
ಆರ್ ಬಿ ಗುರುಬಸವರಾಜ
ಗೆಳೆಯ ನಂದಕುಮಾರ. ಜಿ.ಕೆ. ಬರೆದ ‘ಬಿಳೆ ದಾಸ್ವಾಳ’ ಕಥಾ ಸಂಕಲನ ಓದಿದೆ. ತುಂಬಾ ಆಪ್ತವಾದ ಕಥಾ ಸಂಕಲನ. ಇಲ್ಲಿನ ಕತೆಗಳನ್ನು ಓದುವಾಗ ಇವು ನಮ್ಮವೇ ಕತೆ ಎನಿಸಿತು. ಇದರಲ್ಲಿನ ಐದು ಕತೆಗಳು ವೈವಿಧ್ಯಮಯ ಪರಿಸರವನ್ನು ಪರಿಚಯಿಸುತ್ತವೆ.
ಗ್ರಾಮೀಣ ಸೊಗಡಿನ ಹಿನ್ನೆಲೆಯಲ್ಲಿ ಬೆಳೆದ ನಂದಕುಮಾರ ಸಹಜವಾಗಿ ಗ್ರಾಮೀಣ ಭಾಷೆಯನ್ನೇ ಮಾಧ್ಯವನ್ನಾಗಿ ಬಳಸಿರುವುದು ಖುಷಿತಂದಿದೆ. ಅದರಲ್ಲೂ ನಮ್ಮ ಹೂವಿನಹಡಗಲಿ (ವಿಜಯನಗರ ಜಿಲ್ಲೆ) ಸುತ್ತಮುತ್ತಲ ಭಾಷೆ ಬಳಸಿರುವುದು ನಮ್ಮತನವನ್ನು ಉಳಿಸುವ ಮತ್ತು ಬೆಳೆಸುವ ಪ್ರಯತ್ನದಲ್ಲಿ ನಂದಕುಮಾರ ಯಶಸ್ವಿಯಾಗಿದ್ದಾನೆ ಎನಿಸಿತು.

ಇನ್ನು ಕತೆಗಳ ಬಗ್ಗೆ ಹೇಳುವುದಾದರೆ ಇವೆಲ್ಲವೂ ನಮ್ಮ ಪರಿಸರದ ಚಿತ್ರಣಗಳಾಗಿ ಕಣ್ಮುಂದೆ ಚಲಿಸುತ್ತಾ, ಮನಸ್ಸಿನ ಕದ ತಟ್ಟುತ್ತವೆ. ಗಣಪನ ಕತೆಯಲ್ಲಿನ ಬಸವಿ, ದುರುಗ, ಜೋಗವ್ವಾ ಇವರೆಲ್ಲರೂ ನಮ್ಮ ಊರಿನ ಹಾಗೂ ನಾವು ನಿತ್ಯವೂ ಕಾಣುವ ಪಾತ್ರಗಳೇ ಎನಿಸುತ್ತವೆ. ಗಣಪನ ಕತೆ ಒಮ್ಮೆ ನಮ್ಮ ಬಾಲ್ಯದ ಗಣಪನ ಹಬ್ಬವನ್ನು ನೆನಪಿಸಿಕೊಳ್ಳುವಂತೆ ಮಾಡಿತು. ಬಾಲ್ಯದಲ್ಲಿನ ಗಣಪನ ಹಬ್ಬದ ಸಂಭ್ರಮ ಸಡಗರಗಳೆಲ್ಲ ಮಾಯವಾಗಿವೆ. ಈಗ ಬಹುತೇಕ ಆಚರಣೆಗಳೆಲ್ಲ ಕೇವಲ ಯಾಂತ್ರಿಕ ಎನಿಸಿಬಿಡುತ್ತವೆ.
ಇನ್ನು ಬಿಳೆ ದಾಸ್ವಾಳ ಕತೆಯಲ್ಲಿನ ಸಾವಿತ್ರಿ ದೇವರ ಪೂಜೆಗಾಗಿ ತನ್ನನ್ನೆ ಅರ್ಪಿಸಿಕೊಳ್ಳುವ ಬಿಳೆ ದಾಸ್ವಾಳದ ರೂಪದಲ್ಲಿ ಪ್ರತಿಮಾ ರೂಪದಲ್ಲಿ ನಿಂತು ನಮ್ಮೆ ಅಂಧಕಾರವನ್ನು ಬೆಂಬಿಡದೇ ಬಿಂಬಿಸುತ್ತಾಳೆ. ಸೊನ್ನಿ ಕತೆಯಲ್ಲಿನ ವೀರಭದ್ರಪ್ಪ ನಮ್ಮ ಹಳ್ಳಿಯ ಸಂಗೀತಗಾರರನ್ನು ನೆನಪಿಸುತ್ತದೆ. ಶಾಸ್ತ್ರೀಯ ಸಂಗೀತಾಭ್ಯಾಸ ಮಾಡದ ಅದೆಷ್ಟೋ ಹಳ್ಳಿ ಪ್ರತಿಭೆಗಳು ಎಲೆ ಮರೆಕಾಯಿಯಂತೆ ತಮ್ಮ ಸಂಗೀತ ಸೇವೆಯ ಪರಂಪರೆಯನ್ನು ಮುಂದುವರೆಸಿದ್ದಾರೆ. ಅಂತಹ ಪ್ರತಿಭೆಗಳನ್ನು ಸೊನ್ನಿ ಕತೆ ನೆನಪಿಸುತ್ತದೆ.
ಎಂಟನೇ ಮೈಲಿನ ಕತೆಯಂತೂ ಒಂದು ರೀತಿಯ ಸಸ್ಪೆನ್ಸ್ ಕತೆಯಾಗಿದೆ. ಪುಸ್ತಕದ ಹುಳುವಾದ ನವನೀತ ಕತೆಯಲ್ಲಿನ ನವನೀತ ಇಂದಿನ ಶೈಕ್ಷಣಿಕ ವ್ಯವಸ್ಥೆಗೆ ಕೈಗನ್ನಡಿಯಾಗುತ್ತಾನೆ. ಇಲ್ಲಿನ ಕತೆಗಳೆಲ್ಲವೂ ಒಂದೇ ತುತ್ತಿಗೆ ಆಸ್ವಾದಿಸಬಹುದಾದ ಕತೆಗಳಾದವರೂ, ಮತ್ತೆ ಮತ್ತೆ ಆಸ್ವಾದಿಸಬೇಕೆನಿಸುತ್ತವೆ. ಇಂತಹ ಅಮೂಲ್ಯ ಕತೆಗಳನ್ನು ನೀಡಿದ ನಂದಕುಮಾರನ ಸಾಹಿತ್ಯ ಸೇವೆ ನಂದಾದೀಪವಾಗಿ ಬೆಳಗಲಿ, ಆ ಮೂಲಕ ಸಾಹಿತ್ಯಿಕ ಮನಸ್ಸುಗಳಿಗೆ ಮುದನೀಡಲಿ ಎಂದು ಆಶಿಸುವೆ.
0 ಪ್ರತಿಕ್ರಿಯೆಗಳು