ಆಹ್ವಾನಿತ ಕವಿತೆ: ವಿನಯಾ ಒಕ್ಕುಂದರ ಕಾಡುವ ಕವನಗಳು

ಕ್ಷೇಮವಿರಲಿ ನಿನಗೆ

ಪ್ರಿಯ ಚೌಕಿದಾರನೆ,

ನಾವು

ಹಸಿವಿನ ಅನಾಥತೆಯ ಭೂತ ಬೆಂಬತ್ತಿದ

ಈ ನೆಲದ್ದೇ ಜೀವಗಳು

ನಿನ್ನ ಚೌಕಿಯಲಿ ನಮ್ಮ ಉಸಿರಿಲ್ಲವೇ?

ಎಲ್ಲವನ್ನೂ ಎಲ್ಲರನ್ನೂ ನಿಂತಲ್ಲೇ ನಿಲ್ಲಿಸಿ

ಉಳಿದಲ್ಲೇ ಉಳಿಸಿ ಫರ್ಮಾನು ಹೊರಡಿಸಿದ

ನಿಯಾಮಕನೇ,

ನಿನ್ನ ದಫ್ತರಿನಲಿ ಹಸಿದವರ ಹೆಸರಿಲ್ಲವೇ?

ನಾವು ತಡಿಕೆಯಲ್ಲಿದ್ದು ಕಟ್ಟಿದ ಇಮಾರತಿಗೆ

ಆ ಎತ್ತಾರೆತ್ತರದ ಮೂರ್ತಿಗೆ

ಆ ಹದಿನೆಂಟು ಮಹಡಿಯ ಮಹಲಿಗೆ

ಅಡಿಗಲ್ಲುಗಳು ನಾವು, ಕಪ್ಪು ರಕ್ತದವರು

ಎಂದಿಗೂ ತುಂಡಾದ ಬೆರಳಿಗೆ, ನರಸತ್ತ

ಮೀನಗಂಡಗಳಿಗೆ ಇಲಾಜು ಕೇಳಿಲ್ಲ.

ಬಿರಿದ ಪಾದಗಳ ಬೆವರ ನೀರುಗಳಲಿ

ನಮ್ಮದೇ ಹೆಜ್ಜೆಗುರುತಿನ ನಾಕಾಶೆಯಲಿ

ಪುಳಕಗೊಂಡು ಮುಂದಡಿಯಿಟ್ಟು.

ಆತ್ಮನಿರ್ಭರತೆಯಿಂದ ನಡೆದವರು ನಾವು

ಸತ್ತವರನ್ನು ಹೂತು, ಸೋತವರನ್ನು ಹೊತ್ತು

ಮುಂದೆಲ್ಲೋ ಅನತಿ ದೂರದಲ್ಲೊಂದು ಹಿಡಿ ಅನ್ನ

ಇದ್ದೀತೆಂದು ಕಾದು ಕನಸುತ್ತ

ಮಾನ್ಯ ಚೌಕಿದಾರನೆ, ಅದೆಷ್ಟು ಸುಮ್ಮಾನದಿಂದ

ನಡೆದೆವು ನೋಡು.

ಇದ್ದುಳ್ಳವರು ಅವರವರ ಮನೆ ಮಹಡಿಗಳಲಿ ನಿಂತು

ಚಪ್ಪಾಳೆಯಿಕ್ಕಿ ದೀಪ ಮುಡಿಸುವಾಗಲೂ

ಕೇಳಲಿಲ್ಲ ನಿನ್ನನು-ನಾವ್ಯಾವ ಗಲ್ಲಿಯ ತಿರುವಿನಲಿ

ಚಪ್ಪಳಿಸಬೇಕೆಂದು

ದುಡಿಮೆಯಿಲ್ಲದೆ ಊರ ಅಗಸಿ ದಾಟಿ ಬಂದವರು

ಮರಳಬೇಕೆಲ್ಲಿಗೆ? ಮರಳಿ ಮಣ್ಣಿಗೆ!

ನಮ್ಮ ಮೈತುಂಬಿದ ಕ್ರಿಮೆನಾಶಕದ ಹುಂಡುಗಳ

ಪರಿಚಯ ಪತ್ರ ನೇತು ಹಾಕಿಯಾಗಿದೆ

ನಡೆಯುತ್ತಿದೆ ಜೀವ, ಬಡತನದ ಅಪಮಾನದ

ಕೊರಳ ಕಂಜೂರಿ ಹಿಡಿದು

ಗೌರವಾನ್ವಿತ ಚೌಕಿದಾರನೆ, ತೃಪ್ತಿಯೇ ನಿನಗೆ?

ನಮ್ಮೀ ತ್ಮ ನಿರ್ಭರನಡೆಗೆ.

ಬಡತನಕೆ ಬೆನ್ನೊಡ್ಡಿ, ನಿಂದನೆಗೆ ಮುಖವೊಡ್ಡಿ

ಹಸಿವೆಂಬ ಹೆಬ್ಬಾವು ಬಸಿರ ಕೊಲ್ಲುವ ಅನಕ

ನಿಲ್ಲಲನುವಿಲ್ಲ. ಈ ನೆಲ ನನ್ನದಲ್ಲ

ನಡೆಯಬೇಕಿದೆ ನಿರಂತರ ಆತ್ಮನಿರ್ಭರ ಯಾನ.

ಇಲ್ಲಿ ಕ್ಷಣ ಕ್ಷಣಕೂ ಸಾವು ಸಂಭವಿಸುತ್ತದೆ

ನಿನ್ನ ಬಾತ್ಮೀದಾರರಿಗದು ಕಾಣದೆಂದೂ

ನಗೂ ಸಾಯತ್ತಿದೆ ಉಮೇದಿ ಸಾಯುತ್ತದೆ

ಕನಸು ಸಾಯುತ್ತದೆ ಸಂಬಂಧ ಸಾಯುತ್ತದೆ

ದೇಹದ ಒಂದೊಂದೇ ಭಾಗಗಳು

ಮನಸಿನ ಒಂದೊಂದೇ ಪದರಗುಳು

ಚಡಪಡಿಸಿ ಹುರುಪಳಿಸಿ ಹೋಗುತ್ತದೆ

‘ಹುತ್ತದೊಳಗಿನ ಸರ್ಪದಂತಿದೆ ಬಾಳು’

ಒಳಗಿದ್ದೂ ಬೆಂದು ಹೋಗುವ

ಹೊರಬಂದರೆ ಬಡಿದುಕೊಲ್ಲುವ ಯಾನ.

ಪ್ರಿಯ ಚೌಕಿದಾರನೆ,

ಈ ಹಾಳುಗೋಳು, ಮನೆಯುಳ್ಳವರ ಗೋಡೆಗಳಿಗೆ

ನೆರಳಾಗಿ ಕಲುವುದಿಲ್ಲ

ಕ್ಷೇಮವಿರಲಿ ಅವರೆಲ್ಲ ಉಂಡುಟ್ಟು ಪರದೆಯ ಮೇಲೆ

ಮ ಹಾ ಭಾ ರ ತ ವ ನೋಡುತ್ತ

ಸಂಭವಾಮಿ ಯುಗೇ ಯುಗೇ – ಎಂದು ಹೂ ಏರಿಸಿಕೊಳ್ಳುತ್ತ

ನಮ್ಮ ಕಾಲುಗಳು ಊರಾಸಿ ಮೇಲಾಸಿ

ರಸ್ತೆಯಂಚಿನಲಿ ಸಪೂರ ಸವೆಯುತ್ತಿವೆ

ಊರು ಹೊಕ್ಕು ಕಾಡಿ ಬೇಡಿ, ಕಲ್ಲು ತೂರಿ ಎಚ್ಚರಿಸುವ

ಇರಾದೆಯಿಲ್ಲ ನಮಗೆ.

ಪ್ರಿಯ ಚೌಕಿದಾರನೆ, ಹೊರಟಿದ್ದೇವೆ ಆತ್ಮ ನಿರ್ಭರತೆಯಿಂದ

ಒಂದು ಜೋಪಡಿಯಿಂದ ಮತ್ತೊಂದು ಗುಡಿಸಲಿಗೆ

ಕಬ್ಬಿಣವ ಕುಟ್ಟುವ, ಖ್ವಾರಿ ಮೆದೆ ಮಾಡುವ

ಕಲ್ಲು ಉತ್ತಿ ಹೂ ಒಕ್ಕುವ ಕಸು ಹೊತ್ತವರು

ನಡೆದಿದ್ದೇವೆ ಆತ್ಮ ನಿರ್ಭರತೆಯಿಂದ

ಜೊತೆಜೀವಗಳು ಮುರುಟಿ ಬಿದ್ದಾಗಲೂ

ಸತ್ತ ತಾಯ ಚಾದರ ಎಳೆವ ಮಗುವಿನ ಅಳುವಿನಲೂ

ಕನಸು ಕಣ್ಣಿನ ಹರಯಗಳು ಉರುಳಿದರೂ

ಉಸಿರಾಡಲೂ ಕರಾರು ಪತ್ರ ಕೊಡುವಾಗಲೂ

ತುಟಕಚ್ಚಿ ಬಿಕ್ಕುಗಳ ಒತ್ತಿ ನಡೆದಿದ್ದೇವೆ.

ಬಿಸಿಗಾಳಿ ಸೋಕಿ ಜೀವ ಹೀರುವ ದಿನಮಾನದಲಿ

ಸಂಕಟವೆಂದರೆ ಆಗಾಗ ಕೇಳುವ ನಮ್ಮ ನೆತ್ತರಲಿ ಬೆರೆತ

ವೈಷ್ಣವ ಜನತೋ ತೇನೆ ಕಹಿಯಚೆ . . .

ಒಂದು ಮಾರ್ದವದ ನುಡಿ, ಒಂದು ಪ್ರೀತಿಯ ನೇವರಿಕೆ

ಒಂದು ಪುಡಿಕೆ ಅನ್ನ, ಒಂದು ಬಾಟಲಿ ನೀರು

ಎದುರಾಗಿ ಗಂಟಲು ಗದಬರಿಸುತ್ತದೆ

ಆದರೂ ಪ್ರಿಯ ಬಂಧುವೇ,

ಮನಸು ಬೆಂದಮೇಲೆ ಕಣ್ಣೀರೂ ಒಸರುವುದಿಲ್ಲ.

ನೀನು ಕ್ಷೇಮವಾಗಿರು.

ಮರಣ ಮಹಾನವಮಿಯಾದ ಹಾದಿಯಲಿ

ಹೇಳಿದ್ದಾರೆ ಅವರಿವರು, ಪ್ರೀತಿಯಿಂದ

ಮೂದಲಿಕೆಯಿಂದ ಹತಾಶೆಯಿಂದಲೂ

‘ಬಿಟ್ಟು ಬಿಡು ಹೀಗೆ ದಿಕ್ಕೆಟ್ಟು ನಿಲ್ಲುವುದ

ಕದಲಿಸಲಾಗದ ಬಂಡೆಯತ್ತಲೇ ಧ್ಯಾನಿಸುವುದ

ಎಷ್ಟೆಲ್ಲ ಹೂಂಗುಟ್ಟಿದ ಮೇಲೂ

ಮತ್ತದೇ ಪುನರಾವರ್ತನೆ

ಅಂಟವಾಳದ ಮೈಗೆ ಮಳೆಹನಿಯೂ ಬುರುಗು.

ಉಣ್ಣುವಾಗ ಉಂಡು, ತಿನ್ನುವಾಗ ತಿಂದು, ಮಲಗಿ ಎದ್ದು

ನಕ್ಕು ಸಂಭಾಳಿಸಿ, ಪುರುಸೊತ್ತಿನಲ್ಲಿ ಕಣ್ಣೀರು ಹಾಕಿ

ಎದೆಯ ಮೇಲೆ ಸಂವೇದನೆಯ ಸೂಚ್ಯಂಕ ಲಗತ್ತಿಸಿಕೊಂಡ

ನಿರಾತಂಕ ಬಾಳುಗಾರಿಕೆಯು ಬಾರದ್ದಕ್ಕೆ

ಇವನೂ ಆಗಾಗ ಗೊಣಗುತ್ತಾನೆ, ಪ್ರೀತಿಯಿಂದ

‘ನಿನ್ನಿಂದ ಯಾರಿಗೂ ಸುಖವಿಲ್ಲ’

ಮೊಂಡು ಮನಸು ಜೋಡಿಸುತ್ತದೆ-

ಹೌದು, ನನ್ನಿಂದ ನನಗೂ

ಬಿಟ್ಟು ಬಂದ ಗುರುತನರಸಿ

ಸಾವಿನೆಡೆಗೇ ಮುಖದಿರುವಿ ಸಾಗುವ

ಸ್ವರ್ಗಾರೋಹಣ ಸಂಧಿಯಲಿ ನುಗ್ಗುನೊಣೆ

ಮೈಲಿ ಮೈಲುದ್ದ ದೂರ ಚಹರೆಯನರಸಿ ನಡೆವ

ತೊಡೆಗಳಂತೆ ಗದಗುಡುತ್ತಿದೆ ತ್ರಾಣ

ನಗರದ ಡಾಂಬರಿಲಿ ಅರಗಿದ್ದು ಅದೆಷ್ಟು

ಹಸಿವಿನುಸಿರು, ಅಳೆಯಲಾದೀತೆ

ಗುಲಾಬಿ ನೋಟಗಳಲಿ ಅವರ ತುಟಿಯರಳು

ಮರಣ ಮಹಾನವಮಿಯಾಗದ ಹಾದಿ ತೆರೆಯಿತು

ಈ ಮರು ಧರಣಿಯಲಿ.

ಎಷ್ಟು ಸಲ ರೆಪ್ಪೆ ಕೂಡಿ ತೆರೆದರೂ

ಅತ್ತತ್ತ ಸರಿಯುತ್ತಿಲ್ಲ, ಯಾವ ಗಾಳಿಗೂ

ಹಾರಿ ಹೋಗುವುದಿಲ್ಲ.  ಬೇರಿಳಿದಿವೆ

ನನ್ನೊಳಗೆ, ಆ ರೈಲು ಹಳಿ ಪಕ್ಕ ಉರುಳಿದ ರೊಟ್ಟಿಗಳು

ಮರೆಯುವುದಿಲ್ಲ, ಎಂದೂ

ಬಿಸಿಲ ಹುರುಪಳಿಸಿ ಪಾದ ವಾರೆಯೂರಿ ನಡೆವ

ಆ ಎಳಸು ಜೀವಗಳು

ಎಂಥೆಂಥ ಅನಾಥತೆಯ ಅಂಟುರಾಳವನೆರಚಿದರೂ

ಎಷ್ಟು ಕಣ್ಣೀರ ಪುಷ್ಕರಣಿಗಳಲೂ

ಪಾಪನಾಶವಾಗದ ಭೋಗಯಾನ

ನಾನೀಗ ಗೆದ್ದಲು ತಿಂದುಗುಳಿದ ಎಲೆ

ಸುಖವಿಲ್ಲ, ನನ್ನಿಂದ ನನಗೂ.

ನಗು

ಈ ಜಗತ್ತಿನ ಸುಂದರ ನಗುವೊಂದು

ಅಂದು ಅರಳಿಬಿಟ್ಟಿತು,

ತುಂಬಿದ ಊಟದ ಬಟ್ಟಲೆದರು

ಆ ಎಳೆಬಾಲೆ ನಕ್ಕಳು. ಒಂದಗುಳೂ

ನಾಲಿಗೆಗಿಕ್ಕದ ಮುನ್ನ.

ಹಸಿದೊಡಲ ಬೆಂಕಿ ತೇವದಲಿ ಗದಗದಿಸಿ

ನಡೆನಡೆದು ದಿಕ್ಕೆಟ್ಟು

ಮತ್ತೊಬ್ಬ ‘ಜಮ್ಲೋ’ ಆಗ ಹೊರಟವಳು

ಭಾಷೆ ಬರದ ಭಾಷೆಯಲಿ ನುಡಿಸಿದಳು

ಎದೆಯ ಏಕತಾರಿ

ಎಂದೆಂದೂ ಊಟದ ಬಟ್ಟಲದೆದುರು

ನಿನ್ನ ನಗು ನನ್ನ ಸತಾಯಿಸುತ್ತದೆ ಕಂದಾ

ಅನ್ನದಾಣೆ.

[ಜಮ್ಲೋ- ತೆಲಂಗಾಣದಿಂದ ಕಾಲ್ನಡಿಗೆಯಲ್ಲಿ ಛತ್ತೀಸಗಡಕ್ಕೆ ಹೊರಟ ವಲಸೆ ಕಾರ್ಮಿಕ ಮಗು.  ಹಸಿವಿನಿಂದ ಸತ್ತುಹೋದಳು]

ನೆತ್ತರು ನೆರಳು

ಯಾರೋ ನಿಂತಂತಿದೆ ಬೆನ್ನಹಿಂದೆ

ಗಾಭರಿಸಿ ತಿರುತಿರುಗಿದ್ದು ಎಷ್ಟು ನೂರನೆಯ ಬಾರಿ?

ಹಾಳು ಮನಸಿಗೆ ಸಾವರಿಸಿ ಹೇಳಿದೆ, ರಮಿಸಿ ಹೇಳಿದೆ

ಧೈರ್ಯಗೆಡಬೇಡ ಎಂದು ಕಲಿಸಿದೆ

ಮತ್ತೂ ಮತ್ತೂ ಹಾಡೇ ಹಗಲೂ

ಬೆನ್ನಮೂಳೆಯಿಂದೆದ್ದ ನೆರಳ ಸೋಕು ತಪ್ಪಿಲ್ಲ

ನಿದ್ದೆಯಲ್ಲದ ಎಚ್ಚರವೂ ಅಲ್ಲದ ರಾತ್ರಿ

ಯಾರೋ ಚಪ್ಪಳಿಸಿ ನಕ್ಕಂತಾಯಿತು

ನಗು ಪದರು ಪದರಾಗಿ ಎಸಳು ಎಸಳಾಗಿ

ಆತ್ಮವ ನೇವರಿಸಿ ಅಭಿಮಾನವ ಕುಕ್ಕಿದಂತಿತ್ತು

ಗೀರೂ ಇಲ್ಲದ ಗಾಯ.

ಕಡೆಯುಸಿರು ಜಪ್ಪಿಸಿ ಕೇಳಿದೆ, ಯಾರೂ ನೀನು?

ಅಲ್ಲಾಡಿ ರಿಂಗಣಿಸಿ ಉರುಟುರುಟು ನಕ್ಕು

ಸೋತ ದನಿಯಲ್ಲುಸುರಿತು. ಆತ್ಮಕ್ಕೇ ತುಟಿಯಿಕ್ಕಿ ಅಂಗಲಾಚಿತು.

‘ದಾವರಿಸಿದ್ದೇನೆ, ನಡೆಯಲಾರೆ ನಿನ್ನೊಟ್ಟಿಗೆ

ಬಿಡುಗಡೆಗೊಳಿಸು ನನ್ನ. ಇನ್ನಾಗದು ನಿನ್ನಂತೆ

ಕೆಡಕುಗಳ ಕಣ್ಣಂಚಲ್ಲಿ ಮಡಚಿ

ಮತ್ತದೇ ಅನುದಿನದ ಅಂತರಾಟಕೆ ನಿಲ್ಲಲು,

ಥೇಟ್, ಹಿಟ್ಲರನ ಕಾಲದ ಸಂಭಾವಿತರಂತೆ

ದಪ್ಪ ಹೊದಕೆಯಲಿ ಬೆಚ್ಚಗೆ ಹಾಡು ಕೇಳುವ ಸುಖಿಯೆ

ಕಾರಣಗಳಿರಬಹುದು. ನಿನಗೆ, ನಿನ್ನದೇ ತೆಕ್ಕೆಯಷ್ಟು…”

ಏನೋ ಎಳೆದಂತಾಯಿತು, ಏನೋ ಎಬ್ಬಿದಂತಾಯಿತು

ಚರ್ಮದೆಳೆ ಹಿಡಿದು ಪರಪರ ಸುಲಿದಂತಾಯಿತು

ನಾಲಿಗೆ ಬತ್ತಿದಂತಾಯಿತು.

ಬೆಳಗು, ರಂಗೋಲಿ ಹುಡಿಗೆ

ಅನಾಥ ಅಂಗಾಲುಗಳ ನೆತ್ತರ ಹಚ್ಚೆಯಿತ್ತು.

ಉರಿ ಉರಿವ

ಉರಿ ಉರಿವ ದಿನಮಾನ

ಮನಸು ಸರ್ಪಸುತ್ತಿನ ಹುಣ್ಣು

ಮರಗಟ್ಟಿದ ಕಣ್ಣಾಳದಲ್ಲೂ ಊರಿದೆ

ಆ ಬೊಬ್ಬುಳಿವೊಡೆದ ಪಾದ

ಚಿತ್ತ ಬರೆಯ ಹೊರಟವಳು

ಚಡಪಡಿಸಿದಳು, ಅರೆಬೆಂದ ಪಾರಿವಾಳ

ಚಿತ್ರವೆಂದರೆ ಬರೀ ಗೆರೆ, ಗೀಟು ಬಣ್ಣಗಳೇ

ಸಲೀಸಲ್ಲ ಸಂಕಟವ ಉಣ್ಣುವುದು

ನೀರಾಡಿದ ಕಣ್ಣುಗಳೂ ತುದಿಬೆರಳುಗಳೂ

ಏನೋ ಮಾತಾಡಿಕೊಂಡವು

ಮರೆಯೆ, ಆ ಪಾದಗಳನೆಂದು

ಕಣ್ಣಾಲಿಗಳು ಬೆರಳಿಗೆ ಭರವಸೆಯಿತ್ತವು

ಕಲೆಯ ಮಡಿಲಲ್ಲಿದೆ ನಿತಾಂತ ಶಾಂತಿಯೆಂದು

ನಂಬಿಸಿದವರೆ, ನಂದಿಸುವ ಮದ್ದಿಲ್ಲದ ಬೇನೆಯಿದು

ಆ ಪಾದಗಳಿಗೊಂದು ಮೆಟ್ಟೂ ಹೊಲೆಯಲಾಗದ ನಾನು

ಪದ ಬರೆದು ಏನು ಕೊಡಲಿ?

ಉರಿ ಉರಿವ ಉರಿಕೊಳ್ಳಿಗಳು

ನುರಿ ನುರಿದು ಹದವಾಗುತ್ತಿರುವ ಈ ಹೊತ್ತಲ್ಲಿ

‍ಲೇಖಕರು nalike

August 19, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: