ಆಶಾ ರಘು ಓದಿದ ‘ಬೇಲಿಯ ಗೂಟದಲ್ಲೊಂದು ಚಿಟ್ಟೆ’

ಆಶಾ ರಘು

ಹಿರಿಯ ಕವಿ ಡಾ.ನಾ.ಮೊಗಸಾಲೆಯವರ ‘ಬೇಲಿಯ ಗೂಟದಲ್ಲೊಂದು ಚಿಟ್ಟೆ’ ಕವನ ಸಂಕಲನ ನೀಡಿದ ಮೊದಲ ಓದಿನ ಅನುಭವವನ್ನು ನಾನು ಹೀಗೆ ಹಂಚಿಕೊಂಡಿದ್ದೇನೆ.

ನನ್ನ ಅಭಿಪ್ರಾಯವನ್ನು ಕೃತಿಯ ಕೊನೆಯ ಪುಟಗಳಲ್ಲಿ ಪ್ರಕಟಿಸಿರುವ ಅವರಿಗೆ ಕೃತಜ್ಞತೆಗಳು.

ಒಂದು ತಂಪಿನ ಇರುಳಿನಲಿ ರೈಲಿನಲ್ಲಿ ಕುಳಿತು ಪ್ರಯಾಣಿಸುವಾಗ, ಆಕಾಶದ ತುಂಬೆಲ್ಲಾ ತಾರೆಗಳು ಹೊಳೆಯುತ್ತಾ, ಬಿಳಿಮೋಡಗಳ ಒಳ ನುಸುಳಿ, ಹೊರ ಬರುತ್ತಾ ಹುಣ್ಣಿಮೆಯ ಚಂದಿರನು ಹಾಡುಗಳನ್ನು ಹೇಳುತ್ತಾ ಹಿಂಬಾಲಿಸಿಕೊಂಡು ಬಂದಂತದ್ದೇ ತೆರನಾದ ಅಹ್ಲಾದವನ್ನೂ, ಹಿತವನ್ನೂ ನೀಡಿತು ಡಾ.ನಾ.ಮೊಗಸಾಲೆಯವರ ಕವನ ಸಂಕಲನದ ಓದು! ವಿಶಾಲವಾದ ಮರ, ನವಿಲುಗರಿ, ಮಗು, ಬೆಳ್ಳಕ್ಕಿಗಳ ಸಾಲು, ಅಳಿಲು, ಚಿಟ್ಟೆ, ಕುದಿ ಎಸರು, ಆಕಾಶ, ದಾಸವಾಳದ ಹೂವು, ಬುದ್ಧ, ತಂಪಿನ ಮನೆ, ಒಪ್ಪುವ ಮಡದಿ.. ಇವು ಇಲ್ಲಿನ ಎಲ್ಲ ಕವನಗಳಲ್ಲಿ ಮತ್ತೆ ಮತ್ತೆ ಪಸರಿಸುವ ಪರಿಮಳ! ದಾಂಪತ್ಯದ ಅನುಸಂಧಾನ, ತಾತ್ವಿಕ ಜಿಜ್ಞಾಸೆಗಳು ಒಟ್ಟಾರೆ ಸಂಕಲನದ ಜೀವಾಳ!

ಕವಿತೆ ಆಧ್ಯಾತ್ಮದ್ದಿರಲಿ, ಲೌಕಿಕದ್ದಿರಲಿ ಬಹುತೇಕ ಎಲ್ಲ ಕವಿತೆಗಳಲ್ಲಿ ಸಮರಸದ ದಾಂಪತ್ಯದ ಚಿತ್ರಣ ಕಾಣಬಹುದು. ’ಅವಳು ಮತ್ತು ನಾನು’, ’ಮುತ್ತು’, ’ಬಿಳಿ ದಾಸವಾಳದ ಹೂವು’, ’ಮರ ಮತ್ತು ನೆರಳು’, ’ಮುಸ್ಸಂಜೆ ಅಲ್ಲದ ಮುಸ್ಸಂಜೆ’ ಮೊದಲಾದ ಕವನಗಳನ್ನು ಇಲ್ಲಿ ಉದಾಹರಿಸಬಹುದು. ’ಮುಸ್ಸಂಜೆ ಅಲ್ಲದ ಮುಸ್ಸಂಜೆ’ ಕವಿತೆಯಲ್ಲಿ ’ಗರಿಕೆ ಹುಲ್ಲಿನ ಮೇಲೆ ಇರುವ ಮಂಜಿನ ಮುತ್ತು; ಇವಳ ಕಣ್ಣಿನ ಒಳಗೆ ಇರುವಷ್ಟು ದಿವಸ’ ಎನ್ನುತ್ತಾರೆ! ಎಂಥಹಾ ನವಿರಾದ ಭಾವವಿದು..!? ಇಂತಹ ನವಿರಾದ ಭಾವವನ್ನು ಹೊಮ್ಮಿಸುವ ಮತ್ತೊಂದು ಸಾಲು ಇವರ ’ಮುತ್ತು’ ಕವಿತೆಯಲ್ಲಿದೆ.

ಮಡದಿ ದಾಸವಾಳ ಗಿಡದ ಮೊಗ್ಗುಗಳನ್ನು ಪ್ರತಿನಿತ್ಯ ಕೊಯ್ಯುತ್ತಾಳೆ.. ಆದರೆ ಒಂದೇ ಒಂದು ಮೊಗ್ಗನ್ನು ಮಾತ್ರ ಬಿಟ್ಟಿರುತ್ತಾಳೆ! ಅದು ಮಾರನೇ ದಿನ ಅರಳ ನಿಂತು ಕವಿಗೆ ಮುದ ನೀಡುತ್ತದೆ. ಗಿಡದಲ್ಲಿ ಒಂದೇ ಒಂದು ಮೊಗ್ಗನ್ನ ಮಾತ್ರ ಕೀಳದೇ ಬಿಡುವುದೇಕೆಂದು ಪ್ರಶ್ನಿಸುವ ಕವಿಗೆ ಮಡದಿ ’ಬೆಳಗ್ಗೆದ್ದು ನಾನು ಕೊಡಲಾಗುವುದೇ ನಿಮಗೆ ಮುತ್ತು?’ ಎನ್ನುತ್ತಾಳೆ!

’ಯೋಧ ಮತ್ತು ಯೋಗಿ’, ’ನೀರಡಿಕೆ’, ’ಇಷ್ಟಾನಿಷ್ಟ’, ’ಅನುತ್ತರ’ ಮೊದಲಾದ ಕವಿತೆಗಳಲ್ಲಿ ತಾತ್ವಿಕ ಜಿಜ್ಞಾಸೆಯನ್ನು ಕಾಣಬಹುದಾದರೆ, ’ಬೆಣ್ಣೆ’, ’ಶಬರಿ’, ’ಅಹಲ್ಯೆ’, ’ಊರ್ಮಿಳೆ’ ಮೊದಲಾದ ಕವಿತೆಗಳಲ್ಲಿ ಮರುನಿರೂಪಣೆಗೊಳ್ಳುವ ಪುರಾಣದ ಕಥೆಗಳನ್ನು ಕಾಣಬಹುದು. ’ರೂಪಕ’ ಕವಿತೆಯ ’ಆಶಾಶಕ ಕಣ್ಣಿಗೆ ಮೂಡಿದ ಹಾಗೆ ರೆಪ್ಪೆ; ಹಾರಾಡುವ ಆ ಹಕ್ಕಿ..’ ಎಂಬ ಸಾಲು, ’ಏನದು?’ ಕವಿತೆಯ ’ಮೇಲೆ ನೋಡಿದರೆ ಆಕಾಶದಲ್ಲಿ ಚಿತ್ರ ಬಿಡಿಸುತ್ತಿರುವ ಕಲಾವಿದನೊಬ್ಬ ಸುಮ್ಮನೆ ಕುಂಚ ಕೊಡವಿದಾಗ ಬಿದ್ದ ಬಣ್ಣಗಳು ಎದ್ದಿವೆ ಮೋಡಗಳಾಗಿ’ ಎಂಬ ಸಾಲುಗಳು ಮೊಗಸಾಲೆಯವರ ರೂಪಕಶಕ್ತಿಗೆ ಸಾಕ್ಷಿ!

‍ಲೇಖಕರು Admin

July 26, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: