ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ವಿದ್ವಾಂಸರ ಮತ್ತು ಸಂಗೀತ ಕಲಾವಿದರ ನುಡಿಚಿತ್ರ…

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು.

ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು ಕನ್ನಡಕ್ಕೆ ತಂದಿದ್ದಾರೆ.

ಖ್ಯಾತ ಸಂಗೀತಗಾರರೂ ಹಾಗೂ ಸಂಸ್ಕೃತ ವಿದ್ವಾಂಸರಾದ ಡಾ ಟಿ ಎಸ್ ಸತ್ಯವತಿ ಅವರು ಇದನ್ನು ಸಂಪಾದಿಸಿದ್ದಾರೆ.

ಈ ಕನ್ನಡ ಅವತರಣಿಕೆ ‘ಅವಧಿ’ಯಲ್ಲಿ ಧಾರಾವಾಹಿಯಾಗಿ ನಿಮ್ಮ ಮುಂದೆ…

19

ರಾಮಾಕಾಂತ್, ಶಿಷ್ಯ ಹಾಗೂ ಗಾಯಕ

ನನ್ನ ತಂದೆಯವರು ಕೇವಲ ಶಾಸ್ತ್ರೀಯ ಸಂಗೀತದ ಸಾಧಕರಾಗಿಯಷ್ಟೇ ನಮಗೆ ವಿಶಿಷ್ಟರೆನಿಸುವುದಿಲ್ಲ, ಆದರೆ ಕಛೇರಿ ಧರ್ಮದಲ್ಲಿನ ಅವರದೇ ಆದ ಅನುಪಮ ಸಾಧನೆಗಾಗಿಯೂ, ಪಾಠನಕೌಶಲಕ್ಕಾಗಿಯೂ, ಅವರು ಪ್ರತಿಪಾದಿಸಿದ ಮೌಲ್ಯಗಳಿಗಾಗಿಯೂ ವಿಶಿಷ್ಟರೆನಿಸಿದ್ದಾರೆ. ಅವರನ್ನು ಜೀವನದುದ್ದಕ್ಕೂ ಮುನ್ನಡೆಸಿರುವುದು ಅವರ ಆಧ್ಯಾತ್ಮಿಕ ಮನೋಭಾವ. ಸಂಗೀತಗಾರರಾಗಿಯೂ, ಶಿಕ್ಷಕರಾಗಿಯೂ ತಂದೆಯಾಗಿಯೂ ಅವರು ಅತ್ಯಂತ ಶಿಸ್ತಿನ ಜೀವನವನ್ನು ನಡೆಸಿದ್ದಾರೆ. ಜೀವನದ ಎಲ್ಲ ವಿಚಾರಗಳಲ್ಲೂ ಅವರು ಹದವನ್ನು ಬಲ್ಲವರು. ಅವರ ಸಮಯಪ್ರಜ್ಞೆಯಂತೂ ಗಮನಾರ್ಹವಾದದ್ದು. ಕಾಲ ಸರಿದರೂ ಅವರ ಉತ್ಸಾಹವು ಒಂದು ಸ್ವಲ್ಪವೂ ಕುಂದಿಲ್ಲ. ಬದಲಾಗುತ್ತಿರುವ ಸಂಗೀತಕ್ಷೇತ್ರವು ಅವರ ನಿಲುವನ್ನೂ, ಅವರ ಸಂಗೀತದ ಸಮಷ್ಟಿಸ್ವರೂಪವನ್ನೂ ಎಂದೂ ಪ್ರಭಾವಗೊಳಿಸಲು ಸಾಧ್ಯವಾಗಿಲ್ಲ. ಅವರು ಕಲೆಯ ವಿಷಯದಲ್ಲೂ ಜೀವನದ ವಿಷಯದಲ್ಲೂ ಪರಿಪೂರ್ಣತೆಯ ಸಾಧಕರಾಗಿದ್ದವರು. ಅವರ ಸಿದ್ದಾಂತಗಳು ನನ್ನನ್ನು ಸಾಕಷ್ಟು ಪ್ರಭಾವಗೊಳಿಸಿವೆ. ಆದರೆ ನಾನು ಅವರಷ್ಟು ಬಿಗಿಯಾಗಿರಲು ಬಯಸುವುದಿಲ್ಲ. ನಾನು ಕಾಲೇಜು ಉಪನ್ಯಾಸಕನೂ, ಗಾಯಕನೂ ಆಗಿರುವುದಲ್ಲದೆ, ವನ್ಯಮೃಗಗಳ ಬಗ್ಗೆಯೂ ಛಾಯಾಗ್ರಹಣದಲ್ಲೂ ಅತೀವ ಆಸಕ್ತಿ ಇರುವವನಾದ್ದರಿಂದ, ನನ್ನ ತಂದೆಯವರಂತೆ ಸಂಗೀತದ ವಿಷಯದಲ್ಲಿ ಕಟ್ಟುಪಾಡುಗಳ ವೇಳಾಪಟ್ಟಿಯನ್ನು ಅನುಸರಿಸಲಾರೆ. 

ಗೌರಿ ಕುಪ್ಪುಸ್ವಾಮಿ, ಶಿಷ್ಯೆ, ಲೇಖಕಿ ಹಾಗೂ ಗಾಯಕಿ

ನನ್ನ ಗುರುಗಳಾದ ಶ್ರೀಕಂಠನ್  ರವರು ಸಂಗೀತದ ವಿಷಯದಲ್ಲಿ ಸಂಪ್ರದಾಯಸ್ಥರೂ ಶುದ್ಧರೂ ಆಗಿದ್ದಾರೆ. ಆದರೆ ಲಲಿತಕಲೆಗಳನ್ನು ಕಲಿಯುವಂತೆಯೂ ವೇದಿಕೆಯನ್ನೇರುವಂತೆಯೂ ಮಹಿಳೆಯರನ್ನು ಪ್ರೋತ್ಸಾಹಿಸುವ ವಿಷಯದಲ್ಲಿ ಅವರು ನಿಜ ಜೀವನದಲ್ಲಿ ಸಂಪ್ರದಾಯಬದ್ಧತೆಯನ್ನು ಮೀರಿದರು. ಅವರ ಪ್ರೋತ್ಸಾಹವಿಲ್ಲದೆ, ನಾವು ವೇದಿಕೆಯನ್ನೇರುವುದನ್ನು ಊಹಿಸಲೂ ಆಗುತ್ತಿರಲಿಲ್ಲ. ಶಾಸ್ತ್ರೀಯ ಸಂಗೀತದ ಸಂಪ್ರದಾಯಶುದ್ಧಿಯ ಜೊತೆಗೆ ಕಲಾಲೋಕಕ್ಕೆ ಬೇಕಾಗಿರುವ ಉದಾರಮನಸ್ಕತೆಯನ್ನೂ ಅವರು ಹೊಂದಿರುವರು. ಎರಡನ್ನೂ ಸಮವಾಗಿ ಪಾಲಿಸಿದ ಧುರೀಣರು. ಎಲ್ಲ ದೃಷ್ಟಿಯಿಂದಲೂ ಅತ್ಯಂತ ಸಜ್ಜನಿಕೆಯ ವ್ಯಕ್ತಿತ್ವ ಅವರದು. 

ಜಿ.ವಿ. ನೀಲಾ, ಶಿಷ್ಯೆ ಹಾಗೂ ಗಾಯಕಿ

1960ರಲ್ಲಿ ನನ್ನ ತಂದೆ ಜಿ. ವೇದಾಂತ ಐಯ್ಯಂಗಾರರವರು, ತಮ್ಮಇಬ್ಬರು ಹೆಣ್ಣುಮಕ್ಕಳಿಗೆ (ನಾನು ಹಾಗೂ ನನ್ನ ಸೋದರಿ ಜಿ.ವಿ. ರಂಗನಾಯಕಮ್ಮ)  ಪಾಠ ಹೇಳಿಕೊಡುವಂತೆ ಶ್ರೀಕಂಠನ್ ರವರನ್ನು ವಿನಂತಿಸಿದಾಗ, ಅವರು ತಕ್ಷಣ ಒಪ್ಪಿಕೊಂಡರು. ಮೊದಮೊದಲು ನನ್ನ ತಂದೆ ನಮ್ಮಿಬ್ಬರನ್ನೂ ಗುರುಗಳ ಮನೆಗೆ ಸಂಗೀತಪಾಠಕ್ಕೆ ಟಾಂಗಾದಲ್ಲಿ ಕರೆದೊಯ್ಯುತ್ತಿದ್ದರು. ಆ ಬಳಿಕ, ತಮ್ಮ ಮನೆಯಲ್ಲಿ ನಿರಂತರ ಜನರ ಓಡಾಟ ಮತ್ತು ಗದ್ದಲಗಳಿಂದಾಗಿ, ಶ್ರೀಕಂಠನ್ ರವರೇ ನಮ್ಮ ಮನೆಗೆ ಬಂದು ಪಾಠ ಹೇಳಲಾರಂಭಿಸಿದರು. ಅವರ ಪಾಠ ಶಿಸ್ತುಬದ್ಧವಾಗಿಯೂ ಆಕರ್ಷಕವಾಗಿಯೂ ಇರುತ್ತಿತ್ತು. ಸ್ವಾತಿ  ತಿರುನಾಳರ ಸಿಂಹೇಂದ್ರಮಧ್ಯಮ ರಾಗದ ಕೃತಿ ”ರಾಮರಾಮ ಗುಣಸೀಮಾ” ಕೃತಿಯನ್ನು ನನ್ನ ಗುರುಗಳು ಮಂಡಿಸುತ್ತಿದ್ದ ಬಗೆಯನ್ನು ನಾನೆಂದೂ ಮರೆಯಲಾರೆ. ನಮ್ಮ ತಂದೆ ವೇದಾಂತ ಐಯ್ಯಂಗಾರರ ಹೆಸರಲ್ಲಿ ಒಂದು ಪ್ರಶಸ್ತಿಯನ್ನು ಸಂಗೀತ ಸಾಧಕರಿಗಾಗಿ ನಿರ್ಮಿಸುವಂತೆ, ಮೃಗಂದವಾದಕರಾದ ನನ್ನ ಸೋದರ ಜಿ.ವಿ. ಕೃಷ್ಣಪ್ರಸಾದರಿಗೆ ಸೂಚಿಸಿದ್ದು ಶ್ರೀಕಂಠನ್ ರವರೇ.

ಎಸ್.ಕೆ. ವಸುಮತಿ, ಶಿಷ್ಯೆ ಹಾಗೂ ಗಾಯಕಿ

ನನಗೆ ಪ್ರಾರಂಭಿಕ ಸಂಗೀತಪಾಠವಾಗಿದ್ದು ಶ್ರೀಕಂಠನ್ ರವರ ಅಣ್ಣ ಆರ್.ಕೆ. ರಾಮನಾಥನ್ ರವರಿಂದ. ನಾನು ಹಾಸನದಿಂದ ಮೈಸೂರಿಗೆ ಸ್ಥಳಾಂತರ ಹೊಂದಿದಾಗ ಶ್ರೀಕಂಠನ್ ರವರಲ್ಲಿ ಪಾಠವನ್ನು ಕಲಿಯಲಾರಂಭಿಸಿದ್ದು. ನಾನು ನನ್ನ ಗುರುಗಳನ್ನು ಮೊದಲು ಕಂಡದ್ದು ಮೈಸೂರಿನ ಆಕಾಶವಾಣಿಯಲ್ಲಿ. ನನ್ನ ನೆಚ್ಚಿನ ಗಾಯಕರಾದ ಅವರ ಸಂಗೀತವನ್ನು ನಾನು ರೇಡಿಯೋದಲ್ಲಿ ಅದೆಷ್ಟು ಬಾರಿ ಕೇಳಿ ಆಸ್ವಾದಿಸಿಲ್ಲ! ಅವರ ಸಂಗೀತವು ಎಷ್ಟು ಅಸಾಧಾರಣವೋ, ಅವರ ಪಾಠವೂ ಅಷ್ಟೇ ಅಸಾಧಾರಣ. ಭಾವಾಂಶಗಳೆಲ್ಲ ಅಚ್ಚುಕಟ್ಟಾಗಿ ಮೂಡಿಬರುತ್ತಿದ್ದವು. ಇಂದು ನಾನು ಹಾಡಿದರೆ ಜನರು ಹೇಳುತ್ತಾರೆ- “ನಿಮ್ಮ ಶ್ರುತಿಶುದ್ಧಿ ಮತ್ತು ಸಾಹಿತ್ಯಶುದ್ಧಿಗಳು ನಿಮಗಾದ ತರಬೇತಿಯನ್ನು ಎತ್ತಿ ತೋರುತ್ತವೆ”. ಈ ಮೆಚ್ಚುಗೆಯೆಲ್ಲ ನನ್ನ ಗುರುಗಳಿಗೇ ಸಲ್ಲಬೇಕು. ಅದೇ ನಾನು ಅವರಿಗೆ ಅರ್ಪಿಸುವ ಗೌರವ.

ಲಕ್ಷ್ಮೀಕಾಂತ ಕಡಬ, ಶಿಷ್ಯ ಹಾಗೂ ಗಾಯಕ

ಎಪ್ಪತ್ತರ ದಶಕಗಳಿಂದಲೂ ಶ್ರೀಕಂಠನ್ ರವರ ಹಿರಿಯ ಶಿಷ್ಯರ ಸಾಲಿನವನಾದ ನಾನು ಗಮನಿಸಿರುವುದೇನೆಂದರೆ, ಅವರು ತಮ್ಮ ಶಿಷ್ಯರಿಗೆ ಸಂಗೀತವನ್ನು ಕಲಿಸುವುದಲ್ಲದೆ, ಉತ್ತಮ ಕಛೇರಿ ವಿನಿಕೆಗೂ ತರಬೇತುಗೊಳಿಸುತ್ತಾರೆ. ಕರ್ನಾಟಕದ ಸಂಕೇತಿಕುಲದ ವಂಶವಾಹಿನಿಗಳನ್ನು ತಳೆದುಬಂದ ಈ ಮಹಾತ್ಮರ ಪೂರ್ವಜರು ಹರಿಕಥಾ ವಿದ್ವಾಂಸರೂ ಆಗಿದ್ದರು. ಈ ಭೀಷ್ಮರು ವಿನಮ್ರರೂ, ಸಾತ್ವಿಕರೂ, ಶಿಸ್ತಿನ ಸಿಪಾಯಿಯೂ ಆಗಿದ್ದು ಕನ್ನಡ, ಸಂಸ್ಕೃತ ಮತ್ತು ಆಂಗ್ಲಭಾಷೆಗಳಲ್ಲಿ ಪರಿಣತರೂ ಆಗಿದ್ದಾರೆ. ಅತ್ಯಂತ ಶಿಸ್ತಿನ ಶಿಕ್ಷಕರಾಗಿದ್ದರೂ, ಶಿಷ್ಯರುಗಳ ತಪ್ಪುಗಳಿಂದ ಅವರು ಕೋಪಗೊಳ್ಳುವುದಿಲ್ಲ. ತಪ್ಪುಗಳನ್ನು ಗೌರವಯುತವಾಗಿಯೂ ಮೃದುವಾಗಿಯೂ ತಿದ್ದುತ್ತಾರೆ. ವಿದ್ಯಾರ್ಥಿಗಳು ಪಾಠಕ್ಕೆ ಬರುವುದಕ್ಕಿಂತ ಕೆಲವು ನಿಮಿಷಗಳ ಮೊದಲೇ ಶ್ರೀಕಂಠನ್ ರವರು ಶ್ರುತಿಪೆಟ್ಟಿಗೆಯನ್ನು ಶ್ರುತಿಗೂಡಿಸಿ ಕುಳಿತಿರುತ್ತಾರೆ. ಅವರು ಸಿದ್ಧವಾಗಿ ಕುಳಿತು ಗುನುಗುವ ಮಧುರಸ್ವರ-ಲಘು ಲೆಕ್ಕಾಚಾರಗಳು ಒಳಗೆ ಬರುವ ವಿದ್ಯಾರ್ಥಿಗಳ ಮನಸ್ಸನ್ನು ಅನುವುಗೊಳಿಸಿಬಿಡುತ್ತವೆ.  ವಿನಮ್ರವಾದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬಯಸುವವರೆಲ್ಲರ ಪಾಲಿಗೆ ಎಲ್ಲ ಕಾಲಕ್ಕೂ ನನ್ನ ಗುರುಗಳು ಆದರ್ಶಪ್ರಾಯರು. ಅವರ ಶಾಂತಸ್ವಭಾವವು 94ರ ಹಿರಿಯ ವಯಸ್ಸಿನಲ್ಲೂ ವೇದಿಕೆಯ ಮೇಲೆ ಅವರ ಕಂಠಶ್ರೀಯನ್ನು ಉತ್ತಮವಾಗಿ ಉಳಿಸಿದೆ ಎನ್ನಬಹುದು.

ಶಾಂತಾ ನರಸಿಂಹನ್, ಶಿಷ್ಯೆ ಹಾಗೂ ಗಾಯಕಿ

ನಾನು 1967ರಿಂದಲೂ ಶ್ರೀಕಂಠನ್ ರವರ ಶಿಷ್ಯೆ. ಅವರು ಶಕ್ತಿಯ ಸ್ಥಂಭವಿದ್ದಂತೆ. ಅವರಲ್ಲಿ ದೂರದೃಷ್ಟಿಯೂ ಭಾಷಾಭಿಜ್ಞತೆಯೂ ಕೂಡಿವೆ. ಅವರಷ್ಟು ಶಿಸ್ತುಬದ್ಧರಾದ ಗುರುಗಳನ್ನು ನಾನು ಕಂಡಿಲ್ಲ. ಹಾಡುಗಾರಿಕೆಯ ಯಾವುದೇ ತಪ್ಪುಗಳ ವಿಷಯದಲ್ಲಿ ‘ಹೋಗಲಿ, ಪರವಾಗಿಲ್ಲ’ ಎಂಬ ಮಾತೇ ಅವರಲ್ಲಿಲ್ಲ! ಪಾಠ ಹೇಳಿಕೊಡುವ ವಿಷಯದಲ್ಲೂ ಅಷ್ಟೆ, ಅವರು ಕುಂದಿಲ್ಲದಂತೆ ಪಾಠಮಾಡುವವರು. 

ಎಲ್ಲ ಶಿಷ್ಯರನ್ನೂ ಸಮವಾಗಿ ಕಾಣುತ್ತಾರೆ. ಅವರು ಅಜಾತಶತ್ರು. ಅವರು ಸಂಗೀತದಲ್ಲಿ ಹಾಡುವ, ಮಾತನಾಡುವ ಹಾಗೂ ಪಾಠ ಮಾಡುವ ಪರಿಯನ್ನು ಕಂಡಾಗ, ಅವರು ಸಂಗೀತ ಪರಂಪರೆಯಲ್ಲಿ ಅದೆಷ್ಟು ಆಳವಾಗಿ ಮುಳುಗಿದ್ದಾರೆ ಎನ್ನುವುದು ಭಾಸವಾಗುತ್ತದೆ. ಅವರು ನಿಜವಾಗಿಯೂ ‘ನಾದಬ್ರಹ್ಮ, ನಾದರ್ಷಿ, ನಾದಯೋಗಿ, ನಾದನಿಧಿ…’ ಅವರಿಗೆ ಸಂದ ಈ ಬಿರುದುಗಳೆಲ್ಲ ಸಾರ್ಥಕವೇ ಸರಿ.

ಎಂ.ಎಸ್. ಶೀಲಾ, ಶಿಷ್ಯೆ ಹಾಗೂ ಗಾಯಕಿ

ಶ್ರೀಕಂಠನ್ ರವರು ತಮ್ಮ ಶಿಷ್ಯರಿಗೆ ಎಂದೂ ಗುಂಪಿನಲ್ಲಿ ಕಲಿಸಿದವರಲ್ಲ. ಅವರ  ದೃಷ್ಟಿಯಲ್ಲಿ ಪ್ರತ್ಯೇಕ ಪಾಠದಿಂದ  ಮಾತ್ರ  ಗುರುಶಿಷ್ಯರ ಸಂಬಂಧ ಗಟ್ಟಿಯಾಗಲು ಸಾಧ್ಯ. ನಾನು ಅವರ ಹೊಸ ಶಿಷ್ಯೆಯಾಗಿದ್ದಾಗ, ಅವರು ಸ್ವಲ್ಪ ಕೋಪಿಸಿಕೊಳ್ಳುತ್ತಿದ್ದುದುಂಟು.  ಸಮಯಪಾಲನೆ ಹಾಗೂ ಸರಿಯಾಗಿ ಕಲಿಯುವಿಕೆ- ಈ ಎರಡು ವಿಷಯದಲ್ಲಿ ತಪ್ಪಿದವರನ್ನು ಅವರು ಬಿಡುವುದಿಲ್ಲ. ಒಂದೇ ಹಾಡನ್ನೋ, ಪಂಕ್ತಿಯನ್ನೋ ಬಹಳ ಸಲ ಪಾಠ ಮಾಡುತ್ತಾರೆ. ಆದರೆ ಕಲಿತಾದ ಮೇಲೆ ಚಾಚೂ ತಪ್ಪದೆ ಅಚ್ಚುಕಟ್ಟಾಗಿ ಒಪ್ಪಿಸಬೇಕೆಂದು ನಿರೀಕ್ಷಿಸುತ್ತಾರೆ. ಆ ವಿಷಯದಲ್ಲಿ ಬೇರೆ ಮಾತೇ ಇಲ್ಲ. ನನಗೆ ಚೆನ್ನಾಗಿ ನೆನಪಿದೆ, ಒಮ್ಮೆ ನಾನು ಅವರು ಹೇಳಿಕೊಟ್ಟ ರೀತಿಯಲ್ಲಿ ಹಾಡಿಲ್ಲವೆಂದು ಮನೆಗೇ ಕಳಿಸಿಬಿಟ್ಟಿದ್ದರು. 

ಉತ್ತಮ ಸಂಗೀತವನ್ನು ಕೇಳಿಸಿಕೊಳ್ಳುವಂತೆ ನಮಗೆ ಪದೇಪದೇ ಹೇಳುತ್ತಾರೆ. ಉತ್ತಮ ಚಿಂತನೆಯನ್ನು ಬೆಳೆಸಿಕೊಳ್ಳುವಂತೆಯೂ ಒತ್ತಿಹೇಳುತ್ತಾರೆ. ನಮ್ಮ ಸಂಗೀತವನ್ನು ನಾವೇ ವಿಮರ್ಶಿಸುವಂತೆ ನಿರ್ದೇಶಿಸುತ್ತಾರೆ. ಸ್ವೋಪಜ್ಞ ರಾಗಾಲಾಪನ ಕ್ರಮಕ್ಕೆ ಅವರು ವಿಧಿಸುವ ನಿಯಮ ಬಹಳ ಸರಳ.  ‘ಒಂದೇ ರಾಗದಲ್ಲಿ ವಿವಿಧ ವಾಗ್ಗೇಯಕಾರರ ಹೆಚ್ಚು ಕೃತಿಗಳನ್ನು ಅಭ್ಯಸಿಸಿ. ಆಗ ಮಾತ್ರ ಆ ರಾಗದ ಎಲ್ಲ ಆಯಾಮಗಳನ್ನು ಸಿದ್ಧಿಸಿಕೊಳ್ಳಲು ಸಾಧ್ಯ’ ಎಂದು ಸೂಚಿಸುತ್ತಾರೆ.

ಟಿ.ಎಸ್.ಸತ್ಯವತಿ,  ಶಿಷ್ಯೆ, ಗಾಯಕಿ ಹಾಗೂ ಸಂಸ್ಕೃತ ವಿದುಷಿ

ನನ್ನ ಗುರುಗಳು ಪ್ರಜ್ಞಾವಂತ ಗಾಯನಕ್ಕೂ ನಿಷ್ಠಾವಂತ ಬೋಧನೆಗೂ ಪರ್ಯಾಯ ನಾಮ. ಅವರ ಶಿಷ್ಯರಾಗುವುದರಲ್ಲಿ ಇರುವ ಅತ್ಯುನ್ನತ ಪ್ರಾಪ್ತಿ ಇದೇ ಎನ್ನಬಹುದು.  ಸಂಪ್ರದಾಯಬದ್ಧತೆಯೂ ಸುಸಂಬದ್ಧವಾದ ಸೃಜನಶೀಲತೆಯನ್ನು ಅಲ್ಲಗಳೆಯದಿರುವ ನ್ಯಾಯದೃಷ್ಟಿಯೂ ಶಿಷ್ಯರ ವಿಷಯದಲ್ಲಿನ ಅವರ ವ್ಯವಹಾರದಲ್ಲಿ ಪ್ರತಿಬಿಂಬಿತವಾಗಿವೆ. ಪಾಠಕ್ಕೆ ತಡವಾಗಿ ಬಂದ ಶಿಷ್ಯರನ್ನು ಅವರ  ಬಿರುನೋಟ ಮತ್ತು ಬಿರುಸು ನುಡಿಗಳು ಎದುರುಗೊಂಡರೂ ಅದಾವುದೂ ಅವರಿಗೆ ಶಿಷ್ಯರಲ್ಲಿದ್ದ ಕಾಳಜಿಯನ್ನು ಮಾತ್ರ ಕುಂಠಿತಗೊಳಿಸುವುದಿಲ್ಲ. ಅವರ ಬಳಿ ಪದೇಪದೇ ಪಾಠಕ್ಕೆ ಹೋಗುವ ಅಗತ್ಯವಿಲ್ಲ. ಏಕೆಂದರೆ ಅವರಿಂದ ಒಮ್ಮೆ ಕಲಿತದ್ದನ್ನು ಅರಿತು ಅರಗಿಸಿಕೊಳ್ಳಲು ಸಾಕಷ್ಟು ಸಮಯ ಹಿಡಿಯುತ್ತದೆ. ಯಾರಾದರೂ ನನ್ನನ್ನು “ನೀವು ಅವರಿಂದ ಎಷ್ಟು ಕಲಿತಿರಿ” ಎಂದು ಪ್ರಶ್ನಿಸಿದರೆ ಉತ್ತರವಾಗಿ ನಾನು ಭರ್ತೃಹರಿಯ ಶ್ಲೋಕವನ್ನು ಹೇಳುತ್ತೇನೆ- “ಭಾವಿಯಾಗಲಿ ಸಮುದ್ರವಾಗಲಿ, ಅಲ್ಲಿಂದ ನೀರನ್ನು ತೆಗೆದುಕೊಳ್ಳುವಾಗ, ಬಿಂದಿಗೆಯು ತನ್ನಳತೆಯಷ್ಟೇ ತೆಗೆದುಕೊಳ್ಳಲು ಸಾಧ್ಯ.”

ರಮಾಮಣಿ, ಶಿಷ್ಯೆ ಹಾಗೂ ಗಾಯಕಿ

ನನ್ನ ಗುರು ಶ್ರೀಕಂಠನ್ ರವರಿಂದ ಕಲಿಯದಿರುವಂತಹ ಯಾವ ವಿಷಯವೂ ಇಲ್ಲ. ಸಮಯಪಾಲನೆ, ಸಮಯನಿರ್ವಹಣೆಯಿಂದ ಹಿಡಿದು ಎಲ್ಲವನ್ನೂ ಅವರಿಂದ ನಾವು ಕಲಿಯಬಹುದು. ವಾಷಿಂಗ್ಟನ್ ಡಿಸಿ ಯಲ್ಲಿ ನಾದತರಂಗಿಣಿಯ ಸಭೆಯಲ್ಲಿ ನನ್ನ ಪೂರ್ಣಪ್ರಮಾಣದ ಕಛೇರಿ ಆಯೋಜನೆಗೊಂಡಿತ್ತು. ಆದರೆ ಹತ್ತು ದಿವಸಗಳ ಮುಂಚೆ ನನ್ನ ಕಛೇರಿಯಲ್ಲಿ ಹಾಡಬೇಕಾದ ಕೃತಿಗಳ ಪಟ್ಟಿ ಇನ್ನೂ ಸಿದ್ಧಗೊಂಡಿಲ್ಲ ಎನ್ನುವುದನ್ನು ತಿಳಿದು ಅವರಿಗೆ ಆಶ್ಚರ್ಯವೋ ಆಶ್ಚರ್ಯ! ಏಕೆಂದರೆ ಪ್ರತಿಯೊಂದು ಕಛೇರಿಯನ್ನೂ ಅತ್ಯಂತ ಗಂಭೀರವಾಗಿ ಸ್ವೀಕರಿಸುತ್ತಿದ್ದ ಅವರು ಕಾರ್ಯಕ್ರಮ ಆಯೋಜನೆಗಳ್ಳುತ್ತಿರುವ ಸಂದರ್ಭ, ಅಲ್ಲಿ ನೆರೆಯುವ ಶ್ರೋತೃಗಳ ನಿರೀಕ್ಷೆ, ಗ್ರಹಣಸಾಮರ್ಥ್ಯ ಇವೆಲ್ಲವನ್ನೂ ಅರಿತು, ಅದಕ್ಕೆ ಅನುಗುಣವಾಗಿ ತಾವು ಕಛೇರಿಯಲ್ಲಿ ಪ್ರಸ್ತುತ ಪಡಿಸಬೇಕಾದ ಕೃತಿಗಳ ಪಟ್ಟಿಯನ್ನು  ಬಹಳ ಮುಂಚಿತವಾಗಿಯೇ ಸಿದ್ಧಗೊಳಿಸಿಕೊಳ್ಳುತ್ತಿದ್ದರು! ಪ್ರತಿ ಕಛೇರಿಯೂ ಅವರ ಪಾಲಿಗೆ ಪೂಜೆಗೆ ಸಮಾನ.  ಅವರ ಮತ್ತೊಂದು ಗರಿಮೆಯೇನೆಂದರೆ, ಯಾರೇ ಆಗಲಿ, ಸಾಹಿತ್ಯ, ರಾಗ ಮತ್ತು ಕೃತಿಗಳಿಗೆ ಸಂಬಂಧಿಸಿದಂತೆ ದಿನದ ಯಾವುದೇ ಹೊತ್ತಿನಲ್ಲಿ ಪ್ರಶ್ನೆ ಕೇಳಿದರೂ, ತಕ್ಷಣ ಸಹಾಯ ನೀಡುವ ಔದಾರ್ಯ ಅವರಲ್ಲಿದೆ. ಆಕಾಶವಾಣಿಯಲ್ಲಿದ್ದಾಗ ಒಮ್ಮೆ ಅವರು ನಾನು ವಿಕ್ಸ್ ಹಾಗೂ ಮಿಂಟ್ ಗುಳಿಗೆಗಳನ್ನು ಚಪ್ಪರಿಸುತ್ತಿದ್ದುದನ್ನು ನೋಡಿ, ತಕ್ಷಣವೇ ಅದನ್ನಲ್ಲೆ ಪಕ್ಕಕ್ಕೆಸೆದು ನಿಯತವಾದ ಧ್ವನಿಸಂಸ್ಕರಣದತ್ತ ಗಮನಹರಿಯಿಸುವಂತೆ ಆಜ್ಞಾಪಿಸಿದರು. 94ರ ವಯಸ್ಸಿನಲ್ಲಿ ಅವರಿಗಿರುವ ಕಂಠಶ್ರೀ ಮತ್ತು ಮತಿಯ ತೀಕ್ಷ್ಣತೆಯನ್ನು ನೋಡಿದಾಗ ಹಿಮಾಲಯ ಪರ್ವತಶ್ರೇಣಿಯನ್ನು ನೋಡಿದೆವೋ ಎಂಬಂತೆ ಬೆರಗಾಗುತ್ತೇವೆ! 

ವಿದ್ಯಾಭೂಷಣ,ಶಿಷ್ಯ ಮತ್ತು ಗಾಯಕ

ಶಿಸ್ತು ಎಂದರೇನು ಎನ್ನುವುದನ್ನು ಸರಿಯಾಗಿ ಅರ್ಥಮಾಡಿಕೊಂಡಂತಹ ವಿದ್ಯಾರ್ಥಿಯು ಮಾತ್ರವೇ ಶ್ರೀಕಂಠನ್ ರವರ ಸಂಗೀತದ ಆಳವನ್ನೂ ಶುದ್ಧತೆಯನ್ನೂ ಅರ್ಥಮಾಡಿಕೊಳ್ಳಬಹುದು. ನಾನು ಕೇವಲ ಅವರ ಸಂಗೀತದ ರಸಿಕನಷ್ಟೇ ಆಗಿರದೆ, ಅವರಿಂದ ಹಿರಿಯ ವಿದ್ಯಾರ್ಥಿಗಳು ಕಲಿಯಬಹುದಾದ ಅನೇಕ ಸೂಕ್ಷ್ಮತೆಗಳನ್ನೂ ಕಲಿಯುವ ಭಾಗ್ಯವನ್ನು ಪಡೆದೆ. ಸಂಪ್ರದಾಯದಿಂದ ದೂರ ಸರಿಯುವುದು ಸುಲಭ. ಆದರೆ, ಬೆಳೆಯುತ್ತಿರುವ ಆಧುನಿಕ ಸಾಮಾಜಿಕ ಕೋರಿಕೆಗಳನ್ನು ಈಡೇರಿಸುತ್ತ ನಾದಾನುಭವವನ್ನು ಸಮರ್ಥವಾಗಿ ನೀಡುತ್ತಲೇ, ಸಂಗೀತಧರ್ಮಕ್ಕೂ ನಿಷ್ಠನಾಗಿರುವುದು ಸಾಮಾನ್ಯದ ಮಾತಲ್ಲ! ಸಂಗೀತಕ್ಷೇತ್ರದಲ್ಲಿ ಪಿತಾಮಹರೆನಿಸಿದ ಶ್ರೀಕಂಠನ್ ರಂತಹವರು ಮಾತ್ರವೇ ಅದನ್ನು ಮಾಡಲು ಸಾಧ್ಯ. 

ಚಾರುಲತಾ ರಾಮಾನುಜಮ್, ಶಿಷ್ಯೆ ಹಾಗೂ ವೈಲಿನ್ ವಾದಕಿ

ಹತ್ತು ವರ್ಷಗಳಿಂದ ನಾನು ಶ್ರೀಕಂಠನ್ ರವರಿಂದ ಕಲಿತ ಪಾಠಗಳನ್ನು ಪುನರವಲೋಕಿಸಿದರೆ, ನನ್ನನ್ನು ಅವರು ಕೇವಲ ಪಿಟೀಲುವಾದನಕ್ಕಷ್ಟೇ ಅಲ್ಲ, ಗಾಯನಕ್ಕೂ ತರಬೇತಿಗೊಳಿಸಿರುವುದು ಅರ್ಥವಾಗುತ್ತದೆ. ಅವರ ಪಾಠನಕ್ರಮವು ಎಷ್ಟು ಸಮರ್ಥವಾಗಿದೆಯೆಂದರೆ, ಮೊದಲು ಆ ಪಂಕ್ತಿಗಳನ್ನು ಅಚ್ಚುಕಟ್ಟಾಗಿ ಹಾಡಿ, ಅರಗಿಸಿಕೊಂಡು ಆ ಬಳಿಕ ಅದನ್ನು ಪಿಟೀಲಿನಲ್ಲಿ ನುಡಿಸುವಂತೆ ತರಬೇತಿಗೊಳಿಸುತ್ತಾರೆ. ಪ್ರತಿಯೊಂದು ಕೃತಿಯನ್ನು ಸ್ವರ-ಸಾಹಿತ್ಯ ಸಮೇತವಾಗಿ ಚೆನ್ನಾಗಿ ಕಲಿಯುವಂತೆಯೂ, ತನ್ಮೂಲಕ ಅದರ ಸ್ವರೂಪವನ್ನು ಆಮೂಲಾಗ್ರವಾಗಿ ಅರ್ಥಮಾಡಿಕೊಂಡು, ಮುಂದಿನ ಪೀಳಿಗೆಗೆ ರವಾನಿಸುವಂತೆಯೂ ಅವರು ನಮ್ಮನ್ನು ಸಿದ್ಧಗೊಳಿಸಿದ್ದಾರೆ. ರಾಗಗಳನ್ನು ಅರ್ವಾಚೀನ ಇತಿಹಾಸದ ವಿದ್ವಾಂಸರ ಹೆಸರುಗಳಿಗೆ ಕೀಲಿಸುವುದು, ಅರ್ಥಾತ್ ಮುಖಾರಿಗೆ ಮುಸುರಿಯೆಂದೂ, ತೋಡಿಗೆ ಅರಿಯ್ಯಾಕುಡಿಯೆಂದೂ ಹೆಸರಿಸುವ ಅನನ್ಯಸಾಧಾರಣ ಶಿಕ್ಷಕರು ಅವರು. ಅವರಿಂದ ನೂರಾರು ಕೃತಿಗಳನ್ನು ಕಲಿತ ನನ್ನಂತಹ ಪಿಟೀಲುವಾದಕರು ನಿಜಕ್ಕೂ ಧನ್ಯರೇ ಸರಿ.

ನಳಿನಾ ಮೋಹನ್, ಶಿಷ್ಯೆ ಹಾಗೂ ವೈಲಿನ್ ವಾದಕಿ

2001ರಲ್ಲಿ ನಾನು ಶ್ರೀಕಂಠನ್ ರವರ ಶ್ಯಾಮಾಶಾಸ್ತ್ರಿಗಳ ಕೃತಿಗಳ ಕುರಿತಾದ ಕಾರ್ಯಾಗಾರವೊಂದರಲ್ಲಿ ಭಾಗವಹಿಸಿದಾಗ, ಅವರ ಪಾಠನಕೌಶಲಕ್ಕೆ ಮನಸೋತೆ. ತಕ್ಷಣವೇ ನಾನು ಅವರ ಶಿಷ್ಯೆಯಾದೆ. ಅಂದಿನಿಂದ ಪ್ರತಿಯೊಂದು ತರಗತಿಯೂ ಶಾಸ್ತ್ರೀಯ ಸಂಗೀತದ ಅನೇಕ ವೈಶಿಷ್ಟ್ಯಗಳ ಆವಿಷ್ಕಾರದ ಅನುಭವದಂತೆಯೇ ಆಗಿಬಿಟ್ಟಿದೆ. ನನ್ನ ಗುರುವಿನಲ್ಲಿ ಕಾಣುವಂತಹ ಕೃತಿಯ ಅಚ್ಚುಕಟ್ಟುತನವನ್ನು ಬೇರೆಲ್ಲೂ ಕಾಣಲಾಗದು. ತನ್ನ ಹಿಂದಿನ ವಿದ್ವಾಂಸರುಗಳಿಂದ ನನ್ನ ಗುರುಗಳು ಕಲಿತು ಅರಗಿಸಿಕೊಂಡು ತಳೆದು ಬಂದ ಆ ಕೌಶಲ ಮತ್ತು ಕಲಾಭಿಜ್ಞತೆಯು ಅನನ್ಯವಾದದ್ದು. ಅವರು ಅದೆಷ್ಟು ಸೂಕ್ಷ್ಮಗ್ರಾಹಿಗಳೆಂದರೆ, ಹೊಸ ಪರಿಷ್ಕಾರಗಳನ್ನು ಸಂಗೀತದಲ್ಲಿ ಅಳವಡಿಸುವಾಗ, ಕಮಾನನ್ನು ಆಡಿಸುವ ವಿಷಯದಲ್ಲೂ ಅವರು ಸಲಹೆ ನೀಡುತ್ತಿದ್ದುದುಂಟು! ಅವರ ಸಮಯಪಾಲನೆ ಎಳೆಯರಿಗೆ ಮುಜುಗರ. ಆದರೆ ಪ್ರಾಮಾಣಿಕ ಶಿಷ್ಯರಿಗೆ ಅವರೊಂದು ಮಾದರಿ. 

ಉಮಾ ಮೋನಿ,  ಶಿಷ್ಯೆ ಹಾಗೂ ಗಾಯಕಿ

ನನಗೆ ಶ್ರೀಕಂಠನ್ ರವರು ಪರಿಚಯವಾದದ್ದು ನಮ್ಮ ಅಜ್ಜಿಯಿಂದ. ನನ್ನ ಅಜ್ಜಿಯು ನಲವತ್ತು ವರ್ಷಗಳ ಹಿಂದೆ ಅವರಿಂದ ಮೈಸೂರಿನಲ್ಲಿ ಸಂಗೀತ ಪಾಠ ಕಲಿಯುತ್ತಿದ್ದರು. ನನ್ನ ಪಾಲಿಗೆ ಶ್ರೀಕಂಠನ್ ರವರು ಓರ್ವ ಸರ್ವತೋಮುಖ ವ್ಯಕ್ತಿ. ಅವರು ನಮ್ಮ ಸಂಗೀತದಲ್ಲಿನ ಸೂಕ್ಷ್ಮತೆಗಳನ್ನು ನಿಃಸ್ವಾರ್ಥವಾಗಿ ತಿಳಿಯಪಡಿಸುವ ರೀತಿ, ಸಮಯಪಾಲನೆಯ ವಿಷಯದಲ್ಲಿನ ಅವರ ಶಿಸ್ತು ಮತ್ತು ಶಿಷ್ಯರ ವಿಷಯದಲ್ಲಿ ಬಿಗಿಯಾಗಿದ್ದರೂ ನಯವನ್ನುಳಿಸಿಕೊಳ್ಳುವ ಬಗೆ- ಇವೆಲ್ಲ ಎಲ್ಲ ವಿದ್ಯಾರ್ಥಿಗಳೂ ಮೆಚ್ಚುವಂತಹವೇ ಸರಿ.

ಅಮಿತ್ ನಾಡಿಗ್, ಶಿಷ್ಯ ಹಾಗೂ ವೇಣುವಾದಕ

ನನ್ನ ಗುರು ಶ್ರೀಕಂಠನ್ ರವರ ಗರಿಮೆಯೇನೆಂದರೆ, ಅವರು ಶಿಷ್ಯರಲ್ಲಿ ಪರಿಶ್ರಮಶೀಲತೆಯನ್ನೂ ನಿಷ್ಠೆಯನ್ನೂ ಪ್ರೇರೇಪಿಸುತ್ತಾರಲ್ಲದೆ, ಸಂಪ್ರದಾಯದಶುದ್ಧಿಯನ್ನು ಕಾಪಾಡಿಕೊಳ್ಳುವಲ್ಲೂ ತರಬೇತುಗೊಳಿಸುತ್ತಾರೆ. 16 ವರ್ಷಗಳಿಂದ ಅವರ ಶಿಷ್ಯನಾಗಿದ್ದು ನಾನು ಕಲಿತಿರುವುದೇನೆಂದರೆ ನುಡಿಸುವ ಸಂಗೀತದಲ್ಲಿ ಸ್ಪಷ್ಟತೆ ಅಥವಾ ಖಾಚಿತ್ಯ ಇರಬೇಕು ಹಾಗೂ ವಾದ್ಯವನ್ನೇ ನುಡಿಸುತ್ತಿದ್ದರೂ, ತತ್ಸಂಬಂಧಿಯಾದ ಸಾಹಿತ್ಯವನ್ನು ಸ್ಫುಟವಾಗಿ ಎತ್ತಿತೋರಿಸಬೇಕು ಎನ್ನುವುದನ್ನು. ಶ್ರೀಕಂಠನ್ ರವರಲ್ಲಿ ಶಿಷ್ಯನಾಗಿದ್ದು ಅವರಂತಹ ಸಂಗೀತದ ಸಾಗರದಿಂದ ಒಂದು ಗುಟುಕನ್ನು ಕುಡಿಯುವ ಸೌಭಾಗ್ಯವನ್ನು ಪಡೆದ ನಾನೇ ಧನ್ಯ.

ಶ್ರೀಲತಾ ಕೃಷ್ಣಮಾಚಾರಿ, ಶಿಷ್ಯೆ ಹಾಗೂ ಗಾಯಕಿ                                                     

ಶ್ರೀಕಂಠನ್ ರವರು ಹಾಡುವ ಹಾಗೂ ಕಲಿಸುವ ಪ್ರತಿಯೊಂದು ಕೃತಿಯೂ, ಸಂಗೀತದಲ್ಲಿ ಅವರು ಬೆಳೆಸಿಕೊಂಡ ಮೌಲ್ಯದರ್ಶನವನ್ನೂ ಹಾಗೂ ನಿರ್ದುಷ್ಟ ಸಂಗೀತ ಪರಂಪರೆಯ ಅಂಶಗಳನ್ನೂ ತಳೆದುಬಂದಿವೆ.ಬದಲಾಗುತ್ತಿರುವ ಪರಿಸರದಲ್ಲೂ, ಅವರ ಸಂಗೀತವು ಸೋಗಿನ ಕಡೆಗೆ ವಾಲದೆ, ಶುದ್ಧತೆಯನ್ನು ಉಳಿಸಿಕೊಂಡಿದೆ. ತರಗತಿಯಲ್ಲಾಗಲಿ ಕಛೇರಿಯಲ್ಲಾಗಲಿ, ಅವರು ಹಾಡುವಾಗ ಅವರ ಕಂಠಸಿರಿ ಮತ್ತು ಉಚ್ಚಾರಶುದ್ಧಿಗಳಲ್ಲಿರುವ ನವನಾವೀನ್ಯವು ನನ್ನನ್ನು ನಿಬ್ಬೆರಗಾಗಿಸುತ್ತವೆ.ಅವರ ಸಂಗೀತವನ್ನಷ್ಟೇ ಅಲ್ಲ, ಅವರ ಸಮಯಪ್ರಜ್ಞೆ ಮತ್ತು ಸರಳ ಶಿಸ್ತುಬದ್ಧ ಪಾಠನಶೈಲಿಯನ್ನೂ ನಾನು ಬಹಳ ಮೆಚ್ಚುತ್ತೇನೆ. ತರಗತಿಯಲ್ಲಿ ನಮಗೆ ಅರ್ಥಪಡಿಸುವ ಸಲುವಾಗಿ, ಅವರು ಅಗತ್ಯಕ್ಕಿಂತ ಹೆಚ್ಚಾಗಿ ಮಾತನಾಡಿದ್ದನ್ನು ನಾನು ನೋಡಿಯೇ ಇಲ್ಲ. ಈ ಶಿಸ್ತಿನಿಂದಾಗಿಯೇ ಬಹುಶಃ 90ರ ಹರೆಯದಲ್ಲೂ ಅವರ ಕಂಠಸೌಷ್ಠವ ಅಚ್ಚುಕಟ್ಟಾಗಿ ಉಳಿದುಕೊಂಡು ಬಂದಿತೇನೋ ಎನ್ನಿಸುತ್ತದೆ.ಏನಾದರೂ ಸರಿಯಾಗಿ ಕಲಿಯದಿದ್ದಾಗ, ಅವರಿಂದ ಬೈಯಿಸಿಕೊಂಡಿದ್ದೂ ನನ್ನ ಪಾಲಿನ ಸೌಭಾಗ್ಯವೆಂದೇ ಭಾವಿಸುತ್ತೇನೆ.

ಎಸ್.ಯಶಸ್ವಿ, ಶಿಷ್ಯ ಹಾಗೂ ವೈಲಿನ್ ವಾದಕ

ಶ್ರೀಕಂಠನ್ ರವರಿಂದ ನನಗೆ ಪಾಠಗಳು ಪ್ರಾರಂಭವಾದದ್ದು ಕೇವಲ 10 ವರ್ಷಗಳ ಹಿಂದೆಯಷ್ಟೇ ಆದರೂ, ನಾನು ಅವರ ಸಂಗೀತವನ್ನು ಕೇಳುತ್ತಲೇ ಬೆಳೆದೆ. ಅವರ ಶಿಸ್ತನ್ನು ಕಂಡು ನಮಗೆ ಭಯವೇ ಆದದ್ದೂ ಉಂಟು. ಶುಭ್ರ ಬಿಳಿಯ ಪಂಚೆ ಮತ್ತು ಇಸ್ತ್ರಿಯಾದ ತಿಳಿಯ ಬಣ್ಣದ ಅಂಗಿ ತೊಟ್ಟು, ಅವರು ತರಗತಿ ಪ್ರಾರಂಭವಾಗುವ ಮುನ್ನವೇ ಅವರು ಅಲ್ಲಿ ಹಾಡುತ್ತ ಕುಳಿತಿರುತ್ತಾರೆ. ಅಂದು ಕಲಿಸುತ್ತೇನೆಂದು ಮಾತುಕೊಟ್ಟ ಪಾಠದ ಸಾಹಿತ್ಯವೂ ಅವರ ಬಳಿ ಸಿದ್ಧವಾಗಿರುತ್ತದೆ. ವಾದ್ಯವನ್ನು ಹಿಡಿದು ಬೇಗನೇ ಆಸೀನನಾಗುವುದು, ಜೊತೆಜೊತೆಗೇ ಶ್ರುತಿಪೆಟ್ಟಿಗೆಯನ್ನೂ ಪ್ರಾರಂಭ ಮಾಡುವುದು ಮುಂತಾದ ವಿವರಗಳತ್ತ ಸೂಚನೆ ನೀಡುತ್ತಾರೆ. ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಅವರು, ಸಾಹಿತ್ಯದ ಪ್ರತಿಯೊಂದು ಸ್ವರವೂ ಅಕ್ಷರವೂ ರಾಗಕ್ಕೆ ಪುಷ್ಟಿನೀಡುವ ರೀತಿಯಲ್ಲಿ ಹೊರಹೊಮ್ಮುವಂತೆ ತರಬೇತಿಗೊಳಿಸುತ್ತಾರೆ. ನನ್ನ ಪಾಲಿಗೆ ಶ್ರೀಕಂಠನ್ ರವರೊಂದಿಗಿನ ಪ್ರತಿಯೊಂದು ತರಗತಿಯೂ, ಕೇವಲ ಪಾಠ ಕಲಿಯುವ ಅನುಭವವಷ್ಟೇ ಆಗಿರದೆ, ಸಂಗೀತ ವಿದ್ಯೆಯ ಹಾಗೂ ಆಧ್ಯಾತ್ಮಿಕ ಶುದ್ಧೀಕರಣಕ್ಕೇ ಹೇತುವಾಗಿದೆ. ಎಲ್ಲ ಕಲಾವಿದರೂ ಉತ್ತಮ ಶಿಕ್ಷಕರಲ್ಲ, ಎಲ್ಲ ಉತ್ತಮ ಶಿಕ್ಷಕರೂ ಉತ್ತಮ ಕಲಾವಿದರಲ್ಲ. ಆದರೆ ಶ್ರೀಕಂಠನ್ ರವರಲ್ಲಿ ಈ ಎರಡೂ ಸಮ್ಮಿಳಿತವಾಗಿವೆ. ಅವರ ಈ ಗುಣವೇ ನನ್ನ ಸಂಗೀತದ ಗುಣಮಟ್ಟಕ್ಕೆ ಬಹಳ ಪೋಷಕವಾಗಿದೆ.

ಜಿ. ಅರುಣ್ ಕುಮಾರ್, ಶಿಷ್ಯ ಹಾಗೂ ಗಾಯಕ

ನಾನು 12 ವರ್ಷಗಳಿಂದ ಶ್ರೀಕಂಠನ್ ರವರಲ್ಲಿ ಸಂಗೀತವನ್ನು ಕಲಿಯುತ್ತಿದ್ದೇನೆ. ನಾನು ಅವರಿಂದ ಸಂಗೀತವನ್ನು ಕಲಿಯುವುದರ ಜೊತೆಗೇ, ಸಂಗೀತಗಾರರಿಗೆ ಅತ್ಯಗತ್ಯವಾದ ತಾಳ್ಮೆಯನ್ನೂ ಸಕಾರಾತ್ಮಕ ಮನೋಭಾವವನ್ನೂ ಕಲಿತಿದ್ದೇನೆ. ಅವರ ಪಾಠನಶೈಲಿ ವಿಶಿಷ್ಟವಾದದ್ದು. ಸಂಗೀತವು ಕ್ರಮಯುತವೂ, ಸಂಯಮಯುತವೂ ಆಗಿರಬೇಕೆನ್ನುವುದನ್ನೂ, ನಿಯತವಾಗಿ ಅಭ್ಯಾಸಮಾಡಬೇಕೆನ್ನುವುದನ್ನೂ ಅವರು ಒತ್ತಿಹೇಳುತ್ತಾರೆ. ಅವರ ಈ ಸಲಹೆ ಅತ್ಯಂತ ಅನುಷ್ಠಾನಯೋಗ್ಯವೂ ಆಗಿದೆ. ‘ಪ್ರತಿಭೆಯನ್ನು ಎಂದೂ ಮುಚ್ಚಿಡಲಾಗದು. ವಿದ್ಯಾರ್ಥಿಗಳು ಅಭ್ಯಾಸದತ್ತ ಗಮನಹರಿಸಬೇಕು ಅಷ್ಟೆ. ಅವಕಾಶಗಳು ತಾವಾಗಿಯೇ ಬಂದೊದಗುತ್ತವೆ’ ಅವರ ಈ ಮಾತುಗಳು ಅಕ್ಷರಶಃ ನಿಜವಾಗುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಧನ್ಯ ನಾನು ಎನಿಸುತ್ತಿದೆ!

ಡಾ.ಸುಮಾ ಸುಧೀಂದ್ರ, ಶಿಷ್ಯೆ ಹಾಗೂ ವೀಣಾ ವಿದುಷಿ

90ರ ದಶಕದಲ್ಲಿ ಶ್ರೀಕಂಠನ್ ರವರಿಂದ ನಾನು ಸುಮಾರು ಮೂರು ವರ್ಷಗಳ ಕಾಲ ಸಂಗೀತ ಶಿಕ್ಷಣವನ್ನು ಪಡೆದೆ. ಅವರಲ್ಲಿ ಕಲಿಯುವಾಗ ಪ್ರತಿ ತರಗತಿಯೂ ಅತ್ಯಂತ ಸಂತೋಷಕರವಾಗಿತ್ತು. ಅವರಿಂದ ನಾನು ಪ್ರಥಮ ಪಾಠಗಳೆಂದರೆ ಸಮಯ ಪರಿಪಾಲನೆಗೆ ಸಂಬಂಧಪಟ್ಟ ಶಿಸ್ತು ಮತ್ತು ಕೃತಿಗಳಿಗೆ ಅವರು ಬರೆಯುತ್ತಿದ್ದ ಸ್ವರಮಟ್ಟಿನಲ್ಲಿನ ಅಚ್ಚುಕಟ್ಟುತನ. 

ಒಮ್ಮೆ ನನ್ನ ಕೈಬರಹದಲ್ಲಿದ್ದ ಜಾವಳಿಯ ಸ್ವರಮಟ್ಟನ್ನು ಶ್ರೀಕಂಠನ್ ರವರಿಗೆ ನೀಡಿದೆ. ಮುಂದಿನ ತರಗತಿಯಲ್ಲಿ ಶ್ರೀಕಂಠನ್ ರವರು ಸ್ವರಮಟ್ಟಿನಲ್ಲಿ ತಪ್ಪಿದೆಯೆಂದು ಹೇಳಿ, ನಾನು ಕಾರ್ವೆಯೊಂದನ್ನು (ಅಕ್ಷರ) ಬಿಟ್ಟುಬಿಟ್ಟಿರುವುದನ್ನು ತೋರಿಸಿದರು. ಆ ಒಂದು ಸಣ್ಣ ತಪ್ಪಿಗಾಗಿ ಸ್ವರಮಟ್ಟು ಸರಿಯಿಲ್ಲವೆಂದು ಅವರು ಹೇಳಿದ್ದಕ್ಕಾಗಿ ಅಂದು ನನಗೆ ಬೇಸರವಾದರೂ, ಮುಂದೆ  ಕಿಂಚಿತ್ತೂ ತಪ್ಪಾಗದಂತೆ ಬರೆಯಲು ಎಚ್ಚರವಹಿಸಿದೆ. ಮಹಾಗುರುವಿನಿಂದ ಕಲಿತ ದೊಡ್ಡ ಪಾಠ! 

ಜೀವನದಲ್ಲಿ ಎಲ್ಲವನ್ನೂ ಗಂಭೀರವಾಗಿ ಸ್ವೀಕರಿಸುವುದು ಶ್ರೀಕಂಠನ್ ಅವರ ಸ್ವಭಾವದ ಹೆಗ್ಗುರುತು. ಅವರನ್ನು ಸಂಗೀತ ನಾಟಕ ಅಕಾಡೆಮಿಯ ಆರ್ಕೈವ್ ಗಾಗಿ ಎರಡು ಗಂಟೆಗಳಿಗಿಂತಲೂ ಹೆಚ್ಚು ಕಾಲ ಸಂದರ್ಶಿಸುವ ಸೌಭಾಗ್ಯ ನನ್ನದಾಗಿತ್ತು. ಕರ್ನಾಟಕ ಸಂಗೀತದ ಕ್ಲಿಷ್ಟತೆಗಳ ಕುರಿತು ಅವರ ಅಂತರ್ದೃಷ್ಟಿ ಮತ್ತು ಕಾಲದ ಪರೀಕ್ಷೆಗಳನ್ನು ಜಯಿಸಿದ ಶಾಸ್ತ್ರೀಯ ಸಂಪ್ರದಾಯಗಳಲ್ಲಿ ಅವರಿಗಿದ್ದ ನಿಷ್ಠೆ ಆ ಸಂದರ್ಶನದಲ್ಲಿ ಎದ್ದು ಕಾಣುತ್ತಿತ್ತು. ಈ ಮಹಾನ್ ಕಾಲಾವಿದರ ಮತ್ತು ಶ್ರೇಷ್ಠ ಗುರುವಿನ ಶಿಷ್ಯೆಯಾಗಿರುವುದು ನನ್ನ ಮಹಾಭಾಗ್ಯ. 

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

July 29, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: