ಇದು ‘ಅಕ್ಷಯ’.. ಈಕೆ ಶರಣ್ಯ..

sandhyarani

ಸಂಧ್ಯಾರಾಣಿ 

ದಿನಾಂಕ : ಜುಲೈ ೧೩,

ಸಂದರ್ಭ : ಸಾನಿಯಾ ಮಿರ್ಜಾರ ಆತ್ಮಚರಿತ್ರೆ “Ace Against Odds” ಬಿಡುಗಡೆಯ ನಂತರ.

ace against oddsರಾಜ್ ದೀಪ್ ಸರ್ದೇಸಾಯಿ : ಅದಿರಲಿ, ಸಾನಿಯಾ ಯಾವಾಗ ಸೆಟ್ಲ್ ಆಗೋದು? ಅಂದರೆ ಮಗು ಯಾವಾಗ? ಕುಟುಂಬ ಶುರು ಮಾಡೋದು ಯಾವಾಗ?  ನಿಮ್ಮ ಪುಸ್ತಕದಲ್ಲಿ ಅದರ ಬಗ್ಗೆ ಏನೂ ಇಲ್ಲ? ನೀವೇನೂ ರಿಟೈರ್ ಆಗಿ ಸೆಟ್ಲ್ ಆಗೋ ತರಹ ಕಾಣಿಸ್ತಾ ಇಲ್ಲ.

ಸಾನಿಯಾ : ಅಂದರೆ ನಾನೀಗ “ಸೆಟ್ಲ್” ಆಗಿಲ್ಲ ಅಂತಾನಾ?

ರಾಜ್ ದೀಪ್ ಸರ್ದೇಸಾಯಿ : ಅದು ಹಾಗಲ್ಲ, ಅಂದರೆ ನೀವು ನಿವೃತ್ತಿಯ ಬಗ್ಗೆ ಮಾತಾಡೋದಿಲ್ಲ, ಸೆಟ್ಲ್ ಆಗೋ ಬಗ್ಗೆ ಮಾತನಾಡುವುದಿಲ್ಲ…

ಸಾನಿಯಾ : ಯಾಕೋ ನಿಮ್ಮ ದನಿಯಲ್ಲಿ ನಿರಾಸೆ ಕಾಣಿಸುತ್ತಿದೆ? ನಾನು ತಾಯಿ ಆಗುವುದು ಬಿಟ್ಟು ಟಿನಿಸ್ ಜಗತ್ತಿನಲ್ಲಿ ನಂ 1 ಆಗಿರುವ ಬಗ್ಗೆ ನಿಮಗೆ ಬೇಸರ ಇದ್ದಂತಿದೆ. ಇರಲಿ, ಆ ಪ್ರಶ್ನೆಗೆ ನಾನು ಉತ್ತರಿಸುತ್ತೇನೆ, ಒಬ್ಬ ಹೆಣ್ಣಾಗಿ ನನಗೆ ಆಗಾಗ ಈ ಪ್ರಶ್ನೆ ಎದುರಾಗುತ್ತಲೆ ಇರುತ್ತದೆ.  ಇದು ನಾನೊಬ್ಬಳೇ ಅಲ್ಲ, ಎಲ್ಲಾ ಹೆಂಗಸರೂ ಎದುರಿಸುವ ಪ್ರಶ್ನೆ, ಮೊದಲು ಮದುವೆ, ಆನಂತರ ಮಕ್ಕಳು. ಆಗ ನಾವು “ಸೆಟ್ಲ್” ಆದಂತೆ ಲೆಕ್ಕ. ಅದುವರೆಗೂ ಎಷ್ಟೇ ವಿಂಬಲ್ಡನ್ ಗೆಲ್ಲಲಿ, ಎಷ್ಟು ಸಲ ವಿಶ್ವದ ನಂ 1 ಆಗಲಿ, ಅದು ಗಣನೆಗೆ ಬರುವುದೇ ಇಲ್ಲ.  ಇರಲಿ, ನಿಧಾನವಾಗಿ ಅದೂ ಆಗುತ್ತದೆ, ಸಧ್ಯಕ್ಕಂತೂ ಇಲ್ಲ.  ಹಾಗಾದಾಗ ಅದರ ಬಗ್ಗೆ ನಾನೇ ಎಲ್ಲರಿಗೂ ಹೇಳುತ್ತೇನೆ.

ಸಾನಿಯಾ ಗೇಮ್ ಗೆದ್ದಿದ್ದು ಇಲ್ಲಿ, ಅದೂ ರಾಜ್ ದೀಪ್ ಸರ್ದೇಸಾಯಿಯದೇ ಅಂಗಳದಲ್ಲಿ, ಅವರದೇ ಆಟದಲ್ಲಿ, ಅವರನ್ನು ಚಿತ್ ಮಾಡಿದ್ದಳು.  ಅವರ ಪ್ರಶ್ನೆಯಲ್ಲಿದ್ದ ಪುರುಷಾಹಂಕಾರವನ್ನು ಹೇಗೆ ಅವರ ಮುಂದೆ ಹಿಡಿಯುತ್ತಾಳೆ ಎಂದರೆ, ಆಮೇಲೆ ರಾಜ್ ದೀಪ್, ’ಸಾರಿ, ನಾನು ಪ್ರಶ್ನೆ ಕೇಳಿದ ರೀತಿ ತಪ್ಪು ಅನ್ನಿಸುತ್ತೆ, ಒಬ್ಬ ಪುರುಷ ಆಟಗಾರನಿಗೆ ನಾನು ಆ ಪ್ರಶ್ನೆ ಕೇಳುತ್ತಿರಲಿಲ್ಲ’ ಅನ್ನುತ್ತಾರೆ. ಪ್ರಶ್ನೆ ಕೇಳಿದ ರೀತಿ ಅಲ್ಲ ಸರ್ ಜಿ, ನೀವು ಕೇಳಿದ ಪ್ರಶ್ನೆಯೆ ತಪ್ಪು.  ಅದರ ನಂತರ ಸಾನಿಯಾ ಪ್ರತಿಕ್ರಿಯಿಸಿದ ರೀತಿಗೆ ಚಪ್ಪಾಳೆ ಹೊಡೆಯಬೇಕು ಅನ್ನಿಸಿತು.  ಆಕೆ ಸಾಧಾರಣವಾಗಿ ಹೇಳುವಂತೆ, ’ಹೋಗಲಿ ಬಿಡಿ ಪರವಾಗಿಲ್ಲ’ ಅನ್ನುವುದಿಲ್ಲ.  ಬದಲಿಗೆ,  ’ರಾಷ್ಟ್ರೀಯ ಟೆಲಿವಿಷನ್ ನಲ್ಲಿ ಹೀಗೆ ಕ್ಷಮಾಪಣೆ ಕೇಳಿದ ಮೊದಲ ಪತ್ರಕರ್ತ ನೀವು’ ಎಂದು ನಕ್ಕು ಮಾತು ನಿಲ್ಲಿಸುತ್ತಾಳೆ.  ಆಗ ಅನ್ನಿಸಿತು ಅದಕ್ಕೇನಮ್ಮ ನೀನು “Ace Against Odds” ಅಂತ!

ಸಾನಿಯಾಳಂತಹ ಸಾನಿಯಾಳನ್ನು ರಾಜ್ ದೀಪ್ ಅಂತಹ ಪಳಗಿದ ಪತ್ರಕರ್ತ ಸಹ ಇಂತಹ ಪ್ರಶ್ನೆ ಕೇಳಬಹುದಾದರೆ, ಬೇರೆಯವರ ಪಾಡೇನು?

ಈ ಸುದ್ದಿಯನ್ನು ಓದಿದ ನಂತರ ನೋಡಿದ ನಾಟಕ ಸಹ ಇದೇ ವಿಷಯದ ಬಗ್ಗೆಯೇ ಮಾತನಾಡಬೇಕೆ?

sharanya prakash2‘ಅಕ್ಷಯಾಂಬರ’ – ನಾನು ಬಹಳ ದಿನಗಳಿಂದ ನೋಡಬೇಕೆಂದುಕೊಂಡಿದ್ದ ನಾಟಕ.  ೩-೪ ಪ್ರದರ್ಶನಗಳಾಗಿದ್ದರೂ ನಾನಾ ಕಾರಣಗಳಿಂದ ಹೋಗಲಾಗಿರಲಿಲ್ಲ.  ಈ ಸಲ ತಪ್ಪಿಸಲೇಬಾರದು ಎಂದುಕೊಂಡು ಹೋಗಿ ನೋಡಿದ ನಾಟಕ ಅದು.  ಇದೇ ವಿಷಯದ ಬಗ್ಗೆ ವಿಕಾಸ್ ನೇಗಿಲೋಣಿ ಬರೆದು, ನಿತೇಶ್ ನಿರ್ದೇಶಿಸಿದ್ದ “ವೇಷಗಳು” ನಾಟಕ ನೋಡಿದ್ದೆ, ಇದೇ ವಿಷಯವನ್ನಿಟ್ಟುಕೊಂಡು ಅನನ್ಯಾ ಕಾಸರವಳ್ಳಿ “ಹರಿಕಥಾ ಪ್ರಸಂಗ” ಚಿತ್ರ ಮಾಡಿದ್ದಾರೆ ಎಂದು ಗೊತ್ತಿತ್ತು.  ಆ ವಿಷಯವನ್ನು ಈ ನಾಟಕದಲ್ಲಿ ಹೇಗೆ ಹ್ಯಾಂಡಲ್ ಮಾಡಿರಬಹುದು ಎನ್ನುವ ಕುತೂಹಲವನ್ನಿಟ್ಟುಕೊಂಡೇ ಹೋಗಿದ್ದೆ.  ನಿರ್ದೇಶಕಿ ಶರಣ್ಯಾ ರಾಮಪ್ರಕಾಶ್ ಇದಕ್ಕಿರುವ ಮನೋವೈಜ್ಞಾನಿಕ ಆಯಾಮದ ಜೊತೆಜೊತೆಯಲ್ಲಿ ಸಾಮಾಜಿಕ ಮತ್ತು ಆರ್ಥಿಕ ಆಯಾಮಗಳನ್ನೂ ಕೈಗೆತ್ತಿಕೊಳ್ಳುತ್ತಾರೆ.

ಶಕ್ತಿಯ ಕೇಂದ್ರವಿರುವುದು ಎಲ್ಲಿ? ಮನುಷ್ಯರಲ್ಲಾ ಅಥವಾ ಅವರು ಧರಿಸುವ ಪಾತ್ರಗಳಲ್ಲಾ?  ಅದು ಗಂಡು ಅಥವಾ ಹೆಣ್ಣು ಎನ್ನುವುದನ್ನು ಅವಲಂಬಿಸಿರುತ್ತದಾ ಅಥವಾ ಅವರಿಗೆ ಸಿಗುವ ಸ್ಥಾನ ಮತ್ತು ಆ ಮೂಲಕ ಪ್ರಾಪ್ತವಾಗುವ ಅಧಿಕಾರದಲ್ಲಿರುತ್ತದಾ?  ಈ ಪ್ರಶ್ನೆಗಳನ್ನು ಇಟ್ಟುಕೊಂಡು ನಾಟಕ ಮುಂದುವರೆಯುತ್ತದೆ. ’ಪಾತ್ರಗಳನ್ನು ಹಾಕುತ್ತಾ ಹಾಕುತ್ತಾ ಪಾತ್ರದ ಸುಳ್ಳುಗಳನ್ನು ಸತ್ಯ ಎಂದು ಅಂದುಕೊಂಡುಬಿಡುತ್ತೇವೆ’ ಎನ್ನುವ ಮಾತು ನಾಟಕದಲ್ಲಿ ಬರುತ್ತದೆ.  ಹಾಗೆಯೆ ಇಲ್ಲಿ ಪುರುಷ ಪಾತ್ರವನ್ನು ಹಾಕುವ ಸ್ತ್ರೀ ಮತ್ತು ಸ್ತ್ರೀ ಪಾತ್ರವನ್ನು ಹಾಕುವ ಪುರುಷ ಇಬ್ಬರ ನಡುವೆಯೂ ಒಂದು ಅಧಿಕಾರದ, ಅಸ್ತಿತ್ವದ ಕಿತ್ತಾಟ ನಡೆಯುತ್ತಲೇ ಇರುತ್ತದೆ.

ನಾಟಕ ಮುಂದುವರೆಯುತ್ತಾ ಹೋದಂತೆ ವ್ಯಕ್ತಿ ಮತ್ತು ಪಾತ್ರಗಳ ನಡುವಣ ರೇಖೆ ಮಸುಕಾಗುತ್ತಾ ಬರುತ್ತದೆ.  ಆತ್ಮವಿಶ್ವಾಸದ ಮುಖವರ್ಣಿಕೆ ಕಳಚಿಬೀಳುತ್ತದೆ.  ಅಸ್ತಿತ್ವ ಉಳಿಸಿಕೊಳ್ಳುವ ಪ್ರಶ್ನೆ ಬಂದಾಗ, ಪಾತ್ರವನ್ನು ದಾಟಿ ವ್ಯಕ್ತಿ ಹೊರಗೆ ಬರುವುದನ್ನು ನಾಟಕ ತೋರಿಸುತ್ತದೆ. ಬಣ್ಣ ಬಳಿದುಕೊಂಡಿರುವ ದೃಶ್ಯದಿಂದ ಪ್ರಾರಂಭವಾಗುವ ನಾಟಕ ಎಣ್ಣೆ ಹಚ್ಚಿ ಬಣ್ಣ ಅಳಿಸಿದ ಮೇಲೆ ಮುಗಿಯುತ್ತದೆ.  ಆದರೆ ಆ ನಡುವಿನ ಪಯಣ ಮಾತ್ರ ಒಂದು ಕತೆಯನ್ನಲ್ಲ, ಒಂದು ಚರಿತ್ರೆಯನ್ನೇ ಹೇಳುತ್ತದೆ.

ಗಂಡುಕಲೆ ಎಂದೆ ಕರೆಸಿಕೊಳ್ಳುವ ಯಕ್ಷಗಾನ ಕ್ಷೇತ್ರಕ್ಕೆ ಹೆಣ್ಣು ಪ್ರವೇಶಿಸಿದಾಗ ಅದು ಉಂಟು ಮಾಡುವ ತಲ್ಲಣ ಮತ್ತು ಅದರ ಆಯಾಮಗಳನ್ನು ನಾಟಕ ಅನ್ವೇಷಿಸುತ್ತದೆ.

ಇಡಿ ನಾಟಕ ನಡೆಯುವುದು ಚೌಕಿಮನೆಯಲ್ಲಿ ಮತ್ತು ರಂಗಸ್ಥಳದಲ್ಲಿ.  ಆದರೆ ಅವೆರಡು ಸ್ಥಳಗಳನ್ನೂ ಬೇರೆಬೇರೆಯಾಗಿ ತೋರಿಸುವುದಿಲ್ಲ.  ರಂಗಭೂಮಿಯ ನಡುವಿನಲ್ಲಿ ಬಿಳಿ ಪಟ್ಟೆಗಳಲ್ಲಿ ಒಂದು ಸ್ಥಳವನ್ನು ಗುರುತಿಸಿರುತ್ತಾರೆ.  ಅದು ರಂಗಸ್ಥಳ, ವೇದಿಕೆಯ ಉಳಿದ ಬಾಗ ಚೌಕಿಮನೆ.  ಹಿಂಬಾಗಕ್ಕೆ ದೊಡ್ಡ ಕನ್ನಡಿ, ದ್ರೌಪದಿಯ ಪಾತ್ರಧಾರಿ ಎಲ್ಲಾ ಆಭರಣಾಲಂಕಾರದೊಂದಿಗೆ ಚೌಕಿಗೆ ಬಂದು ಬಟ್ಟೆ ಧರಿಸುವುದರಿಂದ ನಾಟಕ ಪ್ರಾರಂಭವಾಗುತ್ತದೆ. ರವಿಕೆ ಧರಿಸುವುದರಿಂದ ಹಿಡಿದು ಸೀರೆ ಸೆರಗಿನ ನೆರಿಗೆ ಹಿಡಿದು ಪಿನ್ ಹಾಕುವುದು, ಉದ್ದ ಜಡೆ ಸಂಭಾಳಿಸುವುದು, ಸೀರೆ ಉಟ್ಟಮೇಲೆ ನಡಿಗೆಗೆ ಬರುವ ವಯ್ಯಾರ…ಪ್ರಸಾದ್ ಚೇರ್ಕಾಡಿ ಮೊದಲ ದೃಶ್ಯದಿಂದಲೇ ಗಮನ ಸೆಳೆದುಬಿಡುತ್ತಾರೆ.

ಆತ ಆ ಪ್ರಾಂತ್ಯದಲ್ಲೇ ಹೆಸರುವಾಸಿಯಾದ ಸ್ತ್ರೀಪಾತ್ರಧಾರಿ, ಮೊದಲ ದೃಶ್ಯದಿಂದಲೇ ಆ ಆತ್ಮವಿಶ್ವಾಸ ಅವನ ನಡೆನುಡಿಯಲ್ಲಿ ಕಾಣುತ್ತಿರುತ್ತದೆ.  ಆದರೆ ಅವನ ಮನದಾಳದ ಆಸೆ ತಾನು ಪುರುಷ ಪಾತ್ರ ಮಾಡಬೇಕು ಎನ್ನುವುದು. ಅಂತಹ ಪಾತ್ರಧಾರಿಯ ಮೇಳಕ್ಕೆ ಹೊಸದಾಗಿ ಒಬ್ಬ ಹುಡುಗಿ ಬರುತ್ತಾಳೆ. ’ಓಹೋ, ಯಾವ ಪಾತ್ರ, ಕೋಡಂಗಿಯದೋ, ಸಖಿಯದೋ?’ ಎಂದು ಠೇಂಕಾರದಲ್ಲಿ ಕೇಳುವ ಅವನ ಹೆಮ್ಮೆಯನ್ನು ಆ ಹುಡುಗಿಯ ಒಂದು ಉತ್ತರ ಕೆರಳಿಸಿ ಹಾಕುತ್ತದೆ.

ಆಕೆ ಉದ್ಧಾಮ ಸಾಹಸಿ ಕೌರವೇಂದ್ರನ ಪಾತ್ರ ಮಾಡಬಂದವಳು.  ಅವನು ಮೊದಲು ಅವಳನ್ನು ಬೈದಟ್ಟುತ್ತಾನೆ, ಆಮೇಲೆ ಅವಳ ಪಾತ್ರವನ್ನೇ ಮೊಟುಕುಗೊಳಿಸುತ್ತಾನೆ, ಅವಳನ್ನು ಹೀಯಾಳಿಸುತ್ತಾನೆ, ಬೆದರಿಸುತ್ತಾನೆ, ‘ನಿನ್ನ ಹಾಗೆ ನಾನು ಶೋಕಿಗೆ ಬಂದವನಲ್ಲ, ಇದು ನನ್ನ ಅನ್ನ’ ಎಂದು ಅವಳಲ್ಲಿ ಒಂದು ಗಿಲ್ಟ್ ಹುಟ್ಟಿಸಲು ಪ್ರಯತ್ನಿಸುತ್ತಾನೆ, ಧರ್ಮದ, ಶಾಸ್ತ್ರ ಸಂಪ್ರದಾಯಗಳ ಹೆಸರು ಹೇಳಿ ಅವಳನ್ನು ಹೆದರಿಸಲು ಪ್ರಯತ್ನಿಸುತ್ತಾನೆ, ‘ಒಬ್ಬ ಹೆಣ್ಣಾಗಿ ನೀನು ಹೀಗೆ ಮಾತನಾಡಬಹುದೆ’ ಎಂದು ಧರ್ಮಸೂಕ್ಷ್ಮದ ಮಾತನ್ನಾಡಿ ಅವಳನ್ನು ತಡೆಯಲು ಪ್ರಯತ್ನಿಸುತ್ತಾನೆ…

sharanya prakashಒಟ್ಟಿನಲ್ಲಿ ಕಾಲದಿಂದಲೂ ಏನೆಲ್ಲಾ ಸಂಕಲೆಗಳಿಂದ ಹೆಣ್ಣನ್ನು ತನ್ನ ಕಣ್ಣಳತೆ, ಕೈಅಳತೆಗಳಲ್ಲಿ ಇಟ್ಟುಕೊಂಡಿರುತ್ತಾನೋ ಅವೆಲ್ಲಾ ಪರಿಭಾಷೆಗಳನ್ನೂ, ಅಧಿಕಾರ ಸಂಬಂಧಿ ಪಟ್ಟುಗಳನ್ನೂ ಅವನು ಬಳಸುತ್ತಾನೆ.  ಇನ್ನು ಆಕೆಯಾದರೋ ಅವನ ಅಭಿಮಾನಿಯಾಗಿರುವವಳು, ಅವನಿಂದ ಕಲೆಯನ್ನು ಕಲಿಯಬೇಕು ಎಂದು ಬಂದವಳು, ಅವನನ್ನು ಆರಾಧಿಸುವವಳು.  ಮೊದಮೊದಲು ಅವಳು ಅನುನಯಿಸುತ್ತಾಳೆ, ಹೊಗಳುತ್ತಾಳೆ, ಅವನಿಗೆ ಸಮಾಧಾನವಾಗುವ ಹಾಗೆ ನಡೆದುಕೊಳ್ಳುತ್ತಾಳೆ, ಆದರೆ ಅವನು ಅವ್ಯಾವ ಮಾತುಗಳನ್ನೂ ಕೇಳುವುದಿಲ್ಲ.  ಕಡೆಗೆ ಅವಳು ಅವನದೇ ಭಾಷೆಯಲ್ಲಿ ಅವನಿಗೆ ಉತ್ತರ ಕೊಡುತ್ತಾ ಹೋಗುತ್ತಾಳೆ.

ಅವನು ಚೌಕಿಮನೆಯಲ್ಲಿ ತನ್ನ ಹೆಣ್ಣುತನವನ್ನು ಹಂಗಿಸಿದರೆ, ಈಕೆ ರಂಗದ ಮೇಲೆ ಅವನ ಪುರುಷತ್ವವನ್ನು ಅಣಕಿಸುತ್ತಾಳೆ.  ಅವನು ತನ್ನ ಪಾತ್ರವನ್ನು ಮೊಟುಕುಗೊಳಿಸಲು ಪರದೆ ಹಿಡಿಯುವವರನ್ನು ರಂಗದ ಮೇಲೆ ಕರೆಸಿ ನಿಷ್ಕ್ರಮಣದ ಸೂಚನೆ ಕೊಟ್ಟರೆ, ಈಕೆ ಕಣ್ಣಂಚಿನಲ್ಲೇ ಅವರನ್ನು ಗದರಿಸಿ ಕಳಿಸಿ ಅವನ ಎಲ್ಲಾ ಮಾತುಗಳಿಗೂ ತನ್ನ ಪಾತ್ರದ ಸಂಭಾಷಣೆಯಲ್ಲೇ ಉತ್ತರ ಕೊಡುತ್ತಾಳೆ.  ವ್ಯಂಗ್ಯ ಎಂದರೆ ರಂಗದ ಮೇಲೆ ಅವಳ ಪಾತ್ರದ ಯಾವ ಗುಣವನ್ನು ಹೀಯಾಳಿಸುತ್ತಿರುತ್ತಾನೋ ಇವನು ರಂಗದ ಹೊರಗೆ ಅದೇ ಗುಣವನ್ನು ಪ್ರದರ್ಶಿಸುತ್ತಾ ಇರುತ್ತಾನೆ.  ರಂಗದ ಹೊರಗೆ ಅವನ ಯಾವ ಗುಣ ಅಸಹನೀಯವಾಗಿ ಕಾಣುತ್ತದೆಯೋ ರಂಗದ ಮೇಲೆ ಅವಳು ಅದೇ ಆಗಿಹೋಗುತ್ತಾಳೆ ಮತ್ತು ಹಾಗಾಗುವುದರ ಮೂಲಕವೇ ತನ್ನ ಪಾತ್ರದಲ್ಲಿ ಗೆದ್ದಿರುತ್ತಾಳೆ.

ಇಬ್ಬರ ಈ ತಿಕ್ಕಾಟದ ನಡುವೆಯೆ ಆಕೆ ತಂಡದಲ್ಲಿ ಯಶಸ್ವಿ ಆಗಿದ್ದಾಳೆ, ಇವನು ಮೊದಲು ಹಂಗಿಸಿದ ಹಾಗೆ ‘ಎರಡು ತಲೆಯ ಕರು ಹುಟ್ಟಿದರೆ ಮೊದಲು ಜನ ನೋಡಲು ಮುಗಿಬೀಳುತ್ತಾರೆ’ ಎಂದಾಗದೆ, ಇವಳನ್ನು ನೋಡಲು ದಿನದಿಂದ ದಿನಕ್ಕೆ ಜನ ಬರುತ್ತಲೇ ಇರುತ್ತಾರೆ.  ಅವಳ ಯಶಸ್ಸು ಇವನಲ್ಲಿ ಅಭದ್ರತೆಯನ್ನು ತುಂಬುತ್ತಾ ಹೋಗುತ್ತದೆ.  ಒಂದು ದೃಶ್ಯದಲ್ಲಿ ಮೇಲಿನಿಂದ ವಿಶಾಲವಾದ ಒಂದು ದೊಡ್ಡ ಬಿಳಿಯಬಟ್ಟೆ ಬೀಳುತ್ತದೆ.  ಆ ಪರದೆಯ ಈಚೆ ಅರ್ಧವಸ್ತ್ರಧಾರಿಯಾದ ಅವನು, ಪರದೆಯ ಆಚೆ ಸಂಪೂರ್ಣ ಪುರುಷಾಲಂಕರದ ಅವಳು.

ಅವನಿಗೆ ಅವಳ ನೆರಳು ನೋಡುತ್ತಾ ನೋಡುತ್ತಾ ಗಗನದುದ್ದಕ್ಕೂ ಬೆಳೆದಂತೆ ಕಂಡು ಕುಸಿದು ಕೂರುತ್ತಾನೆ.  ಇವನ ಭಯದ ಮೂಲ ಅಲ್ಲಿ ಸಾಕಾರವಾಗುತ್ತದೆ.  ಕಡೆಯ ದೃಶ್ಯ ಅಕ್ಷಯಾಂಬರದ್ದು.  ದ್ರೌಪದಿಯ ವೇಷದ ಅವನು ಕುಸಿದು ಕುಳಿತಿರುತ್ತಾನೆ, ಮಾನದ ಒಂದೇ ಆಸರೆ ಎನ್ನುವಂತೆ ಸೆರಗನ್ನು ಬಿಗಿಯಾಗಿ ಹಿಡಿದುಕೊಂಡಿರುತ್ತಾನೆ, ಆಕೆ ದುಶ್ಯಾಸನನಾಗಿ ಸೆರಗನ್ನು ಎಳೆಯಲು ಕಾಮುಕತೆಯಿಂದ, ಅಹಂಕಾರದಿಂದ, ಹಮ್ಮಿನಿಂದ ಕೈಹಾಕುತ್ತಾಳೆ.  ಆ ಕ್ಷಣದಲ್ಲಿ ಅವನ ಮುಖದ ಸೋಲನ್ನು ಗಮನಿಸಿದ ಆಕೆ ಆರ್ದ್ರಳಾಗುತ್ತಾಳೆ, ಅವಳ ಕೈ ತಡೆಯುತ್ತದೆ.

ದೃಶ್ಯ ಮುಗಿದಾಗ ಅವರಿಬ್ಬರೂ ಚೌಕಿಮನೆಯಲ್ಲಿರುತ್ತಾರೆ.  ಮೊದಲ ದೃಶ್ಯದಲ್ಲಿ ಇವಳು ಮುಖದ ಬಣ್ಣ ತೆಗೆಯಲು ಅವನ ಬಳಿಯಿದ್ದ ಎಣ್ಣೆ ಡಬ್ಬಿಗೆ ಕೈಹಾಕಿದಾಗ ‘ನಿಮ್ಮದಲ್ಲದ್ದಕ್ಕೆ ಕೈ ಹಾಕುವುದಕ್ಕೆ ನಿಮಗೆ ಭಾರಿ ಖುಷಿ’ ಎಂದು ಹೀಯಾಳಿಸಿದ್ದ ಅವನು ಈಗ ತಾನಾಗಿಯೇ ಎಣ್ಣೆಯ ಡಬ್ಬಿಯನ್ನು ಅವಳೆಡೆಗೆ ಚಾಚುತ್ತಾನೆ.  ಅದುವರೆವಗೂ ಅವನು ಅಂದ ಯಾವ ಮಾತುಗಳ ಕಹಿಯನ್ನೂ ಉಳಿಸಿಕೊಳ್ಳದಂತೆ ಅವಳು ಎಣ್ಣೆಯ ಡಬ್ಬಿಯನ್ನು ಕೈಗೆತ್ತಿಕೊಳ್ಳುವುದರಲ್ಲಿ ನಾಟಕ ಮುಗಿಯುತ್ತದೆ.

ನಾಟಕ ಮುಗಿದ ಮೇಲೂ ಒಂದು ಸಣ್ಣ ಸಂಶಯ, ಅವನು ಬದಲಾಗುವುದು ತನ್ನ ತಪ್ಪನ್ನು ಒಪ್ಪಿಕೊಂಡಾ ಅಥವಾ ಈಗ ತಂಡದಲ್ಲಿ ಮೇಲುಗೈ ಪಡೆದಿರುವ ಅವಳನ್ನು ಉಳಿಸಿಕೊಳ್ಳಲು ತಂಡದ ಯಜಮಾನರು ತನ್ನನ್ನೇ ಹೊರಹಾಕಿಯಾರು ಎನ್ನುವ ಹೆದರಿಕೆಯಿಂದಲಾ?  ದೇವರೇ ಪ್ರಶ್ನೆಗಳಿಂದ ಪಾರುಮಾಡು!  ನಮ್ಮ ಬೆಳವಣಿಗೆಯಲ್ಲಿ, ನಮ್ಮ ಯೋಚನಾಕ್ರಮದಲ್ಲಿಯೇ ಒಂದು ಕಂಡೀಶನಿಂಗ್ ಇರುತ್ತದೆ ಅನ್ನಿಸುತ್ತದೆ.

ಪುರುಷಪಾತ್ರವನ್ನು ಲೀಲಾಜಾಲವಾಗಿ ನಿಭಾಯಿಸಬಲ್ಲೆ ಎನ್ನುವುದು ಆಕೆಗೆ ಹೆಮ್ಮೆಯ ವಿಷಯವಾದರೆ, ತಾನು ಸ್ತ್ರೀ ಪಾತ್ರಕ್ಕೆ ಮಾತ್ರ ಮೀಸಲಾಗುತ್ತಿದ್ದೇನೆ ಎನ್ನುವುದು ಅವನಿಗೆ ಕೀಳರಿಮೆಯ ಸಂಗತಿ.  ’ಮಗಳನ್ನು ಗಂಡು ಮಗನಂತೆ ಸಾಕಿದ್ದೇನೆ’ ಎಂದು ಹೆಮ್ಮೆಯಿಂದ ಹೇಳುವ ಅಪ್ಪಂದಿರನ್ನು ನೋಡಿದ್ದೆನೆ, ’ಮಗನನ್ನು ಹೆಣ್ಣುಮಗಳಂತೆ ಬೆಳೆಸಿದ್ದೇನೆ’ ಎಂದು ಅಷ್ಟೇ ಖುಷಿಯಿಂದ ಹೇಳುವ ಒಬ್ಬೇ ಒಬ್ಬ ತಾಯಿಯನ್ನು ನಾನಿನ್ನೂ ನೋಡಿಲ್ಲ.

ನಾಟಕದ ವಸ್ತು ಸಂಕೀರ್ಣವಾದದ್ದು, ಅದನ್ನು ನಾಟಕೀಯತೆಯೊಂದಿಗೆ ನಮ್ಮೆದಿರು ತೆರೆದಿಡುವಲ್ಲಿ ನಿರ್ದೇಶಕಿಯಾಗಿ ಶರಣ್ಯ ಗೆಲ್ಲುತ್ತಾರೆ.  ಇವರ ಮೂಲಕ ಮತ್ತೊಬ್ಬ ಭರವಸೆಯ ರಂಗಕರ್ಮಿ ರಂಗಭೂಮಿಗೆ ಬಂದಂತಾಗಿದೆ.  ದ್ರೌಪದಿಯ ಪಾತ್ರಧಾರಿಯಾಗಿ ಪ್ರಸಾದ್ ಚೇರ್ಕಾಡಿ ಅದ್ಭುತವಾಗಿ ನಟಿಸಿದ್ದಾರೆ ಎನ್ನುವುದು ತಪ್ಪಾಗುತ್ತದೆ.  ಅವರು ಅಲ್ಲಿ ನಟಿಸಿಲ್ಲ, ತಾವೇ ಆ ಪಾತ್ರವಾಗಿದ್ದಾರೆ.  ಅವರ ತಯಾರಿಗೆ ಉದಾಹರಣೆಯಾಗಿ ಒಂದು ಮಾತು ಹೇಳುವುದಾದರೆ, ರಂಗಭೂಮಿಯ ನಡುವಲ್ಲಿ ಒಂದಿಷ್ಟು ಜಾಗ ರಂಗಸ್ಥಳವೆಂದು ಸೂಚಿಸಲು ಬಿಳಿಪಟ್ಟಿಗಳನ್ನು ಹಾಕಿ ಎಲ್ಲೆಗಳನ್ನು ಗುರ್ತಿಸಿದ್ದಾರೆ.

akshayambara by sureen

ಇಡಿ ನಾಟಕದಲ್ಲಿ ಒಮ್ಮೆಯಾದರೂ ಪ್ರಸಾದ್ ದ್ರೌಪದಿಯಾಗಿ ಆ ಎಲ್ಲೆಯನ್ನು ದಾಟುವುದಿಲ್ಲ.  ಅವರ ನೃತ್ಯ, ಅಭಿನಯ, ತಿರುಗಾಟ ಎಲ್ಲಾ ಅದರ ಒಳಗಡೆಯೆ.  ಆ ಎಲ್ಲೆ ದಾಟಿದ ಮರುಕ್ಷಣ ಕಣ್ಣಿಗೆ ಕಾಣುವ ಹಾಗೆ ಅವರ ಆಂಗಿಕ ಬದಲಾಗುತ್ತದೆ.  ಆ ಪಾತ್ರದ ಪ್ರತಿಭೆ, ಒಳತೋಟಿ, ಅಭದ್ರತೆ, ಅವಮಾನ, ಸೋಲು, ಹತಾಶೆ ಎಲ್ಲವನ್ನೂ ಅವರು ಎಳೆ ಎಳೆಯಾಗಿ ಬಿಡಿಸಿಡುತ್ತಾರೆ.  ಸ್ವತಃ ಯಕ್ಷಗಾನ ಕಲಾವಿದರಾಗಿರುವುದರಿಂದ ಅವರು ಪಾತ್ರಪೋಷಣೆಗೆ ಒಂದು ಕಸುಬುದಾರಿಕೆಯನ್ನೂ ತಂದಿದ್ದಾರೆ.

ನಾಟಕದ ಬೆಳವಣಿಗೆಯಲ್ಲಿ, ಪಾತ್ರಗಳ ಬೆಳವಣಿಗೆಯೂ ಇದೆ.  ದೃಶ್ಯದಿಂದ ದೃಶ್ಯಕ್ಕೆ ಕೌರವೇಂದ್ರನ ನಡುವಸ್ತ್ರ, ಕವಚ, ಕಿರೀಟ ಒಂದೊಂದಾಗಿ ಹೆಚ್ಚಾಗುತ್ತಲೇ ಹೋಗುತ್ತದೆ.  ಆ ಪಾತ್ರ ಮತ್ತು ಆ ಪಾತ್ರದ ಮೂಲಕ ಅವಳು ತಂದದಲ್ಲಿ ಬೆಳೆಯುತ್ತಾ ಹೋಗುತ್ತಾಳೆ.  ಅದೇ ಸಮಯದಲ್ಲಿ ದೃಶ್ಯದಿಂದ ದೃಶ್ಯಕ್ಕೆ ಅವನ ಆತ್ಮವಿಶ್ವಾಸ, ನಡೆಯಲ್ಲಿನ ಬಿಂಕ, ಮಾತಿನಲ್ಲಿನ ಖಚಿತತೆ ಕರಗುತ್ತಾ ಹೋಗುತ್ತದೆ.  ಕಡೆಕಡೆಗೆ ಮತ್ತೇನೂ ಮಾಡಲಾಗದಾಗ ಕೂಗಾಡುತ್ತಾ, ಕಿರುಚಾಡುತ್ತಾ ಅವಳ ಮೇಲೆ ಕೈ ಮಾಡುವವರೆಗೂ ಹೋಗುತ್ತಾನೆ.

ನಾಟಕದ ನಡುವೆ ಮೇಲಿಂದ ಜಾರುವ ಆ ಬಿಳಿವಸ್ತ್ರ, ಒಂದೇ ದೃಶ್ಯದಲ್ಲಿ ನಮ್ಮೆದಿರು ಎದೆಯನ್ನು ಬಟ್ಟೆಯಿಂದ ಕಟ್ಟಿಕೊಂಡು ಪುರುಷನಾಗುವ ಅವಳು ಮತ್ತು ಕನ್ನಡಿಯಲ್ಲಿನ ಪ್ರತಿಬಿಂಬದಲ್ಲಿ ರವಿಕೆಯ ಒಳಗೆ ಬಟ್ಟೆ ತುರುಕಿಕೊಂಡು ಸ್ತ್ರೀಯಾಗುವ ಅವನು, ಸಶಕ್ತವಾಗಿ ಬಳಸಿಕೊಂಡ ಬೆಳಕು, ಅದೇ ರಂಗದ ಮೇಲೆ, ಒಂದೇ ನಾಟಕದ ಹಲವಾರು ಪ್ರದರ್ಶನಗಳು ಹಲವಾರು ಸ್ಥಳದಲ್ಲಿ ಆದವು ಎಂದು ತೋರಿಸಲು ಬೇರೆಬೇರೆ ಅಲಂಕಾರದ ಪೆಟ್ಟಿಗೆಗಳನ್ನು ಬೇರೆಬೇರೆ ಸ್ಥಳಗಳಲ್ಲಿ ಇರಿಸುವುದರ ಮೂಲಕ ಅವರು ಉಪಯೋಗಿಸುವ ರಂಗತಂತ್ರ ಗಮನಸೆಳೆಯುತ್ತದೆ.

ಇವೆಲ್ಲವೂ ಅದನ್ನು ಕೇವಲ ಒಂದು ನಾಟಕವಾಗಿ ಮಾತ್ರ ಅಲ್ಲ, ಒಂದು ರಂಗಾನುಭವವನ್ನಾಗಿಸುತ್ತವೆ.

‍ಲೇಖಕರು Admin

July 16, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

 1. lalitha sid

  ಸಂಧ್ಯಾ ,, ನೀವು ಉಲ್ಲೇಖಿಸಿರುವ ಸಾನಿಯಾ ಮಿರ್ಜಾ ಅವರ ಸಂದರ್ಶನ ನಾನೂ ನೋಡಿದೆ. ನನಗೆ ಬಹಳ ಸಮಾಧಾನವಾಗಿದ್ದು ಈ ”’ಸೆಟ್ಲ್ ”
  ಆಗುವುದು ಎನ್ನುವ ಕ್ಲೀಷೆಯನ್ನೇ ಆ ಹುಡುಗಿ ಕಚಕ್ ಎಂದು ಕತ್ತರಿಸಿದ ರೀತಿ. ಹುಟ್ಟು , ತದನಂತರ ಕೆಲಸ ಬೊಗಸೆ ಕಲಿ, ತದನಂತರ ಒಳ್ಳೇ ಕಡೆ ಮದುವೆ – ಇದು ನಮ್ಮಮ್ಮನ ಅಮ್ಮನ ಕಾಲದ ಹೆಣ್ಣು ಸೆಟಲ್ ಆಗುವ ಸೂತ್ರ. ಆಮೇಲೆ ಕನಿಷ್ಟ ನೂರುವರುಷ ತರುವಾಯ ಅದಕ್ಕೆ ಅಂದರೆ ಆ ಸೂತ್ರಕ್ಕೆ ಮದುವೆಗೆ ಮೊದಲು ಒಂದು ನಾಲ್ಕಕ್ಷರ ಕಲಿಯುವ ಒಂದು ದೊಡ್ಡ ಬದಲಾವಣೆ
  ಅಡಿಷನ್ ಆಯಿತು. ಆಮೇಲೆ ಹೆಚ್ಚುಕಡಿಮೆ ನೂರು ವರುಷದ ಕಾಲಾಂತರದಲ್ಲಿ ಈ ಸೆಟಲ್ ಸೂತ್ರಕ್ಕೆ ಹೆಣ್ಣುಮಗಳು ಸಾಧ್ಯವಾದರೆ ಒಂದು ಗೌರ್ಮೆಂಟ್
  ಮೇಡಮ್ ನೋಕರಿ ಮಾಡಬಹುದೆಂಬ ಒಂದು ಅಮೆಂಡ್ ಮೆಂಟ್ ಸೇರಿಕೊಂಡಿತು. ಆಮೇಲಾಮೇಲೊಂದು ಇನ್ನೂರು ವರುಷಕ್ಕೆ ಲಕ್ಷ ಲಕ್ಷ ಮಹಿಳೆಯರ ದನಿ ಕೂಗಿ ಕೂಗಿ ಈ ಸಿದ್ಧ ಸೆಟಲ್ ಸೂತ್ರಕ್ಕೊಂದು ಅಂತ್ಯ ಹಾಡಲು ತೊಡಗುವ ಕಾಲಕ್ಕೆ ಈ ಸರದೀಪುಗಳೆಂಬ ಅತಿ ಬುದ್ಧಿವಂತರು ಇಂತಹುದೊಂದು ಪ್ರಶ್ನೆಯನ್ನು ಕೋಟ್ಯಾಂತರ ಜನ ನೋಡುವ ಸಂದರ್ಶನದಲ್ಲಿ ಎಗ್ಗಿಲ್ಲದೆ ಕೇಳುತ್ತಾರೆ. ಮಗು ಮಾಡಿಕೊಳ್ಳುವುದು ಬಿಡುವುದು ವಿವಾಹಿತ ಹೆಣ್ಣಿಗೂ ಕೂಡ ಅವಳ ಆಯ್ಕೆ ಅಷ್ಟೇ ಎನ್ನುವ ಅಂಶ ಮತ್ತು ಅತ್ಯಂತ ವೈಯಕ್ತಿಕ ಪ್ರಶ್ನೆಯನ್ನು ಹೀಗೆ ಕೇಳಿಬಿಡುವ ಸ್ವಾತಂತ್ರ್ಯವನ್ನು ತಾವೇ ಕೊಂಡಿಟ್ಟುಕೊಂಡಿರುವ ಹಾಗೆ ಆಡಬಾರದೆಂಬ ವಿವೇಕ ಎರಡೂ ಇವರಿಗಿದ್ದಂತೆ ಕಾಣೆ.
  ಸಾನಿಯಾ ಕೊಟ್ಟ ಉತ್ತರ ಸಾರ್ವಕಾಲಿಕ ದಿಟ್ಟ ದಾಖಲೆ. ಒಂದಲ್ಲ ಎರಡಲ್ಲ ನಾಲ್ಕು ಸರ್ತಿ ಆಕೆಯ ಕ್ಷಮೆ ಕೇಳಬೇಕಾಯ್ತು ಸಂದರ್ಶಕ.
  ಇನ್ನಾದರೂ ಮದುವೆ ಮಕ್ಕಳೆಂಬ ಖಾಸಗಿ ವಿಷಯಗಳನ್ನು ಟೀವಿಯಲ್ಲಷ್ಟೇ ಅಲ್ಲ ನಿತ್ಯದ ಬದುಕಲ್ಲೂ ಯಾರನ್ನಾದರೂ ಯಾವಾಗಲಾದರೂ ಕೇಳಬಹುದಾದ ಪ್ರಶ್ನೆಗಳು ಎಂದು ನಾವು ಅಂದುಕೊಂಡುಬಿಟ್ಟಿರುವುದನ್ನು ನಾವೆಲ್ಲರೂ ಬಿಡಬೇಕು.

  ಪ್ರತಿಕ್ರಿಯೆ
  • ಸಂಧ್ಯಾರಾಣಿ

   ಲಲಿತಕ್ಕಾ ನಮಸ್ತೆ. ನಿಮ್ಮ ಪ್ರತಿಕ್ರಿಯೆಗೆ ಮೊದಲು ವಂದನೆ ಹೇಳಿಬಿಡುತ್ತೇನೆ 🙂 ನಿಜ, ಹೆಣ್ಣಿನ ಓದು, ಹೆಣ್ಣಿನ ಮದುವೆ, ಹೆಣ್ಣಿನ ಬಸಿರು, ಹೆಣ್ಣಿನ ಬದುಕು ಇವುಗಳ ಬಗ್ಗೆ ಯಾರು ಬೇಕಾದರೂ ನ್ಯಾಯಾಧೀಶರಾಗಬಹುದು. ಮನೆಗಳಲ್ಲಿ, ನಿತ್ಯದ ಬದುಕಿನಲ್ಲಿ, ಅಕ್ಕಪಕ್ಕದ ಮನೆಯವರು ಕೇಳುವುದಿರಲಿ, ರಾಷ್ಟ್ರೀಯ ಚಾನಲ್ ನಲ್ಲಿ ಸಹ, ಸ್ವತಃ ತನ್ನನ್ನು ತಾನು ಪ್ರಗತಿಪರ, ಬುದ್ಧಿವಂತ ಅಂದುಕೊಂಡಂತಹ ಸರ್ದೇಸಾಯಿ ಕೇಳಬಲ್ಲ ಅಂದರೆ…. I loved the girl. I loved the grace with which she handled the question, ಸಾರಿ ಕೇಳಿಯೇ ಆತ ತನ್ನ ಮರ್ಯಾದೆ ಉಳಿಸಿಕೊಳ್ಳಬೇಕಾಯಿತು.

   ಪ್ರತಿಕ್ರಿಯೆ
 2. Anonymous

  ಅಬ್ಬಬ್ಬಾ , ಇದು ನಾಟಕವಾಗಿ ಮತ್ತು ನಾಟಕಕ್ಕಿಂತ ಮಿಗಲಾದ ಅನುಭವವಾಗಿ, ಮಾನವ ಸಂಬಂಧಗಳ ಸಂವೇದನೆಗಳ ಅನುಭೂತಿಯಾಗಿ ಇಷ್ಟು ಆಳಕ್ಕಿಳಿದ ವಿಮರ್ಶೆ…….. Sandy you are just impossible

  ಪ್ರತಿಕ್ರಿಯೆ
  • ಸಂಧ್ಯಾರಾಣಿ

   ವಂದನೆಗಳು, ಸಾರಿ ಹೆಸರಿಲ್ಲ, ಹಾಗಾಗಿ ಯಾರು ಅಂತ ಗೊತ್ತಾಗಲಿಲ್ಲ?

   ಪ್ರತಿಕ್ರಿಯೆ
 3. Dr Leelamohan PVR

  Great play and I am really thrilled by the performances and planning to watch again

  ಪ್ರತಿಕ್ರಿಯೆ
 4. Shama, Nandibetta

  “’ಮಗಳನ್ನು ಗಂಡು ಮಗನಂತೆ ಸಾಕಿದ್ದೇನೆ’ ಎಂದು ಹೆಮ್ಮೆಯಿಂದ ಹೇಳುವ ಅಪ್ಪಂದಿರನ್ನು ನೋಡಿದ್ದೆನೆ, ’ಮಗನನ್ನು ಹೆಣ್ಣುಮಗಳಂತೆ ಬೆಳೆಸಿದ್ದೇನೆ’
  ಎಂದು ಅಷ್ಟೇ ಖುಷಿಯಿಂದ ಹೇಳುವ ಒಬ್ಬೇ ಒಬ್ಬ ತಾಯಿಯನ್ನು ನಾನಿನ್ನೂ ನೋಡಿಲ್ಲ.”

  And you’re right. The grace with which she presented herself was matchless !! Hats off to her. ಮದುವೆ, ಮಕ್ಕಳು, “ಸೆಟ್ಲ್ ಆಗುವುದು” ಇವುಗಳು ಸಾಮಾಜಿಕ ಸಮಸ್ಯೆಗಳಲ್ಲ ಮತ್ತು ಇವುಗಳನ್ನು ಪಬ್ಲಿಕ್ ಆಗಿ ಅಥವ ಾವೈಯಕ್ತಿಕವಾಗಿ ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಅನ್ನೋದು ಻ರ್ಥವಾದ ದಿನ ಈ ದೇಶ ಬದಲಾಗತ್ತೆ ಸಂಧ್ಯಾ.. ಕಾಯೋಣಾ ?

  ಸಂಧ್ಯಾ, ಸಾನಿಯಾ, ಶರಣ್ಯ …

  Wonderful analysis.. Loves.. Hugs Sandhya

  ಪ್ರತಿಕ್ರಿಯೆ
 5. ಪಲ್ಲವಿ

  Speechless… ಸಾನಿಯಾ ಪ್ರತಿಕ್ರಿಯೆಗೂ, ನಾಟಕದ ತಿರುಳಿಗೂ ಮತ್ತು ತಮ್ಮ ಬರಹಕ್ಕೂ… I can just say “WOW”. ಎಲ್ಲಾ ಕ್ಷೇತ್ರಗಳಲ್ಲೂ & ಪ್ರತಿ ಮನೆಯಲ್ಲೂ ಎಲ್ಲರಲ್ಲೂ ಇರಬೇಕಾದ ಮನೋಭಾವವಿದು.

  ಗಂಡು ಮಗನ ಹಾಗೆ ನಾನು ಬೆಳೆದಿದ್ದೇನೆ ನಾನು ಎಂದು ಪ್ರಸ್ತುತ ಪರಿಸ್ಥಿತಿ(ಗಂಡು ಎಲ್ಲೆಡೆ ಹೋಗಿ ಯಾವುದೇ ಕೆಲಸವನ್ನು ಸಲೀಸಾಗಿ ಮಾಡಲು ಅನುಮತಿ ಇರುವ, ಹೆಣ್ಣಿಗೆ ಆ ಅನುಮತಿ ಇಲ್ಲದ/ಕಡಿಮೆ ಇರುವ ಪ್ರಸ್ತುತ ದಿನಗಳು)ಯಲ್ಲಿ ಹೇಳಿಕೊಳ್ಳುತ್ತೇನೆ. ನಮ್ಮ ಸುರಕ್ಷತೆಗೆ ಪೂರ್ಣ ಪ್ರಮಾಣದ ಗಮನ ಹರಿಸಿ, ನೈತಿಕ ಚೌಕಟ್ಟಿನ ಒಳಗಿರುವ ‘ಗಂಡು ಮಗ ಮಾಡುವ ಕೆಲಸ’ ಎಂದು ಹಣೆಪಟ್ಟಿ ಹೊಂದಿರುವ ಯಾವ ಕೆಲಸಕ್ಕೂ ನಾನು ಹೆಣ್ಣು ಎಂಬ ಕಾರಣಕ್ಕೆ ಹಿಂದೇಟು ಹಾಕಲಾರೆ.

  ದಯವಿಟ್ಟು ಅಕ್ಷಯಾoಬರ ನಾಟಕದ ಮಾಹಿತಿ(ನಿರ್ದೇಶಕ/ನಾಟಕಕ್ಕೆ ಸಂಬಂಧಪಟ್ಟ ಯಾರದಾದರೂ ದೂರವಾಣಿ ಸಂಖ್ಯೆ ಅಥವಾ facebook link ಕೊಡಿ. ನಾನೂ ಒಮ್ಮೆ ನೋಡಬೇಕು ಎನ್ನುವ ಆಸೆ ಆಗಿದೆ…
  ಒಳ್ಳೆಯ ಲೇಖನಕ್ಕೆ ಧನ್ಯವಾದಗಳು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: