ಲ ಅಮ್ಮ ಅಪ್ಪನಿಗೇನಾಗಿತ್ತು..ನನಗನ್ನಿಸುತ್ತದೆ ಅವ ಬೇಕೂಂತಲೇ ಬರಲಿಲ್ಲ ಅನಾರೋಗ್ಯ ಅನ್ನೋದು ನೆವ ಇರಬಹುದು. ಅವನಿಗೆ ಇಂತಹ ಹೊಲಸು ಕೆಲಸ ಮಾಡಲು ಅವಕಾಶ ಬೇಕಾಗಿತ್ತು. ಅದು ಹೋಗಲಿ ಈಗೆಲ್ಲ ಜಗತ್ತು ಮುಂದುವರೆದಿದೆ…ಸಾಕಷ್ಟು ಪ್ರಿಕಾಶನ್ ತಗೊಂಡಿದ್ದರೆ ಈ ಬಸಿರು ಇತ್ಯಾದಿ ಆಗುತ್ತಿರಲಿಲ್ಲ… ಡಿಸಗಸ್ಟಿಂಗ ಅಪ್ಪ ಇಂತಹ ಕೆಲಸ ಮಾಡಿದಾರೆ ಅಂದರೆ…’ ರಚನಾ ಮುಖ ಸಿಂಡರಿಸಿಕೊಂಡೇ ಮಾತಾಡಿದಳು.

‘ಅಂದ್ರೆ ನೀ ಹೇಳೋದು ನಿನ್ನಪ್ಪ ಪ್ರಿಕಾಶನ ತಗೊಂಡು ಸಂಬಂಧ ಬೆಳೆಸಿದ್ದರೆ ಅದು ನೈತಿಕತೆಯ ಪರೀಕ್ಷೆ ಪಾಸಾಗುತ್ತಿತ್ತೇ… ಬಹುಶಃ ಯಾರ ಮನೆಯಲ್ಲಿಯೂ ಇಂತಹ ಚರ್ಚೆ ನಡೆಯುತ್ತದೆ ಅಂತ ನನಗನ್ನಿಸೋದಿಲ್ಲ. ಈಗ ವ್ಯಕ್ತಿ ಇಲ್ಲ ಹೀಗಾಗಿ ಹೀಗಾಗಬೇಕಿತ್ತು ಹಾಗಾಗಬಹುದಿತ್ತು ಅನ್ನುವ ತರ್ಕವೇ ಮೂರ್ಖತನದ್ದು…ತಪ್ಪು ನಡೆದಿದೆ ತಪ್ಪು ಮಾಡಿದವ ಇಲ್ಲ. ಹೀಗಾಗಿ ಆ ಸಂಗತಿಯ ಎಳೆದಾಡುವುದು ಬೇಡ’ ಸುಶೀಲಾದೇವಿಯ ದನಿಯ ಜೋರಿಗೆ ಎಲ್ಲ ಬೆಚ್ಚಿದರು.

‘ಮಾವ ವಿಲ್ ಮಾಡಿದಾರಾ…ಈ ಮನೆ ಅವರ ಸ್ವಯಾರ್ಜಿತ ಅಲ್ಲವೇ… ಯಾಕೆಂದರೆ ಆ ಹೆಂಗಸಿನಿಂದ ಹುಟ್ಟಿದ ಹುಡುಗ/ಹುಡುಗಿ ದೊಡ್ಡವನಾದಮೇಲೆ ಆಸ್ತಿಯಲ್ಲಿ ಪಾಲು ಕೇಳಬಹುದು ಯು ನೋ ಒಂದು ತಪ್ಪುಹೆಜ್ಜೆ ಮಾವನದು ಏನೆಲ್ಲ ವಿಪರೀತ ಪರಿಣಾಮ ತರಬಹುದು..ನನಗನ್ನಿಸೋದು ಇಷ್ಟೇ ಸಾಂಬನ ಮಾತು ಕೇಳಿ ದುಡ್ಡು ಕೊಡಿ ಪಿಂಡ ತೆಗೆಸಿಬಿಡಿ’ ಅಳಿಯ ರಾಜೀವನ ಮಾತಿಗೆ ಇತರರೂ ತಲೆದೂಗಿದರು.

‘ಓಕೆ ಅಮ್ಮ ಈಗ ನೀನು ನಮಗೆ ಇದೆಲ್ಲ ಕೇಳಿದೆ. ನಮಗೂ ಏನೂತಿಳಿಯುತ್ತಿಲ್ಲ. ಅಪ್ಪ ತಪ್ಪು ಮಾಡಿದ. ನಿಮ್ಮ ದಾಂಪತ್ಯಜೀವನದಲ್ಲಿ ಈ ಕಹಿ ಇರಬಾರದಿತ್ತು ಆದರೆ ಆಗಿಹೋಗಿದೆ. ನಮ್ಮಿಂದ ಏನು ಅಪೇಕ್ಷೆ ಇದೆ ನಿನಗೆ ತಿಳಿಯಲಿಲ್ಲ… ಈಗ ನಾನಿರುವ ದೇಶದಲ್ಲಿ ಇಂತಹವು ನಡೆದೇ ಇರುತ್ತವೆ ನಾವು ಅಂದರೆ ಭಾರತೀಯರು ಇವನ್ನು ಭಾವನಾತ್ಮಕವಾಗಿ ನೋಡುತ್ತೇವೆ ಅದೇ ಸಮಸ್ಯೆ ನನಗೆ ಕೇಳಿದರೆ ನೀನು ಇನ್ನೊಬ್ಬ ಡಾಕ್ಟರ ನ ಕಾಣು. ಈ ಸ್ಥಿತಿಯಲ್ಲಿ ಅವಳ ಅಬಾರ್ಷನ ಒಂದೇ ಪರಿಹಾರ.. ಹೆಚ್ಚುಕಮ್ಮಿ ಆಗಿ ಅವಳು ಹೋದರೆ ಒಂದು ದೊಡ್ಡ ಹೊರೆ ಇಳೀತು ಅಲ್ಲವೇ…’ ಸಾಂಬನ ಮಾತು ಅಹಿತಕರವಾಗಿತ್ತು..ಕೆನ್ನೆಗೆ ಹೊಡೆಯಲೇ ಅನಿಸಿತು ಇವನ ಮಾತುಒಂದು ರೀತಿಯಲ್ಲಿ ಉಳಿದವರ ಪ್ರಾತಿನಿಧಿಕ ಅನಿಸಿತೇಕೋ…

‘ನೋಡು ಸಾಂಬ ನಿಮಗೆ ಸತ್ಯ ಗೊತ್ತಿರಲಿ ಅಂತ ಮಾತ್ರ ಹೇಳಿದ್ದು. ನಿನ್ನ ತಂದೆಯನ್ನು ನಾನು ಆಜನ್ಮ ದೂಷಿಸುತ್ತ ಕೂರಲಾರೆ ಯಾಕೆಂದರೆ ಈಗ ಆ ವ್ಯಕ್ತಿಯೇ ಇಲ್ಲ. ನಿಮ್ಮಿಂದ ಏನು ಅಪೇಕ್ಷೆ ಇಟ್ಟುಕೊಳ್ಳಲಿ ನಾನು…ನಾವು ಅಂದರೆ ನಿನ್ನತಂದೆಯನ್ನು ಸೇರಿಸಿ – ಮನುಷ್ಯಮಾತ್ರರು.. ನಮ್ಮಿಂದ ತಪ್ಪುಗಳು ಆಗುತ್ತವೆ ಅದು ಸ್ವಾಭಾವಿಕ.. ನಿನ್ನ ಪ್ರಶ್ನೆಗೆ ಏನು ಉತ್ತರಹೇಳುವುದು ನನಗೆ ಈ ಕ್ಷಣ ತಿಳಿಯುತ್ತಿಲ್ಲ… ಗೊಂದಲದಲ್ಲಿರುವೆ ಸ್ವತಃ…. ಸಮಸ್ಯೆ ಇದೆ ಪರಿಹಾರ ಇದ್ದೇ ಇರುತ್ತದೆ ನೋಡುವ..’ ನೋವು ಹೆಪ್ಪುಗಟ್ಟಿತ್ತು ಅವರ ಮಾತಿನಲ್ಲಿ.
ರಚನಾ ಎದ್ದು ಬಂದವಳು ತಾಯಿಯನ್ನು ಆಲಿಂಗಿಸಿದಳು. ಅವಳ ಕಣ್ಣಲ್ಲಿ ನೀರು ಜಿನುಗಿತ್ತು.

‘ಅಪ್ಪ ನಮಗಾಗಿ ಏನೆಲ್ಲ ಮಾಡಿದ ನಮ್ಮ ಓದಿಗೆ ನಂತರ ಅಮೇರಿಕಾಕ್ಕೆ ಕಳಿಸಲು ಏನೆಲ್ಲ ಕಷ್ಟಪಟ್ಟ ಹಾಗೆ ನೋಡಿದರೆ ಅವನ ನೋವು ಅವ ನುಂಗಿದ. ಯಾರಿಗೆ ತಾನೇ ಆಸೆ ಇರುವುದಿಲ್ಲ ಮಕ್ಕಳು ತನ್ನ ಕಣ್ಣ ಮುಂದಿರಲಿ ಅಂತ ಆದರೆ ನಮ್ಮ ಭವಿಷ್ಯ ಮುಖ್ಯ ಅನಿಸಿತು ನಿನಗೆ ಅಪ್ಪನ ಒಪ್ಪಿಸಿದೆ. ಅಷ್ಟೆ ಅಲ್ಲ ನಮ್ಮ ಜೀವನಸಂಗಾತಿಗಳ ಆಯ್ಕೆ ವಿಷಯದಲ್ಲೂ ಅಪ್ಪ ಅಮ್ಮ ನೀವು ಮೂಗು ತೂರಿಸಲಿಲ್ಲ… ಸೋ ನಾ ಹೇಳೋದು ಅಪ್ಪ ಒಂದು ದುರ್ಬಲಗಳಿಗೆಯಲ್ಲಿ ಎಡವಿರಬಹುದು.. ಸಾರಿ ಅಮ್ಮ ಅವಾಗ ನಾ ಒರಟಾಗಿ ಮಾತಾಡಿದೆ. ತರ್ಕದ ಬದಲು ಭಾವನೆಗೆ ಈಗ ನಾವು ಹೆಚ್ಚು ಸಮಯಕೊಡಬೇಕು. ಅಮ್ಮ ಇನ್ನು ಮುಂದೆ ನೀನು ಒಂಟಿ..ನೀನು ವಾಸ್ತವ ಬಿಚ್ಚಿಟ್ಟಿದ್ದೀಯಾ ಮುಚ್ಚಿಟ್ಟುಕೊಳ್ಳಬಹುದಿತ್ತು ಈ ಸಂಗತಿ…ಆದರೆ ನೀನು ಹೀಗೆ ಮಾಡಲಿಲ್ಲ..’ ಬಿಕ್ಕುತ್ತಲೇ ಮಾತು ಮುಗಿಸಿದವಳಿಗೆ ಸುಶೀಲಾದೇವಿ ಅಪ್ಪಿಕೊಂಡು ಸಂತೈಸಿದರು.

ಅಳಿಯ ರಾಜೀವ ಮತ್ತೆ ಲೀಗಲ್ ಸಲಹೆ ತೆಗೆದುಕೊಳ್ಳಲು ಒತ್ತಾಯಿಸಿದವ ಸುಮ್ಮ ನಿರಲಿಲ್ಲ.. ‘ನೇರವಾಗೆ ಹೇಳುವೆ ತಪ್ಪು ತಿಳಿಬೇಡಿ ಅಮ್ಮ ನಿಮ್ಮ ಎಷ್ಟೊ ಕತೆ ಓದಿರುವೆ. ಬಹುಶಃ ನೀವು ಆ ಹೆಂಗಸಿಗೆ ಆಶ್ರಯ ಕೊಡಲು ಹೊರಟಿರೋದು ಬಹುಶಃ ನೀವು ಪಾತ್ರಗಳ ಮೂಲಕ ಉಣಬಡಿಸಿದ ಆದರ್ಶದ ವ್ಯಾಧಿ ಕಾರಣ ಅಂತ. ಬಟ್ ನಿಜ ಜೀವನದ ಸವಾಲು ಹೇಗಿರುತ್ತದೆ ಅಂತ ಈಗ ನಿಮಗೆ ತಿಳಿದಿರಬೇಕು ಅಲ್ಲವೆ…?’ ಅವನ ಮಾತು ಚುಚ್ಚಿತು. ಮಗಳು ಜೋರುಮಾಡಿದಳು ಗಂಡನಿಗೆ ಅವನ ಪರವಾಗಿ ತಾನು ಕ್ಷಮೆ ಕೇಳುವುದಾಗಿ ಹೇಳಿದಳು.

ಉತ್ತರ ಕೊಡಬೇಕು ಅಂತ ಸುಶೀಲಾದೇವಿಗೂ ಅನಿಸಲಿಲ್ಲ. ಚರ್ಚೆ ಬಹಳ ಹೊತ್ತಿನ ವರೆಗೆ ನಡೆದರೂ ಯಾವುದೇ ನಿಷ್ಕರ್ಷಕ್ಕೆ ಬರಲಾಗಲಿಲ್ಲ. ಉತ್ತರವಿಲ್ಲದ ಪ್ರಶ್ನೆ ಮಕ್ಕಳೆದುರು ಮುಂದಿಟ್ಟು ತಪ್ಪು ಮಾಡಿದೆನೇ ಅಂತ ಸುಶೀಲಾದೇವಿಗೆ ಅನಿಸತೊಡಗಿತು.
**
ಬಹಳದಿನಗಳ ನಂತರ ಸುಶೀಲಾದೇವಿ ಟೇಬಲ ಮುಂದೆ ಕುಳಿತು ಬರೆಯಲು ತಯಾರಾಗಿದ್ದರು. ಮಕ್ಕಳು ಸುಖರೂಪವಾಗಿ ಹೋಗಿ ತಲುಪಿದ್ದರ ಬಗ್ಗೆ ನಿನ್ನೆ ತಾನೇ ಫೋನ ಬಂದಿತ್ತು. ನಿನ್ನೆಯಷ್ಟೇ ಸುಮಾಳನ್ನು ಡಾಕ್ಟರ ಕಡೆ ಕರೆದುಕೊಂಡು ಹೋಗಿಬಂದಿದ್ದರು. ಅವರು ಬರೆದುಕೊಟ್ಟ ಔಷಧಿ, ಗುಳಿಗೆ ಕೊಡಿಸಿ ಅವಳ ಮನೆಗೆ ಬಿಟ್ಟು ಬಂದಿದ್ದರು. ಇವತು ಬೆಳಿಗ್ಗೆ ಫೋನಮಾಡಿ ಔಷಧ ತೆಗೆದುಕೊಳ್ಳುವಂತೆ ತಾಕೀತು ಮಾಡಿದ್ದರು. ಎಲ್ಲ ಕೆಲಸ ಮುಗಿಸಿದ ನಿರಾಳತೆಯಿಂದ ಬರೆಯಲು ಕುಳಿತಿದ್ದರು. ಸಂಪಾದಕರು ಬೆಳಿಗ್ಗೆ ಫೋನ ಮಾಡಿ ಬರಲಿರುವ ಯುಗಾದಿ ವಿಶೇಷಾಂಕಕ್ಕೆ ಕತೆ ಬರೆದುಕೊಡುವಂತೆ ಒತ್ತಾಯ ಮಾಡಿದ್ದರು.

ದ್ವಂದ್ವ ಇತ್ತು ಅವರಲ್ಲಿ ನಾರ್ಮಲ್ ಆಗಿ ನಡೆದುಕೊಂಡೆನೇ ಈ ಪ್ರಶ್ನೆ ಕಾಡುತ್ತಿತ್ತು. ತ್ಯಾಗಮಯಿ ಅಂತಲೋ ಅಥವಾ ಮತ್ತಾವುದೋ ಪೂಜನೀಯ ಪದ ತಮಗರಿವಿಲ್ಲದೇ ತಮಗೆ ಅಂಟಿಕೊಂಡಿತೇ ಗಂಡನ ತಪ್ಪು ಮನ್ನಿಸಿ ಅನವಶ್ಯಕವಾಗಿ ಗರಿಮೆ ಗಳಿಸಿದೆನೇ . ಅಥವಾ ಅಳಿಯ ಹೇಳಿದಹಾಗೆ ತಾನು ಸೃಷ್ಟಿಸಿದ ಪಾತ್ರಗಳ ಆದರ್ಶ ಸರಿಗಟ್ಟಲು ಹೀಗೆ ಮಾಡಿದೆನೇ ಸುಮಾಳಿಗೆ ದುಡ್ಡು ಕೊಟ್ಟು ಕಳಿಸಿದರಾಗುತ್ತಿತ್ತೇ..ತಲೆ ಮೇಲೆ ಭಾರ ಹೊತ್ತುಕೊಂಡೆನೇ ನಾಳೆ ಏನಾದೀತು ಇದು ಯಾವಾಗಲೂ ಅನೂಹ್ಯ. ಈ ವಯಸ್ಸಿನಲ್ಲಿ ದೊಡ್ಡ ರಿಸ್ಕ ತಗೊಂಡೆನೇ…ಹೀಗೆ ಪ್ರಶ್ನೆಗಳು ಮುತ್ತಿಕೊಂಡವು.

ಯೋಚಿಸಿದಾಗ ಅನಿಸಿದ್ದು ತನ್ನ ಈ ಸಂಘರ್ಷವನ್ನೆದ್ವಂದ್ವಗಳನ್ನೇ ಅಕ್ಷರರೂಪದಲ್ಲಿ ಇಳಿಸಿದರೆ ಹೇಗೆ..ಬಹುಶಃ ಅಲ್ಲಿ ಅಂದರೆ ಪಾತ್ರಗಳಿಗೆ ಹುಡುಕಿಸಿಕೊಟ್ಟ ಪರಿಹಾರ ನಿಜಜೀವನದಲ್ಲಿ ಸುಮಾಳಿಗೂ ಕೊಡಿಸಬಹುದಲ್ಲವೇ ಈ ಯೋಚನೆ ಒಂದು ಹೊಸ ಹುರುಪು ಕೊಟ್ಟಿತು.ಪರಿಹಾರ ಸಿಕ್ಕಿತೆನ್ನುವ ಸುಳಿವು ದೊರೆತು ಮನಸ್ಸು ಅಣಿಯಾಯಿತು. ಕಾಗದದ ಮೇಲೆ ಪೆನ್ನು ಸರಾಗವಾಗಿ ಓಡತೊಡಗಿತು.

‍ಲೇಖಕರು Admin

October 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ತಪ್ಪಿಗೆ ಕಾರಣಗಳನ್ನು ಹುಡುಕುತ್ತಾ ಕೂರುವುದರ ಬದಲು ಪರಿಹಾರ ಹುಡುಕುವುದು ಸರಿಯಾದ್ದು. ಈತೆ ಚೆನ್ನಾಗಿದೆ.

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ T S SHRAVANA KUMARICancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: