ಇಲ್ಲಿದ್ದಾನೆ ಮ೦ಟೊ..

j balakrishna

ಡಾ ಜೆ ಬಾಲಕೃಷ್ಣ

ಮಂಟೋ ನೆನಪಿಗೆ ಆಯ್ದ ಕೆಲವು ಕತೆಗಳು ಇಲ್ಲಿವೆ

knife

 

ದೂರು

‘ಏನಪ್ಪಾ, ನೀನು ಹೀಗೆ ಮೋಸಮಾಡಬಹುದೆ? ಬ್ಲಾಕ್‌ಮಾರ್ಕೆಟ್ ರೇಟು ತಗೊಂಡು ನೀನು ಈ ರೀತಿ ಕಲಬೆರಕೆ ಪೆಟ್ರೋಲ್ ಕೊಟ್ಟಿದ್ದೀಯಲ್ಲಾ. ಅದರಿಂದ ಒಂದು ಅಂಗಡಿಯನ್ನೂ ಸುಡಲಾಗಲಿಲ್ಲ’.

knife

ವಿಶ್ರಾಂತಿ ಬೇಕಾಗಿದೆ

‘ನೋಡು ಅವನಿನ್ನೂ ಸತ್ತಿಲ್ಲ! ಇನ್ನೂ ಉಸಿರಾಡುತ್ತಿದ್ದಾನೆ!’

‘ಇರಲಿ ಬಿಡು ಗೆಳೆಯಾ, ನನಗೂ ವಿಶ್ರಾಂತಿ ಬೇಕಾಗಿದೆ’.

knife

ಸರಿಯಾದ ಕ್ರಮ

ಮೊಹಲ್ಲಾ ಒಂದರ ಮೇಲೆ ದಾಳಿನಡೆಯಿತು ಹಾಗೂ ಕೆಲ ಅಲ್ಪಸಂಖ್ಯಾತರನ್ನು ಚಾಕುವಿನಿಂದ ತಿವಿದು ಸಾಯಿಸಲಾಯಿತು. ಇತರರು ಜೀವಭಯದಿಂದ ಅಲ್ಲಿಂದ ಓಡಿಹೋದರು. ಇದನ್ನೆಲ್ಲಾ ಕಂಡ ದಂಪತಿಗಳಿಬ್ಬರು ತಮ್ಮ ಮನೆಯ ನೆಲಮಾಳಿಗೆಯಲ್ಲಿ ಅವಿತುಕೊಂಡರು.

ಅವರಿಬ್ಬರೂ ಎರಡು ಹಗಲು ಮತ್ತು ಎರಡು ರಾತ್ರಿ ಕೊಲೆಗಡುಕರ ಹೆದರಿಕೆಯಿಂದ ಅಲ್ಲೇ ಅವಿತುಕೊಂಡಿದ್ದರು. ಆದರೆ ಯಾರೂ ಬರಲಿಲ್ಲ.

ಮತ್ತೆರಡು ದಿನಗಳು ಕಳೆದವು. ಅವರಲ್ಲಿನ ಹೆದರಿಕೆ ಕಡಿಮೆಯಾಯಿತು. ಆದರೆ ಹಸಿವು, ನೀರಡಿಕೆ ತೀವ್ರವಾಗಿ ಕಾಡತೊಡಗಿದವು.

ಇನ್ನೂ ನಾಲ್ಕು ದಿನಗಳು ಕಳೆದವು. ಈಗ ಅವರನ್ನು ಸಾವಿನ ಹೆದರಿಕೆ ಕಾಡುತ್ತಿರಲಿಲ್ಲ. ಅವರಿಗೆ ಬದುಕು ಅರ್ಥಹೀನ ಎನ್ನಿಸತೊಡಗಿತ್ತು. ಅವಿತುಕೊಂಡಿದ್ದ ನೆಲಮಾಳಿಗೆಯಿಂದ ಹೊರಬಂದರು.

ಮೊಹಲ್ಲಾದ ಜನರಿಗೆ ತಮ್ಮನ್ನು ಒಪ್ಪಿಸಿಕೊಂಡ ಗಂಡ, ಕ್ಷೀಣ ದನಿಯಲ್ಲಿ ಹೇಳಿದ, ‘ನಮ್ಮನ್ನು ನಿಮಗೊಪ್ಪಿಸಿಕೊಳ್ಳುತ್ತಿದ್ದೇವೆ. ದಯವಿಟ್ಟು ನಮ್ಮನ್ನು ಕೊಂದುಬಿಡಿ’.

ಈ ಮಾತುಗಳು ಆ ಮೊಹಲ್ಲಾದ ಜನರನ್ನು ಇಕ್ಕಟ್ಟಿಗೆ ಸಿಲುಕಿಸಿತು. ಅವರು ಜೈನರಾಗಿದ್ದರು. ‘ನಮ್ಮ ಧರ್ಮದಲ್ಲಿ ಕೊಲ್ಲುವುದು ಅಪರಾಧ’ ಎಂದರು.

ಅವರೆಲ್ಲಾ ಸೇರಿ ಆ ಗಂಡ ಹೆಂಡಿರನ್ನು ಹಿಡಿದು ಮತ್ತೊಂದು ಮೊಹಲ್ಲಾದ ಜನರಿಗೆ ಸೂಕ್ತವಾಗಿ ವಿಲೇವಾರಿ ಮಾಡಲು ಒಪ್ಪಿಸಿದರು

knife

ಅಜ್ಞಾನವೇ ವರದಾನ

ಪಿಸ್ತೂಲಿನ ಕುದುರೆಯನ್ನು ಮೀಟಿದ. ಗುಂಡೊಂದು ಹಾರಿತು.

ಮನೆಯ ಕಿಟಿಕಿಯಿಂದ ಇಣುಕಿ ನೋಡುತ್ತಿದ್ದ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಕುಸಿದುಬಿದ್ದ.

ಸ್ವಲ್ಪ ಸಮಯದ ನಂತರ ಮತ್ತೊಮ್ಮೆ ಕುದುರೆಯನ್ನು ಮೀಟಲಾಯಿತು. ಮತ್ತೊಂದು ಗುಂಡು ಹಾರಿತು.

ನೀರು ಕೊಂಡೊಯ್ಯುತ್ತಿದ್ದವನ ಚರ್ಮದ ಚೀಲ ತೂತಾಯಿತು. ನೀರು ಕೊಂಡೊಯ್ಯುತ್ತಿದ್ದವನು ದೊಪ್ಪೆಂದು ರಸ್ತೆಯ ಮೇಲೆ ಬಿದ್ದ. ನೀರು ಮತ್ತು ರಕ್ತ ಬೆರೆತು ರಸ್ತೆಯ ಮೇಲೆ ಹರಿಯತೊಡಗಿತು.

ಮೂರನೆಯ ಗುಂಡು ಹಸಿಗೋಡೆಗೆ ಬಡಿಯಿತು.

ನಾಲ್ಕನೆಯ ಗುಂಡು ಮುದುಕಿಯೊಬ್ಬಳ ಬೆನ್ನಿಗೆ ಬಡಿಯಿತು. ಸತ್ತು ಕೆಳಕ್ಕೆ ಬೀಳುವ ಮುನ್ನ ಆಕೆಗೆ ಕಿರುಚಲೂ ಸಾಧ್ಯವಾಗಲಿಲ್ಲ.

ಐದು ಮತ್ತು ಆರನೆಯ ಗುಂಡುಗಳು ಮತ್ತೆ ಗುರಿತಪ್ಪಿದವು. ಯಾರೂ ಸಾಯಲಿಲ್ಲ, ಯಾರಿಗೂ ಗಾಯವಾಗಲಿಲ್ಲ.

ಗುಂಡು ಹಾರಿಸುತ್ತಿದ್ದವನಿಗೆ ಸಿಟ್ಟುಬಂತು. ಇದ್ದಕ್ಕಿದ್ದಂತೆ ರಸ್ತೆಗೆ ಸಣ್ಣಮಗುವೊಂದು ಬಂದದ್ದನ್ನು ಆತ ಕಂಡ. ತನ್ನ ಪಿಸ್ತೂಲನ್ನು ಮಗುವಿನೆಡೆಗೆ ಗುರಿ ಇಟ್ಟ.

‘ಏನು ಮಾಡುತ್ತಿದ್ದೀಯೆ?’ ಆತನ ಜೊತೆಗಿದ್ದವ ಕೂಗಿದ.

‘ಏಕೆ?’ ಪಿಸ್ತೂಲಿನ ವ್ಯಕ್ತಿ ಕೇಳಿದ.

‘ನಿನ್ನ ಪಿಸ್ತೂಲಿನಲ್ಲಿದ್ದ ಗುಂಡುಗಳೆಲ್ಲಾ ಖಾಲಿಯಾಗಿವೆ’.

‘ನೀನು ಸುಮ್ಮನಿರು. ಅದು ಮಗುವಿಗೆ ಗೊತ್ತಿಲ್ಲ’.

knife

ಸಾದತ್ ಹಸನ್ ಮಂಟೋ

11.5.1912-18.1.1955

manto coverಆತ ಈ ಉಪಖಂಡ ಕಂಡ ಒಬ್ಬ ಮಹಾನ್ ಹಾಗೂ ವಿವಾದಾಸ್ಪದ ಉರ್ದು ಕತೆಗಾರ.

ಭಾರತ, ಪಾಕಿಸ್ತಾನ ವಿಭಜನೆಯಿಂದ ತೀವ್ರ ಆಘಾತಕ್ಕೊಳಗಾದ ಮಾಂಟೊ ಆಗ ತಾನು ಕಂಡ ಕೋಮುಗಲಭೆಗಳ ಅಮಾನವೀಯ ಕ್ರೌರ್ಯದಿಂದ ತತ್ತರಿಸಿಹೋದ. ಭಾರತ, ಪಾಕಿಸ್ತಾನ ವಿಭಜನೆಯಾದಾಗ, ‘ಈ ಎರಡೂ ದೇಶಗಳಲ್ಲಿ ನನ್ನ ದೇಶ ಯಾವುದೆಂದು ನಿರ್ಧರಿಸಲು ನನ್ನಿಂದ ಸಾಧ್ಯವಾಗಲೇ ಇಲ್ಲ’ ಎಂದಿದ್ದಾನೆ.

ಆತ ಜನರನ್ನು ಹಿಂದೂ, ಮುಸಲ್ಮಾನ ಅಥವಾ ಸಿಖ್ಖರೆಂದು ಪ್ರತ್ಯೇಕಿಸಿ ನೋಡಲಿಲ್ಲ. ಆತನಿಗೆ ಎಲ್ಲರೂ ಮನುಷ್ಯರೆ. ಕೆಲದಿನಗಳ ಹಿಂದೆಯಷ್ಟೇ ನೆರೆಹೊರೆಯವರು, ಗೆಳೆಯರಾಗಿದ್ದವರು ಪರಸ್ಪರ ಕೊಂದುಕೊಳ್ಳುವ ಅಮಾನವೀಯ, ಕ್ರೌರ್ಯ ಮನೋಭಾವ ಪಡೆದುಕೊಂಡದ್ದು ಮಾಂಟೋನಲ್ಲಿ ಆಘಾತ ಹಾಗೂ ದಿಗ್ಭ್ರಮೆ ಉಂಟುಮಾಡಿತ್ತು.

manto2ವಿಭಜನೆಯ ನಂತರ ಪಾಕಿಸ್ತಾನದ ಲಾಹೋರ್‌ಗೆ ಹೋದ ಮಾಂಟೊ ಅಲ್ಲಿ ಏಳು ವರ್ಷಗಳು ಬದುಕಿದ್ದ. ಆ ಏಳು ವರ್ಷಗಳು ಆತನ ಬದುಕಿನ ಸೆಣಸಾಟವೇ ಆಗಿತ್ತು. ಆ ಸೆಣಸಾಟದಲ್ಲೂ ಜಗತ್ತಿಗೆ ತನ್ನ ಮಹಾನ್ ಕೃತಿಗಳ ಕಾಣಿಕೆ ನೀಡಿದ. ಆ ಏಳೂ ವರ್ಷಗಳ ಬದುಕಿನ ಪಯಣ ಆತನನ್ನು ಸಾವಿಗೆ ಹತ್ತಿರ ಹತ್ತಿರ ಕೊಂಡೊಯ್ದವು.
ಮಾಂಟೊ ಸತ್ತಾಗ ಆತನಿಗಿನ್ನೂ ೪೩ ವರ್ಷ ತುಂಬಿರಲಿಲ್ಲ. ಅಷ್ಟರಲ್ಲೇ ಆತ ೨೫೦ಕ್ಕೂ ಹೆಚ್ಚು ಸಣ್ಣ ಕತೆಗಳನ್ನು (22 ಕಥಾ ಸಂಕಲನಗಳು), ಏಳು ರೇಡಿಯೋ ನಾಟಕ ಸಂಗ್ರಹಗಳನ್ನು, ಮೂರು ಪ್ರಬಂಧ ಸಂಗ್ರಹಗಳನ್ನು ಹಾಗೂ ಒಂದು ಕಿರುಕಾದಂಬರಿಯನ್ನು ರಚಿಸಿದ್ದ. ಆತ ಬದುಕಿನಲ್ಲಿ ಎಲ್ಲವನ್ನೂ ಕಂಡಿದ್ದ- ಅತ್ಯಂತ ಜನಪ್ರಿಯತೆ, ಅಸೀಮ ದ್ವೇಷ, ತಾನು ಬಯಸದ ಅಪಮಾನ ಹಾಗೂ ಆ ಎಲ್ಲವನ್ನೂ ತನ್ನ ಕತೆಗಳಲ್ಲಿ ಹೇಳಿಬಿಟ್ಟಿದ್ದ- ಜಗತ್ತೇ ತನ್ನನ್ನು ಅದ್ಭುತ ಕತೆಗಾರನೆಂದು ಕೊಂಡಾಡುವಂತೆ.

‘ಮಾಂಟೊ ಕತೆಗಳು’ ಲಂಕೇಶ್ ಪ್ರಕಾಶನದಲ್ಲಿ ಪ್ರಕಟವಾಗಿದೆ (ಲಂಕೇಶ್ ಪ್ರಕಾಶನ, ನಂ.9, ಪೂರ್ವ ಆಂಜನೇಯ ಗುಡಿ ರಸ್ತೆ, ಬಸವನಗುಡಿ, ಬೆಂಗಳೂರು-560004. ದೂರವಾಣಿ: 080-26676427, ಪುಟಗಳು: xvi+107, ಬೆಲೆ ರೂ: 80/-). 

 

 

‍ಲೇಖಕರು Admin

May 12, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: