ಇಲ್ಲಿನ ಪ್ರತಿ ಕಥೆಯೂ ನಿಮ್ಮದೇ ಹೊಸದೊಂದು ಕಥೆಯನ್ನು ನೆನಪಿಸದಿದ್ದರೆ ಹೇಳಿ..

ಮನುಷ್ಯ ಸಂಬಂಧಗಳು ಎಷ್ಟೊಂದು ಜಟಿಲವಾದದ್ದು ಮತ್ತು ಎಷ್ಟೊಂದು ಸೂಕ್ಷ್ಮವೆಂದರೆ ಅದನ್ನು ಶಬ್ಧಗಳಲ್ಲಿ ವಿವರಿಸಲು ಸಾಧ್ಯವೇ ಇಲ್ಲ. ಒಂದೇ ಒಂದು ಸಂಬಂಧವನ್ನೂ ಇದು ಹೀಗೇ ಎಂದು ತೀರಾ ಸರಳವಾಗಿ ವ್ಯಾಖ್ಯಾನಿಸಲು ಬರುವುದೇ ಇಲ್ಲ. ಹೆತ್ತ ಅಮ್ಮನನ್ನು ಕೊನೆಯ ಮಹಡಿಗೆ ಬಲವಂತವಾಗಿ ಕರೆದೊಯ್ದು ಕೆಳಗೆ ತಳ್ಳಿ ಆತ್ಮಹತ್ಯೆ ಎಂದು ಬಿಂಬಿಸಿದ ಮಗನ ಕಥೆಯನ್ನು ನಿನ್ನೆ ಮೊನ್ನೆಯೋ ಎಂಬಂತೆ ಓದುತ್ತ ಈ ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರಬಹುದು, ಕೆಟ್ಟ ತಾಯಿ ಇರಲಾರಳು ಎಂದು ಹಳೇ ಗಾದೇ ಮಾತನ್ನು ಹೇಳಿಕೊಳ್ಳುವ ಹೊತ್ತಿಗೇ ಆಕೆ ನೆನಪಾಗುತ್ತಾಳೆ.

ಎರಡನೆಯ ಗಂಡನೊಂದಿಗಿನ ರಾತ್ರಿಯನ್ನು ಕಳೆಯಲು ಅಡ್ಡಿಯಾಗುತ್ತಿದ್ದ ಮೊದಲ ಗಂಡನ ಎರಡು ವರ್ಷದ ಮಗುವಿನ ತಲೆಯನ್ನು ಗೋಡೆಗಪ್ಪಳಿಸಿ ಕೊಂದವಳು. ಯಾರದೋ ಜೊತೆಗಿನ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಲು ಮತ್ತಿಬ್ಬರೊಡನೆ ಸೇರಿ, ಗಂಡನನ್ನೇ ಕೊಂದ ಹೆಂಡತಿಯ ಬಗ್ಗೆ ಪೇಪರ್‍ನಲ್ಲಿ ಓದುತ್ತಿರುವಾಗಲೇ ಹೆಂಡತಿಯ ತಲೆ ಕೂದಲನ್ನು ಹಿಡಿದು ಎಳೆಯ ಮಕ್ಕಳ ಎದುರೇ ಕಚಕಚ ಕತ್ತರಿಸಿದವನು ಪಕ್ಕದ ಮನೆಯಲ್ಲೇ ಇದ್ದ ಎಂಬುದೂ ಅಷ್ಟೇ ಸತ್ಯ. ಹೀಗಾಗಿ ಸಂಬಂಧಗಳ ಗೋಜಲು ಬಗೆಹರಿಯುವುದೇ ಇಲ್ಲ ಎಂದು ಮನಸ್ಸು ಚಿಕ್ಕದು ಮಾಡಿಕೊಳ್ಳುವಷ್ಟರಲ್ಲಿಯೇ ಇಲ್ಲ ಹಾಗೇನಿಲ್ಲ ಎನ್ನುತ್ತ ತೆಲುಗಿನಲ್ಲಿ ಕೇಂದ್ರ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಸಲೀಂ ಅವರ ಕಾಡುವ ಕಥೆಗಳನ್ನು ನಾ. ಧನಪಾಲ್ ಕನ್ನಡದ ಓದುಗರಿಗೆ ಉಣಬಡಿಸುತ್ತಿದ್ದಾರೆ.

ತೀರಾ ಸರಳವಾದ ದೈನಂದಿನ ನಮ್ಮದೇ ಜೊತೆಗೆ ನಡೆಯುವ ಕಥೆಗಳಿವು ಎಂಬುದೇ ಈ ಕಥೆಗಳ ಪ್ಲಸ್ ಪಾಯಿಂಟ್ ಮತ್ತು ಮೈನಸ್ ಪಾಯಿಂಟ್ ಕೂಡ. ಹೌದಲ್ವಾ? ಹೀಗೂ ಆಗಿತ್ತಲ್ವಾ ಎನ್ನುತ್ತ ಎದೆತಟ್ಟುವ ಕಥೆಗಳೇ ಕೆಲವೊಮ್ಮೆ ಇದನ್ನು ಮೊದಲೆಲ್ಲೋ ಓದಿದ್ದೆನಾ? ಎಂಬ ಅನುಮಾನವನ್ನೂ, ‘ಅರೆ…! ಇದು ಆ ಮನೆಯ ಇವರ ಕಥೆಯಲ್ಲವಾ?’ ಎಂಬ ಅನುಮಾನವನ್ನೂ ಹುಟ್ಟಿಸಿಬಿಡುತ್ತದೆ.

ನಾನು ಶಿರಸಿಯಲ್ಲಿ ಕನ್ನಡ ಶಾಲೆಗೆ ಹೋಗುವಾಗ ಗಣಪಿ ಎಂಬಾಕೆ ಕೆಲಸಕ್ಕೆ ಬರುತ್ತಿದ್ದಳು. ಆಕೆ ಏನೇನು ಕೆಲಸ ಮಾಡುತ್ತಿದ್ದಳೋ ನನಗೆ ನೆನಪಿಲ್ಲ. ಆದರೆ ನಾನು ಸುಮಾರು ಮೂರು ನಾಲ್ಕನೆಯ ತರಗತಿಗೆ ಬರುವವರೆಗೂ ನನ್ನನ್ನು ತನ್ನ ಸೊಂಟದ ಮೇಲೆ ಕುಳ್ಳಿರಿಸಿಕೊಂಡೇ ಓಡಾಡುತ್ತಿದ್ದುದು ಮಾತ್ರ ನನಗೆ ಚೆನ್ನಾಗಿ ನೆನಪಿದೆ. ‘ಈ ಹಿಡಂಬೆನಾ ಯಾಕೆ ಹೊತ್ಕಂಡೇ ಓಡಾಡ್ತೆ? ಎಲ್ಲಾದ್ರೂ ಇಳ್ಸೆ ಅವಳನ್ನ..’ ಅಮ್ಮನಿಗೆ ಗಣಪಿಯ ಕೆಲಸ ನಿಧಾನವಾದರೆ ತಾನು ಶಾಲೆಗೆ ಸರಿಯಾದ ಸಮಯಕ್ಕೆ ಹೋಗಲಾಗದು ಎಂಬ ಗಡಿಬಿಡಿ. ಆದರೆ ಗಣಪಿ ಅದ್ಯಾವುದನ್ನೂ ಕೇಳಿಸಿಕೊಳ್ಳುತ್ತಿರಲಿಲ್ಲ.

ಒಂದುವೇಳೆ ಆ ಸಮಯಕ್ಕೆ ಅವಳ ಗಂಡ ನಾಗಪ್ಪನೇನಾದರೂ ಬೇರೆ ಕೆಲಸಕ್ಕೆಂದು ಆ ಕಡೆಗೆ ಬಂದರೆ ನನ್ನನ್ನು ಅವನ ಹೆಗಲಿಗೆ ವರ್ಗಾಯಿಸುತ್ತಿದ್ದಳು. ಒಟ್ಟಿನಲ್ಲಿ ಅವಳು ಕೆಲಸ ಮುಗಿಸುವವರೆಗೂ ನಾನು ಮರಕೋತಿ ಆಟ ಆಡಿದ ಹಾಗೆ ಗಣಪಿಯ ಸೊಂಟದಿಂದ ನಾಗಪ್ಪನ ಹೆಗಲಿಗೆ, ಪುನಃ ಅಲ್ಲಿಂದ ಗಣಪಿಯ ಸೊಂಟಕ್ಕೆ ಎಂದು ನೆಗೆದಾಡುತ್ತಿದ್ದೆ. ಅಂತಹ ಕಡುಬಡತನದ ಬದುಕಿನಲ್ಲೂ ಗಣಪಿ ಹಾಗೂ ನಾಗಪ್ಪರ ದಾಂಪತ್ಯದ ಅನ್ಯೋನ್ಯತೆ ಅಚ್ಚರಿ ಹುಟ್ಟಿಸುವಂತಹುದ್ದು. ‘ಅಕ್ಕೋರೆ ತಂಗಿ ಮದ್ವೆಲಿ ನಂಗೊಂದು ಹೊಸಾ ಪಟ್ಟೆ ಸೀರೆನೇ ಕೊಡಿಸಬೇಕು’ ಎನ್ನುತ್ತ ಸುಮಾರು ಹದಿನೈದು ಇಪ್ಪತ್ತು ವರ್ಷದ ಮುಂದಿನ ಯೋಜನೆಯನ್ನು ಪದೇ ಪದೇ ನೆನಪಿಸುತ್ತಿದ್ದಳು. ಅದಾದ ನಂತರ ಓದು, ಹೋರಾಟ ಎನ್ನುತ್ತ ಆ ಊರು ಬಿಟ್ಟು ಎಲ್ಲೆಲ್ಲೋ ತಿರುಗಿ ನಮ್ಮೂರು ಸೇರಿ ಆಗಿತ್ತು.

ಆದರೆ ನನ್ನ ಮದುವೆ ಸಮಯಕ್ಕೆ ಮಾತ್ರ ಗಣಪಿ ಮತ್ತು ಆಕೆಯ ಪಟ್ಟೆ ಸೀರೆ ಮತ್ತೆ ಮತ್ತೆ ನೆನಪಾಗಿ ಅವಳನ್ನು ಕರೆಯಲು ಹೋದರೆ ಗಣಪಿ ಅದಾಗಲೇ ಈ ಲೋಕ ತ್ಯಜಿಸಿ ಆಗಿತ್ತು. ಎಲ್ಲರನ್ನೂ ಪ್ರೀತಿಸುವ ತಾಯಿ ಹೃದಯದ ಆಕೆ ಹೆತ್ತ ಮಗನಿಂದಲೇ ಕೊಲೆಯಾಗಿ ಹೋಗಿದ್ದಳು. ಆಗಾಗ ಒಂದಿಷ್ಟು ಮತಿವಿಕಲನಾಗುವ ಅವಳ ಮಗ ಕೆರೆಯ ಒಂದು ದಿನ ಕುಡಿದು ಬಂದು ಮನೆಯಲ್ಲಿ ಮಲಗಿದವಳನ್ನೆ ಕತ್ತರಿಸಿ ಕೊಂದಿದ್ದ. ಎರಡೇ ತಿಂಗಳಲ್ಲಿ ಗಂಡ ನಾಗಪ್ಪನೂ ಅವಳನ್ನು ಹಿಂಬಾಲಿಸಿದ್ದ. ಅವಳಿಗೆಂದು ಕೊಂಡ ಸೀರೆಯನ್ನು ಅವಳ ಮಗಳು ಸೀತೆಗೆ ಕೊಟ್ಟು ಹಿಂದಿರುಗಿದ್ದೆ.

ಆಗಲೇ ಗಂಡನನ್ನು ಕಳೆದುಕೊಂಡು ಮೂವರು ಪುಟ್ಟ ಮಕ್ಕಳೊಂದಿಗೆ ಜರ್ಜರಿತಳಾಗಿದ್ದ ಸೀತೆಗೆ ಆ ಸೀರೆ ಮತ್ತು ಅದರೊಟ್ಟಿಗಿದ್ದ ಅಲ್ಪ ಹಣ ತನ್ನ ಅಮ್ಮನನ್ನೂ ತನ್ನ ಬದುಕಿನ ಬವಣೆಯನ್ನು ಏಕಕಾಲಕ್ಕೆ ನೆನಪಿಸಿ ಕಣ್ಣೀರಿಡುವಂತೆ ಮಾಡಿದಾಗ ಮಾತೇ ಆಡದೆ ಹಿಂದಿರುಗಿದ್ದೆ. ಇಲ್ಲಿನ ಹೆಚ್ಚಿನ ಕಥೆಗಳನ್ನು ಓದುವಾಗ ನನ್ನ ಮನಸ್ಸಿನಲ್ಲಿ ಕಾಡಿದ್ದು ಇದೇ ಗಣಪಿ, ನಾಗಪ್ಪ ಮತ್ತು ಒಂದಿಷ್ಟು ದಿನ ಸರಿ ಇದ್ದು ಮತ್ತೊಂದಿಷ್ಟು ದಿನ ಕೆರಳುತ್ತಿದ್ದ ಕೆರೆಯ.

ಇಲ್ಲಿನ ಪ್ರತಿ ಕಥೆಯೂ ನಿಮಗೆ ನಿಮ್ಮದೇ ಆದ ಹೊಸದೊಂದು ಕಥೆಯನ್ನು ನೆನಪಿಸದಿದ್ದರೆ ಹೇಳಿ. ಮೊನ್ನೆ ನನ್ನ ಮಗನಿಗೆ ಕೆಂಡದಂತಹ ಕೋಪ ಬಂದಿತ್ತು ನನ್ನ ಮೇಲೆ. ಆತನ ಗೆಳೆಯರೆಲ್ಲ ಇಂಟರ್‍ನೆಟ್ ಗೇಮ್ ಆಡ್ತಾರಂತೆ. ಆದರೆ ನಾನು ಇಂಟರ್‍ನೆಟ್ ಹಾಕುವಾಗಲೆಲ್ಲ ಜೊತೆಗಿರೋದು ಅವನಿಗೆ ಇರಿಟೇಟ್. ‘ಏನಮ್ಮ ನೀನು, ನನಗೆ ಅಷ್ಟೂ ಗೊತ್ತಾಗಲ್ಲ ಅಂದ್ಕೊಂಡಿದ್ದೀಯಾ ಬ್ಲೂವ್ಹೇಲ್ ಗೇಮ್‍ನ್ನೆಲ್ಲ ಆಡೋಕೆ? ಎನ್ನುತ್ತ ತೀರಾ ಪ್ರಬುದ್ಧನಂತೆ ಹೇಳಿದವನು ಮತ್ತೊಂದು ದಿನ, ಅವರು ಕೊಟ್ಟ ಟಾಸ್ಕ ಮಾಡೋದಿಲ್ಲ ಅಂತ ಡೈರೆಕ್ಟಾಗಿ ಹೇಳಿಬಿಡಬೇಕಲ್ವಾ ಎಂದು ಭಯಹುಟ್ಟಿಸಿಬಿಟ್ಟಿದ್ದ.

ಈಗ ಅವನ ಗೆಳೆಯರೆಲ್ಲ ಯಾವುದೋ ಗೇಮ್ ಬಗ್ಗೆ ಮಾತನಾಡುವಾಗ ತಾನು ತಣ್ಣಗೆ ಕುಳಿತಿರಬೇಕಾಗುತ್ತದೆ ಎಂಬ ಕಾರಣಕ್ಕೆ ನನ್ನೊಡನೆ ನಾಲ್ಕಾರು ದಿನಗಳ ಮಾತು ಬಿಟ್ಟು, ಊಟ ಮಾಡಲ್ಲ ಎಂಬ ಹಠವನ್ನೂ ಮುಂದಿಟ್ಟಿದ್ದ. ಕೊನೆಗೊಂದು ದಿನ ಬೇಸತ್ತು ನಾನೇ ಹೇಳಿದ್ದೆ. ‘ನಾಳೆ ನಿನ್ನ ಪ್ರೆಂಡ್ಸ್ ಹತ್ರ ಯಾರ ಅಮ್ಮ ರಾತ್ರಿ ಹತ್ತುಗಂಟೆಗೆ ಬ್ಯಾಡ್ಮಿಂಟನ್ ಆಡಿದರೂ ಸುಮ್ಮನಿರ್ತಾರೆ ಅಂತಾ ಕೇಳಿ ಬಾ. ಯಾರಾದರೂ ಹಾಗೆ ಅವಕಾಶ ಕೊಟ್ಟಿದ್ದರೆ ನಾನೂ ನಿನಗೆ ಇಂಟರ್‍ನೆಟ್ ಗೇಮ್ ಆಡಲು ಕೊಡುತ್ತೇನೆ.’ ಎಂದು ಕಳಿಸಿದೆ. ಮಾರನೆಯ ದಿನದ ಉತ್ತರ ಆತನಿಗೇ ಭಯ ಹುಟ್ಟಿಸಿತ್ತು.

ಏಳುಗಂಟೆಯ ನಂತರ ಪುಸ್ತಕ ಹಿಡಿದು ಕುಳಿತವರು ಅತ್ತಿತ್ತ ಅಲ್ಲಾಡುವಂತಿಲ್ಲ ಎಂಬ ಕಂಡಿಷನ್ ಹೆಚ್ಚಿನ ಅಮ್ಮಂದಿರದ್ದು. ಅದಕ್ಕಿಂತ ಮೊದಲು ಟ್ಯೂಷನ್. ಮನೆಗೆ ಬಂದು ಒಂದರ್ಧ ಗಂಟೆ ಮೊಬೈಲ್ ಆಟ. ಅಷ್ಟೇ ಜೀವನ. ನನ್ನ ಮಗ ಹೆದರಿಕೊಂಡು ಬಿಟ್ಟಿದ್ದ. ಹುಕಿ ಬಂದರೆ ರಾತ್ರಿಯೂ ಬ್ಯಾಡ್ಮಿಂಟನ್ ಆಡುವ, ಟ್ಯೂಷನ್‍ನ ಹಂಗಿಲ್ಲದ, ಓದಲೇಬೇಕು ಎಂಬ ಒತ್ತಡ ಇಲ್ಲದ ನಿಶ್ಚಿಂತ ಬದುಕು ಅವನದ್ದು. ಮೊದಮೊದಲೆಲ್ಲ ನನ್ನ ಅಕ್ಕಪಕ್ಕದ ಮನೆಯವರೆಲ್ಲ ನನ್ನನ್ನು ವಿಚಿತ್ರ ಪ್ರಾಣಿ ಎಂಬಂತೆ ನೋಡುತ್ತಿದ್ದರು. ಟೀಚರ್ ಆಗಿಯೂ ಮಗನನ್ನು ಟ್ಯೂಷನ್‍ಗೆ ಕಳಿಸದ, ಯಾವಾಗ ಬೇಕಾದರೆ ಆವಾಗ ಕೇಕೆ ಹಾಕಿ ಆಡಲು ಬಿಡುವ ನಾನು ಅವರ ದೃಷ್ಟಿಯಲ್ಲಿ ಟೀಚರ್ ಆಗಲೇ ಅನ್‍ಫಿಟ್ ಆಗಿಬಿಟ್ಟಿದ್ದೆ. ತಮ್ಮ ಮಕ್ಕಳನ್ನೆಂದಿಗೂ ಅವರು ಆಡಲು ಕಳಿಸುತ್ತಿರಲಿಲ್ಲ.

ಆದರೆ ಈಗೀಗ ಯಾರೂ ಇಲ್ಲದಿದ್ದರೂ ಇಬ್ಬರೇ ಸೇರಿ, ಇಡೀ ಊರಿಗಾಗುವಷ್ಟು ಗದ್ದಲ ಎಬ್ಬಿಸುತ್ತ ಆಡುವ ಅಣ್ಣ-ತಮ್ಮನನ್ನು ನೋಡಿ ಅವರಿಗೂ ರೂಢಿಯಾಗಿ ಬಿಟ್ಟಿದೆ. ಆಗೊಮ್ಮೆ ಈಗೊಮ್ಮೆ ತಮ್ಮ ಮಕ್ಕಳನ್ನೂ ಆಡಲು ಕಳಿಸುತ್ತಿದ್ದಾರೆ ಎಂಬುದೇ ಸಮಾಧಾನ. ಇಲ್ಲಿ ಮೂರು ಕಥೆಗಳು ಇಂತಹುದ್ದೇ ಹಿನ್ನೆಲೆಯಲ್ಲಿ ಬರುತ್ತವೆ. ನೂರಕ್ಕೆ ನೂರು ಅಂಕಗಳು ಕಥೆಯಲ್ಲಿ ಮಗನಿಗೆ ಎಂಜಿನಿಯರಿಂಗ್ ಸೀಟು ಕೊಡಿಸಲು ಒದ್ದಾಡುವ ಅಪ್ಪ ಅಮ್ಮನ ನೋವು, ಅಕ್ಕನ ಮದುವೆಗೆ ಹಣ ಖರ್ಚು ಮಾಡಿದ್ದಾರಲ್ಲ, ತನ್ನ ಓದಿಗೂ ಹಣ ಕೊಡಲಿ ಎನ್ನುವ ಮಗ, ಅಂಕ ಗಳಿಸದಿದ್ದರೂ ಡೊನೆಷನ್ ಕೊಟ್ಟು ಓದಿಸುವ ಧೈರ್ಯ ಇರುವ ಪಕ್ಕದ ಮನೆಯಾತ ಎಲ್ಲವೂ ನಮ್ಮ ಮನೆಯ ಕಥೆಗಳೇ ಆಗಿರುತ್ತದೆ.

‘ಈ ಅಮ್ಮನಿಗೆ ಏನು ಗೊತ್ತಾಗುತ್ತೆ? ನಮ್ಮ ಮನಸ್ಸಿನಲ್ಲಿದ್ದುದನ್ನೆಲ್ಲ ಅವಳ ಬಳಿ ಹೇಳಿಕೊಳ್ಳೋಕೆ ಆಗುತ್ತಾ? ಅದ್ಯಾರೋ ಕೊಟ್ಟ ನವಿಲುಗರಿ, ಕೊಡಲಾಗದೇ ಬರುವ ಹಾದಿಯ ಮೇಲಿಟ್ಟು ಹೋದ ಕೆಂಪುಗುಲಾಬಿ, ನಾನು ಕ್ಲಾಸ್‍ಗೇ ಬಂದಿರಲಿಲ್ಲ ನಿನ್ನ ನೋಟ್ಸ್ ಕೊಡ್ತೀಯಾ ಎಂದು ತೆಗೆದುಕೊಂಡು ಹೋದ ನೋಟ್‍ಬುಕ್‍ನ ಕವರ್ ಕೆಳಗೆ ಬರೆದ ಎರಡೇ ಎರಡು ಅಕ್ಷರಗಳು ಈಗ ಹಿಂದಿರುಗಿ ನೋಡಿದರೆ ಏನೇನೂ ಅಲ್ಲ ಎನ್ನಿಸುತ್ತಿದ್ದ ಇವೆಲ್ಲ ಆಗ ಅದೇನೋ ಮಹತ್ವದ, ಅಮ್ಮನಿಂದ ಗುಟ್ಟಾಗಿ ಇಡಬೇಕಾದ ವಿಷಯಗಳು ಎನ್ನಿಸಿಬಿಡುತ್ತಿದ್ದುದ್ಯಾಕೋ ಎಂದು ನಗೆ ಹುಟ್ಟಿಸುತ್ತದೆ.

ಆಗ ಬೇಕು ಅನ್ನಿಸುತ್ತಿದ್ದ ಏಕಾಂತ ಈಗ ತೀರಾ ಸಿಲ್ಲಿಯಾಗಿ ಕಾಣಿಸುವಾಗ ಪಕ್ಕದ ಮನೆಯ ಹುಡುಗಿ ‘ನನಗೆ ಸ್ವಾತಂತ್ರ ಅನ್ನೋದೇ ಇಲ್ವಾ? ಎರಡು ನಿಮಿಷ ಕೂಡ ರೂಂನಲ್ಲಿ ಒಬ್ಬಳೇ ಕುಳಿತುಕೊಳ್ಳೋ ಹಾಗಿಲ್ಲ. ಇಡೀ ದಿನ ನನ್ನ ಹಿಂದೇನೇ ಇರಬೇಡ ನೀನು. ನಾನು ಒಬ್ಬಳೇ ಓದ್ಕೋಬೇಕು, ಡಿಸ್ಟರ್ಬ್ ಮಾಡಬೇಡಿ’ ಎನ್ನುತ್ತ ಡಬಾರನೆ ಬಡಿದ ಬಾಗಿಲು ನನ್ನ ಮುಖಕ್ಕೇ ಬಡಿದಂತಾಗಿರುವಾಗ ಅವಳಮ್ಮನ ಎದೆಯಲ್ಲಿ ಅದೆಂತಹ ಕಳವಳ ಹುಟ್ಟಿಸಿರಬಹುದು ಎಂದು ಯೋಚಿಸುತ್ತಿದ್ದೇನೆ.

ಹೀಗಾಗಿಯೇ ಬಾಗಿಲು ಕಥೆಯಲ್ಲಿ ಪ್ರಾಯಕ್ಕೆ ಬಂದ ಮಗಳ ಏಕಾಂತ, ಹಾಕಿಕೊಂಡೇ ಇರುವ ಬಾಗಿಲು, ಕೊನೆಗೆ ಮುಚ್ಚಿದ ಬಾಗಿಲಿನಾಚೆಯಿಂದ ತೂರಿ ಬರುವ ಹಬ್ಬದ ಶುಭಾಶಯ ಖೇದ ಹುಟ್ಟಿಸಿದರೆ ವಾಮನ ಕಥೆಯಲ್ಲಿ ಸ್ನೇಹಿತರ ಮಕ್ಕಳೆಲ್ಲ ಡಾಕ್ಟರ್ ಎಂಜಿನಿಯರ್ ಹಾಗೂ ಇತರ ಹಣಗಳಿಸಿ ಮೆರೆವ ಮಕ್ಕಳ ಮಧ್ಯದಲ್ಲಿ ಮಗ ರೈತ ಎಂದು ಹೇಳಲಾಗದೇ ಕುಬ್ಜನಾಗಿ ಹೋಗಿದ್ದ ಅಪ್ಪ ತನ್ನ ಮಗನಲ್ಲಿ ಅವರಾರಲ್ಲೂ ಇಲ್ಲದ ಮಾನವೀಯತೆಗೆ ವಾಮನನಂತೆ ತಲೆ ಎತ್ತುತ್ತಾನೆ.

ಯುದ್ಧದಲ್ಲಿ ಹೊಡೆದುರುಳಿಸುವುದೇ ಪ್ರಧಾನ, ಧರ್ಮ ಅಧರ್ಮಗಳ ಪ್ರಸಕ್ತಿಯೇ ಇರುವುದಿಲ್ಲ ಎಂದು ಹೋರಾಡಿದ ಸೈನಿಕನೊಬ್ಬ ಸಂಬಂಧದಲ್ಲಿ ಕರುಣೆ ಹುಡುಕುವುದೂ, ಹೆಣದ ಮೇಲಿನ ಬಟ್ಟೆ, ಒಡವೆ, ವಾಚುಗಳನ್ನು ದೋಚುವವನಿಗೆ ತಂಗಿಯ ಸಂಸಾರ ಚಂದವಾಗಿರಲೆಂಬ ಕನಸು, ಅವನನ್ನು ಹುಳ ಎನ್ನುತ್ತಲೇ ಆ ಹುಳದ ರಕ್ತ ಹೀರುವ ಪೋಲಿಸ್, ಕಾಮದ ಹಸಿವೇ ಹೆಚ್ಚು ಎಂದುಕೊಂಡವನೊಬ್ಬ ಕರೆದು ತಂದವಳು ಮಾಡಿದ ಊಟವನ್ನು ಮಗುವಂತೆ ಉಂಡು ಮಲಗುವ ನಿರಾಳತೆ, ಪಕ್ಕದ ರೂಮಿನ ಗೆಳೆಯರು ಕರೆದು ತಂದವಳಿಗೆ ಹಣವನ್ನೂ ನೀಡದೇ ಹೊರದೂಡಿದಾಗ ತನ್ನ ಜೇಬಿನಲ್ಲಿದ್ದ ಹದಿನೈದು ರೂಪಾಯಿ ಕೊಟ್ಟು ಅನಾರೋಗ್ಯದಿಂದ ಮಲಗಿದ ಆಕೆಯ ಮಗನಿಗೆ ಔಷಧ ಕೊಳ್ಳಲು ಹೇಳಿದಾತ, ಅಬಕಾರಿ ಇಲಾಖೆಯೇ ಜನರಿಗೆ ಸರಾಯಿ ದಾಸರನ್ನಾಗಿ ಮಾಡುತ್ತಿರುವುದನ್ನು ಸಹಿಸದೇ ಎಲ್ಲರ ವಿರೋಧದ ನಡುವೆಯೂ ರಾಜಿನಾಮೆ ಕೊಟ್ಟು ಹೊರಬಂದ ಪೇದೆ, ಅಪ್ಪ ಸತ್ತೇ ಹೋಗುತ್ತಾನೆಂದು ವಿದೇಶದಿಂದ ಲೋಹದ ಹಕ್ಕಿಯ ಬೇನ್ನೇರಿ ಬಂದಾತ ಆಪರೇಷನ್ ನಂತರ ಕ್ಷಣವು ಕಾಯಲಾಗದೇ ಹೊರಡುವ ಧಾವಂತ, ಮಗ ಸತ್ತು ಹೋಗಿದ್ದಾನೆ ಎಂಬುದನ್ನು ಕ್ಯಾನ್ಸರ್ ಪೀಡಿತ ತಾಯಿಗೆ ಹೇಳದೇ, ತಾನೇ ಎಲ್ಲವನ್ನೂ ನಿಭಾಯಿಸಿದ ಪಕ್ಕದ ಮನೆಯ ಅನ್ಯಧರ್ಮೀಯ, ಹಣದ ಬೆನ್ನೆತ್ತಿ ಹೊರಟ ಅಪ್ಪನಿಗೆ ಜೀವನ ಸಣ್ಣ ಸಣ್ಣ ವಿಷಯಗಳಲ್ಲಿ ದೊರಕುವ ಸಂತೋಷದ ಬಗ್ಗೆ ಪಾಠ ಮಾಡಿದ ಮಗಳು, ಅಶಕ್ತರಿಗೆ, ದೀನರಿಗೆ ಸಹಾಯ ಮಾಡಿದ್ದಕ್ಕಾಗಿ ನಕ್ಸಲ್ ಪಟ್ಟ ಹೊತ್ತು ಎನ್‍ಕೌಂಟರ್‍ಗೆ ಬಲಿಯಾದ ಶಿಕ್ಷಕ ಹೀಗೆ ಎಲ್ಲವೂ ಎದೆ ತಟ್ಟುವ ಭಾವಗಳೇ.

ಆದರೂ ಪುಸ್ತಕದ ಕೊನೆಯ ಭಾಗಕ್ಕೆ ಬಂದಂತೆಲ್ಲ ಮಿಠಾಯಿ ಅಂಗಡಿಯೊಳಗೆ ಕುಳಿತ ಸಿಹಿ ತಿಂಡಿಪ್ರಿಯನ ನೆನಪಾಗುತ್ತದೆ. ಸಿಹಿ ತಿಂಡಿ ಇಷ್ಟ ಎಂದು ಒಬ್ಬಾತ ಮಿಠಾಯಿ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದನಂತೆ. ಇಷ್ಟಿಷ್ಟೇ ತನ್ನುತ್ತಿರಬಹುದು ಎಂಬುದು ಅವನ ಆಸೆ. ಕೆಲವು ದಿನಗಳವರೆಗೆ ಎಲ್ಲವೂ ಸರಿಯಾಗಿತ್ತು. ಯಾರಿಗೂ ಕಾಣದಂತೆ ಎಷ್ಟು ಬೇಕೋ ಅಷ್ಟು ಮಿಠಾಯಿಗಳನ್ನು ತಂದು ಖುಷಿ ಪಡುತ್ತಿದ್ದ. ಆದರೆ ಬರುಬರುತ್ತಾ ಮಿಠಾಯಿ ತಿನ್ನುವುದು ಸಾಕೆನಿಸ ತೊಡಗಿತು.

ಕೊನೆಯಲ್ಲಿ ಮಿಠಾಯಿ ಕಂಡರೂ ಸಾಕು ವಾಕರಿಕೆ ಬಂದು ಆ ಅಂಗಡಿಯ ಕೆಲಸವನ್ನೇ ಬಿಟ್ಟನಂತೆ. ಇಲ್ಲೂ ಕೂಡ ನನಗೆ ಹಾಗೇ ಆಯಿತು. ಇಡೀ ಪುಸ್ತಕವೇ ಹಲವಾರು ರೀತಿಯ ಸಂಬಂಧಗಳನ್ನು ಬಲೆಯಲ್ಲಿ ಹೆಣೆದು ಹಾಕಿದಂತಿದೆ. ಸಂಬಂಧಗಳ ಸೂಕ್ಷ್ಮತೆ ಕುಸುರಿಯಂತೆ ಕೆಲಸ ಮಾಡಿದೆ. ಆದರೂ ಕೊನೆಯ ಕಥೆಗೆ ಬರುವಷ್ಟರಲ್ಲಿ ಈ ಸಂಬಂಧಗಳ ಜಟಿಲತೆ ತಲೆಯನ್ನು ಕೆಡಿಸಿ ಬಿಡುತ್ತದೆ. ಒಂದೇ ಗುಕ್ಕಿಗೆ ಓದಿ ಮುಗಿಸುವವರಿದ್ದರೆ ಒಂದಿಷ್ಟು ನಿಗಾ ವಹಿಸಿ ದಿನಕ್ಕೆರಡೇ ಕಥೆಗಳನ್ನು ಓದುವುದು ಒಳ್ಳೆಯದು.

ಅಂದಹಾಗೆ, ಮಗನಿಗೆ ಹೇಳಿದ್ದೇನೆ ಇಂಟರ್‍ನೆಟ್ ಗೇಮ್ ಬೇಕು ಅಂತಾದರೆ ನಿನ್ನ ಸ್ನೇಹಿತರ ಹಾಗೆ ಟ್ಯೂಷನ್‍ಗೆ ಹೋಗಿ ನೀಟಾಗಿ ಓದಿಕೊಳ್ಳ ಬೇಕೆಂದು. ಈಗಾತ ಮೊಬೈಲ್‍ನ ತಂಟೆಗೇ ಬರುತ್ತಿಲ್ಲ. ಈಗೀಗ ಒಬ್ಬೊಬ್ಬರಾಗಿ ಮಕ್ಕಳೂ ಆಡಲು ಬರುತ್ತಿದ್ದಾರೆ. ಮನೆಯ ಮುಂದಿನ ಬಯಲಲ್ಲೀಗ ನಾಲ್ಕಾರು ಮಕ್ಕಳ ಕಲರವ. ನಾನು ಮೊಬೈಲ್ ಹಿಡಿದು ನಾಲ್ಕಾರು ಆಪ್‍ಗಳಲ್ಲಿ ಒಂದೇಸಮನೆ ಹರಿದುಬರುವ ಮೆಸೆಜ್‍ಗಳನ್ನು ಓದುವುದರಲ್ಲಿ ತಲ್ಲೀನಳಾಗಿದ್ದೇನೆ.

ನಾವು ಕೆಲಸ ಮಾಡುವುದು ಯಾರಿಗಾಗಿ? ನಮಗಾಗಿ, ನಮ್ಮವರಿಗಾಗಿ ಎಂದು ಯೋಚಿಸಿದರೆ ಮನಸ್ಸಿಗೆಷ್ಟು ಸಾಂತ್ವನ, ಶಾರೀರಿಕ ಶ್ರಮಕ್ಕಿಂತ ಮನಸ್ಸಿಗಾಗುವ ಕಷ್ಟವೇ ನಮ್ಮನ್ನು ಹೆಚ್ಚು ಕುಗ್ಗಿಸುತ್ತದೆ ಎಂಬುದು ಪುಸ್ತಕವನ್ನು ಓದಿ ಮುಗಿಸಿದ ಮೇಲೂ ಕಾಡುತ್ತದೆ.

‍ಲೇಖಕರು Avadhi GK

February 4, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಶ್ರೀನಿವಾಸ ಪ್ರಭು ಅಂಕಣ: ಅನಿರುದ್ಧನ ‘ಜಾಮಿಂಗ್ ಸೆಷನ್ಸ್’ ಮತ್ತು ‘ಸಾಮಿ’..

ಶ್ರೀನಿವಾಸ ಪ್ರಭು ಅಂಕಣ: ಅನಿರುದ್ಧನ ‘ಜಾಮಿಂಗ್ ಸೆಷನ್ಸ್’ ಮತ್ತು ‘ಸಾಮಿ’..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.  ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ...

ಶ್ರೀನಿವಾಸ ಪ್ರಭು ಅಂಕಣ: ಅನಿರುದ್ಧನ ‘ಜಾಮಿಂಗ್ ಸೆಷನ್ಸ್’ ಮತ್ತು ‘ಸಾಮಿ’..

ಶ್ರೀನಿವಾಸ ಪ್ರಭು ಅಂಕಣ: ‘ನೃತ್ಯ ಭೂಷಣ’ ಎಂಬ ಗರಿ ಮುಡಿದ ರಾಧಿಕೆ..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.  ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ...

19 ಪ್ರತಿಕ್ರಿಯೆಗಳು

  1. ಸದಾಶಿವ್ ಸೊರಟೂರು

    ಯಾಕೋ ಗೊತ್ತಿಲ್ಲ ತುಂಬಾನೇ ಇಷ್ಟವಾಯಿತು. ಮತ್ತೆ ಮತ್ತೆ ಓದಿದೆ. ಥ್ಯಾಂಕ್ಸ್ ಶ್ರೀದೇವಿ ಕೆರೆಮನೆ

    ಪ್ರತಿಕ್ರಿಯೆ
  2. ಧನಪಾಲ ‌ನೆಲವಾಗಿಲು

    ಅವಧಿಯ ಪ್ರಧಾನ ಸಂಪಾದಕರಾದ ಶ್ರೀ ಜಿ. ಎನ್. ಮೋಹನ್ ಮತ್ತು ಶ್ರೀಮತಿ ಶ್ರೀದೇವಿ ಕೆರೆಮನೆಯವರಿಗೆ ಧನ್ಯವಾದಗಳು.

    ಕಾಡುವ ಕಥೆಗಳು – ಪುಸ್ತಕ ಬೇಕಾದವರು ಸಂಪರ್ಕಿಸಿ ಮೊ: 8971253009/ 7892546523

    ಇಂತಿ ನಿಮ್ಮ ಧನಪಾಲ ನೆಲವಾಗಿಲು (ದೇವಕವಿ‌ ನಾ‌. ಧನಪಾಲ)

    ಪ್ರತಿಕ್ರಿಯೆ
  3. Ramesh Gabbur

    ನಿಮ್ಮ ಓದಿನ ಪ್ರೀತಿ ಗೆ ಶರಣೆಂದೆ ರೀ ಸಿರಿಯವರೆ
    ಈ ಕಥೆಗಳ ಓದುವ ಮೂಲಕ ನಿಮ್ಮ ಅನುಭವದ ಕಥನ ತೆರೆದಿಟ್ಟ ಪರಿಗೆ ನಾ ಬೆರಗಾದೆ..
    ರಮೇಶ ಗಬ್ಬೂರ್

    ಪ್ರತಿಕ್ರಿಯೆ
  4. ಅಕ್ಕಿಮಂಗಲ ಮಂಜುನಾಥ.

    ಕತೆಗಳು ಚೆನ್ನಾಗಿವೆ.ಓದುವಾಗ ಒಂದೊಂದು ಕತೆಯೂ ಕಾಡಿದ್ದುಂಟು.ಅಷ್ಟೊಂದು ಸೊಗಸಾದ ಕತೆಗಳು ಇದರಲ್ಲಿವೆ.ಇಂತಹ ಕತೆಗಳನ್ನು ತಮ್ಮದೇ ಅನುಭವದ ಉದಾಹರಣೆಗಳ ಸಹಿತ ವಿವರಿಸಿ ಪುಸ್ತಕದ ಮೌಲ್ಯವನ್ನು ಶ್ರೀದೇವಿಯವರು ಸಮರ್ಥವಾಗಿ ಎತ್ತಿ ತೋರಿಸಿದ್ದಾರೆ.ಪುಸ್ತಕವನ್ನು ಅನುವಾದಿಸಿರೋ ಗೆಳೆಯ ಧನಪಾಲ್ಗೆ ಮತ್ತು ಪುಸ್ತಕ ಪರಿಚಯಿಸಿರುವ ಶ್ರೀದೇವಿ ಕೆರೆಮನೆಯವರಿಗೆ ಅಭಿನಂದನೆಗಳು.

    ಪ್ರತಿಕ್ರಿಯೆ
  5. Sudha ChidanandGowd

    ತುಂಬ ಗಂಭೀರ ಕತೆಗಾರ ಸಲೀಂ.
    ಅವರು ಕನ್ನಡಕ್ಕೆ ಅನುವಾದವಾಗಿರುವುದು ಗೊತ್ತಿರಲಿಲ್ಲ.
    ಥ್ಯಾಂಕ್ಯೂ ಶ್ರೀ ಮತ್ತು ಅವಧಿ

    ಪ್ರತಿಕ್ರಿಯೆ
    • ಧನಪಾಲ ನಾಗರಾಜಪ್ಪ, ನೆಲವಾಗಿಲು

      ನಮಸ್ಕಾರ ಸರ್/ಮೇಡಮ್. ಸಾಧ್ಯವಾದರೆ ಒಮ್ಮೆ ಕರೆ ಮಾಡಿ 7892546523/ 8073977615.
      ಇಂತಿ,
      ಧನಪಾಲ
      ಸಲೀಂ ಸಾಹಿತ್ಯವನ್ನು ಅಪಾರವಾಗಿ ಪ್ರೀತಿಸುವವರಲ್ಲಿ ನಾನೂ ಒಬ್ಬ

      ಪ್ರತಿಕ್ರಿಯೆ
  6. Shridhar Nayak

    ಕತೆಗಳೊಂದಿಗೆ ಸ್ವಾನುಭವವನ್ನು ಸಮೀಕರಿಸಿ ವಿವರಿಸಿದ ಪರಿ ಚೆನ್ನಾಗಿದೆ.

    ಪ್ರತಿಕ್ರಿಯೆ
  7. Sunil

    ಅಲ್ಲಿರುವ ಕಥೆಗಳಿಗಿಂತ ರೊಚಕವಾಗಿ ಇರುವ ನಿಮ್ಮ ನಿರೂಪಣೆ ತುಂಬಾ ಇಷ್ಟವಾಗುತ್ತವೆ. ಅವುಗಳನ್ನು ವಿವರಿಸುವಾಗ ನಿಮ್ಮ ಬಾಲ್ಯದ ನೆನಪು ನಿಮ್ಮನ್ನು ನೀವೆ ಹಾಸ್ಯ ಮಾಡಿಕೊಳ್ಳುವ ಪರಿ ನಿಮ್ಮಲ್ಲಿಯ ಮಾನವಿಯತೆ ನಿಜವಾಗಲೂ ಉಳಿದ ಲೇಖಕರಿಗಿಂತ ವಿಭಿನ್ನವಾಗಿಸುತ್ತದೆ. ಹೌದು ಸಂಬಂಧ ಗಳೆ ಹಾಗೆ ಎಲ್ಲೂ ಇರುವ ನೀವು ನಿಮ್ಮ ಬರಹದ ಮೂಲಕ ತುಂಬಾ ಹತ್ತಿರವಾಗಿ ಬಿಡುತ್ತಿರಾ .

    ಪ್ರತಿಕ್ರಿಯೆ
    • ಶ್ರೀದೇವಿ

      ಕುಲಕರ್ಣಿಸರ್ ತಮ್ಮ ಓದಿನ ಪ್ರೀತಿಗೆ ಧನ್ಯವಾದಗಳು

      ಪ್ರತಿಕ್ರಿಯೆ
  8. Sunil

    ಕೆಲಸದ ಒತ್ತಡದ ನಡುವೆ ನಿಮ್ಮ ಲೇಖನಗಳು ನನಗೆ ತುಂಬಾ ಸಂತೋಷ ಕೊಡುತ್ತವೆ ,ಟ್ರೆಸ್ ರಿಲಿಪ್ ಟಾನಿಕ್ ಇದ್ದಂತೆ ತಮ್ಮ ಬರಹ .ಉತ್ತಪ್ರೇಕ್ಷೆ ಅಲ್ಲಾ.

    ಪ್ರತಿಕ್ರಿಯೆ
    • ಶ್ರೀದೇವಿ

      ಕುಲಕರ್ಣಿ ಸರ್ ತಮ್ಮ ಮಾತಿಗೆ ಶಬ್ದಗಳಿಲ್ಲ..

      ಪ್ರತಿಕ್ರಿಯೆ
  9. ಅಶೋಕ ಶೆಟ್ಟರ್

    ಓದತೊಡಗಿದವನು ಓದುತ್ತಲೇ ಹೋದೆ ಅಕ್ಷರಗಳ ಸಾಲುಗಳು ಕೆಳಗಿನ ತುದಿ ತಲುಪುವವರೆಗೆ. ನಿಮ್ಮ ಅನುಭವಪ್ರಪಂಚಕ್ಕೆ ತಾಕಿಸಿಕೊಂಡೇ ಒಂದು ಪುಸ್ತಕವನ್ನು ಪರಿಚಯಿಸಿದ ನಿಮ್ಮ ವಿಧಾನ ಚೆನ್ನಾಗಿದೆ.

    ಪ್ರತಿಕ್ರಿಯೆ
    • ಶ್ರೀದೇವಿ

      ಶೆಟ್ಟರ್ ಸರ್ ತಮಗೆ ಇಷ್ಟವಾದರೆ ಅದೇ ಖುಷಿ

      ಪ್ರತಿಕ್ರಿಯೆ
  10. ಒಂದು ಮುತ್ತು

    ಬಹಳ ಚೆನ್ನಾಗಿದೆ. ಒಮ್ಮೊಮ್ಮೆ ಸಂಬಂಧಗಳು ಯಾಕೆ ಎಂದು ಅನಿಸುತ್ತದೆ. ಮಗದೊಮ್ಮೆ ಸಂಬಂಧಗಳು ಬೇಕು ಎಂದು ಅನಿಸುತ್ತದೆ. ಇದೊಂದು ರೀತಿಯಲ್ಲಿ ಇರಿಟೇಟ್ ಆಗುತ್ತದೆ. ಖಂಡಿತ ಮುಂದೊಂದು ದಿನ ಪುಸ್ತಕ ಕೊಂಡುಕೊಂಡು ಓದುವೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This