ಇದುವೇ ‘ರಂಗಮಂಟಪ’

ಪ್ರಕಾಶ್‌ ಶೆಟ್ಟಿ

ಬೆಂಗಳೂರಿನ ಹವ್ಯಾಸಿ ರಂಗಭೂಮಿಯಲ್ಲಿ ಸಂಗೀತ, ನಿರ್ದೇಶನಗಳಿಗೆ ಹೆಸರಾದ ಪ್ರಕಾಶ್ ಶೆಟ್ಟಿ ತಮ್ಮ ಮಡದಿ ಚಂಪಾಶೆಟ್ಟಿ ಹಾಗೂ ರಂಗಗೆಳೆಯರೊಡಗೂಡಿ ಕಟ್ಟಿದ ತಂಡವೇ ರಂಗ ಮಂಟಪ. ಕಳೆದೊಂದು ದಶಕದಲ್ಲಿ ಈ ಇಬ್ಬರ ನಿರ್ದೇಶನದಲ್ಲಿ ಮೂಡಿಬಂದ ನಾಲ್ಕು ನಾಟಕಗಳಾದ ಗಾಂಧಿ ಬಂದ, ಮಲ್ಲಿಗೆ, ಅನಭಿಜ್ಞ ಶಾಕುಂತಲ, ಅಕ್ಕು ರಾಜಧಾನಿಯಲ್ಲಿ ಹೊಸ ಸಂಚಲನ ಮೂಡಿಸಿದ್ದುವು.

1991 ರಿಂದ ಜೊತೆ ಜೊತೆಯಲ್ಲಿ ರಂಗ ಚಟುವಟಿಕೆಗಳಲ್ಲಿ ತೊಡಗಿರುವ ನಾವು ಏಳೆಂಟು ರಂಗ ಗೆಳೆಯರು, ನಮ್ಮ ನೇಪಥ್ಯದ ಅನುಭವದಲೇ ಕಲಾನಿರ್ದೇಶನವನ್ನು ವೃತ್ತಿಯಾಗಿ ಆರಿಸಿಕೊಂಡು ಬದುಕ ಕಟ್ಟಿಕೊಂಡೆವು. ಮೂಲತಃ ಕಲಾವಿದರಾದ ನಮಗೆ ರಂಗದ ನಂಟು ಇನ್ನಿಲ್ಲದಂತೆ ಕಾಡುತ್ತಿದ್ದುದರ ಪರಿಣಾಮ ನಮ್ಮದೇ ಒಂದು ತಂಡ ಕಟ್ಟಬೇಕೆಂಬ ಮಹದಾಸೆ ಮೂಡಿತು.

2008ರಲ್ಲಿ ಕನ್ನಡ ರಂಗಭೂಮಿಯ ಹೆಮ್ಮೆ ವಿ. ರಾಮಮೂರ್ತಿಯವರ ಸಾರಥ್ಯದಲ್ಲಿ ಬೆಳಕಿನ ಕಾರ್ಯಾಗಾರವನ್ನು ಆಯೋಜಿಸುವುದರ ಮೂಲಕ ನಮ್ಮ ಕನಸಿನ “ರಂಗಮಂಟಪ” ತಂಡಕ್ಕೆ ಅಡಿಪಾಯ ಹಾಕಿದೆವು. ನಂತರ 2010ರಲ್ಲಿ ರಂಗನಿರಂತರ ನಾಟಕೋತ್ಸವಕ್ಕಾಗಿಯೇ ಚಂಪಾ ಶೆಟ್ಟಿಯವರು ಡಾ. ಎಚ್ ನಾಗವೇಣಿಯವರ “ಗಾಂಧಿ ಬಂದ” ಕಾದಂಬರಿಯನ್ನು ನಾಟಕಕ್ಕೆ ರೂಪಾಂತರಿಸಿ, ನಿರ್ದೇಶಿಸುವುದರ ಮೂಲಕ “ರಂಗಮಂಟಪ” ಕನ್ನಡ ಹವ್ಯಾಸಿ ರಂಗಭೂಮಿಯ ಅಧಿಕೃತ ರಂಗತಂಡವಾಗಿ ಹೊರಹೊಮ್ಮಿತು.

ಹೊಸ ತಂಡ, ಹೊಸ ನಿರ್ದೇಶಕರು, ಹೊಸ ಕಲಾವಿದರಾದರೂ “ಗಾಂಧಿ ಬಂದ” ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಪಡೆದು ತಂಡಕ್ಕೊಂದು ಶುಭ ಮುನ್ನುಡಿ ಬರೆಯಿತು. ಈ ಯಶಸ್ಸಿನ ಬೆನ್ನಲ್ಲೇ ನಾನೇ ನಿರ್ದೇಶಿಸಿದ ಡಾ. ಕೆ ವೈ ನಾರಾಯಣ ಸ್ವಾಮಿಯವರ “ಅನಭಿಜ್ಞ ಶಾಕುಂತಲ” ಮತ್ತು “ಮಲ್ಲಿಗೆ” ನಾಟಕಗಳು ತಂಡದ ಮೊದಲ ನಾಟಕದಷ್ಟೇ ಯಶಸ್ವಿಯಾಯಿತು.

ತಂಡಕ್ಕೆ ಮತ್ತಷ್ಟು ಹೆಸರು ತಂದು ಕೊಟ್ಟ ಡಾ. ವೈದೇಹಿಯವರ ಮೂರು ಕತೆಗಳನ್ನು ಆದರಿಸಿದ ಚಂಪಾ ಶೆಟ್ಟಿಯವರು ನಿರ್ದೇಶಿಸಿದ “ಅಕ್ಕು” ನಾಟಕವಾಗಿ ಸೆಳೆದದ್ದೂ ಅಲ್ಲದೆ, “ಅಮ್ಮಚ್ಚಿಯೆಂಬ ನೆನಪು” ಹೆಸರಿನಲ್ಲಿ ಸಿನೆಮಾ ಆಗಿ ಕೂಡಾ ಅಭೂತಪೂರ್ವ ಯಶಸ್ಸು ಗಳಿಸಿತು.

“ರಂಗಮಂಟಪ” ಎಂದೂ ಸಂಖ್ಯೆಗಳಿಗಾಗಿ ನಾಟಕ ಮಾಡಿದ್ದಲ್ಲ. ಮಾಡಿದ್ದು ನಾಲ್ಕೇ ನಾಟಕಗಳಾದರೂ ಒಂದೊಂದರಲ್ಲಿಯೂ ನಲವತ್ತಕ್ಕೂ ಹೆಚ್ಚು ಕಲವಿದರನ್ನು ಹೊಂದಿದ್ದೂ . ಎಲ್ಲಾ ನಾಟಕಗಳು 25, 50, 75 ಪ್ರದರ್ಶನಗಳನ್ನು ಕಂಡಿರುವುದು ನಮ್ಮ ತಂಡದ ಹೆಮ್ಮೆ.

ಕೇವಲ ನಾಟಕ ಪ್ರದರ್ಶನವಲ್ಲದೆ, ರಂಗಗೀತೆಗಳ ಗಾಯನ, ರಂಗ ಕಾರ್ಯಾಗಾರ ಹೀಗೆ ರಂಗಭೂಮಿಯ ವಿವಿಧ ಆಯಾಮಗಳಲ್ಲಿಯೂ “ರಂಗಮಂಟಪ” ತೊಡಗಿಸಿಕೊಂಡಿದೆ. ನೂರಾರು ಹೊಸ ಕಲಾವಿದರು, ಹಿರಿಯ ಕಲಾವಿದರು ಮತ್ತು ಹೆಸರಾಂತ ರಂಗಕರ್ಮಿಗಳು ರಂಗಮಂಟಪದ ಜೊತೆಗಿನ ಪಯಣದಲ್ಲಿ ನಮ್ಮೊಂದಿಗಿರುವುದು ನಮ್ಮ ಶಕ್ತಿ.

“ರಂಗಮಂಟಪ”ದ ಪ್ರತಿ ಕಾರ್ಯಕ್ರಮವೂ ಅತ್ಯಂತ ಯಶಸ್ವಿಯಾಗಿ ನೆಡದುಕೊಂಡು ಬಂದಿದೆಯೆಂದರೆ ಅದಕ್ಕೆ ಕೆಲವು ಕಾರಣಗಳಿವೆ. ಎಲ್ಲಕ್ಕಿಂತಾ ಮುಖ್ಯವಾಗಿ ಆರ್ಥಿಕ ವಿಷಯದಲ್ಲಿನ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ತಂಡದ ಬಲ. ಎಲ್ಲಿಂದ ಎಷ್ಟು ಹಣ ಬಂತು? ಏನಾಯಿತು? ಎಂಬುದು ಎಲ್ಲರಿಗೂ ತಿಳಿದಿರುತ್ತದೆ. ಏಕ ಚಕ್ರಾಧಿಪತ್ಯಕ್ಕೆ ನಮ್ಮ ತಂಡದಲ್ಲಿ ಅವಕಾಶವೇ ಇಲ್ಲ.

ಕಲಾವಿದರ ಲಭ್ಯತೆ, ಇಂದಿನ ರಂಗಭೂಮಿಯ ಮುಖ್ಯ ಸಮಸ್ಯೆಯಾಗಿದೆಯಾದರೂ ಕಲಾವಿದರು ಸಿಗಲಿಲ್ಲವೆಂಬ ಕಾರಣಕ್ಕೆ ನಾಟಕ ನಿಲ್ಲಿಸಿದ ಅಥವಾ ರದ್ದುಗೊಳಿಸಿದ ಒಂದು ಸಂದರ್ಭವೂ “ರಂಗಮಂಟಪ”ದ ಇತಿಹಾಸದಲ್ಲಿಲ್ಲ. “ಇಲ್ಲಿ ಯಾರು ಮುಖ್ಯರಲ್ಲಾ ಯಾರೂ ಅಮುಖ್ಯರಲ್ಲಾ” ಎನ್ನುವುದನ್ನು ಪರಿಪಾಲಿಸುತ್ತಾ ತಂಡ, ತನ್ನದೇ ಆದ ರೀತಿಯಲ್ಲಿ ಬೆಳೆಯುತ್ತಿದೆ.

ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಾತ್ರವಲ್ಲದೆ ಮುಂಬೈ, ದೆಹಲಿ, ಒರಿಸ್ಸಾ, ಹೈದರಾಬಾದ್ ಮುಂತಾದ ರಾಜ್ಯಗಳಲ್ಲಿಯೂ ನಮ್ಮ ನಾಟಕಗಳು ಪ್ರದರ್ಶನಗೊಂಡು ಅಲ್ಲಿನ ಪ್ರೇಕ್ಷಕರ ಪ್ರೀತಿ ಗಳಿಸಿದೆ. ಶ್ರೀನಿವಾಸ್ ಜಿ ಕಪ್ಪಣ್ಣ ಅವರ ಮೂಲಕ ಮುಂಬೈ ಮತ್ತು ದೆಹಲಿಗೆ ಪರಿಚಯವಾದ ನಮ್ಮ ತಂಡ ಅಲ್ಲಿನ ಕನ್ನಡ ಸಂಘಗಳ ಪ್ರೀತಿಯ ತಂಡಗಳಲ್ಲಿ ಒಂದಾಯಿತು.

ದೆಹಲಿಯ ವಸಂತಶೆಟ್ಟಿ ಬೆಳ್ಳಾರೆಯವರು ಒಮ್ಮೆ ಹೇಳಿದ ಒಂದು ಮಾತು “ಎಷ್ಟೋ ರಂಗ ತಂಡಗಳು ಇಲ್ಲಿಗೆ ಬಂದಿವೆ. ಬಂದ ಬಹುತೇಕ ತಂಡಗಳ ಮೊದಲ‌ ಆಸಕ್ತಿ “ದೆಹಲಿ ಟೂರ್” ಆಗಿರುತ್ತದೆ ನಿಮ್ಮ ತಂಡದಲ್ಲಿ ನಾನು ಕಂಡದ್ದು- ಮೊದಲು ನಾಟಕ, ಉಳಿದದ್ದು ನಂತರ ಎಂಬ ಬದ್ಧತೆ”.‌ ಅವರ ಈ ಮಾತುಗಳು ನಿಜಕ್ಕೂ ನಮ್ಮ ಶ್ರಮವನ್ನು ಸಾರ್ಥಕಗೊಳಿಸಿವೆ. ಅಲ್ಲಿನ ಕನ್ನಡಿಗರು “ರಂಗಮಂಟಪ”ದ ನಾಟಕವೆಂದರೆ ಪ್ರಚಾರ ಇಲ್ಲದೆಯೂ ಬರುತ್ತಾರೆಂಬುದು ನಮಗೆ ಅವರು ಕೊಟ್ಟ ದೊಡ್ಡ ಗೌರವ. 

ಅಂದು ದೆಹಲಿಯಲ್ಲಿ “ಗಾಂಧಿ ಬಂದ” ನಾಟಕ ಮುಗಿದ ನಂತರ ಸುಮಾರು ನಿಮಿಷಗಳ ಕಾಲ ನಿಂತು ಚಪ್ಪಾಳೆ ತಟ್ಟಿ ನಮ್ಮನ್ನು ಪ್ರೋತ್ಸಾಹಿಸಿದ ಪ್ರೇಕ್ಷಕರ ಪ್ರೀತಿ ಮರೆಯುವುದಾದರೂ ಹೇಗೆ ಸಾಧ್ಯ? ಹಾಗೇ ಹೈದರಾಬಾದ್ ನಲ್ಲಿ “ಅನಭಿಜ್ಞ ಶಾಕುಂತಲ” ನಾಟಕವಾದ ಮೇಲೆ ವೇದಿಕೆಗೆ ಬಂದು, ಲೇಖಕರು ಮತ್ತು ನಿರ್ದೇಶಕರ ಕಾಲಿಗೆ ನಮಸ್ಕರಿಸಿದ ಅಲ್ಲಿನ ರಂಗಕರ್ಮಿಗಳ ಪ್ರೀತಿ ನಮ್ಮನ್ನು ಮೂಕರನ್ನಾಗಿಸಿತ್ತು.. ಯೂ ಟ್ಯೂಬ್ ನಲ್ಲಿ ಲಭ್ಯವಿರುವ ಆ ಪ್ರದರ್ಶನವನ್ನು ಆಗಾಗ ನೋಡಿ ನೆನಪಿನಾಳಕ್ಕೆ ಇಳಿಯುತ್ತಿರುತ್ತೇವೆ.

“ರಂಗಮಂಟಪ” ಪ್ರತಿ ವರ್ಷ ನಡೆಸುವ ನಾಟಕೋತ್ಸವ “ನಾಟಕ ವರ್ಷ ” ಪ್ರತಿವರ್ಷ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆಯುತ್ತದೆ. ಹಾಗೆಯೇ 2016 ದೆಹಲಿಯ ಕನ್ನಡ ಸಂಘದಲ್ಲಿ ನಮ್ಮ ನಾಟಕೋತ್ಸವ ಆಯೋಜನೆಯಾಗಿತ್ತು. ಮೊದಲ ದಿನ, ಮಲ್ಲಿಗೆ ನಾಟಕ ಮುಗಿಸಿ ಮರುದಿನ “ಅಕ್ಕು” ನಾಟಕಕ್ಕೆ ತಯಾರಿ ನಡೆಸಿದ್ದೆವು.. ಸಂಜೆ ಶೋ… ಬೆಳಿಗ್ಗೆ ಎಂಟಕ್ಕೇ ಬಂದು ಪ್ರಾರಂಭಿಸಿದ ಸ್ಟೇಜ್ ರಿಹರ್ಸಲ್ ಸುಮಾರು ಹನ್ನೆರಡು ಗಂಟೆಗೆ ಮುಗಿಯಿತು. ಎಂದಿನಂತೆ ಕಲಾವಿದರಿಗೆ ಕಾಸ್ಟ್ಯೂಮ್ಸ್ ತೆಗೆದುಕೊಳ್ಳಲು ಹೇಳಿ ನಾವು ರೆಸ್ಟ್ ಮಾಡಬೇಕು.

ಇದ್ದಕ್ಕಿದ್ದಂತೆ ಎಲ್ಲರ ಮುಖದಲ್ಲಿಯೂ ಟೆನ್ಷನ್ ಕಾಣಲು ಶುರುವಾಯಿತು ಏನೆಂದು ನೋಡಲು ಸೈಡ್ ವಿಂಗ್ ಗೆ ಹೋಗುವಾಗ ತಿಳಿದದ್ದು ಅನೇಕ ಟ್ರಂಕ್ ಗಳ ನಡುವೆ “ಅಕ್ಕು” ನಾಟಕದ ಕಾಸ್ಟ್ಯೂ ಮ್ ಟ್ರಂಕ್ ಬೆಂಗಳೂರಿನಲ್ಲೇ ಉಳಿದುಕೊಂಡುಬಿಟ್ಟಿತ್ತು. ಎಲ್ಲರಿಗೂ ಗಾಭರಿ. ಒಂದೆಡೆ ಇನ್ನೂ ಒಂದು ಆಸೆ ಇಲ್ಲೇ ಎಲ್ಲೋ ಇರಬಹುದು ಸರಿಯಾಗಿ ಹುಡುಕಿ ಎನ್ನುತ್ತಾ ಎಲ್ಲರೂ ಹುಡುಕುವಾಗ ನಾನು ಕಲಾಕ್ಷೇತ್ರದ ಕ್ಯಾಂಟೀನ್ ಕಾರಂತರಿಗೆ ಕಾಲ್ ಮಾಡಿದ್ದೆ ಅವರು ಒಮ್ಮೆ ಶೆಡ್ ನಲ್ಲಿ ನೋಡಿ “ಹೌದು ಶೆಟ್ಟ್ರೆ ಟ್ರಂಕ್ ಇಲ್ಲೇ ಇದೆ” ಅಂದಾಗ ಆದ ಶಾಕ್ ಅಷ್ಟಿಷ್ಟಲ್ಲ… ಕೂಡಲೇ ಆತಂಕ ಬಿಟ್ಟು ಆಗಬೇಕಾದ ಕೆಲಸದ ಕಡೆ ಯೋಚಿಸಿ ಕಾರ್ಯೋನ್ಮುಖರಾದೆವು.

ಉರಾಳ ಬ್ರದರ್ಸ್ ಹೋಗಿ ಪಕ್ಕದಲ್ಲಿದ್ದ ರಾಯರ ಮಠದಿಂದ ಪಾಣಿ ಪಂಚೆ ಶಲ್ಯಗಳನ್ನು ತಂದರೆ, ರೇಖಾ ಭಾರತಿ ಟೀಂ ಕನ್ನಡ ಸಂಘದ ಕೆಳಗಿದ್ದ ಅಂಗಡಿಯಿಂದ ಕಾಟನ್ ಸೀರೆಗಳನ್ನು ತಂದರು ಚಂಪಾ ಮತ್ತು ವೇಣು ಅವರು ದೆಹಲಿಯ ಕರೋಲ್ ಬಾಗ್ ಮಾರ್ಕೇಟ್ ಗೆ ಹೋಗಿ ರೆಡಿಮೇಡ್ ಬ್ಲೌಸ್ ಗಳು ಫೋಟೋಗ್ರಾಫರ್ ನ ಬೆಲ್ ಬಾಟಂ ಪ್ಯಾಂಟ್ ಶರ್ಟ್ (ಇದು ಮೊದಲಿನ ಕಾಸ್ಟ್ಯೂಮ್ ಗಿಂತ ಚೆನ್ನಾಗಿತ್ತು) ಮಕ್ಕಳಿಗೆ ಲಂಗ ರವಿಕೆಗಳು ಎಲ್ಲವನ್ನೂ ತಂದರು ಒಟ್ಟಾರೆ ಮೂರು ಗಂಟೆಯ ಒಳಗೆ ಎಲ್ಲಾ ಕಾಸ್ಟ್ಯೂಮ್ಸ್ ರೆಡಿಯಾಗಿದ್ದವು. “ಅಕ್ಕು”ನಾಟಕದ ಮೊದಲ ಪ್ರದರ್ಶನಕ್ಕೆ ಒಂದು ತಿಂಗಳು ಸಮಯ ತೆಗೆದುಕೊಂಡು ಮಾಡಿದ ಕಾಸ್ಟ್ಯೂಮ್ಸ್ ಇದೀಗ ಕೇವಲ ಎರಡು ಗಂಟೆಗಳಲ್ಲಿ ತಯಾರಾಗಿಬಿಟ್ಟಿತ್ತು. ಇದು ನಮ್ಮ ತಂಡದ ಶಕ್ತಿಗೆ ಒಂದು ಉದಾಹರಣೆಯಷ್ಟೇ.

ನಾವು ನಾಟಕಕ್ಕೆಂದು ಹೋದಾಗ ಸ್ಟಾರ್ ಹೊಟೆಲ್ ನಲ್ಲಿ ಇದ್ದದ್ದೂ ಇದೆ, ಯಾವುದೋ ಛತ್ರದಲ್ಲಿ ನಾವೇ ಕಸಗುಡಿಸಿಕೊಂಡು ಮಲಗಿದ್ದೂ ಇದೆ, ಮೃಷ್ಟಾನ್ನ ಭೋಜನ ಮಾಡಿದ್ದೂ ಇದೆ, ಪ್ಯಾಕೆಟ್ ನಲ್ಲಿ ತಣ್ಣನೆಯ ಚಿತ್ರಾನ್ನ ತಿಂದದ್ದೂ ಇದೆ. ಏನೇ ಆದರೂ ನಾಟಕ ನಮಗೆ ಕೊಟ್ಟ ಸಾವಿರ ಖುಷಿಗೆ ಪ್ರತಿಯಾಗಿ ನಾವೇನನ್ನು ಕೊಡಲು ಸಾಧ್ಯ?

‍ಲೇಖಕರು Avadhi

December 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

ದೊರೆ..

ದೊರೆ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: