ಇದು ನನ್ನ ಗುರುಗಳನ್ನ ನೆನೆವ ಹೊತ್ತು….

ಎದ್ದೊಂದು ಘಳಿಗೆ ನೆನೆದೇನು…

ಶಿವು ಮೋರಿಗೇರಿ

ಹಿಂದೊಂದು ಸರ್ತಿ, ‘ಇವತ್ತು ನೀವು ಜೀವನದಾಗ ಇಷ್ಟು ದೂರ ಬಂದೀರಲ್ಲಾ, ಒಮ್ಮಿ ತಿರುಗಿ ನೋಡಿಕಂಡು ನಿಮ್ಮ ಸಾಲಿ ದಿನಗಳು ಹೆಂಗಿದ್ವು? ಅನ್ನಾದನ್ನ ಇವತ್ತಿನ ಪರಿಸ್ಥಿತಿಗೆ ಸಮಕಾಲೀನಗೊಳಿಸ್ತೀರೇನು ?’ ಹಿಂಗಂತ ಪ್ರಶ್ನಿ ಕೇಳತಿದ್ದಂಗನಾ, ನನ್ನ ಜತಿಗೆ ಓದೋ ಹುಡ್ರೆಲ್ಲಾ ಹಾಳಿ ಪೆನ್ನು ತಗೊಂಡು ಔರೋರ ಸಾಲ್ಯಾಗ ಕಳದ ದಿನಗಳನ್ನ ಬರಿಯಾಕ ಚಾಲೂ ಮಾಡೇಬಿಟ್ರು. ಆದ್ರ ನನ್ನ ಗತಿ ? ಯಾರಿಗೆ ಹೇಳಬೇಕ್ರಿ ಅವತ್ತಿನ ನನ್ನ ಪರಿಸ್ಥಿತಿ. ಅವತ್ತಿಡೀ ರಾತ್ರಿ ನನಿಗ್ಯ ನಿದ್ದಿನೇ ಹತ್ತವಲ್ದು.  ಯಾಕ ಅಂದ್ರ ನನ್ನ ಸಾಲಿ ದಿನದ ನೆನಪುಗಳು ಅಂದ್ರ ಅದು ಸಾಲಿ ಹೊರಗೂ, ಒಳಗೂ, ಆಫೀಸ್ ರೂಮಿನಾಗೂ, ಮೇಷ್ಟ್ರಗಳ ಮನಿಗಳಾಗು ಹಲ್ಡಿಕಂಡು ನನ್ನ ಬರವಣಿಗಿ ಹಿಡತಕ್ಕಾ ಸಿಗವಲ್ದು. ನೀವು ಸುಳ್ಳು ಹೇಳಿದ್ರೂ ಕೇಳತೀರಿ ಖರೆ ಹೇಳಿದ್ರೂ ಕೇಳ್ತೀರಿ. ಪೂರಾ ಎಲ್ಡುದಿನ ಅದಾ ಗುಂಗಿನಾಗ ಕಳದ್ರೂ ನನ್ನ ಸಾಲೀ ದಿನಗಳ ನೆನಪಿನ ಮುನ್ನುಡಿನೂ ಮುಟ್ಟಾಕ್ಕಾಗವಲ್ದು. ಯಾವಾಗ ನನಿಗ್ಯ ಇದನ್ನ ಅಷ್ಡು ಸುಲಭಕ್ಕ ಬರದು ಮುಗಸಾ ಮಾತಲ್ಲ ಅಂತ ಅನ್ನಿಸ್ತೋ ಸೀದಾ ನಮಿಗೆ ಟಾಸ್ಕ್ ಕೊಟ್ಟೋರ ಎದ್ರಿಗೆ ನಿಂತ್ಕಂಡು ‘ ದಯವಿಟ್ಟು ನನ್ನ ಕ್ಷಮಿಸಿಬಿಡ್ರಿ ಸಾ, ನನ್ನ ಸಾಲಿ ದಿನಗಳ ಬಗ್ಗೆ ಬರಿಯಾಕ ನನಿಗೆ ಬಾಳ ದಿನ ಟೈಂ ಬೇಕಾಕೈತಿ, ಬರೀ ಎಲ್ಡು ದಿನದಾಗ ಅದನ್ನ ಬರಿಯಾಕ್ಕಾಗದ ಮಾತು. ಬಿಟ್ಟು ಬಿಡ್ರಿ ಆ ವಿಚಾರನ ಇಲ್ಲಿಗೆ ಅಂತೇಳಿ ಕೈ ತೊಳಕಂಡಿದ್ದೆ.

ಈ ಘಟನಿ ನಡೆದು ಆರೆಂಟು ತಿಂಗಳು ಅಂದ್ರ ಒಂದು ಸುಗ್ಗಿ ಹೋಗಿ ಒಂದು ಬ್ಯಾಸಿಗಿ ಆಕಳಿಸಾ ಟೈಮಿಗೆ ಯಾವುದೋ ಪರಿಸ್ಥಿತಿಯೊಳಗ  ನಾನು ಮರತಾ ಹೋಗಿದ್ದ ವಿಚಾರ ಮತ್ತೆ ನನ್ನ ತಲಿಯಾಗ ಕುಣಿಯಾಕ ಚಾಲೂನಾ. ಆದ್ರ ಹೋದಸರಿ ಬಿಟ್ಟಂಗ ಈ ಸರಿ ಬಿಡಾ ಮಾತಾ ಇರಲಿಲ್ಲ. ಹಂಗಾಗಿ ನೋಡೇ ಬುಡಾನು ಒಂದು ಕೈ. ಈ ಕುರಿತು ಬರಿಯಾಕ ಕುಂತ್ರ ನನ್ನ ತಲಿಭಾರಾನೂ ಚೂರು ಕಮ್ಮಿಯಾದೀತು ಅಂತೇಳಿ ಅಳದ ಉಳದ ಸಮಯದೊಳಗ ಬರಿಯಾಕ ಚಾಲೂ ಮಾಡೀನಿ ‘ಎದ್ದೊಂದು ಘಳಿಗಿ ನೆನೆದೇನು …’ ಅಂತ. ನೀವು ಜಗತ್ತಿನೊಳಗ ಎಂಥಾ ದೊಡ್ಡ ಮನಿಷಾರಾ ಆಗಿರಿ, ಎಷ್ಟು ದೊಡ್ಡ ಮೇಧಾವಿನರಾ ಆಗಿರಿ, ಗುರುವಿಲ್ಲದ ಗುರುವೊಬ್ಬನನ್ನ ನನಗೆ ತೋರಿಸಿಕೊಡ್ರಿ ನೋಡ್ತೀನಿ. ಯಾಕ ನಾನು ಇದ್ದಕ್ಕಿದ್ದಂಗ ಈ ಮಾತು ಹೇಳಾಕ ಚಾಲೂ ಮಾಡೀನಿ ಅಂದ್ರ ನಾನೀಗ ನನ್ನ ಸಾಲಿ ಮೇಷ್ಟ್ರಗಳನ್ನ ಒಂದು ರೌಂಡು ಪೂರಾ ನೆಪ್ಪಿಸಿಕೊಳ್ತೀನಿ. ನಾ ಕಂಡ ನನ್ನ ಗುರುಗಳನ್ನ ನಿಮಿಗೂ ಪರಿಚಯ ಮಾಡಿಕೊಡ್ತೀನಿ. ಹಿಂಗಂತ ನಿಮಿಗ್ಯ ಹೇಳಿದ ಕೂಡ್ಲೆ ನನಿಗ್ಯ ನೆನಪಾಗೋದು ಅಂದ್ರ ಅದು ಗಾಣಿಗಿರ ಶೇಖರಪ್ಪ ಮೇಷ್ಟ್ರು. ನನಿಗೆ ಇವರ ಮುಖಾನೂ ನೆನಪಾಗವಲ್ದು. ಆದ್ರ ಈ ಪುಣ್ಯಾತ್ಮನಾ ನನ್ನ ಸಾಲಿಗೆ ಸೇರಿಸ್ಕೊಳ್ಳೋ ಹೊತ್ತಿನಾಗಾ ಒಂದು ಸ್ಟಂಟ್ ಮಾಡ್ಯಾರ ಅಂತಾನಾ ಹೇಳಬಹುದು. ಹೊಸದಾಗಿ ಸಾಲಿ ಸೇರಿಕೊಳ್ಳ ಹುಡ್ರು ಲೀಸ್ಟ್ ಬರಿಯಾಕ ಬಂದಾರು ನಮ್ಮಪ್ಪನತ್ರ ಮಾತಾಡಿಕೋತ ‘ಹೇ ಹೇಮಣ್ಣಾ, ನಿಮ್ಮ ಹಿರೇ ಮಗ್ಗಾ, ಇಲ್ಲಿ ಅಡ್ರೆಸ್ಸಾ ಬರದೀವಿ, ಈ ಎಲ್ಡನೇನಿಗೆ, ಚಿಕ್ಕಹಳ್ಳಿ ಅಡ್ರೆಸ್ಸೂ (ಹರಪನಹಳ್ಳಿಯ ಕೂಗಳತೆಯಲ್ಲಿರುವ ನನ್ನ ಅಜ್ಜಿಯ ತವರು ಚಿಕ್ಕಹಳ್ಳಿ ) ಈ ಊರ ಅಡ್ರೆಸ್ಸೂ ಮಿಕ್ಸ್ ಮಾಡಿ ಬರ್ಕಂಬಿಡಾನು ಅಂತೇಳಿ ಟಿ ಎಂ ಅಡ್ರೆಸ್ಸನ್ನ ಸೇರಿಸಿ ಶಿವನ ಪಾದ ಸೇರಿಕಂಡ ಮಹಾನಭಾವ ಅವ್ರು.

ಇದೊಂದು ಯಡವಟ್ಟಿನಿಂದ ಏನಾಗೈತಿ ಅಂದ್ರ, ನಾನೇನು ನಮ್ಮನೇನು ಹೌದೋ ಅಲ್ಲೋ ಅನ್ನಂಗ ನಮ್ಮ ಮನ್ಯಾರ ಎಲ್ಲರ ಅಡ್ರೆಸ್ಸೂ ಒತ್ತಟ್ಟು, ನನ್ನ ಅಡ್ರೆಸ್ಸು ಒತ್ತಟ್ಟು ಅನ್ನಂಗಾಗೈತಿ. ಈ ಶೇಖರಪ್ಪ ಮೇಷ್ಟ್ರಂತೂ ನನಿಗ್ಯ ಅ ಆ ಇ ಈ ಕಲಿಸಿರಾಕ ಸಾಧ್ಯನಾ ಇಲ್ಲ ಬಿಡ್ರಿ. ನಮ್ಮೂರಿನ ಬಜಾರದಾಗ ಮನಿ ಇದ್ದ ಇವರ ವ್ಯವಾರ ಮಾತ್ರ ನಮ್ಮೋಣ್ಯಾಗ ಬಾಳ ಇತ್ತಂತೆ. ಹಂಗಾಗಿ ನನ್ನ ಅಡ್ರೆಸ್ಸಿಗೇ ಕೈ ಹಾಕಿ ಆಟ ತೋರಿಸ್ಯಾರ ನೋಡ್ರಿ. ನನ್ನನ್ನ ಸಾಲಿಗೆ ಕರಕಂಡ ಮೇಷ್ಟ್ರ ಪರಿಚಯನಾ ನನಿಗಿಲ್ಲ ಅಂತ ಅಂದಕೊತಿದ್ದಂಗನಾ ನನಿಗೆ ಮುಲಾಜಿಲ್ದ ನೆನಪಾಗೋದು ಶಾರದ ಟೀಚರ್ರು. ಇವ್ರು ನನಿಗ್ಯ ಅ ಆ ಇ ಈ ಕಲ್ಸ್ಯಾರೋ ಇಲ್ಲೋ ನೆನಪಿಲ್ಲ. ಆದ್ರ ನನ್ನ ಸಾಲಿ ದಿನಗೋಳು ನನಿಗೆ ನೆನಪಾಗೋದಾ ಇವರ ಮನಿಯೊಳಗ ನಾನು ಉಳಕೊಳ್ಳತಿದ್ದ ದಿನಗಳಿಂದ. ಈ ಶಾರದಮ್ಮ ಟೀಚರ್ರು ಕನ್ನಡ ವಿಶ್ವವಿದ್ಯಾಲಯ ಇರೋ ಕಮಲಾಪುರದೋರು. ಹೊಸದಾಗಿ ಇವರು ನಮ್ಮೂರಿಗೆ ಕೆಲ್ಸಕ್ಕ ಅಂತ ಬಂದ ಕೂಡಲೆ ಇವರಿಗೆ ಕಾಡಿದ್ದ ದೊಡ್ಡ ಸಮಸ್ಯೆ ಅಂದ್ರ ಅದು ನಮ್ಮಂಥ ಹಳ್ಳಿ ಊರಾಗ ತಿಂಗಳ ಬಾಡಿಗಿ ಮನಿ ಯಾರು ಕೊಡಬೇಕ್ರಿ ಅದೂ ಅವತ್ತಿನ ಕಾಲಕ್ಕ. ಬಾಳ ಪರದಾಡಿರಬೇಕು ಅನ್ನಿಸ್ತೈತಿ ಈ ವಿಚಾರಕ್ಕ ಅವರು. ಅಂಥ ಟೈಮಿನಾಗ ಅವರಿಗೆ ಅಗದಿ ಗೆಣಕಾರ್ತಿಯಂಥ ಒಬ್ಬರ ಅಗತ್ಯ ಇತ್ತೇನೋ ನಮ್ಮ ಅವ್ವಳ ಪರಿಚಯ ಆಗೈತಿ. ನಮ್ಮ ಅವ್ವಳ ತೌರುಮನಿ ಹೊಸಪೇಟಿ ಅಂತ ತಿಳದ ಕೂಡ್ಲೆ ಶಾರದಾ ಟೀಚರ್ ಗೆ ಅರ್ಧ ಗೆಲುವು ಸಿಕ್ಕಂಗಾಗಿ ನಮ್ಮ ಮನಿ ಜತಿಗ್ಯ ಜಾಸ್ತಿ ಒಡನಾಟದೊಳಗಿದ್ರು.

ಅಪ್ಪ ಔವ್ವ, ಎಲ್ಲರನ್ನೂ ಬಿಟ್ಟು ಒಬ್ಬರಾ ಬಂದಿದ್ರು. ಇನ್ನೂ ಮದುವಿ ಗಿದುವಿ ಏನೂ ಆಗಿದ್ದಿಲ್ಲಿನು, ಹೆಂಗೋ ಕಷ್ಟಪಟ್ಟು ನಮ್ಮ ಮನಿಮುಂದಿನ ಓಣ್ಯಾಗ ಒಂದು ಬಾಡಿಗಿ ಮನ್ಯಾಗ ಇದ್ರು, ಆ ಮನಿ ಯಾರದ್ದು ಅಂತ ನನಿಗಿನ್ನೂ ಗೊತ್ತಿಲ್ಲ. ಆದ್ರ ನಾನಂತೂ ಟೀಚರ್ ಮನಿಯೊಳಗ ಆಟ ಆಡಿಕೋತ ಟೈಂ ಪಾಸ್ ಮಾಡತಿದ್ದೆ. ನಾನು ಮೂರನೇ ಕ್ಲಾಸಿನವರೆಗೂ ಇವರ ಮನಿಯಲ್ಲೇ ಬಾಳ ಇದ್ದೆ. ಎಷ್ಟೋ ಸರತಿ ಕತ್ತಲಾತು ಮಕ್ಕೋ ಬಾ ಸಾಕು ಅಂತ ಅವ್ವ ನನ್ನ ಕರಿಯಾಕ ಬಂದ್ರ ಟೀಚರ್ರು, ‘ಇಲ್ಲೇ ಮಕ್ಕೋತಾನ ಹೋಗೇ’ ಅಂತ ಮಮತೆ ತೋರಿಸಿದ್ದೂ ಖರೇವ. ಆದ್ರ ನಾಲ್ಕನೇ ತರಗತಿಯಿಂದ ಆರನೇ ತರಗತಿವರಿಗೆ ನಾನು ಇವರ ಮನಿಗೆ ಹೋಗ್ಲೇ ಇಲ್ಲ. ಅಷ್ಟರೊಳಗಾ ಇವ್ರು ತಮ್ಮ ಮನಿನೂ ಬ್ಯಾರೇ ಕಡೆ ಹೂಡಿದ್ರು, ಇತ್ಲಾಗ ನಮ್ಮ ಕ್ಲಾಸ್ ಮೇಷ್ಟ್ರುಗುಳೂ ಬ್ಯಾರೇ ಆದ್ರು. ಆಮೇಲೆ ಯೋಳನೇ ಕ್ಲಾಸಿಗೆ ಬಂದಾಗ ಮತ್ತೆ ‘ಲೇ ಶಿವೂ’ ಕರದು ಔರ ಮನಿ ಬೀಗ ಕೊಟ್ಟು ಹೋಗಿ ಹೊರಗಡೆ ಎಲ್ಡು ಖಾಲಿ ಕೊಡಗಳು ಅದಾವು ಈಗ ಕರೆಂಟು ಬಂದೈತಿ ಕುಡಿಯಾಕ ನೀರಿಲ್ಲ ಮನಿಯಾಗ ಹೋಗಿ ತುಂಬಿ ಇಡ್ತೀರಾ ? ಅಂತ ಸಾಲಿ ಇಂಟ್ರವೆಲ್ ಬಿಟ್ಟಾಗ ಹೇಳತಿದ್ರು. ನನಿಗ್ಯ ಅಷ್ಟಾ ಸಾಕಿತ್ತು. ಒಂದಿಬ್ರು ಹುಡ್ರನ್ನ ಹಿಡಕೊಂಡು ಹಡಗಲಿ ರೋಡಿನ ಮಗ್ಗುಲು ಇದ್ದ ಅವರ ಮನಿಗೋಗಿ ಎಲ್ಡು ಕೊಡ ನೀರು ಹುಡ್ರುಕುಟಾಗ ಹೊರಿಸ್ಕಂಡು ಹೋಗಿ ಕೊಡಪಾನ ಪಡಸಾಲ್ಯಾಗ ಇಟ್ಟ ಕೂಡ್ಲೆ ‘ತಡ್ರಲೇ, ಅಡ್ಗಿ ಮನ್ಯಾಗ ಏನೈತಿ ನೋಡ್ಕಂಬತ್ನಿ’ ಅಂತೇಳಿ ಅಡಗಿ ಮನಿಯೊಳಗಿನ ನನ್ನ ಕೈಗೆ ನಿಲುಕೋ ಎಲ್ಲಾ ಡಬ್ಬಿಗಳನ್ನ ಚೆಕ್ ಮಾಡಿ ಬೆಳಗಡಲೆ, ಬೆಲ್ಲ, ಕೊಬ್ಬರಿ, ಸಕ್ರಿ, ಶೇಂಗಾಬೀಜ, ಅವಲಕ್ಕಿ, ತರಕಾರಿ ಸ್ಟ್ಯಾಂಡಿನೊಳಗಿನ್ನ ಸೌತೇಕಾಯಿ, ಮುಲಂಗಿ, ಬೆಂಡಿಕಾಯಿ, ಹಿಂಗ ಸುಮ್ನ ಕೈಗೆ ಸಿಕ್ಕದ್ದನ್ನ ತಗಂಬಂದು ಹೊರಾಗ ನಿಂತಿರತಿದ್ದ ಹುಡುಗ್ರಿಗೀಟು ಕೊಟ್ಟು ನಾನಿಟ್ಟು ಮುಕ್ಕಿ, ನೀರು ಕುಡುದು ಬಂದು ಟೀಚರ್ ಕೈಗೆ ಬೀಗ ಕೊಟ್ಟು ‘ಟೀಚರ್ರೆ ನಿಮ್ಮನ್ಯಾಗ ಇವತ್ತು ಇಂಥಾದ್ದು ತಿಂದು ಬಂದೀನಿ’ ಅಂತ ಹೇಳಿಬಿಡ್ತಿದ್ದೆ. ಅವಾಗ ಔರು ಜೋರು ನಗೋರು. ‘ದೊಡ್ಡ ಕಳ್ಳಲೇ ನೀನು. ಅನ್ನ ಸಾರು ಇತ್ತಲ್ಲ, ಊಟ ಮಾಡೇ ಬಂದುಬಿಡಬೇಕು?’ ಅಂತ ಹೇಳ್ತಾ ತಲೆಗೆ ಮೆಲ್ಲಕ ಹೊಡದು ಬೆಲ್ಲಾಗೈತಿ ಕ್ಲಾಸಿಗೋಗು ಅನ್ನೋರು.

ನಾನು ಇವರ ಜತಿಗೆ ಎಷ್ಟು ಪ್ರೆಂಡ್ಲಿ ಇದ್ದೆ ಅಂದ್ರ, ಪ್ರತೀ ಬ್ರೇಸ್ತವಾರ (ಗುರುವಾರ ) ನಮ್ಮೂರ ಸಂತಿ ನಡಿತೈತಿ. ಸಾಲಿ ಬಿಡಾ ಟೈಂಗೆ ಸಂತಿ ಒಳ್ಳೆ ಜೋರು ನಡಿತಿರತೈತಿ, ನಮ್ಮ ಸಾಲಿ ಮೇಷ್ಟ್ರುಗುಳು ಮದ್ಯಾಹ್ನ ಊಟಕ್ಕ ಬಿಟ್ಟಾಗ ಸಂತಿ ಮಾಡಾಕ ಚೀಲ ತಂದಿರಾರು. ನಮ್ಮ ಶಾರದಮ್ಮ ಟೀಚರ್ರು, ಸಾಲಿ ಬಿಟ್ಟ ಕೂಡ್ಲೆ ನನ್ನ ಕರ್ಕೊಂಡು ಸಂತಿ ಮಾಡಾಕ ಹೋಗಿಬಿಡ್ತಿದ್ವಿ, ಔರು ಸಂತಿನೆಲ್ಲ ಮುಗಿಸಿ ಮನಿಗೋಗಾಕ್ಕೂ ಮುಂಚೆ ‘ನಿನಿಗೇನರಾ ತಗಬೇಕೇನ್ಲೇ ?’ ಅಂತ ಕೇಳೋರು. ಅಲ್ಲಿಂದ ನನ್ನ ಸಂತಿ ಚಲೂ ಆಕ್ಕತ್ತು. ಗೆಣಸು, ಗಜ್ಜರಿ, ಸೌತೆಕಾಯಿ, ಪ್ಯಾರಲಣ್ಣು, ಜೂಜು ಬಾರಿಹಣ್ಣು, ಸಕ್ರಿಬಾಳೆಣ್ಣು, ಬೀಟ್ ರೂಟು, ಹಿಂಗ ನನಿಗೆ ಯಾವುದ್ರ ಮ್ಯಾಗ ಆಸಿ ಹುಟ್ಟತೈತೋ ಅದನ್ನ ಕೇಳತಿದ್ದೆ. ಅವಾಗೆಲ್ಲ ಟೀಚರ್ರು, ‘ಲೇ ನೀನು ಗೆಣಸು, ಗಜ್ಜರಿ, ಬೀಟ್ ರೂಟ್ ಕೇಳಬ್ಯಾಡ, ನಿನ್ನ ಮಾತು ಕಟ್ಕಂಡು ಇವನ್ನ ಮನಿಗೆ ತಗೊಂಡೋದ್ರ, ಕುಚ್ಚಿಡ್ರಿ ಟೀಚರ್ರೇ ಆಮ್ಯಾಲೆ ಬಂದು ತಿಂತೀನಿ ಅಂತೇಳಿ ಹೋದಾನು, ಎಲ್ಡು ದಿನ ಆದ್ರೂ ನಂ ಮನಿಕಡೀಗೆ ಹಣಿಕಿ ಆಕಲ್ಲ ನೀನು, ಸುಮ್ಮನ ರೊಕ್ಕ ಕೊಟ್ಟು ಮಗಾ ತಿಂತಾನಂತ ತಗಂಡು ಮುಸುರಿ ಬಾನಿಗೆ ಹಾಕಬೇಕೇನು ?’ ಸುಮ್ನ ಬ್ಯಾರೆ ಏನರಾ ಹಣ್ಣು ತಗೋ ಅಂತ ಹೇಳತಿದ್ರೂ ನಾನು ಹಟ ಮಾಡಿ ‘ಇಲ್ರಿ ಈ ವಾರ ತಿಂದಾತಿರತೀನಿ, ತಗಳ್ರೀ ಟಿಚರ್ರೇ’ ಅಂತ ಕೇಳಿ ತಗೋತಿದ್ದೆ.  ನನ್ನನ್ನ ಹೀಗೆಲ್ಲಾ ಮಗನಂಗ ನೋಡಿಕಂಡಿದ್ರು. ನಾನು ಏಳನೇ ಕ್ಲಾಸು ಪಾಸಾಗಿ ಹೈಸ್ಕೂಲಿಗೆ ಹೋಗಾಕ ಚಾಲೂ ಮಾಡಿದಾಗಿಂದ ಸೀದ ಕನ್ನಡ ವಿವಿ ಯೊಳಗ ಎಂ ಎ ಅಡ್ಮಿಷನ್ ಮಾಡ್ಸೋವರಿಗೂ ಅವ್ರ ಭೇಟಿನಾ ಮಾಡಲಿಲ್ಲ.

ಈ ನಡುವೆ ನಮ್ಮೂರಿಂದ ಹೊಸಪೇಟಿ ತಾಲೂಕಿಗೆ ಟ್ರ್ಯಾನ್ಸ್ ಪರ್ ಮಾಡಿಸ್ಕಂಡಿದ್ದ ನಂ ಟೀಚರ್ರು ಅವತ್ತೊಂದಿನ ಹೊಸಪೇಟಿಯೊಳಗ ಕಂಡುಬಿಟ್ರು. ಅಗ್ಗದಿ ಖುಷಿಲೆ ನಾನು ಹೋಗಿ ಮಾತಾಡಿಸಿದ್ರೆ ಅದೇ ಅವ್ವಳ ಮಮತೆ, ಮೆಲ್ಲಕ ನನ್ನ ಕಪಾಳಕ್ಕ ಹೊಡದು ‘ಹೋಗಲೇ ಆಟೋ ತಗೋಂಬಾ, ರೇಷನ್ ತಗೋಳ್ಳಾಕ ಬಂದೀನಿ ‘ ಅಂತೇಳಿದಾಗ ನಾನು ಆಟೋತಂದು ರೇಷನ್ನೆಲ್ಲಾ ಆಟೋಕ್ಕಿಟ್ಟಮ್ಯಾಲ ‘ಇಲ್ಲೇ ನಿಮ್ಮ ಅಮ್ಮನ ಮನಿಯೊಳಗಾ ತಿಂದಕೋತ ಇರ್ತೀಯೋ ನಂ ಮನಿಗೂ ಒಮ್ಮಿ ಬಂದು ಹೊಕ್ಕಿಯೋ?’ ಅಂತ ಕೇಳಿದ್ರು. ನಾಳೆ ಬರ್ತೀನಿ ಬಿಡ್ರಿ ಅಂತೇಳಿದಂಗನಾ ಮಾರನೇ ದಿನ ಅವ್ರ ಮನಿಗೋಗಿ ಕುಂತಾಗ ‘ಊಟಕ್ಕ ನೀಡಿ ಕೊಡ್ಲೇನಲೇ ?’ ಅಂತ ಕೇಳಿದ್ರು. ‘ಇಲ್ರೀ ನಾನು ಅವಾಗ್ಲೆ ಊಟ ಮಾಡಿಕಂಡಾ ಬಂದಿನ್ರೀ ಅಂತೇಳಿ ಮಖಾ ತೋಯಿಸ್ಕಣಂಗ ಉಗಿಸಿಕಂಡು ಟೀ ಕುಡುದು ಬಂದಿದ್ದೆ. ಆಮ್ಯಾಕೆ ಒಂದೆರ್ಡು ತಿಂಗಳಾಗಿರಬೌದ್ದೇನೋಪಾ, ಅದಾ ಕಮಲಾಪುರದಾಗ ಕೆಲ್ಸ ಮಾಡತಿದ್ದ ನಮ್ಮೂರಿನ ಭರತಣ್ಣ ಸಿಕ್ಕಾಗ ‘ಶಾರದಮ್ಮ ಟೀಚರ್ ಮದ್ವಿ ಆತಲ್ಲಲೇ ಗೊತ್ತಿಲ್ಲೇನು ನಿನಿಗ್ಯ ?’ ಕೇಳಿದಾಗ ನನಗೂ ಆಶ್ಚರ್ಯ. ಹೌದು. ಯಾವುದೋ ಕಾರಣಕ್ಕಾಗಿ ಈಗಲೇ ಲಗ್ನ ಆಗಲ್ಲ ಅಂತಿದ್ದ ಟೀಚರ್ರು ತೀರಾ ಮೂರು ವರ್ಷದ ಕೆಳಗೆ ಮದ್ವೆಯಾದ್ರು. ಆದ್ರ ವಿಷ್ಯ ನಮಿಗ್ಯಾಕ ಹೇಳಲಿಲ್ಲ ಅಂತ ಮನ್ಯಾಗ ವಿಚಾರ ಮಾಡಿದಾಗ ಟೀಚರ್ರು ಲಗ್ನಕ್ಕ ಕರಿಯಾಕ ಬಂದಾಗ ನಾನು ಮನ್ಯಾಗ ಇದ್ದಿಲ್ಲ, ಅವ್ವಳೇ ಮದ್ವಿಗೋಗಿ ಬಂದಿದ್ಳಂತೆ. ಅಂತೂ ಚೊಲೋ ಆತುಬುಡು ಅಂತ ಅಂದ್ಕೊಂಡು ಒಮ್ಮಿ ಮನಿಗೋಗಿ ಮಾತಾಡಿಸಿ ಬಂದ್ರಾತು ಅಂದ್ಕಂಡಿದ್ದೊಂದಾ, ಇವತ್ತಿಗೂ ಹೋಗಾಕಾ ಆಗಿಲ್ಲ ನೋಡ್ರಿ.

‍ಲೇಖಕರು avadhi

February 9, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. sudha chidanand gowd

    ನಮ್ಮೂರ ಹೆಸರುಗಳು, ನಮ್ಮೂರ ಭಾಷೆ ಓದ್ತಾ, ಓದ್ತಾ ಖುಷಿಯಾಗ್ತಿದೆ.
    keep writing shivu

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: