ಈಗೇನಿದ್ದರೂ ‘Trance’

ಅಮಲ್ ನೀರದ್ ಅಂದಾಗ ಗುಂಯ್ ಅನ್ನುತ್ತದೆ ತಲೆ..

 ಗಣಪತಿ ದಿವಾಣ

ಅಮಲ್ ನೀರದ್ ಅಂದಾಗ ಗುಂಯ್ ಅನ್ನುತ್ತದೆ ತಲೆ. ಅದು ‘Iyobinte Pusthakam’ ಎಂಬ ಸಿನಿಮಾದ ಪ್ರಭಾವ. ಮತ್ತೀಗ ಹೊಸತಾದ ಸೇರ್ಪಡೆ ‘Trance!’

ಅದಕ್ಕೂ ಇದಕ್ಕೂ ಅಮಲ್ ನೀರದ್ ಸಿನಿಮಾಟೊಗ್ರಾಫರ್. ಅದರಲ್ಲೂ ಫಹಾದ್ ಫಾಸಿಲ್, ಚೆಂಬನ್ ವಿನೋದ್, ವಿನಾಯಕನ್ ಇದ್ದಾರೆ. ಇದರಲ್ಲೂ ಇದ್ದಾರೆ. ಎರಡು ಸಿನಿಮಾಗಳೂ 2.30 ಗಂಟೆಗೆ ಮಿಕ್ಕವು. ಎರಡರಲ್ಲೂ ಕಥೆಯ ಪೀಠಿಕೆ ದೊಡ್ಡದಾಗಿದೆ. ಅಂದರೆ, ಸಿನಿಮಾವು ತನ್ನ ಮುಖ್ಯ ವಿಷಯಕ್ಕೆ ಬರಲು ಸುಮಾರು ಇಪ್ಪತ್ತು ನಿಮಿಷದಿಂದ ಅರ್ಧ ಗಂಟೆ ತೆಗೆದುಕೊಂಡಿದೆ. ಹಾಗಂತ ಅದು ಬೇಕಾದ್ದೆ. ಎರಡೂ ಚಿತ್ರಗಳು ಹಿಡಿಸಿದ ಅಮಲು ಅಂಥದ್ದು ಎಂಬುದು ಬಿಟ್ಟರೆ ಮೇಲಿನ ಹೋಲಿಕೆಗೆ ವಿಶೇಷ ಕಾರಣವೇನೂ ಇಲ್ಲ!

Iyobinte Pusthakam, Trance ಹೊರತಾಗಿಯೂ ಇಷ್ಟವಾದ ಮಲಯಾಳಂ ಚಿತ್ರಗಳ ಪಟ್ಟಿ ದೊಡ್ಡದಿದೆ. ಆದರೆ ಈಗೇನಿದ್ದರೂ ‘Trance’ -ಚಿತ್ರದಲ್ಲಿ, ತನ್ನ ಕೊನೆಯ ಪ್ರದರ್ಶನಕ್ಕೆ ಓಡಿ ಬರುವ ಫಹಾದ್ ಫಾಸಿಲ್.. ಮತ್ತು ಕೊನೆಯ ದೃಶ್ಯದಲ್ಲಿ ಓಡಿ ಬರುವ ನಜ್ರಿಯಾ ನಜೀಮ್.. ಈ ಎರಡು slomoಗಳು ತಲೆಯಲ್ಲೇ ಅಡ್ಡಾಡುತ್ತಿವೆ.

ಶಬ್ದ ಬರದ ಫಹಾದ್ ನ ರಭಸದ ಚಪ್ಪಾಳೆ, ಉಸಿರಾಟದ ಏರಿಳಿತ, ನಿಧಾನಕ್ಕೆ ಮುಚ್ಚುವ ಕಣ್ಣು, ಕಣ್ಣ ಸುತ್ತಲಿನ ಕಪ್ಪು ವೃತ್ತ, ಹೆಚ್ಚೇ ಬೆಳೆದ ಗಡ್ಡ ಮತ್ತು ಕೂದಲು. ನೋಡುಗನಿಗೆ ಇವುಗಳ ಕಡೆಗೆ ಗಮನ ಹೋಗದೇ ಇರದು. ಕಿರುಚಿ, ಕೂಗಾಡುವ, ಭ್ರಮೆಯ ಹುಚ್ಚಾಟದ ನಡುವಿನ ಫಹಾದ್ ನ ಒಂದೊಂದು ನೋಟ, “ಈ ಹುಚ್ಚು ಯಾರಿಗೆ?” ಎಂಬ ಪ್ರಶ್ನೆ ಕೇಳಿದಂತಿದೆ.

ಆಟದಲ್ಲಿ ಪಳಗಿದವನೊಬ್ಬ, “ನಾನು ಸುಳ್ಳು ಸುಳ್ಳೇ ನಟಿಸುವುದು ನನಗೆ ಗೊತ್ತು. ಆದರೆ ಆಡಿಸುವವರಿಗಾಗಿ ಮತ್ತು ನೋಡುವವರಿಗಾಗಿ ಈ ಸುಳ್ಳಾಟವನ್ನು ಮುಂದುವರಿಸಿದ್ದೇನೆ” ಎಂದಂತೆ ಅವನ ಮುಖ ಕಂಡಿಲ್ಲವಾದರ ಹೇಳಿ. ಅಮ್ಮ, ಕೆಂಪು ಮೀನು, ಫ್ಯಾನು, ಗನ್ನಿನಲ್ಲಿ ಶೂಟ್ ಮಾಡುವ ತಮ್ಮನ ಆಟ, ಕಿಟಕಿ ಎಡೆಯಿಂದ ಹಾಕಿದ ಕೂಕಿಲು.. ಈ ಫ್ಲಾಶ್ ಕಟ್ ಗಳು ಸರಸರನೆ ಬಂದು ಹೋಗುವಾಗ ಐಸ್ ಕ್ರೀಮ್ ಮೇಲಿನ ಚೆರ್ರಿ ಹೆಕ್ಕಿ ತಿಂದ ಹಾಗೆ.

ಇನ್ನೂ ಏನೆಂದು ಹೇಳುವುದು?:
ಫಹಾದ್ ಮತ್ತು ನಜ್ರಿಯಾ ನಟಿಸಿದ ವೇದನೆ ಅಂತಹದು. ಪ್ರತೀ ಬಾರಿ ನಿಮ್ಮ ಕಷ್ಟ ದೂರ ಮಾಡುತ್ತೇನೆ ಎಂದು ಹೊರಟಾಗ ತನ್ನದೇ ಕಷ್ಟ ನೆನಪಿಸಿಕೊಳ್ಳುವ ಫಹಾದ್. ಅದನ್ನು ಮರೆತೇ ಬಿಟ್ಟಿದ್ದೇನೆ ಎಂದು ತೋರಿಸಿ ನಗುವ ನಜ್ರಿಯಾ. ಬಹುಶಃ ಅದು ನೋವಿನ ಶಕ್ತಿ ಮತ್ತು ಹೆಣ್ಣಿನ ಶಕ್ತಿ.

ವಿನಾಯಕನ್ ನಟಿಸಿದ ದುಃಖ ಅಂತಹದು. ಅವನು ಇನ್ನಿಲ್ಲದ ಮಗಳನ್ನು ಎತ್ತಿ ಓಡಿದ, ಮತ್ತೂ ಓಡಿದ.. ಚಿತ್ರದ ಈ ಭಾಗವಂತೂ ಒಮ್ಮೆ ನಮ್ಮ ಮೌಢ್ಯತೆಯ ಮೀಟರನ್ನು ಮುಟ್ಟಿ ನೋಡಿಕೊಳ್ಳುವಂತಿದೆ!

ಗೌತಮ್ ಮೆನನ್ ನಯವಾಗಿ ನಟಿಸಿದ ಹಣದ ದರ್ಪ ಅಂತಹದು. ಒಟ್ಟಾರೆ ಕಂಡ ಹಣದ, ಧರ್ಮದ ಅತಿ ಅಮಲಿನ ಆಳುತನ ಅಂತಹದು.

ಕೆಲವರಿಗೆ ಈ ಸಿನಿಮಾ, “ಒಂದು ಧರ್ಮದ ಬಣ್ಣ ಬಯಲು ಮಾಡಿದೆ” ಎಂದಷ್ಟೇ ಅನಿಸಿದೆ. ಅಂಥವರು ಸಿನಿಮಾ ನೋಡದಿದ್ದರೂ ಚೆನ್ನಾಗಿತ್ತು.

ಇನ್ನೊಂದೆಡೆ ಕೆಲವರಿಗೆ ಇದು ತಲೆನೋವು, ಹುಚ್ಚಾಟ ಅನಿಸಿರಬಹುದು, ಇಷ್ಟವಾಗದೇ ಹೋಗಿರಬಹುದು. ಕೆಲವರಿಗೆ ಸೆಕೆಂಡ್ ಹಾಫ್ ಲ್ಯಾಗ್ ಎಂಬ ಅಭಿಪ್ರಾಯವಿದೆ. ನನಗೆ ಹಾಗೇನೂ ಅನಿಸಿಲ್ಲ.

ಕಥೆಯ ಆಯ್ಕೆ, ಸಿನಿಮಾ ಮಾಡುವ ತೀರ್ಮಾನ ಮತ್ತು ಕಾಂಟ್ರವರ್ಸಿಗೆ ಅವಕಾಶ ಕೊಡದೆ ಅದನ್ನು ಪಳಗಿಸಿಕೊಂಡ ರೀತಿ ಶ್ಲಾಘನೀಯ. ಬರೆದ ವಿನ್ಸೆಂಟ್ ವಡೆಕ್ಕನ್ ಗೆ ಒಂದು ಚಪ್ಪಾಳೆ. ಅನ್ವರ್ ರಶೀದ್ ನಿರ್ಮಾಣ, ನಿರ್ದೇಶನ, ಜಾಕ್ಸನ್ ವಿಜಯನ್, ಸುಶಿನ್ ಶ್ಯಾಮ್ ಸಂಗೀತ, ಅಮಲ್ ನೀರದ್ ಕ್ಯಾಮರಾ ಕೆಲಸ, ಪ್ರವೀಣ್ ಪ್ರಭಾಕರ್ ಸಂಕಲನ ಎಲ್ಲವೂ ಕೂಡ ಅಷ್ಟು ಚೆನ್ನಾಗಿ ಹೊಂದಿಕೊಂಡಿದೆ. ಆರಿಸಿಕೊಂಡ ಲೊಕೇಷನ್, ಕಾಸ್ಟ್ಯೂಮ್ ಗಳು, ಕಲೆ.. ಸೂಕ್ತ ಮತ್ತು ಸುಂದರ. ರಿಚ್ ಅಂಡ್ ಬ್ಯೂಟಿಫುಲ್ ಅಂದರೆ ಹೆಚ್ಚು ಅರ್ಥವಾಗಬಹುದು.

ಏನೂ ಇಲ್ಲ ಅನ್ನುವುದಕ್ಕೆ, ನನಗೆ ಸೌಬಿನ್ ಶಾಹಿರ್ ಇಲ್ಲಿನ ಮ್ಯಾಥ್ಯೂ ಪಾತ್ರಕ್ಕೆ ಅಷ್ಟಾಗಿ ಹಿಡಿಸಲಿಲ್ಲ ಅನಿಸಿತು. ಇದೊಂದು ನೆಗೆಟಿವ್!

‍ಲೇಖಕರು nalike

May 14, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: