ರಘುನಂದನ ಅವರ ‘ಅಂದತ್ತರ ಉಯ್ಯಾಲೆ…’

ಕವಿ, ನಾಟಕಕಾರ, ರಂಗನಿರ್ದೇಶಕ ರಘುನಂದನ ಅವರ ಕವನ ಸಂಕಲನ ನಾನು ಸತ್ತಮೇಲೆ (ಪ್ರ: ಚಾರುಮತಿ ಪ್ರಕಾಶನ) ಮತ್ತು ಕಾವ್ಯ ಮತ್ತು ಲೋಕಮೀಮಾಂಸೆಯ ಪುಸ್ತಕ ತುಯ್ತವೆಲ್ಲ ನವ್ಯದತ್ತ: ಅಂದತ್ತರ ಉಯ್ಯಾಲೆ… ಮತ್ತು ಅದರ ಸುತ್ತ (ಪ್ರ: ಥಿಯೇಟರ್ ತತ್ಕಾಲ್ ಬುಕ್ಸ್), ಈ ಎರಡು ಪುಸ್ತಕಗಳು ಮೇ 12ರಂದು ಬಿಡುಗಡೆಗೊಳ್ಳುತ್ತಿವೆ.

  • ತುಯ್ತವೆಲ್ಲ ನವ್ಯದತ್ತ: ಅಂದತ್ತರ ಉಯ್ಯಾಲೆ… ಮತ್ತು ಅದರ ಸುತ್ತಪುಸ್ತಕದ ಮೊದಲಿಗೆ ಮುನ್ನ ಎಂಬ ಭಾಗವನ್ನು ಈಕೆಳಗೆ ಕೊಟ್ಟಿದೆ.

ಮೊದಲಿಗೆ ಮುನ್ನ

**

ನಾನು ಸಾಹಿತ್ಯ ವಿಮರ್ಶಕನಲ್ಲ. ಏನಿದ್ದರೂ, ಕಾವ್ಯದ ಕುಡುಕ, ಗಡಂಗಿಗ; ಅದರ ಈಡಿಗ. ಮತ್ತು ಈದಿಗ. ಈಗ ನೀವು ಓದುತ್ತಿರುವುದನ್ನು ಸಾಹಿತ್ಯ ವಿಮರ್ಶೆಯ ಪುಸ್ತಕವೆಂದು ಕರೆಯಲು ನನಗಂತೂ ಮನಸ್ಸಿಲ್ಲ. ಇಲ್ಲಿರುವುದು ಕೇವಲ ಸಾಹಿತ್ಯ ವಿಮರ್ಶೆ ಎಂದು ಕರೆಯಲು ಆಗದ ಬರಹವೆಂದೇ ಅನ್ನಿಸುತ್ತಿದೆ.

ಕಾಲೇಜು ಓದಿನ ದಿನಗಳಿಂದಲೂ ಬೇಂದ್ರೆ ಅವರ ಕಾವ್ಯವನ್ನು ಓದುತ್ತ, ಆನಂದದ ಲೆಕ್ಕವಿಲ್ಲದಷ್ಟು ಗಳಿಗೆ ಪಡೆದವನು ನಾನು, ಪಡೆಯುತ್ತ ಇರುವವನು. ಆ ಆನಂದವನ್ನು ಹಿರಿಕಿರಿಯ ಸ್ನೇಹಿತರ ಜೊತೆ ಹಂಚಿಕೊಂಡು ಹರಟುತ್ತ, ತೊಡಕಿನ ವಿಷಯಗಳನ್ನು ಚರ್ಚಿಸುತ್ತ ಬಂದವನು. ಬೇಂದ್ರೆಯವರ ಕೃಷ್ಣಾಕುಮಾರಿ ಎಂಬ ಕಥನ-ನೀಳ್ಗವನ, ಹಾಗೂ ಅವರ ಆ ಕವನದ್ದೇ ಕಥಾವಸ್ತು, ವಿಷಯ, ಹಾಗೂ ಹೆಸರು ಇರುವ, ಸೇಡಿಯಾಪು ಕೃಷ್ಣಭಟ್ಟರ, ಕೃಷ್ಣಾಕುಮಾರಿ ಎಂಬ ಕವನ, ಎರಡನ್ನೂ, ಪರಸ್ಪರ ಸಂದಿಲ್ಲದಂತೆ ಬೆಸೆದು, ಹೊಸೆಹೆಣೆದು ಅರಸು ವಿಚಾರ ಎಂಬೊಂದು ರಂಗಪ್ರಯೋಗವನ್ನು ಕೂಡ ನಿರ್ದೇಶಿಸಿದವನು. ಆದರೆ ಬೇಂದ್ರೆಯವರನ್ನು ಕುರಿತಾಗಲಿ, ಅವರ ಕಾವ್ಯವನ್ನು ಕುರಿತಾಗಲಿ ಬರೆಯುತ್ತೇನೆ ಎಂದು ಯಾವತ್ತೂ ಎಣಿಸಿರಲಿಲ್ಲ. ಈಗ ಈ ಪುಸ್ತಕ ಬರೆದಿದ್ದೇನೆ.

ಈಗ್ಗೆ ಮೂರು ವರ್ಷದಮೇಲಾಯಿತು: ಬರಹಗಾರ್ತಿ ಗೀತಾ ವಸಂತ ಅವರು ಫೋನುಕರೆ ಮಾಡಿದರು. ಬೇಂದ್ರೆಯವರ ನೂರಿಪ್ಪತ್ತೈದನೆಯ ಹುಟ್ಟುದಿನದಂದು ಬಿಡುಗಡೆ ಮಾಡುವುದಕ್ಕಾಗಿ ಅವರ ಕಾವ್ಯವನ್ನು ಕುರಿತು ತಾವು ಮತ್ತು ರಾಜಕುಮಾರ ಮಡಿವಾಳರ ಅವರು ಹಲವರಿಂದ ಲೇಖನಗಳನ್ನು ಬರೆಯಿಸಿ ಒಂದು ಪುಸ್ತಕ ಸಂಪಾದಿಸುತ್ತಿರುವುದಾಗಿ ತಿಳಿಸಿದರು. ಅದಕ್ಕಾಗಿ ನನ್ನಿಂದಲೂ ಒಂದು ಬರಹ ಕೇಳಿದರು.

ಮೊದಲು ಹಿಂದುಮುಂದು ನೋಡಿದವನು, ಆಮೇಲೆ ಆಗಲಿ ಎಂದೆ. ಬೇಂದ್ರೆಯವರ ಉಯ್ಯಾಲೆ ಸಂಕಲನವು ನನಗೆ ತುಂಬ ಇಷ್ಟವಾದ ಪುಸ್ತಕವೆಂದೂ, ಆ ಇಡಿಯ ಸಂಕಲನವನ್ನು ಕುರಿತಾಗಿಯೋ ಅದರಲ್ಲಿನ ಅಷ್ಟಷಟ್ಪದಿಗಳನ್ನು ಕುರಿತಾಗಿಯೋ ಒಂದು ಬರಹ ಬರೆದುಕೊಡುವುದಾಗಿಯೂ ಹೇಳಿದೆ. ಆದರೆ ಬರೆಯಲು ತೊಡಗಿದಮೇಲೆ, ತುಂಬ ಬೇಗ ಗೊತ್ತಾಯಿತು, ಆ ಕೆಲಸ ಸುಲಭದಲ್ಲಿ, ಕೆಲವೇ ಪುಟಗಳಷ್ಟರ ಬರಹದಲ್ಲಿ ಆಗುವಂಥದಲ್ಲ, ಆಗಲೂ ಕೂಡದು ಎಂದು. ನನ್ನ ಮನಸ್ಸು, ಪ್ರವೃತ್ತಿ ಅದನ್ನು ಹಾಗೆ ಆಗಗೊಡಲು ಒಪ್ಪಲಿಲ್ಲ. ಹಾಗಾಗಿ ಬೇಂದ್ರೆಯವರ ಉಯ್ಯಾಲೆಯ ಧ್ಯಾನ ಎಲ್ಲೆಲ್ಲಿಗೆ, ಹೇಗೆಹೇಗೆ ನನ್ನ ಕೊಂಡುಹೋಯಿತೋ ಆ ಎಲ್ಲೆಡೆಗೆ ಆ ಹಾಗೆಹಾಗೇ ತುಯ್ಯುತ್ತ ಬರೆಯುತ್ತಹೋದೆ. ಆ ತುಯ್ತವೆಲ್ಲ ಕೂಡಿ ಈ ಪುಸ್ತಕವಾಗಿದೆ. ಈ ಬರಹದ ಭಾಗವಾಗಬೇಕು, ಆಗಬಹುದು ಎಂದು ನಾನು ಎಣಿಸದೇ ಇರುವೆಡೆಗೆಲ್ಲ ಆ ಧ್ಯಾನ ನನ್ನ ಕೊಂಡುಹೋಗಿದೆ.

ಸಾಹಿತ್ಯ ವಿಮರ್ಶೆಯ ಕಾಳಜಿಗಳು ಇಂಥಿಂಥವು ಎಂದು ಸಾಧಾರಣವಾಗಿ ತಿಳಿಯಲಾಗುತ್ತದೆಯಲ್ಲ, ಅಂಥವುಗಳಾಚೆಗೆ ಈ ಬರಹ ಚಾಚಿಕೊಂಡಿದೆ. ಸಾಹಿತ್ಯ ವಿಮರ್ಶೆಗೆ ರಾಜಕೀಯ-ಸಾಮಾಜಿಕ ಚಿಂತನೆ, ತತ್ತ್ವಜಿಜ್ಞಾಸೆ ಮತ್ತು ಮೀಮಾಂಸೆ ಮುಂತಾದುವು ಎಂದೂ ಹೊರತಾಗಿಲ್ಲ. ಅವೆಲ್ಲವೂ ಅಡಕವಾಗಿ, ಹಾಸುಹೊಕ್ಕಾಗಿ ಇರುವ ಅದೆಷ್ಟೋ ಬರಹಗಳು ಲಾಗಾಯ್ತಿನಿಂದ ಇವೆ. ಆದರೆ ಸಾಹಿತ್ಯ ವಿಮರ್ಶೆಯ ಪುಸ್ತಕಗಳು ಆ ತರಹದ ಚಿಂತನೆ, ಜಿಜ್ಞಾಸೆ ಮತ್ತು ಮೀಮಾಂಸೆಯ ದಿಸೆಯಲ್ಲಿ ಸಾಧಾರಣವಾಗಿ ಸಾಗುವುದಕ್ಕಿಂತಲೂ ಹೆಚ್ಚಿನ ದೂರಕ್ಕೆ ಇಲ್ಲಿನ ಬರಹ ಸಾಗಿದೆ ಎಂದು ನನಗೆ (ನನಗೇ, ನನಗೂ) ಅನ್ನಿಸಿದೆ. ಇದು ಹೀಗೆ ಆಗುತ್ತಿದೆ, ಆಗುತ್ತದೆ ಎಂದು ಇದನ್ನು ಬರೆಯುತ್ತಿದ್ದಾಗ ನನಗೆ ಬರಬರುತ್ತ ಗೊತ್ತಾಗತೊಡಗಿತು.

ಉದಾಹರಣೆಗೆ, ಹದಿನೇಳನೆಯ ಶತಮಾನದ ಇಂಗ್ಲೆಂಡಿನ ಜಾನ್ ಡನ್ ಮುಂತಾದ ಮೆಟಫಿಜಿ಼ಕಲ್ ಕವಿಗಳನ್ನು ಕುರಿತಾಗಿ ಈ ಪುಸ್ತಕದಲ್ಲಿ ಹೇಳಬೇಕಾಯಿತು. ಅವರನ್ನು ಕುರಿತು ಹೇಳುತ್ತ ಮೆಟಫಿಜಿ಼ಕಲ್ ಕಾವ್ಯ ಎಂದರೇನು ಎಂದು ಕೈಲಾದಷ್ಟು ನಿಷ್ಕೃಷ್ಟವಾಗಿ ನಿರುಕಿಸಿ, ವಿವರಿಸಿಕೊಳ್ಳಬೇಕಾಯಿತು. ಆ ಕೆಲಸ ಮಾಡುವಾಗ, ಅನುಭಾವ, ಅನುಭೂತಿ, ಅಧ್ಯಾತ್ಮ ಮತ್ತುಅಧಿಭೂತತೆ ಅನ್ನುವ ನಾಲ್ಕು ಪಾರಿಭಾಷಿಕಗಳಲ್ಲಿ ಒಂದೊಂದೂ ಏನನ್ನು ಸೂಚಿಸುತ್ತದೆ, ಯಾವುದರತ್ತ ಬೊಟ್ಟುಮಾಡುತ್ತದೆ ಅನ್ನುವುದನ್ನು ವಿಸ್ತಾರ ಬಿಡಿಸಿ ನೋಡಿಕೊಳ್ಳುವುದು ಅನಿವಾರ್ಯವಾಯಿತು. ಮುಂದುವರಿದು, ಆ ನಾಲ್ಕರಲ್ಲಿ ಒಂದಕ್ಕೂ ಮತ್ತೊಂದಕ್ಕೂ ಇರುವ ವ್ಯತ್ಯಾಸವೇನು ಅನ್ನುವುದನ್ನು ಕುರಿತಾಗಿ, ಹಾಗೂ ಅವುಗಳ ನಡುವೆ ಸಾಮ್ಯವೋ ಇಲ್ಲವೇ ಹೊಂದಾಣಿಕೆಯೋ ಇದ್ದರೆ, ಅದು ಎಲ್ಲೆಲ್ಲಿ ಯಾವಯಾವ ಅಂಶ, ಬಿಂದು ಮತ್ತು ಮಗ್ಗುಲಿನಲ್ಲಿ ಎಷ್ಟೆಷ್ಟರಮಟ್ಟಿಗೆ ಇದೆ ಅನ್ನುವುದನ್ನು ಕುರಿತಾಗಿ ಕೂಡ ಒಂದು ಇಡೀ ಕಂಡಿಕೆಯುದ್ದ ಜಿಜ್ಞಾಸೆ ನಡೆಸಬೇಕಾಯಿತು.

ಈ ಪುಸ್ತಕದ ಅತಿದೀರ್ಘ ಕಂಡಿಕೆ ಎಂದರೆ ಅದೇ, ಅನುಭಾವ, ಅನುಭೂತಿ, ಅಧ್ಯಾತ್ಮ, ಅಧಿಭೂತತೆ ಎಂಬವುಗಳ ತತ್ತ್ವಜಿಜ್ಞಾಸೆಯಿರುವ ಕಂಡಿಕೆಯೇ. ಆ ತತ್ತ್ವಶೋಧದ ಭಾಗವಾಗಿ (ಹಾಗೂ, ಮತ್ತೆ, ಅನಿವಾರ್ಯವಾಗಿ), ಕಳೆದ ಶತಮಾನ ಹಾಗೂ ನಾವಿರುವ ಈ ಶತಮಾನ, ಈ ಎರಡೂ ಶತಮಾನಗಳ ಕೆಲವು ಮುಖ್ಯ ಸಾಮಾಜಿಕ-ರಾಜಕೀಯ ಆಗುಹೋಗು, ವಿಚಾರ ಮತ್ತು ತತ್ತ್ವಗಳನ್ನು ನಿರುಕಿಸಬೇಕಾಗಿ ಬಂತಲ್ಲದೆ ಅವುಗಳನ್ನು ಆಧರಿಸಿ ನಾವು ಮನುಷ್ಯರು (ಮತ್ತು, ಈ ಪುಸ್ತಕದ ನೇರ ಕಾಳಜಿಯ ನೆಲೆಯಲ್ಲಿ, ಕವಿಗಳು, ಕಲಾವಿದರು) ತಳೆಯುವ ನಿಲುವುಗಳನ್ನು ಪರಿಕಿಸಬೇಕಾಗಿಬಂತು.

ಕಾವ್ಯದ ಮತ್ತು ಇತರ ಸಾಹಿತ್ಯದ ಓದಿಗೆ – ಮಾನುಷ ಬದುಕಿನ ತಿಳಿವಿಗೇ – ಆ ಬಗೆಯ ಜಿಜ್ಞಾಸೆ ಬೇಕು, ಅದು ಅನಿವಾರ್ಯವೇ ಆದದ್ದು. ಆದ್ದರಿಂದ ಈ ಪುಸ್ತಕವನ್ನು ಮತ್ತು ಮೇಲೆ ಹೇಳಿದ ಆ ಕಂಡಿಕೆಯನ್ನು ಸಾವಧಾನ ಓದುವ ಯಾರಿಗೂ ಅಂಥದಕ್ಕೆ ಇಲ್ಲಿ ತಾವಿಲ್ಲ, ಇರಕೂಡದಿತ್ತು, ಇದ್ದರೂ ಅದು ಈಗಿರುವಷ್ಟು ಉದ್ದ ಚಾಚಿಕೊಳ್ಳಬಾರದಿತ್ತು, ಇಷ್ಟೊಂದೆಲ್ಲ ತಾವು ತಿನ್ನಬಾರದಿತ್ತು ಅನ್ನಿಸುವುದಿಲ್ಲ ಎಂದುಕೊಂಡಿದ್ದೇನೆ.

ಅವೆಲ್ಲವುಗಳ ಜೊತೆಗೆ, ಅವುಗಳ ಮೇಲೆ, ಅವುಗಳಿಗೆ ಬುನಾದಿಯಾಗಿ – ಮೊದಲಿಗೂ ಕೊನೆಗೂ ಉದ್ದಕ್ಕೂ – ಕಾವ್ಯದ ಬರಹ ಮತ್ತು ಓದು, ಇವುಗಳನ್ನು ಕುರಿತಾದ ನನ್ನ ಈ ಸದ್ಯದ ಕೆಲವು ನಿಲುವುಗಳು ಇವೆ ಇಲ್ಲಿ; ಸಾಹಿತ್ಯಕ ಸಂಸ್ಕೃತಿಯನ್ನು ಕುರಿತಾದ ಕೆಲವು ಆಲೋಚನೆಗಳಿವೆ. ಆ ಆಲೋಚನೆಗಳಿಂದಲೇ ಹೊಮ್ಮಿದುವಾಗಿ, ಬೇಂದ್ರೆಯವರ ಗಂಗಾವತರಣ ಸಂಕಲನ ಪ್ರಕಟವಾದ ಬಳಿಕ, ಅಂದರೆ ೧೯೪೦ರ ದಶಕ ಕಳೆದ ಮೇಲೆ, ಅವರ ಆಸಕ್ತಿಗಳಲ್ಲಿಯೂ, ಹಾಗೂ ಅದರಿಂದಾಗಿ ಅವರ ಕಾವ್ಯದ ಗತಿಸ್ಥಿತಿಯಲ್ಲಿಯೂ, ಕಾಣಿಸಿಕೊಂಡ ಬದಲಾವಣೆಯನ್ನು ಕುರಿತ ವಿಮರ್ಶೆ ಮತ್ತು ಟೀಕೆಯ ಮಾತುಗಳು ಕೂಡ ಇವೆ.

ನನ್ನ ಆ ನಿಲುವು, ಆಲೋಚನೆ ಮತ್ತು ಮಾತುಗಳು ರುಚಿಸದಿರುವವರು, ಅವುಗಳನ್ನು ಒಪ್ಪದಿರುವವರು ಇರುತ್ತಾರೆ. ಅವರಲ್ಲಿ ಕೆಲವರು ಅವುಗಳ ಬಗ್ಗೆ ತಗಾದೆ ಎತ್ತಲೂ ಬಹುದು. ಆದರೆ, ಅಂಥವರು ಕೂಡ, ಇಲ್ಲಿ ಆಡಿರುವ ಮಾತುಗಳಲ್ಲಿ ಪ್ರಾಮಾಣಿಕತೆಯಿದೆ, ಮುಂದಿಟ್ಟ ಆಲೋಚನೆ ಮತ್ತು ವಿಶ್ಲೇಷಣೆಯಲ್ಲಿ ತಕ್ಕಮಟ್ಟಿಗಿನ ನಿಷ್ಕೃಷ್ಟತೆ ಇದೆ ಎಂದು, ಈ ಬರಹದೊಂದಿಗಿನ ತಮ್ಮೆಲ್ಲ ಭಿನ್ನಾಭಿಪ್ರಾಯಗಳ ನಡುವೆಯೂ, ಒಪ್ಪಿಕೊಳ್ಳುತ್ತಾರೆ ಎಂದುಕೊಂಡಿದ್ದೇನೆ.

ಅಷ್ಟರಮೇಲೆ, ಈ ಪುಸ್ತಕದಲ್ಲಿ ಕಾವ್ಯವನ್ನು ಕುರಿತು ಆಡಿರುವ ಮಾತುಗಳಲ್ಲಿಯೂ ಸಾಹಿತ್ಯಕ ಸಂಸ್ಕೃತಿಯನ್ನು ಕುರಿತು ಹೇಳಿರುವುದರಲ್ಲಿಯೂ ಮತ್ತು ಆಗಲೇ ಹೇಳಿದ ಅನುಭಾವ, ಅನುಭೂತಿ, ಅಧ್ಯಾತ್ಮ, ಅಧಿಭೂತತೆ ಎಂಬ ಕಂಡಿಕೆಯಲ್ಲಿ ನಡೆಸಿರುವ ತತ್ತ್ವಜಿಜ್ಞಾಸೆಯಲ್ಲಿಯೂ ಆತ್ಮನಿವೇದನೆಯ ಸಣ್ಣದೊಂದು ಒಳತೊರೆಯಿದೆ ಎಂದು ಕೂಡ ಹೇಳಬೇಕು. ಅದು ಓದುಗರಿಗೆ ಗೊತ್ತಾಗುತ್ತದೆ ಕೂಡ. ಬರೆಯುವಾಗ ಅದು ಹಾಗೆ ಆಗಬೇಕಾಯಿತು; ಹಾಗೆ ಆಗಗೊಡಬೇಕಾಯಿತು. ಅದರಿಂದಾಗಿ, ಕೆಲವು ತಾತ್ತ್ವಿಕ ವಿಷಯಗಳಿಗೆ ಸಂಬಂಧಿಸಿದಂತೆ ನನ್ನ ಭಾವ ಮತ್ತು ವಿಚಾರದಲ್ಲಿ ಇದ್ದ ಕೆಲವು ಸಿಕ್ಕುಗಳನ್ನು ಅರಿಯಲೂ ಅವುಗಳಿಂದ ಒಂದಷ್ಟರಮಟ್ಟಿಗಾದರೂ ಬಿಡಿಸಿಕೊಳ್ಳಲೂ ನನಗೆ ಸಾಧ್ಯವಾಗಿದೆ.

ಆ ಎಲ್ಲವುದರಿಂದಾಗಿ, ಇದು ಸಂಕರಜಾತಿಯ ಪುಸ್ತಕವಾಗಿದೆ. ಸಂಕರ, ಉಲ್ಲಂಘನೆ ನನಗಿಷ್ಟ. ಬೆಸುಗೆ, ಬೆರಕೆಯೇ ಜೀವನ; ಜೀವನ ಸಾರ. ಉಲ್ಲಂಘನೆ ಕಾಣದ ಬದುಕು ನಿಸ್ಸಾರ.

ಆದ್ದರಿಂದ, ಈ ಪುಸ್ತಕದ ಹೆಸರು ತುಯ್ತವೆಲ್ಲ ನವ್ಯದತ್ತ: ಅಂದತ್ತರ ಉಯ್ಯಾಲೆ ಎಂದಷ್ಟೆ ಆಗದೆ, ಮತ್ತು ಅದರ ಸುತ್ತ ಅನ್ನುವ ಒಕ್ಕಣೆಯನ್ನೂ ತನ್ನಲ್ಲಿ ಸೇರಿಸಿಕೊಂಡಿದೆ. ಅಂದತ್ತರ ಉಯ್ಯಾಲೆಯ ಜೀಕು ಜೋರು-ಉದ್ದನೆಯದು: ಆಚೆಗೂ, ಈಚೆಗೂ. ಅದರಲ್ಲಿ ಕೂತು ಜೀಕಾಡಿದವನ ಮತ್ತವಿಲಾಸ ಈ ಪುಸ್ತಕ: ಆಗುತ್ತ ಆಗುತ್ತ ಒಂದು ವಿಷಯದಿಂದ ಮತ್ತೊಂದು ವಿಷಯದತ್ತ ತನ್ನಿಂತಾನೇ ಅನಿವಾರ್ಯ ಚಾಚಿ, ಹೊರಳಿಕೊಂಡು, ಬೆಳೆಯುತ್ತಹೋದ ಬರಹ. ಆ ನಿಧಾನ ಅನಾವರಣ, ಮತ್ತು ಹೊರಳುತಿರುವಿನ ಪಯಣದ ಕುರುಹುಗಳನ್ನು ಕೆಡಿಸದೆ, ಅವುಗಳನ್ನು ಅವಿರುವಂತೆಯೆ ಉಳಿಸಿಕೊಂಡು ಈ ಪುಸ್ತಕಕ್ಕೆ ಸಂಗತವಾದೊಂದು ಮೈಕಟ್ಟು ಕೊಡುವ ಪ್ರಯತ್ನಮಾಡಿದ್ದೇನೆ. ಹಾಗಾಗಿಯೆ, ಇದರಲ್ಲಿನ ಎರಡೂ ಮುಖ್ಯ ವಿಭಾಗಗಳನ್ನು ಲಹರಿಗಳು ಎಂದು ಕರೆದಿದ್ದೇನೆ.

ಒಂದು ಆಸೆ: ಈ ಪುಸ್ತಕ ಕವಿಗಳಿಗೂ ನಚ್ಚುಗೆ ಆಗಲಿ. ನಿಜವಾದ ಕವಿಗಳು ಹೇಗೂ ಮತ್ತವಿಲಾಸಿಗಳು, ಸಂಕರಪ್ರಿಯರು; ತೊಂಡುಮೇವು, ಬೆರಕೆಸೊಪ್ಪಿನವರು ಅವರು; ಮಡಿವಂತಿಕೆ, ಬಿಗುಮಾನ ಎದುರಾದಾಗಲೆಲ್ಲ ರಂಗೋಲಿಯ ಕೆಳಗೆ ನುಸುಳುವವರು; ಅಲ್ಲಿ ಆಡಬೇಕಾದ ಆಟ ಆಡಿ, ಹೊಸದೇ ಹಸೆ ಬಿಡಿಸುವವರು! ಹಾಗೆ ನುಸುಳುವ, ಹಸೆ ಬಿಡಿಸುವ ಕೆಲಸ ಸುಲಭವಾದದ್ದಂತೂ ಅಲ್ಲ. ಆದರೆ, ಸಲೀಸು-ಸುಲಭವಾದ ಸಾಲುಗಳನ್ನು ಪೇರಿಸಿ, ಆ ಪೇರಿಕೆಯೇ ಕಾವ್ಯವೆಂದು ಭ್ರಮಿಸಿ, ತಮ್ಮ ತಾವು ಕವಿಗಳು ಎಂದು ಕರೆದುಕೊಂಡು, ಕರೆಸಿಕೊಳ್ಳುವವರು ಸಾಮಾನ್ಯವಾಗಿರುವ ಈ ದಿನಗಳಲ್ಲಿ, ಈ ಹೊತ್ತಿಗೆಯ ಕೆಲವಾದರೂ ಮಾತು ಕೆಲವರಿಗಾದರೂ ನಾಟಲಿ, ನಚ್ಚುಗೆ ಆಗಲಿ ಎಂದು ಆಶಿಸುತ್ತೇನೆ.

ಅದೆಲ್ಲ ಆಗಬಹುದು, ಆಗದಿರಬಹುದು. ಆದರೆ ಕನ್ನಡ ಸಾಹಿತ್ಯ ಮತ್ತು ಕನ್ನಡ ಕಾವ್ಯದ ವಿದ್ಯಾರ್ಥಿಗಳಿಗೆ, ಅದರಲ್ಲೂ ವಿವಿಧ ದೇಶ, ಕಾಲಗಳ ಸಾಹಿತ್ಯಗಳನ್ನು ಓದುತ್ತ, ಅವುಗಳಲ್ಲಿನ ಒಂದನ್ನು ಮತ್ತೊಂದರ ಜೊತೆಗಿಟ್ಟು ಹೋಲಿಸಿ, ಪರಿಕಿಸಿ, ತೂಗಿನೋಡುವ ಆಸಕ್ತಿ ಇರುವವರಿಗೆ – comparative literature ಅಥವಾ literary studiesನವರಿಗೆ – ಈ ಬರಹದಿಂದ ಪ್ರಯೋಜನವಾಗುತ್ತದೆ ಎಂದು ಆಶಿಸುತ್ತೇನೆ. ಇದರಲ್ಲಿ ಪಶ್ಚಿಮದ, ನವ್ಯ – modernist – ಬರಹಗಾರರ ಉಲ್ಲೇಖವಿದೆ; ಟಿ. ಎಸ್. ಎಲಿಯಟ್‌ನ ಆಲೋಚನೆ ಮತ್ತು ಅವನ ಕಾವ್ಯ ಹಾಗೂ ವಿಮರ್ಶೆಯ ಬರಹಗಳ ಮೇಲೆ ದೊಡ್ಡ ಪ್ರಭಾವ ಬೀರಿದ ಜಾನ್ ಡನ್ ಮುಂತಾದ, ಆಗಲೇ ಹೇಳಿದ, ಇಂಗ್ಲಿಶ್ ಮೆಟಫಿಜಿ಼ಕಲ್ ಕವಿಗಳನ್ನು ಕುರಿತಾಗಿ ಒಂದು ಕಂಡಿಕೆಯಿದೆ. ಅದರಲ್ಲಿ ಆ ಕವಿಗಳ ಕಾವ್ಯವನ್ನು ದೀರ್ಘವಾಗಿ ಧೇನಿಸಿದೆ. ಅದಲ್ಲದೆ, ಮತ್ತೊಂದು ಕಂಡಿಕೆಯಲ್ಲಿ, ಆ ಕವಿಗಳ ಸಾಲಿಗೇ ಸೇರುವ ಹತ್ತೊಂಬತ್ತನೆಯ ಶತಮಾನದ ಕವಿ ಜೆರಾರ್ಡ್ ಮ್ಯಾನ್ಲಿ ಹಾಪ್ಕಿನ್ಸ್‌ನ ಕಾವ್ಯವನ್ನು ಧೇನಿಸಿದೆ. ಹಾಗಾಗಿ ಈ ಮಾತು.

ಬೇಂದ್ರೆಯವರ ಕಾವ್ಯವನ್ನು ಕುರಿತ ಪುಸ್ತಕದಲ್ಲಿ ಪಶ್ಚಿಮದ ಕವಿಗಳನ್ನು ಕುರಿತು ಇಷ್ಟೆಲ್ಲ ಉದ್ದ ಬರೆಯಬೇಕಿತ್ತೆ ಅನ್ನುವುದು ಇಲ್ಲಿ ಏಳಬಹುದಾದೊಂದು ಪ್ರಶ್ನೆ. ಆ ಪ್ರಶ್ನೆಗೆ, ಪಶ್ಚಿಮದ ಆ ಕವಿಗಳಮೇಲಿನ ಕಂಡಿಕೆಗಳಲ್ಲಿಯೆ ಸಮಾಧಾನವಿದೆ ಎಂದುಕೊಂಡಿದ್ದೇನೆ. ಅಲ್ಲದೆ, ಕಡೆಗೆ ಮುನ್ನ ಎಂಬಲ್ಲಿಯೂ ಅದಕ್ಕೆ ಉತ್ತರ ನೀಡುವ ಪ್ರಯತ್ನಮಾಡಿದ್ದೇನೆ. ಅಷ್ಟಾದರೂ ಕೆಲವು ಓದುಗರಿಗೆ ಸಮಾಧಾನ ಆಗದಿರಬಹುದು. ಪ್ರತಿಯೊಬ್ಬರನ್ನೂ ಸಮಾಧಾನಪಡಿಸಲಂತೂ ಆಗುವುದಿಲ್ಲವಲ್ಲ!

ಸಾಹಿತ್ಯವನ್ನು ಹೇಗೆ ಓದಬೇಕು? ಹೇಗೆ ಅರ್ಥವಿಸಿಕೊಳ್ಳಬೇಕು? ನಿರ್ದಿಷ್ಟ ಕೃತಿ ಅಥವಾ ಕೃತಿ ಸಮುಚ್ಚಯವೊಂದರ ಸೃಜನದಮೇಲೆ ಇದ್ದಿರಬಹುದಾದ ಪ್ರಭಾವಗಳು ಯಾವುವು? ಇಂಥ ಪ್ರಶ್ನೆಗಳಿಗೆ ನಾವು ಕಂಡುಕೊಳ್ಳುವ ಉತ್ತರಗಳಲ್ಲಿ ಅಭಿಪ್ರಾಯಭೇದ ಇದ್ದೇ ಇರುತ್ತದೆ. ಇನ್ನು, ನಿರ್ದಿಷ್ಟ ದೇಶ, ಕಾಲ ಮತ್ತು ಸಂಸ್ಕೃತಿಯ ಸಾಹಿತ್ಯವೊಂದನ್ನು ಸವಿಯುವಲ್ಲಿ, ಅದಕ್ಕೂ ಬೇರೊಂದು ದೇಶ, ಕಾಲ ಮತ್ತು ಸಂಸ್ಕೃತಿಯ ಸಾಹಿತ್ಯಕ್ಕೂ ಹೋಲಿಕೆಯನ್ನು ಕಂಡು, ಆ ಮೂಲಕ ಆ ಸಾಹಿತ್ಯವನ್ನು ತುಸು ಹೆಚ್ಚು ಅರ್ಥವಿಸಿಕೊಳ್ಳಲು ನಡೆಸುವ ಯಾವುದೇ ಪ್ರಯತ್ನದ ವಿಷಯದಲ್ಲಿ ಅಂಥ ಅಭಿಪ್ರಾಯಭೇದವು ತುಸು ಹೆಚ್ಚಾಗಿಯೇ ಇರುತ್ತದೆ. ಇದ್ದುಕೊಳ್ಳಲಿ.

ಉಯ್ಯಾಲೆ ಸಂಕಲನದಲ್ಲಿ ನೂರೊಂದು ಕವಿತೆಗಳಿವೆ. ಅವುಗಳ ಪೈಕಿ ಬೇಂದ್ರೆಯವರು ಅಷ್ಟಷಟ್ಪದಿಗಳು ಎಂದು ಕರೆದುವು ಮೂವತ್ತೆರಡು ಕವಿತೆಗಳನ್ನು. ಈ ಪುಸ್ತಕದ ಉಪಶೀರ್ಷಿಕೆ ಅಂದತ್ತರ ಉಯ್ಯಾಲೆ ಎಂದಿದ್ದರೂ ಇಲ್ಲಿನ ಧೇನದ ಅಡಿಪಾಯವಾಗಿರುವುದು ಆ ಅಷ್ಟಷಟ್ಪದಿಗಳು ಮಾತ್ರ. ಆ ಅಷ್ಟಷಟ್ಪದಿಗಳ ಪೈಕಿಯೂ ಇಲ್ಲಿ ವಿವರವಾಗಿ ನಿರುಕಿಸಿ ನೋಡಿರುವುದು ಆರು ಅಷ್ಟಷಟ್ಪದಿಗಳನ್ನು ಮಾತ್ರ. ಹಾಗೇಕೆ ಎಂದು ಇನ್ನೇನು ಶುರುವಾಗಲಿರುವ ಇದು ಈಗ ಮೊದಲು ಎಂಬಲ್ಲಿ ಚುಟುಕಾಗಿ ಹೇಳಿದ್ದೇನೆ.

ಆ ಆರು ಅಷ್ಟಷಟ್ಪದಿಗಳು ಹಾಗೂ ಇನ್ನು ಕೆಲವು ಕವಿತೆಗಳನ್ನು ಉದಾಹರಿಸುವಾಗ, ಓದಿನ ಅನುಕೂಲಕ್ಕಾಗಿ, ಅವುಗಳ ಇಡಿಯ ಪಾಠವನ್ನು ಕೊಟ್ಟಿದೆ. ಆದರೂ, ಈ ಪುಸ್ತಕವನ್ನು ಓದುವಾಗ ಉಯ್ಯಾಲೆ ಸಂಕಲನದ ಒಂದು ಪ್ರತಿ ನಿಮ್ಮ ಪಕ್ಕದಲ್ಲಿಯೇ ಇದ್ದರೆ, ಕವಿತೆಯೊಂದು ಇಲ್ಲಿ ಚರ್ಚೆಗೆ ಒಳಗಾಗುತ್ತಿರುವಷ್ಟೂ ಹೊತ್ತು ಅದರ ಇಡಿಯ ಪಾಠವನ್ನು ನಿಮ್ಮ ಕಣ್ಣಮುಂದೆಯೇ ಇಟ್ಟುಕೊಳ್ಳುವುದು ಸಾಧ್ಯವಾಗುತ್ತದೆ.

ಪುಸ್ತಕದ ಹಲವೆಡೆ, ಮಂಡನೆಯ ಮುಖ್ಯಲಹರಿಗೆ ಪೂರಕವಾದ ವಿಷಯ, ವಿಚಾರ ಮತ್ತು ಸ್ಪಷ್ಟನೆಗಳನ್ನು ಅಡಿಟಿಪ್ಪಣಿಗಳಲ್ಲಿ ನೀಡಿದೆ. ಓದುಗರು ಅವುಗಳನ್ನು ಅಗತ್ಯ ಗಮನಿಸಬೇಕು. ಅದಕ್ಕಾಗಿಯೆ ಆ ಟಿಪ್ಪಣಿಗಳನ್ನು ಪುಸ್ತಕದ ಕೊನೆಯಲ್ಲಿ ಕೊಡದೇ ಅವುಗಳ ಓದು ಅಗತ್ಯವಾಗಿರುವ ಅಲ್ಲಲ್ಲಿನ ಪುಟದ ಅಡಿಯಲ್ಲಿಯೇ ಕೊಟ್ಟಿದೆ.

ಈ ಪುಸ್ತಕದಲ್ಲಿ ಪರಿಶೀಲಿಸಲಾಗಿರುವ ಇಲ್ಲವೆ ಎತ್ತಿ ಹೇಳಿರುವ ಬಹುತೇಕ ಕವಿತೆ, ಪ್ರಬಂಧ ಮತ್ತು ಬೇರೆ ಗದ್ಯಬರಹಗಳು (ವಿಶೇಷವಾಗಿ, ಇಂಗ್ಲಿಶ್ ನುಡಿಯಲ್ಲಿನವು) ಅಂತರ್ಜಾಲದಲ್ಲಿ ಉಚಿತವಾಗಿ ಸಿಕ್ಕುತ್ತವೆ. ಬೇಂದ್ರೆಯವರವೂ ಸೇರಿದಂತೆ ಕನ್ನಡ ಕವಿತೆಗಳೂ ಹಲವು ಸಿಕ್ಕುತ್ತವೆ. ಇಡಿಯಿಡೀ ಪುಸ್ತಕಗಳೂ ಸಿಕ್ಕುತ್ತವೆ. ಅವುಗಳನ್ನು ಹುಡುಕಿ, ಇಳಿಸಿಕೊಳ್ಳುವ- ಸಾತ್ತ್ವಿಕವೇ ಆದ- ವಾಮವಿದ್ಯೆ ತಿಳಿದಿರಬೇಕು, ಅಷ್ಟೆ. ಅದೆಲ್ಲವುದರ ಪ್ರಯೋಜನವನ್ನು ಓದುಗರು ಪಡೆಯಬಹುದು; ಪಡೆಯಬೇಕು.

ಮೊದಲಿಗೆ ಮುಂಚಿನ ಈ ಮಾತೇ ಉದ್ದವಾಯಿತು. ಮುಖ್ಯವಾಗಿ ಹೇಳಕೊಳ್ಳಬೇಕಾದ್ದೆಲ್ಲ ಇಲ್ಲಿಂದ ಮುಂದಿನ ಪುಟಗಳಲ್ಲಿದೆ.

ರಘುನಂದನ

೨೫ ಡಿಸೆಂಬರ್ ೨೦೨೩

ಏಸುಪ್ರಭುವು ಹುಟ್ಟಿದ ದಿನ

*************************

‍ಲೇಖಕರು avadhi

May 12, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: