ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಅನನುಕರಣೀಯ ಶ್ರೀಕಂಠನ್..!

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು.

ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು ಕನ್ನಡಕ್ಕೆ ತಂದಿದ್ದಾರೆ.

ಖ್ಯಾತ ಸಂಗೀತಗಾರರೂ ಹಾಗೂ ಸಂಸ್ಕೃತ ವಿದ್ವಾಂಸರಾದ ಡಾ ಟಿ ಎಸ್ ಸತ್ಯವತಿ ಅವರು ಇದನ್ನು ಸಂಪಾದಿಸಿದ್ದಾರೆ.

ಈ ಕನ್ನಡ ಅವತರಣಿಕೆ ‘ಅವಧಿ’ಯಲ್ಲಿ ಧಾರಾವಾಹಿಯಾಗಿ ನಿಮ್ಮ ಮುಂದೆ…

। ಕಳೆದ ಸಂಚಿಕೆಯಿಂದ ।

20

ವಿದ್ವಾಂಸರ ಮತ್ತು ಸಂಗೀತ ಕಲಾವಿದರ ನುಡಿಚಿತ್ರ

ಜಿ.ರವಿಕಿರಣ್, ಶಿಷ್ಯ ಹಾಗೂ ಗಾಯಕ
ಸರಳತೆಯ ಸಾಕಾರಮೂರ್ತಿಯಾದ ಡಾ.ಶ್ರೀಕಂಠನ್ ರವರಲ್ಲಿ 1998ರಲ್ಲಿ ಪ್ರಾರಂಭವಾದ ನನ್ನ ಶಿಷ್ಯವೃತ್ತಿ ಒಂದು ದಶಕಕ್ಕೂ
ಹೆಚ್ಚುಕಾಲ ಮುಂದುವರಿಯಿತು. ಅವರು ನನಗೆ ಕಲಿಸಿದ ಪ್ರಥಮ ಕೃತಿ ಶಂಕರಾಭರಣ ರಾಗದ “ಎಂದುಕು ಪೆದ್ದಲ”.
ಪ್ರತಿಯೊಂದು ಸಂಗತಿಯನ್ನೂ ವಾಗ್ಗೇಯಕಾರರ ಕುರಿತ ಗಾಢವಾದ ಪೂಜ್ಯತೆಯಿಂದ ಕಲಿಸಿದರು. ನಾವು ಕೃತಿಯ
ಅರ್ಥವನ್ನು ಗ್ರಹಿಸುವಂತೆ ಪ್ರತಿಯೊಂದು ಶಬ್ದವನ್ನೂ ವಿವರಿಸಿದರು, ನಾವು ಸ್ವರಪಂಕ್ತಿಗಳ ಸೂಕ್ಷ್ಮಾಂಶಗಳನ್ನು
ಅರಿತುಕೊಳ್ಳುವಂತೆ ಪ್ರತಿಯೊಂದು ಸ್ವರಸಂಚಾರವನ್ನೂ ಚಿಕ್ಕಭಾಗಗಳಲ್ಲಿ ಹೇಳಿಕೊಟ್ಟರು. ಪಲ್ಲವಿಯ ಭಾಗವನ್ನು ಕಲಿತು
ಮುಗಿಸುವ ವೇಳೆಗೆ ನಾನು ಇಲ್ಲಿಯವರೆಗೆ ಅನುಭವಿಸಲು ಕಾಯುತ್ತಿದ್ದುದು ಇದನ್ನೇ ಎಂದು ನನಗೆ ನಿಶ್ಚಯವಾಯಿತು!
ಅವರಲ್ಲಿದ್ದ ಕೃತಿಗಳ ಸಂಗ್ರಹ ದಂತಕಥೆಗಳಿಗೆ ಯೋಗ್ಯವಾದದ್ದು – ಸಂಗೀತದ ವಿವಿಧ ಪ್ರಕಾರಗಳ (ವರ್ಣಗಳಿಂದ ಹಿಡಿದು
ತಿಲ್ಲಾನ ಮತ್ತು ಹರಿದಾಸರ ಪದಗಳವರೆಗೆ), ವಿಭಿನ್ನ ವಾಗ್ಗೇಯಕಾರರ (ಸಂಗೀತ ತ್ರಿಮೂರ್ತಿಗಳ, ಅವರ ಪೂರ್ವ ಮತ್ತು
ಉತ್ತರ ಕಾಲಗಳ), ನಾನಾ ರಾಗಗಳ (ಕಾಲದ ಪರೀಕ್ಷೆಯಲ್ಲಿ ಉತ್ತೀರ್ಣವಾದ ರಾಗಗಳಿಂದ ಹಿಡಿದು ಅಪರೂಪದ
ರಾಗಗಳಲ್ಲಿನ) ಅಪೂರ್ವ ಸಂಗ್ರಹ ಅವರಲ್ಲಿದೆ. ಅವುಗಳಲ್ಲಿ ಪ್ರತಿಯೊಂದಕ್ಕೂ ಅವರು ಅಚ್ಚುಕಟ್ಟಾಗಿ ಸ್ವರಪ್ರಸ್ತಾರವನ್ನು
ಬರೆದು ಕಡತಗಳಲ್ಲಿ ಇಟ್ಟಿರುತ್ತಾರೆ. ಅಂತಹ ಒಂದೊಂದು ಹಾಳೆಯೂ ಅವರಿಗೆ ಪ್ರಾಣಪ್ರಿಯ. ಪ್ರತಿಯೊಂದು ಕೃತಿಯೂ
ಅವರ ಪಾಲಿಗೆ ಪರಮ ಪವಿತ್ರವಾಗಿದೆ.

ಶಿಷ್ಯರಿಗೆ ಹಾಗೂ ವರ್ಧಿಷ್ಣು ಕಲಾವಿದರಿಗೆ ಆರ್.ಕೆ.ಎಸ್ ಅವರ ಸಲಹೆ, ವಿಶಾಲ ಕೃತಿ ಸಂಗ್ರಹದಿಂದ ಸಮೃದ್ಧವಾದ,
ಸಾಧನೆಯಿಂದ ಬಲಗೊಂಡ ಮತ್ತು ಮನೋಧರ್ಮದಿಂದ ಸುಪುಷ್ಟವಾದ ಅಭೇದ್ಯವಾದ ತಳಪಾಯವನ್ನು
ನಿರ್ಮಿಸಿಕೊಳ್ಳಬೇಕೆಂಬುದೇ ಆಗಿದೆ.
ಶ್ರೀಕಂಠನ್ ರವರದು ಸಂಗೀತಕ್ಕೆ ಮೀಸಲಾದ, ಅಲ್ಲ, ನಾದಬ್ರಹ್ಮನಿಗೆ ಸಂಪೂರ್ಣ ಶರಣಾದ ಜೀವನ.

ಡಾ.ಸುಚೇತನ್ ರಂಗಸ್ವಾಮಿ, ಶಿಷ್ಯ ಹಾಗೂ ಗಾಯಕ
ಆರ್.ಕೆ.ಶ್ರೀಕಂಠನ್ ರವರ ಅನುಮತಿ ಪಡೆದು ನಮ್ಮ ತಂದೆ ತಾಯಿ ಹನ್ನೆರಡು ವರ್ಷದ ನನ್ನನ್ನು ಅವರ ಬಳಿ
ಸಂಗೀತಾಭ್ಯಾಸಕ್ಕೆಂದು ಕರೆದೊಯ್ದರು. ನನಗೆ ಬರುತ್ತಿದ್ದುದನ್ನು ಅವರ ಮುಂದೆ ಹಾಡಿದೆ. ಸುಮಾರು ಹತ್ತು ನಿಮಿಷ ನನ್ನ
ಗಾಯನವನ್ನು ಕೇಳಿದ ಅವರ ಹೇಳಿದರು-“ಅಭ್ಯಾಸ ಮಾಡುವಷ್ಟು ಪ್ರೌಢಿಮೆ ನಿನ್ನಲ್ಲಿ ಇನ್ನೂ ಬಂದಿಲ್ಲ. ಚೆನ್ನಾಗಿ ಅಭ್ಯಾಸ
ಮಾಡಿ ಒಂದು ವರ್ಷದ ನಂತರ ಬಾ.” ಅವರ ಆಣತಿಯಂತೆಯೇ ಒಂದು ವರ್ಷದ ನಂತರ ಅವರಲ್ಲಿಗೆ ಮತ್ತೆ ಹೋದಾಗ ’ಈ
ಹುಡುಗ ನನ್ನನ್ನು ಬಿಡುವಂತೆ ಕಾಣದು’ ಎಂದು ಪಾಠ ಮಾಡಲು ಒಪ್ಪಿದರು. ಅಲ್ಲಿಂದ ಸುಮಾರು ಇಪ್ಪತ್ತು ವರ್ಷ ನನ್ನನ್ನು
ತಿದ್ದಿತೀಡಿದರು.

ಈ ಧೀಮಂತ ಸಂಗೀತಜ್ಞರಲ್ಲಿ ಒಬ್ಬ ಪುಟ್ಟ, ಮುಗ್ಧ, ಕಪಟವರಿಯದ ಮಗು ಇರುವುದು ಬಹುಶಃ ಅವರ ಶಿಷ್ಯರಿಗೆ ಮಾತ್ರ ಗೊತ್ತು.
ಎಂದಾದರೊಮ್ಮೆ ನಮ್ಮ ಮನೆಗೆ ಬಂದರೆ ನನ್ನಲ್ಲಿದ್ದ ಪುಸ್ತಕದ ಭಂಡಾರವನ್ನು ಪರಿಶೀಲಿಸಿ, ಯಾವುದಾದರೂ ಹೊಸ ಪುಸ್ತಕ
ಕಂಡರೆ “ಇದು ನಾಳೆ ನನ್ನ ಮೇಜಿನ ಮೇಲಿರಬೇಕು” ಎನ್ನುವ ಅವರ ಮಾತು ಜ್ಞಾನಪಿಪಾಸೆಯ ಪ್ರತೀಕ. ಕಛೇರಿಗೆ ಒಂದು ವಾರದ
ಮೊದಲು ಅವರು ಪಟ್ಟಿಯನ್ನು ನಮಗೆ ಕೊಟ್ಟು ಸಿದ್ಧವಾಗುವಂತೆ ಹೇಳಿದ್ದರೂ ಅವರೊಡನೆ ಸಹಗಾಯನಕ್ಕೆ ಕುಳಿತಾಗ ಗಂಟಲು

ಒಣಗುತ್ತಿದ್ದುದು ಅಪರೂಪವೇನಲ್ಲ. “ವೇದಿಕೆ ಯಾರಪ್ಪನ ಮನೆ ಗಂಟು? ಸರಿಯಾಗಿ ಅಭ್ಯಾಸ ಮಾಡದಿದ್ರೆ ಒದ್ದು ಹೊರಗ್
ಹಾಕತ್ತೆ” ಎನ್ನುವಾಗ ಕೆಲಸದಲ್ಲಿ ಅವರಿಗಿರುವ ಶ್ರದ್ಧೆ ನಮಗೆ ಗೋಚರವಾಗುತ್ತದೆ. ಅವರ ಪ್ರತಿ ನಡೆ-ನುಡಿಯೂ ನಮಗೆ
ಮಾರ್ಗದರ್ಶಕ. ತಾವು ನಡೆಸಿಕೊಡುವ ಅನೇಕ ಪ್ರಾತ್ಯಕ್ಷಿಕೆಗಳಲ್ಲಿ ಭಾಗಿಯಾಗಲು ನನಗೆ ಅವಕಾಶ ಕಲ್ಪಿಸಿದ ಅವರಿಗೆ ಎಷ್ಟು
ನಮಿಸಿದರೂ ಸಾಲದು. ಸಂಗೀತದೊಡನೆ ನಾನು ಅಭಿನಯವನ್ನೂ ಆರಿಸಿಕೊಂಡಾಗ ಅವರು ಅದನ್ನು
ಇಷ್ಟಪಡುತ್ತಿರಲಿಲ್ಲವಾದರೂ, ನಾನು ನಟಿಸಿದ ಧಾರಾವಾಹಿಗಳನ್ನು ಅವರು ತಮ್ಮ ಪತ್ನಿಯೊಂದಿಗೆ ಕುಳಿತು ವೀಕ್ಷಿಸುತ್ತಿದ್ದುದು
ಅವರಿಗೆ ನನ್ನ ಮೇಲಿದ್ದ ಪ್ರೀತಿಯ ದ್ಯೋತಕ.

ಭೂಮಿಗೆ ಬಂದವರು ಎಂದಾದರೊಂದು ದಿನ ತೆರಳಲೇ ಬೇಕು. ಆದರೆ ಹೋದಮೇಲೂ ಉಳಿಯುವ ಬಾಳು ನಮ್ಮದಾಗಬೇಕು ಎಂಬ
ಸಂದೇಶವನ್ನು ತಮ್ಮ ಬದುಕಿನ ಮೂಲಕ ನಮಗಿತ್ತ ನಮ್ಮ ಮೇಷ್ಟ್ರು ಅಜರಾಮರ.

ನೇದನೂರಿ ಕೃಷ್ಣಮೂರ್ತಿ, ಗಾಯಕರು
ತಮಿಳುನಾಡಿನ ಶೆಮ್ಮಂಗುಡಿ ಶ್ರೀನಿವಾಸ ಐಯ್ಯರ್, ಕರ್ನಾಟಕದ ಶ್ರೀಕಂಠನ್ ಹಾಗೂ ಆಂಧ್ರಪ್ರದೇಶದ ನನ್ನ
ಹೆಸರುಗಳನ್ನು ಒಟ್ಟಿಗೆ ಹೇಳುವುದು ಉಚ್ಛ್ರಾಯದ ದಿನಗಳಲ್ಲಿ ರೂಢಿಯಾಗಿದೆ. ಏಕೆಂದರೆ ನಾವು ಮೂವರೂ
ಸಂಗೀತಕ್ಷೇತ್ರದಲ್ಲಿ ನಮ್ಮನಮ್ಮ ರಾಜ್ಯಗಳ ಹಿರಿಯ ಪ್ರತಿನಿಧಿಗಳು. ನಾವು ಮೂವರೂ ಸಂಪ್ರದಾಯಶುದ್ಧಿಗೆ ನಿಷ್ಠರಾಗಿ
ನಿಂತವರು. ಅದನ್ನು ಹಾಗೆಯೇ ಬೆಳೆಸಿದವರು ನಾವು. ಇದನ್ನು ಹಳೆಯ ಕಾಲದ ಸಂಗೀತ ಎನ್ನುವವರಿರಬಹುದು. ನಮ್ಮ
ನಿಲುವಿನಲ್ಲಿ ನಮಗೆ ಸಂಪೂರ್ಣ ವಿಶ್ವಾಸವಿದ್ದು, ಅದರ ಬಗ್ಗೆ ಗೊಂದಲವಿಲ್ಲ, ಆಷಾಢಭೂತಿತನವೂ ಇಲ್ಲ. ನಾವು ನಿಷ್ಠರಾದ
ಶೈಲಿಗೆ ದ್ರೋಹವೆಸಗುವ ಮನಸ್ಸೂ ನಮಗಿಲ್ಲ.ಅಂತೆಯೇ ಕೇವಲ ಸಭಾರಂಜನೆಗಾಗಿ ಹಾಡುವವರೂ ನಾವಲ್ಲ.
ಸಮಕಾಲೀನ ವಿದ್ವಾಂಸರನ್ನು ಹೋಲಿಸಿ ವಿಮರ್ಶಿಸುವಾಗ, ನನ್ನ ಅಭಿಪ್ರಾಯವನ್ನೇ ಶ್ರೀಕಂಠವರೂ ವ್ಯಕ್ತಪಡಿಸುತ್ತಿದ್ದುದನ್ನು
ಕೇಳಿದ್ದೇನೆ- "ಅಂದಿನ ಕಾಲದಲ್ಲಿ ಸಂಗೀತ ಕಛೇರಿಗಳೆಂದರೆ 3ರಿಂದ 5 ಗಂಟೆಗಳ ಶಾಂತ ಅವಧಿಗಳಾಗಿದ್ದವು. ಆ ವಿದ್ವಾಂಸರ
ಪ್ರೌಢಿಮೆಯನ್ನು ಆಸ್ವಾದಿಸಿ ಅನುಭವಿಸುವ ಅವಕಾಶ ನಮಗಿತ್ತು. ಇಂದಿನ ವಿದ್ವಾಂಸರು ಏನೂ ಕಡಿಮೆಯಿಲ್ಲವಾದರೂ,
ಸಮಯದ ಮಿತಿಯಲ್ಲೇ ಧಾವಿಸಬೇಕಾದ್ದರಿಂದ, ಸಂಗೀತಕ್ಕೆ ಪೂರ್ಣನ್ಯಾಯವೊದಗಿಸಲಾಗುತ್ತಿಲ್ಲ ಎನಿಸುತ್ತದೆ."

ಡಾ.ಆರ್.ಸತ್ಯನಾರಾಯಣ, ಸಂಗೀತಶಾಸ್ತ್ರಜ್ಞರು

ಬಿಡಾರಂ ಕೃಷ್ಣಪ್ಪನವರು ದೇವರನಾಮಗಳ ಕೀರ್ತಿಯನ್ನು ಬೆಳೆಸುವಲ್ಲಿ ಕೆಲಸವನ್ನು ಪ್ರಾರಂಭಿಸಿದ್ದರಾದರೂ, ಆ ಕಾರ್ಯವನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿದ ಖ್ಯಾತಿ ಶ್ರೀಕಂಠನ್ ರವರಿಗೆ ಸಲ್ಲುತ್ತದೆ. ಅಸ್ಖಲಿತ ಕಂಠಶ್ರೀ, ಸ್ಮರಣಶಕ್ತಿ ಮತ್ತು ಶೈಲಿಯೇ ಅವರ ಸಂಪತ್ತು. ಕನ್ನಡರಚನೆಗಳನ್ನು ಕೈಗೆತ್ತಿಕೊಳ್ಳುವಂತೆ ಕೃಷ್ಣರಾಜ ಒಡೆಯರ್ ರವರು ಕಲಾವಿದರನ್ನು
ಪ್ರೋತ್ಸಾಹಿಸುತ್ತಿದ್ದ ಕಾಲದಲ್ಲೇ ಎಳೆಯ ವಯಸ್ಸಿನ ಶ್ರೀಕಂಠನ್ ರವರ ಮನಸ್ಸಿನಲ್ಲಿ ಆ ಬೀಜ ಬಿತ್ತಿದಂತಾಯಿತೆನ್ನಬಹುದು. ಆ
ತಥ್ಯವನ್ನು ಚೆನ್ನಾಗಿ ಅರಗಿಸಿ ಅರ್ಥಮಾಡಿಕೊಂಡ ಶ್ರೀಕಂಠನ್ ರವರು ದಾಸರ ಕೃತಿಗಳಿಂದಲೇ ಇಡೀ ಸಂಗೀತ
ಕಛೇರಿಯನ್ನು ಮಾಡಬಹುದು ಎನ್ನುವುದನ್ನೂ ನಿದರ್ಶಿಸಿಬಿಟ್ಟರು. ಅವರು ಎಂದೂ ಕಛೇರಿಯ ಅವಕಾಶವನ್ನು ಕೋರಿಯೋ,
ಉತ್ತಮ ವಿಮರ್ಶೆಯನ್ನು ಕೋರಿಯೋ ಯಾರನ್ನೂ ಬಳಿಸಾರಿದವರಲ್ಲ.ಹಾಗಾಗಿ ಅವರು ತಮ್ಮ ವಿಮರ್ಶಕರ ಬಗ್ಗೆ ಅತಿ
ಸ್ನೇಹವನ್ನೇನೂ ತೋರುವವರಲ್ಲ. ಅವರ ಆತ್ಮತೃಪ್ತಿ ಮತ್ತು ಸ್ವಾಭಿಮಾನಗಳು ಪ್ರಶಂಸನೀಯ. ಕರ್ನಾಟಕದಲ್ಲಷ್ಟೇ ಅಲ್ಲ,

ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ಅಷ್ಟೇ ಅಲ್ಲದೆ, ಉತ್ತರ ಭಾರತದಲ್ಲೂ ಸಮವಾದ ಪ್ರಭಾವವನ್ನು ಮೀರಿದ
ಅದ್ವಿತೀಯ ಸಂಗೀತಗಾಗರು ಶ್ರೀಕಂಠನ್.

ಡಾ.ವಿ.ಎಸ್. ಸಂಪತ್ಕುಮಾರಾಚಾರ್ಯ, ಸಂಗೀತಶಾಸ್ತ್ರಜ್ಞರು

ನಾನೂ ಆರ್.ಕೆ. ಶ್ರೀಕಂಠನ್ ಮತ್ತು ಎಸ್.ಕೆ. ರಾಮಚಂದ್ರರಾವ್ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ
ಸಹಪಾಠಿಗಳಾಗಿದ್ದೆವು. ಆ ಕಾಲದ ಶಾಸ್ತ್ರೀಯ ಪದ್ಧತಿಗಳ ಬಗ್ಗೆ ನಾವು ಕೂಡಿ ಚರ್ಚಿಸುತ್ತಿದ್ದ ವೈಭವಯುತ ಕಾಲ ಅದು.
ನಾನು ಸ್ವತಃ ಎಂ.ಎ. ನರಸಿಂಹಾಚಾರ್ ರವರ ಶಿಷ್ಯನಾದ್ದರಿಂದ, ಶ್ರೀಕಂಠನ್ ರವರ ಶಾಸ್ತ್ರೀಯ ಗಾನದತ್ತ ನನ್ನ ಗಮನವೂ
ಹರಿಯಿತು. ಅವರು ಮೈಸೂರಿನ ರಾಮವಿಲಾಸ ಅಗ್ರಹಾರದಲ್ಲಿ ಅಭ್ಯಾಸದಲ್ಲಿ ತೊಡಗಿರುತ್ತಿದ್ದಾಗ, ನಾನೂ ಆಲಿಸುವುದಕ್ಕಾಗಿ
ಹೋಗುತ್ತಿದ್ದೆ. ಅವರ ಧ್ವನಿಯು ಇಂದಿಗೂ ಅಸ್ಖಲಿತವಾಗಿದೆ. ಅವರ ಶೈಲಿಯೂ ನಿರ್ದುಷ್ಟವಾಗಿ ಉಳಿದಿದೆ. 94ರ
ವಯಸ್ಸಿನಲ್ಲೂ ಅವರು ಹೀಗೆ ಹಾಡುತ್ತಿದ್ದಾರೆ ಎಂದರೆ, ಅದು ಅವರ ಶಿಸ್ತುಪಾಲನೆಯ ದ್ಯೋತಕವೇ ಆಗಿದೆ. ಮೈಸೂರಿನಲ್ಲಿನ
ಅವರ ಸಂಗೀತ ಕಛೇರಿಗಳನ್ನು ನಾನು ತಪ್ಪಿಸುವುದೇ ಇಲ್ಲ.

ಎನ್.ಎಸ್. ಕೃಷ್ಣಮೂರ್ತಿ, ನಿವೃತ್ತ ನಿರ್ದೇಶಕರು, ಬೆಂಗಳೂರು ಆಕಾಶವಾಣಿ.

1963ರಲ್ಲಿ ಶ್ರೀಕಂಠನ್ ರವರು ಆಕಾಶವಾಣಿಯನ್ನು ಸೇರುವ ಮೊದಲಿನಿಂದಲೂ ನಾನು ಅವರ ದೊಡ್ಡ ಅಭಿಮಾನಿಯಾಗಿದ್ದೆ.ರೇಡಿಯೋ ಗೀಳಿನ ನಾನು ಬೆಳಗಾಗುತ್ತಲೇ ಗೀತಾರಾಧನ ಕಾರ್ಯಕ್ರಮವನ್ನು ಕೇಳುತ್ತಿದ್ದೆ. ಅದರಲ್ಲಿ, ಒಂದು ಶ್ಲೋಕವನ್ನೋ ದೇವರನಾಮವನ್ನೋ ಉಚ್ಚಾರಸ್ಫುಟತೆ ಮತ್ತು ಭಾವಶುದ್ಧಿಗಳಿಂದ ಶ್ರೀಕಂಠನ್ ರವರು ಹಾಡುವುದು ತಪ್ಪದೆ ಕೇಳಿಬರುತ್ತಿತ್ತು. ಅವರು ಆಕಾಶವಾಣಿಯನ್ನು ಸೇರಿದ ಮೇಲಂತೂ ಆ ಅನುಭವ ಇನ್ನೂ ಹೆಚ್ಚಿತು. ಸಂಗೀತ ಕಛೇರಿಯನ್ನಾಗಲಿ, ಪತ್ರಿಕೆಯನ್ನಾಗಲಿ, ಯಾವುದೇ ಕಾರ್ಯಕಲಾಪವನ್ನಾಗಲಿ ಸಂಗೀತ ರೂಪಕದ ನಿರ್ಮಾಣವನ್ನಾಗಲಿ ಮಾಡುವಾಗ ಶ್ರೀಕಂಠನ್ ರವರ ಕೊಡುಗೆ ಅದ್ವಿತೀಯವಾಗಿರುತ್ತಿತ್ತು. ಶ್ರೀಕಂಠನ್ ರವರೂ ಸೆಲ್ವಪಿಳ್ಳೈ ಐಯ್ಯಂಗಾರ್ ರವರೂ ನಡೆಸುತ್ತಿದ್ದ ಗಾನವಿಹಾರ ಕಾರ್ಯಕ್ರಮವಂತೂ ಶಾಸ್ತ್ರೀಯತೆಯ ರಸಗಟ್ಟಿಯೇ ಆಗಿ ಮೂಡಿಬರುತ್ತಿತ್ತು. ಶ್ರೀಕಂಠನ್ ರವರು ಪ್ರಸ್ತುತ ಪಡಿಸಿದ ದೀಕ್ಷಿತರ ಚತುರ್ದಶ-ರಾಗಮಾಲಿಕೆಯಂತೂ ಅವಿಸ್ಮರಣೀಯವಾಗಿತ್ತು. ಅದರಲ್ಲಿ ಅವರ ಪ್ರತಿಭೆಯೂ ವಿದ್ವತ್ತೂ
ಶಿಖರವನ್ನೇ ಮುಟ್ಟಿದ್ದವು. ಆಕಾಶವಾಣಿಯಿಂದ ನಾನು ಒಂದು ಪ್ರತಿಯನ್ನು ಪಡೆದುಕೊಂಡೆ. ಏನಾದರೂ ಸಹಾಯವನ್ನೋ
ಮಾರ್ಗದರ್ಶನವನ್ನೋ ಕೋರಿ ಬರುವ ರಸಿಕರಿಗೆ ಶ್ರೀಕಂಠನ್ ಹಾಗೂ ದೊರೆಸ್ವಾಮಿ ಐಯ್ಯಂಗಾರರಂತಹ ಮೇರು
ವಿದ್ವಾಂಸರೇ ಸ್ವತಃ ಪ್ರತ್ಯೇಕವಾಗಿ ಗಮನ ಹರಿಸುತ್ತಿದ್ದ ಕಾಲವದು. ಈ ಮಹಾವಿದ್ವಾಂಸರುಗಳು ಆಕಾಶವಾಣಿಯ
ಘನತೆಯನ್ನು ಹೆಚ್ಚಿಸಿದವರು. ಒಂದೇ ಮಾತಲ್ಲಿ ಹೇಳುವುದಾದರೆ ‘ಶ್ರೀಕಂಠದ ಶ್ರೀಕಂಠನ್’ ರವರು ‘ಆಕಾಶವಾಣಿಯ
ಧ್ವನಿಯೇ’ ಆಗಿದ್ದರು.

ಟಿ.ಎನ್.ಕೃಷ್ಣನ್, ವೈಲಿನ್ ವಾದಕರು

ನಮಗೆ ಚೆನ್ನೈ ಆಕಾಶವಾಣಿಯಲ್ಲಿ ಪರಿಚಯವಾಗಿದ್ದ ಪ್ರತಿಭಾನ್ವಿತರಾದ ಆರ್.ಕೆ. ವೆಂಕಟರಾಮಾಶಾಸ್ತ್ರಿರವರ
ಸೋದರರಾಗಿದ್ದು, ಸಂಗೀತವೇ ಉಸಿರಾಗಿದ್ದ ಮನೆತನದಿಂದ ಬಂದಿದ್ದು ಶ್ರೀಕಂಠನ್ ರವರು ತಮ್ಮ ಕಾಲದ ಸಂಗೀತದ
ಮೇರುಪ್ರತಿಭೆಗಳಾದ ವಿದ್ವಾಂಸರೆಲ್ಲರ ಸತ್ವವನ್ನೂ ಮೈತಳೆದು ಬಂದವರು. ಅವರು ತಮ್ಮ ಜೀವನದುದ್ದಕ್ಕೂ
ಸಂಗೀತವೃತ್ತಿಯನ್ನು ರೂಪಿಸಿಕೊಂಡ ಬಗೆಯನ್ನೂ, ಅದನ್ನು ಉಳಿಸಿಕೊಂಡ ಪರಿಯನ್ನೂ, ಅವರ ಶಿಸ್ತು, ಅಭ್ಯಾಸ ಮತ್ತು
ನಿಷ್ಠೆಗಳು ಎತ್ತಿತೋರುತ್ತವೆ. ಅವರ ರಾಗಪ್ರಸ್ತುತಿಯ ಶೈಲಿ, ಉತ್ಕೃಷ್ಟ ಕೃತಿಗಳ ಗಾಯನ, ಅವುಗಳ ಸಾಹಿತ್ಯವನ್ನೂ
ಸಂಗೀತವನ್ನೂ ಅವರು ಕಾಪಾಡಿಕೊಂಡ ಬಗೆ, ಅವರ ಕಲ್ಪನಾಸ್ವರಗಳ ಸೌಂದರ್ಯ — ಎಲ್ಲವೂ ಸೇರಿ ಅವರನ್ನು
ಮಹೋನ್ನತ ಸಾಮರ್ಥ್ಯದ ವಿದ್ವಾಂಸರು ಎನ್ನುವುದನ್ನು ನಿರೂಪಿಸಿವೆ. ಸಂಗೀತದ ಕುರಿತಾದ ಗಾನ-ನಿರೂಪಣವಾಗಲಿ,
ಕಚೇರಿಯಾಗಲಿ, ಕಾರ್ಯಾಗಾರವಾಗಲಿ ಅಥವಾ ಕೇವಲ ಭಾಷಣವೇ ಆಗಲಿ, ಅವರು ತುಂಬ ಪೂರ್ವಸಿದ್ಧತೆ ಮಾಡಿಕೊಳ್ಳುವ
ವಿರಳ ವಿದ್ವಾಂಸರಲ್ಲಿ ಒಬ್ಬರು. ಸಂಗೀತದ ಶೈಕ್ಷಣಿಕ ಅಂಶಗಳ ಅವರ ಪರಿಜ್ಞಾನವೂ ಧ್ವನಿಸಂರಕ್ಷಣೆಗೆ ಸಂಬಂಧಿಸಿದ ಅವರ
ನಿಯತ ಅಭ್ಯಾಸಾದಿಗಳೂ ಬೆರಗುಗೊಳಿಸುವ ವಿಷಯಗಳು.

ಡಾ. ಎನ್. ರಮಣಿ, ವೇಣುವಾದಕರು
ಕರ್ನಾಟಕದ ಅತ್ಯಂತ ಪ್ರತಿಭಾನ್ವಿತ ಮತ್ತು ಗೌರವಾನ್ವಿತ ವಿದ್ವಾಂಸರಾದ ಶ್ರೀಕಂಠನ್ ರವರು ಪ್ರತಿಷ್ಠಿತ ಸಂಗೀತಕುಟುಂಬದಿಂದ ಜನಿಸಿ ಬಂದವರು. ಅವರ ಅಣ್ಣನವರೂ ಗುರುಗಳೂ ಆದ ವೆಂಕಟರಾಮಾಶಾಸ್ತ್ರಿರವರು ಅಸಾಧಾರಣ
ಪ್ರತಿಭೆಯ ವಿದ್ವಾಂಸರಾಗಿದ್ದು, ಈ ಬಾಲಪ್ರತಿಭೆಯನ್ನು ಶಾಸ್ತ್ರೀಯ ಸಂಗೀತದ ಎಲ್ಲ ಆಯಾಮಗಳಲ್ಲೂ ಸಮರ್ಥವಾಗಿ
ತರಬೇತುಗೊಳಿಸಿದರು. ಅದಲ್ಲದೆ ಹಿಂದಿನ ಪೀಳಿಗೆಯ ಮೇರು ವಿದ್ವಾಂಸರುಗಳಾದ ಮುತ್ತಯ್ಯ ಭಾಗವತರ್, ಮೈಸೂರು
ವಾಸುದೇವಾಚಾರ್, ಟೈಗರ್ ವರದಾಚಾರ್ಯರು, ಮಹಾರಾಜಪುರಂ ವಿಶ್ವನಾಥ ಐಯ್ಯರ್, ಅರಿಯ್ಯಾಕುಡಿ ರಾಮಾನುಜ
ಐಯ್ಯಂಗಾರ್ ಮೊದಲಾದವರ ಸಂಗೀತವನ್ನು ನೇರವಾಗಿ ಆಲಿಸುವ ಸೌಭಾಗ್ಯವೂ ಅವರ ಒಡನಾಟವೂ ಇವರಿಗೆ ದಕ್ಕಿತ್ತು.
ಹೀಗಾಗಿ ಶ್ರೀಕಂಠನ್ ರವರ ಸಂಗೀತವು ಶತಮಾನದ ಸಂಗೀತ ಪರಂಪರೆಯ ಸಾರಸರ್ವಸ್ವವನ್ನು ಪ್ರತಿನಿಧಿಸುತ್ತದಲ್ಲದೆ
ಶಾಸ್ತ್ರೀಯ ಶೈಲಿಯ ದ್ಯೋತಕವಾಗಿ ನಿಂತಿದೆ.

ರಾಗ, ನೆರವಲ್, ಕಲ್ಪನಾಸ್ವರಗಳನ್ನೂ ಕೃತಿಗಳನ್ನೂ ಪಲ್ಲವಿಗಳನ್ನೂ ಇವರು ನಿರ್ವಹಿಸುವ ಪರಿಯಲ್ಲೇ ಇದು
ಎದ್ದುಕಾಣುತ್ತದೆ. ಇವರ ರಾಗಪ್ರಸ್ತುತಿಯಂತೂ ಒಪ್ಪವಾಗಿದ್ದು ರಾಗದ ಎಲ್ಲ ಆಯಾಮಗಳನ್ನೂ ಒಳಗೊಂಡಿರುತ್ತದೆ. ನೆರವಲ್
ಮತ್ತು ಸ್ವರಪ್ರಸ್ತಾರಕ್ಕೆ ಇವರ ಲಯಜ್ಞಾನವು ಅದ್ಭುತ ಆಶ್ರಯವನ್ನೊದಗಿಸುತ್ತದೆ. ಇವರ ಪಾಠಾಂತರಗಳೂ ಕಾಲದಿಂದ
ಪಕ್ವವಾದಂತಹವು. ಇವರ ಸೃಜನಶೀಲತೆಯಂತೂ ಸೀಮಾತೀತ ಹಾಗೂ ತುಂಬ ಸ್ವೋಪಜ್ಞ. ಇವರು ಕರ್ನಾಟಕದ
ವಾಗ್ಗೇಯಕಾರರ ಕೃತಿಗಳಿಗೆ ಸಂಗೀತ ಸಂಯೋಜನೆ ಮಾಡಿರುವುದನ್ನು ಗಮನಿಸಿದರೆ, ಇವರ ಪ್ರಖರಮತಿಯಲ್ಲಿ
ವಾಗ್ಗೇಯಕಾರರ ಉದ್ದೇಶ ಮತ್ತು ರಸದೃಷ್ಟಿಯು ಸ್ಫಟಿಕಶುದ್ಧವಾಗಿ ಸಾಕ್ಷಾತ್ಕಾರವಾಗಿರುವುದು ಗೋಚರಿಸುತ್ತದೆ. ಒಟ್ಟಾರೆ
ಹೇಳುವುದಾದರೆ ಇವರೊಬ್ಬ ಪರಿಪೂರ್ಣ ಸಂಗೀತಗಾರರು.

ಶ್ರೀಕಂಠನ್ ರವರು ದೊಡ್ಡ ಆಚಾರ್ಯರೂ ಹೌದು. ಇವರ ಪುತ್ರ ರಮಾಕಾಂತರೂ ಸೇರಿದಂತೆ ಇವರ ಶಿಷ್ಯರೆಲ್ಲ
ಸಂಗೀತಕ್ಷೇತ್ರದಲ್ಲಿ ಉಜ್ವಲವಾಗಿ ಗುರುತಿಸಿಕೊಂಡಿದ್ದಾರೆ. ವಿಶ್ವಾದ್ಯಂತ ಇವರ ಶಿಷ್ಯರಿದ್ದಾರೆ.ಮೈಸೂರು
ವಾಸುದೇವಾಚಾರ್ಯರಂತೆಯೇ ಶ್ರೀಕಂಠನ್ ರವರೂ ಕರ್ನಾಟಕದ ಮೇರು ವಿದ್ಚಾಂಸರ ಸಾಲಿಗೆ ಸೇರುತ್ತಾರೆ. ತೊಂಭತ್ತರ

ಹರೆಯದಲ್ಲೂ ಇವರು ಜಗತ್ತಿನಾದ್ಯಂತ ಪ್ರಯಾಣ ಮಾಡುತ್ತ ಹಾಡುತ್ತ ಇರುವುದು ಸೋಜಿಗದ ವಿಷಯವೇ ಸರಿ. 1980ರ
ಕೊನೆಯ ಭಾಗದಲ್ಲಿ ಇವರು ಟೊರಾಂಟೋ ಯಾರ್ಕ್ ವಿಶ್ವವಿದ್ಯಾಲಯಕ್ಕೆ ಬಂದಿದ್ದಾಗ, ಇವರ ಗಾನ-ನಿರೂಪಣ
ಕಾರ್ಯಕ್ರಮವೂ, ಇವರ ವಿದ್ವತ್ತೂ ಮತ್ತು ಸಂಗೀತದ ಕುರಿತಾದ ಅಂತರ್ದೃಷ್ಟಿಯೂ ಪಾಶ್ಚಾತ್ಯ ಸಂಗೀತ ವಿದ್ವಾಂಸರನ್ನೆಲ್ಲ
ಬೆರಗುಗೊಳಿಸಿತ್ತು. ಅವರುಗಳ ಪೈಕಿ ಜಾನ್ ಬಿ ಹಿಗ್ಗಿನ್ಸ್ ರವರೂ ಒಬ್ಬರು. ಶ್ರೀಕಂಠನ್ ರವರ ಸಂಗೀತ ಕಚೇರಿಗಳು ಕ್ಲೀವ್
ಲ್ಯಾಂಡ್ ನ ತ್ಯಾಗಾರಾಜ ಆರಾಧನೆಯ ಇಡೀ ಉತ್ಸವದ ಆಕರ್ಷಣೆಯ ಕೇಂದ್ರವೇ ಆಗಿದ್ದವೆನ್ನಬಹುದು.
ಕೆಲವರ್ಷಗಳ ಹಿಂದೆ ಶ್ರೀಕಂಠನ್ ರವರಿಗೂ, ನನಗೂ, ಬಾಲಮುರಳೀಕೃಷ್ಣರವರಿಗೂ, ಭಾರತರತ್ನ ಪಂಡಿತ್ ರವಿಶಂಕರ್
ರವರಿಗೂ ಸಾನ್ ಡಿಯಾಗೋದಲ್ಲಿ ಒಟ್ಟಿಗೆ ಸಮ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಅನೇಕಾನೇಕ ಪ್ರಶಸ್ತಿಗಳಲ್ಲದೆ
ಕೆಲ ವರ್ಷಗಳ ಹಿಂದೆ ಅವರಿಗೆ ಕ್ಲೀವ್ ಲ್ಯಾಂಡ್ ತ್ಯಾಗರಾಜ ಉತ್ಸವದಲ್ಲಿ ಅತ್ಯುನ್ನತ ಸಮ್ಮಾನವನ್ನೇ ಮಾಡಲಾಗಿತ್ತು.
ಶ್ರೀಕಂಠನ್ ರವರ ಸಂಗೀತದಲ್ಲೂ ಜೀವನದಲ್ಲೂ ಒಂದು ಪರಿಪೂರ್ಣತೆಯನ್ನು ಕಾಣಬಹುದಾಗಿದೆ.

ಟಿ.ಕೆ. ಮೂರ್ತಿ, ಮೃದಂಗ ವಿದ್ವಾಂಸರು

ನಾನು ಶ್ರೀಕಂಠನ್ ರವರ ಕುಟುಂಬದೊಂದಿಗೆ ಸುಮಾರು 50 ವರ್ಷಗಳಿಂದ ಸಂಪರ್ಕದಲ್ಲಿರುವವನು. ಅವರ ಅಣ್ಣಂದಿರಾದ
ವೆಂಕಟರಾಮಾಶಾಸ್ತ್ರಿ, ರಾಮನಾಥನ್ ಮತ್ತು ನಾರಾಯಣಸ್ವಾಮಿರವರಂತಹ ಸಂಗೀತ ಮತ್ತು ವೇದವಿದ್ವಾಂಸರ
ಕಾಲದಿಂದಲೂ ಅವರ ಒಡನಾಟ ನನಗಿದೆ. ಈ ಮಹಾವಿದ್ವಾಂಸರನ್ನಷ್ಟೇ ಅಲ್ಲದೆ, ಕಿರಿಯ ವಿದ್ವಾಂಸರಿಗೂ ನಾನು
ಪಕ್ಕವಾದ್ಯವನ್ನು ನುಡಿಸಿದ್ದೇನೆ.
ಅವರ ಸಂಗೀತ ಸಾಧನೆಯ ಬಗ್ಗೆ ನನಗೆ ಅಪಾರವಾದ ಗೌರವವಿದೆ. ರಮಾಕಾಂತ್ ರವರೂ ಸೇರಿದಂತೆ ಹಲವಾರು
ಸಂಗೀತ ವಿದ್ವಾಂಸರನ್ನು ಶ್ರೀಕಂಠನ್ ರವರು ತರಬೇತುಗೊಳಿಸಿದ್ದಾರೆ.

ಲಾಲ್ಗುಡಿ ಜಿ ಜಯರಾಮನ್, ವೈಲಿನ್ ವಾದಕರು

1961ರಲ್ಲಿ ಬೆಂಗಳೂರಿನಲ್ಲಿ ಶಂಕರ ಜಯಂತಿಯ ಸಂದರ್ಭದಲ್ಲಿ ನಾನು ಪಾಲಕ್ಕಾಡ್ ಮಣಿ ಐಯ್ಯರ್ ರವರೊಡನೆ ಶ್ರೀಕಂಠನ್
ರವರಿಗೆ ಪಕ್ಕವಾದ್ಯವನ್ನು ನುಡಿಸಿದ್ದೆ. ಅಂದಿನಿಂದ ಅವರ ಪರಿಚಯ ನನಗಿದೆ. ಅದಕ್ಕಿಂತ ಮುಂಚೆ ನಾನು ಅವರ ಅಣ್ಣ
ರಾಮನಾಥನ್ ರವರಿಗೂ ಪಕ್ಕವಾದ್ಯ ನುಡಿಸಿದ್ದೇನೆ. ಶ್ರೀಕಂಠನ್ ರವರು ಸಿದ್ಧಗೊಳಿಸಿರುವ ಶಿಷ್ಯರುಗಳ ದೊಡ್ಡಪಟ್ಟಿಯೇ
ಇದೆ. ಅದಕ್ಕಾಗಿ ಅವರು ಬಹಳ ಶ್ಲಾಘ್ಯರು. ಏಕೆಂದರೆ ಅದೆಷ್ಟು ಕಷ್ಟ ಎನ್ನುವುದು ನನಗೆ ಗೊತ್ತಿದೆ!
ತುಂಬ ಔಚಿತ್ಯಪೂರ್ಣವಾಗಿ ಹಾಡುವ ವಿದ್ವಾಂಸರು ಅವರು. 2008ರಲ್ಲಿ ಸಂಗೀತ ಅಕಾಡೆಮಿಯಲ್ಲೂ ಮೈಸೂರಿನ ಭ್ರಮರ
ಟ್ರಸ್ಟ್ ನಲ್ಲೂ ನನಗೆ ಪ್ರಶಸ್ತಿಗಳು ಸಂದಾಗ ಅವರು ನನ್ನ ಬಗ್ಗೆ ಬಹಳ ಮೆಚ್ಚುಗೆಯಿಂದ ಮಾತನಾಡಿದ್ದರು.
ನಾನು ಅವರ ಸಂಗೀತಕ್ಕೆ ಮನಸೋತಿದ್ದೇನೆ. ಅದಲ್ಲದೆ ಅಸ್ಖಲಿತವಾದ ಅವರ ಕಂಠಶ್ರೀಗೂ ನಾನು ಬೆರಗಾಗಿದ್ದೇನೆ.
2003ರಲ್ಲಿ ಕ್ಲೀವ್ ಲ್ಯಾಂಡ್ ನಲ್ಲಿ ಅವರು ವಿಸ್ತರಿಸಿದ ಮೋಹನರಾಗವನ್ನು ನಾನೆಂದೂ ಮರೆಯಲಾರೆ.1970ರಲ್ಲಿ

ತಿರುವನಂತಪುರದಲ್ಲಿ, ನವರಾತ್ರಿ ಮಂಟಪ ಕಛೇರಿಯ ಸಂದರ್ಭದಲ್ಲಿ, ನಾನೂ ಪಾಲ್ಘಾಟ್ ಮಣಿ ಐಯ್ಯರ್ ರವರು
ಪಕ್ಕವಾದ್ಯದಲ್ಲಿದ್ದಾಗ, ಅವರು ಪ್ರಸ್ತುತಪಡಿಸಿದ ಶುದ್ಧಸಾವೇರಿಯನ್ನೂ ಮರೆಯಲಾರೆ. ಆ ಗಾಯನವಂತೂ 1980ರಲ್ಲಿ
ಧ್ವನಿಮುದ್ರಣವೂ ಆಗಿ ಪ್ರಕಟವಾಯಿತು. “ಅದಕ್ಕಾಗಿ ನಿಮಗೆ ಎಷ್ಟು ಸಂಭಾವನೆ ನೀಡಬೇಕು?" ಎಂದು ರಮಾಕಾಂತ್ ರವರು
ಕೇಳಿದಾಗ, ನಾನು ಹೇಳಿದೆ- "ಇಂತಹವರಿಗೆ ಪಕ್ಕವಾದ್ಯ ನುಡಿಸಿದ್ದೇ ನನ್ನ ಪಾಲಿಗೆ ದೊಡ್ಡ ಗೌರವ. ಅದಕ್ಕಿಂತ ಹೆಚ್ಚಿನ
ಸಂಭಾವನೆ ಯಾವುದಿದೆ?" ಎಂದು. ಸ್ವಾತಿ ತಿರುನಾಳ್ ಸಂಗೀತಸಭಾದ ಕಛೇರಿಗಳ ಸರಣಿಯಲ್ಲಿ ನಾನು ಅವರೊಡನೆ
ಭಾಗವಹಿಸಿದ್ದು ನನ್ನ ನೆನಪಿನಲ್ಲಿ ಅಚ್ಚಳಿಯದೇ ಉಳಿದಿವೆ. ಅವರ ಆಚಾರಶೀಲತೆ ಅವರನ್ನು ಇಷ್ಟು ದೂರ ಕರೆತಂದಿದೆ.

ಎಂ.ಎಸ್. ಗೋಪಾಲಕೃಷ್ಣನ್ ವೈಲಿನ್ ವಾದಕರು

1994ರ ವಯಸ್ಸಿನಲ್ಲೂ ಮ್ಯೂಸಿಕ್ ಅಕಾಡೆಮಿಯ ಶ್ರೋತೃಗಳನ್ನು ನಿಬ್ಬೆರಗಾಗಿಸಿದಂತಹ ಗಾಯಕರನ್ನು ನೀವು
ನೋಡಿದ್ದೀರೇನು? ಅದು ಶ್ರೀಕಂಠನ್ ರವರೇ ಆಗಿರಬೇಕು. ನಾನು ಅವರನ್ನು 50 ವರ್ಷಗಳಿಂದ ಬಲ್ಲೆ. ಅವರಿಗೆ ಪಕ್ಕವಾದ್ಯ
ನುಡಿಸುವುದೇ ಆನಂದ. ಏಕೆಂದರೆ ಅವರು ಪರಂಪರೆಯ ಶುದ್ಧಿಯನ್ನು ಹಾಗೆ ಕಾಪಾಡಿಕೊಂಡು ಬಂದಿದ್ದಾರೆ. ಅವರಲ್ಲಿ ಹಲವು
ವಿಷಯಗಳು ಗಮನಾರ್ಹ. ಪುರಂದರದಾಸರ ಕೃತಿಗಳ ವಿಷಯದಲ್ಲಂತೂ ಅವರೇ ಅಧಿಕೃತ ವ್ಯಕ್ತಿ. ಕಿರಿಯರನ್ನೂ
ಆಕರ್ಷಿಸುವ ಮಾದರಿಯಲ್ಲಿ ಹಾಡಬಲ್ಲ ಹಿರಿಯ ವಿದ್ವಾಂಸರು ಅವರು. ಲೌಕಿಕತೆಯಲ್ಲಿ ಆಸಕ್ತಿ ಇಲ್ಲದ ವಿನಮ್ರ ವ್ಯಕ್ತಿ ಅವರು.
ಅವರು ಪ್ರಖ್ಯಾತಿಯನ್ನು ತಮಗಾಗಿ ಬಯಸಿದವರೇ ಅಲ್ಲ. ವೇದಿಕೆಯ ಮೇಲಿನ ಎಲ್ಲರಿಗೂ ಯಶಸ್ಸಿನ ಕೀರ್ತಿಯನ್ನು
ಹಂಚಿಬಿಡುವ ಉದಾರಿಗಳು ಅವರು.

ಉಮಯಾಳಪುರಂ ಶಿವರಾಮನ್, ಮೃದಂಗ ವಿದ್ವಾಂಸರು
ದಶಕಗಳ ಹಿಂದೆ ಶ್ರೀಕಂಠನ್ ರವರ ಧ್ವನಿಯನ್ನು ಮೊಟ್ಟಮೊದಲ ಬಾರಿಗೆ ಕೇಳಿದಾಗ, ನಾನು ಬೆರಗಾದೆ. ಅವರ
ಧ್ವನಿಸಂರಕ್ಷಣೆಯ ವಿಧಾನದಲ್ಲಿ ಅದೇನೋ ಮಾಂತ್ರಿಕತೆ ಅಡಗಿದೆ! ಅದ್ವಿತೀಯರಾದ ಶ್ರೀಕಂಠನ್ ರವರೊಡನೆ ಹಲವು
ಕಛೇರಿಗಳಲ್ಲಿ ಭಾಗವಹಿಸುವ ಸುಯೋಗ ನನಗೆ ದೊರಕಿತು. ಅವರು ಸಂಗೀತಗಾರರ ಸಂಗೀತಗಾರರು. ಇದಕ್ಕೆ ಹಲವು
ಕಾರಣಗಳಿವೆ. ಅದರಲ್ಲಿ ಆದ್ಯ ಕಾರಣ ಅವರ ಶಿಸ್ತು. ಶ್ರೀಕಂಠನ್ ಮತ್ತು ಶೆಮ್ಮಂಗುಡಿರವರುಗಳಲ್ಲಿ ಅದಾವುದೋ ಶಿಸ್ತು ಮತ್ತು
ಕ್ರಮಗಳಿದ್ದವು. ಅದರಿಂದಾಗಿಯೇ ಅವರು ಮಿಕ್ಕೆಲ್ಲರಿಗಿಂತ ಉನ್ನತಮಟ್ಟಕ್ಕೇರಿ ನಿಂತರು, ಸಂಗೀತಕ್ಷೇತ್ರದ ಘನತೆಯನ್ನೂ
ಹೆಚ್ಚಿಸಿದರು. ತಮ್ಮ ಸಂಗೀತವು ಯಾವುದೇ ಕಾರಣಕ್ಕೂ ಯಾಂತ್ರಿಕವಾಗದಂತೆ ಜಾಗೃತಿವಹಿಸಿದವರು ಅವರು. ಇಬ್ಬರೂ
ತಮ್ಮತಮ್ಮ ‘ರಾಜ್ಯವಿದ್ವಾನ್’ ಸ್ಥಾನಕ್ಕೆ ಅರ್ಹರಾದವರೇ.

ಟಿ.ವಿ. ಗೋಪಾಲಕೃಷ್ಣನ್, ಮೃದಂಗ ವಿದ್ವಾಂಸರು

ಕರ್ನಾಟಕ ಸಂಗೀತದ ಪಾವಿತ್ರ್ಯವು ಅದರ ಸ್ವರಶುದ್ಧಿಯನ್ನು ಕಾಪಾಡಿಕೊಂಡುಬರಬಲ್ಲ ವಿದ್ವಾಂಸರುಗಳ ಕೈಯಲ್ಲಿದೆ. ಇವತ್ತು
ಸುಗಮಸಂಗೀತವು ಪ್ರಸಿದ್ಧವಾಗಿದ್ದರೆ, ಅದರ ಸ್ವರಶುದ್ಧಿಯನ್ನು ಉಳಿಸಿಕೊಂಡಿರುವುದೇ ಅದಕ್ಕೆ ಕಾರಣ. ಸ್ವರಶುದ್ಧಿಯು
ಸಂಗೀತಕ್ಕಷ್ಟೇ ಅಲ್ಲ, ಸಂಗೀತಗಾರರಿಗೂ ದೀರ್ಘಾಯುಸ್ಸನ್ನು ನೀಡುತ್ತದೆ. ಶ್ರೀಕಂಠನ್ ರವರು ಇಂದಿಗೂ ಸುಷ್ಟುವಾಗಿ
ಹಾಡಬಲ್ಲರೆಂದರೆ ಅದಕ್ಕೆ ಕಾರಣ ಅವರು ಪಾಲಿಸಿಕೊಂಡು ಬಂದ ಸ್ವರಶುದ್ಧಿ.

ಗುರುವಾಯೂರು ದೊರೈ, ಮೃದಂಗ ವಿದ್ವಾಂಸರು
ನಲವತ್ತು ವರ್ಷಗಳಿಂದ ಶ್ರೀಕಂಠನ್ ರವರ ಒಡನಾಟ ಹೊಂದಿರುವ ನಾನು ಅವರ ಅಸ್ಖಲಿತ ಸಂಗೀತ ಪರಂಪರೆಯಲ್ಲೂ
ಭಾಗಿಯಾಗಿದ್ದೆ ಎನ್ನುವುದು ಹೆಗ್ಗಳಿಕೆಯ ಸಂಗತಿ. ಅವರ ಅಪೂರ್ವ ಪ್ರತಿಭೆಯು ಅದ್ವಿತೀಯ ಸಂಗೀತಶಾಸ್ತ್ರಜ್ಞಾನದೊಂದಿಗೆ
ಸಂಗಮಿಸಿರುವುದು ಅವರನ್ನು ಪರಿಪೂರ್ಣ ಸಂಗೀತಗಾರರನ್ನಾಗಿಸಿದೆ. ನಾನೂ ನನ್ನಂತೆಯೇ ಇತರ ಮೃದಂಗ
ವಿದ್ವಾಂಸರೆಲ್ಲರೂ ಮೆಚ್ಚುವಂತಹ ವಿಷಯವೇನೆಂದರೆ, ಅವರ ಲಯದ ಪರಿಜ್ಞಾನ ಮತ್ತು ಅದಕ್ಕನುಗುಣವಾಗಿ ಅವರು
ನಿರ್ವಹಿಸುವ ಸಮರ್ಥ ಕಾಲಪ್ರಮಾಣ. ಗಾಯಕಶಿರೋಮಣಿಯಾದ ಅವರನ್ನು ಎಲ್ಲ ಪೀಳಿಗೆಯವರೂ ಮೆಚ್ಚುತ್ತಾರೆ
ಎನ್ನುವುದು ವಿಶೇಷ.

ಡಾ. ಟ್ರಿಚಿ. ಶಂಕರನ್, ಮೃದಂಗ ವಿದ್ವಾಂಸರು
94ನೆಯ ವರ್ಧಂತಿಯ ಸಂದರ್ಭದಲ್ಲಿ ಶ್ರೀಕಂಠನ್ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು. ದೇವರು ಅವರಿಗೆ
ದೀರ್ಘಾಯುಸ್ಸನ್ನೂ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಹೆಚ್ಚು ಸೇವೆಗೈಯ್ಯುವ ಶಕ್ತಿಯನ್ನೂ ಕರುಣಿಸಲಿ ಎಂದು
ಪ್ರಾರ್ಥಿಸುತ್ತೇನೆ. ಅವರು ಶತಮಾನೋತ್ಸವವನ್ನೂ ಆಚರಿಸಿಕೊಳ್ಳುವಂತಾಗಲಿ ಎನ್ನುವುದು ನನ್ನ ಹಾರೈಕೆ.
ಹಲವಾರು ದಶಕಗಳಿಂದ ಭಾರತ, ಕೆನಡಾ, ಅಮೇರಿಕಾ ಮತ್ತು ಇತರ ದೇಶಗಳ ಶ್ರೋತೃಗಳಿಗೆ ಸಂಗೀತದ ಅಪರಿಮಿತ
ಆನಂದವನ್ನು ನೀಡುತ್ತ ಬಂದಿರುವ, ಕರ್ನಾಟಕ ಸಂಗೀತಕ್ಷೇತ್ರದ ದಿಗ್ಗಜರಾದ ಶ್ರೀಕಂಠನ್ ರವರ ಜೊತೆ ನನಗಿದ್ದ
ಒಡನಾಟದ ಬಗ್ಗೆ ಬರೆಯುವುದು ನನ್ನ ಪಾಲಿಗೆ ಸಮ್ಮಾನವೇ ಸರಿ. ಅವರ ಸಂಗೀತವು ಪಾರಂಪರಿಕವಾಗಿಯೂ
ಪಾರಿವಾರಿಕವಾಗಿಯೂ ಹರಿದುಬಂದಿರುವ ಅಂಶವು ಅವರ ಪಾಠಾಂತರಗಳ ಪರಿಪಕ್ವತೆಯಲ್ಲಿ ಎದ್ದುಕಾಣುತ್ತದೆ.

1960ರಿಂದ ನನಗೆ ಶ್ರೀಕಂಠನ್ ರವರೊಂದಿಗೆ ಒಡನಾಟವಿದೆ. ಮದ್ರಾಸ್ ಆಕಾಶವಾಣಿಯ ಸಂಗೀತ ಸಮ್ಮೇಳನದಲ್ಲಿ, ನಾನು
ಮೃದಂಗ ನುಡಿಸುವುದರ ಮೂಲಕ ಅವರ ಒಡನಾಟ ಪ್ರಾರಂಭವಾಯಿತು. ಆ ಸಂದರ್ಭದಲ್ಲಿ ಮಾಯಾವರಂ
ಗೋವಿಂದರಾಜ ಪಿಳ್ಳೈರವರು ಪಿಟೀಲನ್ನೂ ಮತ್ತು ಅಲಂಗುಡಿ ರಾಮಚಂದ್ರರವರು ಘಟವನ್ನೂ ನುಡಿಸಿದ್ದರು. 1980ರಲ್ಲಿ
ಕೆನಡಾದ ಯಾರ್ಕ್ ವಿಶ್ವವಿದ್ಯಾಲಯದಲ್ಲಿ ಆರು ವಾರಗಳ ಅವರ ಸಂಗೀತಪಾಠಗಳನ್ನು ಆಯೋಜಿಸುವ ಸದವಕಾಶ ನನಗೆ
ಲಭಿಸಿತ್ತು. ನಾವಿಬ್ಬರೂ ಯಾರ್ಕ್ ವಿಶ್ವವಿದ್ಯಾಲಯದಲ್ಲೂ ಟೊರಾಂಟೋ ಭಾರತೀಯ ಶ್ರೋತೃಗಳಿಗಾಗಿಯೂ ನಾವಿಬ್ಬರೂ
ಹಲವು ಬಾರಿ ಒಟ್ಟಿಗೆ ಕಛೇರಿ ಮಾಡಿದ್ದೇವೆ. ಆಂಗ್ಲಭಾಷೆಯಲ್ಲಿ ಒಳ್ಳೆಯ ಹಿಡಿತವಿದ್ದ ಅವರ ಪ್ರವಚನಗಳು
ವಿದ್ವತ್ಪೂರ್ಣವಾಗಿದ್ದವು.

ಮತ್ತೊಂದು ಸ್ಮರಣೀಯ ಸಂದರ್ಭವೆಂದರೆ 2011ರಲ್ಲಿ ನಡೆದ ಮದ್ರಾಸಿನ ಮ್ಯೂಸಿಕ್ ಅಕಾಡೆಮಿಯ ಸಂಗೀತ ಸಮ್ಮೇಳನದ
ಬೆಳಗಿನ ಅವಧಿಗಳು. ಆಗ ನಾನು ಸಮ್ಮೇಳನಾಧ್ಯಕ್ಷನಾಗಿದ್ದು ಸಂಗೀತಕಲಾನಿಧಿ ಸಮ್ಮಾನವನ್ನು ಪಡೆದಿದ್ದೆ. ಕಛೇರಿ ಪದ್ಧತಿ
ಎಂಬ ವಿಷಯದ ಕುರಿತಾದ ಅವರ ವಿಚಾರ-ವಿಮರ್ಶೆಗಳು ಸ್ವಂತದ ಸಮೃದ್ಧ ಅನುಭವವನ್ನು ಪ್ರತಿಫಲಿಸುತ್ತಿತ್ತು.
ಕೆಲವರ್ಷಗಳ ಹಿಂದೆ ನಾನು ಕ್ಲೀವ್ ಲ್ಯಾಂಡ್ ನಲ್ಲಿ ಅವರಿಗೆ ಪಕ್ಕವಾದ್ಯ ನುಡಿಸಿದ್ದು, ಅವರ ಗಾಯನವು ಆ ಸಂಗೀತೋತ್ಸವದ
ಒಟ್ಟಾರೆ ಆಕರ್ಷಣೆಯ ಕೇಂದ್ರಬಿಂದುವೇ ಆಗಿಬಿಟ್ಟಿತ್ತು. ಶತಾಯುಸ್ಸಿಗೆ ಹತ್ತಿರವಾಗಿರುವ ಅವರು ಕರ್ನಾಟಕ ಶಾಸ್ತ್ರೀಯ
ಸಂಗೀತದ ದಂತಕಥೆಯೇ ಆಗಿಬಿಟ್ಟಿದ್ದಾರೆ. ಮಹನೀಯರಾದ ಮುಸುರಿರವರ ಶೈಲಿಯ ಪ್ರತಿನಿಧಿಯಾಗಿ, ಶ್ರೀಕಂಠನ್ ರವರು
ಸಂಗೀತಗಾರರಾಗಿಯೂ ಶಿಕ್ಷಕರಾಗಿಯೂ ನೀಡಿರುವ ಯೋಗದಾನ ಅಪರಿಮಿತವಾದದ್ದು.

ಶ್ರೀಮುಷ್ಣಂ ವಿ ರಾಜಾರಾವ್, ಮೃದಂಗ ವಿದ್ವಾಂಸರು
ಪದ್ಮಭೂಷಣ ಆರ್.ಕೆ. ಶ್ರೀಕಂಠನ್ ರವರನ್ನು ನಾನು ಹಲವಾರು ವರ್ಷಗಳಿಂದ ಬಲ್ಲೆ ಎನ್ನುವುದು ನನಗೆ ಆನಂದದ ವಿಷಯ.
ಅವರ ಗಾಯನದ ಹೆಗ್ಗಳಿಕೆಯೇನೆಂದರೆ, ಅವರು ಸುತ್ತಲ ಪರಿಸರದಲ್ಲಿ ಶ್ರುತಿಯ ಸಮೃದ್ಧ ಸ್ಪಂದನಗಳನ್ನು ಪಸರಿಸುತ್ತಾರೆ.
ಕಛೇರಿಯ ಪ್ರತಿಯೊಂದು ವಿಚಾರಕ್ಕೂ ಸಮಯವನ್ನು ನಿಗದಿಪಡಿಸಿಕೊಳ್ಳುತ್ತಾರೆ. ಬೇಕಾದರೆ ಯಾರಾದರೂ ಗಡಿಯಾರ
ಇಟ್ಟುಕೊಂಡು ಗಮನಿಸಬಹುದು. ಅವರು ವೇದಿಕೆಯ ಮೇಲೂ, ಬೇರೆ ಸಂದರ್ಭದಲ್ಲೂ ಶಿಸ್ತಿನ ವ್ಯಕ್ತಿಯಾಗಿದ್ದು, ಸದಸ್ಸಿನ
ಗೌರವವನ್ನು ಕಾಪಾಡುತ್ತಾರೆ.

ಹಲವಾರು ದಶಕಗಳಿಂದ ನಾನು ಅವರಿಗೆ ಪಕ್ಕವಾದ್ಯವನ್ನು ನುಡಿಸುತ್ತಿದ್ದೇನೆ. ಸಹಕಲಾವಿದರ ಬಗ್ಗೆ ಅವರಿಗೆ ಅಪಾರ
ವಿಶ್ವಾಸ, ಗೌರವ. ಅವರು ಆಯ್ದುಕೊಳ್ಳುವ ಪಂಕ್ತಿಗಳು, ಅವರು ಒಪ್ಪಾಗಿ ಒತ್ತುಕೊಡುವ ರಾಗ-ಲಯಗಳಿಂದಾಗಿ
ಶೋಭಾಯಮಾನವಾಗಿರುತ್ತವೆ. ಕಛೇರಿಯ ಸಂದರ್ಭದಲ್ಲಿ, ಪಕ್ಕವಾದ್ಯದವರ ಕಡೆ ಯಾವಾಗ, ಹೇಗೆ ನೋಡಬೇಕು,
ನೋಟದಲ್ಲಿ ಸಂವಹನ ಮಾಡಿಕೊಳ್ಳಬೇಕು ಎನ್ನುವ ವಿಷಯದಲ್ಲಿ ಅವರು ನಿಪುಣರು. ತನಿ-ಆವರ್ತನದ ಸಂದರ್ಭದಲ್ಲೂ
ಅವರು ಲಯವನ್ನು ಏಕಾಗ್ರವಾಗಿ ಗಮನಿಸುತ್ತಾರೆ. ಅವರ ಸಂಗೀತದಲ್ಲಿ ಪ್ರಸಾದಗುಣವೂ ಸ್ಪಷ್ಟತೆಯೂ ಇದ್ದುದರಿಂದ ಅವರ
ಶಿಕ್ಷಣಕ್ರಮವೂ ಸುಷ್ಟುವಾಗಿದೆ. ಅವರ ಗಮಕ-ಪ್ರಸ್ತುತಿಯೂ ಕೂಡ ಸಂಪ್ರದಾಯದ ಸಂಸ್ಕಾರವನ್ನು ಪಡೆದು
ನಿಂತಿದ್ದು,ಅದನ್ನು ಸಂಗೀತದ ಇತಿಹಾಸದಲ್ಲಿ ದಾಖಲಿಸಿಡಬೇಕಾಗಿದೆ. ಈ ನಿಟ್ಟಿನಲ್ಲಿ ಈ ಪುಸ್ತಕವನ್ನು ಹೊರತರುತ್ತಿರುವ
ಶ್ರೀಮತಿ ರಂಜನಿ ಗೋವಿಂದರ ಪ್ರಯತ್ನ ಶ್ಲಾಘನೀಯವೇ ಸರಿ.

| ಮುಂದುವರೆಯುವುದು ।

‍ಲೇಖಕರು Admin

August 5, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: