ಬಿ ಎಂ ಹನೀಫ್
—
ಇದೊಂದು ಹಾಡು, ಅದ್ಯಾಕೋ ಗೊತ್ತಿಲ್ಲ, ನನ್ನ ಸುಖ, ದುಃಖ, ವಿಷಾದ, ಸಂತೋಷ, ಶಾಂತಿ, ಅಶಾಂತಿ ಎಲ್ಲದರ ಮಧ್ಯೆಯೂ ಸಂಗಾತಿಯಾಗಿ ಉಳಿದುಕೊಂಡು ಬಂದಿದೆ. 43 ವರ್ಷಗಳ ಬಳಿಕವೂ ಈ ಹಾಡಿನ ಎದೆ ಸೀಳುವ ಬನಿ, ವಿಷಾದದ ಧ್ವನಿ ಎಳ್ಳಷ್ಟೂ ಕುಂದಿಲ್ಲ.
ವಿಜಯಭಾಸ್ಕರ್ ಅವರ ಹದವಾದ ಸಂಗೀತ, ಎಸ್ಪಿಬಿ ಅವರ ದುಃಖದಲ್ಲಿ ಅದ್ದಿ ತೆಗೆದ ಸ್ವರ, ಲೋಕೇಶ್ ಅವರ ಎಂದೂ ಮರೆಯಲಾಗದ ಅಭಿನಯ, ಮಡುಗಟ್ಟಿದ ವಿಷಾದವನ್ನು ನೀಳವಾಗಿ ಉಸಿರಾಡಿದ ಲಂಕೇಶ್ ಮೇಷ್ಟ್ರ ಅಕ್ಷರಗಳು…!
ಹಸುರಿದ್ದ ಗಿಡಮರ, ಬೆಳ್ಳಗಿದ್ದ ಹೂ ಎಲ್ಲ
ಕೆಂಪಾದವೋ…
ಹುಲ್ಲುಬಳ್ಳಿಗಳೆಲ್ಲ ಕೆಂಪಾದವೋ
ನೂರು ಕಂದಮ್ಮಗಳು ಕೆಂಪಾದವೋ…
ಕನ್ನಡದ ಸಾಕ್ಷೀಪ್ರಜ್ಞೆಯಾಗಿ ಸದಾ ನೆನಪಾಗುತ್ತಿರುವ ಪಾಳ್ಯದ ಲಂಕೇಶರು ಬರೆದ ಈ ಹಾಡು ಇವತ್ತಿಗೂ ಎಷ್ಟೊಂದು ಪ್ರಸ್ತುತ!
ಗೌರಿಯವರ ಕೊಲೆಯಾಗಿ ಇವತ್ತಿಗೆ ಆರು ವರ್ಷ! ಕೊಲೆ ಮಾಡಿದವರ ಮೇಲಿನ ಆರೋಪ ತನ್ನನ್ನು ತಾನು ಸಾಬೀತು ಪಡಿಸಿಕೊಳ್ಳಲು ಕೋರ್ಟಿನಲ್ಲಿ ಹೆಣಗಾಡುತ್ತಿದೆ. ಕೊಲೆಗಡುಕರಿಗೆ ಶಿಕ್ಷೆ ಆಗುತ್ತದೋ, ಇಲ್ಲವೋ ಗೊತ್ತಿಲ್ಲ. ಶಿಕ್ಷೆ ಆಗುವುದಾದರೆ ಇನ್ನೂ ಎಷ್ಟು ವರ್ಷಗಳು ಹಿಡಿಯುತ್ತದೋ ಅದೂ ಗೊತ್ತಿಲ್ಲ.
ಡಾ.ರಾಜ್ ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದಾಗ ಅದಕ್ಕೆ ಸಹಕರಿಸಿದ 9 ಮಂದಿಯ ವಿರುದ್ಧ ತಮಿಳುನಾಡಿನ ನ್ಯಾಯಾಲಯದಲ್ಲಿ ಮೊಕದ್ದಮೆ ಬರೋಬ್ಬರಿ 18 ವರ್ಷಗಳ ಕಾಲ ನಡೆಯಿತು. ಆದರೆ ಅವರು ಯಾರಿಗೂ ಶಿಕ್ಷೆಯಾಗಲಿಲ್ಲ. ಬಿಡುಗಡೆಯಾದರು.
ಗೌರಿ ಕೊಲೆಗಡುಕರಿಗೆ ಶಿಕ್ಷೆ ಆಗಬಹುದೆ? ಯಾರನ್ನು ಕೇಳುವುದು? ಸರಕಾರವನ್ನೇ.. ನ್ಯಾಯಾಲಯವನ್ನೇ..?
ಜೊತೆಜೊತೆಗೆ ನಡೆದಾಗ ನೀಲ್ಯಾಗಿ ನಲಿದಂತ
ಕಾಯುತ್ತ ಕುಂತಾಗ ಕಪ್ಪಾಗಿ ಕವಿದಂತ
ನುಡಿನುಡಿದು ಹೋದಾಗ ಪಚ್ಚೆಯ ತೆನೆಯಂತ
ಭೂಮಿಯು ಎಲ್ಲಾನು ಕೆಂಪಾದವೂ
ನನಗಾಗ ಕೆಂಪಾದವೂ..
ಒಬ್ಬ ಗಾಯಕಿಯಾಗಿ…. ಕವಯಿತ್ರಿಯಾಗಿ…. ಎಲ್ಲಕ್ಕಿಂತ ಮಿಗಿಲಾದ ಭಾವಜೀವಿಯಾಗಿ… ಈ ಹಾಡನ್ನು ಹಾಡಿದ್ದೇನೆ… ಹೃದಯದಲ್ಲಿ ಆಗಾಗ್ಗೆ ಗುನುಗುತ್ತಿರುತ್ತೇನೆ.
ನನ್ನಂಥ ಆಸಂಖ್ಯಾತರೂ ಹೀಗೇ ಅನುಭವಿಸಿದ್ದಲ್ಲಿ ಆಶ್ಚರ್ಯವೇನೂ ಇಲ್ಲ…
ಧನ್ಯವಾದಗಳು!