ಉಮೇಶ ದೇಸಾಯಿ ಅವರ ‘ಗಜಲ್ ಗಳ ನಶೆ’

ಉಮೇಶ ದೇಸಾಯಿ

ಮೊದಲಿಂದಲೂ ನನಗೆ ರೇಡಿಯೊದಲ್ಲಿ ಹಾಡು ಕೇಳುವುದು, ಬಹಳ ಇಷ್ಟ. ಅದು ಛಾಯಾಗೀತ ಇರಬಹುದು ಅಥವಾ ಬೇಲಾಕೆ ಫೂಲ ಇರಬಹುದು ಪಂಚ ಪ್ರಾಣ. ಸಿನೇಮಾ ಹಾಡುಗಳು ಅದರಲ್ಲೂ ರಫಿ, ಲತಾರ ಹಾಡುಗಳು ಅಚ್ಚುಮೆಚ್ಚು. ಹಾಡುಗಳಿಗಿಂತ ಗಜಲುಗಳು ಹೇಗೆ ಪ್ರಿಯವಾದವು ಹೇಳುವುದು ಕಷ್ಟ. ಸುಮಾರು 82-83 ರ ವರ್ಷವದು. ನನ್ನ ಪರಮಾಪ್ತ ಗೆಳೆಯ ವಿವೇಕ ಶಿಂಧೆ ಪಿಯುಸಿ ನನ್ನೊಡನೆ ಓದಿದವ ಏರಫೋರ್ಸಿಗೆ ಆಯ್ಕೆಯಾದ. ಅವಟ್ರೇ ನಿಂಗು ಎಲ್ಲ ಮುಗಿಸಿ ಸುಮಾರು ಆರು ತಿಂಗಳ ನಂತರ ಹುಬ್ಬಳ್ಳಿಗೆ ವಾಪಸ ಬಂದ.

ಸುಮಾರು ಎರಡು ತಿಂಗಳ ನಂತರ ಅವನ ಪೋಸ್ಟಿಂಗ ಸುರು ಆಗುವುದರಲ್ಲಿತ್ತು. ಅವ ಬಂದಾಗ ಒಂದು ಟೇಪರಿಕಾರ್ಡರ ಹಾಗೂ ಕೆಲವು ಕೆಸೆಟ್‌ ತಂದಿದ್ದ. ಆ ಕೆಸೆಟ್ಟುಗಳಲ್ಲಿ ಒಂದು ಪಂಕಜ ಉದಾಸ ನ ಗಜಲಿನ ಕೆಸೆಟ್ಟು. ‘ಇವನ್ನ ಕೇಳಲೇ ನೀ ಹುಚ್ಚು ಹಿಡೀತದ’ ಅಂದ ಅವ. ಹಿಂದಿ ಸಿನೇಮಾ, ಹಿಂದಿ ಹಾಡು ಅಷ್ಟ ಅರ್ಥವಾಗುತ್ತಿದ್ದ ನನಗೆ ಗಜಲಿನ ಭಾಷೆ ಹೊಸದರಲ್ಲಿ ಕಷ್ಟನೇ ಆತು. ಅದರೊಳಗ ಪಂಕಜ ಉದಾಸ ನ ಒಂದು ಗಜಲು ‘ಸಬ ಕೊ ಮಾಲೂಮ ಹೈ ಮೈ ಶರಾಬಿ ನಹೀ ಫಿರಭಿ ಕೋಯಿ ಪಿಲಾಯೆತೋ ಮೈ ಕ್ಯಾ ಕರುಂ’.. ಬೀರು ಅದೇ ಆಗ ಕುಡಿಯಲು ಶುರು ಮಾಡಿದ ದಿನಗಳು.

ಆ ಗಜಲು ನಾವು ಹೋಗುವ ಬಾರುಗಳಲ್ಲಿ, ಸಾವಜಿ ಹೊಟೆಲ್ಲುಗಳಲ್ಲಿ ಹಾಕುತ್ತಿದ್ದರು. ಪಂಕಜ ಉದಾಸ ನ ಅನೇಕ ಗಜಲುಗಳು ಬಾಯಿ ಪಾಠ ಆಗಿ ಹೋದವು.. ‘ಘುಂಘರು ಟೂಟ ಗಯೇ..’, ‘ದಿವಾರೊಂಸೆ ಮಿಲಕರ ರೋನಾ…’, ‘ಝೀಲ ಮೆ ಚಾಂದ ನಜರ ಆಯೆ…’, ‘ಆಪ ಜಿನಕೆ ಕರೀ ಬಹೋತೆ ಹೈ…’ ಹೀಗೆ ಅವನ ಗಜಲುಗಳು ಹುಚ್ಚು ಹಿಡಿಸಿದವು.

ಅದೇ ಹುಚ್ಚು ವಿವಿಧ ಭಾರತಿಯಲ್ಲಿ ಮಧ್ಯಾಹ್ನ ಬರುತ್ತಿದ್ದ ಗಜಲೊಂಕಿ ಮೆಹಫಿಲ್‌ ಅನ್ನುವ ಕಾರ್ಯಕ್ರಮದತ್ತ ಮನ ತಿರುಗಿಸಿತು. ಆ ಕಾರ್ಯಕ್ರಮದಲ್ಲಿ ಬೇಗಮ ಅಖ್ತರ, ರಫಿ, ಲತಾ ಹಾಗೆಯೇ ಮೆಹಂದಿ ಹಸನ್‌ ಗಜಲು ಶ್ರೋತೃಗಳ ಕೋರಿಕೆಯ ಮೇಲೆ ಪ್ರಸಾರವಾಗುತ್ತಿದ್ದವು. ಆ 80ರ ದಶಕದ ಮೊದಲಾರ್ಧ ಗಜಲಿನ ಅವಧಿ ಅನ್ನಬಹುದೇನೋ ಗಜಲ್ಲುಗಳು ಎಲ್ಲ ಕಡೆ ವ್ಯಾಪಿಸಿದವು.

ಜಗಜಿತ ಸಿಂಗ ಹಾಗೂ ಚಿತ್ರಾಸಿಂಗ, ರಾಜೇಂದ್ರ ಮೆಹತಾ ಮತ್ತು ನೀನಾ ಮೆಹತಾ ಅಂತೆಯೇ ಭುಪಿಂದರ ಹಾಗೂ ಮಿತಾಲಿ ಹೀಗೆ ದಂಪತಿಗಳು ಕೂಡಿ ಹಾಡುವ ಗಜಲ್ಗಳು ಮೋಡಿ ಮಾಡಲು ಸುರುವಿಟ್ಟವು. ಸುಮಾರು 83-84 ರಲ್ಲಿ ಪುಣೆಗೆ ಹೋದಾಗ ಮುಂಬಯಿ ದೂರದರ್ಶನದಲ್ಲಿ ಒಂದು ಸಂಜೆ ಪಂಕಜ ಉದಾಸನ ಗಜಲ್‌ ಪ್ರಸಾರ ಮಾಡಿದ್ದರು ಅದುವರೆಗೂ ಬರೀ ಕೇಳಿದ ಪತ್ರಿಕೆಗಳಲ್ಲಿ ನೋಡಿದ ಮೆಚ್ಚಿನ ಗಾಯಕ ಟಿವಿ ಪರದೆ ಮೇಲೆ ಪ್ರತ್ಯಕ್ಷನಾಗಿದ್ದ. ಅಂದು ಅವ ಹಾಡಿದ ಗಜಲ್‌ ಸಹ ಇನ್ನೂ ನೆನಪಿದೆ… ‘ದಿಲ ಧಡಕನೆ ಕಾ ಸಬ ಬಯಾದ ಆಯಾ…’ ಗಜಲಗಳು ನನ್ನ ಆವರಿಸಿಕೊಂಡಿದ್ದವು.

ಬಹುಬೇಗ ಗಜಲ ಅಂದರೆ ಏನು ಹೇಗೆ ಶೇರಗಳ ಗುಚ್ಛ ಗಜಲಿನ ರೂಪತಾಳುತ್ತದೆ.. ಮಕ್ತಾ ಅಂದರೇನು ಮುಕರ್ರರ್‌ ಅಂದರೇನು ಇತ್ಯಾದಿ ತಿಳಿಯತೊಡಗಿದವು. ಬರೆಯುವ ಶಾಯರುಗಳ ಹೆಸರು ಅವ ಹಿನ್ನೆಲೆ ಹೀಗೆ ಬೇರೆ ಕಡೆ ಆಸಕ್ತಿ ಮೂಡಿತು. ಆಗಿನ ಕೆಲವು ಪ್ರಮುಖ ಶಾಯರುಗಳು ಅಂದರೆ ಮುಮತಾಜ ರಾಶೀದ, ಸುದರ್ಶನ ಫಾಕಿರ್‌, ನಿದಾಫ ಆಜಲಿ, ಶೆಹರಯಾರ ಇವರೆಲ್ಲ ದೇವ ಲೋಕದವರೇ ಇಲ್ಲಿ ತಮ್ಮ ಶೇರುಗಳಿಂದ ಗಜಲಿನ ನಶೆ ಉಣಿಸಲು ಬಂದವರು ಅಂತ ಖಾತ್ರಿಯಾತು. ಹಿಂದಿ ಸಿನೇಮಾದಲ್ಲಿ ಸಾ ಹಿರ್‌, ಶಕೀಲ ಹಾಗೂ ಆನಂದ ಬಕ್ಷಿ ಬರೆದ ಗಜಲುಗಳು ಅಮಲು ಹುಟ್ಟಿಸ ತೊಡಗಿದವು.

ಜಗಜಿತ ಸಿಂಗ ನ ಕೆಸೆಟ್ಟು 1997 ರಲ್ಲಿ ನಾನು ಮೊದಲ ಸಲ ಟೇಪರಿಕಾರ್ಡರ ಖರೀದಿ ಮಾಡಿದಾಗ ಖರೀದಿಸಿದ್ದೆ. ಅದರಲ್ಲಿ ಬರುವ ಸುದರ್ಶನ ಫಾಕಿರ ಬರೆದ ಒಂದು ಗಜಲ ಹೀಗಿದೆ.. ‘ಶಾಯದ ಮೈ ಜಿಂದಗಿ ಕಾ ಸೆಹರ ಲೇಕೆ ಆ ಗಯಾ, ಕಾತಿಲ ಕೊ ಖುದ ಅಪನೆ ಹೀ ಘರಲೇಕೆ ಆ ಗಯಾ..’ ಶೇರಿನ ಎರಡು ಸಾಲುಗಳು ಸಹಸಾ ಒಂದು ಕತೆ ಹೇಳುತ್ತವೆ ಆದರೆ ಈ ಗಜಲಿನ ಶೇರುಗಳ ಎರಡು ಸಾಲುಗಳು ಪರಸ್ಪರ ವಿರೋಧಾ ಭಾಸದ ದ್ವಂದ್ವ ಸೃಷ್ಟಿ ಮಾಡುತ್ತವೆ.. ಈ ಉದಾಹರಣೆ ನೋಡಿ.. ‘ನಶ್ತರ ಹೈ ಮೇರೆ ಹಾತಮೆ ಕಾಂಧೋಂಪೆ ಮೈ ಕದಾಲೋ ಮೈ ಇಲಾಜ-ಎ-ದರ್ದೆ-ಜಿಗರ್‌ ಲೇಕೆ ಆ ಗಯಾ..’ ಈ ಗಜಲು ಇವತ್ತಿನವರೆಗೂ ನನ್ನ ಫೆವರೀಟ ಗಜಲ್‌ ಆಗಿ ಉಳಿದಿದೆ.

ಹೆಚ್ಚಾನು ಹೆಚ್ಚು ಗಜಲ್ಲುಗಳಲ್ಲಿ ಅತೀ ಸಾಮಾನ್ಯವಾಗಿ ಬಳಕೆಯಾದ ಶಬ್ದಗಳು-ಸಾಕೀ, ಮೈ, ಮೈಖಾನಾ, ಮೊಹಬ್ಬತ, ಬೇವಫಾ… ಬಹುಷಃ ಅತೀ ಉತ್ತಮ ಗಜಲ್ಲುಗಳು ಜನ್ನ ತಳೆದಿದ್ದು ಪಡಖಾನೆಯಲ್ಲಿಯೇ ಇರಬೇಕು. ಬಹುಷಃ ಮಧು ನೋವ ಹಿಂಗಿಸುವ ಬದಲು ಉದ್ದೀಪನಗೊಳಿಸುತ್ತದೇನೋ ಅದಕ್ಕೆ ಗೊತ್ತಿಲ್ಲ. 

ಒಂದು ಸಂಗತಿ ಮಾತ್ರ ಆಶ್ಚರ್ಯ ಈಗಲೂ ತರತದ ಅದೆಂದರೆ ಹೇಗೆ ಗಜಲ್ಲುಗಳನ್ನು ಮೀಟರಿಗೆ ಹೊಂದಿಸಿ ಅಂದರೆ ಸುಂದರವಾಗಿ ಧಾಟಿ ಹಚ್ಚಿ ಹಾಡಲಾಯಿತು.. ಯಾಕೆಂದರೆ ಗಾಲಿಬನ ಕಾಲದಲ್ಲಿ ಮುಶಾಯರಾ ನಡೆಯುತ್ತಿದ್ದವಂತೆ. ಮೆಹಫಿಲ-ಎ-ಶಮಾ ಯಾವ ಶಾಯರ ಮುಂದೆ ಇಡಲಾಗುತ್ತಿತ್ತು ಆ ಶಾಯರ ಗಜಲ್‌ ಓದುವ ಪರಿಪಾಠವಿತ್ತು. ಆದರೆ ಗಾಲಿಬನ ಗಜಲಗಳನ್ನ ವೇಶ್ಯೆಯರು, ಭಿಕ್ಷೆ ಬೇಡುವ ಮೌಲಾಗಳು ಸಹ ಹಾಡುತ್ತಿದ್ದರಂತೆ. ಗಾಲಿಬ ಓದುತ್ತಿದ್ದ/ಬರೆಯುತ್ತಿದ್ದ, ಧಾಟಿಗೆ ಹೊಂದುವಂತೆ ಗಜಲ ಬರೆದವನಲ್ಲ… ಬಹುಷಃ ಗಜಲಿನ ಆತ್ಮಬಲ್ಲವ, ಸಾಹಿತ್ಯದ ಆಳ ಅರಿತವ ಮಾತ್ರ ಹೀಗೆ ಗಜಲಗಳಿಗೆ ಧಾಟಿ ಹಚ್ಚಿ ಹಾಡಿ ಅವುಗಳನ್ನು ಜನಪ್ರಿಯಗೊಳಿಸಲು ಸಾಧ್ಯ..

ಕೆಲವು ಹೆಸರು ನೆನಪಿಗೆ ಬರುತ್ತವೆ.. ಖಯ್ಯಾಮ, ರೋಷನ ಹೀಗೆ ಸಂಗೀತ ನಿರ್ದೇಶಕರು ಗಜಲಿನ ಮೇಲೆ ಒಲವಿದ್ದವರು ಇದ್ದರು. ನಮ್ಮ ನೆರೆ ದೇಶದದಲ್ಲೂ ಗಜಲಿನ ಹೆಸರು ಜನ ಜನಿತ ಮೆಹಂದಿ ಹಸನ್‌, ನೂರ ಜಹಾಂ, ಗುಲಾಮ ಅಲಿ ಮೊದಲಾದ ಖ್ಯಾತ ನಾಮರು ಬಂದಿದ್ದು ಅಲ್ಲಿಂದಲೇ ಅಲ್ಲವೇ… ಕನ್ನಡದಲ್ಲಿ ಈಗೀಗ ಗಜಲ್‌ ಬರೆಯುವವರ ಸಂಖ್ಯೆ ಗಣನೀಯವಾಗಿ ಏರಿದೆ.. ಅದುಡಾ. ಗೋವಿಂದ ಹೆಗಡೆ, ಮಿರಜ ಕರ ಹೀಗೆ ಹಲವರು ಈ ಗಜಲಿನ ಪ್ರಕಾರದಲ್ಲಿ ಕೃಷಿ ಮಾಡುತ್ತಿದ್ದಾರೆ.. ಇವರ ಅನೇಕ ಕೃತಿಗಳ ನಾನು ಓದಿರುವೆ ನಿಜ ಇದು ಹೆಮ್ಮೆಯ ಹಾಗೂ ಮಿತಿಯ ವಿಷಯವೂ ಕೂಡ. ಮಿತಿ ಯಾಕೆಂದರೆ ಗಜಲ್‌ ಇದು ಓದುವದಕ್ಕಿಂತ ಕೇಳುವುದರಿಂದ ಅದರ ಸೊಬಗು ಹೆಚ್ಚುತ್ತದೆ.

ಕನ್ನಡದ ಕೆಲವರು ಗಜಲ್‌ ಹಾಡುತ್ತಾರೆ ಅಂತ ಕೇಳಿದೆ ಆದರೆ ಯಾವುದೂ ಮನ ದಾಳಕ್ಕೆ ಇಳಿದಿಲ್ಲ ಅದೇಕೋ ಗೊತ್ತಿಲ್ಲ. ನಮ್ಮ ನೆರೆ ರಾಜ್ಯದ ಪರಿಸ್ಥಿತಿ ಬೇರೆ.. ಅಲ್ಲಿ ಮಂಗೇಶ ಪಾಡ ಗಾಂವಕರ, ಸುರೇಶಭಟ್‌ ಮುಂತಾದವರು ಗಜಲ್‌ ಬರೆದರು ಹಾಗೆಯೇ ಅವರು ಬರೆದ ಅನೇಕ ಗಜಲಗಳನ್ನು ಸುದೀರ ಫಡಕೆ, ಸುರೇಶ ವಾಡಕರ, ಲತಾ, ದೇವಕಿ ಪಂಡಿತ, ಅರುಣ ದಾತೆ ಮುಂತಾದವರು ದನಿ ನೀಡಿ ಮರಾಠಿ ಗಜಲ್ಲುಗಳ ಶ್ರೀಮಂತ ಮಾಡಿದ್ದಾರೆ. ಕನ್ನಡದಲ್ಲೂ ಅಂತಹ ಪ್ರಯತ್ನಗಳು ಹೆಚ್ಚಾಗಬೇಕು ಇದು ಆಶಯ.

‍ಲೇಖಕರು Avadhi

May 16, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ಗಜಲ್ಗಳ ಬಗ್ಗೆ ಆಕರ್ಷಣೆ ಹುಟ್ಟಿಸುವ ಬರಹ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: