ಡಾ.ಸುಧಾರಾಣಿ ಕಿನ್ನಿಗೋಳಿ
—–
ನೆಲದ ಸಂಸ್ಕೃತಿಯನ್ನು ಗುರುತಿಸಿಕೊಂಡು , ಜನಸಂಸ್ಕೃತಿಯ ಮಿಡಿತಗಳನ್ನು ಗ್ರಹಿಸಿಕೊಂಡು, ಬಹುತ್ವದ ಮಾದರಿಗಳನ್ನು, ಅನನ್ಯತೆಗಳನ್ನು¬ ಹುಡುಕಿ, ಗೌರವಿಸಿಕೊಂಡು ಅವುಗಳನ್ನು ತನ್ನೊಳಗೆ ಒಳಗು ಮಾಡಿಕೊಳ್ಳುವಿಕೆಯ ಮೂಲಕ , ಜೀವ ಪ್ರೀತಿ ಮತ್ತು ಜೀವನ ಪ್ರೀತಿಯನ್ನು ಪೋಷಿಸಿಕೊಂಡು ಲೋಕ ಹಿತದ ಚರ್ಯೆಗಳಿಗೆ ದಿಟ್ಟವಾಗಿ, ಮುಕ್ತವಾಗಿ ತೆರೆದುಕೊಂಡವರು, ಮಾತನಾಡಿದವೆರು, ಬರೆದವರು, ಡಾ ಇಂದಿರಾ ಹೆಗ್ಗಡೆಯವರು.
ಇವರ ಸಮಗ್ರ ಬರಹಗಳ ಅವಲೋಕನ ಸಂಪುಟವೊಂದು ಪ್ರಟಣೆಗೊಳ್ಳಲಿದೆ. ಇದೊಂದು ಸಂಭ್ರಮ ನಮಗೆಲ್ಲರಿಗೂ. ಪ್ರೊ. ಬಿ. ಎ. ವಿವೇಕ ರೈ ಅವರ ಆಶಯ, ಮಾರ್ಗದರ್ಶನ ಮತ್ತು ಗೌರವ ಸಂಪಾದಕತ್ವದಲ್ಲಿ, ಡಾ.ಜ್ಯೋತಿ ಚೆಳ್ಯಾರು ಅವರ ಪ್ರಧಾನ ಸಂಪಾದಕದಲ್ಲಿ ಈ ಸಂಪುಟ ಬೆಳಕು ಕಾಣಲಿದೆ. ಈ ಕೆಲಸವನ್ನು ಆಗು ಮಾಡಿಸುವವರು ಎಸ್ ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್, (ರಿ) , ತುಳು ಸಾಹಿತ್ಯ ಪರಿಷತ್ , ಕರಾವಳಿ ಲೇಖಕಿಯರ ವಾಚಕಿಯರ ಸಂಘ, ಮತ್ತು ಸ್ಕೂಲ್ ಅಪ್ ಸೋಷಲ್ ವರ್ಕ್ ರೋಷನೀ ನಿಲಯ ಕನ್ನಡ ಸಂಘ ಮಂಗಳೂರು -ಹೀಗೆ ಈ ಐದು ಸಂಘಟನೆಗಳ ಸಹಯೋಗದಲ್ಲಿ ಅಕ್ಟೋಬರ್ 26, 2023 ಗುರುವಾರದಂದು ರೋಶನೀ ನಿಲಯ ಮಂಗಳೂರಿನ ಪೈ ಸಭಾಂಗಣದಲ್ಲಿ ಈ ಸಂಪುಟ ಲೋಕಾರ್ಪಣೆಗೊಳ್ಳಲಿದೆ.

ಇಂದಿರಾ ಹೆಗ್ಗಡೆಯವರ ಸಮಗ್ರ ಯೋಚನಾಕ್ರಮಗಳು ರೂಪು ತಳೆದಿರುವ ಕಾರಣಕ್ಕೆ ‘ನೆಲಮೂಲದ ನಡೆ: ಶೋಧ ಸ್ವಾದ ‘ ಎಂದು ಹೆಸರಿಸಲಾಗಿದೆ. ಕರ್ನಾಟಕ ಇತಿಹಾಸ ಇತಿಹಾಸ ಅಕಾಡೆಮಿಯ ಅಧ್ಯಕ್ಷರಾಗಿರುವ ಡಾ. ದೇವರ ಕೊಂಡಾರೆಡ್ಡಿಯವರು ಈ ಕೃತಿಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
ಇಂದಿರಾ ಹೆಗ್ಗಡೆಯವರ ಸಮಗ್ರ ಬರಹಗಳ ಅವಲೋಕನದ ಈ ಕೃತಿ ‘ಅತಿಕಾರೆ’ ಬಹಳ ಅರ್ಥಪೂರ್ಣ. ಅತಿಕಾರೆ ಕೃತಿಯಲ್ಲಿ ಐದು ಭಾಗಗಳಿವೆ. ‘ಅಗೆದಷ್ಟು ಆಳ’ (ಸಂಶೋಧನೆ) ‘ನಡೆದಷ್ಟು ಹಾದಿ’( ಪ್ರವಾಸ ಸಾಹಿತ್ಯ) ‘ಭಾವ ಅನುರಣನ’ (ಸೃಜನಶೀಲ ಸಾಹಿತ್ಯ) , ಅವರ ಒಟ್ಟು ಬರಹಗಳ ಸಮಗ್ರತೆಯನ್ನು ಬಿಂಬಿಸುವ ‘ಭಾವ ಪ್ರತಿಬಿಂಬ’ , ವ್ಯಕ್ತಿ ಅಭಿವ್ಯಕ್ತಿ’ ಬಹಳ ಮುಖ್ಯವಾದ ಅಂಶ.
ಇದು ಅಭಿನಂದನ ಗ್ರಂಥ ಅಲ್ಲ. ತುಳುನಾಡಿನ ಜನಪದ, ಸಾಂಸ್ಕೃತಿಕ, ಚರಿತ್ರೆ ಕುರಿತಾದ ಆಕರ ಗ್ರಂಥ, ಇಂದಿರಾ ಹೆಗ್ಗಡೆಯವರ ಬರಹಗಳ ಸಂಶೋಧನೆಗಳ ಕುರಿತಾದ ಸಾವಯವ ಚಿತ್ರಣ. ಎಳೆಯ ತಲೆಮಾರಿಗೆ , ನೆಲದ ಸಂಸ್ಕೃತಿ ಮತ್ತು ಸಂಶೋಧನೆಗಳ ಕುರಿತಾಗಿ ಕಾಳಜಿ, ಪ್ರೀತಿ, ಆಸಕ್ತಿ ಮೂಡಿಸುವ ರಹದಾರಿ. ಒಂದು ಕೈದೀವಿಗೆ.
0 ಪ್ರತಿಕ್ರಿಯೆಗಳು