ಕರ್ನಾಟಕ ಲೇಖಕಿಯರ ಸಂಘ ಕೊಡಮಾಡುವ ಎಚ್.ಎಸ್.ಪಾರ್ವತಿ ದತ್ತಿ ಪ್ರಶಸ್ತಿಯು ಪ್ರಕಟವಾಗಿದ್ದು 2022ನೇ ಸಾಲಿಗೆ ಹಿರಿಯ ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ ಮತ್ತು 2023ನೇ ಸಾಲಿಗೆ ವಿಮರ್ಶಕಿ ಡಾ. ಎಂ.ಎಸ್. ಆಶಾದೇವಿ ಅವರು ಆಯ್ಕೆಯಾಗಿದ್ದಾರೆ ಎಂದು ಸಂಘದ ಅಧ್ಯಕ್ಷರಾದ ಡಾ.ಎಚ್.ಎಲ್.ಪುಷ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿಯ ಮೊತ್ತ 10 ಸಾವಿರ ನಗದು ಮತ್ತು ಸ್ಮರಣ ಫಲಕಗಳನ್ನು ಒಳಗೊಂಡಿರುತ್ತದೆ.
ಹಿರಿಯ ಲೇಖಕಿ ಎಚ್.ಎಸ್. ಪಾರ್ವತಿ ಅವರು ಕರ್ನಾಟಕ ಲೇಖಕಿಯರ ಸಂಘದ ಸ್ಥಾಪಕ ಕಾರ್ಯದರ್ಶಿ, ನಂತರ ಅಧ್ಯಕ್ಷೆಯೂ ಆಗಿದ್ದು, 68ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದು, ಸಂಶೋಧನೆ ಮತ್ತು ವಿಚಾರ ಸಾಹಿತ್ಯಕ್ಕಾಗಿ ಕರ್ನಾಟಕ ಲೇಖಕಿಯರ ಸಂಘದಲ್ಲಿ ತಮ್ಮ ಹೆಸರಿನಲ್ಲಿ ದತ್ತಿ ಪ್ರಶಸ್ತಿಯನ್ನು ಇರಿಸಿದ್ದರು.
ಹಿರಿಯ ಲೇಖಕಿ ಡಾ. ವಸುಂಧರಾ ಭೂಪತಿ, ಉಪನ್ಯಾಸಕಿ ವತ್ಸಲಾ ಮೋಹನ್ ಅವರು ಆಯ್ಕೆ ಸಮಿತಿಯಲ್ಲಿದ್ದರು. ಈ ಸಂದರ್ಭದಲ್ಲಿ ಎಚ್.ಎಸ್. ಪಾರ್ವತಿ ಅವರ ಮಗಳು ಉಪನ್ಯಾಸಕಿ ಮತ್ತು ರಂಗಕಲಾವಿದೆ ಡಾ. ಎಂ.ಎಸ್. ವಿದ್ಯಾ ಹಾಗೂ ಸಂಘದ ಕಾರ್ಯದರ್ಶಿ ಭಾರತಿ ಹೆಗಡೆ ಉಪಸ್ಥಿತರಿದ್ದರು.
0 Comments