ಇಮ್ತಿಯಾಜ್ ಶಿರಸಂಗಿ ಓದಿದ ‘ಅಂಬೇಡ್ಕರ್ ಸಹವಾಸದಲ್ಲಿ’

ಇಮ್ತಿಯಾಜ್ ಶಿರಸಂಗಿ

ಸುಳ್ಳಿನ ಪರದೆ ಸರಿಸಿ ಸತ್ಯದ ಬೆಳಕು ತೋರಿಸುವ ಕೃತಿ.. ಡಾ. ಸವಿತಾ ಅಂಬೇಡ್ಕರ್ ವೃತ್ತಿಯಲ್ಲಿ  ಡಾಕ್ಟರ್. ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಹೆಣ್ಣು ಮಗಳು. ಮಹಾಪುರುಷ  ಅಂಬೇಡ್ಕರ್ ಅವರ  ಎರಡನೇ  ಹೆಂಡತಿ.

ಭಾರತಕ್ಕೆ  ಸದಾ ದಿಕ್ಸೂಚಿ ಆಗಬಲ್ಲ  ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಅವರು ತೊಡಗಿರುವಾಗ ಅದಾಗಲೇ ಅವರ ಮೊದಲ ಪತ್ನಿ ರಮಾಭಾಯಿ ತೀರಿಹೋಗಿದ್ದರು. ಅಂಬೇಡ್ಕರರ ಖಾಸಗಿ ಬದುಕು ಅಕ್ಷರಶಃ  ಒಂಟಿತನದಿಂದ ಕೂಡಿತ್ತು.  ಅನಾರೋಗ್ಯ, ಒಂಟಿತನ ಹೀಗೆ ವಯಕ್ತಿಕ ಜೀವನ ಅಷ್ಟಾಗಿ ಚೆನ್ನಾಗಿರಲಿಲ್ಲ. ಈ ಸಮಯದಲ್ಲಿ ಡಾಕ್ಟರ್ ಶಾರದಾ ಕಬೀರ್ ಅಂಬೇಡ್ಕರವರ ಜೀವನದಲ್ಲಿ ಸಂಜೀವಿನಿಯಂತೆ ಬಂದರು. ವ್ಯೆದ್ಯ ಮತ್ತು  ರೋಗಿಯ  ಪರಿಚಯ ಮುಂದೆ ವಿವಾಹದ ವರೆಗೂ ಮುಂದುವರೆಯಿತು.. ಡಾ. ಶಾರದಾ  ಕಬೀರ ಎಂಬ ಹೆಸರಿನಿಂದ ಸವಿತಾ ಅಂಬೇಡ್ಕರ್  ಎಂಬ ಹೆಸರನ್ನು ಪಡೆದರು. (ಡಾ.  ಅಂಬೇಡ್ಕರ ಸಾಹೇಬ್ರು  ನೀಡಿದ ಹೆಸರು)

ಅಂಬೇಡ್ಕರ್ ಪರಿನಿರ್ವಾಣ ಹೊಂದುವವರೆಗೂ ಸವಿತಾ ಅವರು, ಸಾಹೇಬರ ಅವಿಭಾಜ್ಯ ಅಂಗವಾಗಿದ್ದರು.. ಅಂಬೇಡ್ಕರ್ ಅವರಿಂದ ಮದುವೆ ನಿವೇದನೆ, ಉಡುಗೊರೆ, ಪತ್ರವ್ಯವಹಾರ, ಕೊನೆಗೆ ಮದುವೆ.. 7-8 ವರ್ಷ ಅವಧಿಯಲ್ಲಿ  ಸವಿತಾ  ಅವರು ಅಂಬೇಡ್ಕರ್ ಅವರ  ಆತ್ಮ ವಾಗಿ ಬಿಡುತ್ತಾರೆ. “ಒಂದು ಆತ್ಮಸಾಕ್ಷಿ ಇನ್ನೊಂದು ಆತ್ಮಸಾಕ್ಷಿಯನ್ನು ನೋಡಿತು ಮತ್ತು ಸಮಾನ ಶೀಲವನ್ನು ಆರಿಸಿತು” ಇದು ಅಂಬೇಡ್ಕರ ಮಾತು.

ಇಂತಹ ನಿಷ್ಕಲ್ಮಶ ಸಂಬಂಧಕ್ಕೆ ಅಂಬೇಡ್ಕರ್  ತೀರಿಹೋದ ನಂತರ ಅಂದಿನ ಕೆಲವು ನಾಯಕರು ಅಂಬೇಡ್ಕರ್ ಅವರ    ರಾಜಕೀಯ ಉತ್ತರಾಧಿಕಾರತ್ವ ಲಾಭಕ್ಕಾಗಿ ಷಡ್ಯಂತ್ರ ನಡೆಸಿ ಅವರ ಸಾವಿನ ಹೊಣೆಯನ್ನು  ‘ಸವಿತಾ ಅಂಬೇಡ್ಕರ್’ ಅವರ ಮೇಲೆ ಹಾಕಲಾಯಿತು. 

ಮಹಾಪುರುಷರ ಜೀವನ ಚರಿತ್ರೆ ಹಾಗೆ ನಡೆದ ಸತ್ಯ ಘಟನೆಗಳನ್ನು ಜನ ಒಪ್ಪುತ್ತಾರೋ? ಬಿಡುತ್ತಾರೋ? ಆದರೆ ಕಟ್ಟುಕಥೆಗಳನ್ನು ನಂಬಿಬಿಡುತ್ತಾರೆ. ಇಲ್ಲಿ ಆಗಿತ್ತು ಅದೇ. “ಅವಳು ಬ್ರಾಹ್ಮಣಳು ಹೀಗಾಗಿ  ಅಂಬೇಡ್ಕರಸಾಹೇಬರನ್ನು ವಿಷಪ್ರಾಶನ ಮಾಡಿಕೊಂದಳು ” ಎನ್ನುವ ಕತೆಯನ್ನು ಜನರು ನಂಬಿದರು. ಅಂದಿನ ನಾಯಕರು ಸವಿತಾ ಅಂಬೇಡ್ಕರರಿಗೆ ಮತ್ತು ಅಂಬೇಡ್ಕರ್ ಅವರಿಗೆ   ಮಾಡಿದ ಬಹುದೊಡ್ಡ ಮೋಸ ಅಲ್ಲದೆ ಮತ್ತಿನ್ನೇನು..??

 ಸವಿತಾ ಅಂಬೇಡ್ಕರ್ ಬರೆಯುತ್ತಾರೆ” ಸಾಹೇಬರ ಪರಿನಿರ್ವಾಣದ ನಂತರ ಅನೇಕರು ಅನೇಕ ಪ್ರಕಾರ ವಿಕೃತಿಗಳನ್ನು ಸೃಷ್ಟಿಸಿ ನನ್ನ ವಿರುದ್ಧ ಸಮಾಜ ಕಲುಷಿತಗೊಳಿಸುವ ಪ್ರಯತ್ನ ಮಾಡಿದರು ” ಈ ಮೇಲಿನ ಮಾತುಗಳು ಆ ಮಹಾತಾಯಿಗೆ ಆದ ಘಾಸಿ ಯನ್ನು ವ್ಯಕ್ತಪಡಿಸುತ್ತವೆ.. ಸರ್ಕಾರವೇ ತನಿಖೆ ನಡೆಸಿ ಇದು ಸಹಜ ಸಾವು ಎಂದು ಹೇಳಿದರೂ ಕೂಡ ನಂಬಲು ಯಾರೂ ತಯಾರಿರಲಿಲ್ಲ.ಸ್ವಾರ್ಥಿ ನಾಯಕರು ರೂಪಿಸಿದ ಷಡ್ಯಂತ್ರಕ್ಕೆ  ಸವಿತಾ ಅಂಬೇಡ್ಕರ್ ತುತ್ತಾದರು. ಅವರ ಆತ್ಮಕಥೆ ಎಲ್ಲದಕ್ಕೂ ಉತ್ತರ ನೀಡಿ,ಸುಳ್ಳಿನ ಪರದೆ ಸರಿಸಿ  ಸತ್ಯದ ಬೆಳಕು ತೋರಿಸುತ್ತದೆ..

 ಸವಿತಾ ಅಂಬೇಡ್ಕರ್ ಬರೆಯುತ್ತಾರೆ” ಈ ಸ್ವಕಥನವು  ನನ್ನ ಹೃದಯದಿಂದ ಒಡಮೂಡಿದ ಪ್ರಮಾಣೀಕೃತ ದಾಖಲೆಯಾಗಿದೆ. ಕೇವಲ ನನ್ನ ಮಾತನ್ನು ಸಮಾಜದ ಮುಂದೆ ಇಡುವುದು ಉತ್ತರ ಉದ್ದೇಶವಲ್ಲ. ವಾಸ್ತವದಲ್ಲಿ ಬಾಬಾಸಾಹೇಬರ ಒಡನಾಟದಲ್ಲಿ  ನನಗಾದ ಅನುಭವಗಳು ಮತ್ತು ಅವರ ಪರಿನಿರ್ವಾಣದ ನಂತರ ನಾನು ಅನುಭವಿಸಿದ ಸಂಕಷ್ಟಗಳು ಮತ್ತು ಪರೀಕ್ಷೆಗಳನ್ನು ಎದುರಿಸಿ ಬಂದ ಹಾದಿ. ಅನುಭವಗಳಿಗೆ ಅಕ್ಷರ ರೂಪ ನೀಡುವ ನನ್ನದೇ ಪ್ರಯತ್ನವಿದು. “

ಈ ಕೃತಿಯಲ್ಲಿ ಉಲ್ಲೇಖವಿರುವ  ಮೂಲ ವೈಯಕ್ತಿಕ  ಪತ್ರಗಳು, ಗೊತ್ತಿರದ ಸ್ವಾರಸ್ಯಕರ ಘಟನೆಗಳು, ಅಂದಿನ ರಾಜಕೀಯ ಸ್ಥಿತಿಗತಿ,ಅಂಬೇಡ್ಕರರ ದೂರದೃಷ್ಟಿ, ಹಲವು ಚಿತ್ರಪಟಗಳು ಈ ಕೃತಿಯ ಸೊಬಗನ್ನು ಹೆಚ್ಚಿಸಿವೆ ಒಂದೇ ಗುಂಗಿನಲ್ಲಿ ಓದಿಸಿಕೊಂಡು ಹೋಗುವ ಕೃತಿ.ಓದಿದ ನಂತರ ಸವಿತಾ ಅಂಬೇಡ್ಕರರ ಬಗ್ಗೆ ನಮ್ಮ ಮನಸ್ಸಿನಲ್ಲಿ ವಿಶೇಷ ಗೌರವ ಮೂಡುವುದಂತೂ ಸುಳ್ಳಲ್ಲ.  ಸವಿತಾ ಅಂಬೇಡ್ಕರ ಬಗ್ಗೆ ಕನ್ನಡದಲ್ಲಿ    ಲಭ್ಯವಿರುವ ಏಕೈಕ ಕೃತಿ ಎಂದರೆ ತಪ್ಪಾಗಲಾರದು. ಹಿಂದಿ ಮರಾಠಿಯಲ್ಲಿ ಅನೇಕ ಕೃತಿಗಳು ಪ್ರಕಟಗೊಂಡಿವೆ ಆದರೆ ಕನ್ನಡ ಮನಸ್ಸುಗಳಿಗೆ ಈಗ ಶ್ರೀ ಅನಿಲ ಹೊಸಮನಿಯವರ ಸುಂದರ ಅನುವಾದದಿಂದ ದೊರಕಿದೆ.. ಮೂಲ ಕನ್ನಡದಲ್ಲಿಯೇ ಬರೆದ ಕೃತಿ ಏನೋ? ಅನಿಸುವಷ್ಟು ಸಹಜವಾಗಿದೆ.. ಅಂಬೇಡ್ಕರರ ಬಗ್ಗೆ ಓದಿದವರು ಮತ್ತು ಓದುವ ಕುತೂಹಲ ಇರುವವರು ಈ ಕೃತಿಯನ್ನು ಓದದೇ ಇದ್ದರೆ ಆ ಓದು  ಅಪೂರ್ಣವಾದೀತು.. ಲಡಾಯಿ ಪ್ರಕಾಶನದ ಬಸವರಾಜ್ ಸೂಳಿಭಾವಿ ವಿಶೇಷ ಕಾಳಜಿಯಿಂದ ಈ ಕೃತಿಯನ್ನು ಪ್ರಕಟಿಸಿದ್ದಾರೆ…

ಲೇಖಕ ಅನುವಾದಕರ ಬಗ್ಗೆ – ಶ್ರೀ ಅನಿಲ್ ಹೊಸಮನಿ ವಿಜಯಪುರ ದವರು. ಅವರು ಉತ್ತರ ಕರ್ನಾಟಕದ ಹೆಸರಾಂತ ಅಂಬೇಡ್ಕರ್ ವಾದಿ, ಚಿಂತಕ ಮತ್ತು ಹೋರಾಟಗಾರರು ಆಗಿದ್ದ, ಶ್ರೀ ಚಂದ್ರಶೇಖರ ಹೊಸಮನಿಯವರ ಮಗ (ಪರಿವರ್ತಕ ಎಂಬ ವಾರ ಪತ್ರಿಕೆ ನಡೆಸುತ್ತಿದ್ದರು) ಇವರು ಕೂಡ ತಂದೆ ಮಾರ್ಗವೇ ಅನುಸರಿಸಿ ಮೂರ್ನಾಲ್ಕು ದಶಕಗಳಿಂದ ಬಿಸಿಲ ನಾಡಿನಲ್ಲಿ ಹೋರಾಟದ ಧ್ವನಿಯನ್ನು ಜೀವಂತವಾಗಿಟ್ಟಿದ್ದಾರೆ. ಈ ಭಾಗದ ಅನೇಕ  ಹಿರಿ-ಕಿರಿ ದಲಿತ ಪರ ಹೋರಾಟಗಾರರು, ಮತ್ತು ಅಹಿಂದ ನಾಯಕರು ಈ ತಂದೆ-ಮಕ್ಕಳ ಗರಡಿಯಲ್ಲಿ ಪಳಗಿದವರು. ಶ್ರೀಯುತರು  ಬಹುಜನ ನಾಯಕ  ಪತ್ರಿಕೆ ನಡೆಸುತ್ತಿದ್ದಾರೆ. ಇವರ ಇನ್ನೊಂದು ಅನುವಾದದ ಪುಸ್ತಕ ವಾಲಿಯವರ ರಾವಣ ಮಹಾತ್ಮನೋ? ರಾಕ್ಷಸನೋ? (ಲಡಾಯಿ  ಪ್ರಕಾಶನ) ಪ್ರಕಟಗೊಂಡಿದೆ.

7 /8 /2022 ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆದ  ಸವಿತಾ ಅಂಬೇಡ್ಕರ್ ಅವರ ಆತ್ಮಕಥೆ ಅಂಬೇಡ್ಕರ ಸಹವಾಸದಲ್ಲಿ ಕೃತಿ ಬಿಡುಗಡೆಯ ಅಭೂತಪೂರ್ವ ಕಾರ್ಯಕ್ರಮಕ್ಕೆ  ಪ್ರೇಕ್ಷಕನಾಗಿ ಭಾಗಿಯಾಗಿದ್ದೆ. ಪುಸ್ತಕ ಕೊಂಡು ಹಸ್ತಾಕ್ಷರ ಪಡೆದು  ಮರಳಿದಾಗ ಒಂದೇ ಗುಂಗಿನಲ್ಲಿ 150 ಪುಟ ಓದಿದೆ. ನನ್ನಲ್ಲಿ ಉಂಟಾದ ಅನುಭವವನ್ನು ಮತ್ತು ಅನುವಾದಿಸಿ ಕನ್ನಡ ಮನಸುಗಳಿಗೆ  ನೀಡಿದ ಅನಿಲ್ ಹೊಸಮನಿ ಅವರನ್ನು ಅಭಿನಂದಿಸಲು ಕರೆ ಮಾಡಿದೆ. ಕರೆ ಸ್ವೀಕರಿಸಲಿಲ್ಲ  ಮರುದಿನ  ತಾವೇ ಕರೆ ಮಾಡಿದರು.. ಅಭಿನಂದನೆ ಸಲ್ಲಿಸಿದೆ. ನನ್ನಲ್ಲಿ ಉಂಟಾದ ಅನುಭವವನ್ನು ವ್ಯಕ್ತ ಪಡಿಸಿದೆ  ಖುಷಿಪಟ್ಟರು..ನಿಮ್ಮ ಬಗ್ಗೆ ಒಂದು ಸಂದರ್ಶನ ಲೇಖನ ಬರೀಬೇಕು ಅಂದುಕೊಂಡೀನಿ ಸರ್ ಅಂದೇ.. ತಕ್ಷಣ ಅವರು “ನನ್ ಬಗ್ಗೆ ಬ್ಯಾಡ್ರೀ  ಪುಸ್ತಕದ ಬಗ್ಗೆ ನಿಮಗ್ ಏನ ಅನಸೈತಿ ಬರೀರಿ, ನಾನೇನು ಮಾಡಿಲ್ಲ ಅಂದ್ರು “ಅದು  ಅವರ ದೊಡ್ಡತನ..

ಮೇಲಿನ ಈ ಲೇಖನವೇ ಅದು..

‍ಲೇಖಕರು Admin

August 15, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: