ಉದಾರೀಕರಣದ ‘M ಡಾಕ್ಯುಮೆಂಟ್’

ರಾಜಾರಾಂ ತಲ್ಲೂರು ಅವರು ಎರಡು ವರ್ಷದ ಹಿಂದೆ ಫೇಸ್ ಬುಕ್ ನಲ್ಲಿ ಹಾಕಿದ ಒಂದು ಪೋಸ್ಟ್ ಈಗ ಮಹತ್ವದ ಒಂದು ಕೃತಿ ಕನ್ನಡಕ್ಕೆ ಬರಲು ಕಾರಣವಾಗಿದೆ.

ಅಹರ್ನಿಶಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.

ಉಡುಪಿಯ ಪುರಭವನದಲ್ಲಿ ಇದೇ ತಿಂಗಳ 24 ರಂದು ಕೃತಿ ಬಿಡುಗಡೆಯಾಗುತ್ತಿದೆ.

ರಾಜಾರಾಂ ತಲ್ಲೂರು

ಒಂದು ಮಹತ್ವದ ಪುಸ್ತಕ ಓದಿ ಮುಗಿಸಿದೆ.

ಕಳೆದ 25ವರ್ಷಗಳ ಭಾರತದ ಚರಿತ್ರೆಯನ್ನು ಅರ್ಥಮಾಡಿಕೊಳ್ಳಬಯಸುವವರಿಗೆ “Must read” ಇದು.

ರಾಜೀವ್ ಗಾಂಧಿ ಪ್ರಧಾನಿ ಆಗಿದ್ದಾಗ, ಕೇಂದ್ರ ಸರ್ಕಾರದ ಅಧಿಕಾರದ ಕಾರಿಡಾರ್‌ಗಳಲ್ಲಿ ಗಮನ ಸೆಳೆಯುತ್ತಿದ್ದ ನಾಲ್ಕೈದು ಹೆಸರುಗಳಲ್ಲಿ ಪ್ರಮುಖವಾದವು ಸತ್ಯನಾರಾಯಣ್ ’ಸ್ಯಾಮ್’ ಪಿತ್ರೋದಾ, ಮೊಂಟೆಕ್ ಸಿಂಗ್ ಅಹ್ಲೂವಾಲಿಯಾ ಮತ್ತು ವಿನೋದ್ ಪಾಂಡೆ. ಆ ಹಂತದಲ್ಲಿ ನಾನು ಸ್ವತಃ ಉದಾರೀಕರಣದ ಮಹಾ ಸಮರ್ಥಕ. ಹಾಗಾಗಿ, ಈ ಮೂರೂ ಹೆಸರುಗಳ ಫ್ಯಾನ್ ನಾನು! ಅವರಲ್ಲೊಬ್ಬರ ಜೀವನಚರಿತ್ರೆ ಇದು.

ರಾಜೀವ್ ಗಾಂಧಿ ಹಾಕಿದ ಆಧುನೀಕರಣದ ತಳಪಾಯದ ಮೇಲೆ ಉದಾರೀಕರಣದ ಕಟ್ಟೋಣ ಕಟ್ಟಿದ ಮಹಾಶಿಲ್ಪಿ ಡಾ|ಮನಮೋಹನ್ ಸಿಂಗ್. ಈ ಶಿಲ್ಪಿಯ ಶಿಷ್ಯೋತ್ತಮ ಮೊಂಟೆಕ್ ಸಿಂಗ್. ಅವರಿಬ್ಬರ ಸಂಬಂಧದ ಸ್ವರೂಪ ಚೆನ್ನಾಗಿ ವಿವರಿಸಬೇಕೆಂದರೆ, ಮೊಂಟೆಕ್-ಐಷರ್ ದಂಪತಿ ಅಮೆರಿಕದಲ್ಲಿ ವಿಶ್ವಬ್ಯಾಂಕಿನಲ್ಲಿ ಉದ್ಯೋಗದಲ್ಲಿದ್ದಾಗ ಸ್ವಲ್ಪಕಾಲ ಅವರ ಮಕ್ಕಳು ಇಲ್ಲಿ RBI ಗವರ್ನರ್ ಡಾ|ಸಿಂಗ್ ಅವರ ಮನೆಯಲ್ಲಿದ್ದು ಓದುತ್ತಿದ್ದರು ಎಂದರೆ ಸಾಕಾಗುತ್ತದೆ.

ಈಗ NDA ಸರ್ಕಾರ ತಾನು ಕಡಿದು ಕಟ್ಟೆ ಹಾಕಿದ್ದೆಂದು ತೋರಿಸುವ ಆರ್ಥಿಕ ಚಿಂತನೆಗಳು ಎಲ್ಲವೂ ಎಲ್ಲಿಂದ ಕದ್ದದ್ದು ಮತ್ತು ಯಾವುದರ ಮುಂದುವರಿಕೆ ಎಂಬುದು ಅರ್ಥ ಆಗಬೇಕಾದರೆ, ಭಕ್ತ ಮಹಾಶಯರು ಈ ಪುಸ್ತಕವನ್ನೊಮ್ಮೆ ಓದಬೇಕು. ತಾವು ಜೀವನಪೂರ್ತಿ ವಿರೋಧಿಸುತ್ತಾ ಬಂದ ಮಡುವಿನಲ್ಲಿ ಇನ್ನೆಂದೂ ಮೇಲೇಳದಂತೆ ಸಿಲುಕಿಹಾಕಿಕೊಂಡಿದ್ದೇವೆಂಬ ಅರಿವು ಅವರಲ್ಲಿ ಮೂಡಿಸಬಲ್ಲ ಪುಸ್ತಕ ಇದು!

ಆಧುನೀಕರಣ ಎಂದರೆ ಅದು ಉದಾರೀಕರಣ ಎಂದು ನಂಬಿರುವ “ರಿಫಾರ್ಮ್ಸ್ ಇವ್ಯಾಂಜಲಿಸ್ಟ್” ಮೊಂಟೆಕ್, ಇಲ್ಲಿ ಹೇಗೆ ಜನರನ್ನು ಹಂತಹಂತವಾಗಿ ಉದಾರೀಕರಣದತ್ತ ಬಗ್ಗಿಸಲಾಯಿತು ಎಂಬುದನ್ನು “ರಿಫಾರ್ಮ್ಸ್ ಬೈ ಸ್ಟೆಲ್ಥ್” ಎಂಬ ಅವರ ನಂಬಿಕೆಯ ಮೂಲಕ ವಿವರಿಸುತ್ತಾರೆ. ವಿ ಪಿ ಸಿಂಗ್ ಸರ್ಕಾರದ ಕಾಲದಿಂದ ಆರಂಭಗೊಂಡು ನರಸಿಂಹರಾಯರು ಬರುವ ತನಕದ ರಾಜಕೀಯ ಅನಿಶ್ಚಿತತೆಯ ಕಾಲದಲ್ಲಿ “ಶಾರ್ಟ್ ಟರ್ಮ್ ಲಾಭಕ್ಕೆ ಮಾಡಿದ ರಾಜಕೀಯ”ದ ಕಾರಣಕ್ಕೆ ದೇಶ ಹೇಗೆ ಪ್ರಪಾತದ ಅಂಚಿನ ತನಕ ಹೋಗಿ ಹಿಂದೆಬಂತೆಂಬುದರ ವಿವರಣೆಗಳು ಬಹಳ ಕುತೂಹಲಕರವಾಗಿವೆ. ಹಣಕಾಸು ಸಚಿವರಾಗಿ ಮನಮೋಹನ್ ಸಿಂಗ್ ಅವರು ಬಹುತೇಕ ಏಕಾಂಗಿಯಾಗಿ ದೇಶದ ಆರ್ಥಿಕತೆಯನ್ನುಮರಳಿ ಹಳಿಗೆ ತಂದ ಕತೆಯೂ ಅಷ್ಟೇ ರೋಚಕ.

ಈ ಎಲ್ಲ ಹಂತಗಳಲ್ಲೂ ಡಾ| ಸಿಂಗ್ ಅವರ ಬಗಲ ಬಂಟನಾಗಿ ನಿಂತ ಮೊಂಟೆಕ್, ಮುಂದೆ ಡಾ|ಸಿಂಗ್ ಅವರು ಪ್ರಧಾನಿ ಆಗಿದ್ದಾಗ ತೆಗೆದುಕೊಂಡ ಸುಧಾರಣೆಯ ಕ್ರಮಗಳನ್ನು ವಿವರಿಸುವಾಗ ನನಗೆ ಅನ್ನಿಸಿದ್ದು ಇಷ್ಟು:

ಯಾವುದೇ ದೇಶ ಒಂದು ಹಾದಿಯನ್ನು ಹಿಡಿದು ಹೊರಟಾಗ (ಅದು ಉದಾರೀಕರಣವೇ ಇರಲಿ), ಆ ದಾರಿಯಲ್ಲಿ ಪ್ರಾಮಾಣಿಕವಾಗಿ ಸಾಗುವುದು ಮುಖ್ಯವಾಗುತ್ತದೆ. ಇಲ್ಲಿ ಸಣ್ಣ ಕ್ಯಾಂಟೀನು ನಡೆಸುವವರೂ ಕಡಿಮೆ ಕ್ರಯಕ್ಕೆ ಕೊಳೆತ ಸೆಕೆಂಡ್ ಕ್ಲಾಸ್ ಈರುಳ್ಳಿ-ಬಟಾಟೆ ಎಲ್ಲಿ ಸಿಕ್ಕೀತು ಎಂದು ಹುಡುಕಿಕೊಂಡು ಹೋಗಿ “ಲಾಭ”ದ ಯೋಚನೆ ಮಾಡುವ ದೇಶ ನಮ್ಮದು. ಹಾಗಾಗಿ “ಕೊಟ್ಟ ದುಡ್ಡಿಗೆ ಮೌಲ್ಯ” ಒದಗಿಸುವ ಪ್ರಾಮಾಣಿಕತೆ ನಮ್ಮಲ್ಲಿಲ್ಲ. ಇದು ಉದಾರೀಕರಣದ ವೈಫಲ್ಯಕ್ಕೆ ಬಲುದೊಡ್ಡ ಕಾರಣ. ಉದಾರೀಕರಣದ ತುದಿ ಮುಟ್ಟಿರುವ ಕೊರಿಯಾದಂತಹ ದೇಶಗಳಲ್ಲಿ ಸಾಗುವ ಹಾದಿಯ ಪ್ರಾಮಾಣಿಕತೆಯೇ ಯಶಸ್ಸಿಗೂ ಕಾರಣವಾಯಿತು ಎಂಬುದನ್ನು ನಾವು ಗಮನಿಸಲಿಲ್ಲ. ರಾಜಕಾರಣಿಗಳೂ ಅಷ್ಟೇ. ಸುಧಾರಣೆಯ ಯೋಜನೆಯಲ್ಲಿ ತಮಗೆ ಅನುಕೂಲಕರವಾಗುವಷ್ಟನ್ನು ಮಾತ್ರ ಆತುಕೊಂಡು ಉಳಿದದ್ದನ್ನು ಕೈಬಿಡುತ್ತಾ ಬಂದದ್ದು (ಕ್ರೀಂ ಬಿಸ್ಕೀಟಿನ ಕ್ರೀಂ ತಿಂದು ಬಿಸ್ಕಿಟ್ ಹಾಗೇ ಬಿಟ್ಟದ್ದು), ಜನಪ್ರಿಯವಲ್ಲದ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಹಿಂಜರಿದದ್ದು ಈವತ್ತಿನ ಎಡಬಿಡಂಗಿ ಸ್ಥಿತಿಗೆ ಕಾರಣ ಎಂಬುದನ್ನು ಪುಸ್ತಕ ಪರಿಣಾಮಕಾರಿಯಾಗಿ ಬಿಚ್ಚಿಡುತ್ತದೆ.

ಮೊಂಟೆಕ್ ಅವರ ಹಳೆಯ M ಡಾಕ್ಯುಮೆಂಟ್‌ನ (ಆರ್ಥಿಕ ಸುಧಾರಣೆಗಳ ಬಗ್ಗೆ ಮೊಂಟೆಕ್ ಸಿದ್ಧಪಡಿಸಿದ ದಾಖಲೆ) ಪುಟಗಳನ್ನೇ ನಕಲು ಮಾಡಿ, “70 ವರ್ಷಗಳಲ್ಲಿ ಆಗದ್ದು 7 ವರ್ಷಗಳಲ್ಲಿ ಆಗಿದೆ” ಎಂದು ಸಾಧನೆಯ ಪತಾಕೆ ಹಾರಿಸುತ್ತಿರುವ ಹಾಲೀ NDA ಸರಕಾರ, ಬದಲಾದ ಸನ್ನಿವೇಶದಲ್ಲಿ ಸೂಕ್ತ ಸುಧಾರಣೆಗಳನ್ನು ಮಾಡಿಕೊಳ್ಳದೇ ಕುರುಡಾಗಿ ಮುನ್ನುಗ್ಗುತ್ತಿರುವುದರಿಂದ ಹೇಗೆ ಬಡವರು-ಶ್ರೀಮಂತರ ನಡುವಿನ ಅಂತರದ ಕಂದಕ ಹೆಚ್ಚಾಗುತ್ತಿದೆ, ದೇಶ ಹೇಗೆ ಮತ್ತೆ ಆತಂಕದ ದಿನಗಳತ್ತ ಸಾಗುತ್ತಿದೆ, ಈಗ ಕೊರೊನಾ ಬಳಿಕ ಮತ್ತಷ್ಟು ಜನ ಬಡತನಕ್ಕೀಡಾಗಿ, UPA1ನ ಬಡತನ ನಿವಾರಣೆಯ ಸಾಧನೆಗಳು ಹೇಗೆ ನಿರರ್ಥಕವಾಗುತ್ತಿವೆ ಎಂಬುದಕ್ಕೆಲ್ಲ ಒಳನೋಟಗಳು ಸಿಗಬಹುದಾದ ಪುಸ್ತಕ ಇದು.

ಪುಸ್ತಕದ ಕೊನೆಯ ಕೆಲವು ಪುಟಗಳು ನೋಟು ರದ್ಧತಿ, GST ಬ್ಲಂಡರ್‌ಗಳನ್ನು ಬಹಳ ಸರಳವಾಗಿ ವಿವರಿಸುತ್ತವೆ.

ಪುಸ್ತಕದಲ್ಲಿ ಗಮನ ಸೆಳೆದ ಇನ್ನು ಕೆಲವು ಅಂಶಗಳೆಂದರೆ:

೧. DBTಗೆಂದು ಶುರುವಾದ ಆಧಾರ್ ಯೋಜನೆ ಹೇಗೆ ನಿಲೇಕಣಿ ಮಹಾತ್ಮರ ಕೈಗೆ ವರ್ಗಾವಣೆಯಾಯಿತು ಮತ್ತು ಅವರು ಅಲ್ಲಿ ಹೇಗೆ ತಳಪಾಯವೇ ಇಲ್ಲದೆ ಮಹಾ ಕಟ್ಟಡ ನಿರ್ಮಿಸಿದರು ಎಂಬುದರ ಚಿತ್ರಣ.

೨. ಕಾಂಗ್ರೆಸ್ ಸರ್ಕಾರಗಳಿದ್ದಾಗ ಉದಾರೀಕರಣವನ್ನು ಖಂಡತುಂಡವಾಗಿ ವಿರೋಧಿಸುತ್ತಿದ್ದ ಬಿಜೆಪಿ, ವಾಜಪೇಯಿ, ಮೋದಿ ಅಧಿಕಾರಕ್ಕೆ ಬರುತ್ತಲೇ ಹೇಗೆ ಅದನ್ನು “ತಮ್ಮದೇ” ಎಂದು ಮಾರ್ಕೆಟಿಂಗಿಗೆ ತೊಡಗಿದರು ಎಂಬುದರ ಚಿತ್ರಣ.

೩. ಅಣ್ಣಾ ಹಜಾರೆ ಅವರ “ಇಂಡಿಯಾ ಅಗೈನ್ಸ್ಟ್ ಕರಪ್ಷನ್ ಆಂದೋಲನ ಹೇಗೆ ಡಾ| ಸಿಂಗ್ ಅವರನ್ನು ವಿನಾ ಕಾರಣ 2G, ಕಲ್ಲಿದ್ದಲು ಹಗರಣಗಳಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿತು ಎಂಬುದರ ವಿವರಣೆ.

ಇಂತಹ ನೂರಾರು ಸಂಗತಿಗಳು ಇಡುಕಿರಿದಿರುವ ಪುಸ್ತಕ ಇದು. ಲಾಕ್ ಡೌನ್ ಮುಗಿದ ಬಳಿಕ ಬೇರೆ ಕೆಲಸಗಳ ನಡುವೆ ಬಹುತೇಕ ಒಂದು ತಿಂಗಳು ಓದಿಸಿದರೂ, ನಾನು “ಎಕನಾಮಿಕ್ಸನ್ನೂ” ಎಂಜಾಯ್ ಮಾಡಿದೆ. ಅವಕಾಶ ಸಿಕ್ಕರೆ ಖಂಡಿತಕ್ಕೂ ಕನ್ನಡದಲ್ಲಿ ಬರಬೇಕಿರುವ ಪುಸ್ತಕಗಳಲ್ಲಿ ಇದೊಂದು. ಯಾರಾದರೂ ಪ್ರಕಾಶಕರು ಮನಸ್ಸು ಮಾಡಿ. ಹೇಗಾದರೂ ಸಮಯ ಹೊಂದಿಸಿ, ಭಾಷಾಂತರ ನಾನೇ ಮಾಡಿಕೊಡಬಲ್ಲೆ.

‍ಲೇಖಕರು avadhi

September 5, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: