ಉಮಾದೇವಿ ಉರಾಳ ಓದಿದ ʻಬದುಕು ಬರಹ ಬವಣೆ’

ಅಕ್ಷರ ಲೋಕದ ಪಯಣಿಗನ ಯಶೋಗಾಥೆ…

ಕೆ.ಆರ್. ಉಮಾದೇವಿ ಉರಾಳ 

“ಬದುಕು ಬರಹ ಬವಣೆ (ಪ.ರಾಮಕೃಷ್ಣ ಶಾಸ್ತ್ರಿ ಹೆಜ್ಜೆಗುರುತುಗಳು) ಎಂಬ ಕೃತಿ ಲಕ್ಷ್ಮೀ ಮಚ್ಚಿನ ಅವರ ನಿರೂಪಣೆಯಲ್ಲಿ ಮೈಸೂರಿನ ರೂಪ ಪ್ರಕಾಶನದಿಂದ ಪ್ರಕಟವಾಗಿದೆ.

ಇದೀಗ ಎಪ್ಪತ್ತರ ಹರೆಯದಲ್ಲಿರುವ ಶಾಸ್ತ್ರಿಗಳ ಬರಹಗಳು ಅವರ ಬಾಲ್ಯದಿಂದಲೇ ಪತ್ರಿಕೆಗಳಲ್ಲಿ ಬೆಳಕು ಕಾಣಲಾರಂಭಿಸಿದ್ದವು. ಕ್ರಮೇಣ ಕನ್ನಡದ ಸಮಸ್ತ ಪತ್ರಿಕೆಗಳಲ್ಲೂ ಅವರ ಒಂದಲ್ಲಾ ಒಂದು ಲೇಖನಗಳು ನಿರಂತರವಾಗಿ ಇಂದಿನವರೆಗೂ ಪ್ರಕಟಗೊಳ್ಳುತ್ತಲೇ ಇರುವಾಗ ಅವರ ಹೆಸರನ್ನು ಗಮನಿಸದ ಕನ್ನಡದ ಓದುಗರೇ ಇರಲಾರರೇನೋ. ವಿಶೇಷವಾಗಿ ಮಕ್ಕಳ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾದುದಾದರೂ ಕೃಷಿ, ಪ್ರಚಲಿತ ವಿದ್ಯಮಾನಗಳು, ತಂತ್ರಜ್ಞಾನ, ಸಾಮಾಜಿಕ ಅನಿಷ್ಟಗಳು, ಸಮಕಾಲೀನ ನಿರೀಕ್ಷೆಗಳು ಹೀಗೆ ಹತ್ತು ಹಲವಾರು ಅಂಶಗಳಿಗೆ ಸಂಬಂಧಿಸಿದಂತೆ ನಿರಂತರವಾಗಿ ಬರೆಯುತ್ತಲೇ ಇರುವ ಈ ಲೇಖಕರ ಲೇಖನಿ ಹೊರಹೊಮ್ಮಿಸದ ವಿಷಯಗಳೇನಾದರೂ ಉಳಿದಿವೆಯೇ ಎಂದೂ, ಅವರು ಇನ್ನೂ ವಯೋವೃದ್ಧರಿರಬಹುದು ಎಂದೂ ಓದುಗರು ಭಾವಿಸುವ ಸಂಭವವಿದೆ. ಹೀಗಾಗಿ ಈ ಪುಸ್ತಕವನ್ನು ಕುತೂಹಲದಿಂದ ಓದಲು ಕೈಗೆತ್ತಿಕೊಂಡಾಗ ಅಷ್ಟೇ ಕುತೂಹಲದ ಓದನ್ನು ನೀಡಿದೆ ಈ ಪುಸ್ತಕ. ಇದನ್ನು ಪ. ರಾಮಕೃಷ್ಣ ಶಾಸ್ತ್ರಿಗಳ ಮಗ ಲಕ್ಷ್ಮೀ ಮಚ್ಚಿನರವರು ನಿರೂಪಿಸಿದ್ದಾರಾದರೂ ಅಲ್ಲಲ್ಲಿ ಆತ್ಮಕಥನದ ಸ್ವರೂಪವೂ ಇಣುಕಿದೆ.

ಮಕ್ಕಳ ಕಥೆ, ಸಣ್ಣ ಕಥೆ, ಅಂಕಣಗಳು, ಕಾದಂಬರಿ ಎಂದು ವೈವಿಧ್ಯಮಯ ಸಾಹಿತ್ಯ ಪ್ರಕಾರಗಳಲ್ಲಿ ನೂರಾನಾಲ್ಕು ಪುಸ್ತಕಗಳನ್ನು, ಹನ್ನೆರಡು ಸಾವಿರಕ್ಕೂ ಮಿಕ್ಕ ಲೇಖನಗಳನ್ನು ಪ್ರಕಟಿಸಿರುವ ಪ. ರಾಮಕೃಷ್ಣ ಶಾಸ್ತ್ರಿಯವರದು ಬೆಂಕಿಯಲ್ಲಿ ಅರಳಿದ ಹೂವು ಎಂಬಂತಹ ಬದುಕು. ಮನೆಯ ತುಂಬ ಮಕ್ಕಳಿದ್ದ ಕಡುಬಡತನದ ಕುಟುಂಬದಲ್ಲಿ ಜನಿಸಿದ ಇವರು ಶಾಲೆಗೆ ಹೋದುದು ಕೇವಲ ನಾಲ್ಜು ವರ್ಷಗಳು ಮಾತ್ರ. ಇವರು ಬರಹಗಾರರಾಗಿ ರೂಪುಗೊಳ್ಳಲು ಸಾಧ್ಯವಾದದ್ದು ಕಿತ್ತು ತಿನ್ನುವ ಬಡತನವಿದ್ದಾಗಲೂ ಮನೆಯಲ್ಲಿದ್ದ ಸಾವಿರಾರು ಪುಸ್ತಕಗಳ ಸಂಗ್ರಹದ ಓದಿನಿಂದ. ದಿನವೂ ಎಂಬಂತೆ ಮನೆಗೆ ಬರುವಾಗ ಹೊಸ ಪುಸ್ತಕ ಕೊಂಡು ತರುತ್ತಿದ್ದ ತಂದೆಯವರು ಹಾಗೂ ಬರಹಗಾರರಾಗಿದ್ದ ಇವರ ಪ್ರೀತಿಯ ಅಣ್ಣನ ಪ್ರಭಾವದಿಂದ. ಇವರ ಮುತ್ತಜ್ಜ “ಶಾಸ್ತ್ರಿ” ಎಂಬ ಸಂಸ್ಕೃತದ ಪದವಿ ಪರೀಕ್ಷೆ ಉತ್ತೀರ್ಣರಾಗಿದ್ದ ಭೀಮಶಾಸ್ತ್ರಿಯವರನ್ನು ಬ್ರಿಟಿಷರು ತಾವು ಸೆರೆಮನೆಯಲ್ಲಿಟ್ಟಿದ್ದ ವಿಟ್ಲದ ಅಪ್ರಾಪ್ತ ವಯಸ್ಸಿನ ಅರಸನಿಗೆ  ವಿದ್ಯೆ ಕಲಿಸುವ ಗುರುಗಳಾಗಿ ನೇಮಿಸಿದ್ದರಂತೆ. ಇಂತಹ ಪೂರ್ವಿಕರ ಪರಂಪರೆಯ ಪ್ರಸ್ತಾಪ ಕೂಡ ಕೃತಿಯಲ್ಲಿದ್ದು ಒಂದು ವಿಧದಲ್ಲಿ ದಕ್ಷಿಣ ಕನ್ನಡದ ಜನರ ಜೀವನ ವಿಧಾನದ ಶೈಲಿಯೂ ಇಲ್ಲಿ ಸ್ವಲ್ಪಮಟ್ಟಿಗೆ ಅನಾವರಣಗೊಳ್ಳುತ್ತದೆ.

ಪ. ರಾಮಕೃಷ್ಣ ಶಾಸ್ತ್ರಿಗಳು ತಮ್ಮ ನಡುವಯಸ್ಸಿನಲ್ಲಿ ಕೃಷಿಕರಾದರಾದರೂ, ಬದುಕಿನ ಪ್ರಾರಂಭದಲ್ಲಿ ಬರವಣಿಗೆಯಿಂದ ಬರುತ್ತಿದ್ದ ಗೌರವಧನವನ್ನೇ ಜೀವನಾಧಾರಕ್ಕೆ ನೆಚ್ಚಿದ್ದವರು. ತಮ್ಮ ಹನ್ನೆರಡನೇ ವಯಸ್ಸಿನಲ್ಲಿ ಸುಧಾದಲ್ಲಿ ಪ್ರಕಟವಾದ ಕತೆಗಾಗಿ ಮೂವತ್ತು ರೂಪಾಯಿನ ಚೆಕ್‌ನ ಗೌರವಧನ ಪಡೆದಿದ್ದ ಶಾಸ್ತ್ರಿಗಳು ಅದನ್ನು ನಗದುಗೊಳಿಸಿಕೊಳ್ಳಲು ಮೊದಲ ಉಳಿತಾಯ ಖಾತೆ ತೆರೆದಿದ್ದರಂತೆ. ವ್ಯಂಗ್ಯಚಿತ್ರ ರಚನೆ, ಆಕಾಶವಾಣಿ ಕಾರ್ಯಕ್ರಮಗಳು, ತಾಳಮದ್ದಳೆ, ಕೊನೆಗೆ ದೂರದರ್ಶನದಲ್ಲಿ ಸಂದರ್ಶನ ಎಂದು ಮುದ್ರಣ, ದೃಕ್, ಶ್ರವಣ ಮಾಧ್ಯಮಗಳಲ್ಲೂ ಜನಪ್ರಿಯರಾದವರು.

ಶೀರ್ಷಿಕೆಯಂತೆ ಪುಸ್ತಕದ ಪ್ರಾರಂಭದಲ್ಲಿ ಶಾಸ್ತ್ರಿಗಳ ಬದುಕಿನ ಕುರಿತು ಹೇಳುವಾಗ ಪೂರ್ವಿಕರ ಕಿತ್ತು ತಿನ್ನುವ ಬಡತನದಿಂದಾಗಿ ಅವಮಾನಗಳಿಗೆ ಗುರಿಯಾದುದನ್ನು, ಮನೆ ತುಂಬ ಮಕ್ಕಳು ಮಾಡಿದ್ದ ತಂದೆ ಹುಟ್ಟಿಸಿದ ಮಕ್ಕಳೆಡೆ ಗಮನಹರಿಸದಿದ್ದುದನ್ನು, ತಮ್ಮ ವ್ಯವಹಾರದಲ್ಲಿ ಅವರು ಮಾಡುತ್ತಿದ್ದ ಅವ್ಯವಹಾರವನ್ನು, ಸ್ವತಃ ತಮ್ಮ ತಾಯಿಯ ಮಲಮಗನೆಡೆಗಿನ ಸಲ್ಲದ ನಡತೆಯನ್ನು ಮುಕ್ತವಾಗಿ ಶಾಸ್ತ್ರಿಗಳು ಪ್ರಸ್ತಾಪಿಸುತ್ತಾರೆ. ಹೀಗೆ ಕುಟುಂಬದವರ ಅವಗುಣಗಳನ್ನು, ಸ್ವತಃ ತಮ್ಮದೇ ವ್ಯಕ್ತಿತ್ವದ ಇತಿಮಿತಿಗಳು, ತಮ್ಮಿಂದ ಕುಟುಂಬಕ್ಕೆ, ವಿಶೇಷವಾಗಿ ಪತ್ನಿಗೆ ಆದ ಅವಗಣನೆಗಳನ್ನು ಪ್ರಾಂಜಲ ಮನಸ್ಸಿನಿಂದ ತೆರೆದಿಟ್ಟಿದ್ದಾರೆ.

ನಂತರದ ಬರಹದ ವಿಭಾಗದಲ್ಲಿ ಪ. ರಾಮಕೃಷ್ಣ ಶಾಸ್ತ್ರಿಗಳ ಅಕ್ಷರಲೋಕದ ಪಯಣವನ್ನು ನಿರೂಪಕರು ಸವಿಸ್ತಾರವಾಗಿ ನಿರೂಪಿಸಿದ್ದಾರೆ. ಅದೆಷ್ಟೋ ಸಾಧಕರನ್ನು, ತೆರೆಯ ಮರೆಯ ಪ್ರತಿಭೆಗಳನ್ನು, ಸಮಾಜಸೇವಾ ಧ್ಯೇಯದ ಸಂಘಸಂಸ್ಥೆಗಳನ್ನು ಪರಿಚಯಿಸಿದ್ದರ ವಿವರಗಳಿವೆ. ಪ್ರಚಲಿತ ವಿದ್ಯಮಾನಗಳಿಗೆ ಸ್ಪಂದಿಸಿ ಪತ್ರಿಕೆಗಳಿಗೆ ಸೂಕ್ತ ಸಮಯದಲ್ಲಿ ಲೇಖನ ಬರೆದುಕೊಡುವುದರಲ್ಲಿ ನಿಷ್ಣಾತರು.  ಇವರ ಲೇಖನಗಳು ಪತ್ರಿಕೆಗಳಿಗೆ ಅದೆಷ್ಟು ಅನಿವಾರ್ಯವಿತ್ತೆಂದರೆ ಒಬ್ಬರದೇ ಲೇಖನ ಪದೇಪದೆ ಪ್ರಕಟಿಸಲಾಗದ ಸಂದಿಗ್ಧತೆಗಾಗಿ ಬೇರೆ ಬೇರೆ ಕಾವ್ಯನಾಮಗಳನ್ನು ಕೊಟ್ಟು ಪ್ರಕಟಿಸಿದ್ದ ಅದೆಷ್ಟೋ ಸಂದರ್ಭಗಳಿದ್ದವಂತೆ. ಯಾವುದೇ ಪ್ರಚಾರದ ಹಂಗಿಲ್ಲದೆ ತಮ್ಮ ಪಾಡಿಗೆ ತಾವು ಬರೆದುಕೊಂಡಿರುತ್ತಿದ್ದ ಶಾಸ್ತ್ರಿಗಳು ಬರೆದ ಕಥೆಗಳನ್ನು ಮಹಾರಾಷ್ಟ್ರ ಸರ್ಕಾರ ನಾಲ್ಕು ಆರು ಏಳನೇ ತರಗತಿಗಳ ಕನ್ನಡ ಪಠ್ಯ ಪುಸ್ತಕಗಳಲ್ಲಿ ಅಳವಡಿಸಿಕೊಂಡಿತ್ತು. ತುಳು ಪದವಿ ಪಠ್ಯದಲ್ಲಿ, ಬಿ.ಕಾಂ. ಪದವಿ ಪಠ್ಯದಲ್ಲಿ ಇವರ ಕಥೆಗಳು ಸೇರ್ಪಡೆಯಾಗಿವೆ. ಇವರ ಸಮಗ್ರ ಸಾಹಿತ್ಯದ ಕುರಿತೇ ಎಂ.ಫಿಲ್. ಪದವಿ ಪಡೆದವರಿದ್ದಾರೆ. ಮುನ್ನುಡಿಕಾರ ನಿತ್ಯಾನಂದ ಪಡ್ರೆಯವರೆನ್ನುವಂತೆ “ದಣಿವರಿಯದ ಬರವಣಿಗೆಯ ದಣಿ”ಯಾದ ಇವರಿಗೆ ಸಾಹಿತ್ಯ ಸಮ್ಮೇಳನಗಳ ಗೋಷ್ಠಿಗಳ ಅಧ್ಯಕ್ಷತೆ, ಬೆಳ್ತಂಗಡಿ ತಾಲ್ಲೂಕಿನ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯಲ್ಲದೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ.

ಭಾರತ ಭಾರತಿ, ಐಬಿಎಚ್, ಸ್ವಪ್ನ, ಅಂಕಿತಗಳಲ್ಲಿ ತಮ್ಮ ಪುಸ್ತಕಗಳು ಪ್ರಕಟವಾದುದರ ಕುರಿತು ಶಾಸ್ತ್ರಿಗಳು ಧನ್ಯತೆಯ ಸಂತೃಪ್ತಿ ಹೊಂದಿದವರು. ತಮ್ಮ ನೂರನೆಯ ಪುಸ್ತಕವು ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾದುದರ ಕುರಿತು ಹೇಳುತ್ತಾ “ಪ್ರಕಾಶನ ಪ್ರಪಂಚದಲ್ಲೇ ನಿಖರವಾದ ಪ್ರಾಮಾಣಿಕತೆಯ ಪ್ರಶ್ನೆ ಬಂದಾಗ ಪ್ರಕಾಶನ ಪ್ರಪಂಚದ ಮೋಸಗಳಿಂದ ಬಳಲಿದವರಿಗೆ ನವಕರ್ನಾಟಕ ಪ್ರಕಾಶನದ ಹಿರಿಮೆ ಏನೆಂಬುದು ಅರ್ಥವಾಗುತ್ತದೆ” ಎನ್ನುತ್ತಾ ಈಗ ಪ್ರಕಾಶನದ ಹೊಣೆ ಹೊತ್ತಿರುವ ರಮೇಶ ಉಡುಪರು ತಮ್ಮ ಹಳೆಯ ಬಾಕಿಯನ್ನು ಕಳಿಸಿಕೊಟ್ಟು ಪ್ರಕಾಶನ ಜಗತ್ತಿನ ಒಬ್ಬ ಮಾದರಿ ವ್ಯಕ್ತಿತ್ವವನ್ನು ಸಾಬೀತುಪಡಿಸಿದವರು ಎಂದು ಸ್ಮರಿಸುತ್ತಾರೆ. ಅದರಂತೆಯೇ ಪ.ರಾ. ಶಾಸ್ತ್ರಿಯವರು ಮನದುಂಬಿ ಕೃತಜ್ಞತೆ ವ್ಯಕ್ತಪಡಿಸುವುದು ರೂಪ ಪ್ರಕಾಶನ ಮತ್ತು ಅದರ ಪ್ರಕಾಶಕರಾದ ಯು.ಎಸ್. ಮಹೇಶರವರ ಕುರಿತು. ತಮ್ಮ ಬಹುಪಾಲು ಪುಸ್ತಕಗಳನ್ನು ರೂಪ ಪ್ರಕಾಶನವೇ ಪ್ರಕಟಿಸಿದ್ದು, ತಮಗೆ ಗೌರವಧನವನ್ನು ಸ್ವಲ್ಪ ಕೂಡ ಉಳಿಸದೇ ನೆನಪಿಟ್ಟು ಕೊಡುತ್ತಿರುವ ಮಹೇಶ್‌ರವರ ಪ್ರಾಮಾಣಿಕತೆ ಅಚ್ಚರಿ ಮೂಡಿಸುವಂತಹುದು ಎನ್ನುತ್ತಾ ಅದು ತಮ್ಮ ಬದುಕಿನ ರಥವನ್ನು ಸುಗಮವಾಗಿ ಎಳೆಯಲು ಸಹಕಾರಿಯಾಗಿರುವುದನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ.

ಅದರಂತೆಯೇ ಇವರ ಲೇಖನಗಳ ಕೃತಿಚೌರ್ಯ, ಗೌರವಧನ ಕೊಡದ ಕೆಲವರು ಪ್ರಕಾಶಕರು, ಇವರ ಲೇಖನಗಳ ಪ್ರಕಟಣೆಗೆ ತಡೆಯೊಡ್ಡುವ ಮತ್ಸರಿಗಳು ಮುಂತಾದ ಹಲವಾರು ಕಹಿ ಅನುಭವಗಳೂ ಇವರ ಪಾಲಿಗಿವೆ.

ಮಾನವೀಯತೆಗೆ ಮಣೆ ಹಾಕುವ ಶಾಸ್ತ್ರಿಗಳ ವ್ಯಕ್ತಿತ್ವ ಇಲ್ಲಿ ಪ್ರಸ್ತಾಪಿತವಾಗಿದೆ. ತಮ್ಮ ಮನೆಯಲ್ಲಿ ಹಸಿವಿನ ಹಾಹಾಕಾರವಿದ್ದಾಗ ದೂರದಿಂದ ಮನೆಯವರೆಗೆ ಹೊತ್ತುಕೊಂಡು ಬಂದು ಅಕ್ಕಿ ಕೊಟ್ಟು ಇದನ್ನು ಮರಳಿ ಕೊಡುವುದು ಬೇಡ ಎಂದಿದ್ದ ಹಸನೆ ಬ್ಯಾರಿ, ನಿಯಮಮೀರಿ ತಮ್ಮ ಮನೆಯ ಬಳಿ ಬಸ್ ನಿಲ್ಲಿಸಲು ಸಹಕರಿಸಿದ್ದ ಶರೀಫ್, ದಲಿತನೊಬ್ಬನನ್ನು ತಾವು ಮನೆ ಕಟ್ಟಿಸುವಾಗ ಗೋಡೆ ಇಡಲು ನೇಮಿಸಿಕೊಂಡರೆ ಬಡಗಿಯಿಂದ ಬಂದ ತಕರಾರನ್ನು ತಾವು ನಿರ್ಲಕ್ಷಿಸಿದ್ದು ಇಂತಹ ಹಲವು ಪ್ರಸಂಗಗಳಿವೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲೂ ಸ್ಪರ್ಧಿಸಿ ಗೆದ್ದವರು. ಸಹಕಾರಿ ಕ್ಷೇತ್ರದಲ್ಲೂ ಭಾಗವಹಿಸಿದವರು.

ಪುಸ್ತಕದಲ್ಲಿನ ಹಲವಾರು ಭಾವಚಿತ್ರಗಳು, ವಿವಿಧ ಪತ್ರಿಕೆಗಳಲ್ಲಿ ಬಂದ ಇವರ ಮತ್ತು ಇವರ ಕುರಿತ ಲೇಖನಗಳ ಚಿತ್ರಗಳು, ಆಕರ್ಷಕವಾದ ಶೀರ್ಷಿಕೆಗಳು ಇವೆಲ್ಲ ನೈಜತೆಯ ಪ್ರಾಮಾಣಿಕ ಅಭಿವ್ಯಕ್ತಿಯಿಂದ ಮುಕ್ತವಾಗಿ ತೆರೆದಿಟ್ಟ ಇವರು ಹಾದು ಬಂದ ಹಾದಿಯ ಸಹಜತೆಯ ನಿರೂಪಣೆಗೆ ಮೆರುಗು ನೀಡುವ ಅಂಶಗಳು. ಪ. ರಾಮಕೃಷ್ಣ ಶಾಸ್ತ್ರಿಗಳ ಅಕ್ಷರ ಲೋಕದ ಯಾನವನ್ನು ಉತ್ಪ್ರೇಕ್ಷೆಯಿಲ್ಲದ ವಸ್ತುನಿಷ್ಠತೆಯಿಂದ ತೆರೆದಿಟ್ಟಿರುವ ಕೃತಿಯು ಕನ್ನಡ ಓದುಗರ ಮನ ಗೆಲ್ಲಬಲ್ಲ ಕೃತಿಯಾದುದರಿಂದ ಶಾಸ್ತ್ರಿಗಳು, ನಿರೂಪಕರು, ಪ್ರಕಾಶಕರು ಅಭಿನಂದನಾರ್ಹರು.

 

‍ಲೇಖಕರು avadhi

July 31, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: