ಇಂದ್ರಕುಮಾರ್ ಎಚ್ ಬಿ
ಕಾದಂಬರಿ ಸಾಹಿತ್ಯ ಪ್ರಕಾರದಿಂದಲೆ ಸಾಹಿತ್ಯದ ಬಗೆಗೊಂದು ಗಂಭೀರ ಆಸ್ಥೆ ಬೆಳೆದಿದ್ದಿರಬೇಕು. ಚಿತ್ರದುರ್ಗದ ಕೃಷ್ಣರಾಜೇಂದ್ರ ಗ್ರಂಥಾಲಯ ಈ ತರಹದ ಹೊಸ ಯೋಚನೆಗಳ ತಾಣ. ಸಣ್ಣದೇಹದ ಮುಂದೆ ಪರ್ವತದಂತೆ ಬೆಳೆದು ನಿಂತ ಪುಸ್ತಕಗಳ ರಾಶಿ ನೋಡುವುದೇ ಹಬ್ಬ. ಏನೆಲ್ಲ ಇದೆ. ಎಷ್ಟೊಂದು ಇದೆ. ಎಲ್ಲ ತರಹದ ಪುಸ್ತಕಗಳನ್ನೂ ತೆಗೆದು ನೋಡಿ ತಿರುವಿ ಹಾಕಿ ಕೆಲವೊಂದರಲ್ಲಿ ಹೆಜ್ಜೆ ಇಟ್ಟು, ಹಲವುಗಳಲ್ಲಿ ಒಳಹೊಕ್ಕು, ಸಂಬ೦ಧ ಬೆಳೆಸಿದ್ದೆ. ಅದೊಂದು ಘಟ್ಟ.
ಪತ್ರಿಕೆಗಳಲ್ಲಿ ಕಥೆಗಳು ಪ್ರಕಟಗೊಳ್ಳತೊಡಗಿದ ಮೇಲೆ ಮೂಡಿದ ವಿಶ್ವಾಸ ಹೊಸಹೊಸ ಕಥನದ ಮಾದರಿಗಳನ್ನು ದಾರಿಗಳನ್ನು ತಡವುವಂತೆ ಕ್ರಮಿಸುವಂತೆ ಮಾಡಿತು. ಬಹಳಷ್ಟು ಬರೆದೆ. ಎಲ್ಲ ಪ್ರಕಾರಗಳಲ್ಲೂ ಬರೆದೆ. ಇಲ್ಲದ ಲೋಕವನ್ನು ಹುಟ್ಟಿಸಿ ಅದನ್ನು ಇದೆಯನ್ನಾಗಿಸುತ್ತ ಅದನ್ನೆ ಪದೆ ಪದೆ ಮಾಡುತ್ತ ಅದರೊಳಗೆ ನನ್ನ ಒಳಗನ್ನು ಕಂಡುಕೊಳ್ಳುತ್ತ ಸಾಗಿದೆ. ಈ ಸಮಯದಲ್ಲಿ ಪದವಿ ಕಾರಣದ ಸಾಹಿತ್ಯಿಕ ಓದು, ಒಳ್ಳೆಯ ಮಾರ್ಗವನ್ನು ಶುರುಮಾಡಿ ಕೊಟ್ಟಿತೆಂಬ೦ತೆ ಜಾಗತಿಕ ಸಾಹಿತ್ಯದ ಮಹನೀಯರು ಮನಸ್ಸಿನಲ್ಲಿ ಉಳಿದುಕೊಂಡರು. ಇದೊಂದು ಘಟ್ಟ.
ಬದುಕಿನ ಓಟದ ದಣವು ಅನಿರೀಕ್ಷಿತ ತಿರುವುಗಳ ಹೊಡೆತ ಅನಾರೋಗ್ಯದ ಕಾಲ್ತುಳಿತದಿಂದ ಸಾಹಿತ್ಯದ ಆಸೆಯನ್ನು ಆಸರೆಯನ್ನು ಬಿಟ್ಟುಬಿಡುವ ತುರ್ತಿನ ನಡುವೆ ಅದೇ ಮುಖ್ಯವಾಗಿ ಮೂಡಿ ಬಂದ ಈ ಕಾಲವೊಂದು ಘಟ್ಟ. ಬಹುಮುಖ್ಯ ಘಟ್ಟ. ಬರೆಸಿಕೊಳ್ಳುತ್ತಿದೆ ಬದುಕು. ಉಸಿರಾಡುತ್ತಿದೆ ಸಾಹಿತ್ಯ ಒಳಗಿನ ಎಲ್ಲ ಜೀವಕೋಶಗಳ ಶಕ್ತಿ ಕೇಂದ್ರವಾಗಿ. ಹೊಸ ಕಾದಂಬರಿ ಬರೆದಿರುವೆ ನಿಮಗಾಗಿ. ಓದಿ. ಇಲ್ಲೊಂದು ಬದುಕು. ಇಲ್ಲೊಂದು ಚಿಗುರು. ಹೀಗೊಂದು ಲೋಕ. ಇಷ್ಟವಾದೀತು.

ಅಭಿನಂದನೆಗಳು ಸರ್