
ಬಿ ಕೆ ಸುಮತಿ
July 23. ರಾಷ್ಟ್ರೀಯ ಪ್ರಸಾರ ದಿನ.
ಇದೇ ದಿನ, ಇಂಡಿಯನ್ broadcasting ಕಂಪನಿ ಮುಖಾಂತರ, ಭಾರತದ ಮೊದಲ ರೇಡಿಯೋ ಪ್ರಸಾರ ಆರಂಭವಾಯಿತು. 1927 ರಲ್ಲಿ. ಬಾಂಬೆ (ಮುಂಬೈ) ಕೇಂದ್ರದಿಂದ. ಆಗ ಪ್ರಾಯೋಗಿಕವಾಗಿ ಎರಡು ಕೇಂದ್ರ ಗಳನ್ನು ನಿರ್ವಹಣೆ ಮಾಡಲು ಕಂಪನಿಗೆ ಅನುಮತಿ ನೀಡಲಾಗಿತ್ತು.
1930 ರಲ್ಲಿ IBC ಎಂದು ಕರೆಯಲಾಗುತ್ತಿದ್ದದ್ದು 1936 ರಲ್ಲಿ ISBC ಆಗಿ ಪರಿವರ್ತನೆ ಹೊಂದಿತು.( Indian state broadcasting service.)
ಬ್ರಿಟಿಷರು ಭಾರತ ಬಿಡುವ ವೇಳೆಗೇ ಭಾರತದಲ್ಲಿ ಪ್ರಸಾರ ಕಾರ್ಯ ಆರಂಭವಾಗಿತ್ತು. 1947 ರ ಹೊತ್ತಿಗೆ ಅಂದರೆ ಸ್ವಾತಂತ್ರ್ಯ ಬಂದಾಗ ಭಾರತದಲ್ಲಿ ಆರು ಕೇಂದ್ರಗಳಿದ್ದವು.
ದೆಹಲಿ, ಬಾಂಬೆ, ಲಕ್ನೋ, ಮದ್ರಾಸ್, ತಿರುಚಿರಾಪಳ್ಳಿ, ಮತ್ತು ಕಲ್ಕತ್ತಾ. ದೇಶ ವಿಭಜನೆ ಆದಾಗ ಪೇಶಾವರ್, ಧಾಕ, ಮತ್ತು ಲಾಹೋರ್ ಕೇಂದ್ರಗಳು ಪಾಕಿಸ್ತಾನದ ಮಡಿಲಿಗೆ ಬಿದ್ದವು.
ಆರಂಭದ ದಿನಗಳಲ್ಲಿ ಕಾರ್ಮಿಕ ಖಾತೆಯ ಅಡಿ ಕಾರ್ಯ ನಿರ್ವಹಿಸುತ್ತಿದ್ದ ISBC 1936 ರಲ್ಲಿ all india radio ಎಂದು ಕರೆದುಕೊಳ್ಳುತ್ತಾ, ಮತ್ತೂ ಹಲವು ಕೇಂದ್ರಗಳನ್ನು ತೆಕ್ಕೆಗೆ ತೆಗೆದುಕೊಂಡಿತು.
ನಂತರ ಸಂವಹನ ಸಚಿವಾಲಯಕ್ಕೆ ಒಳಪಟ್ಟ all india radio, 1941 ರ ವೇಳೆಗೆ ಮಾಹಿತಿ ಮತ್ತು ಪ್ರಸಾರ ಖಾತೆಗೆ ಸೇರಿಕೊಂಡಿತು. 1956ರಲ್ಲಿ ಆಕಾಶವಾಣಿ ಎಂದು ನಾಮಕರಣ ಪಡೆಯಿತು.
1957 ರಲ್ಲಿ ವಿವಿಧ ಭಾರತಿ ಸೇವೆ ಆರಂಭವಾಯಿತು.
1977 ರಲ್ಲೇ ದೇಶದ ಮೊದಲ fm ಕೇಂದ್ರ ಮದ್ರಾಸ್ ನಲ್ಲಿ ಆರಂಭವಾಯಿತು.
ಅಂದಿನಿಂದ ಇಂದಿನವರೆಗೂ ಹಲವಾರು ರೂಪಗಳನ್ನು ಪಡೆಯುತ್ತಾ ಸಾಗಿ ಬಂದಿದೆ ಭಾರತದ ಪ್ರಸಾರ ವ್ಯವಸ್ಥೆ. ಅಂದರೆ ಆಕಾಶವಾಣಿ.

ವಿಶ್ವದಲ್ಲಿ ಅತಿ ದೊಡ್ಡ ಪ್ರಸಾರ ವ್ಯವಸ್ಥೆ ಹೊಂದಿರುವ ದೇಶ ಭಾರತ. 480 ಕ್ಕೂ ಮೀರಿದ ಸಂಖ್ಯೆಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. 23 ಕ್ಕೂ ಅಧಿಕ ಭಾಷೆಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮ ಗಳ ಪ್ರಸಾರ.
ಸುದ್ದಿ, ಸಂಗೀತ, ಚಿತ್ರಗೀತೆ, ಸಾಹಿತ್ಯ, ಕಲೆ, ಕೃಷಿ , ವಿಜ್ಞಾನ, ಶಿಕ್ಷಣ, ಆರೋಗ್ಯ, ಭಾಷೆ, ಜನಪದ, ಹೀಗೆ ಎಲ್ಲ ರೀತಿಯಲ್ಲೂ ಮಾಹಿತಿ ಮನರಂಜನೆ, ನೀಡುತ್ತಾ ಅಪಾರ ಜನಮನ್ನಣೆ ಗಳಿಸಿದೆ ಆಕಾಶವಾಣಿ. ಸಂಸ್ಕೃತಿಯ ಭಂಡಾರವನ್ನೇ ಹೊತ್ತಿದೆ.
ದೇಶದ ಸಮಗ್ರ ಸಾಂಸ್ಕೃತಿಕ ಚರಿತ್ರೆ ಹಿಡಿದಿಡಬೇಕಾದರೆ, ಆಕಾಶವಾಣಿಯ ಪುಟಗಳನ್ನು ಅವಲೋಕಿಸಲೇಬೇಕು. ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ಸಾವರ್ಕರ್, ಅಂಬೇಡ್ಕರ್, ವಲ್ಲಭಭಾಯಿ ಪಟೇಲ್ , ಸುಭಾಷ ಚಂದ್ರ ಬೋಸ್ ಮುಂತಾದ ನಾಯಕರ ಧ್ವನಿ ಕೇಳುತ್ತಾ ನಾವು ದೇಶದ ಆ ಹೊತ್ತಿನ ಆಗುಹೋಗುಗಳನ್ನು ಊಹಿಸಬಹುದು.
ಯಾವುದೇ ರಾಜ್ಯದ ಸಂಗೀತ, ಕಲೆಯ ಸಾಹಿತ್ಯದ ಬೆಳವಣಿಗೆಯಲ್ಲಿ ಆಕಾಶವಾಣಿ ಪ್ರಧಾನ ಪಾತ್ರ ವಹಿಸಿದೆ.
ಆಕಾಶವಾಣಿ ಏಕೈಕ ಸಾರ್ವಜನಿಕ ಮಾಧ್ಯಮವಾಗಿತ್ತು. ಹಾಗಾಗಿಯೇ ಎಲ್ಲ ಕ್ಷೇತ್ರಗಳ ಅಂದಿನ ದಿಗ್ಗಜರ ಧ್ವನಿಗಳು ಆಕಾಶವಾಣಿಯ ಆಸ್ತಿ.
ಹೀಗೆ ಸಾಂಸ್ಕೃತಿಕ ವಕ್ತಾರ ಎನಿಸಿಕೊಂಡ ಆಕಾಶವಾಣಿ, ನಂತರದ ದಶಕಗಳಲ್ಲಿ ಇತರ ಮಾಧ್ಯಮಗಳ ಜೊತೆ ತನ್ನ ಸಾಂಸ್ಕೃತಿಕ ಸಂಪತ್ತನ್ನು ಹಂಚಿಕೊಳ್ಳಬೇಕಾಯಿತು.
1990ರ ವೇಳೆಗೆ ಮಾಧ್ಯಮ ಸ್ವಾತಂತ್ರ್ಯ ಮತ್ತು ಇತರ ವಿಚಾರಗಳು ಮುಂಚೂಣಿಗೆ ಬಂದಾಗ ” ಪ್ರಸಾರ ಭಾರತಿ ” ಸ್ಥಾಪನೆ, ಕಾರ್ಯಕ್ರಮಗಳ ಮರು ಹೊಂದಾಣಿಕೆ,
ಸಿಬ್ಬಂದಿ ಮತ್ತು ಸ್ವರೂಪ ಬದಲಾವಣೆ ಕಡೆ ಹೆಜ್ಜೆ ಇಟ್ಟಿತು.
ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಖಾತೆ, ಪ್ರಸಾರ ಭಾರತಿ ಹೀಗೇ ಜೊತೆಯಾಗಿ ನಡೆಯುತ್ತಾ ಬಂದು ಇಂದು,
ಪ್ರಸಾರ ಭಾರತಿಯ ಅಂಗವಾಗಿದೆ ಆಕಾಶವಾಣಿ.
ತನ್ನ ಸಿಬ್ಬಂದಿ ರಚನಾ ಕ್ರಮದಲ್ಲಿ ಕಲಾವಿದರು ಮತ್ತು ನಿರ್ವಾಹಕರು ಎಂಬ ಎರಡು ಮುಖ್ಯ ಮಜಲುಗಳನ್ನು ಹೊಂದಿದೆ. ಧ್ವನಿ ಪ್ರಧಾನವಾಗಿ ಕೆಲಸ ಮಾಡುವ ಉದ್ಘೋಷಕರು, ವಾದ್ಯಗಳಲ್ಲಿ ಪರಿಣತಿ ಹೊಂದಿರುವ ಕಲಾವಿದರು, ಹಾಡುಗಾರರು ಇವರೆಲ್ಲ ಕಲಾವಿದ ವರ್ಗಕ್ಕೆ ಸೇರಿದರೆ, ಆಡಳಿತ , ಕಾರ್ಯಕ್ರಮ ಸಂಯೋಜನೆ , ಪರಿಕಲ್ಪನೆ ಮಾಡುವ ಮತ್ತು ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಸಿಬ್ಬಂದಿ ವರ್ಗ ನಿರ್ವಾಹಕ ವರ್ಗ.
50 – 60 -70 ರ ದಶಕಗಳಲ್ಲಿ ನಿಯಮಿತ ಅವಧಿಗೆ ಕಲಾವಿದರನ್ನು ನೇಮಕ ಮಾಡಿಕೊಳ್ಳಲಾಗುತ್ತಿತ್ತು.
ವಿದ್ಯಾರ್ಹತೆಗಿಂತ ಕಲೆಯಲ್ಲಿ ಅವರಿಗೆ ಇರುವ ಶ್ರೇಷ್ಠತೆಯೇ ಮಾನದಂಡವಾಗಿತ್ತು.

ನಿಲಯದ ಕಲಾವಿದರ ವಾದ್ಯವೃಂದಗಳು, ನೇರಪ್ರಸಾರದ ಕಾರ್ಯಕ್ರಮಗಳು, ನಾಟಕ, ರೂಪಕಗಳು, ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಾಗಿದ್ದವು.
ಕಲೆಯೇ ಪ್ರಧಾನವಾದ ಕಾರ್ಯಕ್ರಮಗಳು.
ಒಂದು ಮುಖ್ಯ ಕೇಂದ್ರದಲ್ಲಿ ಕಡಿಮೆ ಎಂದರೂ 30ರಿಂದ 40 ಮಂದಿ ಕಲಾವಿದರು ಕಾರ್ಯ ನಿರ್ವಹಿಸುತ್ತಿದ್ದರು.
ಜೊತೆಗೆ ನಿರ್ವಾಹಕ ವರ್ಗ.
ನಂತರದ ದಿನಗಳಲ್ಲಿ ನೌಕರ ನೇಮಕಾತಿ ನಿಯಮಗಳು, ಕೇಂದ್ರದ ರೀತಿ ನೀತಿಗಳು, ಅಡಳಿತಗಳು ಬದಲಾದ ಹಾಗೆಲ್ಲ ಹೊಸ ಹೊಸ ಕ್ರಮಗಳಿಗೆ ಆಕಾಶವಾಣಿ ಒಗ್ಗಿಕೊಳ್ಳುತ್ತ ಬಂದಿತು. 70, 80 ದಶಕದಲ್ಲಿ ಕಲಾವಿದರನ್ನು ಖಾಯಂ ಗೊಳಿಸಿದ ಸರ್ಕಾರ, ಪುನಃ 90 , 95 ರ ಹೊತ್ತಿಗೆ ಬೇರೆಯೇ ನೀತಿ ಅನುಸರಿಸಿತು.
90ರ ಸಮಯ.
FM ತಂತ್ರಜ್ಞಾನ ಗರಿಗೆದರಿದ ಹೊತ್ತು.
ದೇಶದಾದ್ಯಂತ ಹಲವಾರು ಕೇಂದ್ರಗಳು ಸ್ಥಾಪನೆ ಆದವು.
2000 ದಿಂದ 2020 ವರೆಗೆ ಅವಲೋಕಿಸಿದಾಗ, ದೇಶ ಖಾಸಗೀಕರಣ, ಉದಾರೀಕರಣಕ್ಕೆ ತೆರೆದುಕೊಂಡ ಪರಿಣಾಮವಾಗಿ ದೊಡ್ಡ ಪ್ರಮಾಣದಲ್ಲಿ ಬದಲಾವಣೆಗಳು ಕಂಡು ಬಂದವು. ಖಾಸಗಿ ವಾಹಿನಿಗಳು ಆರಂಭವಾದವು.
Satellite ಪ್ರಸಾರ, dth ಸೇವೆ , ಕಂಪ್ಯೂಟರೀಕರಣ, ಈ ಎಲ್ಲ ಮಹತ್ತರ ಸಂಗತಿಗಳು ಘಟಿಸಿದವು.
ಮೊಬೈಲ್ ನಲ್ಲಿ ಜಗತ್ತು ಕಾಣಲು ಶುರುವಾಯ್ತಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಸಂಗೀತ ಮಾತು ಕೇಳುವಂತಾಯ್ತಲ್ಲ, ಇದು ಪ್ರಸಾರ ವ್ಯವಸ್ಥೆಯನ್ನು ಬೇರೆಯೇ ಜಗತ್ತಿಗೆ ಕೊಂಡೊಯ್ದಿತು. ತಂತ್ರಜ್ಞಾನ ಬೆಳೆಯಿತು. ಭೂಮಿ ಗುಂಡಗಿದೆ ಎನ್ನುವ ಹಾಗೆ,
ಕಲಾವಿದರು ಆಕಾಶವಾಣಿ ಪ್ರಸಾರದಲ್ಲಿ ಇರಬೇಕೆ ಬೇಡವೇ?
ಸಂಗೀತದ ಅಂಶ ಎಷ್ಟಿರಬೇಕು? Fm ಕೇಂದ್ರಗಳ ಅಗತ್ಯ ಎಷ್ಟು ಏಕೆ ? 60, 70 ವರ್ಷ ಹಳೆಯದಾದ medium wave transmitter(ಪ್ರೇಷಕ)ಗಳ ನಿರ್ವಹಣೆ ಹೇಗೆ? ಅವುಗಳಲ್ಲಿ ಪ್ರಸಾರ ಆಗುತ್ತಿರುವ ವಸ್ತು ವಿಷಯ ಪ್ರಸಾರ ಹೇಗೆ ?
ಈ ತಂತ್ರಜ್ಞಾನ ಯುಗದಲ್ಲಿ ಒಂದೇ ಊರಿನಲ್ಲಿ ಮೂರು ನಾಲ್ಕು FM ಕೇಂದ್ರಗಳು ಬೇಕೇ?
ಎಲ್ಲವನ್ನೂ ಕಂಪ್ಯೂಟರ್ ಮಾಡಬಲ್ಲುದು,
ಖಾಸಗಿ ಕೇಂದ್ರಗಳು 6 ಜನರನ್ನು ಇಟ್ಟುಕೊಂಡು ಮನೆಗಳಿಂದಲೇ ಕಾರ್ಯ ನಿರ್ವಹಿಸಲು ಸಾಧ್ಯ ಇದೆ ಎಂದರೆ, ಸರ್ಕಾರಕ್ಕೆ ಅದೇಕೆ ಸಾಧ್ಯ ಆಗುವುದಿಲ್ಲ ?
ಸಿಬ್ಬಂದಿ ನೇಮಕಾತಿ ಹೇಗೆ? (ಕಳೆದ 25 ವರ್ಷಗಳಿಂದ ನೇಮಕಾತಿ ನಡೆದಿಲ್ಲ ಎಂಬುದು ಗಮನಾರ್ಹ)
ಇರುವ ಸಿಬ್ಬಂದಿಯ ನಿರ್ವಹಣೆ, ತಂತ್ರಜ್ಞಾನದ ನವೀಕರಣ,
ಇವೆಲ್ಲಾ ಸವಾಲುಗಳಾಗಿ ಪ್ರಸಾರ ಭಾರತಿಯನ್ನು ಕೆಣಕುತ್ತಿವೆ.

News on air ಮೊಬೈಲ್ ತಂತ್ರಾಂಶದ ಮೂಲಕ ಆಕಾಶವಾಣಿಯ ಪ್ರಸಾರ ವಿಶ್ವದಾದ್ಯಂತ ಕೇಳಲು ಸಾಧ್ಯವಿದೆ.
ಜಿಲ್ಲೆಗೊಂದು fm ಎಂದು ಹೇಳಲಾಗುತ್ತಿದೆ.
ವಿದೇಶಗಳಲ್ಲಿ Digital radio mondale (drm)
ತಂತ್ರಜ್ಞಾನ fm ಅನ್ನು ಮೀರಿಸಿ ಮುಂದೆ ಸಾಗಿದೆ. ಭಾರತದಲ್ಲಿ DRM ಎಂದರೆ ಏನು ಎಂದು ಇನ್ನೂ ಯಾರಿಗೂ ಅರ್ಥವೇ ಆಗಿಲ್ಲ. ಬೆಂಗಳೂರು ಸೇರಿದಂತೆ ದೇಶದ ಕೆಲವು ನಗರಗಳಲ್ಲಿ DRM ಪ್ರಸಾರ ಆರಂಭ ಆಗಿದೆ. ಆದರೆ, ಪ್ರಚಾರವೇ ಇಲ್ಲ.
DRM ಸೆಟ್ಟುಗಳು ಐದು ಸಾವಿರದಿಂದ ಹನ್ನೆರಡು ಸಾವಿರ ರೂಪಾಯಿ ವರೆಗೂ ಇದೆ. ಮೊಬೈಲ್ ನಲ್ಲಿ, fm ಸೆಟ್ ನಲ್ಲಿ ಆಕಾಶವಾಣಿ ಲಭ್ಯ ಇರುವಾಗ, 10, 12 ಸಾವಿರ ರೂಪಾಯಿ drm set ಯಾರು ಕೊಳ್ಳುತ್ತಾರೆ ? ಮುಂದೆ ಕಾಲ drm ಆದರೆ, ಈಗ ಜಿಲ್ಲೆಗೊಂದು fm ಯಾಕೆ ?
Drm ಗೆ ಪ್ರಚಾರ ಇಲ್ಲವೇಕೆ ?
30, 35 ವರ್ಷ ಸೇವೆ ಸಲ್ಲಿಸಿರುವ ಉದ್ಯೋಗಿಗಳು 2029 ರ ಒಳಗೆ ನಿವೃತ್ತರಾಗುತ್ತಾರೆ. ಅವರ ಜಾಗ ತುಂಬುವವರು ಯಾರು ? ಕಲಾವಿದರನ್ನು ಹೇಗೆ ಪುರಸ್ಕರಿಸಬೇಕು ?
ಯುವಕರನ್ನು ಆಕಾಶವಾಣಿಗೆ ಸೆಳೆದುಕೊಳ್ಳುವುದು ಹೇಗೆ ?
40ರಿಂದ ಇರುವ ದಶಕಗಳ ಕಾಲದ ಭವ್ಯ ಸಂಸ್ಕೃತಿ ಯ ಧ್ವನಿಮುದ್ರಣಗಳು ಡಿಜಿಟಲೀಕರಣ ಆಗಿದೆಯೇ ?
ಖಾಸಗಿ ವಾಹಿನಿಗಳ ಜೊತೆ ಸ್ಪರ್ಧೆ ಹೇಗೆ ಎದುರಿಸಬೇಕು ?
ಆದಾಯ ಗಳಿಕೆ ಹೇಗೆ ? ಇಂತಹ ಅನೇಕ ಸಂಕಷ್ಟಗಳ ಸುಳಿಯಲ್ಲಿ ಸಿಲುಕಿ ನರಳುತ್ತಿದೆ ಪ್ರಸಾರ ಭಾರತಿ. ಹಲವು ಆಯಾಮಗಳನ್ನು ಪರಿಶೀಲಿಸಿ ಸೂಕ್ತ ನಿರ್ಧಾರಗಳನ್ನು ಕೈಗೊಂಡು ಸಾರ್ವಜನಿಕರಿಗೆ ಪಾರದರ್ಶಕ ತಿಳುವಳಿಕೆ ನೀಡಿದಲ್ಲಿ, ಮತ್ತೊಮ್ಮೆ ಆಕಾಶವಾಣಿ ತನ್ನ ವೈಭವದ ದಿನಗಳಿಗೆ ಮರಳಲು ಸಾಧ್ಯವಿದೆ.
2027 ಕ್ಕೆ ಭಾರತೀಯ ಪ್ರಸಾರ ಸೇವೆ ನೂರು ವರ್ಷ ಪೂರೈಸುತ್ತದೆ. ಆಕಾಶವಾಣಿಯ ಭವ್ಯ ಇತಿಹಾಸದ ಹೊಸ ಯುಗವೊಂದು ಆರಂಭವಾಗಲಿ. ಆಕಾಶವಾಣಿ ಪ್ರಸಾರ ಕ್ಷೇತ್ರದ ಸಾರ್ವಭೌಮವಾಗಲಿ.
ಜುಲೈ 23. ರಾಷ್ಟ್ರೀಯ ಪ್ರಸಾರ ದಿನ .
ಎಲ್ಲ ಕರ್ಣ ಬಂಧುಗಳಿಗೆ ಶುಭಾಶಯಗಳು.
ಉತ್ತಮ ಮಾಹಿತಿ ತುಂಬಿರುವ ಲೇಖನ. ಸಾಕಷ್ಟು ವಿಷಯಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಸೊಗಸಾಗಿ ಬರೆದಿದ್ದೀರಿ.ಅಭಿನಂದನೆಗಳು