ಚಲಂ
ಈ ಕಾಲಕ್ಕೆ ನಮ್ಮೆದುರಿಗೆ ಹಲವಾರು ಸವಾಲುಗಳಿವೆ. ಒಂದು ರೀತಿಯ ವಿಚಿತ್ರ ಸಮಸ್ಯೆಗಳಿಗೆ ಎದುರಾಗಿ ದಾರಿಯೇ ಕಾಣದಂತೆ ನಿಲ್ಲುವ ಅಸಹಾಯಕತೆ ನಮ್ಮ ಎದುರಿಗೆ ಇದೆ.
ನಾವು ಮನಸು ಮಾಡಿದ್ರೆ ಏನ್ ಬೇಕಾದ್ರೂ ಮಾಡ್ತೀವಿ ಅಂತ ಹೊರಟವನು ಕೂಡ ಆರಂಭಿಕ ಹಂತದಲ್ಲೇ ಈ ಸಮಾಜದ ಸುಳಿಯೊಳಗೆ ಸಿಲುಕಿ ಬದಲಾವಣೆ ಮಾಡ್ತೀವಿ ಅಂತ ಹೊರಟವನೇ ಸಣ್ಣ ಸಮಾಜದಂತೆ ಕಾಣಿಸತೊಡಗುತ್ತಾನೆ.
ಪ್ರತಿ ಬಾರಿ “ನಿಲುವಂಗಿಯ ಕನಸು” ನಾಟಕ ಪ್ರದರ್ಶನಕ್ಕೆ ಮುಂದಾದಾಗಲೂ ನಮ್ಮ ಮುಂದೆ ಈ ರೀತಿಯ ವಿಷಮ ಸ್ಥಿತಿ ಕಣ್ಣ ಮುಂದೆ ಬಂದು ಬಿಡುತ್ತದೆ.
ಆದರೂ ಈ ನಾಟಕ ತಾಲೀಮು ಮಾಡುವಾಗಿನಿಂದ ಹಿಡಿದು ನಾಟಕ ಮುಗಿದು ಪಾತ್ರ ಪರಿಚಯ ಮಾಡಿಕೊಳ್ಳುವ ಹೊತ್ತಿಗೆ ಈ ಕಾಲಕ್ಕೆ ಮಾತನಾಡಬೇಕಾದ ವಿಷಯವನ್ನು ಮಾತನಾಡಿದ್ದೇವೆ ಎಂಬ ಸಮಾಧಾನ.
ರಂಗಭೂಮಿ ಜನರಲ್ಲಿ ಮಾನವೀಯತೆಯ ಕಣಗಳನ್ನು ಬಿತ್ತುವ ಕರ್ಮ ಕ್ಷೇತ್ರ. ಬಹುತೇಕ ಕ್ಷೇತ್ರಗಳು ಈ ಹೊಂದಿಕೊಂಡ ಸಮಾಜದ ಪ್ರತಿರೂಪಗಳಂತೆ ಕಾಣುವಾಗ ರಂಗಭೂಮಿ ಮಾತ್ರ ಇನ್ನೂ ಮೌಲ್ಯಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳದ ಕ್ರಾಂತಿಕಾರಿತನವನ್ನು ಇನ್ನೂ ಉಳಿಸಿಕೊಂಡಿದೆ. ಈ ರೀತಿಯ ಸಾಧ್ಯತೆ ಉಳಿಸಿಕೊಂಡ ಕಾರಣಕ್ಕೆ ರಂಗಭೂಮಿ ಬಗ್ಗೆ ಅಪರಿಮಿತ ಗೌರವ.
“ನಿಲುವಂಗಿಯ ಕನಸು” ದೇಶದ ಬಹುದೊಡ್ಡ ಸಮುದಾಯವಾದ ರೈತರನ್ನು ಪ್ರತಿನಿಧಿಸುತ್ತದೆ.
ನಾಟಕದ ಆ ಎರಡು ಗಂಟೆಗಳಲ್ಲಿ ನಮ್ಮ ಮುಂದೆ ರೈತರ ಜೀವನದ ಅದಷ್ಟೂ ಸಂಗತಿಗಳನ್ನು ನಮ್ಮ ಮುಂದೆ ತೆರೆದಿಡುತ್ತಾ ಹೋಗುತ್ತದೆ.
“ಆರಂಭ ಅಂದ್ರೆ ಹೋರಾಟ… ಹೋರಾಟ ಮಾಡೋಕೆ ಎದೆಗಾರಿಕೆ ಬೇಕು” ಅನ್ನುತ್ತಾ ಸಾಗುವ ನಾಟಕ ನಮ್ಮನ್ನು ಭೂಮಿ, ಕೃಷಿಗೆ ಕುರಿತಾಗಿ ಹೋರಾಟಕ್ಕೆ ಸಜ್ಜುಗೊಳಿಸುವಂತೆ ಚಲಿಸತೊಡಗುತ್ತದೆ.
ಹಾಡ್ಲಹಳ್ಳಿ ನಾಗರಾಜು ಅವರ ಕಾದಂಬರಿ ಒಳಗೆ ವಿಸ್ತಾರವಾದ ಸಂಗತಿಗಳನ್ನು ಒಳಗೊಂಡಿದೆ. ಕಾದಂಬರಿಯಿಂದ ರಂಗರೂಪಕ್ಕೆ ಪ್ರಸಾದ್ ರಕ್ಷಿದಿ ಅವರು ಅಷ್ಟು ವಿಸ್ತಾರವಾದ ವಸ್ತುವಿಗೆ ಚ್ಯುತಿ ಬರದಂತೆ ಒಗ್ಗಿಸಿದ್ದಾರೆ. ನಿರ್ದೇಶಕರಾದ ಉಲಿವಾಲ ಮೋಹನ್ ಕುಮಾರ್ ಬಹಳ ಆಸ್ಥೆಯಿಂದ ರೈತರ ಬದುಕಿಗೆ ಕನ್ನಡಿ ಹಿಡಿದಿದ್ದಾರೆ. ಆ ಕನ್ನಡಿಯಲ್ಲಿ ನೋಡಿಕೊಂಡರೆ ಖಂಡಿತಾ ನಾವೇ ಕಾಣಿಸುತ್ತೇವೆ.
ಕಾರ್ತಿಕ್ ಭಾರದ್ವಾಜ್ ಅವರ ಸಂಗೀತ ಚಲಂ ಹಾಡ್ಲಹಳ್ಳಿ ಅವರ ಸಾಹಿತ್ಯ ಒಂದಕ್ಕೊಂದು ಬೆಸೆದುಕೊಂಡು ರಂಗಪ್ರೇಕ್ಷಕರ ಆಳಕ್ಕೆ ಇಳಿಯಲು ಸಜ್ಜಾಗಿವೆ.
ಇಪ್ಪತ್ತ ಎರಡು ಜನ ಪಾತ್ರದಾರಿಗಳು ಹಾಗು ಆರು ಜನ ತಾಂತ್ರಿಕ ವರ್ಗವನ್ನು ಒಳಗೊಂಡ ದೊಡ್ಡ ತಂಡವನ್ನು ಹವ್ಯಾಸಿ ನೆಲೆಯಲ್ಲಿ ರಂಗದ ಮೇಲೆ ಅನಾವರಣ ಮಾಡುವುದು ಸವಾಲಿನ ಕೆಲಸವೇ ಹೌದು.
ಪಶ್ಚಿಮಘಟ್ಟದ ಕಾಡಿನ ನಡುವೆ ತನ್ನ ದನಿ ಮೊಳಗಿಸಿದ “ನಿಲುವಂಗಿಯ ಕನಸು” ನಗರದಲ್ಲಿಯೂ ತನ್ನ ಮಾತನ್ನು ಆಡಿದೆ.
ಈಗ ಮತ್ತೊಮ್ಮೆ ಹಾಸನದಲ್ಲಿ ಆಗಸ್ಟ್ 15 ಕ್ಕೆ ಹಾಗು ಬೆಂಗಳೂರಿನ ಕಲಾಗ್ರಾಮದಲ್ಲಿ ಆಗಸ್ಟ್ 21 ಕ್ಕೆ ಪ್ರದರ್ಶನಗೊಳ್ಳಲಿದೆ. ರಂಗಾಸಕ್ತರಿಗೆ ನಿಜಕ್ಕೂ ಒಂದು ಒಳ್ಳೆಯ ಅನುಭೂತಿಗಂತೂ ಯಾವುದೇ ಮೋಸವಿಲ್ಲ.
ಇಂತಹಾ ಸಮಾಜಮುಖಿ ಪ್ರಯೋಗಕ್ಕೆ ಕೈ ಹಾಕಿದ ಉಲಿವಾಲ ಸ್ಕೂಲ್ ಆಫ್ ಡ್ರಾಮ ಸಂಸ್ಥೆ ಅಭಿನಂದನೆಗೆ ಅರ್ಹವಾದುದು.
ಮಲೆಯ ನಾಡಿನ ಹೂವು ಮತ್ತು ಪೇಟೆ ಬೀದಿಯ ತಿರುವಿನ ಹಾದಿ ಬೆಸೆದುಕೊಂಡೇ ಸಾಗುವ ಈ ಪ್ರಯತ್ನಕ್ಕೆ ನೀವೂ ಸಾಕ್ಷಿಯಾಗಿ…
0 ಪ್ರತಿಕ್ರಿಯೆಗಳು