ಈ ಪಡಸಾಲೆಯಲ್ಲೊಮ್ಮೆ ಕೂತು ನೋಡಿ;

ಈ ಪಡಸಾಲೆಯಲ್ಲೊಮ್ಮೆ ಕೂತು ನೋಡಿ;

ಪರಿಮಳ ನಿಮ್ಮನ್ನು ಪರವಶಗೊಳಿಸದಿದ್ದರೆ ಕೇಳಿ!

ಪದ್ಮನಾಭ ಭಟ್ ಶೇವ್ಕಾರ

ಪರಿಮಳದ ಪಡಸಾಲೆ!

ಯಾವ ಹಿಂಜರಿಕೆಯೂ ಇಲ್ಲದೆ, ಯಾವ ಅತಿರೇಕಕ್ಕೂ ತಾಕದೆ ನಿಸ್ಸಂಶಯವಾಗಿ ಹೇಳಬಹುದು, ಇದೊಂದು ವಿಶಿಷ್ಟ ಪುಸ್ತಕ. ವಿಶಿಷ್ಟವಷ್ಟೇ ಅಲ್ಲ, ಅಷ್ಟೇ ಮಹತ್ವದ ಪುಸ್ತಕವೂ ಹೌದು!

ಹಾಗಾದರೆ ಏನಿದೆ ಇದರಲ್ಲಿ?

ಮುಖಪುಟದಲ್ಲೇನೋ ಎಸ್‌ ದಿವಾಕರ್‌ ಅವರ ಕಾವ್ಯಗಂಧಿ ಚಿತ್ರವಿದೆ. ಒಳಪುಟಗಳಲ್ಲಿ?

ಇಲ್ಲಿ, ದಿವಾಕರ್‌ ಬರೆದ ಕಥೆಗಳಿವೆ, ಕವಿತೆಗಳಿವೆ, ಪ್ರಬಂಧಗಳಿವೆ, ವ್ಯಂಗ್ಯಚಿತ್ರಗಳಿವೆ….

ಹಾಗಾದರೆ ಇದು ಎಸ್‌ ದಿವಾಕರ್ ಬರೆದ ಹೊಸ ಕೃತಿಯೇ? ಅವರ ಸಮಗ್ರ ಸಾಹಿತ್ಯವೇ? ದಿವಾಕರ್ ವಾಚಿಕೆಯೇ?

-ಖಂಡಿತ ಈ ಪುಸ್ತಕ ಅಷ್ಟೇ ಅಲ್ಲ.

ಇಲ್ಲಿ, ದಿವಾಕರ್ ಅವರ ಸುದೀರ್ಘವಾದ ಸಂದರ್ಶನವಿದೆ…

ಹಾಗಾದರೆ ಇದು ಅವರ ಬದುಕು, ಬರಹದ ಕುರಿತ ಪ್ರಬಂಧಾತ್ಮಕ ಕೃತಿಯೇ?

-ಖಂಡಿತ ಈ ಪುಸ್ತಕ ಅಷ್ಟೇ ಅಲ್ಲ.

ಇಲ್ಲಿ, ದಿವಾಕರ್‌ ಒಡನಾಟದ ಬಗ್ಗೆ ಕಥೆಗಾರ ಎಂ.ಎಸ್. ಶ್ರೀರಾಮ್‌ ಬರೆದಿರುವ ಸೊಗಸಾದ ಲೇಖನವಿದೆ…

ಹಾಗಾದರೆ ಇದು ಅಭಿನಂದನಾಗ್ರಂಥವೇ?

-ಖಂಡಿತ ಈ ಪುಸ್ತಕ ಅಷ್ಟೇ ಅಲ್ಲ.

ಇಲ್ಲಿ, ದಿವಾಕರ್ ಕಾವ್ಯದ ಬಗ್ಗೆ ರಾಜೇಂದ್ರ ಚೆನ್ನಿ, ಪ್ರಬಂಧಗಳ ಬಗ್ಗೆ ಎಂಎಸ್‌ ಆಶಾದೇವಿ , ಕಥೆಗಳ ಬಗ್ಗೆ ಕಥೆಗಾರ ಗುರುಪ್ರಸಾದ ಕಾಗಿನೆಲೆ , ಅನುವಾದಗಳ ಬಗ್ಗೆ ಸುಶೀಲಾ ಪುನೀತಾ ಮತ್ತು ಎನ್‌.ಎ.ಎಂ. ಇಸ್ಮಾಯಿಲ್‌ ಬರೆದಿರುವ ಸೂಕ್ಷ್ಮ ಒಳನೋಟಗಳ ಆಸಕ್ತಿದಾಯಕ ಲೇಖನಗಳಿವೆ. ಯಶವಂತ ಚಿತ್ತಾಲರು ದಿವಾಕರ್‌ಗೆ ಬರೆದ ಆಪ್ತವಾದ ಪತ್ರವಿದೆ.

ಹಾಗಾದರೆ ಇದು ದಿವಾಕರ್ ಸಾಹಿತ್ಯದ ವಿಶ್ಲೇಷಣೆಯ ಪುಸ್ತಕವೇ?

-ಖಂಡಿತ ಈ ಪುಸ್ತಕ ಅಷ್ಟೇ ಅಲ್ಲ.

ಓದುವುದಕ್ಕಿಂತ ಕೇಳುವುದು, ಕೇಳುವುದಕ್ಕಿಂತ ನೋಡುವುದು ಮಜವಾಗಿರುತ್ತದೆ ಎನ್ನುವವರಿಗೂ ಈ ಪುಸ್ತಕದಲ್ಲಿ ಹಲವು ಕವಲುಗಳ ಸಮೃದ್ಧವಾದ ದಾರಿಯಿದೆ.

ನಟ, ನಿರ್ದೇಶಕರ ರಮೇಶ ಅರವಿಂದ್‌ , ನಿರ್ದೇಶಕ ಯೋಗರಾಜ ಭಟ್, ನಟ ಅಚ್ಯುತ್‌ ಕುಮಾರ್, ನಟಿ, ಲೇಖಕಿ ಜಯಲಕ್ಷ್ಮೀ ಪಾಟೀಲ್, ಗಾಯಕಿ ಸ್ಪರ್ಶಾ ಆರ್‌ ಕೆ. ಯುವನಟ ನಂದಕುಮಾರ್ ಜಿ.ಕೆ., ಕತೆಗಾರ್ತಿ ಕಾವ್ಯಾ ಕಡಮೆ ಈ ಎಲ್ಲರ ಧ್ವನಿಗಳು ನಮ್ಮನ್ನು ದಿವಾಕರ್‌ ಜಗತ್ತಿನಲ್ಲಿ ಕೈ ಹಿಡಿದು ಕರೆದುಕೊಂಡು ಹೋಗಲು ಕಾದಿವೆ.

ದಿವಾಕರ್ ಪದ್ಯವಾಚನದ ಸವಿಯನ್ನು ಸವಿದವರೇ ಬಲ್ಲರು. ಅದನ್ನು ಸವಿಯಲೂ ಈ ಪುಸ್ತಕದಲ್ಲಿ ದಾರಿಯಿದೆ. ಸ್ವತಃ ಎಸ್‌ ದಿವಾಕರ್ ಧ್ವನಿಯಲ್ಲಿ ಬೇಂದ್ರೆ, ಅಡಿಗ, ಕೆಎಸ್‌ನ, ಶಂಕರ ಮೊಕಾಶೀ ಪುಣೇಕರ್, ಚಂಪಾ, ಚಂದ್ರಶೇಖರ ಪಾಟೀಲ, ಸು.ರಂ. ಎಕ್ಕುಂಡಿ, ಕೆ.ವಿ. ತಿರುಮಲೇಶ್‌, ಎಚ್‌.ಎಸ್. ವೆಂಕಟೇಶಮೂರ್ತಿ (H S Venkatesha Murthy), ಜಯಂತ ಕಾಯ್ಕಿಣಿ, ಪ್ರತಿಭಾ ನಂದಕುಮಾರ್ , ಜ. ನಾ. ತೇಜಶ್ರೀ, (Jana Tejashree), ಆರೀಫ್‌ ರಾಜಾ ಅವರ ಪದ್ಯಗಳ ಓದಿವೆ.

-ಹಾಗೆಂದು, ಇದು ಆಡಿಯೊ ಪುಸ್ತಕವಷ್ಟೇ ಖಂಡಿತ ಅಲ್ಲ.

ಬೆಳಕು-ನೆರಳಿನ ಸಂಯೋಜನೆಯಲ್ಲಿಯೇ ಕಾವ್ಯ ಕಟ್ಟುವ ಶಕ್ತಿಯಿರುವ ಛಾಯಾಗ್ರಾಹಕ ದಿನೇಶ್‌ ಮಾನೀರ್ ಪ್ರತಿಭೆಗೆ ಈ ಪುಸ್ತಕದ ಮುಖಪುಟ ಮತ್ತು ಹಿಂಪುಟದ ಚಿತ್ರಗಳು ಸಾಕ್ಷಿ ಹೇಳುತ್ತದೆ. ಅಪಾರ ತುಂಬ ಛಂದದ, ಅರ್ಥಪೂರ್ಣವಾದ ಮುಖಪುಟ ವಿನ್ಯಾಸ ಮಾಡಿಕೊಟ್ಟಿದ್ದಾರೆ.

ಪ್ರಜಾವಾಣಿ, ಸುಧಾ ಪತ್ರಿಕೆಯಲ್ಲಿ ದಶಕಗಳ ಕಾಲ ಕೆಲಸ ಮಾಡಿರುವ ಅನುಭವಿ ವಿನ್ಯಾಸಕಾರ ಈಶ್ವರ ಬಡಿಗೇರ ಇದರ ಒಳಾಂಗಣ ಕ್ರಿಡಾಂಗಣವನ್ನು ನಾವೆಲ್ಲರೂ ಆಡಿ ನಲಿಯುವಂತೆ ಅಣಿಗೊಳಿಸಿದ್ದಾರೆ. ಇಲ್ಲಿ ಉಲ್ಲೇಖಿಸದಿರುವ ಇನ್ನೂ ಹಲವರ ಶ್ರಮ, ಪ್ರತಿಭೆ ಈ ಪುಸ್ತಕವನ್ನು ರೂಪಿಸಿದೆ. ವೀರಲೋಕ ಪ್ರಕಾಶನ ಈ ವಿಶಿಷ್ಟ ಕೃತಿಯನ್ನು ತುಂಬ ಉತ್ಸಾಹದಿಂದ ಪ್ರಕಟಿಸಿದೆ. ಈ ಎಲ್ಲರೂ ಇದನ್ನೊಂದು ‘ವ್ಯಾವಹಾರಿಕ ಪ್ರಾಜಕ್ಟ್’ ಎಂದು ನೋಡದೆ, ಕರ್ತವ್ಯದ ಅನಿವಾರ್ಯತೆಯಿಂದಲೂ ಅಲ್ಲದೆ, ಹೃದಯಕ್ಕೆ ಹತ್ತಿರವಾದ ಕೆಲಸ ಎಂದೇ ಈ ಕೃತಿಯ ಭಾಗವಾಗಿದ್ದಾರೆ; ಈ ಕೃತಿಯನ್ನು ಸಾಧ್ಯವಾಗಿಸಿದ್ದಾರೆ.

ಮೇಲೆ ಉಲ್ಲೇಖಿಸಿದ ಹಾಗೆ, ಹಲವು ‘ಅಷ್ಟೇ ಅಲ್ಲ’ಗಳಿಂದಲೇ ವಿವರಿಸಬೇಕಾದಷ್ಟು ಸಮೃದ್ಧಿ, ವೈವಿಧ್ಯ ಈ ಪುಸ್ತಕದಲ್ಲಿದೆ. ತಮ್ಮದೇ ಜಗತ್ತಿನಲ್ಲಿ ಬಿಡುವಿಲ್ಲದೇ ವ್ಯಸ್ತರಾಗಿರುವ ಹತ್ತು ಹಲವು ಪ್ರಸಿದ್ಧ-ಪ್ರತಿಭಾವಂತರು ಸರಕ್ಕನೆ ತಿರುಗಿ ನೋಡಿ, ಮರುಮಾತಿನಲ್ಲದೇ ಬಿಡುವು ಮಾಡಿಕೊಂಡು ಈ ಪುಸ್ತಕದ ಭಾಗವಾಗಲು ಕಾರಣವಾಗಿದ್ದು ಒಂದೇ ಹೆಸರು.

ಅದು ಎಸ್‌ ದಿವಾಕರ್!!

ಅವರ ಜೊತೆ ವೈಯಕ್ತಿಕ ಮಾತು ಸಾಧ್ಯವೇ ಇಲ್ಲ ಅನ್ನುವಷ್ಟು ಸಾಹಿತ್ಯವನ್ನೇ ಉಸಿರಾಡುತ್ತಿರುವವರು ಎಸ್‌ ದಿವಾಕರ್. ಸೃಜನಶೀಲತೆಯನ್ನು ಹಲವು ಪ್ರಕಾರಗಳಲ್ಲಿ ಅನುಭವಿಸುತ್ತ, ತಮ್ಮ ಒಡನಾಟಕ್ಕೆ ಬಂದವರಿಗೆಲ್ಲ ಅದನ್ನು ಹಂಚುತ್ತ ಬಂದಿರುವ ದಿವಾಕರ್‌ ಅವರು ಎಂಬತ್ತನೇ ವಯಸ್ಸಿಗೆ ಅಡಿಯಿಡುತ್ತಿರುವ ಸಂದರ್ಭದಲ್ಲಿ, ಅವರಿಂದ ಸೃಜನಶೀಲ ಜಗತ್ತಿನ ಹಲವು ರಸಪಾಕಗಳನ್ನು ಸವಿದ ಸಮಾನಮನಸ್ಕರು ಸೇರಿಕೊಂಡು ಹೇಳುತ್ತಿರುವ ‘ಕೃತಜ್ಞತೆ’ ಎಂದಷ್ಟೇ ಈ ಪುಸ್ತಕದ ಬಗ್ಗೆ ಹೇಳಲು ಸಾಧ್ಯ. ಇನ್ನೊಂದು ಬಗೆಯಲ್ಲಿ, ಅವರ ಒಡನಾಟದ ಅದೃಷ್ಟ ದೊರೆತಿಲ್ಲದವರಿಗೆ ಇದು ‘ಎಸ್‌ ದಿವಾಕರ್‌ ಪ್ರಪಂಚಕ್ಕೊಂದು ಪ್ರವೇಶಿಕೆ’.

ಮುಂದಿನ ಭಾನುವಾರ, ಅಂದರೆ ನವೆಂಬರ್ 26ರಂದು ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ವರ್ಲ್ಡ್‌ ಕಲ್ಚರ್‌ನಲ್ಲಿ ಬೆಳಿಗ್ಗೆ 9.30ಯಿಂದ ಮಧ್ಯಾಹ್ನ 1.30ವರೆಗೆ ನಡೆಯಲಿರುವ, ‘ನಮ್ಮ ದಿವಾಕರ್‌’ ಎಂಬ ಆಪ್ತ ಸಾಹಿತ್ಯ-ಸಂಗೀತದ ಕಾರ್ಯಕ್ರಮ ಆಯೋಜನೆಗೊಂಡಿರುವುದು ತಿಳಿದೇ ಇದೆ. ಆ ಕಾರ್ಯಕ್ರಮದಲ್ಲಿ ‘ಪರಿಮಳದ ಪಡಸಾಲೆ’ ಬಿಡುಗಡೆಯಾಗುತ್ತಿದೆ; ನಿಮ್ಮ ಉಪಸ್ಥಿತಿಯಲ್ಲಿ!

ಈ ಪಡಸಾಲೆಯಲ್ಲಿ ಕೆಲಕಾಲ ಆರಾಮಾಗಿ ಕೂತು ಓದಿ, ಕೇಳಿ, ನೋಡುವ ಆನಂದವನ್ನು ಅನುಭವಿಸಲು ವೀರಲೋಕ ಪ್ರಕಾಶನ ಪ್ರಕಟಣಾಪೂರ್ವ ಖರೀದಿಯನ್ನೂ ಮಾಡಬಹುದು.

ಒಮ್ಮೆ ಈ ಪುಸ್ತಕದ ಪಡಸಾಲೆಯಲ್ಲಿ ಕೂತುನೋಡಿ… ಅಲ್ಲಿನ ಪರಿಮಳ ನಿಮ್ಮನ್ನು ಪರವಶಗೊಳಿಸದಿದ್ದರೆ ಕೇಳಿ!

‍ಲೇಖಕರು avadhi

November 22, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: