ಆ ಪಾದಗಳಿಗೆ ನಮಿಸುತ್ತಾ..

‘Who is he to Hekuba and Hekuba to him?’ ಅಂತ ಉದ್ಘರಿಸಿದ್ದು ಶೇಕ್ಸ್ಪಿಯರ್ . ಜಗನ್ನಾಟಕವನ್ನು ಎಲ್ಲರ ಮುಂದಿಟ್ಟಾತ. ಶೇಕ್ಸ್ಪಿಯರ್ ಬರೆದ ನಾಟಕ ನೋಡುತ್ತಾ ಹಳ್ಳಿಯವನೊಬ್ಬ ಬಿಕ್ಕಿ ಬಿಕ್ಕಿ ಅಳುತ್ತಾನೆ. ಆಗ ಶೇಕ್ಸ್ಪಿಯರ್ ಕೇಳುತ್ತಾನೆ -‘ಆ ನಾಟಕದ ಪಾತ್ರವಾದ ಹೆಕೋಬಾನಿಗೂ , ಎಲ್ಲೂ ದೂರದ ಈ ಹಳ್ಳಿಯವನಿಗೂ ಏನಾಗಬೇಕು?’ -ಇದನ್ನು ಹೇಳಿದ್ದು ಸು ರಂ ಎಕ್ಕುಂಡಿ.

ನನ್ನನ್ನು ಮುಂದೆ ಕೂಡಿಸಿಕೊಂಡು ಎಕ್ಕುಂಡಿ ತಮ್ಮ ಅದೇ ಬೊಚ್ಚುಬಾಯಿಯ ನಗೆಯಲ್ಲಿ, ಕಣ್ಣರಳಿಸಿಕೊಂಡು ಹೇಳಿದ್ದರು. ಅದಕ್ಕೆ ಕಾರಣವಿತ್ತು. ನಾನು ರೊಮೇನಿಯಾದ ಜಿಮ್ನಾಸ್ಟ್ ನದಿಯಾ ಕಮಾನ್ಸೆಯ ಬಗ್ಗೆ ಕವನ ಬರೆದಿದ್ದೆ. ಎಲ್ಲಿಯ ರೊಮೇನಿಯಾ, ಎಲ್ಲಿಯ ನಾನು- ಎಲ್ಲಿಯ ನದಿಯಾ ಎಲ್ಲಿಯ ನಾನು? ತಕ್ಷಣ ಎಕ್ಕುಂಡಿ ಈ ಹೆಕೂಬಾ ಕಥೆ ಹೇಳಿದರು. ಅವರು ಅಷ್ಟಕ್ಕೇ ಮುಗಿಸಲಿಲ್ಲ. ಜಗತ್ತಿನಾದ್ಯಂತ ಹೀಗೆ ಕಾಣದ ತಂತುಗಳಿರುತ್ತವೆ. ಅದು ನಮ್ಮನ್ನು ಇನ್ಯಾರೊಂದಿಗೋ ಬೆಸೆದಿರುತ್ತದೆ ಎಂದಿದ್ದರು.

ದೇವನೂರು ಮಹಾದೇವ ಕೂಡಾ ಹಾಗೆಯೇ.. ಕನ್ನಡದ ಓದು ಬಲ್ಲ ಪ್ರತಿಯೊಬ್ಬರಿಗೂ ಹಾಗೂ ದೇವನೂರರಿಗೂ ಆ ರೀತಿಯ ಕಾಣದ ಎಳೆಗಳ ಬಂಧವಿದೆ. ದೇವನೂರು ಯಾರು ಎಂದು ನೋಡದವರೂ, ಅವರ ಮಾತು ಕೇಳದವರೂ ಸಹಾ ಅವರ ಬರವಣಿಗೆಯ ಮೂಲಕ ಅವರನ್ನು ಧಕ್ಕಿಸಿಕೊಂಡಿದ್ದಾರೆ. ದೇವನೂರು ನಮ್ಮ ಮನೆಯವರೇ  ಏನೋ ಎಂದು ಸಂಭ್ರಮಿಸಿದ್ದಾರೆ. ‘ಸಂಬಂಜ ಅನ್ನೋದು ದೊಡ್ಡದು ಕನಾ..’ ಎಂದು ದೇವನೂರು ಉದ್ಘಾರವೆತ್ತಿದರಲ್ಲಾ ಆ ಸಂಬಂಜವೇ ನಮ್ಮನ್ನೂ ದೇವನೂರನ್ನೂ ಇನ್ನಿಲ್ಲದಂತೆ ಬೆಸೆದಿದೆ.

ದೇವನೂರು ನಮ್ಮೊಳಗಿನ ಕಣ್ಣು. ನಮ್ಮೊಳಗಿರುವ ಒಬ್ಬ ನ್ಯಾಯವಾದಿ, ನಮ್ಮೊಳಗಿರುವ ಪೋಲೀಸ್. ನಮ್ಮೊಳಗಿರುವ ಅಂತಸ್ಸಾಕ್ಷಿ ಎಂಬ ನ್ಯಾಯಾಧೀಶನನ್ನು ಪೊಲೀಸನನ್ನು ನಾವು ಕೊಂದುಕೊಂಡಾಗ ಸಮಾಜ ಎನ್ನುವುದು ದೊಡ್ಡ ದುಡ್ಡಿನ ಮೂಟೆಯಾಗಿ ಕಾಣುತ್ತದೆ. ಸಮಾಜ ಎನ್ನುವುದು ಹಲವು ಸಂಬಂಜಗಳ ಮೊತ್ತವಾಗಿ ಕಾಣುವುದೇ ಇಲ್ಲ. ಹಾಗಾಗಿಯೇ ನಮ್ಮೊಳಗೇ ಅಂತಸ್ಸಾಕ್ಷಿ ಎಂಬ ದೇವನೂರು ಇದ್ದಾರೆ.

ದೇವನೂರು ಹಾಗೆ ಸಮಾಜವನ್ನು ಸ್ವಸ್ಥವಾಗಿಡಲು ಬರೆದರಲ್ಲಾ, ಆ ಎಲ್ಲವೂ ಈಗ ಪ್ರಕಟವಾಗುತ್ತಿದೆ. ಹೆಸರು- ‘ಎದೆಗೆ ಬಿದ್ದ ಅಕ್ಷರ’. ದೇವನೂರು ಅವರ ಕಥೆಕಾದಂಬರಿಗಳದ್ದೇ ಒಂದು ತೂಕವಾದರೆ ಅವರ ಚಿಂತನೆಗಳದ್ದೇ ಇನ್ನೊಂದು ತೂಕ. ‘ಅವಧಿ’ಯಲ್ಲಿ ದೇವನೂರು ಅವರ ಅನೇಕ ಬರಹಗಳು ಆಗಿಂದಾಗ್ಗೆ ಪ್ರಕಟವಾಗಿದೆ. ಚರ್ಚೆಯನ್ನು ಹುಟ್ಟುಹಾಕಿದೆ. ನಮ್ಮೊಳಗನ್ನು ನೋಡಲು ಸಹಾಯ ಮಾಡಿದೆ. ಈಗ ಮೂಡಿರುವುದು ವಿಶೇಷಾಂಕ.

ಈ ವಿಶೇಷಾಂಕ ಸಿದ್ಧ ಮಾಡಲು ನಿಜಕ್ಕೂ ಹುಮ್ಮಸ್ಸು ಬಂದಿದ್ದು ನ ರವಿಕುಮಾರ್ ಹಾಗೂ ಪಿ ಚಂದ್ರಿಕಾ ಜೋಡಿಯಿಂದ.

ಇಲ್ಲಿನ ಕೆಲವು ಬರಹಗಳಿಗೆ ನಲವತ್ತಕ್ಕೂ ಹೆಚ್ಚು ವಯಸ್ಸಾಗಿದೆ. ಇದು ಒಂದು ರೀತಿಯಲ್ಲಿ ಉತ್ಖನನ, ಪಯಣ, ಹಳೆ ಮನೆ ರಿಪೇರಿಯಂತೆ.. ಎಂದು ದೇವನೂರು ಅವರು ತಮ್ಮ ಕೃತಿಯಲ್ಲಿ ಬರೆದುಕೊಂಡಿದ್ದಾರೆ. ಅವರ ಹಳೆ ಮನೆಯ ನೆರಳನ್ನು ಬಯಸುವ ಜೀವಿಗಳು ಅದೆಷ್ಟೋ.. ಇರಲಿ, ಅವರು ತಮ್ಮ ಈ ಕೃತಿಯನ್ನು ‘ಸಮಾನತೆ ಉಸಿರಾಡುವ ಜೀವಿಗಳ ಪಾದಗಳಿಗೆ’ ಅರ್ಪಿಸಿದ್ದಾರೆ.

ಆ ಪಾದಗಳಿಗೆ ನಮಿಸುತ್ತಾ ಈ ವಿಶೇಷಾಂಕ ಇನ್ನು ನಿಮ್ಮದು

-ಜಿ ಎನ್ ಮೋಹನ್


‍ಲೇಖಕರು G

September 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

19 ಪ್ರತಿಕ್ರಿಯೆಗಳು

 1. prajna mattihalli

  wonderfull work. It compells to be preserved for ever. Just like the JATRE MITHAI can be chewed with watery mouth happy eyes and unstopped licking fingers

  ಪ್ರತಿಕ್ರಿಯೆ
 2. K.V. Tirumalesh

  ಪ್ರಿಯ ಶ್ರೀ ಮೋಹನ್
  ಶ್ರೀ ದೇವನೂರು ವಿಶೇಷಾಂಕಕ್ಕೆ ಸ್ವಾಗತ. ಇಲ್ಲಿ ನೀವು ಶ್ರೀ ಎಕ್ಕುಂಡಿಯವರು ಹೇಳಿದರೆಂದು ಉಲ್ಲೇಖಿಸಿದ ಹೆಕೂಬ ಕುರಿತು ಒಂದು ಮಾತು. ಪ್ರಸಂಗ ನೀವಂದಂತೆ ಅಲ್ಲ. ಇದು ಶೇಕ್ಸ್‍ಪಿಯರ್‍ನ `ಹ್ಯಾಮ್ಲೆಟ್’ ನಾಟಕದಲ್ಲಿ ಸ್ವತಃ ಹ್ಯಾಮ್ಲೆಟ್‍ನ ಬಾಯಿಂದ ಶೇಕ್ಸ್‍ಪಿಯರ್‍ ಹೇಳಿಸುವ ಮಾತು. ಹೆಕೂಬ ಎಂದರೆ ಟ್ರೋಜನ್ ದೊರೆ ಪ್ರಯಾಮ್‍ನ ಹೆಂಡತಿ. ತನ್ನ ಪತಿ ಯುದ್ಧದಲ್ಲಿ ಮಡಿದ ವಾರ್ತೆ ಕೇಳಿ ಆಕೆ ರೋದಿಸುವ ಸನ್ನಿವೇಶ. ಇದನ್ನು ಹ್ಯಾಮ್ಲೆಟ್ ಕೇಳುವುದು ಆಸ್ಥಾನಕ್ಕೆ ಬಂದ ಒಬ್ಬ ನಟನ ಮೂಲಕ. ನಾಟಕವಾಡಿಸಲು ಹ್ಯಾಮ್ಲೆಟ್ ಕರೆಸಿದವರಲ್ಲಿ ಈ ನಟ ಒಬ್ಬಾತ. ಒಂದು ಸಂಭಾಷಣೆ ಹೇಳುವಂತೆ ಹ್ಯಾಮ್ಲೆಟ್ ಕೇಳಿದಾಗ ಅವನು ಪ್ರಸಿದ್ಧ ಗ್ರೀಕ್ ಐತಿಹ್ಯದಿಂದ ಈ ಭಾಗವನ್ನು ಎತ್ತಿಕೊಳ್ಳುತ್ತಾನೆ. ಮತ್ತು ಸಂಭಾಷಣೆ ಹೇಳುತ್ತ ಕಣ್ಣಿನಲ್ಲಿ ನೀರು ತಂದುಕೊಳ್ಳುತ್ತಾನೆ. ಎಲ್ಲರೂ ರಂಗದಿಂದ ನಿಷ್ಕ್ರಮಿಸಿದ ನಂತರ ಹ್ಯಾಮ್ಲೆಟ್ ಹೇಳುವ ಮಾತುಗಳು:

  What’s Hecuba to him, or he to Hecuba,
  That he should weep for her? What would he do,
  Had he the motive and the cue for passion,
  That I have?

  ಹ್ಯಾಮ್ಲೆಟ್ ತನ್ನನ್ನು ಈ ನಟನ ಜತೆ ಹೋಲಿಸಿಕೊಂಡು ಹೇಳುವ ಮಾತುಗಳು ಇವು. ತನಗಾದರೆ, ಅಳುವುದಕ್ಕೆ ಕಾರಣವಿದೆ–ತನ್ನ ತಂದೆಯ ಕೊಲೆಯಗಿದೆ; ಅದರೂ ತಾನು ಅದಕ್ಕೆ ಸಮನಾಗಿ ಸ್ಪಂದಿಸುತ್ತಿಲ್ಲವಲ್ಲ ಎನ್ನುವುದು ಹ್ಯಾಮ್ಲೆಟ್‍ನ ಕೊರಗು. ಹ್ಯಾಮ್ಲೆಟ್‍ನ ಈ ಸಂಭಾಷಣೆಯಲ್ಲಿ what a rogue and peasant slave am I ಎಂಬ ಮಾತು ಬರುತ್ತದೆ–ಆದರೆ ಅದು ನಾಟಕ ನೋಡುತ್ತ ಕೂತಿರುವ ಹಳ್ಳಿಗನ ಕುರಿತಾಗಿ ಅಲ್ಲ! ಹ್ಯಾಮ್ಲೆಟ್ ತನ್ನನ್ನು ತಾನು ಒರಟನೆಂದು ಕರೆದುಕೊಳ್ಳುವ ಬಗೆ ಅದು.

  What’s Hecuba to him, or he to Hecuba ಎಂಬ ವಾಕ್ಯ ಇಂದು ಹಲವಾರು ಅರ್ಥಗಳಲ್ಲಿ ಬಳಕೆಯಾಗುತ್ತಿದೆ. ಶ್ರೀ ಎಕ್ಕುಂಡಿಯವರ ಸಂದರ್ಭಕ್ಕೆ `ಎತ್ತಣ ಮಾಮರ ಎತ್ತಣ ಕೋಗಿಲೆ’ ಎಂಬ ವಚನ ಹೆಚ್ಚು ಸಮಂಜಸವಾಗುತ್ತಿತ್ತು.

  ಕೆ.ವಿ. ತಿರುಮಲೇಶ್

  ಪ್ರತಿಕ್ರಿಯೆ
  • G

   ಸರ್, ನಮಸ್ಕಾರ
   ಮಾಹಿತಿಗಾಗಿ ವಂದನೆಗಳು
   ನಾನು ಆರ್ ಜಿ ಹಳ್ಳಿ ನಾಗರಾಜ್ ಅವರ ಸಂಪಾದಕತ್ವದ ‘ಅನ್ವೇಷಣೆ’ ಪತ್ರಿಕೆಗಾಗಿ ಎಕ್ಕುಂಡಿ ಅವರನ್ನು ಸಂದರ್ಶಿಸಿದಾಗ ಎಕ್ಕುಂಡಿಯವರು ಹೆಕೂಬಾ ಪ್ರಕರಣದ ಪ್ರಸ್ತಾಪ ಮಾಡಿದ್ದರು.
   ಅನ್ವೇಷಣೆಯ ಸಂದರ್ಶನ ೧೯೮೪-೮೫ರ ವೇಳೆಯಲ್ಲಾಗಿತ್ತು ಮರು ವರ್ಷ ‘ತುಷಾರ’ಕ್ಕಾಗಿ ನಾನು ನಡೆಸಿದ
   ಎಕ್ಕುಂಡಿ ಸಂದರ್ಶನದ ವೇಳೆಯಲ್ಲೂ ಎಕ್ಕುಂಡಿ ಈ ರೀತಿಯೇ ಹೆಕುಬಾ ಬಗ್ಗೆ ಪ್ರಸ್ತಾಪಿಸಿದ್ದರು
   ಈ ಎರಡೂ ಸಂದರ್ಶನ ಪ್ರಕಟವಾದ ನಂತರ ಅದನ್ನಿಟ್ಟುಕೊಂಡು ನಾನೂ ಹಾಗೂ ಎಕ್ಕುಂಡಿ ಮಾತನಾಡಿದ್ದೇವೆ.
   ಅವರು ಆಗಲೂ ಹೆಕೂಬಾ ಬಗ್ಗೆ ತಿದ್ದುಪಡಿಯನ್ನು ಹೇಳಿರಲಿಲ್ಲ ಹಾಗಾಗಿ ಎಕ್ಕುಂಡಿಯವರು ಆ ರೀತಿಯೇ ಭಾವಿಸಿದ್ದರು ಎನಿಸುತ್ತದೆ.
   ಅದು ಹಾಗಲ್ಲ ಎನ್ನುವುದನ್ನು ಗಮನಕ್ಕೆ ತಂದುದಕ್ಕೆ ವಂದನೆಗಳು

   -ಜಿ ಎನ್ ಮೋಹನ್

   ಪ್ರತಿಕ್ರಿಯೆ
 3. chalam

  hamletto,hekoobano,ottare sambaja annod doddadu kana annodannu mukyvaagisuva kriye nadeyabeku.

  ಪ್ರತಿಕ್ರಿಯೆ
 4. venktramana gowda

  ದೇವನೂರರ ಅಕ್ಷರಲೋಕ, ಎಲ್ಲರೂ ನಮಿಸಬೇಕಾದ ಲೋಕ. ಆ ಲೋಕವನ್ನು ಮತ್ತೊಮ್ಮೆ ಎಲ್ಲರ ಎದೆಯೊಳಕ್ಕೆ ತಲುಪಿಸಲು ಸೇತುವೆಯಾದ ಅವಧಿಯ ಈ ವಿಶೇಷಾಂಕ ನಿಜಕ್ಕೂ ದೊಡ್ಡ ಕೆಲಸ.

  ಪ್ರತಿಕ್ರಿಯೆ
 5. Deepak

  Google nalli Devanur Mahadev avar bagge yavude hecchina mahiti illa.
  Avadhige nanna vinanthi yenendare tavu Mahadev avar yalla pustakagal
  pattiyannu avadhiyalli prakatisi.

  ಪ್ರತಿಕ್ರಿಯೆ
  • G

   ನಿಮಗೆ ಆಶ್ಚರ್ಯವಾಗಬಹುದು ಅವರು ಬರೆದಿರುವುದು ಮೂರೇ ಪುಸ್ತಕ
   ದ್ಯಾವನೂರು, ಒಡಲಾಳ ಹಾಗೂ ಕುಸುಮಬಾಲೆ
   ಈಗ ಪ್ರಕಟವಾಗುತ್ತಿರುವುದು ಅವರ ನಾಲ್ಕನೆಯ ಕೃತಿ, ಅವರ ಚಿಂತನಾ ಬರಹಗಳ ಸಂಕಲನ
   ಇದನ್ನು ಹೊರತುಪಡಿಸಿದರೆ
   ‘ಯಾರ ಜಪ್ತಿಗೂ ಸಿಗದ ನವಿಲುಗಳು’ ದೇವನೂರು ಅವರ ಬರಹಗಳ ಕುರಿತು ಬಂದಿರುವ ಸಂಕಲನ

   ಪ್ರತಿಕ್ರಿಯೆ
 6. ಬಸೂ

  ಅವಧಿಯ ಇಂದಿನ ದಾರಿ ಇಷ್ಟವಾಯ್ತು.. ಕಳೆದುಹೋದ ಹುಡುಗ ಎಷ್ಟೋ ವರ್ಷಗಳ ಮೇಲೆ ಸಿಕ್ಕ ಅಪೂರ್ವ ಭಾವ ನನಗಾಯಿತು. ಸಮಾನತೆ ನಡುಗೆಗೆ ಶಕ್ತಿ ತುಂಬುವ ನಿಮ್ಮ ಯತ್ನಗಳಿಗೆ ನನ್ನಂಥವರು ಜತೆಯಾಗುತ್ತಾರೆ. ನಿಮ್ಮ ಶ್ರಮಕ್ಕೆ, ಅವಧಿ ಬಳಗಕ್ಕೆ, ಈ ಕೆಲಸದಲ್ಲಿ ನಿಮ್ಮೊಂದಿಗೆ ಜತೆಯಾದ ಎಲ್ಲರಿಗೂ ಅಭಿನಂದನೆಗಳು. ಮೋಹನ ಇಂದಿನ ಅವಧಿ ಅದ್ಬುತವಾಗಿದೆ.. ನಿಮ್ಮ ಬಗೆಗಿನ ನನ್ನ ಹೆಮ್ಮೆ ಹೆಚ್ಚಾಗಿದೆ

  ಪ್ರತಿಕ್ರಿಯೆ
  • G

   ಪ್ರೀತಿಯ ಬಸೂ
   ಹೌದು ೧೫ ವರ್ಷ ಕಳೆದುಹೋಗಿದ್ದೆ
   ಮಂಗಳೂರು, ಗುಲ್ಬರ್ಗ, ಹೈದರಾಬಾದ್ ಅಂತ..
   ನನಗೂ ಅಷ್ಟೇ ಕಳೆದು ಹೋದ ಎಷ್ಟೋ ಸ್ನೇಹಿತರು ಸಿಕ್ಕ ಭಾವ

   ಪ್ರತಿಕ್ರಿಯೆ
 7. sunil Rao

  avadhiya pratiyondu hejjeyoo namage mahatwaakanksheye…
  ondu team work illade ivella hegaadeetu…
  kudos avadhi

  ಪ್ರತಿಕ್ರಿಯೆ
 8. manjunathnetkal

  devanoorara barahakkagi eduru noduthiddene adastu bega pustaka barali nimma prayathnakke namma shubha haaraike

  ಪ್ರತಿಕ್ರಿಯೆ
 9. Mohan V Kollegal

  ದೇವನೂರ ಮಹಾದೇವ’ರ ಮತ್ತು ಅವರ ಬರಹಗಳನ್ನು ಓದಿಸುತ್ತಿರುವುದಕ್ಕೆ ವಂದನೆಗಳು ಸರ್. ನಿಮ್ಮ ವಿಶೇಷಾಂಕಕ್ಕೆ ಅಭಿನಂದನೆಗಳು… 🙂

  ಪ್ರತಿಕ್ರಿಯೆ
 10. D.Ravivarma

  ದೇವನೂರು ಮಹಾದೇವ ಕೂಡಾ ಹಾಗೆಯೇ.. ಕನ್ನಡದ ಓದು ಬಲ್ಲ ಪ್ರತಿಯೊಬ್ಬರಿಗೂ ಹಾಗೂ ದೇವನೂರರಿಗೂ ಆ ರೀತಿಯ ಕಾಣದ ಎಳೆಗಳ ಬಂಧವಿದೆ. ದೇವನೂರು ಯಾರು ಎಂದು ನೋಡದವರೂ, ಅವರ ಮಾತು ಕೇಳದವರೂ ಸಹಾ ಅವರ ಬರವಣಿಗೆಯ ಮೂಲಕ ಅವರನ್ನು ಧಕ್ಕಿಸಿಕೊಂಡಿದ್ದಾರೆ. ದೇವನೂರು ನಮ್ಮ ಮನೆಯವರೇ ಏನೋ ಎಂದು ಸಂಭ್ರಮಿಸಿದ್ದಾರೆ. ‘ಸಂಬಂಜ ಅನ್ನೋದು ದೊಡ್ಡದು ಕನಾ..’ ಎಂದು ದೇವನೂರು ಉದ್ಘಾರವೆತ್ತಿದರಲ್ಲಾ ಆ ಸಂಬಂಜವೇ ನಮ್ಮನ್ನೂ ದೇವನೂರನ್ನೂ ಇನ್ನಿಲ್ಲದಂತೆ ಬೆಸೆದಿದೆ.
  ದೇವನೂರು ನಮ್ಮೊಳಗಿನ ಕಣ್ಣು. ನಮ್ಮೊಳಗಿರುವ ಒಬ್ಬ ನ್ಯಾಯವಾದಿ, ನಮ್ಮೊಳಗಿರುವ ಪೋಲೀಸ್. ನಮ್ಮೊಳಗಿರುವ ಅಂತಸ್ಸಾಕ್ಷಿ ಎಂಬ ನ್ಯಾಯಾಧೀಶನನ್ನು ಪೊಲೀಸನನ್ನು ನಾವು ಕೊಂದುಕೊಂಡಾಗ ಸಮಾಜ ಎನ್ನುವುದು ದೊಡ್ಡ ದುಡ್ಡಿನ ಮೂಟೆಯಾಗಿ ಕಾಣುತ್ತದೆ. ಸಮಾಜ ಎನ್ನುವುದು ಹಲವು ಸಂಬಂಜಗಳ ಮೊತ್ತವಾಗಿ ಕಾಣುವುದೇ ಇಲ್ಲ. ಹಾಗಾಗಿಯೇ ನಮ್ಮೊಳಗೇ ಅಂತಸ್ಸಾಕ್ಷಿ ಎಂಬ ದೇವನೂರು ಇದ್ದಾರೆ.

  nijakku tumbaa arthapurna maatugalu…. devanuru….obba mahamouni…obba vastavavaadi chinkaru…aste alla ii naadina dwni illadavara dwaniyaagi maatanaaduva obba manukulada maatugaara…

  avadhi ivara bagge ondu adbuta visheshaankada mulaka avarannu namage innu hechhu hattiravaagisiddiri…

  idara hindiruva ella kriyaatmaka manassugaligu… hrudayapurvaka abhinandanegalu….

  D.RAVIVARMA.HOSAPETE…

  ಪ್ರತಿಕ್ರಿಯೆ
 11. ಚಂದಿನ

  ಇಂದೇಕೋ ಅವಧಿ ಬಹಳ ಆಪ್ತವೆನ್ನಿಸುತ್ತಿದೆ. ಮತ್ತೆ ಮತ್ತೆ ಓದಿಸಿಕೊಳ್ಳುತ್ತಿದೆ. ದೇವನೂರು, ತೇಜಸ್ವಿ, ಲಂಕೇಶ್ ಇವರ ಸಾಹಿತ್ಯದ ಗುಂಗಿನಲ್ಲೇ ಮತ್ತೆ ಮತ್ತೆ ಮುಳುಗಬೇಕೆನ್ನಿಸುತ್ತಿದೆ.

  ಪ್ರತಿಕ್ರಿಯೆ
 12. ಹನುಮಂತ ಹಾಲಿಗೇರಿ

  ಸರ್, ಅವಧಿಯಲ್ಲಿ ನೀವು ಡಿ.11ರಂದು ಪ್ರಕಟಿಸಿದ ಎಲ್ಲ ಬರಹಗಳನ್ನು ಇವತ್ತು ಬಿಡುವು ಮಾಡಿಕೊಂಡು ಓದಿದೆ. ಪ್ರಖರ ವೈಚಾರಿಕತೆಯಲ್ಲಿ ದೇವನೂರರಿಗೆ ದೇವನೂರರೇ ಸಾಟಿ. ಆಲನಹಳ್ಳಿ, ಲಂಕೇಶ್, ರಾಮದಾಸ್, ತೇಜಸ್ವಿ ನಮ್ಮಂಥವರ ಕನವರಿಕೆಗಳಿಗೆ ದಕ್ಕುವ ನೆನಪುಗಳು ಮಾತ್ರ. ಆದ್ರೆ ಅವರ ನಡುವಿನ ಕೊಂಡಿ ದೇವನೂರರು ನಿಂತ ನೀರಾಗದೆ ಇನ್ನು ಅದೇ ಬದ್ಧತೆಯಲ್ಲಿ ಅವರೆಲ್ಲರನ್ನು ಮೀರಿ ಬೆಳೆಯುತ್ತಿದ್ದಾರೆ ಎಂದೆನಿಸುತ್ತದೆ ನನಗೆ. ಅವರ ಬರಹಗಳಿಗಿಂತಲೂ ಅವರ ಬದುಕಿನ ಒಂದೊಂದು ನಡೆಯು ನಮ್ಮಂಥವರಿಗೆ ಹತ್ತಾರು ಪಾಠಗಳಿದ್ದಂತೆ. ಅವರ ಇತ್ತೀಚಿನ ಐದಾರು ಬರಹಗಳನ್ನು ಒಂದೆ ಕಡೆ ಸಿಗುವಂತೆ ಮಾಡಿದ ಅವಧಿಗೆ ದೊಡ್ಡ ಥ್ಯಾಂಕ್ಸ್. ಇನ್ನೂ ಕೇವಲ 150 ರೂ.ಗಳಲ್ಲಿ ಅವರ ಬೃಹತ್ ಬರಹಗಳ ಸಂಪುಟವೇ ಪ್ರಕಟವಾಗುತ್ತಿರುವುದು ಬೆಂಗಳೂರಿನಿಂದ ದೂರವಿರುವ ನನ್ನಂಥವರಿಗೆ ಬರಗಾಲದಲ್ಲಿ ಸುಗ್ಗಿ ಸಿಕ್ಕ ಹಾಗೆ. ದಯವಿಟ್ಟು ಪುಸ್ತಕ ಕೊಳ್ಳಲು ಏನು ಮಾಡಬೇಕೆಂದು ತಿಳಿಸಿ.

  ಪ್ರತಿಕ್ರಿಯೆ
 13. ಅಳಗುಂಡಿ ಅಂದಾನಯ್ಯ

  ಕನ್ನಡ ಸಾಹಿತ್ಯದಲ್ಲಿ ; ಲಂಕೇಶರ,ತೇಜಸ್ವಿ ,ದೇವನೂರ,ಎಕ್ಕುಂಡಿ, ಗಿರಡ್ಡಿ,ಪಟ್ಟಣಶೆಟ್ಟಿ, ಹೀಗೆ ಅಸಂಖ್ಯಾತ ಹೆಸರುಗಳು, ತಂತಾನೆ ಖುಷಿ,ಅಭಿಮಾನ ಹುಟ್ಟಿಸುತ್ತವೆ.ಅವಧಿಯಲ್ಲಿನ ಲೇಖನಗಳನ್ನು ಓದಿ,ಖುಷಿಗೊಂಡೆ.ಎಪ್ಪತ್ತು ಎಂಬತ್ತರ ದಶಕದಲ್ಲಿ ಹಳ್ಳಿಗಾಡಿನಿಂದ ಬಂದ ನನ್ನ ಮುಗ್ಧತೆಗೆ ಕನ್ನಡ ಸಾಹಿತ್ಯ ಕ್ಷೇತ್ರದ ಈ ಎಲ್ಲ ವ್ಯಕ್ತಿಗಳು ಪ್ರಭಾವಿಸಿದ್ದು ಸುಳ್ಳಲ್ಲ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: