ಇಲ್ಲಿದೆ ಕಥೆಯೊಳಗೆ ಕಥೆ..

ಧೀರಜ್ ಪೊಯ್ಯೆಕಂಡ ಅವರ ನೂತನ ಕಾದಂಬರಿ- ಆತ್ಮಕತೆ

ಸ್ನೇಹ ಬುಕ್ ಹೌಸ್ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಗೆ ಲೇಖಕರು ಬರೆದ ಮಾತುಗಳು ಹಾಗೂ ಜೋಗಿ ಹೇಳಿದ್ದು ಇಲ್ಲಿದೆ-

**

ಆತ್ಮಕತೆ (ಹಾರರ್ ಥ್ರಿಲ್ಲರ್ ಕಾದಂಬರಿ)
ಲೇ: ಧೀರಜ್ ಪೊಯ್ಯೆಕಂಡ
ಪ್ರ: ಸ್ನೇಹ ಬುಕ್ ಹೌಸ್, ಬೆಂಗಳೂರು
ಪುಟ: 160 ಬೆಲೆ: 195 ರೂ.

**

ನಮ್ಮ ಹುಟ್ಟು ನಮ್ಮ ಕೈಯಲ್ಲಿಲ್ಲ. ಬಹುತೇಕ ಸಂದರ್ಭಕ್ಕೆ ನಮ್ಮ ಸಾವು ಕೂಡ ನಮ್ಮ ಕೈಯಲ್ಲಿಲ್ಲ. ಮೋಡಗಳೆರಡರ ಕದನ ಗುಡುಗು ಮಿಂಚಿನ ರೂಪದಲ್ಲಿ ಪ್ರಾಣಿ-ಪಕ್ಷಿಗಳ ಪ್ರಾಣ ತೆಗೆಯಬಹುದು. ಶಿಲಾಪದರಗಳ ನಡುವಿನ ಘರ್ಷಣೆ ಭೂಕಂಪದ ರೂಪದಲ್ಲಿ ಊರಿಗೆ ಊರನ್ನೇ ಆಪೋಷಣೆ ತೆಗೆದುಕೊಳ್ಳಬಹುದು. ಚಾಲಕರಿಬ್ಬರ ನಡುವಿನ ಪೈಪೋಟಿ ಪ್ರಯಾಣಿಕರನ್ನು ಬಲಿ ತೆಗೆದುಕೊಳ್ಳಬಹುದು. ಆಡಳಿತ ಪಕ್ಷ ಮತ್ತು ವಿಪಕ್ಷಗಳ ರಾಜಕೀಯ ಸಂಘರ್ಷ ಪ್ರಜೆಗಳ ಸಾವಿಗೆ ಕಾರಣವಾಗಬಹುದು. ಹೀಗೆ ಅಕಾಲಿಕ ಮರಣಕ್ಕೆ ಕಾರಣ ನಾವೇ ಆಗಬೇಕೆಂದಿಲ್ಲ. ಯಾರದ್ದೋ ಸ್ವಾರ್ಥಕ್ಕೆ, ಯಾರದ್ದೋ ಜಿದ್ದಿಗೆ, ಇನ್ಯಾರದ್ದೋ ಸಂಘರ್ಷಕ್ಕೆ ತಣ್ಣಗೆ ತನ್ನ ಪಾಡಿಗೆ ತಾನು ಬದುಕುತ್ತಿದ್ದವನು ಪ್ರಾಣ ಕಳೆದುಕೊಳ್ಳುತ್ತಾನೆ.

ಒಂದರ ಮೇಲೊಂದು ಶ್ರಮದ ಕಲ್ಲು ಇಡುತ್ತಾ, ಭವ್ಯ ಭವಿಷ್ಯಕ್ಕೆ ಬುನಾದಿ ಹಾಕುತ್ತಾ, ಇನ್ನೇನು ಸಾಧನೆಯ ಹಾದಿಯಲ್ಲಿ ಹೆಜ್ಜೆ ಇಟ್ಟೆ ಅನ್ನುವಾಗ ಸಾವು ನಿರ್ದಾಕ್ಷಿಣ್ಯವಾಗಿ ತನ್ನ ಮಡಿಲಿಗೆ ಎಳೆದುಕೊಳ್ಳುತ್ತದೆ. ಅಷ್ಟಕ್ಕೂ ಈ ಸಾವು ಬರುವುದು ಶರೀರಕ್ಕೆ ತಾನೆ?. ಈ ಶರೀರವನ್ನು ನಡೆಸುವ ಚೈತನ್ಯ ಇದೆಯಲ್ಲ… ಅದೇ ಆತ್ಮ. ಅವಿನಾಶಿ ಆತ್ಮ… ಅದಕ್ಕೆ ಸಾವಿಲ್ಲವಲ್ಲ.!

ಆತ್ಮ ಅಂತ ಯಾವುದಕ್ಕೆ ಹೇಳುತ್ತಾರೆ? ಆತ್ಮ ಎಂದರೆ ನಾನು ಎನ್ನುವ ಭಾವನೆ ಅನ್ನುತ್ತಾರೆ ಕೆಲವರು. ಒಂದು ಸಲ ಯೋಚನೆ ಮಾಡಿ ನೋಡಿ. ಹುಟ್ಟು- ಸಾವಿಲ್ಲದ, ಬಾಲ್ಯ, ಕೌಮಾರ್ಯ, ಯೌವ್ವನ, ವಾರ್ಧಕಾವಸ್ಥೆಗಳಿಲ್ಲ “ಆತ್ಮ” ಶರೀರದಿಂದ ಮುಕ್ತಗೊಂಡ ಮೇಲೆಯೂ, ಆ “ನಾನು” ಎನ್ನುವ ಭಾವನೆಯಿಂದ ಮುಕ್ತಗೊಳ್ಳದಿದ್ದರೆ, ಮನುಷ್ಯ ಸಹಜವಾದ ಅರಿಷಡ್ವರ್ಗಗಳನ್ನು ಹಾಗೆಯೇ ಉಳಿಸಿಕೊಂಡರೆ, ತನ್ನ ಶರೀರದ ಸಾವಿಗೆ ಕಾರಣರಾದವರ ಸಾವನ್ನು ಕಾಣುವ ಹಪಾಹಪಿಗೆ ಬಿದ್ದುಬಿಟ್ಟರೆ ಏನಾಗಬಹುದು?

ಬಹುಶಃ ಮನುಷ್ಯ ಇನ್ನೊಂದು ಜೀವವನ್ನು ತೆಗೆಯುವ ಯೋಚನೆಯನ್ನೂ ಮಾಡುವುದಿಲ್ಲ. ‘ಆತ್ಮಕತೆ’ಯ ಕತೆಯೂ ಇದೇ. ತಾನೇನೂ ಮಾಡದಿದ್ದರೂ, ಪರರ ಮೋಜಿಗಾಗಿ ಪ್ರಾಣ ಕಳೆದುಕೊಂಡು ಪ್ರತೀಕಾರದ ಜಿದ್ದಿಗೆ ಬಿದ್ದ ಆತ್ಮದ ಕತೆ ಇದು. ಈ ಕಾದಂಬರಿ ಹಾರರ್ ಜಾನರ್‌ಗೆ ಸಲ್ಲುತ್ತದೆಯಾದರೂ ಇಲ್ಲಿ ಪ್ರೀತಿ, ಸ್ನೇಹ, ತಾಯಿ ಮಮತೆ, ಕನಸು, ಪಶ್ಚಾತ್ತಾಪ ಎಲ್ಲವೂ ಇದೆ. “ಕಥೆಯೊಳಗೆ ಕಥೆ” ಹೇಳುವ ತಂತ್ರವನ್ನು ಈ ಕಾದಂಬರಿಯಲ್ಲಿ ಬಳಸಿಕೊಳ್ಳಲಾಗಿದೆ.

ಜೋಗಿ ಹೇಳಿದ್ದು..

**

ಧೀರಜ್ ಪೊಯ್ಯೆಕಂಡ ಕನ್ನಡಪ್ರಭದಲ್ಲಿ ನನ್ನ ಸಹೋದ್ಯೋಗಿ ಆಗಿದ್ದವರು. ಅವರ ಮೊದಲ ಕಾದಂಬರಿ ‘ಮಿತಿ’ಯನ್ನು ಹಿಂದೆ ಓದಿದ ನೆನಪು. ಇದೀಗ ಅವರು ನಾಲ್ಕನೆಯ ಪುಸ್ತಕ ಹೊರತಂದಿದ್ದಾರೆ. ಅದನ್ನು ಬಿಡುಗಡೆ ಮಾಡಿ ಸಂತೋಷಪಟ್ಟೆ.

ಧೀರಜ್ ಶ್ರದ್ಧಾವಂತ ಲೇಖಕ. ಈಗ ಅವರು ಕೆಲಸ ಮಾಡುವ ವಿಜಯ ಕರ್ನಾಟಕದಲ್ಲಿ ಅವರ ಬರಹಗಳನ್ನು ಓದುತ್ತಿರುತ್ತೇನೆ. ನನಗೂ ಹಾರರ್ ಕತೆಯೆಂದರೆ ಆಸಕ್ತಿ. ಒಂದು ಕಾಲದಲ್ಲಿ ನಾನೂ ದೆವ್ವಗಳನ್ನು ಹುಡುಕಿಕೊಂಡು ಅಡ್ಡಾಡಿದವನೇ. ಧೀರಜ್ ಕೂಡ ಆಸಕ್ತಿಕರವಾದ ಹಾರರ್ ಕಾದಂಬರಿ ಬರೆದಿದ್ದಾರೆ. ಹೆಸರೇ ಆತ್ಮಕತೆ.

ಬಹು ಉತ್ಸಾಹಿ ಪ್ರಕಾಶಕರಾದ ಪರಮಶಿವಪ್ಪ ಇದನ್ನು ಸ್ನೇಹಾ ಪ್ರಕಾಶನದ ಮೂಲಕ ಪ್ರಕಟಿಸಿದ್ದಾರೆ. ಪುಸ್ತಕೋದ್ಯಮ ಜೀವಂತವಾಗಿದೆ. ಓದುಗರ ಸಂಖ್ಯೆ ಹೆಚ್ಚುತ್ತಿದೆ ಅಂತ ಪರಮಶಿವಪ್ಪ ಹೇಳಿ ಜೀವಕ್ಕೆ ಸಂತೋಷ ಕೊಟ್ಟರು.

ಇಬ್ಬರಿಗೂ ಅಭಿನಂದನೆ.

‍ಲೇಖಕರು avadhi

May 17, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: