ಇವರ ಹಿಂದೆ ಬಿದ್ದು ಕಾನನದ ಉಸಿರಾದೆವು

ಗೀತಾ ನಾರಾಯಣ್

**

ನಾಲ್ಕು ಗೋಡೆಯದೇ ಶಾಲೆ

ಊಟದ ಕಾಲಕ್ಕೆ ಗಂಟೆ ಸದ್ದು ಕೇಳಿ

ನಮ್ಮ ಹೆಜ್ಜೆಗಳು ಕಲ್ಲುಹೊಲದ ತುಂಬಾ

ಹರಡಿ

ತೂಬ್ರೇ ಮರದಡಿ ಕಣ್ಣಾಗುತ್ತಿದ್ದ ಸಡಗರವ

ನನ್ನ ಗುರು ಪ್ರಶ್ನಿಸಲೇ ಇಲ್ಲ

ಗೊಳ್ಳೆ, ಹಣ್ಣು, ದ್ವಾರ್ಗಾಯಿ ಎಲ್ಲವೂ

ಸಮವಸ್ತ್ರದ ಮಡಿಲಿಗೆ ಬಿದ್ದು

ಕರೆಬಿದ್ದರೇನು ನಮಗೆ ಕಳವಳ ಇಲ್ಲ

ಸಮಯ ಮೀರಿ ಶಾಲೆಬಾಗಿಲಲಿ ನಿಂತರೂ

ಕೋಲು ನಮ್ಮ ಕೈಯ್ಯನ್ನು ಕೆಣಕಲಿಲ್ಲ

ಸಂಜೆ ಶಾಲೆ ಬಿಟ್ಟಿತೋ? ಸೀದಾ ಕಟ್ಟೆದಂಡೆ

ಯಾರ ಅಪ್ಪ ಅಮ್ಮಂದಿರು ದೂರಿಡಿದು

ಮೇಷ್ಟ್ರು ಬಳಿ ಬರಲೇ ಇಲ್ಲ

ದಾರಿ ಕಾಣದ ಹೊತ್ತಿಗೆ ದನಗಳ ಜೊತೆ ಬಿದ್ದು

ಕಟ್ಟೆಯ ದೋರಿನ ಏಡಿಗಳ ಕೆಂಡಕೆಸೆಯುವ

ತವಕ

ಮರುದಿನ ಊರಿಗೆಲ್ಲ ಕೇಳುವ ಗಂಟೆ ಶಬ್ದ

ನಮಗೆ ಕೇಳಿದರೇನು ಬಂತು

ಕಾರೆಕೆಂಗು ಬಿಡಿಸಲು ಗಿಡದ

ಸಾಲಿಡಿದಿರುತ್ತಿದ್ದೆವು

ಹೆಚ್ಚು ಶಿಕ್ಷೆ ಎಂದರೆ ನಮ್ಮ ಮೇಷ್ಟ್ರ

ಒಂದೇಟು

ಕಲಿತೋ ಕಲಿಯದೆಯೋ ಊರು ಮೂರು

ಸುತ್ತು

ಪಾಠದಲ್ಲಿ ಬಂದ ರಾಮಸೀತೆಯರು

ಯಾವ ಅರಮನೆಗೂ ಸೇರಿದವರಲ್ಲ

ನಮ್ಮೂರಿನ ಮುಂಗಾರು ಗುಡ್ಡದ ಬಡ್ಡೆಯ

ಕಿರು ಅಡವಿಯಲ್ಲಿ ಅಲೆಯುತ್ತ ಬದುಕಿದರು

ಇವರ ಹಿಂದೆ ಬಿದ್ದು ಕಾನನದ ಉಸಿರಾದೆವು

ನಮ್ಮೂರಿನ ಭೂತರಾಯ ಅರಳಿ ಹಣ್ಣು

ಕೋಳಿಬಾಡು ತಳ್ಗೆ ಅನ್ನ ಚಟ್ನಿ

ಕೊಟ್ಟುಕೊಂಡು

ಊರ್ ಮಕ್ಳುನ್ನೆಲ್ಲ ಕಾದೇ ಕಾದ

ನಮ್ಮ ಮೇಷ್ಟ್ರು ಇವೆಲ್ಲ ಕಾರಣ ಹಿಡಿದು

ನಮ್ಮನ್ನೆಂದೂ ಬಡಿಯಲಿಲ್ಲ ಬೈಯ್ಯಲಿಲ್ಲ

ಜುಂಜಪ್ಪನ ಪರ್ಸೆ ಬಂದೇಬಿಡ್ತು

ಊರಿನೊಕ್ಲೆಲ್ಲ ಹಾದಿ ಹಿಂದೆ ಅಳ್ಳಿಡಿದು

ಸಾಗುವಾಗ

ನಾವೇನು ಶಾಲೆಗೆ ಮುಖ ತೋರಿದ್ವ!? ಇಲ್ಲೇ

ಇಲ್ಲ

ಜುಂಜಪ್ಪನ ಪಾದುದ್ ಗೋವಿಂದ

ಗೋವಿಂದಾ

ಅಂದ್ಕಂಡು ಗುಡಿ ಮುಂದೆ ಅಡ್ಬಿದ್ದಿದ್ದೇ

ಬಿದ್ದಿದ್ದು

ನಮಗೆ ಶಾಲೆ ಎಂದರೆ ಮೇಷ್ಟ್ರು ಭಯ ಅಲ್ಲ

ತೂಬ್ರೇ, ಬಿಕ್ಕೆ, ಏಡಿ, ಪರ್ಸ, ಊರ ಜಗಳ

ಕಾರೇ, ನೇರ್ಲ, ಮಡ್ಗು, ಈಜು, ಆಗಾಗ

ಒಂದೋ ಎರಡೋ ಒದೆ. ಕರ ಕುರಿ ಹಸಗಳ

ಹಿಂದೆ ಬಿದ್ದು ಅಡವಿಯಲ್ಲಿ ಅಲೆಯುವ

ಸಹಜತೆ

ನಮ್ಮ ಮೇಷ್ಟ್ರು, ನಮ್ಮೂರು ನಮ್ಮಪ್ಪ

ನಮ್ಮಮ್ಮನ

ತುಸು ವಿರೋಧ ಅಗಾಧ ಪ್ರೀತಿ ನಮಗೆಲ್ಲ

ಬೆರಗುಗಳನ್ನು ಕಾಣಲು ಬಿಟ್ಟಿದ್ದಕ್ಕೆ

ಈಗ ನಾವು ನಗುವುದು ಅಳುವುದು ಕಲಿತು

ಗಿಡ ಗುಡ್ಡ ಕಟ್ಟೆ ಮಡುಗು ಶಾಲೆಗಳಿಗೆ

ಮೆತ್ಕಂಡಿದೀವಿ.

ನಾವು ನಾವಾಗಿ ಬೆಳೆಯಲು ಬಿಟ್ಟ ಎಲ್ಲಾ

ಗುರುಗಳಿಗೂ ಶರಣು.

‍ಲೇಖಕರು Admin MM

July 24, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Prasanna

    ಗೀತಾ ನಾರಾಯಣ ಮೇಡಂ ಅವರ ಇವರ ಹಿಂದೆ ಬಿದ್ದು ಕಾನನದ ಉಸಿರಾದೇವು ಕವನ ಬಹುಷಃ ಗ್ರಾಮೀಣ ಪ್ರದೇಶದ ಮಕ್ಕಳೆಲ್ಲರ ಮನಸ್ಸಿನ ಪ್ರತಿಬಿಂಬ ಎಂದರೆ ತಪ್ಪಾಗಲಾರದು, ಏಕೆಂದರೆ ಈಗಿನ ಮಕ್ಕಳ ಹೋಂ ವರ್ಕ್, ಪ್ರಾಜೆಕ್ಟ್ ವರ್ಕ್ ಗಳ ಒತ್ತಡ, ರಾಂಕ್ ತೆಗೆಯಲೇಬೇಕೆಂಬ ಪೋಷಕರ ಒತ್ತಡ ಇವುಗಳ ನಡುವೆ ನಲುಗಿ ಹೋಗಿರುವ ನಗರ ಪ್ರದೇಶದ ಮಕ್ಕಳಿಗೆ ಇದೆಲ್ಲಾ ಆಶ್ಚರ್ಯದ ಸಂಗತಿ. ಬಾಲ್ಯದ ಹಳೆಯ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿದ ಕವನ, ಇದಕ್ಕೆ ಗೀತಾ ನಾರಾಯಣ ಮೇಡಂ ಪ್ರಶಂಸಾರ್ಹರು.

    ಪ್ರತಿಕ್ರಿಯೆ
    • Prasanna

      Prasanna on July 27, 2024 at 1:32 PM

      ಗೀತಾ ನಾರಾಯಣ ಮೇಡಂ ಅವರ ಇವರ ಹಿಂದೆ ಬಿದ್ದು ಕಾನನದ ಉಸಿರಾದೇವು ಕವನ ಬಹುಷಃ ಗ್ರಾಮೀಣ ಪ್ರದೇಶದ ಮಕ್ಕಳೆಲ್ಲರ ಮನಸ್ಸಿನ ಪ್ರತಿಬಿಂಬ ಎಂದರೆ ತಪ್ಪಾಗಲಾರದು, ಏಕೆಂದರೆ ಈಗಿನ ಮಕ್ಕಳ ಹೋಂ ವರ್ಕ್, ಪ್ರಾಜೆಕ್ಟ್ ವರ್ಕ್ ಗಳ ಒತ್ತಡ, ರಾಂಕ್ ತೆಗೆಯಲೇಬೇಕೆಂಬ ಪೋಷಕರ ಒತ್ತಡ ಇವುಗಳ ನಡುವೆ ನಲುಗಿ ಹೋಗಿರುವ ನಗರ ಪ್ರದೇಶದ ಮಕ್ಕಳಿಗೆ ಇದೆಲ್ಲಾ ಆಶ್ಚರ್ಯದ ಸಂಗತಿ. ಬಾಲ್ಯದ ಹಳೆಯ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿದ ಕವನ, ಇದಕ್ಕೆ ಗೀತಾ ನಾರಾಯಣ ಮೇಡಂ ಪ್ರಶಂಸಾರ್ಹರು.

      ಪ್ರತಿಕ್ರಿಯೆ
      • ಗೀತಾ ಎನ್ ಸ್ವಾಮಿ

        ಧನ್ಯವಾದಗಳು ಪ್ರಸನ್ನ ಸರ್.

        ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: