ಆ ಬಾಲಕನ ಮುಖದಲ್ಲಿ ನೋವಾಗಲಿ, ಬೇಸರವಾಗಲಿ ಇರಲಿಲ್ಲ..

*ಕೊನೆಯುಸಿರು ಸ್ವರಾಜ್ಯ, ಸ್ವಾತಂತ್ರ್ಯ ಅವಿಭಾಜ್ಯ*

ಮಣ್ಣೆ ಮೋಹನ್

ಕಲೆ: ಸಿದ್ಧು ಚಿತ್ರಗಾರ್

ಎದೆಗೆ ನಾಟಿದ್ದ ಗುಂಡು ಪ್ರಾಣಪಕ್ಷಿಯನ್ನು ಒಯ್ಯಲು ಕಾಯುತ್ತಿತ್ತು. ಆದರೆ ಆ ಬಾಲಕನ ಮುಖದಲ್ಲಿ ನೋವಾಗಲಿ, ಬೇಸರವಾಗಲಿ ಇರಲಿಲ್ಲ. ಬದಲಿಗೆ ಮಂದಹಾಸ ಹಾಗೂ ಧನ್ಯತೆಯ ಭಾವ ತುಂಬಿತ್ತು. ಜೀವನ್ಮರಣದ ಶಯ್ಯೆಯಲ್ಲಿ ಮಲಗಿದ್ದ ಬಾಲಕನನ್ನು ಪರೀಕ್ಷಿಸಲು ಬಂದ ವೈದ್ಯರಿಗೆ ಆತ ಬದುಕುವುದಿಲ್ಲವೆಂದು ಮನದಟ್ಟಾಯಿತು. ಕೂಡಲೇ ಕೇಳಿದರು “ನಿನಗೇನು ಬೇಕು ಮಗು?”. ಅವನ ಬಾಯಿಂದ ಗುಂಡಿನಂತೆಯೇ ತಟ್ಟನೆ ಉತ್ತರ ಬಂತು “ಸ್ವರಾಜ್ಯ ಬೇಕು”,

                 *.              *.              *

*ಅಸಹಕಾರ ಚಳುವಳಿ*

ಅದು ಬ್ರಿಟಿಷರ ವಿರುದ್ಧದ ಹೋರಾಟದ ಕಾಲಘಟ್ಟ. ತಮ್ಮ ವಿರುದ್ಧ ನಡೆಯುತ್ತಿದ್ದ ಎಲ್ಲಾ ಹೋರಾಟಗಳನ್ನು ಬ್ರಿಟಿಷರು ನಿರ್ದಯವಾಗಿ ಹೊಸಗಿಹಾಕುತ್ತಿದ್ದರು. ಭಾರತದ ಅನೇಕ ರಾಜರುಗಳೊಂದಿಗೆ ನೇರವಾಗಿ ಯುದ್ಧದಲ್ಲಿ ಭಾಗವಹಿಸಿ, ಅಪಾರ ಸಾವು-ನೋವಿಗೆ, ಕಷ್ಟ-ನಷ್ಟಕ್ಕೆ ತುತ್ತಾಗಿದ್ದ ಅನುಭವ ಅವರಿಗಿತ್ತು. ಆದ್ದರಿಂದ ಶಕ್ತಿಗಿಂತ ಯುಕ್ತಿ ಮೇಲೆಂದು ಕುಟಿಲೋಪಾಯಗಳಿಂದ ನಮ್ಮವರನ್ನು ಮಣಿಸುವ ವಿದ್ಯೆಯನ್ನು ಕರಗತಮಾಡಿಕೊಂಡಿದ್ದರು. ಹಾಗೆಯೇ ನಾನಾ  ಕಾನೂನುಗಳನ್ನು ಜಾರಿಗೆ ತಂದು ಹೋರಾಟಗಾರರ  ಕೈಕಟ್ಟಿಹಾಕುವ, ಸ್ಥೈರ್ಯ ಕುಂದಿಸುವ ಕುಟಿಲತೆಯು ವ್ಯವಸ್ಥಿತವಾಗಿ ನಡೆಯುತ್ತಿತ್ತು.

ಇದು ನಮ್ಮ ಹೋರಾಟಗಾರರ ಗಮನಕ್ಕೂ ಬಂತು. ನಮ್ಮಲ್ಲಿನ ಒಡಕು, ಸಂಪನ್ಮೂಲದ ಕೊರತೆ,ಆಯುಧಗಳ ಅಭಾವ ಮತ್ತು ವೈರಿಯ ವ್ಯವಸ್ಥಿತ ಕಾರ್ಯಾಚರಣೆಯಿಂದ ಕರ್ನಾಟಕದ ಸುರಪುರ, ಹಲಗಲಿ, ನರಗುಂದ, ಮುಂಡರಗಿಗಳಲ್ಲಿ ನಡೆದ ಬ್ರಿಟಿಷರ ವಿರುದ್ಧದ ದಂಗೆಗಳು ವಿಫಲವಾಗಿದ್ದವು. ಆದ್ದರಿಂದ ಯುದ್ಧ, ದಂಗೆಗಳಿಂದ ಹೊರತಾದ ಬುದ್ಧಿ ಯೋಜಿತವಾದ ಕಾರ್ಯತಂತ್ರಗಳಿಂದ ಬ್ರಿಟಿಷರಿಗೆ ತಕ್ಕ ಪಾಠ ಕಲಿಸಲು, ಬ್ರಿಟಿಷ್ ವಿರೋಧಿ ಚಳುವಳಿ ನಿರತರ ಗುಂಪು ನಿರ್ಧರಿಸಿತು. ಅವರು ನಿರುಮ್ಮಳವಾಗಿ ಆಡಳಿತ ನಡೆಸದಂತೆ ಮಾಡಿ, ಅವರ ನೆಮ್ಮದಿಭಂಗ ಮಾಡುವ ಯೋಜನೆ ರೂಪಿಸಲಾಯಿತು. ಅದೇ ಅಸಹಕಾರ ಚಳುವಳಿಗೆ ನಾಂದಿ ಹಾಡಿತು.

*ದಂಡಿಯಾತ್ರೆ*

1930ರ ಏಪ್ರಿಲ್ 6ರಂದು ಗಾಂಧೀಜಿಯವರು ಕರೆನೀಡಿದ ದಂಡಿಯಾತ್ರೆಗೆ ದೇಶದೆಲ್ಲೆಡೆಯಿಂದ ಹೋರಾಟಗಾರರು  ಭಾಗವಹಿಸಿದ್ದರು. ಕರ್ನಾಟಕದಿಂದ ದಂಡಿ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಏಕೈಕ ವ್ಯಕ್ತಿ ಹಾವೇರಿ ಜಿಲ್ಲೆಯವರಾದ ಮೈಲಾರ ಮಹಾದೇವಪ್ಪನವರು. ಆಗ ಅವರಿಗೆ ಕೇವಲ 19 ವರ್ಷ ವಯಸ್ಸು. ಸತ್ಯಾಗ್ರಹವನ್ನು ವಿಫಲಗೊಳಿಸಲು ಬ್ರಿಟಿಷ್ ಸರ್ಕಾರ ಅನೇಕರನ್ನು ಬಂಧಿಸಿತು. ಆದರೆ ಚಳುವಳಿಯ ಕಿಡಿ ವ್ಯಾಪಕಗೊಳ್ಳತೊಡಗಿತು. ವಿದ್ಯಾರ್ಥಿಗಳು, ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಚಳುವಳಿಗೆ ಕೈಜೋಡಿಸಿದರು. ಚಳುವಳಿಯು ಕಾಳ್ಗಿಚ್ಚಿನಂತೆ ಎಲ್ಲೆಡೆ ಪಸರಿಸಿ, ಬ್ರಿಟಿಷರ ವಿರುದ್ಧ ಕರನಿರಾಕರಣೆ, ವಸ್ತ್ರ ಬಹಿಷ್ಕಾರದಂತಹ ಆಯಾಮವನ್ನು ಪಡೆಯಿತು.

ಇದರಿಂದ ಬ್ರಿಟಿಷರ ನೆಮ್ಮದಿ ಕದಡಿ, ಸ್ವಲ್ಪ ಮಣಿದಂತೆ ನಾಟಕವಾಡಿದರು. ಅದರಂತೆ 1935ರಲ್ಲಿ  ಪ್ರಾಂತೀಯ ಸ್ವಯಂಅಧಿಕಾರವನ್ನು ನಮಗೆ ನೀಡಿದರು. 1937ರಲ್ಲಿ ಹೊಸ ಪ್ರಾಂತೀಯ ಸರ್ಕಾರಗಳ ರಚನೆಯಾಯಿತು. ಆದರೆ ಅದು ಹೆಚ್ಚು ದಿನ ನಡೆಯಲಿಲ್ಲ. 1939ರ ಎರಡನೇ ಮಹಾಯುದ್ಧ ಸಂದರ್ಭದಲ್ಲಿ ನಮ್ಮ ಒಪ್ಪಿಗೆ ಪಡೆಯದೆ, ಬ್ರಿಟಿಷರು ನಮ್ಮನ್ನು ಯುದ್ಧದ ಭಾಗವಾಗಿಸಿದರು. ಇದನ್ನು ವಿರೋಧಿಸಿ ಪ್ರಾಂತೀಯ ಸರ್ಕಾರಗಳು ವಿಸರ್ಜನೆಗೊಂಡವು.

*ಕ್ವಿಟ್ ಇಂಡಿಯಾ ಚಳುವಳಿ*

1942 ರಲ್ಲಿ “ಬ್ರಿಟಿಷರೇ ಭಾರತ ಬಿಟ್ಟು ತೊಲಗಿ” ಚಳುವಳಿ ಆರಂಭವಾಯಿತು. ಇದು ದೇಶದೆಲ್ಲೆಡೆಯಂತೆ ನಮ್ಮ ರಾಜ್ಯದಲ್ಲೂ ಪ್ರಬಲ ಚಳುವಳಿಯಾಗಿ ರೂಪ ತಾಳಿತು. ಇದನ್ನು ಮಣಿಸಲು ಬ್ರಿಟಿಷರು ಇನ್ನಿಲ್ಲದಂತೆ ಶ್ರಮಿಸಿದರು. ಗಾಂಧೀಜಿಯವರ ಬಂಧನವಾಯಿತು. ಆನಂತರ ಚಳುವಳಿ ಕಾವು ಪಡೆಯಿತು. ಎರಡನೇ ಸಾಲಿನ ನಾಯಕರು ಭೂಗತರಾಗಿದ್ದುಕೊಂಡೇ ಚಳುವಳಿಯನ್ನು ಮುನ್ನಡೆಸಿದರು.ಅವರಲ್ಲಿಯೂ ಅನೇಕರ ದಸ್ತಗಿರಿಯಾಯಿತು. ಸಾಮಾನ್ಯ ಹೋರಾಟಗಾರರೇ ಮುಂದೆ ನಿಂತು ಚಳುವಳಿ ಮುನ್ನಡೆಸಿದರು. ಹಾವೇರಿಯ ಮೈಲಾರ ಮಹಾದೇವಪ್ಪನವರು ಯುವಕರನ್ನು ಸಂಘಟಿಸಿ, ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಉಗ್ರ ಹೋರಾಟಕ್ಕೂ ಇಳಿದರು. ಹಾಗೆ ಹೋರಾಡುತ್ತಲೇ ಅವರು ೧೯೪೩ ಮಾರ್ಚ ೩೧ರಂದು ಸರ್ಕಾರಿ ಕಚೇರಿಯ ಮೇಲೆ ದಾಳಿ ಮಾಡಿದಾಗ, ಪೋಲೀಸರ ಗುಂಡಿಗೆ ಬಲಿಯಾದರು. ಇವರೊಂದಿಗೆ ಹಿರೇಮಠ ವೀರಯ್ಯ ಹಾಗು ಮಡಿವಾಳ ತಿರಕಪ್ಪನವರೂ ಸಹ ಬಲಿದಾನವಾದರು.

1943 ರಿಂದ 1945 ರವರೆಗೆ ಬ್ರಿಟಿಷರ ವಿರುದ್ಧ ಗೆರಿಲ್ಲಾ ಹೋರಾಟವನ್ನು ಆರಂಭಿಸಿ, ರಾಷ್ಟ್ರಮಟ್ಟದಲ್ಲಿ ಸುದ್ದಿಯಾದವರು ಬೆಳಗಾವಿಯ ಸಂಪಗಾಂವ ಚನ್ನಪ್ಪ ವಾಲಿಯವರು. ಟಪಾಲು ವಾಹನವನ್ನು ತಡೆದು ಟಪಾಲನ್ನು ಲೂಟಿ ಮಾಡುವುದು, ಅಂಚೆ ಡಬ್ಬಗಳನ್ನು ನಾಶಪಡಿಸುವುದು, ವಿದ್ಯುತ್ ಕಂಬ, ಟೆಲಿಫೋನ್ ಕಂಬಗಳನ್ನು ಉರುಳಿಸುವುದು, ತೆರಿಗೆ ಸಂಗ್ರಹ ಕೇಂದ್ರದ ಮೇಲೆ ದಾಳಿ ಮತ್ತು ಹಣ ದೋಚುವುದು, ಸೇತುವೆಗಳನ್ನು ಉರುಳಿಸುವುದು, ರೈಲ್ವೆ ನಿಲ್ದಾಣಕ್ಕೆ ಬೆಂಕಿ ಹಚ್ಚುವುದು-ಈ ರೀತಿಯ ಗೆರಿಲ್ಲಾ ಹೋರಾಟದ ಮೂಲಕ ಬ್ರಿಟಿಷರಿಗೆ ದುಃಸ್ವಪ್ನವಾಗಿದ್ದರು. ಚೆನ್ನಪ್ಪ ವಾಲಿಯವರ ಬಂಧನಕ್ಕೆ 800 ಪೊಲೀಸರು ಹುಡುಕಾಟ ನಡೆಸುತ್ತಿದ್ದರು ಎಂದರೆ ಅವರ ಹೋರಾಟದ ತೀವ್ರತೆ ಎಷ್ಟರಮಟ್ಟಿಗೆ ಇತ್ತು ಎಂಬುದು ತಿಳಿಯುತ್ತದೆ. ಹಾಗೆಯೇ ಬ್ರಿಟಿಷರ ಸೈನ್ಯದ ತುಕಡಿ ಸಂಚರಿಸುತ್ತಿದ್ದ ರೈಲನ್ನೇ ಅಡ್ಡಗಟ್ಟಲು ಪ್ರಯತ್ನಿಸಿ ಅವರ ಗುಂಡಿಗೆ ಎದೆಯೊಡ್ಡಿದವರು ಹಲ್ಲೂರು ನಾಗಪ್ಪ. ಎಲ್ಲರಿಗಿಂತ ದುರಂತ ಬಲಿದಾನ 13 ವರ್ಷದ ಬಾಲಕ ನಾರಾಯಣ ಮಹಾದೇವ ದೋನಿಯದು.

*ಬಾಲಕನ ಹೋರಾಟ ಕಹಳೆ*

ಅಗಸ್ಟ್ 15, 1942ರ ಶನಿವಾರ ಮುಂಜಾನೆ ಚಳುವಳಿಯ ಕಾವು ನಾಡಿನಾದ್ಯಂತ ಹಬ್ಬಿತ್ತು. ಇದಕ್ಕೆ ಹುಬ್ಬಳ್ಳಿಯು ಹೊರತಾಗಿರಲಿಲ್ಲ. ಕಾಲೇಜು ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಹೆಚ್ಚಿನ ಸಂಖ್ಯೆಯಲ್ಲಿ ಚಳುವಳಿಯಲ್ಲಿ ಭಾಗವಹಿಸಿದ್ದರು. ಹಾಗಾಗಿ ಶಾಲಾ-ಕಾಲೇಜುಗಳು ಬಾಗಿಲು ಮುಚ್ಚಿದ್ದವು. ಪುಟಾಣಿ ಮಕ್ಕಳು ತಮ್ಮ ತಮ್ಮ ಮನೆಗಳ ವಟಾರಗಳಲ್ಲಿ ಆಟವಾಡುತ್ತಿದ್ದರು. ಕೆಲವು ಗೆಳೆಯರು ನಾರಾಯಣ ದೋನಿಯ ಮನೆಗೆ ಬಂದು ಆಟಕ್ಕೆ ಆಹ್ವಾನಿಸಿದರು. ಶ್ವೇತವಸ್ತ್ರವನ್ನು ತೊಟ್ಟು ಎಲ್ಲಿಗೋ ಹೊರಡಲು ಸನ್ನದ್ದನಾಗಿದ್ದ ಅವನನ್ನು “ಇಂದು ಆಟಕ್ಕೆ ಬರದೆ ಎಲ್ಲಿಗೆ ಹೊರಟಿರುವೆ?” ಎಂದರು. “ನಾನಿಂದು ಆಟಕ್ಕೆ ಬರುವುದಿಲ್ಲ, ಹೋರಾಟಕ್ಕೆ ಹೋಗುತ್ತಿದ್ದೇನೆ” ಎಂದ ನಾರಾಯಣ. ಈ ಸದ್ದು ಕೇಳಿ ಒಳಗಿನಿಂದ ಅವನ ತಾಯಿ ಬಂದು “ಮಗು ಶಾಲೆಯಿಲ್ಲ, ಆಟಕ್ಕೆ ಹೋಗುತ್ತಿಲ್ಲ. ಮತ್ತೆಲ್ಲಿಗೆ ಹೊರಟಿರುವೆ?” ಎಂದಳು ಕುತೂಹಲದಿಂದ.

ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿಯುತ್ತಾ ಮಗ ಹೇಳಿದ. “ದುರ್ಗದ ಬಯಲಲ್ಲಿ ನಡೆಯುತ್ತಿರುವ ಕ್ವಿಟ್ ಇಂಡಿಯಾ ಹೋರಾಟಕ್ಕೆ ಹೋಗುತ್ತಿದ್ದೇನೆ ಅಮ್ಮ” ಮಗನ ದ್ವನಿಯಲ್ಲಿದ್ದ ದೃಢತೆ ಕಂಡು ಆಶ್ಚರ್ಯದಿಂದ ತಾಯಿ ಪ್ರಶ್ನಿಸಿದಳು, “ನೀನಿನ್ನೂ ಚಿಕ್ಕವನು ಮಗು, ಆಟ ಆಡುವ ವಯಸ್ಸಲ್ಲಿ ಹೋರಾಟ ಬೇಕೆ?”.

“ಭಾರತಾಂಬೆಯನ್ನು ಬಂಧನದಿಂದ ಮುಕ್ತಿಗೊಳಿಸಲು ದೊಡ್ಡವರು, ಚಿಕ್ಕವರೆಲ್ಲರೂ ಕೈಗೂಡಿಸಬೇಕಲ್ಲವೇ ಅಮ್ಮ?”
ಬಾಲಕನ ದೃಢಮಾತು ಅಮ್ಮನ ಬಾಯಿ ಕಟ್ಟಿತು. ಹರಸುವುದನ್ನು ಬಿಟ್ಟು ಆಕೆಗೆ ಅನ್ಯಮಾರ್ಗವೇ ಇರಲಿಲ್ಲ. “ನಿನ್ನ ಉದ್ದೇಶ ಸಫಲವಾಗಲಿ ಹೋಗಿ ಬಾ ಮಗನೇ” ಎಂದು ಹರಸಿ, ಹಾರೈಸಿ ಕಳಿಸಿದಳು.

ತ್ರಿವರ್ಣ ಧ್ವಜವನ್ನು ಎದೆಗಾನಿಸಿ, ಗಾಂಧಿ ಟೋಪಿ ಧರಿಸಿದ್ದ ತಲೆಯನ್ನು ದೃಢತೆಯಿಂದ ಮೇಲೆತ್ತಿ, ಎದೆಯುಬ್ಬಿಸಿ ಬರುತ್ತಿರುವ ಶ್ವೇತವಸ್ತ್ರಧಾರಿ ಪುಟಾಣಿಯ ಕಂಡು ಹುಬ್ಬಳ್ಳಿಯ ದುರ್ಗದ ಬಯಲಲ್ಲಿ ನೆರೆದಿದ್ದ ಚಳುವಳಿಗಾರರು  ಒಂದು ಕ್ಷಣ ಅವಕ್ಕಾದರು. ಕೂಡಲೇ ಅವನ ದೇಶ ಭಕ್ತಿಗೆ ಮೆಚ್ಚಿ ಶಹಭ್ಬಾಸ್ ಎಂದರು. ಅಂದಿನ ಹೋರಾಟದ ಕೇಂದ್ರಬಿಂದುವಾಗಿ ಅವನನ್ನೇ ಪ್ರತಿಬಿಂಬಿಸಿದರು.

ಪುಟಾಣಿಯ ನೇತೃತ್ವದಲ್ಲಿ ಅಂದಿನ ಮೆರವಣಿಗೆ ದುರ್ಗದ ಬಯಲಿಂದ ಹೊರಟಿತ್ತು. ‘ಬೋಲೋ ಭಾರತ್ ಮಾತಾಕಿ’ ಎಂಬ ಘೋಷಣೆ ಮುಗಿಲು ಮುಟ್ಟಿತ್ತು.. ಕೆಲವೇ ಕ್ಷಣ…. ಅದಕ್ಕೆಂದೇ ಕಾದಿದ್ದವರಂತೆ ದುರುಳ ಬ್ರಿಟಿಷ್ ಸೈನ್ಯ ಚಳುವಳಿಗಾರರ ಮೇಲೆ ಗುಂಡು ಹಾರಿಸಿತು. ಅನೇಕರು ಹೆದರಿ ದಿಕ್ಕಾಪಾಲಾಗಿ ಓಡಿಹೋದರು. ಅನೇಕರು ಕುಸಿದು ಬೀಳತೊಡಗಿದರು. ಆದರೆ ಬಾಲಕ ನಾರಾಯಣ ಧೋನಿ ತ್ರಿವರ್ಣಧ್ವಜದೊಂದಿಗೆ ಹಾಗೆಯೇ ನಿಂತಿದ್ದ, ಗುಂಡಿಗೆ ಹೆದರದೆ ಸಾವಿಗೆ ಬೆದರದೆ.

*ಸ್ವರಾಜ್ಯ ಬೇಕು*

ಅನೇಕರನ್ನು ಬಲಿ ತೆಗೆದುಕೊಳ್ಳುತ್ತಿದ್ದ ಬ್ರಿಟಿಷರ ಬಂದೂಕಿ ನಿಂದ ಹೊರಟ ಗುಂಡೊಂದು ನಾರಾಯಣ ಧೋನಿಗೆ ನಾಟಿತು. ಕುಸಿದುಬಿದ್ದ ಅವನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದರು. ಆದರೆ ಎದೆಗೆ ನಾಟಿದ್ದ ಗುಂಡು ಪ್ರಾಣಪಕ್ಷಿಯನ್ನು ಒಯ್ಯಲು ಕಾಯುತ್ತಿತ್ತು. ಆದರೆ ಆ ಬಾಲಕನ ಮುಖದಲ್ಲಿ ನೋವಾಗಲಿ, ಬೇಸರವಾಗಲಿ ಇರಲಿಲ್ಲ. ಬದಲಿಗೆ ಮಂದಹಾಸ ಹಾಗೂ ಧನ್ಯತೆಯ ಭಾವ ತುಂಬಿತ್ತು. ಜೀವನ್ಮರಣದ ಶಯ್ಯೆಯಲ್ಲಿ ಮಲಗಿದ್ದ ಬಾಲಕನನ್ನು ಪರೀಕ್ಷಿಸಲು ಬಂದ ವೈದ್ಯರಿಗೆ ಆತ ಬದುಕುವುದಿಲ್ಲವೆಂದು ಮನದಟ್ಟಾಯಿತು. ಕೂಡಲೇ ಕೇಳಿದರು “ನಿನಗೇನು ಬೇಕು ಮಗು?”. ಅವನ ಬಾಯಿಂದ ಗುಂಡಿನಂತೆಯೇ ತಟ್ಟನೆ ಉತ್ತರ ಬಂತು “ಸ್ವರಾಜ್ಯ ಬೇಕು”. ನೆರೆದಿದ್ದವರ ಕಣ್ಣಾಲಿಗಳು ನೀರಾದವು. ಬಾಲಕನ ಕಣ್ಣಾಲಿಯ ರೆಪ್ಪೆಮುಚ್ಚಿ, ಅವನ ಪ್ರಾಣಪಕ್ಷಿ ತಾಯಿ ಭಾರತಾಂಬೆಯ ಮಡಿಲು ಸೇರಿತು. ಆ ಮೂಲಕ ಅಂದಿನಿಂದ ಐದು ವರ್ಷಕ್ಕೆ ಸರಿಯಾಗಿ ನಮ್ಮ ದೇಶಕ್ಕೆ ಸಿಕ್ಕಿದ ಸ್ವಾತಂತ್ರ್ಯದ ಚರಿತ್ರೆಯ ಪುಟ ಸೇರಿತು.

‍ಲೇಖಕರು avadhi

August 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: