ಗಾಂಧಿ ಮತ್ತು ಶ್ರೀ ಗಂಧದ ಕಟ್ಟಿಗೆ
ಎನ್ ಜಗದೀಶ್ ಕೊಪ್ಪ
ಮಹಾತ್ಮ ಗಾಂಧೀಜಿಯವರ ಬದುಕಿನಲ್ಲಿ ಸೆರೆಮನೆಗಳ ವಾಸ ಎಂಬುವುದು ಅವರ ಬದುಕಿನ ಅವಿಭಾಜ್ಯ ಅಂಗವಾಗಿತ್ತು. 1915 ರಲ್ಲಿಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ನಂತರ ತಾವು ಅನುಭವಿಸಿದ ಸೆರೆಮನೆಯ ವಾಸವನ್ನು ಲೆಕ್ಕವಿಟ್ಟಿರಲಿಲ್ಲ.. 1930 ರಲ್ಲಿನಡೆದ ಉಪ್ಪಿನ ಸತ್ಯಾಗ್ರಹ ಚಳುವಳಿಯನ್ನು ತನ್ನ ಪರಿಣಾಮಕಾರಿ ವರದಿಯ ಮೂಲಕ ಜಗತ್ತಿಗೆ ತಲುಪಿಸಿದ್ದ ಅಮೇರಿಕಾದ ಪತ್ರಕರ್ತವೆಬ್ ಮಿಲ್ಲರ್ 1931 ರಲ್ಲಿ ಲಂಡನ್ ನಗರದಲ್ಲಿ ಗಾಂಧೀಜಿಯವರನ್ನು ಸಂದರ್ಶನ ಮಾಡುವಾಗ, ” ಎಷ್ಟು ವರ್ಷಗಳ ಕಾಲ ನೀವು ಜೈಲಿನಲ್ಲಿದ್ದರಿ? ಅಲ್ಲಿನ ವಾಸ ಹೇಗಿತ್ತು? “ಎಂದು ಪ್ರಶ್ನಿಸಿದರು.
ಗಾಂಧೀಜಿಯವರು ” ನಾನು ಎಷ್ಟು ಬಾರಿ ಜೈಲಿಗೆ ಎಂಬುದರ ಬಗ್ಗೆಯಾಗಲಿ,ದಿನಗಳ ಬಗ್ಗೆಯಾಗಲಿ ಲೆಕ್ಕವಿಟ್ಟವನಲ್ಲ. ಆದರೆ, ಜೈಲು ವಾಸವು ನನಗೆ ಆತ್ಮಾವಲೋಕನ ಮಾಡಿಕೊಳ್ಳಲು ಅವಕಾಶ ಕಲ್ಪಿಸಿತು. ಜೊತೆಗೆ ಅನೇಕ ಕೃತಿಗಳನ್ನು ಮತ್ತು ಲೇಖನಗಳನ್ನು ಬರೆಯಲು ಸಹಕಾರಿಯಾಯಿತು. ನಾನು ಜೈಲಿನಲ್ಲಿ ಇದ್ದಷ್ಟು ದಿನಗಳ ಕಾಲಬ್ರಿಟೀಷ್ ಅಧಿಕಾರಿಗಳು ನನ್ನನ್ನು ಅತ್ಯಂತ ಗೌರವ ಮತ್ತು ಪ್ರೀತಿಯಿಂದ ನಡೆಸಿಕೊಂಡರು” ಎಂದು ಉತ್ತರಿಸಿದ್ದರು. 1942 ರಲ್ಲಿ ನಡೆದಚಲೆಜಾವ್ ಅಥವಾ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಬಾಂಬೆ ನಗರದಲ್ಲಿ 1942 ರ ಪೆಬ್ರವರಿ 9 ರಂದು ಬಂಧನಕ್ಕೆ ಒಳಗಾದ ಗಾಂಧಿ,ಕಸ್ತೂರಬಾ. ಮಹಾದೇವ ದೇಸಾಯಿ, ಮೀರಾ ಬೆಹನ್, ಸರೋಜಿನಿ ನಾಯ್ಡು ಹಾಗೂ ಇನ್ನಿತರೆ ಕಾರ್ಯಕರ್ತರನ್ನು ಬ್ರಿಟೀಷ್ ಸರ್ಕಾರಪುಣೆ ನಗರಕ್ಕೆ ಸ್ಥಳಾಂತರಿಸಿ, ಯರವಾಡ ಜೈಲಿನ ಸಮೀಪವಿದ್ದ ಆಗಾ ಖಾನ್ ಅರಮನೆಯಲ್ಲಿ ಗೃಹ ಬಂಧನದಲ್ಲಿರಿಸಿತು.
ಆಗಖಾನ್ ಅರಮನೆಯ ಗೃಹಬಂಧನ ಗಾಂಧೀಜಿಯವರ ಪಾಲಿಗೆ ಮರೆಯಲಾರದ ಅನುಭವವಾಯಿತು. ಏಕೆಂದರೇ, ಅದೇ ಅರಮನೆಯಲ್ಲಿ ಗಾಂಧೀಜಿ ಪಾಲಿಗೆ ಆಪ್ತ ಕಾರ್ಯದರ್ಶಿಯಾಗಿದ್ದುಕೊಂಡು,ಅವರ ಆತ್ಮದಂತಿದ್ದ ಮಹಾದೇವ ದೇಸಾಯಿ 1942 ರ ಆಗಸ್ಟ್ 15 ರಂದು ಹೃದಯಾಘಾತದಿಂದ ನಿಧನ ಹೊಂದಿದರು. “ ಶಿಷ್ಯನ ರೂಪದಲ್ಲಿದ್ದ ನನ್ನ ಗುರು” ಎಂದು ಬಣ್ಣಿಸಿದ ಗಾಂಧೀಜಿಯವರು, ಮಹಾದೇವ ದೇಸಾಯಿಯವರ ಅಂತ್ಯ ಕ್ರಿಯೆಯನ್ನು ಅರಮನೆಯ ಹಿಂಭಾಗ ನೆರವೇರಿಸಿ, ಅವರ ನೆನಪಿಗಾಗಿ ಸಮಾಧಿಯನ್ನು ನಿರ್ಮಿಸಿ, ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಹೋಗಿ ಅಲ್ಲಿ ಗೌರವ ಸಲ್ಲಿಸಿ ಬರುತ್ತಿದ್ದರು.
ಅದೇ ಅರಮನೆಯಲ್ಲಿ 1944 ಪೆಬ್ರವರಿ 22 ರಂದು ಗಾಂಧೀಜಿಯವರ ಅರ್ಧಾಂಗಿ ಕಸ್ತೂರ ಬಾ ರವರು ಅದೇ ಅರಮನೆಯ ಕೊಠಡಿಯಲ್ಲಿ ಗಾಂಧೀಜಿಯವರ ಜೊತೆ ಗೃಹಬಂಧನದಲ್ಲಿದ್ದಾಗ ನಿಧನ ಹೊಂದಿದರು. ತಮ್ಮ ತೊಡೆಯ ಮೇಲೆ ಕಸ್ತೂರಬಾ ಅವರ ತಲೆಯನ್ನಿಟ್ಟುಕೊಂಡು ಇಡೀ ರಾತ್ರಿ ರೋಧಿಸಿದ ಗಾಂಧೀಜಿಯವರು, ಬ್ರಿಟೀಷ್ ಅಧಿಕಾರಿಗಳ ಮನವಿಯ ಮೇರೆಗೆ ಬೆಳಗಿನ ಜಾವ ಅರಮನೆಯ ಮುಂದೆ ನೆರದಿದ್ದ ಜನಸ್ತೋಮವನ್ನು ನಿಯಂತ್ರಿಸಲು ಕೊಠಡಿಯಿಂದ ಹೊರಬಂದರು.
ಅಂತ್ಯಕ್ರಿಯೆಯನ್ನು ಹೇಗೆ ಮಾಡಬೇಕೆಂದು ಬ್ರಿಟಿಷ್ ಜೈಲು ಅಧಿಕಾರಿಗಳು ಗಾಂಧೀಜಿಯವರ ಸಲಹೆ ಕೇಳಿದಾಗ, ಗಾಂಧೀಜಿಯವರು ಅತ್ಯಂತ ಸರಳವಾಗಿ ಅರಮನೆಯ ಹಿಂಭಾಗ ನೆರವೇರಿಸೋಣ ಎಂದು ಸಲಹೆ ನೀಡಿದರು. ಜೊತೆಗೆ ಪುಣೆ ನಗರದಿಂದ ಸಾಧಾರಣ ಕಟ್ಟಿಗೆಯನ್ನು ತರಲು ಸೂಚಿಸಿದರು. ಈ ಸಂದರ್ಭದಲ್ಲಿ ಜೈಲು ಅಧಿಕಾರಿಯೊಬ್ಬ, “ ಬಾಪೂಜಿ ನೀವು ಅನುಮತಿ ನೀಡಿದರೆ ಗಂಧದ ಕಟ್ಟಿಗೆಯಲ್ಲಿ ಕಸ್ತೂರಬಾ ರವರ ಅಂತ್ಯ ಸಂಸ್ಕಾರ ನೆರವೇರಿಸಬಹುದು” ಎಂಬ ಸಲಹೆ ಕೊಟ್ಟ. ಈಗ ಗಂಧದ ಕಟ್ಟಿಗೆ ಎಲ್ಲಿಂದ ತರುತ್ತೀರಿ? ಗಾಂಧೀಜಿ ಪ್ರಶ್ನಿಸಿದಾಗ, ಜೈಲು ಅಧಿಕಾರಿ ತೀರಾ ಸಂಕೋಚದಿಂದ ಹಾಗೂ ತಣ್ಣನೆಯ ಧ್ವನಿಯಲ್ಲಿ “ ಬಾಪು ನೀವು ಪೂನಾ ಒಪ್ಪಂಧ ಕುರಿತಂತೆ ಉಪವಾಸ ಸತ್ಯಾಗ್ರಹ ಕುಳಿತಾಗ, ನೀವು ಬದುಕುವುದು ಖಾತ್ರಿಯಿಲ್ಲ ಎಂದು ನಿರ್ಧರಿಸಿ, ಸರ್ಕಾರ ನಿಮ್ಮ ಅಂತ್ಯಕ್ರಿಯೆಗಾಗಿ 1800 ಕೆ.ಜಿ. ಗಂಧದ ಕಟ್ಟಿಗೆಯನ್ನು ಶೇಖರಿಸಿ ಇಡಲಾಗಿತ್ತು. ಈಗ ಅದು ಪುಣೆಯ ಯರವಾಡ ಜೈಲಿನಲ್ಲಿದೆ” ಎಂದು ಉತ್ತರಿಸಿದ.
ಗಾಂಧೀಜಿಯ ಮುಖದ ಮೇಲೆ ಸಣ್ಣನೆಯ ನಗುವೊಂದು ಮೋಡದಂತೆ ಕ್ಷಣಾರ್ಧದಲ್ಲಿ ತೇಲಿ ಹೋಯಿತು. “ ಓ ಹಾಗಾದ್ರೆ ಅದು ನನ್ನ ಆಸ್ತಿ. ನನ್ನ ಮಡದಿಯ ಅಂತ್ಯ ಸಂಸ್ಕಾರಕ್ಕೆ ಬಳಸಬಹುದು” ಎಂದರು. ಅವರ ಅನುಮತಿಯಂತೆ ಅರಮನೆಯ ಹಿಂಭಾಗ ನೆರವೇರಿದ ಅಂತ್ಯಕ್ರಿಯೆಯಲ್ಲಿ ಕಿರಿಯ ಪುತ್ರ ದೇವದಾಸ್ ಗಾಂಧಿ ಚಿತೆಗೆ ಅಗ್ನಿ ಸ್ಪರ್ಶ ಮಾಡುತ್ತಿದ್ದಂತೆ, ಸನೀಹದಲ್ಲಿ ನಿಂತಿದ್ದ ಗಾಂಧೀಯವರು ಏಳುತ್ತಿದ್ದ ಬೆಂಕಿಯ ಜ್ವಾಲೆಯನ್ನು ನೋಡುತ್ತಾ, “ಈ ದಿನ ನನ್ನ ದೇಹದ ಅರ್ಧ ಭಾಗ ಸುಟ್ಟಿ ಹೋಯಿತು” ಎಂದು ಸ್ವಗತದ ಧ್ವನಿಯಲ್ಲಿ ಮಾತನಾಡಿಕೊಂಡರು.
ತನ್ನದೊಂದು ಮನೆ, ತನ್ನದೊಂದು ಊರು, ತನ್ನ ಕುಟುಂಬ ಎಂಬ ಮಮಕಾರವಿಲ್ಲದೆ, ಇಡೀ ದೇಶವನ್ನು ಕುಟುಂಬ ಮಾಡಿಕೊಂಡು ಭಾರತವನ್ನು ಸುತ್ತಿದ ಗಾಂಧೀಜಿಯವರಿಗೆ ನಿಂತ ನೆಲವೇ ಮನೆಯಾಯಿತು. ಊರಾಯಿತು.ಇಪ್ಪತ್ತನೆಯ ಶತಮಾನದ ಭಾರತದ ರಾಜಕೀಯ ನಾಯಕ ಯಾರೆಂದು ನೀವು ಕೇಳಿದರೆ, ನನ್ನಲ್ಲಿ ಉತ್ತರವಿಲ್ಲ. ಆದರೆ, ದುರಂತ ನಾಯಕ ಯಾರೆಂದು ಕೇಳಿದರೆ, ನನ್ನ ಉತ್ತರ ಗಾಂಧೀಜಿ ಎಂಬುದಾಗಿರುತ್ತದೆ.
ಗಾಂಧೀಜಿಯವರ ಪರಮಾಪ್ತ ಹಾಗೂ ಪ್ರಖರ ವೈಚಾರಿಕತೆಯ ಶಿಷ್ಯ ಜೆ.ಬಿ. ಕೃಪಾಲನಿಯವರು ತಮ್ಮ ಮಹತ್ವದ ಕೃತಿಯಾದ “Gandhi – His Life and Thougt” ಪುಸ್ತಕದಲ್ಲಿ ಅವರೊಂದಿಗಿನ ಒಡನಾಟದಲ್ಲಿ ತಾವು ಕಂಡುಕೊಂಡ ಗಾಂಧಿ ವ್ಯೆಕ್ತಿತ್ವವನ್ನು ಹೀಗೆ ದಾಖಲಿಸಿದ್ದಾರೆ.
“ ನನ್ನ ಬದುಕಿನಲ್ಲಿ ಆ ಮಹಾತ್ಮನ ಒಡನಾಟದ ದಿನಗಳು ಹಾಗೂ ನನ್ನ ಮೇಲಾದ ಪ್ರಭಾವಗಳು ಸದಾ ಹಸಿರಾಗಿವೆ. ಗಾಂಧಿಯೆಂದರೆ, ಕೇವಲ ಒಂದು ವ್ಯೆಕ್ತಿ ಅಥವಾ ವ್ಯೆಕ್ತಿತ್ವ ಮಾತ್ರವಲ್ಲ, ಅದೊಂದು ಅತೀತವಾದ ಶಕ್ತಿ. ಯಾವ ಕ್ಷಣದಲ್ಲಾರೂ ಅನ್ಯಾಯ ಮತ್ತು ಅಸತ್ಯಗಳ ವಿರುದ್ಧ ಸೆಟೆದು ನಿಲ್ಲುವ ಶಕ್ತಿ. ಸದಾ ಸತ್ಯ ಮತ್ತು ಪ್ರಾಮಾಣಿಕತೆಗಾಗಿ ತನ್ನನ್ನು ತಾನು ಸಮರ್ಪಿಸಿಕೊಂಡ ಬಹು ದೊಡ್ಡ ವ್ಯೆಕ್ತಿತ್ವ ಅವರದು. ತನ್ನನ್ನು ನಂಬಿದವರ ಅಥವಾ ಅನ್ಯಾಯಕ್ಕೆ ಒಳಗಾದವರ ರಕ್ಷಣೆಗೆ ಎಂದೂ ಹಿಂಜರಿಯದ ವ್ಯೆಕ್ತಿತ್ವ ಅವರದಾಗಿತ್ತು. ಅವರು ಪ್ರತಿಪಾದಿಸುತ್ತಿದ್ದ ವಿಷಯಗಳನ್ನು ಎಲ್ಲರೂ ಒಪ್ಪಿಕೊಳ್ಳಬೇಕೆಂಬ ಹಠಮಾರಿತನವಾಗಲಿ, ಜಿಗುಟುತನದ ಗುಣಗಳಾಗಲಿ ಅವರಲ್ಲಿ ಇರಲಿಲ್ಲ. ಅವರು ನಂಬಿದ್ದ ಅಹಿಂಸಾ ತತ್ವ ನನ್ನ ದೃಷ್ಟಿಯಲ್ಲಿ ನಕರಾತ್ಮಕ ಧೋರಣೆ ಎನಿಸಲಿಲ್ಲ. ಅವರು ಬಡವರನ್ನು ಅಪಾರವಾಗಿ ಪ್ರೀತಿಸುತ್ತಿದ್ದರು, ಗೌರವಿಸುತ್ತಿದ್ದರು, ಅವರಂತೆ ಸರಳವಾಗಿ ಬದುಕಲು ಇಚ್ಛಿಸುತಿದ್ದರು. ಅವರ ಈ ನಡುವಳಿಕೆಯಲ್ಲಿ ಬಡವರನ್ನು ಬಡವರಾಗಿ ಉಳಿಸುವ ಆಲೋಚನೆಗಳಿಗಿಂತ ಅವರೊಳಗೆ ಆತ್ಮವಿಶ್ವಾಸ ತುಂಬುವ ಕಾರ್ಯವಿಧಾನ ಎದ್ದು ಕಾಣುತ್ತಿತ್ತು”
ಇದಕ್ಕಿಂತ ಪರಿಣಾಮಕಾರಿಯಾಗಿ ಗಾಂಧೀಯವರನ್ನು ಬಣ್ಣಿಸಲು ನನ್ನಲ್ಲಿ ಶಬ್ಧಗಳಿಲ್ಲ. ಕ್ಷಮಿಸಿ.
ದುರಂತ ನಾಯಕ ಯಾರೆಂದು ಕೇಳಿದರೆ, ನನ್ನ ಉತ್ತರ ಗಾಂಧೀಜಿ ಎಂಬುದಾಗಿರುತ್ತದೆ. This is the real and naked truth. The fact that this name ‘GANDHI’ has been used extensively by undeserving persons is also a real and naked truth. If and only if this name was patented! Since it is not, Gandhiji becomes the real tragic hero of India!