ಆ ವಿದ್ಯಾರ್ಥಿನಿ… ಮತ್ತು ಕಲಿಯುತ್ತಲೇ ಇರುವ ನಾನು…

ಸಿದ್ಧರಾಮ ಕೂಡ್ಲಿಗಿ

ಎರಡು ವಾರಗಳ ಹಿಂದೆ…

ಕಾಲೇಜಿಗೆ ಯಥಾ ರೀತಿ ಹೋದೆ. ದ್ವಿತೀಯ ಪಿಯುಸಿಯ ಪ್ರವೇಶ ಆಗಲೇ ಆರಂಭಗೊಂಡಿದ್ದವು. ಮಾಸಿದ ಬಟ್ಟೆ ಧರಿಸಿದ ನಮ್ಮ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಅಲ್ಲಿನ ಮೆಟ್ಟಿಲ ಮೇಲೆ ಸುಮ್ಮನೆ ಕುಳಿತಿದ್ದಳು. ನಾನು ಯಥಾರೀತಿ ಸ್ಟಾಫ್ ರೂಂ ಗೆ ಹೋದೆ. ಆ ವಿದ್ಯಾರ್ಥಿನಿ ಎಷ್ಟೊತ್ತಾದರೂ ಹಾಗೇ ಕುಳಿತಿದ್ದುದರಿಂದ ಯಾಕೋ ಅನುಮಾನ ಬಂದು ಕರೆದೆ. ‘ಯಾಕಮ್ಮ ಏನು ಸಮಸ್ಯೆ…. ಎಷ್ಟೊತ್ತಾದರೂ ಇಲ್ಲೇ ಕೂತಿದೀಯಲ್ಲ?’ ಎಂದೆ. ‘ಏನಿಲ್ಲ ಸರ್’ ಎಂದಳು. ‘ಹೇಳು ಹೇಳು ಏನು ಸಮಸ್ಯೆ ?’ ಎಂದೆ. ಮತ್ತೆ ಮತ್ತೆ ಕೇಳಿದರೂ ಅದೇ ಉತ್ತರ.

ನಿಧಾನವಾಗಿ ವಿಶ್ವಾಸಕ್ಕೆ ತೆಗೆದುಕೊಂಡು ‘ಹೇಳಮ್ಮ’ ಎಂದೆ. ‘ಸರ್ ಫೀಸ್ ಕಟ್ಟಲಿಕ್ಕೆ ದುಡ್ಡಿಲ್ಲ ಆದರೆ ಅಡ್ಮಿಶನ್ ಮಾಡಿಸಬೇಕು’ ಎಂದಳು. ‘ಈಗ ಎಷ್ಟೂ ಇಲ್ಲವೇ ?’ಎಂದು ಕೇಳಿದೆ. ‘ಇಲ್ಲ ಸರ್’ ಎಂದಳು. ‘ಈಗ ಎಷ್ಟು ಕಟ್ಟೋದಿದೆ ?’ ಎಂದು ಕೇಳಿದೆ. ‘ಸರ್ ಒಂದು ಸಾವಿರ ರೂ. ಬೇಕು’ ಎಂದಳು. ನಾನು ಸಹಜವಾಗಿಯೇ ಕೇಳಿದೆ ‘ನಿನ್ನ ತಂದೆ ಏನು ಕೆಲಸ ಮಾಡ್ತಾರೆ, ಅವರು ದುಡ್ಡು ಕೊಟ್ಟಿಲ್ಲವಾ ?’ ಎಂದು ಕೇಳಿದೊಡನೆ ಅಳಲು ಆರಂಭಿಸಿದಳು.

ಅಯ್ಯೋ ಏನು ಸಮಸ್ಯೆಯೋ ಪಾಪ ಎಂದು ಸಮಾಧಾನಿಸಿ ಕೇಳಿದೆ ‘ಸಮಾಧಾನ ಮಾಡಿಕೋ ಅತ್ತರೆ ನಿನ್ನ ಸಮಸ್ಯೆ ಪರಿಹಾರ ಆಗಲ್ಲ, ಏನು ಎನ್ನುವುದು ನೇರವಾಗಿ ಹೇಳು’ ಎಂದೆ. ‘ಅಪ್ಪ ಬಸ್ ನಿಂದ ಬಿದ್ದು ಗಾಯ ಮಾಡಿಕೊಂಡಿದಾರೆ ಸರ್, ಆಸ್ಪತ್ರೆಯಲ್ಲಿದಾರೆ… ಇರೋ ದುಡ್ಡೆಲ್ಲ ಅಮ್ಮ ತೊಗೊಂಡು ಹೋಗಿದಾಳೆ ಆಸ್ಪತ್ರೆಗೆ…. ಅಪ್ಪನ್ನ ಕೇಳಿದೆ ಈಗ ಇಷ್ಟು ಕೊಡು ಅಂದರು ದುಡ್ಡಿಲ್ಲ’ ಎಂದು ಅಳಲು ಶುರು ಮಾಡಿದಳು. ‘ಏನು ಕೆಲಸ ಮಾಡ್ತಾರೆ ನಿಮ್ಮ ತಂದೆ ?’ ಎಂದು ಕೇಳಿದೆ. ‘ಪ್ರೈವೇಟ್ ಬಸ್ ಏಜೆಂಟರಾಗಿದ್ದಾರೆ ಸರ್’ ಎಂದಳು. ನನಗೆ ಏನು ಹೇಳಬೇಕೋ ತಿಳಿಯಲಿಲ್ಲ. ‘ಮತ್ತೆ ಈಗ ಮನೆಯಲ್ಲಿ ಯಾರಿದೀರಿ ? ಮನೆಯ ನಿರ್ವಹಣೆ ಹೇಗೆ ?’ ಎಂದು ಕೇಳಿದೆ. ‘ನಾನು ಹೊಲದಲ್ಲಿ ಕೂಲಿ ಕೆಲಸ ಮಾಡಬೇಕು ಸರ್, ಮೂರು ಜನ ತಂಗಿಯರಿದ್ದಾರೆ. ಅಮ್ಮ ಅಪ್ಪನನ್ನು ನೋಡಿಕೊಳ್ತಾಳೆ’ ಎಂದಳು. ನಾನಂತೂ ದು:ಖದಲ್ಲಿ ಮುಳುಗಿಹೋದೆ. ನನಗೆ ಮುಂದೇನು ಮಾತನಾಡಬೇಕು ಎಂಬುದೇ ತಿಳಿಯದಂತೆ ಗರ ಬಡಿದವನಂತೆ ಕುಳಿತೆ.

ಆದರೆ ಆಕೆಯಲ್ಲಿ ಒಂದು ಮನೆಯ ಜವಾಬ್ದಾರಿ ಹಾಗೂ ಓದು ಹಂಬಲ ಹೇಗಿದೆ ಎಂದು ತಿಳಿದುಕೊಳ್ಳಬೇಕೆಂಬ ಅದಮ್ಯ ಕುತೂಹಲ ಉಂಟಾಯಿತು. ಆಕೆಯ ವಿಚಾರಗಳನ್ನು ತಿಳಿದುಕೊಳ್ಳಬೇಕೆಂದು ಸಹಜವಾಗಿಯೇ ಕೇಳಿದೆ ‘ಮತ್ತೆ ಈಗ ಮುಂದೇನು ಮಾಡುವೆ ? ಫೀಸ್ ಗೆ ದುಡ್ಡಿಲ್ಲ, ಓದ್ತೀನಿ ಅಂತೀಯ ಮತ್ತೆ ಹೇಗೆ ?’ ಎಂದು ಕೇಳಿದೆ. ‘ಅದನ್ನೇ ಯೋಚ್ನೆ ಮಾಡ್ತಾ ಕೂತಿದ್ದೆ ಸರ್, ನಮ್ಮ ಸಂಬಂಧಿಕರಿದಾರೆ ಸರ್, ಅವರತ್ರ ಕೇಳಿ ಆಮೇಲೆ ಎರಡು ವಾರ ಹೊಲದಲ್ಲಿ ಕೆಲಸ ಮಾಡಿ, ಕೂಲಿ ಹಣ ಬಂದ ಮೇಲೆ ಅವರಿಗೆ ಕೊಡಬೇಕು ಅಂತ ಯೋಚಿಸ್ತಾ ಕೂತಿದ್ದೆ ಸರ್, ಅವರು ಕೊಡ್ತಾರೋ ಇಲ್ಲವೋ ಗೊತ್ತಿಲ್ಲ ಸರ್’ ನನ್ನ ಕಣ್ಣು ತುಂಬಿ ಬಂದು ಮುಂದೇನು ಮಾತನಾಡದೆ ‘ಆಯ್ತು, ಕಣ್ಣೊರೆಸಿಕೋ, ನಾನು ಕೊಡ್ತೀನಿ ಆದರೆ ಎಲ್ಲಿಯೂ ನನ್ನ ಹೆಸರು ಹೇಳಬಾರದು, ಮೊದಲು ಹೋಗಿ ಫೀಸ್ ಕಟ್ಟು’ ಎಂದೆ. ಆ ವಿದ್ಯಾರ್ಥಿನಿಯ ಕಣ್ಣಲ್ಲಿ ಹೊಳಪು ಬಂತು. ನನ್ನಿಂದ ಹಣ ಪಡೆದು ಫೀಸ್ ಕಟ್ಟಿ ‘ಸರ್ ಕಟ್ಟಿದೆ’ ಎಂದು ಹೇಳಿ ಹೋದಳು.

ನಿನ್ನೆ…………..
ಯಥಾರೀತಿ ಕಾಲೇಜಿಗೆ ಹೋಗಿ ಸ್ಟಾಫ್ ರೂಮಲ್ಲಿ ಕೂತಿದ್ದೆ. ಆ ವಿದ್ಯಾರ್ಥಿನಿ ಬಂದಳು. ‘ಏನಮ್ಮ ಯಾಕೆ ಕಾಲೇಜಿಗೆ ಬರ್ತಾ ಇಲ್ಲ ?’ ಎಂದು ಕೇಳಿದೆ. ‘ಕೂಲಿ ಕೆಲಸಕ್ಕೆ ಹೋಗ್ತಿದೀನಿ ಸರ್’ ಎಂದಳು. ‘ಸರಿ ಮನೆಯಲ್ಲಾದರೂ ಓದಿಕೋ ನಮ್ಮ ಕಾಲೇಜಿನಲ್ಲಿ ಲೈಬ್ರರಿಯಲ್ಲಿ ಬುಕ್ಸ್ ಇವೆ, ಬುಕ್ಸ್ ಬೇಕಿತ್ತಾ?’ ಎಂದೆ. ಆ ವಿದ್ಯಾರ್ಥಿನಿ ಏನನ್ನು ಮಾತನಾಡದೆ ತನ್ನ ಕೈಯಲ್ಲಿ ಸುರುಳಿ ಸುತ್ತಿದ್ದ ನೋಟುಗಳನ್ನು ನನ್ನ ಮುಂದೆ ಹಿಡಿದಳು ‘ಸರ್ ಅವತ್ತು ಫೀಸ್ ಗೆ ದುಡ್ಡು ಕೊಟ್ಟಿದ್ದರಲ್ಲ ಸರ್ ತೊಗೊಳ್ಳಿ’ ಎಂದಳು.

ಈ ಸಲವಂತೂ ನಾನು ಮೂಕವಿಸ್ಮಿತನಾಗಿ ದಿಕ್ಕು ತೋಚದವನಂತಾಗಿ ಕುಳಿತುಬಿಟ್ಟೆ. ಇದೆಂಥಾ ಗುಣ, ಇದೆಂಥಾ ಜವಾಬ್ದಾರಿಯುತ ನಡವಳಿಕೆ, ಇಷ್ಟು ಪುಟ್ಟ ವಯಸಿನಲ್ಲಿ ಎಷ್ಟೊಂದು ಯೋಚನೆಗಳು, ಇಂಥ ಕಷ್ಟ, ಬಡತನದಲ್ಲೂ ಎಂಥ ಪ್ರಾಮಾಣಿಕತೆ ಅಂದುಕೊಂಡು ‘ನಾನು ನಿನಗೆ ದುಡ್ದು ವಾಪಸು ಕೊಡು ಅಂತ ಹೇಳಿದೀನಾ? ಎಲ್ಲಿಂದ ತಂದೆ ಈ ದುಡ್ಡನ್ನು? ಎಲ್ಲಿಯಾದರೂ ಸಾಲ ಮಾಡಿದೆಯಾ ಮತ್ತೆ ?’ ಎಂದು ಕೇಳಿದೆ.

ಆ ವಿದ್ಯಾರ್ಥಿನಿ ಆತ್ಮವಿಶ್ವಾಸದಿಂದ ‘ಇಲ್ಲ ಸಾರ್ ಕೂಲಿ ಕೆಲಸ ಮಾಡಿ ಬಂದ ಹಣ ಸರ್ ಇದು, ನೀವು ನನಗೆ ಸಹಾಯ ಮಾಡಿದ್ರಿ ಅದನ್ನು ವಾಪಸು ಕೊಡೋಣ ಅಂತ ಬಂದೆ ಸರ್’ ಎಂದಳು. ‘ಬೇಡ ಬೇಡ ನೀನೇ ಇಟ್ಟುಕೋ ಏನಾದರೂ ಬುಕ್ಸ್ ತೆಗೆದುಕೋ’ ಎಂದೆ. ‘ಇಲ್ಲ ಸರ್ ಬುಕ್ಸ್ ಗೂ ಸಹ ದುಡ್ಡಿದೆ, ನೀವು ನನಗೆ ಮಾಡಿದ ಸಹಾಯವೇ ದೊಡ್ಡದು ಸರ್’ ಎಂದಳು. ತೊಗೊಳ್ಳಿ ಅಂತ ಅವಳು ಬೇಡ ಅಂತ ನಾನು ಕೊನೆಗೆ ಆ ವಿದ್ಯಾರ್ಥಿನಿ ಒಂದು ಮಾತು ಹೇಳಿದಳು ‘ಸರ್ ನಿಮಗೆ ಬೇಡವೆನಿಸಿದರೆ ಸರಿ ಇದನ್ನು ನನ್ನಂಥ ಮತ್ತೆ ಬೇರೆ ವಿದ್ಯಾರ್ಥಿನಿಯರಿದ್ದರೆ ಕೊಡಿ ಸರ್ ಸಹಾಯ ಆಗುತ್ತೆ’ ಅಂತ ಟೇಬಲ್ ಮೇಲಿಟ್ಟು ನಮಸ್ಕಾರ ಮಾಡಿ ಹೊರಟೇ ಹೋದಳು. ನನಗೆ ಮುಂದೆ ಏನೂ ಕಾಣದಂತೆ ಕಣ್ಣುಗಳು ಮಬ್ಬಾಗಿದ್ದವು, ಯಾಕೆಂದರೆ ಕಂಬನಿಯಲ್ಲಿ ನನ್ನ ಕಣ್ಣುಗಳು ತುಂಬಿಕೊಂಡಿದ್ದವು.

ಟೇಬಲ್ ಮೇಲಿದ್ದ ನೋಟುಗಳು ಅವಳ ಪ್ರಾಮಾಣಿಕತೆ, ಗೌರವ, ಕಾಯಕ ನಿಷ್ಠೆ, ಜವಾಬ್ದಾರಿಗಳನ್ನು ತಮ್ಮಲ್ಲೇ ಅಡಗಿಸಿಕೊಂಡಿವೆಯೇನೋ ಎಂಬಂತೆ ಸುರುಳಿ ಸುತ್ತಿಕೊಂಡು ಕುಳಿತಿದ್ದವು.

ಆಕೆಯ ಇಚ್ಛೆಯಂತೇ ಆ ಹಣವನ್ನು ಮತ್ತೆ ಅಂಥ ಅಪ್ಪಟ ಮೇರು ಗುಣದ ವಿದ್ಯಾರ್ಥಿನಿಗಾಗಿ ತೆಗೆದಿರಿಸಿರುವೆ.

ನನಗನಿಸಿತು… ತರಗತಿಯಲ್ಲಿ ನಾವು ಕಲಿಸುವುದಕ್ಕಿಂತಲೂ ಬದುಕು ಕಲಿಸುವ ಪಾಠವೇ ದೊಡ್ಡದು, ಅದೇ ನಮ್ಮೆಲ್ಲರಿಗೂ ದೊಡ್ದ ಗುರು ಎಂದು. ತುಂಬಾ ಇದೆ ನಾವು ಕಲಿಯುವುದು ತುಂಬಾ ಇದೆ… ಬದುಕಿನಲ್ಲಿ ಇಂಥ ಸಂಗತಿಗಳಿಂದಲೇ ನಾನು ಇನ್ನೂ ಕಲಿಯುತ್ತಲೇ ಇರುವೆ.

‍ಲೇಖಕರು Admin

September 8, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: