ಉತ್ತಮ ಐತಿಹಾಸಿಕ ಕಾದಂಬರಿ

ಉದಯಕುಮಾರ್ ಹಬ್ಬು

**

ಸಾಹಿತಿ ಅಂಬ್ರಯ್ಯ ಮಠ ಅವರ ಕೃತಿ ‘ಬಿದನೂರು ಅರಸು ಕೆಳದಿ ವೀರಭದ್ರನಾಯಕ’.

ಈ ಕೃತಿಯ ಕುರಿತು ಸಾಹಿತಿ ಉದಯಕುಮಾರ್ ಹಬ್ಬು ಅವರು ಬರೆದ ಬರಹ ಇಲ್ಲಿದೆ.

**

ಅಂಬ್ರಯ್ಯಮಠ ಇವರು ಬಿದನೂರ‌ ನಿವಾಸಿ. ಅವರು ಬಿದನೂರು ಅರಸು ಕೆಳದಿ ವೀರಭದ್ರನಾಯಕ, ಎಂಬ ಅತ್ಯದ್ಭುತ ಐತಿಹಾಸಿಕ ಕಾದಂಬರಿಯನ್ನು ಬರೆದಿದ್ದಾರೆ. ಕೆಳದಿ ರಾಜ್ಯದ ಸಮಗ್ರ ಇತಿಹಾಸವನ್ನು ಐತಿಹಾಸಿಕ ಸಂಕಥನಗಳಿಗೆ ನಿಷ್ಠರಾಗಿ ಕಾದಂಬರಿಕಾರರು ಮಹಾಕಾವ್ಯದಂತಹ ಅನನ್ಯ ಕೃತಿಯನ್ನು ರಚಿಸಿದ್ದಾರೆ. ಕೆಳದಿ ಅರಸರು ವಿಜಯನಗರ ಸಾಮ್ರಾಜ್ಯದ ಸಾಮಂತ ಅರಸರಾಗಿ ಅವರಿಗೆ ಸರಿಸಾಟಿಯಾಗಿ ಆಳಿದವರು. ಕೆಳದಿ ರಾಜ್ಯವು ಅನೇಕ ಏಳು ಬೀಳುಗಳನ್ನು ಕಂಡಿತು. ಬಹುಶಃ ಪ್ರತಿ ಒಬ್ಬ ಕೆಳದಿಯ ಅರಸನು ಅನೇಕ ಯುದ್ಧಗಳನ್ನು ಮಾಡಿಯೆ ವೈಭವದ ಕೆಳದಿಯನ್ನು ಕಟ್ಟಿದರು. ಹಲವಾರು ಸಂಚು ಒಳಸಂಚುಗಳಿಗೆ ಒಳಗಾಗಿ ಸೋತು ಗೆದ್ದವರು. ಈ ಕೆಳದಿ ಅರಸರಲ್ಲಿ ಬಿದನೂರಿನ ಅರಸು ಕೆಳದಿ ವೀರಭದ್ರನಾಯಕ ಉಳಿದೆಲ್ಲ ಅರಸರಿಗಿಂತ ಹೆಚ್ಚು ವಂಚನೆ, ಸ್ವಜನ ದ್ರೋಹಕ್ಕೊಳಗಾದವನು. ಅನೇಕ ಯುದ್ಧಗಳನ್ನು ಮಾಡಿದವನು.

ಅರಸೊತ್ತಿಗೆ ಎಂಬುದು ಮುಳ್ಳಿನ ಹಾಸಿಗೆ. ಅರಸು ಸದಾ ಎಚ್ಚರದಿಂದಿರಬೇಕು. ಪ್ರಜಾಪಾಲನೆ, ಶಿಸ್ತುಬದ್ಧ ಅಡಳಿತ, ಮಂತ್ರಿ ಮಾಗಧರ ವಿಶ್ವಾಸ, ವೈರಿಗಳೊಡನೆ ಯುದ್ಧ ಮತ್ತು ಒಪ್ಪಂದ ಇವಕ್ಕೆಲ್ಲ ಬೇಕಾಗುವುದು ಆಡಳಿತಾತ್ಮಕ ಕೌಶಲ್ಯ ಇವೆಲ್ಲವನ್ನೂ, ಶಸ್ತ್ರ ಅಸ್ತ್ರ ವಿದ್ಯೆಯನ್ನು ಅಜ್ಜ ವೆಂಕಟಪ್ಪ ನಾಯಕರಿಂದ ಪಡೆದ ವೀರಭದ್ರನಾಯಕನ ತರಬೇತಿಯು, ರಾಜ್ಯಾಡಳಿತದ ಎಲ್ಲ ಜ್ಞಾನ, ಪಾಂಡಿತ್ಯ ಚಾಚಕ್ಯತೆ, ರಾಜಕೀಯದ ಎಲ್ಲ ಒಳಸುಳಿವುಗಳ ಪರಿಚಯ, ತಂತ್ರಗಾರಿಕೆ, ಮುಚ್ಚುಮರೆಯಲ್ಲಿ ನಡೆಯಬಹುದಾದ ಸಕಲ ಸಂಚುಗಳು, ಸ್ವ ಜನರೇ ನಡೆಸಬಹುದಾದ ಪಿತೂರಿ, ಹೊರಗಿನ ವೈರಿಗಳ ಕರಾಮತ್ತುಗಳ ಪರಿಚಯ, ಕುದುರೆ ಸವಾರಿ, ಕತ್ತಿ ವರಸೆ, ಗರಡಿ ಮನೆಯ ಪಟ್ಟುಗಳನ್ನು ಒಳಗೊಂಡಿದ್ದವು‌. ರಾಜನಾಗುವ ಎಲ್ಲ ಅರ್ಹತೆ ಇದ್ದ ವೀರಭದ್ರನಾಯಕ ಅನೇಕ ಯುದ್ಧಗಳನ್ನು ಎದುರಿಸಬೇಕಾಗಿ ಬರುತ್ತದೆ‌. ಸಿಂಹಾಸನ ಏರಿದ ಮೇಲೆ ತೀರ್ಥಯಾತ್ರೆಗೆಂದು ಕೊಲ್ಲೂರಿಗೆ ಹೋದಾಗ ಅರಸನ ಅನುಪಸ್ಥಿತಿಯಲ್ಲಿ ಅವನ ಸಂಬಂಧಿಕನೊಬ್ಬ ಸಿಂಹಾಸನವನ್ನು ಅಪಹರಿಸಿ ತಾನೇ ರಾಜನಾಗುತ್ತಾನೆ. ಕೊಲ್ಲೂರಿನಿಂದ ಏಕಾಏಕಿ ಹೊರಟು ಐಬು ರಾಜನನ್ನು ಸಂಹರಿಸಲು ಹೊರಟಾಗ ಆ ನಕಲಿ ಅರಸನೆ ಮೃತ್ಯುವಶನಾಗುತ್ತಾನೆ‌.

ಹಲವಾರು ಪಾಳೆಯಗಾರರು ರಾಜ್ಯವನ್ನು ಮುತ್ತುತ್ತಾರೆ‌. ಅವರನ್ನು ಸದೆ ಬಡಿಯುತ್ತಾನೆ‌. ಈ ನಡುವೆ ಪರಂಗಿಯವರ ಕಾಟ. ಪೋರ್ಚುಗೀಜರನ್ನು ಎದುರು ಹಾಕಿಕೊಂಡ. ಪಾಳೆಯಗಾರರು ಬಿಜಾಪುರದ ಸುಲ್ತಾನರಲ್ಲಿಗೆ ದೂರು ಒಯ್ದರು. ಅವರು ಇಕ್ಕೇರಿಯನ್ನು ಧ್ವಂಸಗೊಳಿಸುತ್ತಾರೆ. ಆ ನಂತರ ಬಿದನೂರಿಗೆ ರಾಜಧಾನಿಯನ್ನು ಬದಲಾಯಿಸುತ್ತಾನೆ‌. ಅಲ್ಲಿಯೂ ಅನೇಕ ಯುದ್ಧಗಳನ್ನು ಮಾಡಬೇಕಾಗಿ ಬರುತ್ತದೆ‌. ಈ ಅರಸನಿಗೆ ಅವನ ಚಿಕ್ಕಪ್ಪ ಶಿವಪ್ಪ ನಾಯಕ ಎಲ್ಲ ಬಗೆಯ ಸಹಕಾರ ನೀಡುತ್ತಾನೆ. ಪ್ರೀತಿಯ ಮಡದಿ ಮಕ್ಕಳಿಲ್ಲದೆ ಸಾಯುತ್ತಾಳೆ‌. ಅಂತಿಮವಾಗಿ ಸಿಂಹಾಸನವನ್ನು ತೊರೆದು ಚಿಕ್ಕಪ್ಪ ಶಿವಪ್ಪ ನಾಯಕನಿಗೆ ಪಟ್ಟ ಕಟ್ಟಿ ಎರಡನೆಯ ಹೆಂಡತಿ ಜೊತೆಯಲ್ಲಿ ಕಂಡ್ಲೂರಿನ ಈಶ್ವರನ ಸನ್ನಿಧಾನದಲ್ಲಿ ವಾಸವಾಗಿರಲು ವೀರಭದ್ರನ ಗುರುಗಳ ಆದೇಶದಂತೆ ಸಂತರಂತೆ ಕೊನೆಯ ದಿನಗಳನ್ನು ಕಳೆಯುತ್ತಾರೆ‌. ಇದು ಅಂದಿನ ಕೆಳದಿ‌ ವೀರಭದ್ರನಾಯಕ ತನ್ನ ಅಡಳಿದಲ್ಲಿ ಅನೇಕ ಜನೋಪಕಾರಿ ಕೆಲಸಗಳನ್ನು ಮಾಡಿ ಜನಾರುರಾಗಿಯಾಗಿದ್ದು ಅನೇಕ ದೇವಸ್ಥಾನಗಳಿಗೆ, ಮಸೀದಿಗೆ ಧನ ಸಹಾಯ, ಭೂಮಿ ದಾನ, ಅಗ್ರಹಾರಗಳ ನಿರ್ಮಾಣ, ಜೈನ‌ ಬಸದಿಗಳಿಗೆ ಉಂಬಳಿ ಕೆರೆಗಳನ್ನು ಕಟ್ಟಿಸಿ, ಉತ್ತಮ ರಸ್ತೆಗಳನ್ನು ನಿರ್ಮಿಸಿ, ಕೃಷಿಗೆ ಪ್ರೋತ್ಸಾಹ ನೀಡಿದ್ದಲ್ಲದೆ ಕವಿಗಳಿಗೆ ಕಲಾವಿದರಿಗೆ ಆಶ್ರಯ ಕೊಡುತ್ತಾನೆ. ಶೃಂಗೇರಿ ಮಠಕ್ಕೆ ರಕ್ಷಣೆ ನೀಡಿದ್ದು, ಅನೇಕ ಕಾವ್ಯಗಳನ್ನು ರಚಿಸಿದ್ದು ಇವೆಲ್ಲ ವೀರಭದ್ರನಾಯಕನ ಸಾಧನೆಗಳು.

ವೀರಭದ್ರ ನಾಯಕನ ಉದಾತ್ತ ಚರಿತ್ರೆಯನ್ನು ಕಾದಂಬರಿಕಾರರು ಕಟ್ಟಿಕೊಡುತ್ತಾರೆ‌. ಅನೇಕ ಸನಾತನ ಮೌಲ್ಯಗಳನ್ನು ಗವಿಮಠದ ಅಯ್ಯಪ್ಪ ಸ್ವಾಮಿ ಮತ್ತು ವೀರಭದ್ರನಾಯಕ ಇವರ ನಡುವಣ ಸಂಭಾಷಣೆಯಲ್ಲಿ ಪರಿಣಾಮಕಾರಿಯಾಗಿ ಅನಾವರಣಗೊಂಡಿದೆ. ಅಷ್ಟಲ್ಲದೆ ವೀರ ಶೈವ ಸಿದ್ಧಾಂತಗಳ ಸ್ಥೂಲ ಪರಿಚಯವೂ ಈ ಸಂಭಾಷಣೆಯಲ್ಲಿ ಅಡಕವಾಗಿದೆ‌. ವೆಂಕಟಪ್ಪ ನಾಯಕರು ಮೊಮ್ಮಗ ವೀರಭದ್ರನಿಗೆ ರಾಜಕೀಯ ಪಾಠ ಮಾಡುವಾಗ ಹೇಳಿದ ವಿಷಯಗಳು, ಬಾಣಭಟ್ಟನ ಕಾದಂಬರಿಯಲ್ಲಿ ಬರುವ ವಿಷಯಗಳಾಗಿದ್ದರೂ ಕಾದಂಬರಿಕಾರ ಅದನ್ನು ಕಾದಂಬರಿಯ ಅವಿಭಾಜ್ಯ ಅಂಶವೆನ್ನುವಂತೆ ಉಪಯೋಗಿಸಿದ್ದಾರೆ‌. ಕುಮಾರ ವ್ಯಾಸನ ಭಾರತದಲ್ಲಿ ಹೇಳಿದಂತೆ ಅರಸುಗಳಿಗಿದು ವೀರ, ವೇದಾಂತಿಗಳಿಗೆ ಪರಮ ವೇದದ ಸಾರ, ಧಾರ್ಮಿಕರಿಗೆ ಧರ್ಮ ಮಾರ್ಗ ಹೇಳುವ ಮಹಾಕಾವ್ಯದಂತೆ ನವರಸಗಳಿಂದ ಕೂಡಿದ ಕಾದಂಬರಿ ಇದು.

ಈ ಕಾದಂಬರಿಗಾಗಿ ಸುಮಾರು ೨೬ ಕೃತಿಗಳ ಅಧ್ಯಯನ ಮಾಡಿದ್ದಾರೆ. ಕಾದಂಬರಿಯ ಕಥಾ ನಿರೂಪಣೆ ಸ್ವಾರಸ್ಯಕರವಾಗಿದೆ. ವೀರಭದ್ರನಾಯಕನ ಉನ್ನತ ಪಾತ್ರವನ್ನು ಚಿತ್ರಿಸುವಾಗ ಅವನ ನಿಷ್ಠಾವಂತ ಸೇವಕರ ತ್ಯಾಗದ ಕುರಿತು, ಸೈನಿಕರ ತ್ಯಾಗದ ಕುರಿತೂ ಪ್ರಸ್ತಾಪವನ್ನು ಮಾಡಲಾಗಿದೆ. ವೀರಭದ್ರನಾಯಕ ಯುದ್ಧಗಳಿಂದ ರೋಸಿ ಹೋಗಿ ಅಧ್ಯಾತ್ಮಕ್ಕೆ ಮೊರೆ ಹೋಗುತ್ತಾನೆ‌. ಕಾದಂಬರಿ ಕಟ್ಟುವಲ್ಲಿ ಕಾದಂಬರಿಕಾರನ ಕೌಶಲ್ಯ, ಪರಿಣಿತಿ ಢಾಳಾಗಿ ಅಭಿವ್ಯಕ್ತಿಗೊಂಡಿದೆ. ಓದಲು ತುಂಬ ಸ್ವಾರಸ್ಯಕರವಾಗಿದೆ ಇಂತಹ ಉತ್ತಮ ಐತಿಹಾಸಿಕ ಕಾದಂಬರಿಯನ್ನು ಬರೆದ ಇತಿಹಾಸಜ್ಞ ಅಂಬ್ರಯ್ಯಮಠ ಇವರಿಗೆ ಅಭಿನಂದನೆಗಳು ಮತ್ತು ಕೃತಜ್ಞತೆಗಳು‌.

‍ಲೇಖಕರು Admin MM

July 23, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: