ಆಶಾ ಜಗದೀಶ್
—-
ನನಗೆ ಪ್ರೀತಿಯ ಪಾಠ ಮಾಡಿದವನು ನೀನು
ಜಗತ್ತನ್ನೇ ಸುಂದರವಾಗಿ ನೋಡುವ ಬಗ್ಗೆ
ತಿಳಿಸಿಕೊಟ್ಟವನು ನೀನು
ಮತ್ತೆ ನಾನೇ ನಿನ್ನ ಪ್ರಪಂಚ ಎಂದೆಲ್ಲಾ ಹೇಳುತ್ತಾ
ನಿನ್ನ ಪ್ರಪಂಚವನ್ನು ಬಿಟ್ಟು ನನ್ನಲ್ಲಿಗೇ
ಬಂದುಬಿಟ್ಟವನು ನೀನು
ನಿನ್ನ ಕಣ್ಣು ಮೋಸ ಹೋಗುತ್ತಿರುವುದನ್ನು ನೋಡಿಯೂ
ಏನೊಂದೂ ಮಾಡಲಾರದ ಅಸಹಾಯಕತೆ
ನನಗೆ ನನ್ನ ಪ್ರಪಂಚ ಬದುಕಿನ ನಿಷ್ಠುರ ಸತ್ಯಗಳನ್ನು
ನಿರ್ದಾಕ್ಷಿಣ್ಯವಾಗಿ ಕಲಿಸಿದೆ
ಮತ್ತು ನಿನ್ನ ಪ್ರಪಂಚವನ್ನು ಅನುಮಾನಿಸದೆ ಹೇಗಿರಲಿ
ನಂಬಿಕೆಯ ತಾಯಿ ಬೇರೇ ಇಲ್ಲದ ಈ ಜಗತ್ತು
ತಂತುಬೇರುಗಳ ಅರೆ ಪೋಷಣೆಯಲ್ಲಿ
ಎತ್ತರಕ್ಕೆ ಏರದೆ ವಿಶಾಲವಾಗಿ ಚಾಚಿಕೊಳ್ಳದೆ
ಕುಬ್ಜವಾಗಿದೆ
ಬಿಡುಗಡೆಗಾಗಿ ಮಾಡಿದ ತಪಗಳೆಲ್ಲ
ಹೊಳೆಯಲ್ಲಿ ತೊಳೆದ ಹುಣಸೆಹಣ್ಣು
ನೀನು ನಿನ್ನ ಕಣ್ಣ ಸನಿಹದಲ್ಲಿ ನನ್ನನ್ನಿಟ್ಟುಕೊಂಡು
ನೋಡುತ್ತಿರುವ ಹಾಗೆ
ನನಗೆ ನಿನ್ನನ್ನು ನೋಡುವುದು ಸಾಧ್ಯವಾಗುತ್ತಿಲ್ಲ
ಇಲ್ಲಿ ಗನ್ನುಗಳೇ ಹೆಚ್ಚು ಆರ್ಭಟಿಸುತ್ತವೆ
ಅದರ ಸದ್ದಿಗೆ ಹೂಬಿಡುವುದನ್ನೇ ಮರೆತ ಸಸಿಗಳು
ರಕ್ತದ ರುಚಿ ಹತ್ತಿರುವ ನೆಲ
ಕಲ್ಲಾದ ಎದೆಯೊಳಗೆ ವಜ್ರಗಲ್ಲು ಹೃದಯ
ಇಡೀ ಭೂಮಿಯೇ ಮುಳ್ಳು ಕಂಟಿಗಳ ಬೇಲಿಗಳಿಂದ
ಚುಚ್ಚಿಸಿಕೊಂಡು ನಲುಗುತ್ತಿದೆ
ಬೇಲಿಯನ್ನು ಕಿತ್ತು ಹಾಕುವ ಚಳುವಳಿ ಮಾಸುತ್ತಾ
ಮತ್ತೆ ಬೇಲಿ ಕಟ್ಟುವುದೀಗ ಹೊಸ ಚಳುವಳಿ
ಹೋರಾಟದ ಉದ್ದೇಶವೇನು ಯಾರಿಗೂ ಗೊತ್ತಿಲ್ಲ
ದ್ವೇಶದ ಪೆಟ್ರೋಲಿಗೆ ಕಿಡಿತಾಕಿಸುತ್ತಿದ್ದಾರೆ
ದಹಿಸುವುದು ಕಿಚ್ಚಿನ ಧರ್ಮ
ಕಿಡಿ ತಾಕಿಸಿದ ಕೈಗಳನ್ನೂ ಬೇಯಿಸಿ…
ಯಾವ ತಾಯಿಯೋ
ಕರುಳು ಕಿತ್ತು ಬರುವಂತೆ ಆಳುತ್ತಿದ್ದಾಳೆ
ಯಾರ ಮಕ್ಕಳೋ ಪರದೇಶಿಯಾಗಿ ಮಲಗಿದ್ದಾರೆ
ಹೂಬಿಡದ ಬಂಜೆಗಿಡಗಳು
ದೇವರ ನೆತ್ತಿಯೂ ಖಾಲಿ ಖಾಲಿ
ಮುಪ್ಪಿನ ಹಬ್ಬದ ಬೆಂಕಿಕೊಂಡದ ಸುತ್ತಾ
ಕುಣಿಯುವ ಪ್ರೇತ ನರ್ತನದಂತೆ
ಎಲ್ಲರೂ ಘೋರವಾಗಿ ಕುಣಿಯುತ್ತಿದ್ದಾರೆ
ನಾವು ಸುಮ್ಮನೇ ಕೃಷಿ ಮಾಡೋಣ
ಕಲ್ಲುಮುಳ್ಳುಗಳ ಆರಿಸಿ ತಿಪ್ಪೆಗೆ ಸುರಿದು
ತಡವಿ ತಡವಿ ಹಸನು ಮಾಡಿ ನೆಲವ
ಒಂದೊಂದೇ ಪ್ರೀತಿಯ ಬೀಜಗಳ
ಮೊಳಕೆ ಕಟ್ಟಿ ಸಸಿ ಮಾಡಿ ನಾಟಿ ನೀರೆರೆದು
ಅದು ಬೆಳೆಯುವುದನ್ನು
ಬೆಳಕನ್ನೇ ಹೊಮ್ಮುತ್ತಾ ಅರಳುವುದನ್ನು
ನೋಡುತ್ತಾ ನೋಡುತ್ತಾ
ಬೆಳಕಿನ ಹಕ್ಕಿಗಳಾಗಿ ಹಾರಿ ಹೋಗೋಣ
ಚಂದ ಕವಿತೆ ಆಶಾ.