ಶಾಂತಿ ಕೆ ಅಪ್ಪಣ್ಣ
ಹೊಳೆದು ಸುಮ್ಮನಾಗುವ
ಬೀದಿ ದೀಪ
ಧೋ ಮಳೆಯಲಿ ಮೀಯುವ
ಕಡುಗಪ್ಪು ರಾತ್ರಿಯನು
ಕದ್ದು ನೋಡುವ ಕೋಲ್ಮಿಂಚು …
ಅಮ್ಮನ ಮಡಿಲೊಳಗೆ
ಬೆದರಿದ ಮಗು
ಗುಡುಗುವ ಮೋಡಕ್ಕೆ ಅದೇನೋ ಕೋಪ
ಸುತ್ತ ಕೆನ್ನೀರ ಹೊಳೆ ..
ಕೊಳಕು ಮೋರಿಯ ನಾತ
ಸೋರುವ ಫ್ಲೈ ಓವರಿನ ಕೆಳಗೆ
ನಡುಗುತ್ತ ಕುಳಿತ ಮಂದಿ …
ನೀರೆರಚುತ್ತ ನಡೆವ ಕಾರು ಲಾರಿಯ ಧಾಳಿ
ಗಾಳಿಗೂ ಚೆಲ್ಲಾಟ ..,
ಆಡುತ್ತಿದೆ ಹೋಳಿ . .
ಕೊರೆವ ಚಳಿ ತಡೆಯದ
ಹರಿದ ಕಂಬಳಿ ಹೊದಿಕೆ
ಇಳಿಸಿಕೊಂಡ ಸಾರಾಯಿಯ ಬಿಸಿಗೆ
ಒಳಗೆ ನಗುವ ದೇವರು
ಕವಳ ಜಗಿದುಗಿಯುವ
ಅರೆ ಬೊಚ್ಚು ಮುದುಕಿ ..
ಅಳುತ್ತದೆ ಮಗು
ಹಾಲಿಲ್ಲದ ಮೊಲೆಯ ತಡಕಿ
ಎಲ್ಲ ನೆನೆಯುತ್ತಿದೆ ..
ಪಾತ್ರೆ ಪರಡಿ ,ಹೂ ಹಣ್ಣಿನ ತಳ್ಳುಗಾಡಿ
ಮುಚ್ಚಿದ್ದ ಟಾರ್ಪಾಲು ..
ಕೆಲಸ ಮರೆತಿದೆ .. ಗಾಳಿಯ ಕೈ ಸೇರಿ
ನಡುನಡುವೆ ಮುಖ ನೆಕ್ಕುವ
ಹೆಡ್ ಲೈಟಿನ ಬೆಳಕಿಗೆ ..
ಕೋಳಿನಿದ್ದೆಗೂ ಕತ್ತರಿ
ಹೆಸರಿಗಷ್ಟೇ ತಲೆಮೇಲೆ ಸೂರು
ಬದುಕು ಚೂರು ಚೂರು ..
ಮೋರಿ ಚರಂಡಿಯೆಲ್ಲಾ ತುಂಬಿ
ನಾಳೆ ಕೆಲಸ ಖಾತ್ರಿ ..
ವೆಂಗಯ್ಯನ ಲೆಕ್ಕ ..
ಬೀಡಿಯ ದಮ್ಮಿಗೆ
ಉಸಿರ ತಿತ್ತಿಗಳಲಿ ನವಿರು ಪುಳಕ
ಇಲ್ಲ ನಾಳೆಯ ತವಕ
ಉಳಿದ್ದದ್ದೊಂದೇ ಕೋರಿಕೆ ..
ನಿಲ್ಲಲಿ ಈ ಬಿರುಮಳೆ ..
ಬೇಗ ಮುಗಿಯಲಿ ರಾತ್ರಿ ..
ಮಳೆಯ ಇನ್ನೊಂದು ರೂಪ ತೋರಿಸಿಕೊಟ್ಟಿದ್ದಿರಿ.
ಕೆಲವರು ಮಳೆಯನ್ನ ಪ್ರಿಯಕ/ಪ್ರೇಯಸಿಗೆ ಹೋಲಿಸಿ ಬರೆದ ಕವಿತೆಗಳು ಕಥೆಗಳು ತುಂಬಾ ಓದಿದ್ದಿವಿ.
ಆದರೆ ನಿಮ್ಮ ಕವಿತೆಯಲಿ ಮಳೆಯನ್ನ ಬೇರೊಂದು ದೃಷ್ಟಿಕೋನದಲ್ಲೇ ನೋಡಲಾಗಿದೆ.
ಸೂರು ಇರುವವರಿಗೆ ಮಳೆ ಖುಷಿ,ನೆಮ್ಮದಿ,ನೆನಪುಗಳ ಹೆಕ್ಕಿ ತರುವ ನೆಪವಾಗಿ ನಿಲ್ಲುತ್ತದೆ.
ಆದರೆ ಅದೇ ಮಳೆ, ಸೂರು ಇರದವರಿಗೆ ದುಃಖ,ಬೇಗುದಿ,ಕಟು ವಾಸ್ತವದ ಇನ್ನೊಂದು ಮುಖವಾಗಿ ನಿಲ್ಲುತ್ತದೆ.
ಬೆಳ್ಳಂಬೆಳಿಗ್ಗೆ ಸುಂದರ ಕವಿತೆ ಓದಿಸಿದ್ದಕ್ಕೆ ಧನ್ಯವಾದಗಳು.
And,
Thanks to Avadhi
Waw..
ಮೋರಿ ಚರಂಡಿಯೆಲ್ಲಾ ತುಂಬಿ
ನಾಳೆ ಕೆಲಸ ಖಾತ್ರಿ ..
ವೆಂಗಯ್ಯನ ಲೆಕ್ಕ ..
ಬೀಡಿಯ ದಮ್ಮಿಗೆ
ಉಸಿರ ತಿತ್ತಿಗಳಲಿ ನವಿರು ಪುಳಕ
ಇಲ್ಲ ನಾಳೆಯ ತವಕ
ಉಳಿದ್ದದ್ದೊಂದೇ ಕೋರಿಕೆ ..
ನಿಲ್ಲಲಿ ಈ ಬಿರುಮಳೆ ..
ಬೇಗ ಮುಗಿಯಲಿ ರಾತ್ರಿ ..
mana mutti manatatti,kaaduva kavithe
ತುಂಬಾ ಒಳ್ಳೆ ಕವಿತೆ.
ಬದುಕಿನ ಮತ್ತೊಂದು ಮಗ್ಗುಲಿನ ದರ್ಶನ ಬೆಚ್ಚಗೆ ಮಲಗುವ ಎಷ್ಟೋ ಮನಗಳಿಗೆ ತಿಳಿಯದ ಚುಚ್ಚುವ ಈನೋವಿನ ಅನಾವರಣ ಸೂರಿಲ್ಲದವರ ತೊಳಲಾಟ ಬದುಕಿನ ಹೋರಾಟ ಕಣ್ಣು ತೇವವಾಯಿತು