ಆರ್ ಟಿ ವಿಠ್ಠಲಮೂರ್ತಿ ಅವರ ಮಹತ್ವದ ಕೃತಿ 'ಇದೊಂಥರಾ ಆತ್ಮ ಕಥೆ'.

ಹಿರಿಯ ಪತ್ರಕರ್ತ ಆರ್ ಟಿ ವಿಠ್ಠಲಮೂರ್ತಿ ಅವರ ಮಹತ್ವದ ಕೃತಿ ‘ಇದೊಂಥರಾ ಆತ್ಮ ಕಥೆ’.
ಶನಿವಾರ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಈ ಕೃತಿ ಬಿಡುಗಡೆಯಾಗುತ್ತಿದೆ.
ಬಹುರೂಪಿ ಈ ಕೃತಿಯನ್ನು ಪ್ರಕಟಿಸಿದೆ
ಕನ್ನಡ ಪತ್ರಿಕೋದ್ಯಮದಲ್ಲಿನ ೩೦ ವರ್ಷಗಳ ಯಾನದ ಕಥೆ. ತಮ್ಮ ಬದುಕಿನ ಜೊತೆ ಮಹತ್ವದ ರಾಜಕಾರಣಿಗಳ ಕಥೆಯನ್ನು ಬೆಸುಗೆ ಹಾಕಿದ್ದರಿಂದಲೇ ಇದು ಆತ್ಮ ಕಥೆಯಲ್ಲ, ‘ಇದೊಂಥರಾ’ ಆತ್ಮಕಥೆ
ಈ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ. 

ಇಲ್ಲಿ 30 ವರ್ಷದ 
ಕ್ಯಾಲೆಂಡರ್ ಹಾಳೆಗಳಿವೆ..
——-
– ಜಿ ಎನ್ ಮೋಹನ್ 
ನಾವು ಮಾತು ನಿಲ್ಲಿಸಿದಾಗ ಒಂದು ವಿಷಾದ ನಮ್ಮೆದುರು ಮೈಮುರಿದುಕೊಂಡು ಬಿದ್ದಿತ್ತು.
ತುಂಬಾ ದಿನಗಳ ಕಂಡ ಸಿಹಿತಿನಿಸೇನೋ ಎನ್ನುವಂತೆ ಹಲವು ಕಾಲದ ನಂತರ ಮಾತಿಗಿಳಿದಿದ್ದ ನಾವು ಗಂಟೆಗಟ್ಟಲೆ ಹಲವಷ್ಟು ವಿಷಯಗಳನ್ನು ಗಳಗಳನೆ ಆಡಿ ಮುಗಿಸಿದ್ದೆವು. ಆ ಮಾತಿನಲ್ಲಿ 30 ವರ್ಷಗಳ ಕ್ಯಾಲೆಂಡರ್ ಹಾಳೆಗಳು ಪಟಪಟನೆ ರೆಕ್ಕೆ ಬಡಿದು ಹಾರಿದ್ದವು. ಅದರಲ್ಲಿ ಸಂಭ್ರಮವಿತ್ತು, ಆತಂಕವಿತ್ತು, ವಿಷಾದವಿತ್ತು,  ನಗೆಬುಗ್ಗೆ ಇತ್ತು, ಕಣ್ಣೀರಿತ್ತು, ಹೇಳಿಕೊಳ್ಳಲಾಗದ ಚಡಪಡಿಕೆ ಇತ್ತು. ಇದಕ್ಕಿಂತಲೂ ಹೆಚ್ಚಾಗಿ ಮೂರು ದಶಕದ ಅಧಿಕಾರ ರಾಜಕಾರಣದ ನಿಡುಸುಯ್ಲಿತ್ತು. ಅದರೊಳಗಿನ ಪಿಸುಮಾತುಗಳಿತ್ತು.
ಹಾಗೆ ಮಾತನಾಡಿಕೊಂಡದ್ದು ನಾನು ಹಾಗೂ ಆರ್ ಟಿ ವಿಠ್ಠಲಮೂರ್ತಿ ಅವರು.
ಇಬ್ಬರೂ ಹೆಜ್ಜೆ ಹಾಕಿದ್ದು ಪತ್ರಿಕೋದ್ಯಮದಲ್ಲಿ. ಇಬ್ಬರೂ ಹೆಜ್ಜೆ ಹಾಕಿದ್ದು ಒಂದೇ ಕಾಲದಲ್ಲಿ. ಇಬ್ಬರೂ ಕಂಡದ್ದು ವಿಧಾನಸೌಧದ ಅದೇ ಬಾಗಿಲನ್ನು, ಇಬ್ಬರೂ ಕಂಡದ್ದು ನಾಡಿನ ಅದೇ ಅಂತರಂಗವನ್ನ. ಹಾಗಾಗಿ ಇಬ್ಬರಿಗೂ ಮಾತನಾಡಿದರೂ ಮುಗಿಯದಷ್ಟು ವಿಷಯಗಳಿದ್ದವು.

ವಿಠ್ಠಲಮೂರ್ತಿ ಫೋನಿನ ಆ ತುದಿಯಿಲದ ಕ್ಯಾಲೆಂಡರ್ ಹಾಳೆ ತಿರುಗಿಸಲು ಶುರು ಮಾಡಿದರು. ಒಂದು ಅರಗಿನ ಅರಮನೆಯ ಒಳಗೆ ಸಿಲುಕಿದವರ ನಿಟ್ಟುಸಿರಿನಂತೆ, ಸಿಲುಕಿದ್ದವರು ಆಡಿ ಮುಗಿಸಲು ಬಯಸುತ್ತಿದ್ದ ಪಿಸುಮಾತುಗಳಂತೆ, ಅರಗಿನ ಬೆಟ್ಟದ ಸುತ್ತ ಸುಳಿಯುತ್ತಿದ್ದ ಮಿಂಚುಹುಳುಗಳಂತೆ ಅನೇಕ ಸಂಗತಿಗಳೂ ಹಾದು ಹೋದವು.
ವಿಠ್ಠಲಮೂರ್ತಿ ಸಾಗರದ ಎಲ್ ಬಿ ಕಾಲೇಜಿನಿಂದ ಮನೆಗೆ ವಾಪಸು ಹೋಗುತ್ತಿದ್ದಾಗ ಎಡವಿಬಿದ್ದರೇನೋ ಎನ್ನುವಂತೆ ಮೈಸೂರಿನಲ್ಲಿ ಪತ್ರಿಕೋದ್ಯಮ ಡಿಪ್ಲೊಮೋ ಸೇರಿಕೊಂಡರು. ಅಲ್ಲಿದ್ದವರು ಹರಿಗೋಲು ಕೊಟ್ಟ ಕಾರಣ ಬೆಂಗಳೂರನ್ನು ತಲುಪಿದರು. ಸಮಾಜವಾದಿ ಚಳವಳಿಯ ಮುಗ್ಗುಲಲ್ಲೇ ಇದ್ದುಬಂದ ಕಾರಣದಿಂದ, ಬೀಡಿ ಸೇದಲು ಹೋದಾಗ ಕಿವಿಹಿಡಿದು ಎಳೆದೊಯ್ದ ಅಜ್ಜಿ ಇದ್ದ ಕಾರಣ, ಅಣ್ಣನಿಗೆ ದುಃಖಭರಿತ ಹಾಡುಗಳೇ ಇಷ್ಟ ಎಂದು ಅದನ್ನೇ ಕೇಳಿ ತಾನೂ ದುಃಖದ ಕಡಲಿಗೆ ತೆತ್ತುಕೊಂಡಂತಹ ಮನುಷ್ಯ ಪ್ರೀತಿ ತೋರಿಸಿದ ತಂಗಿ ಇದ್ದ ಕಾರಣ, ಕೊಡೆ ಕೊಡಿಸಲು ಅಪ್ಪನ ಬಳಿ ಹಣ ಇಲ್ಲವೆಂದು ಉಳ್ಳವರ ಕೊಡೆ ಕದ್ದು ಹಂಚುತ್ತಿದ್ದ ತಮ್ಮನಿದ್ದ ಕಾರಣ, ಕಣ್ಣೆದುರಲ್ಲೇ ಹೋರಾಟದ ಬೀಜಗಳನ್ನು ಅಡಗಿಸಿಟ್ಟುಕೊಂಡ ಕಿಡಿ ಕಾರುವ ಕಣ್ಣುಗಳನ್ನು ಕಂಡ ಕಾರಣ ಆರ್ ಟಿ ವಿಠ್ಠಲಮೂರ್ತಿ ಅವರಿಗೆ ಪತ್ರಿಕೋದ್ಯಮ ಎನ್ನುವುದು ಜನರು ಹಾಗೂ ಸರ್ಕಾರದ ನಡುವೆ ಇರುವ ಸೇತುವೆ ಎಂದು ಗೊತ್ತು ಮಾಡಿಕೊಳ್ಳಲು ಹೆಚ್ಚು ಸಮಯ ಹಿಡಿಯಲಿಲ್ಲ.
ಹಾಗಾಗಿ ವಿಠ್ಠಲಮೂರ್ತಿ ಮಾಧ್ಯಮದ ದೋಣಿಯನ್ನೇರಿ ವಿಧಾನಸೌಧದ ಕಥೆಗಳಿಗೆ ಕಿವಿಯಾದರು. ಬಹುತೇಕ ಪತ್ರಕರ್ತರು ವಿಧಾನಸೌಧದ ಮೂರನೆಯ ಮಹಡಿಯಲ್ಲಿ ‘ಆನ್ ದಿ ರೆಕಾರ್ಡ್’ ಸುದ್ದಿಗಳನ್ನು ಹೆಕ್ಕುತ್ತಿದ್ದಾಗ ಈ ‘ಏಕೋಪಾಧ್ಯಾಯ ಶಾಲೆಯ ಮುಖ್ಯಸ್ಥ’ ವಿಠ್ಠಲಮೂರ್ತಿ ವಿಧಾನಸೌಧದ ಹೊರಗೂ ಕಣ್ಣು ಹಾಯಿಸಿದ ಪರಿಣಾಮವೇ ಈ ‘ಇದೊಂಥರಾ ಆತ್ಮಕಥನ’.
ಹೊತ್ತಿ ಉರಿದ ಮನೆ ಎದುರು ಎದೆ ಎದೆ ಬಡಿದುಕೊಂಡ ಮಾಪಣ್ಣನ ಮಗು ಹೆಜ್ಜೆ ಹಾಕುತ್ತಾ ಹಾಕುತ್ತಾ, ಬದುಕಿನ ಗುಟ್ಟುಗಳನ್ನು ಹೆಕ್ಕುತ್ತಾ, ಅನುಭವ ದಕ್ಕಿಸಿಕೊಳ್ಳುತ್ತಾ, ಗಿರಣಿಯ ಕಾರ್ಮಿಕ ಮುಖಂಡನಾಗಿ ಅರಳಿ ನಿಲ್ಲುತ್ತದೆ. ಆ ಮಗುವಿನ ಹೆಸರು ಮಲ್ಲಿಕಾರ್ಜುನ ಖರ್ಗೆ ಎಂದು ಗೊತ್ತಾಗಬೇಕಾದರೆ ಆರ್ ಟಿ ವಿಠ್ಠಲಮೂರ್ತಿಯೇ ಆಗಬೇಕು. ಮೊಮ್ಮಗುವಿನ ಜೊತೆ ಆಟವಾಡುತ್ತಿರುವ ಅಜ್ಜನ ಕಣ್ಣಲ್ಲಿ ನಿಲ್ಲದ ಕಣ್ಣೀರು. ಬದುಕಿನ ವಸಂತವನ್ನು ಮುರುಟಿ ಹಾಕಿಬಿಡುವ ಸಂಗತಿಗಳ ಬಗ್ಗೆ ಬೆಚ್ಚಿ ಹರಿಸಿದ ಕಣ್ಣೀರು. ಆ ಅಜ್ಜ ಎಂ ಪಿ ಪ್ರಕಾಶ್ ಎಂದು ಗೊತ್ತಾಗಲು ಆರ್ ಟಿ ವಿಠ್ಠಲಮೂರ್ತಿಯೇ ಆಗಬೇಕು. ಕೀ ಇಲ್ಲದ ಬೀಗ ಹೇಗೆ ತನ್ನೊಳಗನ್ನು ಬಿಟ್ಟುಕೊಡಲಾರದೋ ಹಾಗೆಯೇ ವ್ಯಕ್ತಿಗಳನ್ನು ತಟ್ಟದ ಮಾತುಗಳೂ ಅಷ್ಟೇ ಎನ್ನುವುದು ಗೊತ್ತಾಗಬೇಕಾದರೆ, ಒಳ್ಳೆಯತನವೇ ಸೆಕ್ಯುಲರ್, ಕೆಟ್ಟತನವೇ ನಾನ್ ಸೆಕ್ಯುಲರ್ ಎನ್ನುವ ಸರಳ ಸೂತ್ರ ಗೊತ್ತಾಗಬೇಕಾದರೆ, ಅಷ್ಟಾವಕ್ರನ ಕಥೆ ಮನಸ್ಸಿಗೆ ನಾಟುವಂತೆ ಹೇಳುವ ಎಸ್ ಆರ್ ಬೊಮ್ಮಾಯಿ, ಕೆಟ್ಟತನ ಎನ್ನುವ ಕೌರವ- ಒಳ್ಳೆಯತನ ಎನ್ನುವ ಪಾಂಡವರ ನಡುವೆ- ವಿವೇಕವೆಂಬ ಕೃಷ್ಣನಿರಬೇಕು ಎಂದು ಕಿವಿಮಾತು ಹೇಳುವ ವೀರೇಂದ್ರ ಪಾಟೀಲ್, ಅಧರ್ಮ-ಧರ್ಮ, ಹಿಂಸೆ-ಅಹಿಂಸೆ ಎನ್ನುವುದರ ಮ್ಯಾಥಮೆಟಿಕ್ಸ್ ಸೂತ್ರ ತಿಳಿಸುವ ಜೆ ಎಚ್ ಪಟೇಲ್ ಗೊತ್ತಾಗಬೇಕಾದರೆ ಆರ್ ಟಿ ವಿಠ್ಠಲಮೂರ್ತಿ ಅವರ ‘ಇದೊಂಥರಾ ಆತ್ಮಕಥೆ’ಯೇ ಆಗಬೇಕು.
ಆರ್ ಟಿ ವಿಠ್ಠಲಮೂರ್ತಿ ಅವರು ‘ಅಭಿಮಾನಿ’ಯ ಅಂಗಳದಿಂದ ‘ಆಂದೋಲನ’ ‘ಹಾಯ್ ಬೆಂಗಳೂರು’ ಹೀಗೆ ತಮ್ಮ ಕ್ಯಾನ್ ವಾಸನ್ನು ವಿಸ್ತರಿಸಿಕೊಳ್ಳುತ್ತಾ ಹೋದರು. ಜೊತೆಗಿರುವ ಪತ್ರಕರ್ತರಿಗೆ ಗೊತ್ತಾಗಿದ್ದು ಇದು ಮಾತ್ರ. ಆದರೆ ಆರ್ ಟಿ ಬರೆದ ಈ ಪುಸ್ತಕದ ಪುಟ ತಿರುಗಿಸುತ್ತಾ ಹೋದರೆ ಅವರು ತಮ್ಮ ಕಾರ್ಯಕ್ಷೇತ್ರವನ್ನು ಮಾತ್ರ ಹಿರಿದಾಗಿಸಿಕೊಳ್ಳುತ್ತಾ ಹೋಗಲಿಲ್ಲ. ತಮ್ಮೊಳಗಿನ ಅರಿವನ್ನೂ ವಿಸ್ತರಿಸಿಕೊಂಡರು ಎನ್ನುವುದು ಗೊತ್ತಾಗುತ್ತದೆ.
ಆ ಕಾರಣಕ್ಕಾಗಿಯೇ ‘ಆನ್ ದಿ ರೆಕಾರ್ಡ್’ ಸುದ್ದಿ ಹುಡುಕುವವರ ಮಧ್ಯೆ ಇವರು ತೀರಾ ಭಿನ್ನ. ಅಧಿಕಾರದ ಗದ್ದುಗೆಗೆ ಕಿಚ್ಚು ಹೊತ್ತಿಸುವ ಆನ್ ದಿ ರೆಕಾರ್ಡ್ ಸುದ್ದಿಗಳನ್ನು ಹಿಡಿಯುತ್ತಲೇ ಆರ್ ಟಿ ಅದರ ಹಿಂದಿರುವ ದುಃಖ ದುಮ್ಮಾನಗಳ, ನಿಟ್ಟುಸಿರುಗಳ, ಆತ್ಮ ವಿಮರ್ಶೆಯ, ಪಶ್ಚಾತ್ತಾಪದ, ಪಡೆದ ಅರಿವಿನ ‘ಆಫ್ ದಿ ರೆಕಾರ್ಡ್’ನ್ನೂ ಮೊಗೆಯುತ್ತಾ ಹೋದರು.
ರಾಜ್ ಕುಮಾರ್ ಸಿನೆಮಾ ನೋಡುತ್ತಿದ್ದ ಏಳೆಂಟು ವರ್ಷದ ಹುಡುಗ ಮೋಟು ಬೀಡಿ ಸೇದುತ್ತಿದ್ದ. ಅಜ್ಜಿಯ ಏಟಿಗೂ ಬಗ್ಗದಿದ್ದ ಹುಡುಗ ‘ಆ ದೇವರಂತ ರಾಜ್ ಕುಮಾರ್ ಪಿಕ್ಚರ್ ನೋಡ್ತೀಯ, ಅದನ್ನು ನೋಡಿ ಬುದ್ದಿ ಕಲೀಬೇಕು ಬಿಕನಾಸಿ ತರಾ ತಿರುಗುವುದಲ್ಲ’ ಎನ್ನುವ ಒಂದೇ ಮಾತಿನ ಬಾಣಕ್ಕೆ ಶರಣಾಗಿ ಹೋಗುತ್ತಾನೆ. ‘ರಾಜ್ ಕುಮಾರ್ ನನ್ನನ್ನು ಬೀಡಿಯ ಬೆಂಕಿಯಿಂದ ಪಾರು ಮಾಡಿದರು’ ಎಂದು ನೆನೆಯುತ್ತಾರೆ ಆರ್ ಟಿ ವಿಠ್ಠಲಮೂರ್ತಿ.

ವಿಠ್ಠಲಮೂರ್ತಿಯವರಿಗೆ ಸಾಗರದ ಎಲ್ ಬಿ ಕಾಲೇಜಿನ ಎಂ.ಜಿ. ಹೆಗ್ಡೆ ಮಾಸ್ತರರು ಹೇಳಿದ್ದರಂತೆ ‘ನೀನು ಬರವಣಿಗೆಯಲ್ಲಿ ಸಕ್ಸಸ್ ಆಗ್ತೀಯ’ ಎಂದು. ‘ಹೌದು’ ಎನ್ನುವುದನ್ನು ತೋರಿಸಿಬಿಡಬೇಕು ಎನ್ನುವಂತೆ ಹೊರಟ ಆರ್ ಟಿ ಈ ಕೃತಿಯಲ್ಲಿ ಅದಕ್ಕೆ ಬೇಕಾದಷ್ಟು ಸಾಕ್ಷಿ ಒದಗಿಸಿದ್ದಾರೆ. ಹೆಂಡತಿಯನ್ನೇ ಒಡೆಯನಿಗೆ ಅಡವಿಟ್ಟ ಗಂಡನ ಕಥೆಯನ್ನು ಓದಿ ತತ್ತರಿಸಿದ ಎಂ ಪಿ ಪ್ರಕಾಶರ ಕಥೆ ಹೇಳುವಾಗ ನಮ್ಮನ್ನೂ ಒಂದು ಕ್ಷಣ ಅದೇ ರೀತಿ ತತ್ತರಿಸಿ ಹೋಗುವಂತೆ ಮಾಡುತ್ತಾರೆ. ನೋವ ಬಾಣಗಳನ್ನೇ ಹೊತ್ತರೂ ನಗುತ್ತಾ ಸಾಗುವವನ ಕಥೆಯನ್ನು ಧರ್ಮಸಿಂಗ್ ಹೇಳುವಾಗ ಆ ಕಥೆಯ ಜೊತೆ ನಾವು ಇರುವಂತೆ ನೋಡಿಕೊಳ್ಳುತ್ತಾರೆ.
ನನಗೆ ಖ್ಯಾತ ಸಾಹಿತಿ ಎ ಕೆ ರಾಮಾನುಜನ್ ಅವರ ‘ಮತ್ತೊಬ್ಬನ ಆತ್ಮಚರಿತ್ರೆ’ ಗೊತ್ತಿತ್ತು. ಆದರೆ ವಿಠ್ಠಲಮೂರ್ತಿಯವರದ್ದು ‘ಇದೊಂಥರಾ ಆತ್ಮಕಥೆ’. ಇವರ ಬದುಕಿನ ಪುಟದೊಳಗೆ ಸೇರಿ ಹೋಗಿ ತಮ್ಮ ಕಥೆಯನ್ನೂ ಹಲವರು ಸೇರಿಸಿದ ಕಾರಣ ಇದು ‘ಡಬಲ್ ಆಮ್ಲೆಟ್’ ಇದ್ದಂತೆ. ಒಂದು ಆತ್ಮಕಥೆಯೊಳಗೆ ನೂರಾರು ಝರಿಗಳು. ಆರ್ ಟಿ ವಿಠ್ಠಲಮೂರ್ತಿ ಅವರ ಕೈಗನ್ನಡಿಯಲ್ಲಿ ಕಂಡ ಮುಖಗಳು.
ಇದು 30 ವರ್ಷಗಳ ಕಾಲದ ಆರ್ ಟಿ ಯವರ ವೃತ್ತಿ ಬದುಕಿನ ಯಾನದ ಕಥೆಯೂ ಹೌದು. ಹೀಗಾಗಿ ಇದು ವ್ಯಕ್ತಿಗಳ ಕಥನದ ಜೊತೆಗೆ ಕಾಲನ ಕಥನವೂ ಹೌದು. ‘ಆ ಕಾಲನೆಂಬ ಪ್ರಾಣಿ ಕೈಗೆ ಸಿಕ್ಕರೆ ಚೆನ್ನಾಗಿ ಥಳಿಸಿಬೇಕೆಂದಿದ್ದೇನೆ’ ಎಂದಿದ್ದರು ಕೆ ಎಸ್  ನ. ಅವರಿಗೆ ಸಿಕ್ಕಿರಲಿಲ್ಲ. ಆದರೆ ಪತ್ರಕರ್ತ ಆರ್ ಟಿ ವಿ ಆ ಕಾಲನನ್ನು ಸಿಕ್ಕಿಸಿಕೊಳ್ಳದೇ ಬಿಟ್ಟಿಲ್ಲ. ಕಾಲ ಇವರ ಕೃತಿಯಲ್ಲಿ ಕಾಲು ಮುರಿದುಕೊಂಡು ಬಿದ್ದಿದೆ.
ಕನ್ನಡ ಪತ್ರಿಕೋದ್ಯಮ ಮಗ್ಗುಲು ಬದಲಿಸಿಕೊಂಡು ಸಾಕಷ್ಟು ಕಾಲವಾಗಿದೆ. ‘ನಿಜಕ್ಕೂ ಇದು ಉದ್ಯಮವೇ’ ಎಂದುಕೊಂಡು ಮುನ್ನಡೆಯಬೇಕಾದ ದಿನಗಳಲ್ಲಿ ಮಾಧ್ಯಮ ಎನ್ನುವುದು ಸರ್ಕಾರದ ಕಣ್ಣನ್ನು ತೆರೆಸುವ ಕೆಲಸ ಮಾಡುತ್ತಿತ್ತು, ನೀತಿ ರೂಪಕನಾಗಿತ್ತು, ವಿರೋಧ ಪಕ್ಷವಾಗಿತ್ತು. ಅಭಿವೃದ್ಧಿಯ ಕಡೆಗಿನ ಒಂದು ಊರುಗೋಲಾದರೂ ಆಗಿತ್ತು ಎನ್ನುವ ನಂಬಲಾಗದ ಸತ್ಯಗಳನ್ನು ಹಿಡಿದಿಟ್ಟಿದೆ. ಕೋಮುವಾದ ಎನ್ನುವುದು ಒಂದು ಇಂಡಸ್ಟ್ರಿ, ಗಲಭೆ ಎನ್ನುವುದು ಹಣಿಯುವ ಅಸ್ತ್ರ ಎನ್ನುವ ಸತ್ಯಗಳನ್ನು ಬಿಡಿಸಿಟ್ಟಿದೆ.

ಆರ್ ಟಿ ವಿಠ್ಠಲಮೂರ್ತಿ ಅವರ ಬರವಣಿಗೆಯಲ್ಲಿ ದೇವರಾಜ ಅರಸು, ದೇವೇಗೌಡ, ವೀರೇಂದ್ರ ಪಾಟೀಲ್, ಎಸ್ ಎಂ ಕೃಷ್ಣ, ಧರ್ಮಸಿಂಗ್, ಕುಮಾರಸ್ವಾಮಿ ಮಾತ್ರ ಇದ್ದಾರೆ ಎಂದುಕೊಂಡರೆ ತಪ್ಪು. ನಮಗೇ ಗೊತ್ತೆ ಆಗದಂತೆ ಸಿದ್ದರಾಮಯ್ಯನವರ ಮನೆಯಲ್ಲಿ ಅಡುಗೆ ಮಾಡುವಾತ, ಹಿಮಾಚಲದ ತಪ್ಪಲಲ್ಲಿ ಟೀ ಮಾಡುವವ, ಕಡಿದಾಳ ಮಂಜಪ್ಪನವರ ಮುಂದೆ ನಿಂತ ಸೊಂಟ ಬಾಗಿದ ಮುದುಕಿ, ಬಂಗಾರಪ್ಪನವರು ಕಂಡ ಮಳೆಯ ಹೊಡೆತಕ್ಕೆ ಸಿಕ್ಕಿದ ಹಣ್ಣು ಹಣ್ಣು ಮುದುಕಿ, ಜೋಳದ ರೊಟ್ಟಿ, ಝನಕಾ ಮಾಡಿಕೊಟ್ಟ ವೀರೇಂದ್ರ ಪಾಟೀಲರ ಪತ್ನಿ, ಸಾಗರ ಬೆಣ್ಣೆ ದೋಸೆ ಕೃಷ್ಣಪ್ಪ, ವಿಜಯಪುರದ ಸಿದ್ಧೇಶ್ವರ ಸ್ವಾಮೀಜಿ, ಕೊಡೆ ಕದ್ದು ಕೊಡುತ್ತಿದ್ದ ಪಾಂಡು, ರಪ್ಪನೆ ಮುಖಕ್ಕೆ ಬಿಗಿದ ಗಂಗಮ್ಮಜ್ಜಿ, ಫ್ರೆಂಡ್ ಅಂಡ್ ಗೈಡ್ ಮೋಹನಣ್ಣ… ಹೀಗೆ ಜನಸಾಮಾನ್ಯರ ಗಡಣವೇ ಇದೆ. ಮುಖ್ಯಮಂತ್ರಿಗಳ ಕಥೆಗಳು ಮಾತ್ರ ಕುತೂಹಲಕರ ಎಂದು ಕೊಂಡವರಿಗೆ ಥಟ್ಟನೆ ಆರ್ ಟಿ ಇವರೆಲ್ಲರ ಲೋಕವನ್ನು ಬಿಚ್ಚಿ ಕೊಡುತ್ತಾರೆ.
ರಾಗಿಮುದ್ದೆ ತಿನ್ನುವುದನ್ನು ದೇವೇಗೌಡರಿಂದಲು, ಜೋಳದ ರೊಟ್ಟಿ ಮುರಿಯುವುದನ್ನು ವೀರೇಂದ್ರ ಪಾಟೀಲರಿಂದಲೂ, ಆಹಾ! ಎನ್ನುವ ವಿವಿಧ ಭಕ್ಷಗಳನ್ನು ಜೀವರಾಜ ಆಳ್ವರಿಂದಲೂ, ಲಾನ್ ನಲ್ಲಿ ಕುಳಿತು ಟೀ ಸವಿಯುವುದನ್ನು ರಾಮಕೃಷ್ಣ ಹೆಗಡೆಯವರಿಂದಲೂ.. ಹೀಗೆ ಇದೊಂದು ‘ಥರಾವರಿ’ ಆತ್ಮಕಥೆ.
ವಿಠಲನೆಂಬ ಬೆಳಕ ಅರಸುತ್ತಾ ಪಂಡರಾಪುರಕ್ಕೆ ಹೆಜ್ಜೆ ಹಾಕುವವರು ಅದೆಷ್ಟೋ. ಅಂತೆಯೇ ಈ ವಿಠ್ಠಲನ ಹೆಜ್ಜೆಗಳು ನಾಳೆಗೆ ಒಂದು ಮಿಣಿ ಮಿಣಿ ದೀಪವಾಗಲಿ.
 

‍ಲೇಖಕರು avadhi

October 25, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: