ಇಷ್ಟು ಸಾಕಲ್ಲವೆ ಕಾಯ್ಕಿಣಿ ಆಸಕ್ತರಿಗೆ!!

‘ಅಂಕಿತ’ ಹೊರ ತಂದಿರುವ ಜಯಂತ್ ಕಾಯ್ಕಿಣಿಯವರ ‘ಗುಲ್ ಮೊಹರ್’ ಮತ್ತು ‘ರೂಪಾಂತರ ನಾಟಕಗಳು’ ಕೃತಿಗಳು ಬೆಂಗಳೂರಿನಲ್ಲಿ ಬಿಡುಗಡೆಯಾಯಿತು.  ಲೇಖಕಿ ಗೀತಾ ಹೆಗ್ಡೆ ಕಲ್ಮನೆ ಈ ಸಮಾರಂಭವನ್ನು ಕಂಡ ಬಗೆ ಇಲ್ಲಿದೆ –

ನಾನು ಸಭಾಂಗಣದಲ್ಲಿ ಕಾಲಿಟ್ಟು ಮೊದಲು ಮಾಡಿದ್ದು ನನ್ನ ನೆಚ್ಚಿನ ಸಾಹಿತಿಗೆ ನಮಸ್ಕಾರ. ಅವರಿಂದ ಆಲಿಂಗನದ ಪ್ರೀತಿಯ ಸ್ವಾಗತ. 2013ರ ನಂತರ ಮೊದಲ ಬಾರಿ ಕಂಡೆ. ಬಹಳ ಖುಷಿ ತರಿಸಿತು. ಗಡಿಬಿಡಿಯಲ್ಲಿ ಕೂಡಾ ಒಂದೆರಡು ಮಾತಾಡಿ, ಹೋಗುವಾಗ ಸಿಕ್ಕು ‘ನಿಮ್ಮ ದೂರವಾಣಿ ನಂಬರ್  ಕೊಡಿ’ ಅಂದು ಮತ್ತೆಲ್ಲೊ ಮಾಯ.

ಕಿಕ್ಕಿರಿದ ಸಭಾಂಗಣ.  ಅವನಿ ಉಡುಪ ಮಹಾತ್ಮಾ ಗಾಂಧೀಜಿಯವರ ಅತ್ಯಂತ ಪ್ರೀತಿಯ ಹಾಡು ‘ವೈಷ್ಣವ ಜನತೋ’ದ ಅನುವಾದ.. ಜಯಂತವರು ಮಾಡಿದ್ದು.. ‘ಎಲ್ಲರ ನೋವನು ಬಲ್ಲವನಾದರೆ..’ ಸುಶ್ರಾವ್ಯವಾದ ಹಾಡಿನೊಂದಿಗೆ ಕಾರ್ಯಕ್ರಮ ಶುರುಮಾಡಿದರು.

ಇತ್ತೀಚೆಗೆ ನಿಧನರಾದ ರಾವ್ ಬೈಲ್ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಆದ ಮೇಲೆ ಅವರ ಕುಟುಂಬಕ್ಕೆ ಗೌರವ ಸಲ್ಲಿಸಲಾಯಿತು. ನಂತರ ಪುಸ್ತಕ ಬಿಡುಗಡೆ.

ಅಧ್ಯಕ್ಷತೆ ವಹಿಸಿದ್ದ ಕೆ.ಪಿ.ರಾವ್ ರವರು ಮಾತನಾಡುತ್ತ ಓದು ಮೊದಲೋ, ಬರಹ ಮೊದಲೋ? ಓದು ಮೊದಲು ಎಂದು ನನ್ನ ಅಭಿಪ್ರಾಯ. ಉದಾ: ಪ್ರಾಣಿಗಳ ಹೆಜ್ಜೆಯನ್ನು ಗುರುತಿಸುತ್ತ ಓದಿನತ್ತ ಮನುಷ್ಯನ ಮನಸ್ಸು ವಾಲಿರಬಹುದು. ಭಾಷೆಗೆ ಅಮರತ್ವ ಇಲ್ಲ, ಆದರೆ ಬರಹಕ್ಕೆ ಅಮರತ್ವ ಇದೆ. ಅಕ್ಷರಗಳಿಂದ ಅಮರತ್ವ ಸಾಧಿಸಬಹುದು. ಅದು ನಮ್ಮ ನಂತರವೂ ಜನಮಾನಸದಲ್ಲಿ ಉಳಿಯುವಂಥಹುದು. ನೀವೆಲ್ಲರೂ ಒಂದು ವಿಲ್ಲಾದರೂ ಬರೀರಿ. ಅಲ್ಲಿ ನನ್ನ ಹೆಸರಿರಲಿ ಎನ್ನುತ್ತ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು.

ಚಿತ್ರ: ಸೃಜನಾ ಕಾಯ್ಕಿಣಿ

ಭಾಷಣ ಮುಗಿಸಿ ಕುಳಿತಾಗ ಜಯಂತರು “ನೀವು ಬೇಂದ್ರೆ, ಅರವಿಂದರವರೊಂದಿಗಿನ ಒಡನಾಟದ ಬಗ್ಗೆ ಸ್ವಲ್ಪ ಹೇಳಿ, ಆದರೆ ನಿಮ್ಮ ಒಡನಾಟದವರ ಬಗ್ಗೆ ಹೇಳುವುದು ಬೇಡಾ” ಅಂದು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು.

ಮುಖ್ಯ ಅತಿಥಿಗಳಾಗಿ ಕೆ.ಎನ್ ಗಣೇಶಯ್ಯನವರು ಮಾತನಾಡುತ್ತ ‘ಮೈಸೂರು ಮಲ್ಲಿಗೆ’ ನಂತರ ಕರ್ನಾಟಕದ ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿರುವ ಏಕೈಕ ಪ್ರೇಮ ಕವಿ, ನಮ್ಮನ್ನು ತಮ್ಮ ಕವಿತೆಯಲ್ಲಿ ಮಗ್ನಗೊಳಿಸುವ ನಡೆದಾಡುವ ಸಾಹಿತ್ಯದ ಹಾವಾಡಿಗ ಅಂದರೆ ಜಯಂತರು ಎಂದಾಗ ಸಭಿಕರಿಂದ ಜೋರಾದ ಕರತಾಡನ.

ಜಯಂತ ಕಾಯ್ಕಿಣಿಯವರು ಮಾತನಾಡುತ್ತ  ರಾವ್ ಬೈಲ್ ರವರ ಜೊತೆಗಿನ ತಮ್ಮ ಅನುಭವಗಳನ್ನು ಹಂಚಿಕೊಂಡರು.  ಇದುವರೆಗಿನ ತಮ್ಮ ಸಾಹಿತ್ಯದ ಓಟ, ಅಗಲಿದ ಸಾಹಿತ್ಯದ ಒಡನಾಡಿಗಳು, ವಿವಾಹ ಪೂರ್ವದ ಬದುಕು ಆ ನಂತರದ ಕೆಲವು ವಿಷಯಗಳ ಹಾಸ್ಯ ಪ್ರಸಂಗಗಳನ್ನು ತಮ್ಮದೇ ವೈಖರಿಯಲ್ಲಿ ಮುಂದುವರಿಸಿದರು.

ತಮ್ಮ ಪುಸ್ತಕದ ಕುರಿತಾಗಿ ವಿವರಣೆ ನೀಡುತ್ತ “ನನ್ನ ಒಳಪುಟ ಒಂದು ಬನಿಯನ್ ಅಂತೆ. ಅಂದರೆ ಟಿಪ್ ಟಾಪಾಗಿರೊ ಒಬ್ಬ ಮನುಷ್ಯನ ಒಳ ಬನಿಯನ್ ಒಂದು ಚೂರು ಕಂಡರೆ ಇವನೊಬ್ಬ ನಮ್ಮಂತೆ ಸಾಮಾನ್ಯ ಮನುಷ್ಯ ಅಂತ ಸಮಾಧಾನಪಟ್ಟುಕೊಳ್ಳುವಂತೆ ನನ್ನ ಪುಸ್ತಕ ಕೂಡಾ.  ಗಂಗಾದರ ಚಿತ್ತಾಲರವರು ಬರೆದ “ಗುಲ್ ಮೊಹರ್ “ಕವನ ಮೆಚ್ಚಿ ಮುಂಬೈ ನಗರದಲ್ಲಿ ಆ ಕೆಂಪು ಹೂಗಳನ್ನು ಕಂಡಾಗಿನ ಖುಷಿ ನಾನು ನನ್ನ ಪುಸ್ತಕಕ್ಕೆ ಇದೇ ಹೆಸರಿಡಲು ಕಾರಣ” ಎನ್ನುತ್ತ ತಮ್ಮ ಮುಂಬೈ ವಾಸದ ದಿನಗಳನ್ನು ನೆನಪಿಸಿಕೊಂಡರು.

“ನೀವು ಆಗಷ್ಟೆ ಹೊಸದಾಗಿ ಬಂದ ಪತ್ರಗಳನ್ನು ಓದುವಾಗ ಹೇಗೆ ಓದುತ್ತೀರಿ, ಹಾಗೆ ಓದಿ” ಎಂದು ನಾಟಕವನ್ನು ಸವಿಯುವ ಬಗೆ ಹೇಗೆ ಎನ್ನುವ ಗುಟ್ಟು ಬಿಟ್ಟುಕೊಟ್ಟರು.  ಹೊರಗಡೆ ಕೇಟರಿಂಗ್ ನಲ್ಲಿ ನಿಂತಾಗ ನನ್ನ ಗಮನಕ್ಕೆ ಬಂದಿರುವುದು ಚಟ್ನಿಯನ್ನು ರುಬ್ಬುವ ಆ ಒರಳು.  ಚಟ್ನಿ ಹೊರಗೆ ಬಂದಂತೆಲ್ಲ ಅದನ್ನು ಒಳಗೆ ತಳ್ಳಿ ತಳ್ಳಿ ನುಣ್ಣಗೆ ಮಾಡುವಂತೆ ಈ ಸಾಹಿತ್ಯ ಕೂಡಾ.  ಅಲ್ಲಿ ಒಂದು ಕರಟ ಇರುತ್ತದೆ ನೋಡಿದ್ರಾ  ಅದನ್ನು ದಿನಾ ಬಳಸಿ ಬಳಸಿ ಹೇಗೆ ನುಣ್ಣಗೆ ಆಗಿರುತ್ತದೆ. ಹಾಗೆ ನಮ್ಮ ಸಾಹಿತ್ಯ ಪಳಗಬೇಕು.”

ಅವರು ಮಾತಾಡುತ್ತಿರುವ ಅಷ್ಟು ಹೊತ್ತೂ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ. ಕಾರ್ಯಕ್ರಮದ ಕೊನೆಯಲ್ಲಿ ಪ್ರತಿಯೊಬ್ಬರನ್ನೂ ಸ್ಮರಿಸುತ್ತ ‘ಅಂಕಿತ’ದಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿಗಳನ್ನೊಳಗೊಂಡು ಎಲ್ಲರಿಗೂ ತಮ್ಮ ಕೃತಜ್ಞತೆ ಹೇಳಿರುವುದು ಜಯಂತರವರ  ನಿಷ್ಕಲ್ಮಶ ಮನಸ್ಸು ಸಿಂಪ್ಲಿಸಿಟಿಗೆ ಹಿಡಿದ ಕನ್ನಡಿ.

ಹೊರಡುವಾಗ ಬಹುತೇಕ ಮಂದಿಗೆ ಅವರ ಹಸ್ತಾಕ್ಷರ, ಸೆಲ್ಫಿ ತೆಗೆಸಿಕೊಂಡು ಕೈ ಕುಲುಕುವ ಧಾವಂತ.  ಅದರಲ್ಲಿ ನಾನೂ ಸೇರಿ ಒಂದೆರಡು ಮಾತಾಡಿ ಹೊರಟಾಗ ಇಡೀ ದಿನ ಖುಷಿಯ ಗಳಿಗೆ. ಇಷ್ಟು ಸಾಕಲ್ಲವೆ ಸಾಹಿತ್ಯಾಸಕ್ತರಿಗೆ!!

‍ಲೇಖಕರು avadhi

April 23, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: