ಇದನ್ನೋದುವಾಗ ಜೀವ ಒಮ್ಮೆ ತಲ್ಲಣಿಸದೇ ಹೋದರೆ ಹೇಳಿ..

ಗಳಿಗೆ ಬಟ್ಟಲ ತಿರುವುಗಳಲ್ಲಿ

ಕೆಲವು ದಿನಗಳ ಹಿಂದೆ ಎಂಟನೇ ತರಗತಿಗೆ The axe in the wood ಎನ್ನುವ ಒಂದು ಪೋಯೆಮ್ ಕಲಿಸುತ್ತಿದ್ದೆ.

ಈ ವರ್ಷದ ಕೊನೆಯ ಪಾಠ ಅದು.

ಮರ ಕತ್ತರಿಸುವುದನ್ನು ಕವಿ ಕ್ಲಿಫರ್ಡ ಹೆನ್ರಿ ಡೈಮೆಂಟ್ ವಿವರಿಸುವುದನ್ನು ಹೇಳುತ್ತಿರುವಾಗ ಕೆಲವು ಮಕ್ಕಳು ಮುಖ ಕಿವುಚಿದರು. ಆಗ ಒಬ್ಬ ಬಂದ, ಒಂದಿಷ್ಟು ಗಡ್ಡ, ನೋಡಿದ ತಕ್ಷಣ ಇವತ್ತಲ್ಲದಿದ್ದರೂ ನಿನ್ನೆಯೇ ಗಾಡಿ ಸಾಕಷ್ಟು ಲೋಡ್ ಆಗಿ ಈಗಷ್ಟೇ ಎದ್ದು ಬಂದಿರುವ ಮುಖಭಾವ, ಕೆಂಪಾದ ಕಣ್ಣುಗಳು.

ಇನ್ನೇನು ಕ್ಲಾಸ್‍ನೊಳಗೇ ಕಾಲಿಟ್ಟುಬಿಡುತ್ತಾನೆ ಎನ್ನಿಸಿದ್ದೇ ನಾನೇ ಹೊರಗೆ ಬಂದೆ, ‘ಯಾರು ಬೇಕಿತ್ತು?’ ಎನ್ನುತ್ತ. ಒಬ್ಬ ಹುಡುಗಿಯ ಹೆಸರು ಹೇಳಿದ. ‘ನೀವು ಅವಳಿಗೆ ಏನಾಗಬೇಕು?’ ಎಂದೆ. ‘ಅಪ್ಪ’ ಎಂದವನ ಧ್ವನಿಯಲ್ಲೂ ಅಳುಕು. ಆ ಹುಡುಗಿಯ ಮುಖದಲ್ಲೂ ಭಯ, ನಾಚಿಕೆ ಸಂಕಟ. ‘ನಿನ್ನ ಅಪ್ಪಾನಾ?’ ಕೇಳಿದೆ. ಹೌದೆಂದು ತಲೆಯಾಡಿಸಿದವಳನ್ನು ಹೊರಗೆ ಕಳಿಸಿ ‘ಮಾತನಾಡಿ ಬಾ’ ಎಂದೆ. ‘ನೀನ್ಯಾಕೆ ಸಾಲಿ ಕೊಡ್ ಬಂದಿ? ಹೋಗ್ ಹೋಗ್’ ಆಕೆ ಅವನನ್ನು ನೂಕುತ್ತಿದ್ದಳು. ಆತ ‘ಮನೆಗೆ ಯಾವಾಗ್ ಬತ್ತಿ?’ ಎನ್ನುತ್ತಿದ್ದರೂ ಲೆಕ್ಕಿಸದೇ ಒಳಗೆ ಬಂದವಳೇ ಬಿಕ್ಕಳಿಸತೊಡಗಿದಳು.

ಆತನೂ ಹಿಂದೇ ಬಂದವನು ; ‘ಟೀಚರ್ ನಿಮ್ ಕೋಡೇ ಹೇಳೂಕ್ ಎನ್? ಟೀಚರ್ ಅಂದ್ರೆ ತಾಯಿ ಹಂಗೆ… ನಾ ಕುಡ್ಕಂಡ್ ಗಲಾಡೆ ಮಾಡಿದ್ದೆ ಅಂದ್ಕೂಂಡೇ ನನ್ನ ಪೋಲಿಸ್ನೋರು ಹಿಡ್ಕಂಡ್ ಹೋಗಿದ್ರು. ಸಮಾ ಬಡದ್ರು. ಮನಿಗ್ ಬಂದ್ ನೋಡದ್ರೆ ಇದ್ರ ಅವ್ವಿ ಮಕ್ಕಳ್ನ ಕರ್ಕಂಡು ಹೋಗ್‍ಬಿಟ್ಟಿದು. ನಾ ಎಂತಾ ಮಾಡೂದು? ನಾ ದುಡಿತೆ, ನಾ ಕುಡಿತೆ, ಅದ್ಕೇ ಮನಿನೇ ಬಿಟ್ಕ ಹೋಗೂದೇ?’ ಎನ್ನುತ್ತಿದ್ದರೆ ಮಕ್ಕಳ ಮುಂದೆ ತನ್ನ ಕಥೆ ಹೇಳಿದ ಅಪರಾಧಿ ಪ್ರಜ್ಞೆ ಅವನಿಗಿಲ್ಲದಿದ್ದರೂ ಆ ಹುಡುಗಿ ಅವಮಾನದಿಂದ ಕುಗ್ಗಿಹೋಗಿದ್ದಳು.

ಇಷ್ಟೆಲ್ಲ ಆದರೂ ಆತನ ಒಂದು ಮಾತು ನನ್ನನ್ನು ತಲ್ಲಣಿಸುವಂತೆ ಮಾಡಿ ಬಿಟ್ಟಿತ್ತು. ‘ಮೂರ್ ದಿನ ಆಯ್ತು. ಪೋಲಿಸ್ರು ಒಂದ್ ತುತ್ತು ಅನ್ನ ಕೊಡ್ನೆಲಾ, ಉಪವಾಸ ಇಟ್ಕಂಡು ಬಡದ್ರು. ಮನಿಗ್ ಬಂದ್ರೆ ಇವ್ರೂ ಇಲ್ಲ. ಹಸ್ವಿ ತಡ್ಕಣೂಕ್ ಆಗೂದಿಲ್ಲ…..’

ಆತ ಟೀಚರ್ ಎಂದರೆ ತಾಯಿಯ ಹಾಗೆ ಅಂದಿದ್ದಕ್ಕೋ ಗೊತ್ತಿಲ್ಲ, ಅಥವಾ ಆ ಸಮಯಕ್ಕೆ ಸರಿಯಾಗಿ ನಾನು ಓದಿ ಮುಗಿಸಿದ್ದ ರೂಪ ಹಾಸನ ಅವರ ‘ಗಳಿಗೆ ಬಟ್ಟಲ ತಿರುವುಗಳಲ್ಲಿ’ ಪುಸ್ತಕದ ಪ್ರಭಾವವೋ ಗೊತ್ತಾಗಲಿಲ್ಲ ಆತನ ಹಸಿವೆ ಎಂಬುದು ನನಗೆ ನನ್ನೊಳಗೆ ಕಾಡುವ ಪ್ರಶ್ನೆಯಾಗಿ ಹೋಯಿತು.

ಹಸಿವೆ ಮತ್ತು ರೊಟ್ಟಿಯನ್ನು ಇಟ್ಟುಕೊಂಡು ಒಂದು ಕಿರುಹೊತ್ತಿಗೆಯನ್ನು ಬರೆಯುವ ಧೈರ್ಯ ಮತ್ತು ಅಂತಹ ಸಶಕ್ತತೆಗೆ ನಾನು ನಿಜಕ್ಕೂ ಬೆರಗಾದೆ. ತುಂಬು ಜೀವನ ಪ್ರೀತಿಯ ರೂಪ ಹಾಸನರ ನಗು ಮುಖವನ್ನು ಕಂಡಾಗಲೆಲ್ಲ ನನಗೆ ಅವರ ಉಳಿದೆಲ್ಲ ಬರವಣಿಗೆ, ಸಾಮಾಜಿಕ ಕಾರ್ಯ, ಹಾಗೂ ಬೇರೆ ಪುಸ್ತಕಗಳನ್ನು ಬಿಟ್ಟು ಈ ಹಸಿವು ಮತ್ತು ರೊಟ್ಟಿಯೇ ನೆನಪಾಗುವುದೇಕೋ ಅರ್ಥವಾಗುತ್ತಿಲ್ಲ.

ತಿಂದು ಮುಗಿಸುವುದಲ್ಲ
ಈ ರೊಟ್ಟಿ
ತಿಂದರೆ ತೀರುವುದಿಲ್ಲ
ತಿನ್ನದೆಯೂ ವಿಧಿಯಿಲ್ಲ
ಅನನ್ಯ ರೊಟ್ಟಿ
ಅಕ್ಷೋಹಿಣಿ ಹಸಿವು

ಹಸಿವು ಮತ್ತು ರೊಟ್ಟಿಯ ನಂಟನ್ನು ಇಷ್ಟೊಂದು ಸೂಕ್ಷ್ಮವಾಗಿ, ಇಷ್ಟೊಂದು ನವಿರಾಗಿ ಮತ್ತು ಇಷ್ಟೊಂದು ವಿವರವಾಗಿ ಹೇಳಬಹುದು ಎಂದು ಅರಿವಾಗಿದ್ದೇ ಈ ಪುಸ್ತಕದ ಮೊದಲ ಓದಿನಲ್ಲಿ. ಹಸಿವಿನ ವಿವರಣೆ ಓದುತ್ತಿದ್ದಂತೆ ನೆನಪಾಗಿದ್ದು ನನ್ನನ್ನು ನಾನು ಎಂದೂ ಕ್ಷಮಿಸಿಕೊಳ್ಳಲಾಗದ, ಯಾವತ್ತೂ ಮನದ ಮೂಲೆಯಲ್ಲಿದ್ದು ಆಗಾಗ ಚುಚ್ಚುವ ಒಂದು ಘಟನೆ

ಯಾವುದೋ ಕಾರ್ಯಕ್ರಮಕ್ಕೆಂದು ಹೋದವಳು ಪೇಟೆ ಸುತ್ತುವ ಉಮ್ಮೇದಿಗೆ ಬಿದ್ದು ಅಂಗಡಿ ಬೀದಿ ಸುತ್ತುತ್ತಿದ್ದವಳಿಗೆ “ತಂಗಿ… ತಂಗಿ…..” ಯಾರೋ ಕರೆಯುತ್ತಿರುವ ಹಾಗೆ. ಈ ಊರಲ್ಲಿ ನನ್ನ ತಂಗಿ ಅಂತ ಕರೆಯುವವರಾದರೂ ಯಾರು? ಎಲ್ಲೋ ನನ್ನ ಭ್ರಮೆ. ನಾನು ನನ್ನಷ್ಟಕ್ಕೇ ಸಮಾಧಾನ ಮಾಡಿಕೊಂಡು ಹೆಜ್ಜೆ ಮುಂದಿಡುವಷ್ಟರಲ್ಲಿ ಯಾರೋ ಹೆಗಲ ಮೇಲೆ ಕೈ ಇಟ್ಟ ಹಾಗೆ. ತಿರುಗಿ ನೋಡಿದರೆ ಪೋಲಿಸ್.

‘ಇದೇನಪ್ಪಾ? ಕಂಡರಿಯದ ಊರಲ್ಲಿ ಯಾವುದೋ ಪೋಲಿಸ್ ಬಂದು ಮಾತನಾಡಿಸ್ತಾನೆ…. ಅದೂ ಹೆಗಲ ಮೇಲೆ ಕೈ ಇಟ್ಟು…’ ಇಂದು ಕ್ಷಣ ಮನಸ್ಸು ಸಣ್ಣಗೆ ಗುಮಾನಿಗೊಳಗಾಯಿತು. ಹೆಗಲ ಮೇಲಿನ ಕೈಯನ್ನು ಕೊಡವಬೇಕು ಎನ್ನುತ್ತ ತೀಕ್ಷ್ಣವಾಗಿ ಪೋಲಿಸ್‍ನ ಮುಖ ನೋಡಿದವಳೇ ‘ವೆಂಕಟೂ…’ ಎಂದಿದ್ದೆ. ‘ಅಬ್ಬಾ ಗುರ್ತು ಹಿಡದೆಯಲ್ಲೇ ಮಾರಾಯ್ತಿ. ನಿನ್ನ ಮುಖ ನೋಡಿದ್ರೆ ಎಲ್ಲಿ ಕೆನ್ನೆಗೆ ಹೊಡೆದು ಬಿಡ್ತಿಯೇನೋ ಅಂತಾ ಹೆದರಿಕೆ ಆಗಿತ್ತು’ ಆತ ನಕ್ಕ.

ಆ ಊರಿನ ಎಲ್ಲರಿಗೂ ನಾನು ತಂಗಿಯೇ. ಅಪ್ಪ ಅಲ್ಲಿಯ ಪ್ರಾಥಮಿಕ ಶಾಲೆಯ ಮುಖೋಪಾಧ್ಯಾಯರಾಗಿದ್ದರೆ, ಅಮ್ಮ ಅದೇ ಶಾಲೆಯ ಶಿಕ್ಷಕಿ. ಅತ್ಯತ್ತಮ ಶಿಕ್ಷಕರು ಎನ್ನಿಸಿಕೊಂಡಿದ್ದರಲ್ಲದೇ ವಿದ್ಯಾರ್ಥಿಗಳಿಗೆ ಇವರೆಂದರೆ ಅಪಾರ ಗೌರವ. ಹೀಗಾಗಿಯೇ ನನಗಿಂತ ಹಿರಿಯ ಎಲ್ಲ ವಿದ್ಯಾರ್ಥಿಗಳೂ ಮನೆಯಲ್ಲಿ ಅಪ್ಪ-ಅಮ್ಮ ಕರೆಯುವಂತೆ ತಂಗಿ ಎಂದೇ ಕರೆಯುತ್ತಿದ್ದರು.

ಹೇಗಿದ್ದಿ, ಎಲ್ಲಿದ್ದಿ ಎಂಬ ಕುಶಲೋಪರಿಗಳನ್ನೆಲ್ಲ ಮುಗಿಸಿ, ‘ರೇಣುಕಾ ಹೇಗಿದ್ದಾಳೆ?’ ಎಂದೆ ಒಂದಿಷ್ಟು ಮುಜುಗರದಿಂದಲೇ. ಆತ ಮುಖ ಚಿಕ್ಕದು ಮಾಡಿಕೊಂಡ. ರೇಣುಕಾ ಅವನ ತಂಗಿ. ನನ್ನ ಕ್ಲಾಸ್‍ಮೇಟ್. ‘ಅವಳ ಗಂಡ ತೀರಿಕೊಂಡ.’ ನೀರಸ ಧ್ವನಿ. ‘ಎರಡು ಹೆಣ್ಣು ಮಕ್ಕಳಿದ್ದಾರೆ. ಅವರನ್ನು ಹೇಗೆ ನೋಡ್ಕೊಳ್ಳೋದು ಅನ್ನೋದೇ ಯೋಚನೆಯಾಗಿದೆ.’ ಸೋದರ ಮಾವನಾಗಿ ತಾನು ನಿಭಾಯಿಸಬೇಕಾದ ಕರ್ತವ್ಯ ಆತನನ್ನು ಚಿಂತೆಗೀಡಾಗುವಂತೆ ಮಾಡಿತ್ತು.

ಆದರೆ ರೇಣುಕಾ ನನ್ನೊಳಗೆ ಕಾಡಿದ್ದೇ ಬೇರೆಯ ಕಾರಣಕ್ಕೆ.

ಬಹುಶಃ ನಾನಾಗ ಎರಡನೇ ತರಗತಿ ಇದ್ದಿರಬಹುದು. ದೀಪಾವಳಿ ಮುಗಿದ ಮಾರನೆಯ ದಿನ. ಅಂದು ಶನಿವಾರ. ಎಲ್ಲರೂ ಹೊಸ ಬಟ್ಟೆ ಧರಿಸಿ ಬಂದಿದ್ದರು. ಆದರೆ ರೇಣುಕಾ ಮಾತ್ರ ತನ್ನ ಎಂದಿನ ಹಳೆಯ ಅಂಗಿಯಲ್ಲೇ ಬಂದಿದ್ದಳು. ಮುಖ ಬಾಡಿತ್ತು. ನಾನೋ ಯಾವುದೋ ಹುಚ್ಚು ಮೂರ್ಖತನದಲ್ಲಿ ಅವಳ ಬಳಿ ಹೋಗಿ ‘ಹಬ್ಬದ ಹೊಸ ಅಂಗಿನೇ ಹಾಕ್ಕೊಂಡು ಬರಬೇಕಿತ್ತು.’ ಎಂದಿದ್ದೆ. ಆಕೆ ತನ್ನ ಮೋಹಕ ಕಪ್ಪುಕಣ್ಣನ್ನು ಒಮ್ಮೆ ದೊಡ್ಡದಾಗಿ ಅರಳಿಸಿ, ‘ಹಬ್ಬಕ್ಕೆ ಹೊಸ ಅಂಗಿ ತರಲಿಲ್ಲ’ ಎಂದಳು.

ಸಾಮಾನ್ಯವಾಗಿ ಯಾವ ಹಬ್ಬಕ್ಕಲ್ಲದಿದ್ದರೂ ದೀಪಾವಳಿಗೆ ಹೊಸಬಟ್ಟೆ ತರೋದು ಇಲ್ಲಿಯ ರೂಢಿ. ಹೀಗಾಗಿ ಸಹಜವಾಗಿಯೇ ಯಾಕೆ ಎಂದು ಕೇಳಿದ್ದೆ. ‘ಅಮ್ಮನ ಹತ್ರ ದುಡ್ಡು ಇರಲಿಲ್ಲ.’ ಆಕೆಯ ಮುಖ ಬಾಡಿತ್ತು. ‘ಅದಕ್ಕೇ ಬೇಜಾರಾ? ಇರಲಿ ಬಿಡು. ಮತ್ತೊಂದು ಹಬ್ಬಕ್ಕೆ ತರ್ತಾರೆ’ ಎಂದವಳು ಕೈಯ್ಯಲ್ಲಿದ್ದ ಹಬ್ಬದ ತಿಂಡಿ ತಿನ್ನಬೇಕು ಎಂದುಕೊಳ್ಳುವಷ್ಟರಲ್ಲಿ ಆಕೆ ‘ಅದನ್ನು ನನಗೆ ಕೊಡ್ತೀಯಾ? ತುಂಬಾ ಹಸಿವು.’ ಎಂದಿದ್ದಳು.

ಅವಳಿಗೊಂದನ್ನು ಕೊಟ್ಟು ನನ್ನ ಕೈಲಿದ್ದ ಇನ್ನೊಂದು ಸಿಹಿತಿಂಡಿಯನ್ನು ಇನ್ನೇನು ತಿನ್ನಬೇಕು ಎನ್ನುವಷ್ಟರಲ್ಲಿ ಆಕೆ, ‘ಶ್ರೀ ನನಗೆ ಕೊಡ್ತೀಯಾ?’ ಎಂದಿದ್ದಳು. ನನ್ನ ಕೈಲಿದ್ದ ತಿಂಡಿಯ ಮೇಲೂ ಆಕೆಯ ಕಣ್ಣು ಬಿದ್ದಿರೋದು ನೋಡಿ ಗಡಿಬಿಡಿಯಲ್ಲಿ ಬಾಯಿಗಿಡಬೇಕೆನ್ನುವಷ್ಟರಲ್ಲಿ ಆಕೆ, ‘ಅದನ್ನೂ ಕೊಡೇ. ನಿನ್ನೆಯಿಂದ ಊಟಾನೂ ಮಾಡಿಲ್ಲ.’ ತೀರಾ ಕುಗ್ಗಿದಂತೆ ಹೇಳಿದ್ದಳು.

ಹಬ್ಬದ ದಿನ ಊಟಾನೂ ಮಾಡದೇ ಇರ್ತಾರಾ? ಆಕೆ ಎಲ್ಲೋ ಸುಳ್ಳು ಹೇಳ್ತಿದ್ದಾಳೆ ಎಂದುಕೊಂಡು, ‘ಇದು ನನಗೆ ಬೇಕು. ನಿಂಗೆ ಒಂದು ಕೊಟ್ಟಿದ್ದೀನಲ್ಲ.’ ದಿಮಾಕಿನಿಂದ ಹೇಳಿ ಬಾಯಿ ಹತ್ತಿರ ತೆಗೆದುಕೊಂಡು ಹೋಗುವಷ್ಟರಲ್ಲಿ ಅದೆಲ್ಲಿದ್ದರೋ ಅಮ್ಮ ನನ್ನ ಕೈಲಿದ್ದ ತಿಂಡಿ ಕಸಿದು ಅವಳ ಕೈಗಿಟ್ಟಿದ್ದರು. ಬಹುಶಃ ಅವಳನ್ನು ಕರೆದುಕೊಂಡು ಹೋಗಿ ಹತ್ತಿರದ ಅಂಗಡಿಯಿಂದ ಬಿಸ್ಕೀಟ್ ಪ್ಯಾಕ್ ಕೂಡ ತೆಗೆಸಿಕೊಟ್ಟ ನೆನಪು.

ಆದರೆ ಸಿಹಿ ತಿಂಡಿಪೋತಿ ಆದ ನನಗೆ ನನ್ನ ನೆಚ್ಚಿನ ಸಿಹಿಯನ್ನು ಕಸಿದು ಅವಳಿಗೆ ಕೊಟ್ಟಿದ್ದಕ್ಕೆ ಸಿಟ್ಟು ಬಂದಿತ್ತು. ಆ ದಿನವಿಡೀ ರೇಣುಕಾ ಮಾತನಾಡಿಸಿ ಸಮಜಾಯಿಶಿ ನೀಡಲು ಬಂದರೂ ಅವಳ ಬಳಿ ಮಾತನಾಡದೇ ಮುಖ ಉಬ್ಬರಿಸಿ ಓಡಾಡಿದ್ದೆ.

ಮಧ್ಯಾಹ್ನ ಮನೆಗೆ ಹೋದರೆ ಅಮ್ಮನಿಂದ ಸಹಸ್ರನಾಮಾರ್ಚನೆ. ‘ಅವಳು ಹಸಿವು ಅಂತಿದ್ರೆ ಕೊಡಬೇಕು ಅನ್ನುವ ಬುದ್ಧಿನೂ ಇವಳಿಗಿಲ್ಲ. ಎಲ್ಲಿ ಹೆತ್ತೆನೋ ಇಂತಹ ಮಗಳನ್ನು.’ ಅಮ್ಮನ ಧ್ವನಿಯಲ್ಲಿ ಏನೋ ನೋವು. ಅಮ್ಮ ಬೈಯ್ದಾಗಲೆಲ್ಲ ಎತ್ತಿಕೊಂಡು ಮುದ್ದು ಮಾಡುತ್ತಿದ್ದ ಅಪ್ಪನ ಮುಖವೂ ಸೀರಿಯಸ್. ‘ಅವಳು ಹಸಿವು ಅಂತಿದ್ದರೆ ಕೊಡಬೇಕಲ್ಲ?’ ಅಪ್ಪನೂ ಅಮ್ಮನ ಪರವಾಗಿಯೇ ಮಾತನಾಡಿದ್ದರು. ನನ್ನ ಪ್ರೀತಿಯ ತಿಂಡಿಯನ್ನು ಕೊಡಬೇಕು ಎನ್ನುವುದು ಯಾವ ನ್ಯಾಯ ಎಂಬುದು ನನಗೆ ಅರ್ಥವಾಗಿರಲಿಲ್ಲ. ‘ಹಬ್ಬಕ್ಕೆ ತಿಂಡಿ, ಪಾಯಸದ ಅಡುಗೆ ಮಾಡಿರ್ತಾರೆ. ಅವಳು ಸುಳ್ಳು ಹೇಳ್ತಾಳೆ’ ಎನ್ನುತ್ತ ನಾನೇ ಸರಿ ಎಂದು ವಾದಿಸಿದ್ದೆ.

ಅಮ್ಮ ಮಾತನಾಡದೇ ಸುಮ್ಮನಾಗಿದ್ದರು. ಅಪ್ಪನೂ ನನಗೆ ಹಸಿವನ್ನು ಅರ್ಥಮಾಡಿಸುವಲ್ಲಿ ಸೋತು ಕೋಪಗೊಂಡಿದ್ದರು. ಅದರ ಪರಿಣಾಮ ಆ ಇಡೀ ದಿನ ಇಬ್ಬರೂ ನನ್ನೊಡನೆ ಮಾತನಾಡಲಿಲ್ಲ. ಊಟಕ್ಕೆ ಬಾ ಎನ್ನಲಿಲ್ಲ. ಅವರೂ ಊಟ ಮಾಡಲಿಲ್ಲ. ಮಾರನೆಯ ದಿನ ರವಿವಾರ. ಬೆಳಗೆದ್ದರೆ ನಿಲ್ಲಲೂ ಆಗದ ಹಸಿವು. ಹಿಂದಿನ ದಿನದ ಧಿಮಾಕು ಕಡಿಮೆಯಾಗಿತ್ತು.

ಅಮ್ಮನ ಬಳಿ ಹಸಿವು ಎಂದೆ. ‘ತಿಂಡಿ ಮಾಡಿಲ್ಲ, ನಿನ್ನೆಯ ಅನ್ನ ಇದೆ. ಹಾಕ್ಕೊಂಡು ಊಟ ಮಾಡು’ ಎಂದರು. ‘ಬೆಳಿಗ್ಗೆ ಬೆಳಿಗ್ಗೆ ಅನ್ನ ಊಟ ಮಾಡೋದಾ? ಅದೂ ನಿನ್ನೆದೂ? ನನ್ ಹತ್ರ ಆಗೋಲ್ಲ’ ಎನ್ನುತ್ತ ಅಪ್ಪನ ಮುಖ ನೋಡಿದ್ದೆ. ಅಪ್ಪ ಮುಖ ತಿರುಗಿಸಿದ್ದರು. ಅಲ್ಲಿಗೆ ನಾನು ಅದೇನೋ ಮಾಡಬಾರದ ತಪ್ಪು ಮಾಡಿದ್ದೇನೆ ಎಂಬುದು ಕನ್ಫರ್ಮ ಆಗಿಬಿಟ್ಟಿತ್ತು. ತಿಂಡಿಯ ಡಬ್ಬಗಳೆಲ್ಲ ನನಗೆ ಎಟುಕದಷ್ಟು ಮೇಲಕ್ಕೇರಿ ಕುಳಿತಿದ್ದವು. ಆ ದಿನವಿಡೀ ಹಸಿವೆ ಮತ್ತು ಮನೆಯಲ್ಲಿ ಒಬ್ಬರೂ ಮಾತನಾಡದ ನೋವಲ್ಲಿ ಕುಗ್ಗಿ ಹೋಗಿದ್ದೆ.

ಸಂಜೆಯ ಹೊತ್ತಿಗೆ ಅಪ್ಪ ರೇಣುಕಾಳಿಗೆ ಅಪ್ಪ ಇಲ್ಲದಿರುವ ಮತ್ತು ಅವಳ ಅಮ್ಮ ರೇಣುಕಾ ಹಾಗೂ ನಮಗಿಂತ ಎರಡೇ ಕ್ಲಾಸು ಮುಂದಿರುವ ಅವಳ ಅಣ್ಣ ಇಬ್ಬರನ್ನೂ ಕೂಲಿ ಮಾಡಿ ಸಾಕುತ್ತಿರುವ ಬಗ್ಗೆ ತಿಳಿಸಿಹೇಳಿದ್ದರು. ಆ ವಯಸ್ಸಿನಲ್ಲಿ ನನಗೆ ಎಷ್ಟು ಅರ್ಥವಾಯಿತೋ ಗೊತ್ತಿಲ್ಲ. ಆದರೆ ಮನಸ್ಸಿನ ಮೂಲೆಯಲ್ಲಿ ಉಳಿದುಬಿಟ್ಟ ಆ ನೆನಪು ದಿನಗಳೆದಂತೆ ಅದನ್ನು ಅರ್ಥಮಾಡಿಸುತ್ತಲೇ ಹೋಯಿತು.

ಅರ್ಥವಾದಂತೆಲ್ಲ ನನ್ನೊಳಗೊಂದು ಪಾಪಪ್ರಜ್ಞೆಯನ್ನೂ ಬೆಳೆಸಿತು. ಯಾಕೆಂದರೆ ರೇಣುಕಾಗೆ ಏನನ್ನಾದರೂ ಕೊಟ್ಟರೆ ಅಪ್ಪ-ಅಮ್ಮ ಅದನ್ನು ಬೇಡ ಎನ್ನುವುದಿಲ್ಲ ಎಂಬ ವೀಕ್ ಪಾಯಿಂಟ್ ಹಿಡಿದುಕೊಂಡ ನಾನು ಕಳೆದುಕೊಂಡ ಪೆನ್ನು, ಕಂಪಾಸು, ಕೊಡೆಗಳಿಗೆಲ್ಲ ರೇಣುಕಾಗೆ ಕೊಟ್ಟ ನೆಪಹೂಡಿಬಿಟ್ಟಿದ್ದ ಅಪರಾಧಿ ಪ್ರಜ್ಞೆ ಈಗಲೂ ಕಾಡುತ್ತಿರುತ್ತದೆ.

ನಮ್ಮ ಸುತ್ತಮುತ್ತ ಎಷ್ಟೊಂದು ಹಸಿವಿನ ಕಥೆಗಳು, ಎಷ್ಟೊಂದು ಹಸಿವಿನ ರುದ್ರ ನರ್ತನಗಳು, ಎಷ್ಟೊಂದು ಹಸಿವಿನ ಸಾವುಗಳು…. ಒಮ್ಮೊಮ್ಮೆ ನೆನಪಿಸಿಕೊಂಡರೆ ಮನಸ್ಸೆಲ್ಲ ಧಗಧಗ. ಎದೆಯೊಳಗೆ ಅಲ್ಲೋಲಕಲ್ಲೋಲ. ಹೊಟ್ಟೆಗೆ ಒಂದು ತುಂಡು ಬ್ರೆಡ್ ಕೂಡ ಸಿಗದೇ ಸತ್ತ ಅದೆಷ್ಟೋ ಕಂದಮ್ಮಗಳಿದ್ದಾರೆ. ಯಾರನ್ನು ಸಂತೈಸುವುದು? ಯಾರನ್ನು ಎದೆಗವಿಚಿಕೊಳ್ಳುವುದು?

ನನ್ನ ಸಣ್ಣ ಮಗನಿಗೆ ಬಡಿಸಿದ ಬಟ್ಟಲ ಮೂಲೆಯಲ್ಲಿ ಒಂದಿಷ್ಟನ್ನಾದರೂ ಬಿಡುವ ರೂಢಿ. ನನಗೋ ಹಾಗೆ ಬಿಟ್ಟರೆ ಎಲ್ಲಿಲ್ಲದ ಕೋಪ.ಅದನ್ನು ನೋಡಿದಾಗಲೆಲ್ಲ ಬೆನ್ನಿಗಂಟಿಕೊಂಡ ಹೊಟ್ಟೆಯ ಸೋಮಾಲಿಯಾದ ಮಕ್ಕಳ ಚಿತ್ರ ನೆನಪಾಗುತ್ತದೆ. ಊಟ ಮುಗಿಸಿ ಎದ್ದವನನ್ನು ಮತ್ತೆ ಕುಳ್ಳಿರಿಸಿ ಬಟ್ಟಲನ್ನು ಖಾಲಿ ಮಾಡಲು ಹೇಳುತ್ತೇನೆ. “ನಿಮಗೆ ಉಣ್ಣಲು ತಿನ್ನಲು ಇದೆ…. ಆದರೆ..” ಎಂದು ನಾನು ಹೇಳಲು ಪ್ರಾರಂಭಿಸಿದರೆ “ಕೆಲವು ಮಕ್ಕಳು ಕಸದ ತೊಟ್ಟಿಯಿಂದ ಆರಿಸಿಕೊಂಡು ತಿನ್ನುತ್ತಾರೆ” ಆತ ವಾಕ್ಯವನ್ನು ಪೂರ್ಣಗೊಳಿಸುತ್ತಾನೆ. ‘ಇದು ಅಮ್ಮನ ಪ್ರತಿದಿನದ ಮಾತು’ ಕೇಳಿಯೂ ಕೇಳಿಸದಂತೆ ಹೇಳುವ ದೊಡ್ಡ ಮಗ ಕಂಡೂಕಾಣದಂತೆ ನಗುತ್ತಾನೆ.

ಆದರೆ ತಿನ್ನುವ ಪ್ರತಿ ಅಗುಳಿನ ಮೇಲೂ ತಿನ್ನುವವರ ಹೆಸರಿರುತ್ತದೆ ಎನ್ನುವ ನನ್ನ ಮಾತು ಅವರಿಗೆ ತಮಾಷೆಯ ವಿಷಯ. ‘ಅಮ್ಮಾ ಆ ಅಗುಳಿನ ಮೇಲೆ ನಾಯಿಯ ಹೆಸರೋ, ಇರುವೆಯ ಹೆಸರು ಬರೆದಿತ್ತು.’ ಎನ್ನುತ್ತ ನನ್ನನ್ನೇ ಆಡಿಕೊಂಡು ನಗುವಾಗಲೆಲ್ಲ ಮೈ ಪರಚಿಕೊಳ್ಳುವಂತಾಗುತ್ತದೆ. ಯಾಕೆಂದರೆ ನಾನು ಚಿಕ್ಕವಳಿದ್ದಾಗ ಹಾಗೇನಾದರೂ ಬಿಟ್ಟರೆ ಅಪ್ಪ ಅದನ್ನು ಸಹಿಸುತ್ತಿರಲಿಲ್ಲ. ‘ವಾಂತಿ ಬಂದರೆ ನಾನೇ ತೆಗೆಯುತ್ತೇನೆ. ಹಾಕಿದ್ದಷ್ಟನ್ನು ಉಂಡು ಬಿಡು’ ಎನ್ನುತ್ತಿದ್ದರು. ‘ಮಕ್ಕಳಿಗೆ ಎಷ್ಟು ಬೇಕು ಅಂತಾ ಕೇಳಿ ಹಾಕೋದಲ್ವಾ?’ ಅಮ್ಮನಿಗೂ ಚಿಕ್ಕ ವಾರ್ನಿಂಗ್.

ಹಸಿವಿನ ಆಯ್ಕೆ ರೊಟ್ಟಿ
ಆದರೆ ರೊಟ್ಟಿ ಸೃಷ್ಟಿಯಾಗುವುದು
ಆಯ್ಕೆಯಿಂದಲ್ಲ
ಅನಿವಾರ್ಯತೆಯಿಂದ
ಅದಕ್ಕೆ ಆಯ್ಕೆ ಇದ್ದರೆ
ರೊಟ್ಟಿಯಾಗುತ್ತಿರಲಿಲ್ಲ
ಹಸಿವಂತೂ ಆಗುತ್ತಲೇ ಇರುತ್ತಿರಲಿಲ್ಲ

ಎಂತಹ ಎದೆ ತಟ್ಟುವ ಸಾಲುಗಳು. ಹೌದಲ್ಲವೇ? ಯಾರಾದರೂ ಹಸಿವೆಯನ್ನೇಕೆ ಆಯ್ಕೆ ಮಾಡಿಕೊಳ್ಳುತ್ತಾರೆ? ಜಗತ್ತು ಹಸಿವೆಯಿಂದ ದೂರ ಇರಬೇಕಾದ ಈ ಸಮಯದಲ್ಲಿ, ಆಧುನಿಕತೆ ಮೈಗೂಡಿಸಿಕೊಂಡು ಎದೆಯುಬ್ಬಿಸಿಕೊಂಡು ನಡೆಯುವ ಈ ಹೊತ್ತಿನಲ್ಲೂ ಹಸಿವೆ ಎಂಬುದು ಗುಪ್ತಗಾಮಿನಿ. ಅದು ಎಲ್ಲೆಲ್ಲೂ ಇರುತ್ತದೆ ಮತ್ತು ಎಲ್ಲೆಲ್ಲೂ ತನ್ನ ಅಧಿಕಾರವನ್ನು ಸ್ಥಾಪಿಸಲು ಹವಣಿಸುತ್ತಲೇ ಇರುತ್ತದೆ ಎಂಬುದು ಒಪ್ಪಲೇಬೇಕಾದ ವಿಷಯ.

ನಾನು ಈಗಾಗಲೇ ಬಹಳಷ್ಟು ಸಲ ಹೇಳಿದ್ದೇನೆ. ನಾನು ಕೆಲಸ ಮಾಡುತ್ತಿರುವುದು ನಾವೆಲ್ಲರೂ ದೇಶದ ಹೆಮ್ಮೆ ಎಂದುಕೊಳ್ಳುತ್ತಿರುವ, ಏಷ್ಯಾದ ಅತಿದೊಡ್ಡ ನೌಕಾನೆಲೆ ಎಂಬ ಬಿರುದಾಂಕಿತ ಸೀಬರ್ಡ್ ಸೃಷ್ಟಿಸಿದ ನಿರಾಶ್ರಿತ ಕಾಲೋನಿಯಲ್ಲಿ.

‘ಬಂಡವಾಳ ಹಾಕಬೇಕಿಲ್ಲ, ಸಮುದ್ರಕ್ಕೆ ಹೋದರಾಯಿತು, ಬಲೆ ಬೀಸಿದರಾಯಿತು. ಒಂದೊಂದು ಮೀನಿಗೆ ಸಾವಿರಗಟ್ಟಲೇ ರೂಪಾಯಿ. ಮೀನುಗಾರರೇ ಶ್ರೀಮಂತರು’ ಎಂದುಕೊಳ್ಳುವವರು ಒಮ್ಮೆ ಇಲ್ಲಿ ಬಂದು ನೋಡಬೇಕು. ಯಾರದ್ದೋ ಬೋಟಿಗೆ ಕೆಲಸಗಾರರಾಗಿ ಹೋದ ಮೀನುಗಾರರಿಗೆ ಮನೆಗೆ ಒಂದು ಕೆ.ಜಿ ಅಕ್ಕಿ ಕೂಡ ತಂದುಕೊಳ್ಳಲಾಗದ ಸ್ಥಿತಿ ಇರುತ್ತದೆ. ಇನ್ನೂ ತೆಂಗಿನ ಗರಿಯನ್ನು ತಡಿಕೆಯಾಗಿ, ಹೊದಿಕೆಯಾಗಿ ಮಾಡಿಕೊಂಡ ಪುಟ್ಟ ಪುಟ್ಟ ಗುಡಿಸಲಿನೊಳಗೆ ವಾಸಿಸುವವರ ಹೊಟ್ಟೆಗೆ ಏನು ತಿಂದೆ ಎಂದು ಕೇಳುವವರಿಲ್ಲ. ಹೀಗಾಗಿ ಮೀನು ತಿಂದು ದಷ್ಟಪುಷ್ಟವಾಗಿದ್ದಾರೆ ಎಂದು ನೀವೆಲ್ಲ ತಿಳಿದುಕೊಂಡ ಮಕ್ಕಳು ಅನಿಮಿಯಾ ಆದಂತೆ ಸೊರಗಿರುತ್ತಾರೆ.

ಇನ್ನು ಅಪ್ಪ ಬೋಟಿಗೆ ಹೋಗಿದ್ದಾನೆ ಎನ್ನುವ ಮಕ್ಕಳು ಶಾಲೆಗೆ ಬಂದರೆ ಬೆಳಗಿನ ಪ್ರಾರ್ಥನೆಯ ಸಮಯದಲ್ಲೇ ತಲೆತಿರುಗಿ ಬೀಳುತ್ತಾರೆ. ಕೇಳಿದರೆ ಬೆಳಗಿನ ಉಪಹಾರವೇ ಇಲ್ಲ. ಬೋಟಿಗೆ ಹೋದ ಅಪ್ಪ ಬರುವುದು ರಾತ್ರಿ ಮೂರುಗಂಟೆಗೋ, ನಾಲ್ಕುಗಂಟೆಗೋ. ಗಡಬಡಿಸಿ ಎದ್ದ ಅಮ್ಮ ಬಲೆಯಿಂದ ಮೀನು ಬಿಡಿಸಿಕೊಂಡು ಒಂದಿಷ್ಟು ಬೆಳಕು ಹರಿದದ್ದೇ ಮಾರಲು ಹೊರಡುತ್ತಾಳೆ. ಇಲ್ಲವಾದಲ್ಲಿ ತಡವಾದರೆ ಮುಗ್ಗಲು ಹೊಡೆಯುವ ಮೀನನ್ನು ಸಂರಕ್ಷಿಸಿಕೊಳ್ಳಲು ಐಸ್ ಖರೀದಿಸಬೇಕಲ್ಲ? ಹೀಗಾಗಿ ಶಾಲೆಗೆ ಹೋಗುವ ಮಕ್ಕಳಿಗೆ ಬ್ರೆಡ್, ಬಿಸ್ಕೀಟ್‍ಗಳೇ ಗತಿ. ಅದೂ ತಂದಿದ್ದು ಡಬ್ಬಿಯಲ್ಲಿದ್ದರೆ ಉಂಟು, ಇಲ್ಲವಾದರೆ ಅದಕ್ಕೂ ಗತಿ ಇಲ್ಲ. ಹೀಗಾಗಿ ಹಸಿವೆ ಎಂಬುದು ನನ್ನ ಸುತ್ತಲೂ ತಾಂಡವ ನೃತ್ಯವನ್ನಾಡುವ ರುದ್ರಶಿವ.

ಪಡೆಯುವ ಅರ್ಹತೆ
ಕೊಡುವ ಘನತೆಯ
ನಡುವಿನ ಒಪ್ಪಂದ
ಹಸಿವು ರೊಟ್ಟಿಯ ಸಂಬಂಧ

ಹಸಿವಿಗೆಂದೇ ರೊಟ್ಟಿ ನಿರ್ಮಿತವಾಗುತ್ತದೆಯಲ್ಲವೇ? ಇದೇ ಸಾಲುಗಳನ್ನು ಮತ್ತೆರಡು ಸಲ ಓದಿ, ಮತ್ತೇನಾದರೂ ಹೊಳೆಯಿತೇ? ಇಲ್ಲವೆಂದಾದರೆ ಮತ್ತೂ ಎರಡು ಸಲ ಓದಿ… ಇಡೀ ಸಂಕಲನವನ್ನು ಮೊದಲ ಸಲ ಓದಿ ಮುಗಿಸಿದಾಗ ಹಸಿವೆ ಮತ್ತು ರೊಟ್ಟಿಯ ಸುತ್ತಣದ ವೈವಿಧ್ಯಮಯ ಚಿತ್ರಣ ನನಗೆ ಅಚ್ಚರಿ ಹುಟ್ಟಿಸಿತ್ತು. ಅಷ್ಟೇ ಕುತೂಹಲ ಸಹ. ಆದರೆ ಮೊನ್ನೆ ಎರಡನೆಯ ಸಲ ತಿರುವಿ ಹಾಕಿದಾಗ ಯಾಕೋ ಈ ಹಸಿವು ಹಸಿವು ಮಾತ್ರವಲ್ಲ, ರೊಟ್ಟಿ ಎಂದರೆ ರೊಟ್ಟಿಯಾಗಷ್ಟೇ ಉಳಿದಿಲ್ಲ ಎಂಬಂತೆ ಭಾಸವಾಗತೊಡಗಿದಾಗ ಮತ್ತೊಮ್ಮೆ ಓದತೊಡಗಿದೆ.

ಎರಡನೆಯ ಓದಿಗೆ ಹಸಿವು ಮತ್ತು ರೊಟ್ಟಿ ಎಂಬುದು ಗಂಡು-ಹೆಣ್ಣಿನ ನಡುವಣ ಸಂಬಂಧ ಎನ್ನುವಂತೆ ಭಾಸವಾಗತೊಡಗಿತು. ಕೊಡುವ ಹೆಣ್ಣಿನ ಅರ್ಹತೆ ಮತ್ತು ಪಡೆದುಕೊಳ್ಳುವ ಗಂಡಿನ ಘನತೆ ಎರಡೂ ಸಮನಾಗಿದ್ದಾಗ ಮಾತ್ರ ಒಂದು ಚಂದದ ಸಂಬಂಧ ರೂಪಿತವಾಗುತ್ತದೆ. ಇಲ್ಲಿ ಕೊಡುವ ಅರ್ಹತೆ ಮತ್ತು ಪಡೆಯುವ ಘನತೆಯ ಪಾತ್ರಗಳು ಹೆಣ್ಣಿನಿಂದ ಗಂಡಿಗೆ, ಗಂಡಿನಿಂದ ಹೆಣ್ಣಿಗೆ ಬದಲಾಗಬಹುದಾದರೂ ಆ ಸಂಬಂಧಧ ನಡುವಿನ ಒಪ್ಪಂದ ಪ್ರೇಮಮುಖಿಯಾಗಿರುವವರೆಗೆ ಅದೊಂದು ಅಪರೂಪದ, ಅನುರೂಪದ ಬಂಧ.

ನೆಲದ ನೆರಳಿನ ರೊಟ್ಟಿ
ಆಕಾಶದಗಲದ
ದೈತ್ಯ ಹಸಿವಿನ
ಅವಶ್ಯಕತೆಯಂತೆಲ್ಲಾ
ಬದಲಾಗುವುದಿಲ್ಲ
ಬದಲಾಗಬೇಕಿಲ್ಲ
ರೊಟ್ಟಿ ರೊಟ್ಟಿಯೇ
ಹಸಿವು ಹಸಿವೆಯೇ
ನೆಲಕ್ಕದರದೇ ಶಕ್ತಿ
ಆಕಾಶಕ್ಕದರದೇ ಮಿತಿ

ಹೆಣ್ಣು ಗಂಡಿನ ಆಧ್ಯತೆಗಳು ಬದಲಾದಂತೆಲ್ಲ ನಮ್ಮ ಗಮ್ಯಗಳೂ ಬದಲಾಗಬೇಕೆ? ನಮ್ಮತನವನ್ನು ಕಾಪಾಡಿಕೊಂಡೇ ನಮ್ಮ ಶಕ್ತಿ ಮಿತಿಯನ್ನು ಅರಿತು ಉಳಿಸಿಕೊಂಡೇ ಒಂದಾಗುವ ಲೀಲೆ ಇದೆಯಲ್ಲ, ಅದನ್ನು ಹೀಗೆ ಬರೀ ಮಾತುಗಳಲ್ಲಿ ಹೇಳಲು ಸಾಧ್ಯವೇ ಇಲ್ಲ. ಯಾಕೆಂದರೆ ಅದೇ ಕ್ಷಣಕ್ಕೆ ರೂಪಾ ಹಾಸನ್ ಅವರು

ರೊಟ್ಟಿ ಈಗ ನಿರಾಳ
ಕೊನೆಗೂ ಅರಿವಾಗಿದೆ
ಜಗಳ, ಮುನಿಸುಗಳು
ಹಸಿವಿನೊಂದಿಗಲ್ಲ ಎಂದು

ಎಂದು ಶರಾ ಬರೆದು ಬಿಡುವಾಗ ಎಂತಹ ಚಂದದ ಹೊಳಹು ಇದು ಎನ್ನಿಸಿ ಮನಸ್ಸು ಪುಳಕಗೊಳ್ಳುತ್ತದೆ. ಈ ಸಾಲುಗಳ ನಡುವೆ ನೀವು ಉತ್ಕಟವಾಗಿ ಪ್ರೀತಿಸಿದವರು ನೆನಪಿಗೆ ಬರದೇ ಹೋದರೆ ನನ್ನಾಣೆ.

ಹಸಿವೆಗೆ ಬೇಕಾದಾಗ
ಬೇಕಾದಂತೆಲ್ಲ ರೊಟ್ಟಿ
ಹೊಂದಿಕೊಳ್ಳುವುದು
ಅಲಿಖಿತ ನಿಯಮ
ಹಸಿವಿನಿಂದ ರೊಟ್ಟಿಯೂ
ಅದನ್ನೇ ಬಯಸಿದರೆ
ಶಾಂತಂ ಪಾಪಂ
ಅದು ಅನಿಯತ

ಎನ್ನುವ ಸಾಲುಗಳು ಸಂಸಾರದ ಗಂಡು ಹೆಣ್ಣಿನ ನಡುವಿನ ಅಸಮಾನತೆಯನ್ನು ಅನಾಮತ್ತಾಗಿ ನಮ್ಮೆದುರಿಗೆ ತಂದು ನಿಲ್ಲಿಸಿದಂತಾಗುತ್ತದೆ.

ಹೆಣ್ಣು ಮತ್ತು ಗಂಡನ್ನು ಒಳಗೊಂಡ ರೊಟ್ಟಿ ಮತ್ತು ಹಸಿವಿನ ಕಥೆಗಳು ಮೂರನೆಯ ಓದಿಗೆ ಬರುವ ಹೊತ್ತಿಗೆ ಇದು ಪ್ರೀತಿ ಮತ್ತು ಕಾಮದ ಸೆಣಸಾಟವೇನೋ ಅನ್ನಿಸಿ ಮತ್ತೊಮ್ಮೆ ಅದದೇ ಸಾಲುಗಳನ್ನು ತಿರುವಿ ಹಾಕುವಂತೆ ಮಾಡುತ್ತಿದೆ.

ರುಚಿ ರೊಟ್ಟಿಯಲ್ಲಿಲ್ಲ
ಹಸಿವಿನಲ್ಲಿ
ಸುಮ್ಮನೆ ಪಾಪ ಪ್ರಜ್ಞೆ
ಪಾಪದ ರೊಟ್ಟಿಗೆ
ತಪ್ಪು ರೊಟ್ಟಿಯದೂ ಅಲ್ಲ
ಹಸಿವಿನದ್ದೂ ಅಲ್ಲ
ಚಾಣಾಕ್ಷ ರುಚಿಯದು

ಯಾಕೋ ನನಗೆ ಇಂತಹ ಸಾಲುಗಳನ್ನು ಅಲ್ಲಲ್ಲಿ ಓದಿದಾಗ ಇದೇಕೋ ಪ್ರೇಮ ಕಾಮದ ಸಮ್ಮಿಲನ ಅನ್ನಿಸತೊಡಗಿದ್ದು ನನ್ನದೇ ತಪ್ಪೋ ಅಥವಾ ಓದಿದ ಎಲ್ಲರಿಗೂ ಹೀಗೆಯೇ ಅನ್ನಿಸ ಬಹುದೋ ಗೊತ್ತಾಗುತ್ತಿಲ್ಲ.

ಹೆಣ್ಣು-ಗಂಡಿನ ನಡುವೆ ಪ್ರೇಮ ಸಹಜ. ಸಹಜವಾದ ಪ್ರೇಮದ ಮುಂದುವರಿದ ಭಾಗವಾಗಿ ಕಾಮವೂ ಸಹಜವೇ. ಹೆಣ್ಣು-ಗಂಡಿನ ನಡುವಣ ಸೆಳೆತವನ್ನು ನಾವು ಕೆಟ್ಟದ್ದು, ಅನೈತಿಕ ಹಾದರ ಹೀಗೇ ನೂರಾರು ಹೆಸರನ್ನು ಕೊಟ್ಟು ಬಾಯಿ ಚಪ್ಪರಿಸಬಹುದು. ಒಂದು ಗಂಡು ಮತ್ತು ಹೆಣ್ಣಿನ ಸರ್ವೇಸಾದಾರಣ ದೈಹಿಕ ವಾಂಛೆಯಲ್ಲಿ ತಪ್ಪು ಯಾರದ್ದು? ಗಂಡಿನದ್ದೇ? ಹೆಣ್ಣಿನದ್ದೇ? ದೈಹಿಕ ಸೆಳೆತವನ್ನು, ಸುಖವನ್ನು ತಪ್ಪು ಎನ್ನಲಾಗದು ಎಂದು ನಾನು ಓದಿಕೊಳ್ಳುವ ಹೊತ್ತಿಗೆ ಇಂತಹುದ್ದೇ ಮತ್ತೊಂದು ಕವನ ಎದುರು ನಿಲ್ಲುತ್ತದೆ.

ಹಸಿವು ತೀರಿಹೋದರೂ
ಹಸಿ ಆರುವುದಿಲ್ಲ
ರೊಟ್ಟಿ ಹಸಿವಿನೊಡಲಲ್ಲಿ
ಕರಗಿ ಹೋದರೂ
ರುಚಿ ತೀರುವುದಿಲ್ಲ
ಹಸಿವು ರೊಟ್ಟಿಗಳ
ಆರದ ತೀರದ
ನಿರಂತರ ಪಯಣಕೆ ಮೂಲ
ಈ ಪರಸ್ಪರ ಸೆಳೆತ

ಎನ್ನುತ್ತ ಹಸಿವು- ರೊಟ್ಟಿಯ ನಡುವಿನ ಬಾಂಧವ್ಯವನ್ನು ಹೇಳುತ್ತಲೇ ಪ್ರೇಮ-ಕಾಮದ ನಡುವಣ ಸೆಳೆತಕ್ಕೊಂದು ಚಂದದ ವ್ಯಾಖ್ಯಾನ ಕೊಟ್ಟುಬಿಡುತ್ತಾರೆ. ಹಸಿವೆ ಎಂದು ಬೆಳಗಿನ ವೇಳೆಗೆ ತಿಂದ ರೊಟ್ಟಿ ಆ ಕ್ಷಣಕ್ಕೆ ಹೊಟ್ಟೆ ತುಂಬಿಸಿದರೂ ಮತ್ತೆ ಸಂಜೆಯ ಹೊತ್ತಿಗೆ ಕಾಡುವಂತೆ, ಕೆಲವೊಮ್ಮೆ ರೊಟ್ಟಿಯ ರುಚಿಗೆ ಮರುಳಾಗಿ ಹಸಿವೆಯಿಲ್ಲದಿದ್ದರೂ ಮತ್ತೆ ಮತ್ತೆ ರೊಟ್ಟಿಗಾಗಿ ಹಾತೊರೆವಂತೆ ಪ್ರೇಮವೂ ಅಲ್ಲವೇ? ಕಾಮದ ಮಾತಂತೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ.

ಅದಕ್ಕೇ
ಷರತ್ತು ರಹಿತ ಮುಕ್ತತೆ
ಹಸಿವಿನ ಆಗ್ರಹ
ಆಪ್ತ ಬದ್ಧತೆ
ರೊಟ್ಟಿಯ ಯಾಚನೆ
ಮುಕ್ತತೆ ಬದ್ಧತೆಗಳ
ಪ್ರಯಾಣಗಳ ಹುಡುಕಾಟದಲ್ಲಿ
ನಿತ್ಯ ಆಕರ್ಷಣೆ ಘರ್ಷಣೆ

ಎಂಬಂತಹ ಸಾಲುಗಳಿಗೆ ಬೇರೆ ವಿವರಣೆಯನ್ನು ಕೊಡಬೇಕಾದ ಅವಶ್ಯಕತೆಯೇ ಬೇಕಾಗುವುದಿಲ್ಲ.
ಕೆಲವೆಡೆ ಹಸಿವು ತೀರಾ ಕಾಮುಕವಾದ ಗಂಡಾಗಿಯೂ, ರೊಟ್ಟಿ ಗಂಡಿನ ಬಯಕೆಗೆ ಮಣಿಯುವ ಹೆಣ್ಣಾಗಿಯೂ ಕಾಣಿಸಿಕೊಳ್ಳುತ್ತದೆ.

ಹಸಿವಿನ ಆಕರ್ಷಣೆ
ರೊಟ್ಟಿಯಾಕೃತಿಯ ಕಡೆಗೆ

ಎನ್ನುವಾಗ ಜೀವ ಒಮ್ಮೆ ತಲ್ಲಣಿಸದೇ ಹೋದರೆ ಹೇಳಿ. ಮತ್ತೊಂದಿಷ್ಟು ಗಮನ ಹರಿಸಿದರೆ ಈ ಹಸಿವೆ ಮತ್ತು ರೊಟ್ಟಿಗಳು ಮಾತು-ಮೌನದ ರೂಪಕಗಳಾಗಿವೆಯೇ ಎನ್ನಿಸಿಬಿಡುತ್ತದೆ.

ರೊಟ್ಟಿಯ ಭಾವಲೋಕದೊಳಗೆ
ಹಸಿವೆಗೆ ಪ್ರವೇಶ ಸಿಕ್ಕಿಲ್ಲ
ಅಸೂಕ್ಷ್ಮ ಹಸಿವಿಗೆ
ಮಣ್ಣನಲುಗಿಸುವ ಮೊಳಕೆಯ
ಸೂಕ್ಷ್ಮತೆ ಇನ್ನೂ ಅರ್ಥವಾಗಿಲ್ಲ

ಈ ಕವನಗಳು ಏಕಕಾಲದಲ್ಲಿ ಹಸಿವೆ-ಅನ್ನದ ಪ್ರಶ್ನೆಯಾಗಿ, ಪ್ರೇಮ-ಕಾಮದ ಸುಳಿಯಾಗಿ, ಮೌನ-ಮಾತಿನ ಸೆಳೆತವಾಗಿ, ಕೊನೆಗೆ ಬದುಕು-ಸಾವಿನ ಪ್ರಶ್ನೆಯಾಗಿ, ಅಷ್ಟೇಕೆ ಲೌಕಿಕ-ಅಲೌಕಿಕದ ಬಂಧವಾಗಿ ನನ್ನನ್ನು ಕಾಡುತ್ತಿದೆ

ರೂಹುಳ್ಳ ರೊಟ್ಟಿಗೊಂದೇ ಅರ್ಥ
ನಿರಾಕಾರ ಅವಿನಾಶಿ
ಹಸಿವೆಗೆ ನೂರು ಪರಮಾರ್ಥ
ಈ ಅಂತರಗಳ ಅರಿಯುವ ಕ್ಷಣ
ರೊಟ್ಟಿಗೆ ಅಲ್ಲೋಲಕಲ್ಲೋಲ

ಈ ಸಾಲುಗಳನ್ನು ಒಂದೊಂದು ಸಲ ಒಂದೊಂದು ಹೊಸ ಅರ್ಥವನ್ನೂ, ಬೇರೆಯದ್ದೇ ಆದ ಹೊಳಹನ್ನು ನೀಡುತ್ತಲೇ ಹೋಗುತ್ತದೆ. ಅದಕ್ಕೆಂದೇ ಈ ಕಿರುಪದ್ಯಗಳನ್ನು ಒಮ್ಮೆ, ಅಲ್ಲಲ್ಲ ಎರಡು ಸಲವಾದರೂ ಓದಲೇಬೇಕು.

‍ಲೇಖಕರು Avadhi GK

March 11, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

50 ಪ್ರತಿಕ್ರಿಯೆಗಳು

  • Shreedevi keremane

   ಸಿರಿವರ ಪ್ರಕಾಶನ ಅಥವಾ ರೂಪ ಹಾಸನ.

   ಪ್ರತಿಕ್ರಿಯೆ
 1. Mmshaik

  ತುಂಬಾ ಅರ್ಥಪೂರ್ಣ ಹೊಳವುಗಳು ಶ್ರೀ…. ವಿಶ್ಲೇಷಿಸಿದ ಎಲ್ಲಾ ಮಗ್ಗುಲುಗಳೂ…ಸತ್ಯ..ಅದು ಕವಿತೆಗಳ ಕಾಣ್ಕೆ…
  ಒಳ್ಳೆಯ ಲೇಖನ…ಅಭಿನಂದನೆಗಳು.

  ಪ್ರತಿಕ್ರಿಯೆ
 2. Subrahmanya AU

  ಈ ಸುಂದರ ಲೇಖನದ ಮೂಲಕ ರೂಪಾರ ಕವನಗಳ ಬಗ್ಗೆ ಆಸಕ್ತಿ ಮಾಡಿಸಿದಿರಿ….

  ಧನ್ಯವಾದಗಳು

  ಪ್ರತಿಕ್ರಿಯೆ
 3. Seethalakshmi Karkikodi

  ಅಬ್ಬಾ… ಹೊಟ್ಟೆಯೊಳಗೇನೋ ಸಂಕಟ ಆದ ಅನುಭವ. ಹಸಿವಿನ ಹಸಿವನ್ನು ಎದೆಗಿಳಿಸಿದ್ದೀರಿ. ಹಾಗೆ ಮನಸ್ಸು ತಟ್ಟುವಂತೆ ಮಾಡಿದ್ದು ನಿಮ್ಮ ಬರೆಹಗಾರಿಕೆ. ಕಾವ್ಯದ ವಿಶ್ಲೇಷಣೆಯನ್ನು ಸ್ವಂತದ್ದಾದ ಅನುಭವದ ಜತೆಗೆ ಪೋಣಿಸಿಕೊಳ್ಳುತ್ತ ಸಾಗಿದ ಬಗೆ ಅನನ್ಯ. ನಿಮ್ಮ ಒಳಗಣ್ಣು ಮತ್ತು ಒಳತೋಟಿ, ಸ್ತ್ರೀಯಾತ್ಮಕತೆ, ಮಾನವೀಯತೆ ಇಲ್ಲಿ ಸಂವಹನಕ್ಕೆ ಒಳಗಾಗುತ್ತಿವೆ. ಅಪಾರ ಓದಿನ ಹಿನ್ನೆಲೆ ವಿಮರ್ಶನ ಪ್ರಜ್ಞೆಯ ಶ್ರೀಮಂತಿಕೆ ದಟ್ಟೈಸಿದ್ದಕ್ಕೆ ಪುರಾವೆಯಾಗುವ ಬರೆಹವಿದು.

  ಪ್ರತಿಕ್ರಿಯೆ
  • Shreedevi keremane

   ನಿಮ್ಮ ಮಾತಿಗೆ ಏನು ಹೇಳಲಿ? ನಿಮಗೆ ಇಷ್ಟವಾದರೆ ಅಷ್ಟೇ ಸಾಕು..

   ಪ್ರತಿಕ್ರಿಯೆ
 4. ಹರಿನಾಥ ಬಾಬು

  ಕಷ್ಟ ಏನೆಂದು ಗೊತ್ತಿರದ ವಯಸ್ಸಿನಲ್ಲಿ ಹಸಿವು ಏನೆಂದು ಗೊತ್ತಾಗಿರುತ್ತದೆ!
  ಕಣ್ಣಲ್ಲಿ ನೀರು ತಂತಾನೆ ಜಿನುಗುವ ಚಿತ್ರಗಳು – ಈ ದೇಶದ ಕೊನೆಯಿರದ ಬಡತನ – ಮನಸು ಅಲ್ಲೋಲ ಕಲ್ಲೋಲ!
  ತುಂಬಾ ಆರ್ದವಾದ ಬರಹ

  ಪ್ರತಿಕ್ರಿಯೆ
  • Shreedevi keremane

   ಹಸಿವು ನಮ್ಮನ್ನೆಲ್ಲ ಕಟ್ಟಿ ಹಾಕುತ್ತದೆ. ಯಾರೂ ಹಸಿವಿನಿಂದ ನರಳದಿರಲಿ

   ಪ್ರತಿಕ್ರಿಯೆ
 5. ದೊಡ್ಡಕಲ್ಲಹಳ್ಳಿ ನಾರಾಯಣಪ್ಪ

  ನನ್ನ ಬದುಕಿನ ಅದೆಷ್ಟೋ ಸಂಗತಿಗಳು ರೆಕ್ಕೆ ಮೂಡಿಸಿಕೊಂಡು ಕಂಬನಿಯಾಗಿ ಹಾರಿದವು. ಹಸಿವು ಕಲಿಸಿದ ಪಾಠ ಇನ್ಯಾವ ಪಠ್ಯ ಕಲಿಸುವುದಿಲ್ಲ. ಈ ನಿಮ್ಮ ಲೇಖನ ಯಾಕೊ ತುಂಬ ಕಾಡಿತು ಶ್ರೀ ದೇವಿ ಮೇಡಂ. ರೂಪ ಹಾಸನರ ಈ ಪುಸ್ತಕ ಬೇಕಿತ್ತು. Thank u avdhi

  ಪ್ರತಿಕ್ರಿಯೆ
  • Shreedevi keremane

   ಹಸಿವು ಎಂಬ ಟೀಚರ, ಬದುಕು, ವಿಶ್ವದ ಎದರು ನಾವೆಲ್ಲ ಯಕಶ್ಚಿತ್ ..

   ಪ್ರತಿಕ್ರಿಯೆ
 6. ರಮೇಶ ಗಬ್ಬೂರ್

  ಸಿರಿಯವರೆ ನಿಮ್ಮ ಗಳಿಗೆ ಬಟ್ಟಲ ತಿರುವುಗಳಲ್ಲಿ ನಾನು ಮತ್ತು ನನ್ನ ಹಸಿವೆಯೇ ತುಂಬಿದೆ.. ಬಾಲ್ಯದ ಎಲ್ಲಾ ನೆನಪುಗಳು ಹಾಗೆ ಹಾದು ಹೋಗಿ ಮನಸು ಹಗುರಾಯ್ತು… ಶಾಲಾ ದಿನಗಳಲ್ಲಿ ನನ್ನ ಭಿಕ್ಷಾಟನೆ.. ಹಸಿವು… ಅದಕ್ಕಾಗಿ ತರಗತಿ ತಪ್ಪಿಸಿ…‌ಸಂಬ್ರಮಿಸುವವರ‌ ಮನೆಮುಂದೆ ತಿಂದು ಬಿಸಾಡಿದ ಪತ್ರೋಳಿಯ ಎಲೆಗಳಲ್ಲಿ ಉಳಿದ ಅನ್ನಕ್ಕಾಗಿ ತಡಕಾಡಿದ ಎಲ್ಲಾ ನೆನಪುಗಳು ಮತ್ತೆ ಮರುಕಳಿಸಿದವು… ರೂಪಾ ಹಾಸನರವರ ಕವಿತೆಗಳಲ್ಲಿ ನಾನಂತು ಇದ್ದೇನೆ.. ಕವಿತೆ ನಿಜಕ್ಕೂ ಸಾರ್ಥಕತೆ ಪಡೆಯಬೇಕಾದರೆ ಅದು ಬದುಕನ್ನು ಒಳಗೊಂಡಿರಬೇಕು.. ಅದು ಇಲ್ಲಿದೆ….
  ಹಾಗೆಯೇ ನೀವು ಆ ಕವಿತೆಗಳನ್ನು ಪ್ರಸ್ತಾಪಿಸುತ್ತಲೇ ನಿಮ್ಮ ಸುತ್ತಲಿನ ನಿಮ್ಮ ಬದುಕನ್ನು ಕಟ್ಟಿಕೊಡುವಾಗಲು ನಿಮ್ಮ ಸಶಕ್ತ ಬರವಣಿಗೆ ಮತ್ತು ಬದುಕು ಇಷ್ಟವಾಗುತ್ಯದೆ…ಧನ್ಯವಾದ ಸಿರಿಯವರೆ…ಹಾಗೆ ರೂಪಾ ಹಾಸನ ರವರಿಗೂ….
  ನಿಮ್ಮ
  ರಮೇಶ ಗಬ್ಬೂರ್….

  ಪ್ರತಿಕ್ರಿಯೆ
  • Shreedevi keremane

   ಕವಿತೆಗಳೇ ಹಾಗೆ…

   ನಿಮ್ಮ ಮಾತಿಗಾಗಿ ಧನ್ಯವಾದ

   ಪ್ರತಿಕ್ರಿಯೆ
 7. ಜಯಕರ ಭಂಡಾರಿ

  ಕವಯಿತ್ರಿ ಯ ರುಚಿಕರ ರೊಟ್ಟಿ ಪಾಕಕ್ಕೆ ಲೇಖಕಿಯ ಸ್ವಾನುಭವದ ಒಗ್ಗರಣೆ ಚಟ್ನಿ. ನಮ್ಮ ಹಸಿವು ಇಂಗಿತು.

  ಪ್ರತಿಕ್ರಿಯೆ
 8. H R VASTRAD

  ಅರ್ಥಪೂರ್ಣ ಕಥೆ ಮೇಡಂ.ಹಸಿವಿನ ನೈಜ ನೋಟವಿದೆ ಬಡತನದ ಬೇಗೆಯಿದೆ.ಮನ ಮುಟ್ಟುವ ಕಥಾನಕ

  ಪ್ರತಿಕ್ರಿಯೆ
 9. ಸಂತೋಷ . ಡಿ

  ತುಂಬಾ ಅದ್ಭುತ ಅನುಭವ!! ರೂಪಾ ಹಾಸನ್ ಅವರಿಗೆ ದಿನದಂದು big salute. ಪರಿಚಯಿಸಿದ ಶ್ರೀದೇವಿ ಕೆರೆಮನೆ ಅವರಿಗೂ…

  ಪ್ರತಿಕ್ರಿಯೆ
 10. Narendra Krishna

  This bought me to Tears, You are right today’s children need to be educated about poverty, needs , where people ,die with hunger, it touched my heart, what hunger means is depicted in you’re lines,

  ಪ್ರತಿಕ್ರಿಯೆ
 11. ತಮ್ಮಣ್ಣ ಬೀಗಾರ

  ಪುಸ್ತಕ ಓದುವ ಹಸಿವಾಗುತ್ತದೆ.ಆಪ್ತವಾದ ಬರವಣಿಗೆ.ಅಭಿನಂದನೆಗಳು.

  ಪ್ರತಿಕ್ರಿಯೆ
 12. ಮಾಲತಿ ಮುದಕವಿ

  ಮನ ತಟ್ಟಿತು. ಹಸಿವು, ಅದು ಯಾವುದೇ ಇರಲಿ, ಅನುಭವಿಸಿಯೇ ತಿಳಿಯುವಂಥದು. ರೊಟ್ಟಿ ತನ್ನ ಸಾಂಕೇತಿಕತೆಯಲ್ಲಿ ಸುಂದರವಾಗಿ ಚಿತ್ರಿತವಾಗಿದೆ. ಅಭಿನಂದನೆಗಳು.

  ಪ್ರತಿಕ್ರಿಯೆ
  • Shreedevi keremane

   ರೊಟ್ಟಿಯ ಸಾಂಕೇತಿಕತೆ ಅದ್ಭುತ

   ಪ್ರತಿಕ್ರಿಯೆ
  • Shreedevi keremane

   ಹಾಗೆ ಆಗಬೇಕು. ಆಗಲೆ ಕವಿತೆಗೊಂದು ಬೆಲೆ. ಅಲ್ವಾ

   ಪ್ರತಿಕ್ರಿಯೆ
 13. Sujatha lakshmipura

  ರೊಟ್ಟಿ ಮತ್ತು ಹಸಿವಿಗೆ ಹೀಗೂ ಅರ್ಥಗಳಿವೇ!!?? ನಿಜ,ಕವಿ ಪದಗಳ ಜತೆ ಆಟ ಆಡುತ್ತಾನೆ,ಅವನ ಅನುಭವ ವಿಸ್ತರಿಸಿದಂತೆ ಬಳಸುವ ಪದಗಳ ವ್ಯಾಪ್ತಿಯು ಹಿರಿದಾಗುತ್ತಾ ಹೋಗುತ್ತದೆ.
  ರೊಟ್ಟಿ ಮತ್ತು ಹಸಿವು ಸಾಮಾನ್ಯ ಅರ್ಥಗಳಿಂದ ಹೊರಟು ಹೆಣ್ಣು ಗಂಡಿನ ನಡುವಿನ ಸಂಬಂಧವನ್ನು, ಮಾತು ಮೌನದ ವ್ಯಾಖ್ಯಾನ ನೀಡುವಷ್ಟು ವಿಸ್ತರಿಸುತ್ತಾ ಹೋಗಿರುವುದು ಅದ್ಬುತವಾದದ್ದು. ಹಸಿವಿನ ಅನುಭವಗಳೊಂದಿಗೆ ಪುಸ್ತಕ ಪ್ರವೇಶಿಸಿ ರೂಪ ಹಾಸನ ಅವರ ರೊಟ್ಟಿ ಮತ್ತು ಹಸಿವನ್ನು ಸ್ವಾನುಭವದಿಂದಲೇ ಮತ್ತೆ ಮತ್ತೆ ಓದಿಗೆ ಒಡ್ಡಿಕೊಂಡು ಬೆಳಗಿದ ಶ್ರಿ ಅವರ ಶೈಲಿಯ ಬಲೆ ಮತ್ತು ರೂಪ ಅವರ ಪ್ರತಿಮಾತ್ಮಕ ಕಲೆ ಎರಡೂ ಹಸಿಯುವಂತೆ ಮಾಡಿಬಿಟ್ಟವು.
  ನನಗೀಗ ಹಸಿವಾಗುತ್ತಿದೆ…ಶ್ರಿ ಅವರು ರುಚಿ ತೋರಿಸಿದ್ದಾರಷ್ಟೇ
  ಎಲ್ಲಿದೆ ರೂಪಾ ಅವರ ಕವನಗಳ ರೊಟ್ಟಿ….

  ಪ್ರತಿಕ್ರಿಯೆ
  • Shreedevi keremane

   ಆಹಾ ಮೇಡಂ.. ನಿಮ್ಮ ಮಾತು ಮನಸ್ಸು ತಟ್ಟಿತು

   ಪ್ರತಿಕ್ರಿಯೆ
 14. ಪುಷ್ಪಾ ನಾಯ್ಕ ಅಂಕೋಲ

  ತುಂಬಾ ಇಷ್ಟವಾಯ್ತು ಹಸಿವು ಯಾರನ್ನೂ ಬಿಡದು ಅತೀ ಅರ್ಥಪೂರ್ಣ ವಾಗಿದೆ

  ಪ್ರತಿಕ್ರಿಯೆ
 15. ಸಂಗೀತ ರವಿರಾಜ್

  ರೂಪಕ್ಕ ನವರ ಗಳಿಗೆ ಬಟ್ಟಲ ತಿರುವುಗಳಲ್ಲಿ ನಾನು ಓದಿರುವೆ ಅದ್ಭುತ ಪುಸ್ತಕ

  ಪ್ರತಿಕ್ರಿಯೆ
  • Shreedevi keremane

   ನಿಜ ರೂಪಕವಾಗಿ ಗೆಲ್ಲುವ ಅದ್ಭುತ ಕವನಗಳು

   ಪ್ರತಿಕ್ರಿಯೆ
 16. Sunil

  ದಿನ ನಿತ್ಯ ನಮ್ಮ ಬದುಕಿನಲ್ಲಿ ಬರುವ ಎರಡು ಸಾಮನ್ಯ ಪದಗಳನ್ನು ಕಾವ್ಯವಾಗಿಸಿದ ರೂಪಕ್ಕನವರ ಕಾವ್ಯ ಶಕ್ತಿ ಮತ್ತು ಕಾವ್ಯದ ಎಲ್ಲ ಮಗ್ಗಲುಗಳನ್ನು ವಿವರಿಸಿದ ನಿಮ್ಮ ಪರಿ ಎರಡು ಅಭಿನಂದನೀಯ.ನಿಮ್ಮ ಜ್ಯಾಪಕಶಕ್ತಿ ಅಪಾರ ನಿಮ್ಮ ಬಾಲ್ಯದ ಘಣನೆಗಳನ್ಮು ಸೂಕಗತ ಸಂದರ್ಭದಲ್ಲಿ ಬಳಸುವ ಶಕ್ತಿ ನಿಮಗೆ ಮಾತ್ರ ಸಾದ್ಯ. ನಿಮ್ಮ ತಂದೆ ತಾಯಿಗಳು ಕಲಿಸಿ ಬದುಕಿನ ಪಾಠಗಳು ನಿಮ್ಮನ್ನು ಆಪ್ತ ಲೇಖಕಿಯಾಗಿಸಿವೆ ಅನ್ನುವದು ನನ್ನ ಅನಿಸಿಕೆ ತುಂಬಾ ಅರ್ಥಪೂರ್ಣ ಕವನ ಸಂಕಲನ ಮತ್ತು ಪರಿಚಯ.

  ಪ್ರತಿಕ್ರಿಯೆ
 17. ವಿವೇಕ

  ತುಂಬಾ ಮನಕಲಕುವ ಬರಹ. ಧನ್ಯವಾದಗಳು

  ಪ್ರತಿಕ್ರಿಯೆ
 18. appusudarshan

  ಹಸಿದ ಹೊಟ್ಟೆಗೆ ರೊಟ್ಟಿಯ ಚಿಂತೆ
  ಹಸಿದ ಮನಸಿಗೆ………????
  ವಾವ್ ಹಸಿವು ಮತ್ತು ರೊಟ್ಟಿಯ ಕುರಿತಾದ ನಿಮ್ಮ ಲೇಖನ ಮೊದಲು ಹೊಟ್ಟೆಯ ಹಸಿವಿನ ಕುರಿತು ಓದುತ್ತಾ ಹೋದೆ ಓದುತ್ತಾ ಓದುತ್ತಾ ಹೊಟ್ಟೆಯ ಹಸಿವು ಸರಿದು ಮೊದಲೇ ತುಸುವಾಗಿ ಹಸಿದಿದ್ದ ಮನಸು ಆ ಮನಸಿನ ಹಸಿವನ್ನು ನಿಮ್ಮ ಲೇಖನವು ತಡೆಯಾರದ ಹಸಿವನ್ನು ಹೆಚ್ಚಿಸಿಬಿಟ್ಟಿದ್ದೀರಿ ಮೆಡಮ್. ಈ ಪುಸ್ತಕವನ್ನೋಮ್ಮೆ ಅಲ್ಲಲ್ಲಾ ಪದೆ ಪದೇ ಓದಬೇಕೆನ್ನುವ ಮನದ ಹಸಿವು ಕಾಡುತ್ತಿದೆ ಮೆಡಂ.ನಿಮಗೆ ಮತ್ತು ಆ ಪುಸ್ತಕದ ಕತ್ರೃವಿಗೆ ನನ್ನ ನಮನಗಳು.

  ಪ್ರತಿಕ್ರಿಯೆ
 19. ಧನಪಾಲ ನೆಲವಾಗಿಲು

  ತುಂಬಾ ಆಪ್ತವಾದ ಕೃತಿ ವಿಶ್ಲೇಷಣೆ. ನಿಮ್ಮ ಕೃತಿ ವಿಶ್ಲೇಷಣೆ ಅನನ್ಯ. ಈ ಸಂಕಲನವನ್ನು ಕೊಂಡುಕೊಂಡು ಓದಲೇಬೇಕು ಅ‌ನಿಸುತ್ತಿದೆ. ದಯಮಾಡಿ ಪುಸ್ತಕ ಸಿಗುವ ಮಾರ್ಗ ತಿಳಿಸಿ. ಅಭ್ಯಂತರವಿಲ್ಲದಿದ್ದರೆ ಲೇಖಕಿಯವರ ಚರವಾಣಿಯ ಸಂಖ್ಯೆ ತಿಳಿಸಿ.

  ಧನ್ಯವಾದಗಳು ಶ್ರೀದೇವಿ ಮೇಡಮ್‌

  ಪ್ರತಿಕ್ರಿಯೆ
 20. Pueet

  medam ತುಂಬಾ ಚನ್ನಾಗಿದೆ. ಮನುಷ್ಯನ ಭಾವನೆಗಳು ಹೇಗಿರಬೇಕು ಎಂಬುದನ್ನು ಚೆನ್ನಾಗಿ‌ ತಿಳಿಸಿದ್ದಿರಿ.

  ಪ್ರತಿಕ್ರಿಯೆ
 21. Umeshkalmani

  ನಿಜವಾಗಿಯೂ ಕಣ್ಣಲ್ಲಿ ನೀರು ಜಿನುಗಿತು

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: