ಉದಯ ಇಟಗಿ ಅನುವಾದಿಸಿದ ಪ್ಯಾಲೆಸ್ತೈನ್ ಕವಿತೆ ಗೊಂಚಲು

ಕನ್ನಡಕ್ಕೆ: ಉದಯ ಇಟಗಿ

1. ಪ್ಯಾಲೆಸ್ತೈನಾ, ಓ ಪ್ಯಾಲೆಸ್ತೈನಾ!

(ಮೂಲ : ಮೊನಿಬಾ (ಅರೇಬಿ)

ಅದೊಂದು ನಾಡು
ಅದರ ಹೆಸರು ಪ್ಯಾಲೇಸ್ತೈನಾ
ಅದು ಸುಂದರ, ಪ್ರಶಾಂತ,
ಹಾಗೂ ಜೀವಂತವಿದ್ದ ನಾಡಾಗಿತ್ತು
ಎಲ್ಲ ಕಡೆ ಬದುಕಿದಂತೆಯೇ
ಅಲ್ಲಿ ಕೂಡಾ ಜನರು ಬದುಕುತ್ತಿದ್ದರು.

ಹೀಗಿರುವಾಗ ಅಲ್ಲಿಗೆ ಮತ್ತೊಂದು ನಾಡು ಬಂತು
ಅದರ ಹೆಸರು ಇಸ್ರೇಲ್
ಅದು ಮೂಲತಃ ಪ್ಯಾಲೆಸ್ತೈನಾವೇ ಆಗಿತ್ತು
ಆದರೆ ಅದು ನಿರ್ದಾಕ್ಷಣ್ಯವಾಗಿ ಆ ನಾಡನ್ನು ಆಕ್ರಮಿಸಿತು
ಮುತ್ತಿಗೆ ಹಾಕಿತು
ಮತ್ತದರ ಬಹಳಷ್ಟು ಭಾಗವನ್ನು ಕಸಿದುಕೊಂಡಿತು.

ಹಾಗಾದರೆ ಈಗ ಪ್ಯಾಲೆಸ್ತೈನಾ ಹೇಗಿದೆ?
ಅಥವಾ ಅದರ ಯಾವ ಭಾಗವನ್ನುಹಾಳುಮಾಡದೆ ಬಿಡಲಾಗಿದೆ?
ಎಲ್ಲಿ ಸುಂದರವಾದ ಮನೆಗಳಿದ್ದವೋ
ಅಲ್ಲೀಗ ಬರೀ ರಬ್ಬಲ್ಗಗಳಿವೆ
ಮುರಿದ, ಸುಟ್ಟ ಬಾಗಿಲಗಳಿವೆ
ಅಲ್ಲಿ ಇಲ್ಲಿ ಬೀಸಾಡಿದ
ಪಾತ್ರೆ ಪಗಡಗಳಿವೆ
ಮನೆಗಳ ಜಾಗವನ್ನು ಬಗೆದು ವಿಸ್ತರಿಸಲಾಗಿದೆ

ಜಗತ್ತನ್ನು ಬೆರಗುಗೊಳಿಸುವಂಥ
ನಗುಗಳು ಅಲ್ಲಿದ್ದವು
ಆದರೆ ಅಲ್ಲೀಗ ಮನುಷ್ಯರ ಹೃದಯ ಬಿರಿಯುವಂಥ
ಕಣ್ಣೀರಿನ ಕಥೆಗಳಿವೆ
ಸುಟ್ಟ ಗುರುತುಗಳಿವೆ
ರಕ್ತದ ಕಲೆಗಳಿವೆ

ಇದು ರಾಜ್ಯಗಳ ನಡುವೆ
ನಡೆಯುತ್ತಿರುವ ಯುದವಲ್ಲ
ಅಥವಾ ಜನಾಂಗಗಳ ನಡುವಿನ ಅಥವಾ ಅದೃಷ್ಟಗಳ
ನಡುವಿನ ಯುದ್ಧವೂ ಅಲ್ಲ
ಇಲ್ಲ, ಇದೊಂದು ದೊಡ್ಡ ಯುದ್ಧ,
ನಂಬಿಕೆಗಾಗಿ ನಡೆಯುತ್ತಿರುವ ಯುದ್ಧ
ಅದು ಈ ಕಾರಣಕ್ಕಾಗಿಯೇ ಶುರುವಾಯಿತು
ಆದರೆ, ಈಗ ಅದು
ಮಾನವ ಮತ್ತು ಮಾನವೇತರರ
ನಡುವೆ ನಡೆಯುವ ಯುದ್ಧವಾಗಿ ಮಾರ್ಪಾಡಾಗಿದೆ.

ದಯವಿಟ್ಟು ಹೇಳಿ
ಮುಗ್ಧ ಜನರಿಗೆ ಇದು ಸಾಧುವೇ?
ಸ್ವಂತಿಕೆಯ ಸಲುವಾಗಿ
ಹೋರಾಡುತ್ತಿರುವದು ಸರಿಯಲ್ಲವೇ?
ನೀವು ಅವರ ದಬ್ಬಾಳಿಕೆಯನ್ನು
ನೋಡಿ ಸುಮ್ಮನಿರುವದು ಮಾನವೀಯತೆ ಎನ್ನುವದಾದರೆ
ನಾವು ನಾಲ್ಕು ವರ್ಷ ವಯಸ್ಸಿನ ಮಕ್ಕಳ ಕೈಗೆ ಬಂದೂಕುಗಳನ್ನು
ಕೊಡುವದು ಸಹ ಮಾನವೀಯತೆ

ಇಸ್ರೇಲ್,
ನಿನಗಿದೋ ಒಂದು ನಮಸ್ಕಾರ
ಹುಸಿ ನಮಸ್ಕಾರ!
ನಿಮ್ಮ ಹುಸಿ ಮಾನವೀಯತೆಗಾಗಿ
ಮತ್ತು ಹುಸಿ ಉಪಕಾರಕ್ಕಾಗಿ
ನಿಮ್ಮ ಜನರ ಹರ್ಷೋದ್ಗಾರದೊಂದಿಗೆ
ನಿಮ್ಮ ಬಾಂಬುಗಳು
ಇಲ್ಲಿ ಬಂದು ಬೀಳುವಾಗ
ಮತ್ತು ನಿಮ್ಮ ಬಂದೂಕಿನ ಮೂತಿಗಳು
ನಾಲ್ಕು ವರ್ಷದ ಭಯೋತ್ಪಾದಕರ
ಕಡೆ ನೆಟ್ಟಾಗ
ಖಂಡಿತವಾಗಿಯೂ ಅವರು
ತಿರುಗಿಬೀಳುತ್ತಾರೆ

ಪ್ಯಾಲೆಸ್ತೈನಾ, ನಾನು ನಿನ್ನೊಂದಿಗಿರುತ್ತೇನೆ
ಪ್ರಾಮಾಣಿಕವಾಗಿ ನಿನ್ನ ಜೊತೆಗಿರುತ್ತೇನೆ
ನಿನ್ನ ಮಕ್ಕಳು, ನಿನ್ನ ಜನರು, ನಿನ್ನ ಭೂಮಿ ಮತ್ತು ನಿನ್ನ ಶಾಂತಿ ಎಲ್ಲವೂ ನನ್ನವೇ
ಬಂದು ಬೀಳುವ ಅವರ ಬಾಂಬುಗಳು,
ನನ್ನ ಪ್ರಾರ್ಥನೆಗಳನ್ನುಹಾಳುಗೆಡುವತ್ತವೆ
ಅವರು ಹಾರಿಸುವ ಗುಂಡುಗಳು
ನನ್ನ ಕಂಗಳಲ್ಲಿ ನೀರನ್ನು ತರಿಸುತ್ತದೆ
ಆದರೆ ನಿಮಗಿದು ತಿಳಿದಿರಲಿ
ನಾವು ಪ್ಯಾಲೆಸ್ತೀನಿಯರು, ನಾವೆಲ್ಲರೂ ಒಂದು

ಆದ್ದರಿಂದ ಅವರು ನಿನ್ನತ್ತ ಗುಂಡು ಹಾರಿಸಿದಾಗ
ನನಗೆ ರಕ್ತಸ್ರಾವದ ಅನುಭವವಾಗುತ್ತದೆ
ಹಾಗೂ ಅವರು ನಿನ್ನ ಮೇಲೆ ಬಾಂಬುಗಳನ್ನು ಹಾಕಿದಾಗ, ನಾನು ನೋವಿನಿಂದ ಬಳಲುತ್ತೇನೆ
ಅವರು ನಿನ್ನನ್ನು ನೋಯಿಸಿದಾಗ,
ನಾನೂ ಸಹ ನೋವು ಅನುಭವಿಸುತ್ತೇನೆ
ಮತ್ತು ನೀವು ಸಹಾಯಕ್ಕಾಗಿ ಅತ್ತಾಗ,
ನಾನು ನಿನಗೋಸ್ಕರ ಪ್ರಾರ್ಥಿಸುತ್ತೇನೆ
ನಮ್ಮದು ಒಂದೇ ರಕ್ತ, ಒಂದೇ ದೇಹ
ನಾವು ಇವತ್ತಲ್ಲ ನಾಳೆ ಮೇಲೇರುತ್ತೇವೆ

ಅಲ್ಲಿಯವರೆಗೆ ನಾವು ಪ್ರಾರ್ಥಿಸುತ್ತೇವೆ,
ಪ್ರಾರ್ಥಿಸುತ್ತೇವೆ ಮತ್ತು ಪ್ರಯತ್ನಿಸುತ್ತೇವೆ
ಪ್ರಿಯ ಪ್ಯಾಲೆಸ್ಟೈನ್, ದೃಢ ವಾಗಿರು, ಭದ್ರವಾಗಿರು
ಊಹಿಸಲಾಗದ ರೀತಿಯಲ್ಲಿ ಸಹಾಯವು ಬರಲಿದೆ
ದುರ್ಬಲಗೊಳ್ಲಬೇಡ ಮತ್ತು ದುಃಖಿಸಬೇಡ
ನಿನಗೆ ನಿನ್ನಲ್ಲಿ ನಂಬಿಕೆಯಿದ್ದರೆ
ನೀನು ಅವರನ್ನುಖಂಡಿತ ಜಯಿಸುವಿರಿ
ಅಲ್ಲಾಹನು ವಾಗ್ದಾನ ಮಾಡಿದ್ದಾನೆ
ಮತ್ತವನು ಅದನ್ನು ನಡೆಸಿಕೊಡುತ್ತಾನೆ.

2. ಒಮ್ಮೆ ಯೋಚಿಸಿ…

(ಮೂಲ: ಮೊಹಮ್ದ್ತ ಡರ್ವಿಷ್)

ನೀವು ಬೆಳಗಿನ ತಿಂಡಿಯನ್ನು ತಯಾರಿಸುವಾಗ ಬೇರೆಯವರ ಬಗ್ಗೆಯೂ ಒಮ್ಮೆ ಯೋಚಿಸಿ
(ಪಾರಿವಾಳಗಳಿಗೂ ತಯಾರಿಸುವದನ್ನು ಮರೆಯಬೇಡಿ)
ನೀವು ಯುದ್ದವನ್ನು ನಡೆಸುವಾಗ ಬೇರೆಯವರ ಬಗ್ಗೆಯೂ ಬೇರೆಯವರ ಬಗ್ಗೆಯೂ ಒಮ್ಮೆಯೋಚಿಸಿ
(ಶಾಂತಿ ಮಂತ್ರ ಜಪಿಸುತ್ತಿರುವವರನ್ನು ಮರೆಯದಿರಿ)
ನೀವು ನೀರಿನ ಬಿಲ್ಲನ್ನು ಪಾವತಿಸುವಾಗ ಬೇರೆಯವರ ಬಗ್ಗೆಯೂ ಒಮ್ಮೆಯೋಚಿಸಿ
(ಬರೀ ಮೋಡಗಳಿಂದಲೇ ಪೋಷಿಸಲ್ಪಡುತ್ತಿರುವವರ ಬಗ್ಗೆ)
ನೀವು ನಿಮ್ಮ ಮನೆಗೆ ಮರಳುವಾಗ ಬೇರೆಯವರ ಬಗ್ಗೆಯೂ ಒಮ್ಮೆಯೋಚಿಸಿ
(ಅದರಲ್ಲೂ ಕ್ಯಾಂಪಿನಲ್ಲಿರುವ ಜನರ ಬಗ್ಗೆ)
ನೀವು ಮಲಗಿ ನಕ್ಷತ್ರಗಳನ್ನು ಎಣಿಸುವಾಗ ಬೇರೆಯವರ ಬಗ್ಗೆಯೂ ಒಮ್ಮೆಯೋಚಿಸಿ
(ನಿದ್ರಿಸಲು ಸಹ ಜಾಗವಿರದವರ ಬಗ್ಗೆ)
ನೀವು ನಿಮ್ಮ ಸ್ವಾತಂತ್ರ್ಯದ ಕುರಿತು ರೂಪಕಗಳಲ್ಲಿ ಮಾತನಾಡುವಾಗ ಬೇರೆಯವರ ಬಗ್ಗೆಯೂ ಒಮ್ಮೆಯೋಚಿಸಿ
(ಅದರಲ್ಲೂ ಮಾತನಾಡುವ ಅಧಿಕಾರದವನ್ನು ಕಳೆದುಕೊಂಡವರ ಬಗ್ಗೆ)
ನೀವು ದೂರದಲ್ಲಿರುವವರ ಬಗ್ಗೆ ಯೋಚಿಸುವ ಮುನ್ನ ನಮ್ಮ ಬಗ್ಗೆಯೂ ಒಮ್ಮೆ ಯೋಚಿಸಿ
(ಕತ್ತಲಲ್ಲಿರುವ ಜನಕ್ಕೆ ಬೆಳಕಾಗುತ್ತೇನೆ ಎಂದು ನಿರ್ಧರಿಸಿ)

3. ಗುರುತು ಪತ್ರ

(ಮೂಲ ಅರೇಬಿ: ಮೊಹಮ್ದ ಡರ್ವಿಷ್)

ಬರೆದುಕೊಳ್ಳಿ!
ನಾನೊಬ್ಬ ಅರೇಬಿ
ನನ್ನ ಗುರುತು ಪತ್ರದ ಸಂಖ್ಯೆ ಐವತ್ತು ಸಾವಿರ
ನನಗೆ ಎಂಟು ಜನ ಮಕ್ಕಳು
ಒಂಬತ್ತನೆಯದು ಈ ಬೇಸಿಗೆಯ ನಂತರ ಬರುತ್ತದೆ.
ನಿಮಗೆ ಕೋಪವೇ?

ಬರೆದುಕೊಳ್ಳಿ!
ನಾನೊಬ್ಬ ಅರೇಬಿ
ನಾನು ನನ್ನ ಗೆಳೆಯರೊಟ್ಟಿಗೆ
ಕಲ್ಲುಗಣಿಯಲ್ಲಿ ಕೆಲಸ ಮಾಡುವವ
ನನಗೆ ಎಂಟು ಜನ ಮಕ್ಕಳು
ಅವರೆಲ್ಲರ ಊಟ, ವಸತಿ,
ಓದು, ಬಟ್ಟೆಬರೆಯೆಲ್ಲವನ್ನೂ
ಈ ಕಲ್ಲುಗಣಿ ದುಡಿಮೆಯಲ್ಲಿಯೇ
ತೂಗಿಸುತ್ತೇನೆ.
ನಿಮಗೆ ಕೋಪವೇ?
ನಾನು ನಿಮ್ಮ ಮನೆಯ
ಬಾಗಿಲಿಗೆ ಬಂದು ಭಿಕ್ಷೆ ಬೇಡುವದಿಲ್ಲ.
ಅಥವಾ ನಿಮ್ಮ ಕಾಲಿಗೆ ಬಿದ್ದು
ಕರುಣೆ ತೋರಿರೆಂದು ಬೇಡಿ
ಸಣ್ಣವನಾಗುವದಿಲ್ಲ.
ಅದಕ್ಕೇ ನಿಮಗೆ ಕೋಪವೇ?

ಬರೆದುಕೊಳ್ಳಿ!
ನಾನೊಬ್ಬ ಅರೇಬಿ
ಬಿರುದು ಬಾವಲಿಗಳಿಲ್ಲದ
ಸಾಧಾರಣ ಮನುಷ್ಯ.
ರೊಚ್ಚಿಗೆದ್ದ ಜನರ ನಾಡಿನಲ್ಲಿ
ತಾಳ್ಮೆಯಿಂದ ಕಾಯುತ್ತಿದ್ದೇನೆ.
ನನ್ನ ಹುಟ್ಟಿಗಿಂತ ಮೊದಲೇ
ನಾನಿಲ್ಲಿ ಬೇರು ಬಿಟ್ಟಿದ್ದೇನೆ
ಅಷ್ಟೇ ಏಕೆ ಯುಗಗಳು ಆರಂಭವಾಗುವದಕ್ಕೆ ಮುಂಚೆ,
ಹುಲ್ಲು, ಪೈನ್ ಮತ್ತು ಆಲಿವ್ ವೃಕ್ಷಗಳು ಹುಟ್ಟುವ ಮುಂಚೆಯೇ
ನಾನಿಲ್ಲಿ ಗಟ್ಟಿಯಾಗಿ ನೆಲೆಯೂರಿದ್ದೇನೆ.

ನನ್ನ ಅಪ್ಪ ಸಾಧಾರಣ
ರೈತಾಪಿ ಕುಟುಂಬದಿಂದ ಬಂದವನು
ನನ್ನ ಅಜ್ಜನೂ ಸಹ ರೈತನೇ!
ಅವ ಒಳ್ಳೆಯ ಮನೆತನದಲ್ಲಿ ಹುಟ್ಟಲಿಲ್ಲ
ಒಳ್ಳೆಯ ಶಿಕ್ಷಣ ಪಡೆಯಲಿಲ್ಲ.
ಆದರೆ ನನಗೆ ಓದನ್ನು ಹೇಳಿ ಕೊಡುವ ಮೊದಲು
ಸೂರ್ಯನಿಗೆ ಮುಖಮಾಡಿ ನಿಲ್ಲುವದನ್ನು ಹೇಳಿಕೊಟ್ಟವನು.
ನನ್ನ ಮನೆ ಹುಲ್ಲು ಕಡ್ಡಿಗಳಿಂದ ಮಾಡಿದ
ಕಾವಲುಗಾರನ ಗುಡಿಸಲಿನಂತಿದೆ.
ಹೇಳಿ, ನಿಮಗೆ ನನ್ನ ಸ್ಥಾನಮಾನದ ಬಗ್ಗೆ ತೃಪ್ತಿಯೇ?

ಬರೆದುಕೊಳ್ಳಿ!
ನಾನೊಬ್ಬ ಅರೇಬಿ
ನೀವು ನನ್ನ ಪೂರ್ವಿಕರ ಹಣ್ಣಿನ ತೋಟದಲ್ಲಿ
ನಾನು ನನ್ನ ಮಕ್ಕಳೊಟ್ಟಿಗೆ
ಉಳುಮೆ ಮಾಡುತ್ತಿದ್ದ ಭೂಮಿಯನ್ನು
ಕಿತ್ತುಕೊಂಡಿರಿ
ನೀವು ನಮಗೆ ಈ ಕಲ್ಲುಬಂಡೆಗಳನ್ನು ಬಿಟ್ಟು
ಬೇರೇನೇನನ್ನೂ ಬಿಡಲಿಲ್ಲ.
ಆದರೂ ನಿಮಗೆ ಕೋಪವೇ!?

ಆದ್ದರಿಂದ
ಬರೆದುಕೊಳ್ಳಿ
ಮೊದಲ ಪುಟದ ಮೊದಲ ಸಾಲಿನಲ್ಲಿ.
ನಾನು ಜನರನ್ನು ದ್ವೇಷಿಸುವದಿಲ್ಲ
ಅಥವಾ ಅವರ ಮೇಲೆ ಆಕ್ರಮಣ ಮಾಡುವದಿಲ್ಲ.
ಆದರೆ ನಾನು ಹಸಿದರೆ,
ಅಥವಾ ರೊಚ್ಚಿಗೆದ್ದರೆ
ದುರಾಕ್ರಮಣಕಾರರ ಮಾಂಸವೇ
ನನ್ನ ಆಹಾರವಾಗುತ್ತದೆ.
ಎಚ್ಚರ… ಎಚ್ಚರ…
ಎಚ್ಚರವಿರಲಿ
ನನ್ನ ಹಸಿವಿನ ಬಗ್ಗೆ
ಹಾಗೂ ನನ್ನ ರೊಚ್ಚಿನ ಬಗ್ಗೆ!

‍ಲೇಖಕರು Avadhi

May 18, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: