ಸಂಜೋತಾ ಪುರೋಹಿತ್
(ಇಸವಿ ನೋಡಿ)
ಅಜ್ಜನಿಗೆ ಎಲ್ಲವನ್ನು ಬರೆದಿಡುವ ಅಭ್ಯಾಸವಿತ್ತು. ಹತ್ತು ರೂಪಾಯಿ ಕೊಟ್ಟಿದ್ದರಿಂದ ಹಿಡಿದು ಹತ್ತು ರೂಪಾಯಿ ತೆಗೆದುಕೊಂಡಿದ್ದರವರೆಗಿನ ಲೆಕ್ಕ. ಕಬ್ಬನ್ನು ಕಳಿಸಿದ ಲೆಕ್ಕ, ಮನೆಗೆ ಹಂಚು ತಂದ ಖರ್ಚಿನ ಲೆಕ್ಕ, ರೈತರಿಗೆ ಕೊಟ್ಟ ಸಾಲದ ಲೆಕ್ಕ..
ಇಷ್ಟೇ ಅಲ್ಲ.. ಅವನು ಮತ್ತು ಅಜ್ಜಿ ಯಾವ ದಿನ ಎಲ್ಲಿ ಮದುವೆಯಾದರು ಎಂದು ಬರೆದಿಟ್ಟಿದ್ದಾನೆ. ಮಕ್ಕಳ ಮದುವೆಯ ವಿವರ. ಅವರ ನಿಶ್ಚಿತಾರ್ಥ, ಮದುವೆಯ ಟಿಪ್ಪಣಿ ಬರುತ್ತದೆ. ನಂತರ ಮೊಮ್ಮಕ್ಕಳ ಮದುವೆಯ ವಿಷಯವೂ ಅಜ್ಜನ ಕೈಯಿಂದ ದಾಖಲಾಗಿದೆ. ಮಕ್ಕಳ, ಮೊಮ್ಮಕ್ಕಳ, ಮರಿಮೊಮ್ಮಗನ ಹುಟ್ಟಿದ ದಿನ, ನಕ್ಷತ್ರ, ಜನ್ಮನಾಮ, ವ್ಯವಹಾರಿಕ ನಾಮ, ಎಲ್ಲವೂ ಪಟ್ಟಾಗಿ ದಾಖಲಾಗಿವೆ. ಅಷ್ಟೇ ಯಾಕೆ.. ಮನೆಗೆ ಬಂದ ಅಳಿಯಂದಿರ ಸೊಸೆಯರ ಜನ್ಮದಿನಗಳನ್ನು ಅಜ್ಜನ ಪುಸ್ತಕದಲ್ಲಿ ಕಾಣಬಹುದು.
ಅವನಿಗೆ ಅಗಾಧ ನೆನಪಿನ ಶಕ್ತಿಯಿತ್ತು. ಅದರಲ್ಲಿ ಇನ್ನೊಂಚೂರು ನನಗೆ ಕೊಡಬಹುದಿತ್ತು ಎಂದು ನನ್ನ ಅತಿಯಾಸೆ. ಈ ಪುಸ್ತಕ 2004 ರಿಂದ ಶುರುವಾಗುತ್ತದೆ. ಅಂದರೆ 18 ವರ್ಷಗಳ ಹಿಂದಿನಿಂದ ಶುರುವಾಗಿದೆ ಲೆಕ್ಕ. ಅದರ ಹಿಂದಿನದೂ ಇತ್ತು. ನುಜ್ಜುಗುಜ್ಜಾದ ಹಾಳೆಗಳ ಮಧ್ಯದಲ್ಲಿ ಸುರಕ್ಷಿತವಾಗಿತ್ತು. ಈ ಪ್ರಮಾಣದ ಶಿಸ್ತುಬದ್ಧ ಜೀವನ ನಡೆಸಿದ ಅಜ್ಜನನ್ನು ನೆನೆದರೆ ಹೆಮ್ಮೆಯಾಗುತ್ತದೆ.
ಇವತ್ತು ಅಜ್ಜನ ಮುಖ್ಯಪ್ರಾಣವಿರುವ ಊರಿಗೆ ಹೋಗಿದ್ದೆ. ‘ಆರಾಮಾದ ಕೂಡ್ಲೇ ಹೋಗೊಣು’ ಎಂದು ಹೇಳುತ್ತಲೇ ಅಜ್ಜ ಮನೆಗೆ ಹೋಗಲಾಗದೆ ಕಣ್ಣು ಮುಚ್ಚಿದ. ಇಡೀ ಮನೆಯೇ ಅವನಿಗಾಗಿ ಕಾಯುತ್ತ ಕೂತಂತೆನಿಸಿತು. ಅವನ ಪ್ರೀತಿಯ ಸೈಕಲ್ ತುಕ್ಕಾಗಿ ಸಪ್ಪಗೆ ನಿಂತಿತ್ತು. ಸೀಮೆಎಣ್ಣೆಯ ಚಿಮಣಿ ದೀಪವಿಲ್ಲದೇ ಕತ್ತಲ ಗೂಡಲ್ಲಿ ಕೂತಿತ್ತು. ದೇವರ ಪಟಗಳು ಅನಾಥವಾಗಿದ್ದವು. ಅವನು ನಡೆದಾಡಿದ ನೆಲ ಭಾರವಾಗಿತ್ತು. ಅಜ್ಜಿಯ ದಾರದ ಡಬ್ಬಿ, ಅರ್ಧ ಖಾಲಿಯಾದ ರವೆ ಡಬ್ಬಿ, ಉಪ್ಪಿನಕಾಯಿಯಿಲ್ಲದ ಭರಣಿಗಳು, ಅರ್ಧ ಸುಟ್ಟ ಸೀಗಡಿ ಒಲೆ ಎಲ್ಲವೂ ಇಲ್ಲದ ಅಜ್ಜ ಅಜ್ಜಿಯನ್ನು ನೆನಪಿಸಿದವು. ಅಲ್ಲಿಂದ ಹೊರಬಂದಾಗ ಹೃದಯ ಭಾರವಾಗಿತ್ತ.
0 Comments