ಈ ದೇಶದಲ್ಲಿ ಹುಟ್ಟೋದೆ ಒಂದು ಪುಣ್ಯ

ಈಕೆ ಜಯನಗರದ ಹುಡುಗಿ’. ಹಾಗಂತ್ಲೆ ಫುಲ್ ಫೇಮಸ್ಸು. ಈಕೆ ಬರೆಯುತ್ತಿದ್ದ ಜಯನಗರದ ಹುಡುಗಿಅಂಕಣ ಹಾಗೂ ಆನಂತರ ಅದೇ ಹೆಸರಲ್ಲಿ ಬಂದ ಪುಸ್ತಕದಿಂದಾಗಿ ಈಕೆ ಬಾರ್ಸಿಲೋನದಲ್ಲಿ ಇದ್ದರೂ, ಬೆಂಗಳೂರೆಂಬ ಮಾಯಾ ನಾಗರಿಯಲ್ಲಿದ್ದರೂ ಈಕೆ ಜಯನಗರದ ಹುಡುಗಿಮಾತ್ರ. ಯಂತ್ರಗಳಿಗೆ ಮಾತು ಕಲಿಸುವ Artificial Intelligence ಕ್ಷೇತ್ರದ ಈ ಎಂಜಿನಿಯರ್ ತಂದೆ ಸುಧೀಂದ್ರ ಹಾಲ್ದೊಡ್ಡೇರಿ, ತಾತ, ಖ್ಯಾತ ಪತ್ರಕರ್ತ ಎಚ್ ಆರ್ ನಾಗೇಶರಾವ್ ಅವರಿಂದ ಪಡೆದದ್ದು ಬಹಳಷ್ಟು.

ಪ್ರಸ್ತುತ ಬಾರ್ಸಿಲೋನಾದಲ್ಲಿ ತಾವು ಕೆಲಸ ಮಾಡುತ್ತಿದ್ದ ಅವಧಿಯಲ್ಲಿ ಕಂಡ ನೋಟಗಳ ಚಿತ್ರಣ ಇಲ್ಲಿದೆ

|ಕಳೆದ ಸಂಚಿಕೆಯಿಂದ|

ಎಲೆನಾ ಮುಖಕ್ಕೆ ಮ್ಯಾಪ್ ಹಿಡಿದಳು. ಭರ್ತಿ 2 3 ಘಂಟೆ ಹುಡುಗಿಯ ಕನ್ನಡತನವನ್ನ ಬಡಿದೆಬ್ಬಿಸಿದ್ದಕ್ಕೆ ತನ್ನ ಕನ್ನಡ ತರಗತಿಯ ಗ್ರೂಪಿನಲ್ಲಿ ಕನ್ನಡದ ಬಗ್ಗೆ ನಾಲ್ಕು ವಾಕ್ಯ ಬರೆದು ಭಾಷೆಯ ದೊಡ್ಡತನವನ್ನು ಪ್ರದರ್ಶನ ಮಾಡಿ ಸ್ವಲ್ಪ ಮರ್ಯಾದೆ ಉಳಿಸಿಕೊಳ್ಳೋಣ ಎಂದು ಮಾತಾಡಲು ಹೊರಟಳು.

ಯಾವುದೋ ಯುದ್ಧಕ್ಕೆ ಹೊರಡುವ ಒಂದು ಮ್ಯಾಪ್ ಹಿಡಿದು ಹುಡುಗಿಗೆ ಎಲೆನಾ ತೋರಿಸುತ್ತಿದ್ದಳು. “ನಿನ್ನ ಹತ್ತಿರ ಬಾಂಬ್, ಬುಲೆಟ್ಟು ಇದ್ದರೆ ನೀನು ಟೆರರಿಸ್ಟ್ ಆಗ್ತೀಯಾ, ನಾನು ಕಂಪ್ಲೇಂಟ್ ಕೊಡ್ತೀನಿ” ಎಂದು ಹುಡುಗಿ ಹೇಳಿದಾಗ, ಎಲೆನಾ ನಕ್ಕು ನಕ್ಕು ಸುಸ್ತಾದಳು. “ನಮ್ಮ ಹೋರಾಟಕ್ಕೆ ಮಾತು ಸಾಕು, ಜಗಳ ಸಾಕು, ಸಂವಿಧಾನ ಸಾಕು” ಎಂದು ಕಿತ್ತೂರು ರಾಣಿ ಚೆನ್ನಮ್ಮ ರೇಂಜಿಗೆ ಹೇಳಿದ ಮೇಲೆ “ನಿನಗೆ ರಿಪಬ್ಲಿಕನ್ ಯೂಥ್ ಆಫ್ ಕತಲೂನ್ಯಾ ಗೊತ್ತಾ ?” ಎಂದು ಕೇಳಿದಳು.

“ಇಲ್ಲ ಯಾರೂ ಇದನ್ನ ನೀನು ಶುರು ಮಾಡಿದೆಯಾ ಏನ್ ಕಥೆ?” ಎಂದು ಕೇಳಿದಾಗ, “ಹಾ ನಿನಗೆ ಇದು ಗೊತ್ತಿಲ್ವಾ ?” ಎಂದು ಆಶ್ಚರ್ಯವಾಗಿ ಕೇಳಿದಳು. “ಇಲ್ಲಮ್ಮ ಖಂಡಿತಾ ಗೊತ್ತಿಲ್ಲ ಇಷ್ಟು ದಿವಸ ಹೇಳಿದ ಹಾಗೆ ಇದನ್ನೂ ಹೇಳಿ ಪುಣ್ಯ ಕಟ್ಟಿಕೋ” ಅಂದಳು ಹುಡುಗಿ. “ಓಹ್ ಪುಣ್ಯ, ಅಂದರೆ ನೀನು ಪಾಪ ಪುಣ್ಯ ಕರ್ಮ ಎಲ್ಲಾ ನಂಬ್ತ್ಯಾ?” ಎಂದು ಕೇಳಿದಳು. “ನಿನಗೆ ಪುಣ್ಯ ಇದ್ದಿದ್ದಕ್ಕೆ ಬಾರ್ಸಿಲೋನಾಗೆ ಬಂದಿದ್ದು” ಎಂದಳು ಎಲೆನಾ.

“ಈ ದೇಶದಲ್ಲಿ ಹುಟ್ಟೋದೆ ಒಂದು ಪುಣ್ಯ, ನಾನು ಮುಂದಿನ ಜನ್ಮದಲ್ಲಿ ಇಲ್ಲಿ ಒಂದು ಡವ್ ಆಗಿಯಾದರೂ ಹುಟ್ಟುತ್ತೇನೆ” ಎಂದಾಗ “ಯಾಕೋ ಪಂಪನ ರೇಂಜಿಗೆ ಬನವಾಸಿಯಲ್ಲಿ ಮರಿದುಂಬಿಯಾಗಿ ಅಥವಾ ಕೋಗಿಲೆಯಾಗಿಯಾದರೂ ಹುಟ್ಟುತ್ತೇನೆ” ಎಂದು ಹೇಳಿದ್ದು ನೆನಪಾಗಿ, “ನಮ್ಮ ಕನ್ನಡದಲ್ಲಿ ಆದಿಕವಿ ಪಂಪ ಅಂತ ಇದ್ದರು ಅವರು ಬನವಾಸಿಯ ಬಗ್ಗೆ ಹಾಗೆ ಹೇಳಿದ್ದಾರೆ” ಎಂದು ಹುಡುಗಿ ಹೇಳಿದಾಗ, “ವಾವ್ ನೋಡು ದೇಶದ ಮೇಳೆ ಅಭಿಮಾನ ಅಂದರೆ ಅದು, ನಮ್ಮ ತನದ ಮೇಲೆ ಅಷ್ಟೇ ಅಭಿಮಾನ ಇರಬೇಕು” ಎಂದು ಭಾಷಣ ಶುರುಹಚ್ಚಿಕೊಂಡಳು. “ಎಲೆನಾ ನಿನ್ನ ರಕ್ತ ಪರೀಕ್ಷೆ ಮಾಡಿಸಿದರೆ ಬರಿ ಕತಲಾನ್ ಅಂತ ಬರತ್ತಾ ಅಂತ ನನಗೆ ಅನುಮಾನ” ಎಂದು ಹುಡುಗಿ ಕಿಸಕ್ಕನೆ ನಕ್ಕಾಗ, “ನಿನಗೇನು ಬರುತ್ತೆ, ಕನ್ನಡಾನಾ ? ಬೆಂಗಳೂರಾ ಅಥವಾ ಏನು” ಎಂದು ಕೋಪ ಮಾಡಿಕೊಂಡು ಕೇಳಿದಳು.

“ಈ ರಿಪಬ್ಲಿಕನ್ ಯೂಥ್ ಬಗ್ಗೆ ಏನಾದ್ರೂ ಹೇಳು” ಎಂದಳು ಹುಡುಗಿ. “ಇರು ಈಗ ನಾವು ಏನಾದರೂ ತಿನ್ನೋದಕ್ಕೆ ಹೋಗೋಣ” ಎಂದು ಹೇಳಿದಳು. “ಇಲ್ಲಿ ಥಾಯ್ ಫುಡ್ ಇದೆ, ತಿನ್ನೋಣ” ಎಂದು ಹುಡುಗಿ ಅಂದಿದಕ್ಕೆ, “ಅದರಲ್ಲಿ ಬರೀ ಕೊಕೋನೆಟ್” ಎಂದು ಮೂಗು ಮುರಿದಳು. “ಇಲ್ಲಾ ಬರಿ ನಿಮ್ಮ ಹಾಗೆ ಸಾಲ್ಟ್ ಪೆಪ್ಪರ್ ಎಂದು ತಿನ್ನೋಕಾಗತ್ತಾ, ನಾಲಿಗೆ ಇರೋದು ಏನಕ್ಕೆ, ಸುಮ್ನೆ ಬರಿ ಸಪ್ಪೆ ಸಪ್ಪೆ ಆಹಾರ ತಿಂದು ಯಬ್ಬಾ“ ಎಂದು ಹುಡುಗಿ ಗೊಣಗಲು ಶುರು ಮಾಡಿದಳು.

“ಓಕೆ ಓಕೆ ಹೋಗೋಣ, ಬಟ್ ಸ್ಪೈಸಿ ಆದ್ರೆ ನೀನೇ ಪರಿಹಾರ ಕೊಡಬೇಕು” ಅಂದಳು. ಹುಡುಗಿ ನಕ್ಕು, “ನಮ್ಮನೇಲಿ ಉಪ್ಪಿಟ್ಟು ಖಾರ ಮಾಡಿದರೆ ನಾವು ಮಕ್ಕಳು ಸಕ್ಕರೆ ಅಥವಾ ಮೊಸರು ಹಾಕಿಕೊಂಡು ತಿನ್ನುತ್ತಿದ್ದೆವು, ಹಾಗೆ ಏನಾದರೂ ಅದ್ಜೆಸ್ಟ್ ಮಾಡ್ಕೋ, ಇಲ್ಲಾಂದ್ರೆ ಇರತ್ತಲ್ಲ ನಿಮ್ಮ ಬಿಯರು ಒಂದು ತಗೊಂಡ್ರೆ ನೆಮ್ಮದಿಯಾಗಿ ಕುಡೀಬಹುದು” ಎಂದು ಹುಡುಗಿ ಅಂದಾಗ ಒಂದು ನಿಮಿಷ ಎಲೆನಾಗೆ ಶಾಕ್ ಆಯಿತು.

ಮುಂಚಿನ ಹಾಗೆ ವಲಸೆ ಬಂದವರ ಭಯ ಇವಳಿಗಿರಲ್ಲಿಲ್ಲ. ಹುಡುಗಿ ರೆಸಿಡೆನ್ಸಿ ಪರ್ಮಿಟ್ ಇಟ್ಟುಕೊಂಡಿದ್ದಳು. ಅರೆಕಾಲಿಕ ಕೆಲಸವೂ ಇತ್ತು, ಸೋಶಿಯಲ್ ಸೆಕ್ಯೂರಿಟಿ ನಂಬರ್ ಸಹ ಇತ್ತು, ಅದಕ್ಕೆ ಅವಳು ತೆರಿಗೆಯೂ ಕಟ್ಟುತ್ತಿದ್ದಳು. 2 ಹೆಜ್ಜೆ ಇವಳಿಗಿಂತ ಕಡಿಮೆ ಇದ್ದಳು ಅಷ್ಟೆ. ಇನ್ನೊಂದು ಹತ್ತು ವರ್ಷ ಇದ್ದರೆ ಇವಳಷ್ಟೇ ಸ್ಪಾನಿಷ್ ಅವಳೂ ಆಗುತ್ತಿದ್ದಳು.

ಇಂಡಿಯಾದಿಂದ ಬರುವ ಎಲ್ಲರೂ ಇಂಥದನ್ನ ಬಹಳ ಕಷ್ಟಪಟ್ಟು ಮಾಡುತ್ತಿದ್ದರು. ಯಾವುದೇ ಊರಿನಲ್ಲಿ ವಲಸಿಗರು ಸಿಕ್ಕಾಪಟ್ಟೆ ಆಕ್ಟೀವ್ ಅನ್ನೋದಕ್ಕೆ ಹುಡುಗಿಯ ಹಾಗೆ ಲಕ್ಷಾಂತರ ಜನ ಇದ್ದರು ಅವಳ ಊರಿನಲ್ಲಿ. ಕೆಲವೊಮ್ಮೆ ಕತಲನ್ನರ ಹೋರಾಟ ಮಾಡಿ ಸ್ವಾತಂತ್ರ್ಯ ಬಂದರೂ ಹುಡುಗಿಯಂತಹ ವಲಸಿಗರೇ ತುಂಬಿ ಹೋಗುತ್ತಾರೆ ಎಂದೂ ಅರಿವಿತ್ತು.

ಇವರ ಭಾಷೆಯನ್ನು ಮತ್ತು ಸಂಸ್ಕೃತಿಯನ್ನು ಇವರಿಗಿಂತ ಹೆಚ್ಚಾಗಿಯೇ ಪ್ರೀತಿಸುವ ವಲಸಿಗರಿಂದ ಇವರ ಸ್ವಾತಂತ್ರ್ಯ ಹೋರಾಟಕ್ಕೆ ಸ್ವಲ್ಪ ಉಪಯೋಗವಾದರೂ ಮುಂದೆ ಯಾವ ಗಂಡಾಂತರ ಕಾದಿದೆ ಎಂಬುದೂ ಗೊತ್ತಿತ್ತು. ಹಾಗಿದ್ದರೂ ವಲಸಿಗರಿಗೆ ಬಾಗಿಲು ತೆರೆದೇ ಇಟ್ಟುಕೊಂಡಿದ್ದರು ಕತಲನ್ನರು. ಎಲೆನಾ ಸಹ ಇದಕ್ಕೆ ಹೊರತಾಗಿರಲ್ಲಿಲ್ಲ. ಹುಡುಗಿ ಇವರ ಹಾಗೆ ಬ್ರೆಡ್ಡು, ಟೊಮ್ಯಾಟೋ ಹಚ್ಚಿಕೊಂಡು ತಿನ್ನುವುದನ್ನು ಆರಾಮಾಗಿ ಅಭ್ಯಾಸ ಮಾಡಿಕೊಂಡಿದ್ದಳು.

ಥಾಯ್ ಹೋಟೆಲಿನ್ನಲ್ಲಿ ಅನ್ನ ಮತ್ತು ಥಾಯ್ ಕರಿಯನ್ನು ಆರ್ಡರ್ ಮಾಡಿದ ಇಬ್ಬರೂ ಸುತ್ತ ಮುತ್ತ ನೋಡಿದರು. ಅಲ್ಲಿ ಎಲ್ಲರೂ ಥಾಯ್ ಅಲ್ಲದಿರುವವರೇ ಇದ್ದರು. ಅರ್ಧದಷ್ಟು ಭಾರತೀಯರ ಹಾಗೆ ಇದ್ದರು. ದಕ್ಷಿಣ ಭಾರತದವರಂತೂ ಅಲ್ಲಿ ಹೋಗುತ್ತಲೇ ಇದ್ದರು. ಅನ್ನದ ಮೇಲಿನ ಅಕ್ಕರ ಅವರನ್ನು ಬಿಡೋದಕ್ಕೆ ಸಾಧ್ಯವೇ ಇರಲ್ಲಿಲ್ಲ. ಥಾಯ್ ಕರಿಯನ್ನು ಚಪ್ಪರಿಸಿಕೊಂಡು ತಿನ್ನೋವಾಗ ಹುಡುಗಿಗೆ ಯಾವ ಕಥೆಯೂ ಬೇಕಿರಲ್ಲಿಲ್ಲ.

“ರಿಪಲಿಕನ್ ಯೂಥ್ ಆಫ್ ಇಂಡಿಯಾ ಶುರುವಾಗಿದ್ದು 1930ರಲ್ಲಿ ಅದು ರಿಪಲಿಕನ್ ಯೂಥ್ ಎಂಬ ಲೆಫ್ಟ್ ಪಾರ್ಟಿಯ ಯೂಥ್ ವಿಂಗ್. ಇದು ಆಗಿನ ಕಾಲದ ಹುಡುಗರನ್ನು ಬಡಿದೆಬ್ಬಿಸಿದ ಗುಂಪು. ಕತಲೂನ್ಯರ ಅತ್ಯಂತ ದೊಡ್ಡ ಗುಂಪೂ ಸಹ ಇದೇ… ಅಕಂಪಾದಾ ಜೋವೆ ಎಂಬ ಸಂಗೀತ ಕಾರ್ಯಕ್ರಮ ನಡೆಸುತ್ತಾರಲ್ಲ ಅವರದ್ದೇ ಇದು” ಎಂದು ಥಾಯ್ ಕರಿ ತಿನ್ನುತ್ತಾ ನೆತ್ತಿಗೇರಿಸಿಕೊಂಡು ಕೆಮ್ಮಲು ಶುರು ಮಾಡಿದಳು ಎಲೆನಾ. “ಸ್ಪೈಸಿ ಸ್ಪೈಸಿ” ಎಂದು ನೀರು ಕುಡಿದಳು, ಬಿಯರು ಕುಡಿದಳು ಮತ್ತು ಒಂದು ಮೊಯಿತೂನೂ ಗಂಟಲಲ್ಲಿ ಇಳಿಯಿತು.

“ಸಂಗೀತ ಕಾರ್ಯಕ್ರಮ ಮಾಡಿದವರು ಸ್ವಾತಂತ್ಯ್ರಕ್ಕೇನು ಮಾಡುತ್ತಾರೆ?” ಎಂದು ಹುಡುಗಿ ಮೆಲ್ಲಗೆ ಕೇಳಿದಳು. “ವಾಟ್ ಡು ಯೂ ಮೀನ್ ? “ ಎಂದು ಕೋಪದಿಂದ ಬಯ್ಯೋದಕ್ಕೆ ಶುರು ಮಾಡಿದಳು. ಅಲ್ಲಿ ಥಾಯ್ ಹೋಟೆಲ್ಲಿನಲ್ಲಿ ಇಂಡಿಪೆಂಡೆನ್ಸಿಯಾ ಇಂಡಿಪೆಂಡೆನ್ಸಿಯಾ ಎಂದು ಕೂಗಿಕೊಳ್ಳಲಿ ಶುರು ಮಾಡಿದರು. “ನನ್ನ ಹತ್ತಿರ ಆಡಿದ ಮಾತನ್ನೇ ನೀನು ಇಲ್ಲಿ ಮಾತಾಡು ನೋಡೋಣ, ಸಂಗೀತ ಅಂತೆ ಸಂಗೀತ, ವಲಸಿಗರದ್ದು ಇಷ್ಟೇ… “ ಎಂದು ಗುರ್ರೆಂದು ಅನ್ನೋದಕ್ಕೆ ಶುರುಮಾಡಿದಳು.

ಪಕ್ಕದ್ದಲ್ಲಿ ಬಿಸಾಕಿದ್ದ ಪ್ಯಾಂಪ್ಲೆಟ್ ತೆಗೆದುಕೊಂಡು ಹುಡುಗಿ ಓದೋದಕ್ಕೆ ಶುರು ಮಾಡಿದಳು. 1930ರಲ್ಲಿ ಶುರುವಾಗಿದ್ದು, ಇದು ಅತ್ಯಂತ ದೊಡ್ಡ ಕತಲಾನ್ ಸಂಸ್ಥೆ, ಎಸ್ಕೆರಾ ರಿಪಬ್ಲಿಕಾನಾ ದೆ ಕತಲೂನ್ಯಾ ಎಂಬುದು ಇದರ ಇನ್ನೊಂದು ಹೆಸರು, 600 ಜನರು ಸೇರಿಕೊಂಡು ಶುರು ಮಾಡಿದ ಸಂಸ್ಥೆ ಇದು, ಇದು ಲೆಫ್ಟ್ ಫಿಲಾಸಫಿಯನ್ನು ಫಾಲೋ ಮಾಡುತ್ತದೆ ಎಂದು ಜೋರಾಗಿ ಎಲೆನಾಗೆ ಕೇಳುವ ಹಾಗೆ ಓದಿದಳು. “ಶಭಾಷ್ ಸ್ವಲ್ಪ ಮರ್ಯಾದೆ ಬಂತು ನಿನ್ನ ಮೇಲೆ” ಎಂದಳು.

“ಹೌದು ಎಲೆನಾ ಲೆಫ್ಟ್ ಅಂದೆಯಲ್ಲಾ, ಈ ರೈಟ್ ವಿಂಗ್ ಅವರದ್ದೇನು ಕಥೆ.. ಅವರೂ ಕತಲನ್ನರ ಹೋರಾಟದಲ್ಲಿದ್ದಾರಾ ?” ಎಂದು ಸುಮ್ಮನೆ ಭಾರತದ ಮೀಡಿಯಾದ ಹಾಗೆ ಪ್ರಶ್ನೆ ಕೇಳಿದಳು, “ಲೆಫ್ಟ್ ಮತ್ತು ರೈಟ್ ಎರಡಕ್ಕೂ ಕತಲನ್ನಿನ ಸ್ವಾತಂತ್ರ ಬೇಕು…. ತಿಳಿಸುತ್ತೇನೆ, ಬಿಲ್ ಕೊಟ್ಟು ಹೊರಡೋಣ” ಎಂದಾಗ ಹುಡುಗಿ ಅವಕ್ಕಾಗಿ ನೋಡುತ್ತಿದ್ದಳು…

|ಮುಂದಿನ ಸಂಚಿಕೆಯಲ್ಲಿ|

November 28, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: