ವಿಮರ್ಶಕ ಎಸ್ ದಿವಾಕರ್ ಇತ್ತೀಚಿಗೆ ತಾನೇ ‘ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ’ ಕವನ ಸಂಕಲನವನ್ನು ಹೊರತಂದಿದ್ದರು.
ಈಗ ಹಾಡುಗಳ ಬೆನ್ನತ್ತಿದ್ದಾರೆ.
ಅವರು ಇತ್ತೀಚೆಗೆ ಬರೆದ ಎರಡು ಕಾಡುವ ಹಾಡುಗಳು ಇಲ್ಲಿವೆ-
ಗೋಪಾಲನ ಮುರಲಿ
ಬೆಳಗಾಯಿತು ಬಿಸಿಲೇರಿತು ಗಿಡಬಳ್ಳಿಗಳರಳಿ
ಈ ರಾಧೆಗೆ ಮುದ ತಂದಿತು ಗೋಪಾಲನ ಮುರಳಿ
ಯಮುನಾ ಜಲ ಕಲಕಲರವ ಅಲೆಯಲೆಯೂ ನಲಿದು
ಪರಿಮಳಿಸಿತು ಪಾರಿಜಾತ ತುಸುತುಸುವೇ ಬಿರಿದು
ಎಳೆರವಿಯನು ಕರೆತಂದಿತು ಬಿಳಿಮುಗಿಲಿನ ಮೇನೆ
ಅಲ್ಲಿಂದಲೆ ಚೆಲ್ಲಾಡಿತು ಪನ್ನೀರಿನ ಸೋನೆ
ಥಕ ಥಕ ಥೈ ಥೈ ಥಕ ಥಕ ಕುಣಿದಳು ಈ ರಾಧೆ
ಗರಿಬಿಚ್ಚಿದ ನವಿಲಾದಳು ಲೀಲೆಯ ಆಮೋದೆ
ಮುರಳಿಯ ಆ ಮಧುರ ನಾದ ಕರಗಿಸಿರಲು ವಿರಹ
ನೆಲದ ಜೊತೆಗೆ ಮುಗಿಲು ಕೂಡ ಅನುಭವಿಸಿತು
ಪುಲಕ ಇಂದ್ರಲೋಕ ತಂದಿರಿಸಿದ ನಂದನವನವೆಲ್ಲಿ?
ಇಲ್ಲೇ ಇದೆ ಸುರಸುಂದರ ಬೃಂದಾವನದಲ್ಲಿ
ಎಲ್ಲ ಕಡೆಗು ತೊಳಗಿ ಬೆಳಗಿ ಮಳೆಬಿಲ್ಲಿನ ರಾಗ
ಸುಖವುಣಿಸಿದೆ ಮನ ತಣಿಸಿದೆ ಒಲವಿನ ಅಭಿಯೋಗ
ಎಂದೋ ಯಾರೋ ನುಡಿಸಿದ ಮುರಳಿ
ಎಂದೋ ಯಾರೋ ನುಡಿಸಿದ ಮುರಳಿ
ಇಂದೇಕೋ ಕೇಳಿಸುತಿದೆ ಮರಳಿ
ಹಳೆಯ ಮುರಳಿಯಲಿ ಕೇಳಿಬರುತಿರುವ
ಎದೆಯಿರಿಯುವ ಹಾಡು
ನೊಂದ ಗಳಿಗೆಯನು ಮುಂದೆ ಸರಿಸುತಿಹ
ಹಳೆ ರಾಗದ ಜಾಡು
ಕಾಣದಾವುದೋ ಕೈಯಿ ಎದೆಯುರಿಯ
ಬಿಡದೆ ಕೆದಕುತಿಹುದು
ಇನ್ನು ಕೂಡ ಹರಿಸುತ್ತ ಕಣ್ಣೀರು
ಸುಖವನಳಿಸುತಿಹುದು
ಬಯಲ ಹೊಳೆಯೊಂದು ಸುತ್ತಿಬರುವಂತೆ
ದೂರ ಬೆಟ್ಟವನ್ನು
ಮತ್ತೆ ತರುತಿಹುದು ಹಳೆಯದೀ ಹಾಡು
ನನ್ನದೆ ಗತವನ್ನು
ಸಂಜೆಮಳೆ ಸುರಿದು ಅಳಿಸಿಬಿಡುವಂತೆ
ಚಂದದ ಮಳೆಬಿಲ್ಲ
ಮರೆತ ನೆನಪುಗಳ ತರುತ ನನ್ನೆದೆಯ
ಅಳಿಸುತಿರುವುದಲ್ಲ
ಹಾಡುಗಳಿಗೆ ಇನ್ನಷ್ಟು ಲಯ ಬೇಕು ಎಂದೆನಿಸಿತು
ನದಿ ಹರಿದ ಹಾಗಿದೆ ಕವಿತೆ..ಜುಳುಜುಳು..ಇಷ್ಟವಾಯ್ತು