ಅನುಪಮಾ ಪ್ರಸಾದ್ ಅವರ ಹೊಸ ಕಥಾ ಸಂಕಲನ ‘ಚೋದ್ಯ’ ಹೊರಬಂದಿದೆ. ‘ಅಮೂಲ್ಯ ಪುಸ್ತಕ’ ಈ ಕೃತಿಯನ್ನು ಪ್ರಕಟಿಸಿದೆ.
ಈ ಪುಸ್ತಕದ ಅರ್ಪಣೆ ನಮ್ಮೊಳಗೆ ಒಂದು ನಿಟ್ಟುಸಿರನ್ನು ಬಿತ್ತುತ್ತದೆ.
ಅಷ್ಟೇ ಅಲ್ಲ ಒಂದು ಬರವಣಿಗೆಯ ಹಿಂದೆ, ಒಬ್ಬ ಸಾಹಿತಿ ರೂಪುಗೊಳ್ಳುವುದರ ಹಿಂದೆ ಇರುವ ಧೀಶಕ್ತಿಯ ಪರಿಚಯವನ್ನೂ ಮಾಡಿಕೊಡುತ್ತದೆ.
ಅನುಪಮಾ ಪ್ರಸಾದ್
ಅದು ತೊಂಭತ್ತರ ದಶಕ. ಪುಟ್ಟ ಕಥೆಯೊಂದನ್ನು ಗುಟ್ಟಾಗಿ ಬರೆದು ಗುಟ್ಟಾಗಿಯೇ ಮಂಗಳೂರು ಆಕಾಶವಾಣಿ ಯುವವಾಣಿಗೆ ಕಳುಹಿಸಿದ್ದೆ. ಅದು ಪ್ರಸಾರಕ್ಕೆ ಆಯ್ಕೆ ಆದಾಗ ಮೊದಲ ಬಾರಿ ಸ್ವಂತ ಕೆಲಸಕ್ಕಾಗಿ ಅಣ್ಣನ ಜೊತೆ ಮಂಗಳೂರು ಪ್ರಯಾಣ. ಬಸ್ ನಿಲ್ದಾಣದಲ್ಲಿಳಿದು ಆಕಾಶವಾಣಿಗೆ ರಿಕ್ಷಾ ಮಾಡಿ ಕರ್ಕೊಂಡು ಹೋಗಿದ್ದ. ವಾಪಸ್ ಬರುವಾಗ ಸರ್ವಿಸ್ ಬಸ್ಟಾಪಿಗೆ ಬಂದು ಬಸ್ ಹಿಡಿದು ಮತ್ತೆ ಮುಖ್ಯ ನಿಲ್ದಾಣಕ್ಕೆ ಬಂದು ಅಲ್ಲಿಂದ ಉಜಿರೆಗೆ ವಾಪಸ್.

ಮುಂದಿನ ಬಾರಿ ಯುವವಾಣಿಗೆ ರೆಕಾರ್ಡಿಂಗ್ ಕರೆ ಬಂದಾಗ ಒಬ್ಬಳನ್ನೆ ಕಳಿಸುವ ಧೈರ್ಯ ಅಪ್ಪ ಅಮ್ಮನಿಗೆ ಬರಲಿಲ್ಲ. ಆದರೆ ಅಣ್ಣ ಕಳೆದ ಸಾರಿ ಹೇಗೆ ಹೋಗಿ ಬರಬೇಕು ತೋರಿಸಿದೇನಲ್ವ. ಹೋಗಿ ಬಾ. ಅವಳು ಹೋಗಿ ಬರ್ತಾಳೆ ಅಂದ
ಅದೇ ಸಮಯದಲ್ಲಿ ಒಂದೆರಡು ಕಥೆ ಪತ್ರಿಕೆಯಲ್ಲಿ ಪ್ರಕಟವಾಯಿತು. ಒಂದು ದಿನ ಪೇಟೆಯಿಂದ ಬಂದವನು ಇದು ನನ್ನ ಲೆಕ್ಕದಲ್ಲಿ ನಿಂಗೆ ಅಂತ ಏನನ್ನೊ ಚಾಚಿದ. ನೋಡಿದರೆ ಆ ದಿನಗಳ ಕನಸು (ಶಾಯಿ ) ಹಿರೊ ಪೆನ್. ನೆಲ ಒರೆಸುತ್ತಿದ್ದವಳು ಸಡಗರದಲ್ಲಿ ಹಾಗೆ ಕೈ ಚಾಚಿದೆ. ಹೋಗು. ಕೈ ತೊಳ್ಕೊಂಡು ಕೈ ಒರೆಸಿಕೊಂಡು ಬಾ ಅಂದ.
2000ನೆ ಇಸವಿಯಲ್ಲಿ ಮೊದಲ ಸಂಕಲನ ಬಂತು. 2010ರಲ್ಲಿ ಕರವೀರದ ಗಿಡ, 2012ರಲ್ಲಿ ದೂರತೀರ, 2015ರಲ್ಲಿ ಜೋಗತಿ ಜೋಳಿಗೆ ಕಥಾ ಸಂಕಲನ ಬಂತು.
ಮೊದಲು ಓದಿ ಚರ್ಚೆ ಮಾಡುವುದು ಅಪ್ಪ. ಅಣ್ಣ ಅರ್ಜೆಂಟಿನವರದೆಲ್ಲ ಆಗಲಿ ಎನ್ನುವ ಜಾಯಮಾನದವ. ಅವನು ಓದುತ್ತಾನೊ ಇಲ್ಲವೊ ಗೊತ್ತಾಗುತ್ತಿದ್ದುದು ಯಾವಾಗಲೊ ಒಮ್ಮೆ ಹೇಳುವ ಏನೊ ಒಂದು ಮಾತಿಂದ.. #ಜೋಗತಿ ಜೋಳಿಗೆಗೆ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಾಗ ಕಾರ್ಯಕ್ರಮಕ್ಕೆ ಕಾಸರಗೋಡಿಂದ ಬೆಂಗಳೂರಿಗೆ ಬಂದು ಹಿಂತಿರುಗುವಾಗ ಉಜಿರೆಗೆ ಹೋಗಿದ್ದೆವು.

“ಇದಕ್ಕೆ ಬರಬೇಕಾದ್ದೆ. ಆ ಇಸುಮುಳ್ಳು ಕಥೆ ತುಂಬಾ ಡಿಸ್ಟರ್ಬ್ ಮಾಡ್ತು ಮಾರಾಯ್ತಿ . ಮುಂದಿನ ಬರವಣಿಗೆ ಬಗ್ಗೆ ನಿರೀಕ್ಷೆ ಜಾಸ್ತಿ ಇರ್ತು ನೋಡು” ಅನ್ನುತ್ತ ಬೆನ್ನು ತಟ್ಟಿದ್ದ. ನಾನು ಅಪನಂಬಿಕೆಯಿಂದ ನಿಂತಿದ್ದೆ.
#ಪಕ್ಕಿಹಳ್ಳದ ಹಾದಿಗುಂಟ ಕಾದಂಬರಿ 2019 ಡಿಸೆಂಬರ್ ಅಂತ್ಯದಲ್ಲಿ ಪ್ರಕಟವಾಯಿತು. ಎಂದಿನಂತೆ ಅಪ್ಪ, ಅಮ್ಮ, ಅತ್ತಿಗೆ ಎಲ್ಲರ ಅನಿಸಿಕೆ ಬಂತು. ಅತ್ತಿಗೆ ಬಳಿ ಅಣ್ಣ ಓದ್ತಿದಾನ ಕೇಳಿದ್ದೆ. ಗೊತ್ತಿಲ್ಲ. ಪುಸ್ತಕ ಮನೆಯಲ್ಲಿ ಇಲ್ಲ. ಡೈರಿಗೆ (ಸೊಸೈಟಿ) ತಗೊಂಡು ಹೋಗಿದಾರೆ ಅಂದಿದ್ದರು. 2020 ಮೇ ತಿಂಗಳಲ್ಲಿ ಅಣ್ಣನ ವಾಟ್ಸಪ್ಪಿಂದ ಮೆಸೇಜ್ ಬಂತು. ಮತ್ತೆ ಮತ್ತೆ ಓದಿಕೊಂಡಿದ್ದೆ..
ಕಾದಂಬರಿಗೆ ಪ್ರಕಾಶಕರ ಬಳಿ ಅರ್ಪಣೆ ಪುಟ ಬೇಡವೆಂದಿದ್ದೆ. ಯಾಕೊ ಅರ್ಪಣೆ ಪುಟವನ್ನು ಇನ್ನು ಹಾಕುವುದು ಬೇಡ ಅಂದುಕೊಂಡಿದ್ದೆ ಅಂದು..
ಇಂದು..
0 ಪ್ರತಿಕ್ರಿಯೆಗಳು