ಇಸ್ಪೀಟಾಟ ಮತ್ತು ಭಾಷಾವಿಜ್ಞಾನ
ಕೆ.ವಿ. ತಿರುಮಲೇಶ್
ಇಸ್ಪೀಟಾಟಕ್ಕೂ ಭಾಷಾವಿಜ್ಞಾನಕ್ಕೂ ಏನಾದರೂ ಸಂಬಂಧವಿದೆಯೇ?
ಇದೆ.
ಅದನ್ನೇ ನಾನಿಲ್ಲಿ ಹೇಳಲು ಹೊರಟಿರುವುದು.
ನಾನು ಚಿಕ್ಕವನಿದ್ದಾಗ ನಮ್ಮೂರಲ್ಲಿ ಬ್ರಾಹ್ಮಣರ ಮದುವೆ ಸಮಾರಂಭಗಳಲ್ಲಿ ಇಸ್ಪೀಟಾಟ ಪ್ರಚಾರದಲ್ಲಿತ್ತು. ಅತಿಥಿಗಳಾಗಿ ಅಲ್ಲಿ ಸೇರಿದ ಗಂಡಸರು ಮನರಂಜನೆಗಾಗಿ ಆಡುತ್ತಿದ್ದ ಆಟ ಅದು. ಅವರು ದುಡ್ಡಿಟ್ಟು ಆಡುತ್ತಿರಲಿಲ್ಲ. ಇಸ್ಪೀಟಾಟವನ್ನು ದುಡ್ಡಿಗೆ ಆಡುವುದು ಕೆಟ್ಟದು ಎನ್ನುವುದು ಭಾವನೆಯಾಗಿತ್ತು. ಇಪ್ಪತ್ತೆಂಟು ಎಂಬ ಆಟ ಜನಪ್ರಿಯವಾಗಿತ್ತು.
ಪ್ರಾಯಕ್ಕೆ ಬರುತ್ತಿದ್ದಂತೆ ನಾನೂ ಈ ಆಟವನ್ನು ಕಲಿತುಕೊಂಡೆ. ಈ ಆಟದ ಪರಿಭಾಷೆ ತುಸು ವಿಚಿತ್ರವಾಗಿತ್ತು. ಸ್ಪೇಡು (‘ಇಸ್ಪೀಟು’), ಕ್ಲಾವರ್ (ಕಳಾವರ್), ಆಟೀನು, ಡೈಮನ್ (ಡಯಮಂಡ್) ಎಂಬ ನಾಲ್ಕು ಜಾತಿಯ ಎಲೆಗಳಿದ್ದುವು. ಇವಕ್ಕೆ ಇಂಗ್ಲಿಷಿನಲ್ಲಿ ಸ್ಪೇಡ್, ಕ್ಲಬ್, ಹಾರ್ಟ್, ಮತ್ತು ಡಯಮಂಡ್ ಎಂದು ಕರೆಯುತ್ತಾರೆ ಎನ್ನುವುದು ಮುಂದೆ ನನಗೆ ಗೊತ್ತಾಯಿತು. ರಾಜ, ರಾಣಿ, ಗುಲಾಮ (ಜ್ಯಾಕ್) ಇದ್ದರು; ಜೋಕರ್ ಇತ್ತು. (ಇಪ್ಪತ್ತೆಂಟರಲ್ಲಿ ಜೋಕರಿಗೆ ಏನೂ ಪಾತ್ರವಿರಲಿಲ್ಲ.) ಇವಕ್ಕೆಲ್ಲ ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರುಗಳಿವೆ ಎಂದುಕೊಳ್ಳುತ್ತೇನೆ.
ಈ ಹೆಸರುಗಳು ಹೇಗೆ ಕನ್ನಡೀಕರಣಗೊಂಡುವು ಎಂದು ನೋಡುವುದು ಕುತೂಹಲದ ಸಂಗತಿ. ಇವೆಲ್ಲವೂ ಚಿತ್ರಗಳಿಗೆ ಸಂಬಂಧಿಸಿದ ಹೆಸರುಗಳು. ಉದಾಹರಣೆಗೆ, ಸ್ಪೇಡ್ ಎನ್ನುವುದು ಹಾರೆ (ಕುಟ್ಟಾರೆ). (ವಾಸ್ತವದಲ್ಲಿ ಅದು ಅಶ್ವತ್ಥದ ಎಲೆಯನ್ನು ಹೆಚ್ಚು ಹೋಲುವುದು!) ಇಂಗ್ಲಿಷಿನ ಸ್ಪೇಡನ್ನ ಕನ್ನಡದಲ್ಲಿ ತತ್ಸಮವಾಗಿ ಸ್ಪೇಡು ಎಂದೇ ಕರೆಯುವುದರಲ್ಲಿ ಹೆಚ್ಚಿನ ಸ್ವಾರಸ್ಯವಿಲ್ಲ.
ಆದರೆ ಕ್ಲಬ್ ಹೇಗೆ ಕ್ಲಾವರ್ ಆಯಿತು? ಇದರ ಚಿತ್ರವನ್ನು ನೋಡಿದರೆ ಇದು ಮೂರೆಲೆ ಸಸ್ಯದಂತೆ ತೋರುವುದಿಲ್ಲವೇ? ಇಂಗ್ಲಿಷಿನಲ್ಲಿ ಈ ಸಸ್ಯಕ್ಕೆ ಕ್ಲೋವರ್ ಎಂದು ಕರೆಯುತ್ತಾರೆ. ಬಹುಶಃ ಕ್ಲೋವರಿನಿಂದ ಕ್ಲಾವರ್ ಬಂದಿರಬಹುದು ಎನ್ನುವುದು ನನ್ನ ಊಹೆ. ಕ್ಲಾವರಿನಿಂದ ಕಳಾವರ್! ಹಾರ್ಟಿನಿಂದ ಆಟೀನು (ಮಲೆಯಾಳಿಗಳು ‘ಆಡ್ಡನ್’ ಎನ್ನುತ್ತಾರೆ) ಹೇಗೆ ಬಂತೋ ಆಶ್ಚರ್ಯವಾಗುತ್ತದೆ.
ಇನ್ನು ಡಯಮಂಡ್ ಎಂದರೆ ವಜ್ರ; ಡಯಮಂಡಿನ ತದ್ಭವ ಡೈಮನ್. ಏಸ್ ಎನ್ನುವುದನ್ನು ಎಕ್ಕ ಅನ್ನುತ್ತಾರೆ (ಏಕದ ಒಂದು ರೂಪ). ಒಂಬತ್ತು ನಂಬರಿನ ಚೀಟಿಗೆ ನೈಲಾ (ಕೊನೆಯ ಸ್ವರ ಅನುನಾಸಿಕ) ಎನ್ನುವುದೂ ಇದೆ; ಇದು ಇಂಗ್ಲಿಷಿನ ನೈನ್ ಪದದಿಂದ ಬಂದುದು. ಅದೆಲ್ಲಾ ಆಯ್ತು, ಆದರೆ ‘ತುರುಫ್ ಅಥವಾ ತುರುಪು ಎನ್ನುವ ಒಂದು ವಿಚಿತ್ರ ಪದವಿದೆಯಲ್ಲ, ಅದು ಹೇಗೆ ಕನ್ನಡಕ್ಕೆ ಬಂತು?
ಇಂಗ್ಲಿಷಿನಲ್ಲಿ ಅದು ಟ್ರಂಪ್. ಟ್ರಂಪಿನಿಂದ ತುರುಫ್ ಬರುವುದು ದುರ್ಗಮವೇ ಸರಿ. ತುರುಪಿಗೆ ಕಿಟೆಲರು a troop ಎಂಬ ಮೂಲವನ್ನು ಕೊಡುತ್ತಾರೆ. ಎಂದರೆ ‘ದಂಡು’, ‘ಬಲ’ ಎಂಬಿತ್ಯಾದಿ ಅರ್ಥಗಳನ್ನು ಊಹಿಸಿಕೊಳ್ಳಬಹುದು. ಆಟಗಾರ ಒಂದು ಎಲೆಯನ್ನು ತುರುಫ್ ಆಗಿ ಆರಿಸಿಕೊಂಡರೆ ಅದರ ಇಡೀ ಜಾತಿಗೇ ಬಲ ಬಂದು ಬಿಡುತ್ತದೆ; ಉಳಿದ ಎದುರಾಳಿಗಳನ್ನು — ಅವು ಎಷ್ಟೇ ಪ್ರಬಲವಾಗಿದ್ದರೂ — ಅದು ಕಡಿದು ಹಾಕಬಲ್ಲುದು.
ಟ್ರೂಪಿನಿಂದ ತುರುಪು ತದ್ಭವಿಸುವುದು, ಅದರಿಂದ, ಒತ್ತಿಗೋಸ್ಕರ ತುರುಫ್ ಮೂಡಿಬರುವುದು ಸಹಜವೆನಿಸುತ್ತದೆ. ಆದರೆ ಈ ಟ್ರೂಪಿನ ಕಲ್ಪನೆ ಹೇಗೆ ಬಂತು ಎನ್ನುವುದು ತಿಳಿಯದು. ಬಹುಶಃ ಟ್ರಂಪ್ ಎಂಬುದನ್ನು ಟ್ರೂಪ್ ಎಂದು ತಪ್ಪಾಗಿ ಕೇಳಿಸಿಕೊಂಡುದರಿಂದ ಇರಬಹುದು. ಟ್ರಂಪ್ (trump) ಸ್ವತಃ ಟ್ರಯಂಫ್ (triumph ‘ಗೆಲುವು’) ಎಂಬುದರಿಂದ ಬದಲಾವಣೆಗೊಂಡು ಬಂದ ಪದ!
ಈಗ ಇಸ್ಪೀಟಾಟಕ್ಕೆ ಬರೋಣ.
ಈ ಆಟಕ್ಕೆ ಇಸ್ಪೀಟು ಎಂಬ ಹೆಸರು ಹೇಗೆ ಬಂತು?
ಈ ಬಗ್ಗೆ ನಾನು ಆಗಿನ ಕಾಲದಲ್ಲಿ ಯೋಚಿಸಿದವನೇ ಅಲ್ಲ. ಬಳಕೆದಾರರಿಗೆ ವಸ್ತು ಮುಖ್ಯವೇ ಹೊರತು ಅದರ ಹೆಸರಲ್ಲ. ಆದರೆ ನಾನು ಭಾಷೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿದಾಗ ಗೊತ್ತಾಯಿತು, ಇಸ್ಪೀಟು ಸ್ಪೇಡಿನದೇ ತದ್ಭವ ಎನ್ನುವುದು! ಇಲ್ಲಿ ಪದಾರಂಭದಲ್ಲಿ ಇಕಾರ ಬರುವುದು ಉಚ್ಚಾರಣೆಯ ಸೌಲಭ್ಯದ ದೃಷ್ಟಿಯಿಂದ. ಬರೇ ಸ್ಪೇಡ್ ಎನ್ನುವಾಗ ಆರಂಭದಲ್ಲಿ ಸಕಾರಕ್ಕೆ ಪಕಾರ ಸೇರಿ ಒಂದು ಸಂಯುಕ್ತಾಕ್ಷರ ಸೃಷ್ಟಿಯಾಗುತ್ತದೆ. ಅಭ್ಯಾಸವಿಲ್ಲದವರಿಗೆ ಇದು ಉಚ್ಚಾರಣೆಗೆ ತ್ರಾಸ (ಕೆಲವರ ಬಾಯಲ್ಲಿ ‘ಇತ್ರಾಸ’ ಅಥವಾ ‘ಅತ್ರಾಸ!’) ಕೊಡುತ್ತದೆ.
ಪದಾದಿಯಲ್ಲಿ ಇಕಾರ ಸೇರಿಸುವುದರ ಮೂಲಕ ಈ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ: ಇಸ್+ಪೀಟ್ ಎನ್ನುವುದು ಹೆಚ್ಚು ಸುಲಭ. ಸಕಾರ ಮೊದಲ ಭಾಗಕ್ಕೆ ಪಕಾರ ಎರಡನೆಯ ಭಾಗಕ್ಕೆ ಹಂಚಿಹೋಗುತ್ತವೆ. ಇದನ್ನು ರೂಢಿಸಿಕೊಂಡವರು ಗ್ರಾಮೀಣ ಜನರಿರಬೇಕು. ಅವರಲ್ಲಿ ಹಲವರು ಸ್ಕೂಲನ್ನು ‘ಇಸ್ಕೂಲ್’ ಎನ್ನುವುದೂ ಇದೇ ಕಾರಣಕ್ಕೆ. ಅವರ ಬಾಯಲ್ಲಿ ಇನ್ನೂ ಅನೇಕ ಇಂಗ್ಲಿಷ್ ಪದಗಳು ಹೀಗೆ ಜನರ ಬಾಯಲ್ಲಿ ರೂಪಾಂತರಗೊಳ್ಳುತ್ತವೆ. ಇಸ್ಟಾರ್ಟ್ (ಸ್ಟಾರ್ಟ್), ಇಸ್ಪೂನ್ (ಸ್ಪೂನ್), ಇಸ್ಮೈಲ್ (ಸ್ಮೈಲ್) ಮುಂತಾಗಿ.
ಇದರ ಹಿಂದಿರುವ ಪ್ರೇರಣೆಯೆಂದರೆ ಕನ್ನಡದ ದ್ರಾವಿಡ ಮೂಲದ ಜಾಯಮಾನ. ಕೆಲವು ಅಚ್ಚಗನ್ನಡ ಪ್ರತಿಪಾದಕರು ಅಂದುಕೊಂಡಿದ್ದಾರೆ, ಮಹಾಪ್ರಾಣ ಅಕ್ಷರಗಳನ್ನು ಕಿತ್ತುಹಾಕುವುದರಿಂದ ನಾವು ಅಚ್ಚಗನ್ನಡವನ್ನು ತಲಪುತ್ತೇವೆ ಎಂದು. ಅಚ್ಚಗನ್ನಡದಲ್ಲಿ ಪದಾದಿಯಲ್ಲಿ ಸಂಯುಕ್ತಾಕ್ಷರಗಳೇ (ಸಂಯುಕ್ತ ವ್ಯಂಜನಗಳು) ಇರಲಿಲ್ಲ ಎನ್ನುವುದನ್ನು ಅವರು ಮರೆತುಬಿಟ್ಟಿರುತ್ರಾರೆ. ಇಂದು ಹೆಚ್ಚಿನವರೂ ಬಳಸುವ ಪ್ರಿಯ, ಪ್ರೀತಿ, ಪ್ರಕಾಶ, ತ್ವರೆ, ತ್ಯಾಗ, ಕ್ರಯ, ಗ್ರಹ, ಜ್ಞಾನ ಎಲ್ಲವೂ ಸಂಸ್ಕೃತದಿಂದ ಬಂದುವು. ಪದಾದಿಯಲ್ಲಿ ಸಂಯುಕ್ತಾಕ್ಷರವಿದ್ದಲ್ಲಿ ಅದು ಅಚ್ಚಗನ್ನಡ ಮೂಲದ್ದು ಅಲ್ಲ ಎಂದು ಹೇಳಬಹುದು.
ಅಂಥ ಪದಗಳು ಒಂದೋ ಸಂಸ್ಕೃತದಿಂದ ಇಲ್ಲವೇ ಇಂಗ್ಲಿಷಿನಿಂದ ಬಂದವಾಗಿರುತ್ತವೆ. ಅಕ್ಷರವಂತರಲ್ಲದ ಗ್ರಾಮೀಣ ಜನರಲ್ಲಿ ಇನ್ನೂ ಅಚ್ಚಗನ್ನಡದ ಮೂಲ ಜಾಯಮಾನ ಇರುವುದರಿಂದ ಅವರು ಪದಾದಿಗೆ ಇಕಾರವನ್ನು ಸೇರಿಸಿ ಸಂಯುಕ್ತಾಕ್ಷರವನ್ನು ಒಡೆದು ಸರಳೀಕರಿಸಿ ಅಂಥ ಪದಗಳನ್ನು ಬಳಸುವುದನ್ನು ಕಾಣುತ್ತೇವೆ. (ಆದರೆ ಇಲ್ಲಿ ಒಂದು ಅಪವಾದವಿದೆ. ಕೆಲವೊಮ್ಮೆ ಮಾತಿನ ಶೈಲಿಯಲ್ಲಿ ಪೇಟೆ ಪ್ಯಾಟೆಯಾಗುತ್ತದೆ, ಬೇಡ ಬ್ಯಾಡವಾಗುತ್ತದೆ, ಬೇನೆ ಬ್ಯಾನೆಯಾಗುತ್ತದೆ. ಇದಕ್ಕೆ ಕಾರಣ ಸ್ವರಾದೇಶ: ಏ ಬದಲಿಗೆ ಆ ಬರುತ್ತಲೂ ಯಕಾರ ಆಗಮಿಸಿ ಸಂಯುಕ್ತಾಕ್ಷರ ಉಂಟಾಗುತ್ತದೆ. ಆದರೆ ಯಕಾರವೊಂದು ಅರ್ಧ ಸ್ವರವಾದ್ದರಿಂದ, ಇದು ಇತರ ರೀತಿಯ ಸಂಯುಕ್ತಾಕ್ಷರದಂತೆ ಇಲ್ಲ.)
ಈ ವಿದ್ಯಮಾನ ಕೇವಲ ಕನ್ನಡಕ್ಕೆ ಸೀಮಿತವಾದುದೂ ಅಲ್ಲ. ಪದಾದಿಯಲ್ಲಿ ಸಂಯುಕ್ತಾಕ್ಷರಗಳಿಲ್ಲದ ಯಾವುದೇ ಭಾಷೆಯನ್ನಾಡುವ ಜನ ಪದಾದಿಯಲ್ಲಿ ಸಂಯುಕ್ತಾಕ್ಷರಗಳಿರುವ ಪದಗಳಿಗೆ ತೆರೆದುಕೊಂಡಾಗಲೆಲ್ಲ ಇಂಥ ಸಾಧ್ಯತೆಯಿದೆ. ಅರೇಬಿಕ್ ಮತ್ತು ಜಪಾನೀ ಭಾಷೆಗಳು ಅಂಥವು.
ಸ್ಪ್ಯಾನಿಷ್ ಭಾಷೆ ಪದಾದಿಯಲ್ಲಿ ಕೆಲವು ಸಂಯುಕ್ತ ವ್ಯಂಜನಗಳನ್ನು ಮಾತ್ರ ಅನುಮತಿಸುತ್ತದೆ; ಉದಾಹರಣೆಗೆ, pl ಓಕೆ: playa “beach.” ಆದರೆ sp ಯನ್ನು ಪದಾದಿಯಲ್ಲಿ ಅನುಮತಿಸುವುದಿಲ್ಲ. ಆದ್ದರಿಂದ ಸ್ಪ್ಯಾನಿಷ್ ಭಾಷೆ ಅದನ್ನು ಮಾತಾಡುವವರಿಗೆ ಎಸ್ಪಾಞೋಲ್ ಆಗಿರುತ್ತದೆ, ಹಾಗೂ ಸ್ಪೈನ್ ಎಸ್ಪಾಞಾ ಎನಿಸುತ್ತದೆ. ಅವರು Sprite ಕುಡಿಯುವುದಿಲ್ಲ, Esprite ಕುಡಿಯುತ್ತಾರೆ!
ಆದರೆ ಇಸ್ಪೀಟಾಟಕ್ಕೆ ಆ ಹೆಸರೇ ಯಾಕೆ ಬಂತು ಎಂಬ ಪ್ರಶ್ನೆ ಉಳಿಯುತ್ತದೆ. ಯಾಕೆಂದರೆ ಸ್ಪೇಡಿನ ಚಿಹ್ನೆ ಇಡೀ ಆಟಕ್ಕೆ ಸಂಕೇತವೂ ಆಗಿದೆ. ಆದ್ದರಿಂದಲೇ ಇಸ್ಪೀಟ್ ಪ್ಯಾಕುಗಳ ಮೇಲೆ ಸ್ಪೇಡಿನ ಚಿತ್ರ ತಪ್ಪದೆ ಮುದ್ರಿತವಾಗಿರುವುದು.
ಥ್ಯಾಂಕ್ಸ್ ಜಯದೇವ ಅವರೇ!
ನಿಮಗೆ ಗೊತ್ತಿರಬಹುದು, 28ರ ಆಟಕ್ಕೆ ಆ ಹೆಸರು ಹೇಗೆ
ಬಂತು ಎನ್ನುವುದು.
ಗುಲಾಮನ ಬೆಲೆ 3
ಒಂಭತ್ತನೆ ನಂ. ಎಲೆಯ ಬೆಲೆ 2
ಹತ್ತನೆ ನಂ. ಎಲೆಯ ಬೆಲೆ 1
ಎಕ್ಕ ಅಥವಾ ಏಸ್ ನ ಬೆಲೆ 1
ಒಟ್ಟು ಬೆಲೆ 7
ನಾಲ್ಕೂ ಜಾತಿಯ ಎಲೆಗಳಲ್ಲಿ ಹೀಗೆ ಒಟ್ಟು 28 ಮೌಲ್ಯ. ಆಡುವುದು ಎರಡು ಪಾರ್ಟಿಯ ಜನರು,
ನಾಲ್ಕು ಮಂದಿ ಇಲ್ಲವೇ ಆರು ಮಂದಿ. ಕೈಗೆ ಬಂದ ಎಲೆಗಳ ಮೌಲ್ಯದ ಆಧಾರದ ಮೇಲೆ
ಪಾರ್ಟಿಯ ಯಾವನೇ ಆಟಗಾರ ಬಿಡ್ ಮಾಡಬಹುದು. ಬಿಡ್ದಿನ ಕನಿಷ್ಠ ಮೊತ್ತ 15 (28ರಲ್ಲಿ 15 ಗೆದ್ದರೆ
ಆಟ ಗೆದ್ದಂತೆಯೇ.) ಎದುರು ಪಾರ್ಟಿಯ ಯಾವನೇ ಆಟಗಾರ ಅದಕ್ಕಿಂತ ಹೆಚ್ಚು ಬಿಡ್ ಮಾಡಬಹುದು. ಯಾರೇ ಆದರೂ 20 ಬಿಡ್ ಮಾಡುವುದು ‘ಓಣೀಸ್’ ಎಂದು ಹೇಳಿಕೊಂಡು. ಓಣೀಸ್ ಎನ್ನುವುದು ಇಂಗ್ಲಿಷ್ ನ ‘ಆನರ್ಸ್’. ಈ ಆನರ್ಸ್ ಪದ ಬ್ರಿಜ್ ಮೊದಲಾಡ ಇಸ್ಪೀಟಾಟಗಳಲ್ಲಿ ಪ್ರಚಲಿತ. (ಆನರ್ಸನ್ನ ಓಣೀಸ್ ಮಾಡಿದ ನಮ್ಮ ಜನಕ್ಕೆ ತಲೆಬಾಗೋಣ!) ಇನ್ನು 24 ಇದಕ್ಕಿಂತ ಹೆಚ್ಚು ತಾನೆ?—ಅದಕ್ಕೆ ಸೀನಿಯರ್ ಎನ್ನುತ್ತಾರೆ. ಕೊನೆಯ ಬಿಡ್ ‘ಒಕ್ಕೈ’ — ಎಂದರೆ ಒಬ್ಬನೇ ಆಟಗಾರ (ತನ್ನ ಪಾರ್ಟಿಗಾಗಿ) ಪ್ರತಿಯೊಂದು ಸುತ್ತನ್ನೂ ಗೆಲ್ಲುವುದು—ಇದರಲ್ಲಿ ಒಟ್ಟು 24
ಸಿಕ್ಕದರೂ ಆಟ ಗೆದ್ದಂತೆಯೇ ಸರಿ.
ಕೆ. ವಿ. ತಿರುಮಲೇಶ್