ಇಡೀ ಮನೆಯನ್ನೇ ಯಾರೋ ಮಡಿಚಿಡುತ್ತಿದ್ದಾರೆ!

ಎಂ ಆರ್‌ ಕಮಲ

(ಪುಟ್ಟ ಬದುಕನ್ನು ಸವೆಸುವವರಿಗೆ ಅರ್ಪಣೆ)

ಅವಳದೊಂದು ಪುಟ್ಟ ಬದುಕು. ಒಗ್ಗರಣೆಯ ಡಬ್ಬಿಯಲ್ಲಿ ಜೀರಿಗೆ, ಸಾಸುವೆ, ಮೆಂತ್ಯ, ಕಡಲೆಬೇಳೆ, ಉದ್ದಿನಬೇಳೆ ಇತ್ಯಾದಿಗಳು ಇವೆಯೋ ಇಲ್ಲವೋ ಎಂದು ರಾತ್ರಿಯಿಂದಲೇ ಅವಳಿಗೆ ಚಿಂತೆ ಶುರುವಾಗುತ್ತದೆ. ಬೆಳಗ್ಗೆಯೆದ್ದು ಎಣ್ಣೆಯ ಪ್ಯಾಕೆಟ್ ಕತ್ತರಿಸಿ ಹಾಕಿಕೊಳ್ಳುವಷ್ಟು ಸಮಯವಿರುವುದಿಲ್ಲ.

ರೇಡಿಯೋದಲ್ಲಿ ಒಂದು ಹಾಡು ಮುಗಿಯುವುದರಲ್ಲಿ ಇಷ್ಟು ಚಪಾತಿಗಳನ್ನು ಮಾಡಬೇಕೆಂಬ ಲೆಕ್ಕವಿರುತ್ತದೆ. ಯಾರಾದರೂ ಮುಂಚೆಯೇ ಎದ್ದು ತಿಂಡಿಗಾಗಿ ತಟ್ಟೆ ಹಿಡಿದು ನಿಂತಾಗ, ತಾನಿನ್ನು ಮಾಡಿಲ್ಲವೆಂದು ಸೋಮಾರಿತನದ ಉತ್ತರ ಕೊಡಲಾರಳು. ಹಸಿದ ಕಣ್ಣುಗಳನ್ನು ದಿಟ್ಟಿಸುವುದು ಅವಳಿಗೆ ಸುಲಭವಲ್ಲ. ಹಾಗೆಂದೇ ಎಲ್ಲರೂ ಟಿವಿ ನೋಡುತ್ತಾ ಕೂತಿದ್ದರೂ ಅಡುಗೆ ಮನೆಯಲ್ಲಿ ಏನಿದೆ, ಏನಿಲ್ಲ ಎಂಬುದರ ಚಿಂತೆಯಲ್ಲಿ ಎದ್ದು ಎದ್ದು ಓಡುತ್ತಿರುತ್ತಾಳೆ. ಅವಳಿಗೂ ‘ಬಿಗ್ ಬಾಸ್’ ನೋಡಲು ಇಷ್ಟ. ಜಾಹೀರಾತು ಬಂದಾಗೆಲ್ಲ ಒಳಗೋಡಿ ತರಕಾರಿ ತೊಳೆದು ತರುತ್ತಾಳೆ.

ಏಕಾಗ್ರತೆಯಿಂದ ಕತ್ತರಿಸುವಾಗ ಯಾವುದೋ ದೃಶ್ಯ ತಪ್ಪಿ ಹೋಗಿ, ಪಕ್ಕದಲ್ಲಿ ಕುಳಿತವರನ್ನು ಕೇಳಿ ಬೈಸಿಕೊಳ್ಳುತ್ತಾಳೆ. ಹಜಾರದಿಂದ ಅಡುಗೆಮನೆಗೆ ಓಡಾಡುತ್ತಲೇ ಬದುಕಿನ ಎಷ್ಟು ಸಂತಸಗಳನ್ನು ಕಳೆದುಕೊಳ್ಳುತ್ತಿದ್ದಾಳೆ ಎಂದು ಅಸೂಕ್ಷ್ಮ ಜೀವಿಗಳಿಗೆ ಅರ್ಥವಾಗುವುದಿಲ್ಲ. ಅವರ ಪಾಲಿಗೆ ಅವಳು ಕುಕ್ಕರ್ ಇಟ್ಟು ಟಿವಿ ನೋಡುವವಳು! ಅವಳದೊಂದು ಪುಟ್ಟ ಬದುಕು. ಬೆಳಗ್ಗೆಯೆದ್ದು ಎಲ್ಲ ಕೋಣೆಗಳಲ್ಲೂ ಇಣುಕುತ್ತಾಳೆ. ಹೊದ್ದಿದ್ದ ಹೊದಿಕೆಯನ್ನು ಯಾರೂ ಮಡಿಸಿಲ್ಲ, ಕಿರಿಕಿರಿಯಾಗುತ್ತದೆ.

ಒಂದು ಕಡೆಯಿಂದ ಆರಂಭಿಸಿ ಎಲ್ಲವನ್ನು ನೀಟಾಗಿ ಇಟ್ಟು ಬರುತ್ತಾಳೆ. ನೋಡಿದರೆ ಗೋಡೆಯ ಮೇಲಿನ ಫೋಟೋ ಸೊಟ್ಟಗಾಗಿಬಿಟ್ಟಿದೆ. ಅದನ್ನು ಸರಿ ಮಾಡಲು ಹೋಗಿ ಅದು ಆ ಕಡೆ ಈ ಕಡೆ ವಾಲಿ ರೇಗಿ ಹೋಗುತ್ತದೆ. ಗಡಿಯಾರ ನಿಂತು ಹೋಗಿದೆ. ಸೆಲ್ ಹಾಕಲು ಯಾರದ್ದಾದರೂ ನೆರವನ್ನು ಕೇಳಿದರೆ ಎಗರಿ ಬೀಳುತ್ತಾರೆ. ತನ್ನ ಮೊಬೈಲ್ ನಲ್ಲಿಯೇ ಸಮಯ ನೋಡಿಕೊಂಡು ಅಡುಗೆ ಮನೆಯ ಮೂಲೆಯಲ್ಲಿ ಇಟ್ಟುಕೊಳ್ಳುತ್ತಾಳೆ.

ಯಾರೋ ಅಡುಗೆ ಮನೆಯಲ್ಲಿ ಮೊಬೈಲ್ ಇಟ್ಟರೆ ಸ್ಪೋಟವಾಗುತ್ತದೆ ಎಂದು ಸಾಕ್ಷಿ ಸಮೇತ ವಾಟ್ಸಾಪ್ ವಿಡಿಯೋ ಕಳಿಸಿದ ಮೇಲೆ ಅವಳಿಗೆ ಸ್ವಲ್ಪ ಆತಂಕವೇ. ಮಧ್ಯೆ ಮಧ್ಯೆ ಓಡಿ ಬಂದು ಪತ್ರಿಕೆಯ ಹೆಡ್ ಲೈನ್ಸ್ ನೋಡುತ್ತಾಳೆ. ಅವಳದೊಂದು ಪುಟ್ಟ ಬದುಕು, ಯಾರೋ ಬೆಲ್ ಮಾಡುತ್ತಾರೆ. ಗ್ಯಾಸಿನವನು ಬರಬಹುದು ಎಂದು ಮೊದಲೇ ದುಡ್ಡು ಜೋಡಿಸಿಟ್ಟುಕೊಂಡಿದ್ದಾಳೆ. ಪತ್ರಿಕೆಯವರಿಗೂ. ಸಹ. ಓದಬೇಕೆಂದು ವಾರಪತ್ರಿಕೆ, ಮಾಸ ಪತ್ರಿಕೆಗಳನ್ನೆಲ್ಲ ತರಿಸಿಟ್ಟುಕೊಂಡಿದ್ದಾಳೆ. ಕೆಲವೊಮ್ಮೆ ಪುಟ ತೆರೆಯಲೂ ಆಗದೆ ಹಳೆಯ ಪತ್ರಿಕೆಗಳನ್ನಿಡುವ ಜಾಗಕ್ಕೆ ಅವು ಸೇರುತ್ತವೆ.

ಅಮ್ಮ ಹೇಳಿಕೊಟ್ಟಿದ್ದ ಅಡುಗೆ ಮಾಡುವುದನ್ನು ಬಿಟ್ಟು ಹೊಸ ಹೊಸ ಅಡುಗೆಗಳು ಅವಳ ತಲೆಯಲ್ಲಿ ಇನ್ನೂ ನಿಂತೇ ಇಲ್ಲ. ಹಾಗಾಗಿ ಮೊಬೈಲ್ ಪಕ್ಕದಲ್ಲಿಟ್ಟುಕೊಂಡೇ ಎಲ್ಲವನ್ನು ಸಿದ್ಧಪಡಿಸಿಕೊಳ್ಳುತ್ತಾಳೆ. ಯೂ ಟ್ಯೂಬ್ ನಲ್ಲಿ ಜಾಲಾಡದಿರುವ ಯಾವ ವೆಬ್ ಸೈಟ್ ಗಳೂ ಬಹುಶಃ ಇಲ್ಲ. ಮೊದಲಾಗಿದ್ದರೆ ಟಿವಿಯಲ್ಲಿ ಬರುವ ‘ಅಡುಗೆ ಕಾರ್ಯಕ್ರಮ’ವನ್ನು ತಪ್ಪದೆ ನೋಡಿ ಪುಟ್ಟದೊಂದು ನೋಟ್ ಬುಕ್ಕಿನಲ್ಲಿ ಬರೆದಿಟ್ಟುಕೊಳ್ಳುತ್ತಿದ್ದಳು. ಈಗದರ ಅವಶ್ಯಕತೆಯಿಲ್ಲ. ಅವಳದೊಂದು ಪುಟ್ಟ ಬದುಕು.

ಈ ಎಲ್ಲದರ ನಡುವೆ ಅವಳು ಡ್ರೈವ್ ಮಾಡುವುದನ್ನೇ ಕಲಿಯಲಿಲ್ಲ. ತನ್ನ ಪಾಸ್ ಬುಕ್ ಗಂಡನಿಗೆ ಒಪ್ಪಿಸಿ ಬ್ಯಾಂಕ್ ಗೆ ಹೋಗುವುದನ್ನು ತಪ್ಪಿಸಿಕೊಂಡು, ಈಗೀಗ ಚೆಕ್ ಬರೆಯುವುದೇ ಮರೆತು ಹೋಗುತ್ತಿದೆ. ಚಜ್ಜ ಮೇಲೆ ಮಳೆ ನೀರು ಕಟ್ಟಿಕೊಂಡಿರುವ ಚಿಂತೆ ಬಾಧಿಸುತ್ತಿದೆ. ಕರೆಂಟ್ ಹೋಗಿ ಅರ್ಧ ತಿರುವಿದ ಚಟ್ನಿ. ಮನೆಯಲ್ಲಿದ್ದ ರುಬ್ಬುವ ಕಲ್ಲನ್ನು ಎಸೆಯುವುದು ಬೇಡವೆಂದು ಎಷ್ಟು ಸಾರಿ ಹೇಳಿದ್ದಳು. ಯಾರೂ ಕೇಳಲಿಲ್ಲ. ಬಚ್ಚಲನ್ನು ಇನ್ನೂ ಉಜ್ಜಿಲ್ಲ.

ಯಾರಾದರೂ ಬಿದ್ದರೆ ಎನ್ನುವ ಆತಂಕ. ಜಿರಳೆಗಳು ಜಾಸ್ತಿಯಾಗಿವೆ. ಮೂರು ತಿಂಗಳಾದರೂ ಆ ಪೆಸ್ಟಿಸೈಡ್ಸ್ ಅಂಟಿಸುವ ವ್ಯಕ್ತಿ ಬಂದಿಲ್ಲ. ಫೋನ್ ಮಾಡಬೇಕು. ಈ ಬಾರಿ ಅಂಗಡಿಯವನು ಒಂದರ ಬದಲಿಗೆ ಮೂರು ಪ್ಯಾಕೆಟ್ ಕಡಲೆಬೇಳೆ ಕಳಿಸಿಬಿಟ್ಟಿದ್ದಾನೆ. ಫ್ರಿಜ್ ನಲ್ಲಿಡಬೇಕು. ಇಲ್ಲವಾದರೆ ಹುಳು ಬರುತ್ತೆ. ಯಾರೋ ಗೀಸರ್ ನಲ್ಲಿ ನೀರು ಬರುತ್ತಿಲ್ಲವೆಂದು ಕೂಗುತ್ತಿದ್ದಾರೆ. ಎಲ್ಲೋ ಬ್ಲಾಕ್ ಆಗಿರಬೇಕು. ಕಬ್ಬಿಣದ ಏಣಿ ಹತ್ತಿ ಟೆರೇಸ್ ಗೆ ಹೋಗಬೇಕು. ಅವಳದೊಂದು ಪುಟ್ಟ ಬದುಕು.

ಈ ಕೊರೋನಾ ಕಾರಣಕ್ಕೆ ನೆಂಟರಿಷ್ಟರು ಯಾರು ಈಗ ಮನೆಗೆ ಬರುವುದಿಲ್ಲ. ಆದರೆ ಮನೆಯವರೆಲ್ಲ ಮನೆಯಲ್ಲೇ ಉಳಿದು ಅಡುಗೆ ತಿಂಡಿಯದ್ದೇ ಕೆಲಸವಾಗಿಬಿಟ್ಟಿದೆ. ನಾಳೆ ಏನು ತಿಂಡಿ ಮಾಡುವುದು ಎನ್ನುವ ಚಿಂತೆಯಲ್ಲಿ ಅವಳು ಹೈರಾಣಾಗುತ್ತಾಳೆ. ಈಗೀಗ ಸೋಮವಾರದಿಂದ ಭಾನುವಾರದವರೆಗೆ ಕಾಲೇಜಿನಂತೆ ಒಂದು ಟೈಮ್ ಟೇಬಲ್ ಸಿದ್ಧಪಡಿಸಿ ಅಂಟಿಸಿಕೊಂಡಿದ್ದಾಳೆ. ಒಂದೆರಡು ವಾರ ಅದನ್ನು ಅನುಸರಿಸಿದ ಮೇಲೆ ಬೇಸರವಾಗಿ ತಾನೇ ಹೊಸದನ್ನು ಹುಡುಕುತ್ತಾಳೆ. ನೆರೆಮನೆಯ ಹೆಂಗಸಿನೊಂದಿಗೆ ಅಷ್ಟಾಗಿ ಮಾತನಾಡುವುದಿಲ್ಲ. ‘ಏನು ತಿಂಡಿ, ಏನು ಅಡುಗೆ?’ ಎನ್ನುವ ಅದೇ ಪ್ರಶ್ನೆಗೆ ಉತ್ತರಿಸಿ ಸಾಕಾಗಿದೆ. ಅವಳಿನ್ನು ಮನೆಯ ದಾಸವಾಳದ ಗಿಡದಿಂದ ಒಂದೆರಡು ಹೂ ಕಿತ್ತು ತಂದು ದೇವರಿಗೆ ಮುಡಿಸಬೇಕು.

ದೀಪ ಒಂದು ವಾರದಿಂದ ತೊಳೆಯದೆ ಕಿಮಟುಗಟ್ಟಿದೆ. ನಿರ್ಮಾಲ್ಯ ತೆಗೆದು, ದೀಪ ಬೆಳಗಿ ಒಂದು ಕೆಲಸವಾಯಿತಲ್ಲ ಸದ್ಯ ಎಂದು ಸಮಾಧಾನ ಪಡುತ್ತಾಳೆ. ಅವಳದೊಂದು ಪುಟ್ಟ ಬದುಕು. ಅವಳಿಗಾಗಿ ಸಮಯ ಮಾಡಿಕೊಳ್ಳಲು ಹೆಣಗುತ್ತಿದ್ದಾಳೆ. ಹಿಂದೆಲ್ಲ ಕವಿತೆಗಳನ್ನು ಬರೆಯುತ್ತಿದ್ದಳು. ಸರಿಯಿಲ್ಲವೆಂದು ಹಾಳೆಗಳನ್ನು ಹರಿದು ಹಾಕುತ್ತಿದ್ದಳು. ಈಗ ಹಾಳೆಗಳ ಹಂಗಿಲ್ಲ. ಆದರೆ ಅವಳೊಳಗಿನ ಕವಿತೆ ಸತ್ತು ಹೋಗಿದೆ. ಅವಳೇ ಮಾಡಿದ ಅಡುಗೆ ತಿಂದು ಬೇಸರವಾಗಿದೆ.

ಅಮ್ಮನನ್ನು ನೆನೆಸಿಕೊಂಡು ಉಪ್ಪಿನಕಾಯಿ ಅನ್ನಕ್ಕೆ ಸುರಿದು, ರಾಶಿ ಕಡಲೇಕಾಯಿ ಎಣ್ಣೆ ಹಾಕಿ ಕಲೆಸಿಕೊಂಡು ಧಾವಂತದಲ್ಲೇ ಊಟ ಮಾಡುತ್ತಾಳೆ. ಯಾರೋ ಅಮೆಜಾನ್ ನಲ್ಲಿ ಏನೋ ತರಿಸಿದ್ದಾರೆ. ಪಾರ್ಸೆಲ್ ತೆಗೆದುಕೊಳ್ಳಬೇಕು. ಅನ್ನಕ್ಕೆ ಹಾಕಿಕೊಂಡಿದ್ದ ಎಣ್ಣೆ ಹೆಚ್ಚಾಗಿ ಹೋಯಿತೆಂದು ತಲೆ ಕೆಡಿಸಿಕೊಳ್ಳುತ್ತಾಳೆ. ಉಪ್ಪು, ಎಣ್ಣೆ, ಸಿಹಿ ಎಲ್ಲವನ್ನು ಕಡಿಮೆ ಮಾಡಲು ಮೊನ್ನೆ ತಾನೇ ಡಾಕ್ಟರ್ ಹೇಳಿದ್ದಾರೆ. ಅವಳದೊಂದು ಪುಟ್ಟ ಬದುಕು. ಮಂಚದ ಮೇಲೆ ಬಟ್ಟೆ ಹರವಿಕೊಂಡು ಕುಳಿತಿದ್ದಾಳೆ. ಅವಳ ಬದುಕು ಮಡಿಚಿಟ್ಟುಕೊಳ್ಳುತ್ತ ಹೋಗುತ್ತದೆ. ಮಾತಿನಿಂದ ಮೌನಕ್ಕೆ ಜಾರುತ್ತಾಳೆ. ಪಕ್ಕದಲ್ಲೇ ಇದ್ದ ವೀಣೆಯ ಪುಸ್ತಕವನ್ನು ಒಮ್ಮೆ ತೆರೆದು ನೋಡಿ, ಮುಚ್ಚಿಟ್ಟುಬಿಡುತ್ತಾಳೆ. ನೆನಪುಗಳು ಬಟ್ಟೆಯಲ್ಲಿ ಮಡಿಕೆಯಾಗುತ್ತಿವೆ. ಕೋಣೆಯಲ್ಲೊಂದು ದಿವ್ಯ ಮೌನ. ಇಡೀ ಮನೆಯನ್ನೇ ಯಾರೋ ಮಡಿಚಿಡುತ್ತಿದ್ದಾರೆ ಅನ್ನಿಸುತ್ತದೆ.

‍ಲೇಖಕರು Admin

August 1, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಲಲಿತಾ ಸಿದ್ಧಬಸವಯ್ಯ

    ಕಮಲಾ , ನನ್ನದೂ ಡಿಟೋ ಡಿಟೋ ಡಿಟೋ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: