
ಆರ್ ಬಿ ಗುರುಬಸವರಾಜ
ಮಕ್ಕಳ ಹಕ್ಕುಗಳ ಆಪ್ತ ಮಿತ್ರ “ಟ್ರಿನ್-ಟ್ರಿನ್ ಹಲೋ, ಮಕ್ಕಳ ಸಹಾಯವಾಣಿ”
“ಹಲೋ ಮಕ್ಕಳೇ, ಆಪತ್ತಿನಲ್ಲಿದ್ದೀರಾ? ಸಹಾಯ ಬೇಕೇ? ನೀವೇನೂ ಹೆದರಬೇಡಿ. ನಾವಿದ್ದೇವೆ. ಈಗ ಮಕ್ಕಳ ಸಹಾಯವಾಣಿ ಎಂಬ ಫೋನ್ ನಂಬರ್ ಇದೆ. ಆ ನಂಬರ್ ಈ ಪುಸ್ತಕದಲ್ಲಿದೆ. ತಡಮಾಡದೇ ಓದಿ ತಿಳಿದುಕೊಳ್ಳಿ. ನಂಬರನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಕಷ್ಟ ಬಂದಾಗ ಕರೆ ಮಾಡಿದರೆ ನಿಮಗೆ ಸಹಕರಿಸುತ್ತಾರೆ”. ಇದು ಪುಸ್ತಕದ ಬೆನ್ನುಡಿಯಾದರೂ, ಮಕ್ಕಳ ಮನಸ್ಸನ್ನು ಅರಿತ ಮೇಸ್ಟ್ರು ಹೇಳಿದಂತಿದೆ. ಹೌದು, ತಮ್ಮ ಶಾಲೆಯ ಮಕ್ಕಳ ಬಗ್ಗೆ ಕಾಳಜಿ ಇರುವ ಪ್ರತಿ ಮೇಸ್ಟ್ರು ಹೇಳುವ ಮಾತಿದು. ಈ ಮಾತನ್ನು ಪುಸ್ತಕದ ರೂಪದಲ್ಲಿ ನೀಡಿದವರು ಶಿಕ್ಷಕ ಡಾ. ಪರಮೇಶ್ವರಯ್ಯ ಸೊಪ್ಪಿಮಠ ಅವರು.

ಶಿಕ್ಷಣ ಕ್ಷೇತ್ರದಲ್ಲಿ ಸದಾ ವಿಭಿನ್ನ ಚಟುವಟಿಕೆಗಳಿಗೆ ಹೆಸರುವಾಸಿಯಾದ ಶಿಕ್ಷಕ, ಬರಹಗಾರ ಡಾ.ಪರಮೇಶ್ವರಯ್ಯ ಸೊಪ್ಪಿಮಠ ಅವರು ಮಕ್ಕಳಿಗೆಂದೇ ರಚಿಸಿದ ಪುಸ್ತಕ “ಟ್ರಿಣ್ ಟ್ರಿಣ್ ಹಲೋ, ಮಕ್ಕಳ ಸಹಾಯವಾಣಿ”. ಇಂದಿನ ಮಕ್ಕಳು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ಹಕ್ಕುಗಳೇನೋ ಇವೆ. ಆದರೆ ಅವುಗಳನ್ನು ಯಾವಾಗ? ಎಲ್ಲಿ? ಹೇಗೆ? ಬಳಸಿಕೊಳ್ಳಬೇಕೆಂಬ ಪ್ರಾಥಮಿಕ ಮಾಹಿತಿ ಅವರಿಗೆ ಇಲ್ಲ. ಮಕ್ಕಳ ಈ ಸಮಸ್ಯೆಯನ್ನು ಅರಿತ ಸೊಪ್ಪಿಮಠ ಅವರು ಮಕ್ಕಳಿಗಾಗಿ ಮಕ್ಕಳ ಹಕ್ಕುಗಳನ್ನು ತಿಳಿಸುವ ಈ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ ಎನ್ನಬಹುದು. ಮಕ್ಕಳ ಹಕ್ಕುಗಳ ಸಮಿತಿಯು ಮಾಡಬೇಕಾದ ಕೆಲಸವನ್ನು ಮಕ್ಕಳ ಮನಸ್ಸಿನ ಶಿಕ್ಷಕರಾಗಿ ಮಾಡಿರುವುದು ಶ್ಲಾಘನೀಯ.
ಪ್ರಸ್ತುತ ಪುಸ್ತಕದಲ್ಲಿ ಮಕ್ಕಳ ಹಕ್ಕುಗಳನ್ನು, ಅವರ ದೈನಂದಿನ ಸಮಸ್ಯೆಗಳ ಹಿನ್ನೆಲೆಯಲ್ಲೇ ವಿವರಿಸುತ್ತಾ, ಹಕ್ಕುಗಳನ್ನು ಪರಿಚಯಿಸಿರುವುದನ್ನು ಗಮನಿಸಬಹುದು. ಅಜ್ಜಿ, ಮೊಮ್ಮಕ್ಕಳು ಮತ್ತು ಸ್ನೇಹಿತರ ಸಂಭಾಷಣೆಗಳ ಮೂಲಕ ಹಕ್ಕುಗಳನ್ನು ವಿವರಿಸಿದ್ದಾರೆ. ಇಲ್ಲಿನ ಘಟನೆಗಳನ್ನು ಓದುತ್ತಾ ಹೋದಂತೆ ಮಕ್ಕಳು ಹೇಗೆ ಸಮಸ್ಯೆಗಳಿಗೆ ತುತ್ತಾಗುತ್ತಾರೆ ಮತ್ತು ಹಕ್ಕುಗಳು ಅವರನ್ನು ಹೇಗೆ ರಕ್ಷಿಸುತ್ತವೆ ಎಂಬುದು ತಿಳಿಯುತ್ತದೆ. ಇಲ್ಲಿನ ಘಟನೆಗಳು, ಸನ್ನಿವೇಶಗಳು ಕಾಲ್ಪನಿಕ ಎನಿಸಿದರೂ ಮಕ್ಕಳ ದೈನಂದಿನ ಜೀವನಕ್ಕೆ ತುಂಬಾ ಸಮೀಪದಲ್ಲಿವೆ ಎಂಬುದಂತೂ ಸತ್ಯ.
ಮಕ್ಕಳು ತಮ್ಮ ಹಕ್ಕುಗಳಿಗೆ ಚ್ಯುತಿ ಬಂದಾಗ ಯಾರನ್ನು ಭೇಟಿಯಾಗಬೇಕು? ಹೇಗೆ ಭೇಟಿಯಾಗಬೇಕು? ‘ಮಕ್ಕಳ ಸಹಾಯವಾಣಿ’ಯನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ದುಷ್ಟಾಂತದ ಮೂಲಕ ಪ್ರಸ್ತುತಪಡಿಸಿದ್ದಾರೆ. ಇಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ ಹತ್ತು ಒಂಬತ್ತು ಎಂಟು (1098)ನ್ನು ಹೇಗೆ ನೆನಪಿಟ್ಟುಕೊಳ್ಳಬೇಕು? ಯಾವ ಸಮಯದಲ್ಲಿ ಈ ಸಂಖ್ಯೆಗೆ ಕರೆಮಾಡಬೇಕು? ಎಂಬುದನ್ನು ತುಂಬಾ ಆಪ್ತವಾಗಿ ಪರಿಚಯ ಮಾಡಿದ್ದಾರೆ. ಮಕ್ಕಳ ಸಹಾಯವಾಣಿಗೆ ಕರೆ ಮಾಡುವುದರಿಂದ ಮಕ್ಕಳು ಹೇಗೆ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಬಹುದು ಎಂಬುದನ್ನು ವಿವರವಾಗಿ ತಿಳಿಸಿದ್ದಾರೆ. ಕೊನೆಯ ಪುಟದಲ್ಲಿನ ಕವನ ಇಡೀ ಪುಸ್ತಕದ ತಿರುಳನ್ನು ಹೊಂದಿದೆ. ಮಕ್ಕಳು ಸಹಾಯವಾಣಿ ಸಂಖ್ಯೆಯನ್ನು ನೆನಪಿಟ್ಟುಕೊಳ್ಳಲು ಸಹಕಾರಿಯಾದ ಕವನ ಇದಾಗಿದೆ. ನಾಡಿನ ಪುಸ್ತಕ ಪ್ರಕಾಶನದಲ್ಲಿ ಮುಂಚೂಣಿಯಲ್ಲಿನ ನವಕರ್ನಾಟಕ ಪ್ರಕಾಶನವು ಈ ಪುಸ್ತಕವನ್ನು ಹೊರತಂದಿದೆ. ಪುಸ್ತಕದ ಆಶಯಕ್ಕೆ ಪೂರಕವಾಗಿ ಚಿತ್ರಗಳಿದ್ದು, ಮಕ್ಕಳ ಓದಿನ ಓಘವನ್ನು ಹಿಡಿದಿಡುತ್ತವೆ. ಮುಖಪುಟವು ಆಕರ್ಷಕವಾಗಿದ್ದು, ಕಾರ್ಟೂನ್ ಚಿತ್ರಗಳಿಂದ ತುಂಬಿದೆ.

ಈಗಾಗಲೇ ಮಕ್ಕಳಿಗಾಗಿ ಅನೇಕ ಪುಸ್ತಕಗಳು ಮತ್ತು ನೂರಾರು ಲೇಖನಗಳನ್ನು ಬರೆದಿರುವ ಪರಮೇಶ್ವರಯ್ಯ ಅವರಿಗೆ ಮಕ್ಕಳ ನಾಡಿಮಿಡಿತ ತುಡಿತ-ಮಿಡಿತಗಳಿಗೆ ಸ್ಪಂದಿಸುವ ಮನಸ್ಸಿನ ವಿಚಾರಗಳು ಈ ಪುಸ್ತಕದಲ್ಲಿ ಪ್ರಕಟಗೊಂಡಿವೆ. ಇದು ಕೇವಲ ಮಕ್ಕಳ ಪುಸ್ತಕ ಅಲ್ಲ. ದೊಡ್ಡವರು ಅದರಲ್ಲೂ ಪೋಷಕರು ಕಡ್ಡಾಯವಾಗಿ ಓದಲೇಬೇಕಾದ ಪುಸ್ತಕ ಇದು. ಮಕ್ಕಳ ಏಳಿಗೆಯನ್ನು ಬಯಸುವ ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿಟ್ಟುಕೊಂಡು ಓದಬೇಕಾದ ಪುಸ್ತಕ. ಮಕ್ಕಳ ಹುಟ್ಟು ಹಬ್ಬ ಹಾಗೂ ಇನ್ನಿತರೇ ಶುಭ ಕಾರ್ಯಗಳಲ್ಲಿ ಮಕ್ಕಳಿಗೆ ಉಡುಗೊರೆ ರೂಪದಲ್ಲಿ ನೀಡಬಹುದಾದ ಅಮೂಲ್ಯ ಪುಸ್ತಕ ಇದಾಗಿದೆ.
0 ಪ್ರತಿಕ್ರಿಯೆಗಳು