ಬಿ ಎಸ್ ದಿನಮಣಿ
**
ನೆತ್ತಿಗೇರಿದ ಕಡುಕೋಪ
ಇನ್ನೇನು ಸ್ಫೋಟಿಸಿ
ಅನಾಹುತವಾಗಬೇಕು
ಪ್ರೀತಿಸುವ ಜೀವದ ಸಣ್ಣ ಒಂದು ಮುತ್ತು
ಅದನ್ನು ಜರ್ರನೆ ಇಳಿಸಿಬಿಡಬಹುದಾದರೆ
ಕಾದು ಕೆಂಡವಾದ ಭೂಮಿ
ಇನ್ನೇನು ಕಂಪಿಸಿ
ಬಿರುಕು ಬಿಡಬೇಕು
ಮೇಘ ಸುರಿಸುವ ಸಣ್ಣದೊಂದು ಮಳೆ
ಇಳೆಯ ಬೆಂಕಿಯನು ತಣಿಸಿಬಿಡಬಹುದಾದರೆ
ಕ್ರೋಧ ಉಕ್ಕಿಸುವ ಹಸಿವು
ಇನ್ನೇನು ಮಿತಿಮೀರಿ
ಎದುರಿಗಿದ್ದವರ ನುಂಗಿಬಿಡಬೇಕು
ತಟ್ಟಿಸಿಕೊಂಡು ಮೈ ಸುಟ್ಟ ಸಣ್ಣದೊಂದು ರೊಟ್ಟಿ
ಹಸಿದ ಹೊಟ್ಟೆಯ ಸಂತೈಸಿಬಿಡಬಹುದಾದರೆ
ಸಣ್ಣದರ ಶಕ್ತಿಯೇ ಬಲು ದೊಡ್ಡದು..
ಸಣ್ಣದೆಂದು ಯಾವುದನೂ
ಉದಾಸೀನ ಮಾಡಲಾಗದು
ಸಣ್ಣದೊಂದು ಅನುಮಾನ
ಸಂಬಂಧಗಳ ಕೊಲ್ಲಬಹುದು
ಸಣ್ಣದೊಂದು ತಾತ್ಸಾರ
ಸಂಸಾರವ ಮುರಿಯಬಹುದು
ಸಣ್ಣದೊಂದು ಬೆಂಕಿಕಿಡಿ
ಕಾಳ್ಗಿಚ್ಚನೆ ತರಬಹುದು
ಸಣ್ಣದರ ಶಕ್ತಿಯೇ ಬಲು ದೊಡ್ಡದು..
ಸಣ್ಣದೊಂದು ಹೊಂದಿಕೆ
ಬದುಕ ಹಸನಾಗಿಸಬಲ್ಲದು
0 ಪ್ರತಿಕ್ರಿಯೆಗಳು