ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಮೌನ ತಾಳಿದ ದನಿ- 2014

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು.

ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು ಕನ್ನಡಕ್ಕೆ ತಂದಿದ್ದಾರೆ.

ಖ್ಯಾತ ಸಂಗೀತಗಾರರೂ ಹಾಗೂ ಸಂಸ್ಕೃತ ವಿದ್ವಾಂಸರಾದ ಡಾ ಟಿ ಎಸ್ ಸತ್ಯವತಿ ಅವರು ಇದನ್ನು ಸಂಪಾದಿಸಿದ್ದಾರೆ.

ಈ ಕನ್ನಡ ಅವತರಣಿಕೆ ‘ಅವಧಿ’ಯಲ್ಲಿ ಧಾರಾವಾಹಿಯಾಗಿ ನಿಮ್ಮ ಮುಂದೆ…

18


೨೦೧೪ನೆಯ ಇಸವಿಯಲ್ಲಿ ಶ್ರೀಕಂಠನ್ ರವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಅವರ ಮನೆಯವರು ನನಗೆ ತಿಳಿಸಿದರು. ಒಂದು ವಾರದ ಹಿಂದೆಯಷ್ಟೇ ನಾನು ಅವರ ಆರೋಗ್ಯದ ಕುರಿತು ವಿಚಾರಿಸಿದ್ದೆ. ಶೀಘ್ರವಾದ ಚೇತರಿಕೆಗೆ ವಯಸ್ಸು ಪ್ರಶಸ್ತವಾಗಿಲ್ಲದಿದ್ದರೂ, ನ್ಯುಮೋನಿಯಾದಿಂದ ಬಳಲಿದ್ದ ಈ ಉಕ್ಕಿನ ಮನುಷ್ಯ ವಾರ್ಡ್ನಲ್ಲಿ ಸ್ಥಿರಗತಿಯಿಂದ ಗುಣಮುಖರಾಗುತ್ತಿದ್ದರು. ಫೆಬ್ರುವರಿಯ ಮೂರನೆಯ ವಾರದಲ್ಲಿ ದುರದೃಷ್ಟವಶಾತ್ ವಿಧಿಯ ಹಸ್ತ ಪರಿಸ್ಥಿತಿಯನ್ನು ಪಲ್ಲಟಗೊಳಿಸಿತ್ತು. ಈ ಗಾಯಕಶ್ರೇಷ್ಠರ ದ್ವಿತೀಯ ಪುತ್ರ ಕುಮಾರ್ ರವರು ವಾಸ್ತವವನ್ನು ಸ್ವೀಕರಿಸಲಾಗದೆ ಆಘಾತಕ್ಕೊಳಗಾಗಿ ಫೋನ್‌ನಲ್ಲಿ “ನೀವು ಇದನ್ನು ನಂಬುತ್ತೀರಾ ರಂಜನಿ? ನಮ್ಮ ತಂದೆಯವರು ಇನ್ನಿಲ್ಲ” ಎಂದು ಬಿಕ್ಕಿದರು. ಹಠಾತ್ತನೆ ಅಪ್ಪಳಿಸಿದ ಈ ವೈಪರೀತ್ಯವನ್ನು ಒಪ್ಪಿಕೊಳ್ಳುವುದು ಮನೆಯವರಿಗೆ ಕಷ್ಟವೆನಿಸಿದ್ದು ಸಹಜವೇ.

ಈ ದುರಂತ ಬಂದೆರಗಿದ್ದು ಫೆಬ್ರುವರಿ ೧೭ನೇ ದಿನಾಂಕದ ಸಾಯಂಕಾಲದ ವೇಳೆಯಲ್ಲಿ. “ಇದು ನಮ್ಮ ಪಾಲಿಗೆ ಅತ್ಯಂತ ಕರಾಳ ದಿನ. ನಾವು ಬಹಳ ದುರದೃಷ್ಟವಂತರು” ಎಂದು ಬಿಸುಸುಯ್ದಿದ್ದರು ಸಾಂತ್ವನಗೊಳ್ಳಲಾರದ ಕುಮಾರ್. ತಮ್ಮ ತಂದೆಯವರ ದೃಢವಾದ ಶಾರೀರಿಕ ಆರೋಗ್ಯ ಮತ್ತು ಮಾನಸಿಕ ಸ್ಥಿರತೆಯನ್ನು ಗಮನಿಸಿ, ಅವರು ನೂರು ವರ್ಷಗಳನ್ನು ಪೂರೈಸುತ್ತಾರೆ ಎಂದು ಅವಿಚಲ ವಿಶ್ವಾಸ ತಳೆದಿದ್ದ ಮನೆಯವರು ತಮ್ಮ ಸಮತೋಲವನ್ನು ಕಳೆದುಕೊಂಡಿದ್ದರು.

ಈ ದುರ್ವಾರ್ತೆ ನನ್ನನ್ನು ತಲುಪಿದಾಗ ನಾನು ‘ದ ಹಿಂದೂ’ ಪತ್ರಿಕಾ ಕಛೇರಿಯಲ್ಲಿ ನನ್ನ ಕೆಲಸವನ್ನು ಮುಗಿಸಿಕೊಂಡು ೮.೩೦ಯ ನಂತರ ಕನಕಪುರ ಮುಖ್ಯ ರಸ್ತೆಯಲ್ಲಿದ್ದ ನನ್ನ ಮನೆಯೊಳಗೆ ಆಗಷ್ಟೇ ಕಾಲಿರಿಸಿದ್ದೆ. ಸುದ್ದಿಯನ್ನು ನಂಬಲಾಗದೆ ಮರವಡಿಸಿಹೋದೆ. ಏಕೆಂದರೆ ಸುಮಾರು ಒಂದು ತಿಂಗಳ ಹಿಂದೆಯಷ್ಟೇ ನಾನು ಅವರ ಆತ್ಮಚರಿತ್ರೆ ‘ವಾಯ್ಸ್ ಆಫ್ ಅ ಜೆನೆರೇಶನ್’ ಅನ್ನು ಸ್ವತಃ ಆ ಮಹಾವ್ಯಕ್ತಿಗೆ ಅರ್ಪಿಸಿದ್ದೆ ಮತ್ತು ಈಗ ನೋಡಿದರೆ, ಅವರ ನಿಧನವಾರ್ತೆಯ ಕುರಿತ ಲೇಖನವನ್ನು ‘ದ ಹಿಂದೂ’ ಪತ್ರಿಕೆಗಾಗಿ ಬರೆಯಲು ನನ್ನ ಕಂಪ್ಯೂಟರ್‌ನತ್ತ ಧಾವಿಸುತ್ತಿದ್ದೆ. ಏಕೆಂದರೆ ಇದು ಈ ಗಾನಋಷಿಗೆ ನಾನು ಸಲ್ಲಿಸಬೇಕಾದ ಕರ್ತವ್ಯವಾಗಿತ್ತು.

ಜನವರಿ ೧೪, ೨೦೧೪ ರ ಉತ್ಸವಕ್ಕೆ ಮರಳೋಣ. ಮಲ್ಲೇಶ್ವರಂನ ಸೇವಾಸದನದ ಪ್ರತಿ ಇಂಚಿನಲ್ಲೂ ಜನ ಕಿಕ್ಕಿರಿದು ನೆರೆದಿದ್ದರು. ಚೆನ್ನೈನ ಮ್ಯೂಸಿಕ್ ಅಕಾಡೆಮಿಯ ಅಧ್ಯಕ್ಷರಾದ ಶ್ರೀ.ಎನ್.ಮುರಳಿಯವರು ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಅದರ ಮೊದಲ ಪ್ರತಿಯನ್ನು ಶ್ರೀಕಂಠನ್‌ರವರಿಗೆ ನೀಡಿದಾಗ ಗಣ್ಯರಿಂದ ಕೂಡಿದ ಸಭೆ ಪುಳಕಗೊಂಡಿತು. ಇಸ್ಕಾನ್ ಸಂಸ್ಥೆಯ ಸಾಂಸ್ಕೃತಿಕ ಚಟುವಟಿಕೆಗಳ ಅಂದಿನ ಮುಖ್ಯಸ್ಥರಾಗಿದ್ದ ಶ್ರೀ ತಿರುದಾಸ ರವರು (ಪ್ರಸ್ತುತದಲ್ಲಿ ಯದುಗಿರಿ ಯತಿರಾಜ ರಾಮಾನುಜ ಜೀಯರ್) ಸಭಾಕಲಾಪಗಳನ್ನು ಆಶೀರ್ವದಿಸಿದಾಗ, ಅಂದು ಉತ್ತಮ ಸ್ವಾಸ್ಥ್ಯದಿಂದ ಕೂಡಿ ವೇದಿಕೆಯ ಮೇಲಿದ್ದ ಶ್ರೀಕಂಠನ್‌ರವರು ಅವರ ಪ್ರತಿಯೊಂದು ಪ್ರಶಂಸೆಯನ್ನೂ ವಿನಮ್ರತೆಯಿಂದ ಕೈಮುಗಿದುಕೊಂಡು ಸ್ವೀಕರಿಸುತ್ತಿದ್ದುದು ಕಂಡುಬ೦ತು. ಅದು ನಾನು ಆಗಲೇ ಹೇಳಿದಂತೆ ನಾಲ್ಕು ವಾರಗಳ ಹಿಂದಿನ ಮಾತು!

ಶ್ರೀಕಂಠನ್ ರವರು ದೈವಾಧೀನರಾದ ಮೇಲೆ ಅವರ ಮನೆಯವರು ಕಣ್ಣೀರರ್ಗಡಲಲ್ಲಿ ತೇಲುತ್ತಿದ್ದರೆ, ನೂರಾರು ಶಿಷ್ಯರು, ಅಭಿಮಾನಿಗಳು ಮತ್ತು ಸಂಗೀತಾಸಕ್ತರು ಅವರ ಮನೆಗೆ ಧಾವಿಸಿದರು. ಹಾಗೆ ಆಗಮಿಸಿದವರೆಲ್ಲರ ಬಾಯಲ್ಲೂ ಒಂದೇ ಉದ್ಗಾರ – ‘ವಯಸ್ಸನ್ನು ಗಣಿಸದೆ ಇದ್ದರೆ, ಅವರು ಅಂತಿಮ ಯಾತ್ರೆ

ಹೊರಡುವ ವ್ಯಕ್ತಿ ಎನಿಸಿರಲೇ ಇಲ್ಲ’ ಎಂದು. ಫೆಬ್ರುವರಿ ೧೨ರಂದು ಶೇಷಾದ್ರಿಪುರದ ಫೋರ್ಟಿಸ್ ಆಸ್ಪತ್ರೆಗೆ ಸೇರಿಸಿದಾಗ ಅವರು ನ್ಯುಮೋನಿಯಾದಿಂದ ಬಳಲುತ್ತಿದ್ದರೂ, ಅವರು ಚೇತರಿಸಿಕೊಳ್ಳುತ್ತಿರುವ ಲಕ್ಷಣಗಳನ್ನು ಕಂಡು ಮನೆಯವರು ಸಂತೋಷಿಸಿದ್ದರು.

ಫೆಬ್ರುವರಿ ೧೬ರಂದು ಮತ್ತೆ ಅವರ ರಕ್ತದೊತ್ತಡದಲ್ಲಿ ಅನಿಯಂತ್ರಿತ ಏರಿಳಿತಗಳುಂಟಾಗಿ ಆರೋಗ್ಯದಲ್ಲಿ ಹಿನ್ನಡೆ ಕಂಡುಬ೦ದಾಗ ಅವರನ್ನು ವಾರ್ಡಿನಿಂದ ತೀವ್ರ ನಿಗಾ ಘಟಕಕ್ಕೆ ಗಾಲಿಕುರ್ಚಿಯಲ್ಲಿ ಕುಳ್ಳಿರಿಸಿಕೊಂಡು ಕರೆದೊಯ್ಯಲಾಯಿತು. ಮುಂದೆ ಕುಮಾರ್ ಹೇಳಿದರು-“ಮರುದಿನ ಅಪರಿಹಾರ್ಯವಾದದ್ದು ಘಟಿಸಿ ನಮ್ಮ ಹೃದಯಗಳನ್ನು ನುಚ್ಚುನೂರಾಗಿಸಿತು” ಎಂದು.

ಶ್ರೀಕಂಠನ್ ರವರ ಹಿರಿಯ ಪುತ್ರರೂ ಕಳೆದ ೬೦ ವರ್ಷಗಳಿಂದ ವೇದಿಕೆಯ ಮೇಲೆ ಅವರ ನಿಕಟತಮ ಸಹಯೋಗಿಗಳೂ ಆಗಿದ್ದ ರುದ್ರಪಟ್ಣಂ ಎಸ್ ರಮಾಕಾಂತ್ ನೀರವವಾಗಿಬಿಟ್ಟಿದ್ದರು. “ನಾನು ತೊಟ್ಟಿಲ ಮಗುವಾಗಿದ್ದಾಗಿನಿಂದ ನನ್ನ ಕಿವಿಗಳು ತಂದೆಯವರ ಶ್ರುತಿಗೆ ಒಗ್ಗಿಕೊಂಡಿದ್ದವು. ಅವರ ಕಂಠ, ಪಾಠ ಮತ್ತು ವೇದಿಕೆಯ ಮೇಲೆ ನನ್ನ ಬದಿಯಲ್ಲಿ ಕುಳಿತು ಅವರು ಬೀರುತ್ತಿದ್ದ ನಿಷ್ಠುರ ನೋಟ ಇಷ್ಟುಬೇಗ ಇತಿಹಾಸವಾಗಿ ಹೋದವೇ ಎನಿಸುತ್ತದೆ. ಈ ನೆನಪುಗಳೆಲ್ಲ ಜೀವಮಾನದುದ್ದಕ್ಕೂ ನನ್ನೊಂದಿಗಿರುತ್ತದೆ” ಎಂದ ಕುಟುಂಬದ ಈ ಹಿರಿಯಣ್ಣ ಭಾವನೆಗಳನ್ನು ಹೆಚ್ಚು ಹತೋಟಿಯಲ್ಲಿ ಇರಿಸಿಕೊಂಡಿದ್ದರು ಎನಿಸುತ್ತದೆ.

ಶ್ರೀಕಂಠನ್‌ರವರ ಪುತ್ರಿಯೂ ‘ಸುಗಮಸಂಗೀತದ ರಾಣಿ’ ಎಂದೇ ಖ್ಯಾತರಾಗಿರುವವರೂ ಆದ ರತ್ನಮಾಲಾರವರಿಗೆ ತಮ್ಮ ನೆನಪುಗಳ ಚಿತ್ರಸಂಪುಟದ ಪುಟಗಳನ್ನು ತಿರುವಿಹಾಕದೆ ಉಳಿಯಲು ಸಾಧ್ಯವಾಗಲಿಲ್ಲ. ತಾವು ಸುಗಮ ಸಂಗೀತದಲ್ಲಿ ತೊಡಗಿಕೊಳ್ಳುವಂತೆ ತಂದೆಯವರು ಸರ್ವವಿಧದಿಂದಲೂ ಪ್ರೋತ್ಸಾಹ ನೀಡಿದ ಕಾಲವನ್ನು ಮೆಲುಕುಹಾಕುತ್ತ ರತ್ನಮಾಲಾ ನುಡಿದರು- “ಗಡಿಯಾರವನ್ನು ಹಿಂದೂಡಲು ಯಾರಿಂದ ಸಾಧ್ಯ? ಶ್ರೀಕಂಠನ್ ಅವರು ಈ ಭುವಿಯ ಮೇಲೆ ಇದ್ದದ್ದು ಸಾಕು ಎಂದು ಭಗವಂತ ತೀರ್ಮಾನಿಸಿದರೆ, ಅದನ್ನು ಬದಲಿಸಲು ಯಾರಿಂದ ಸಾಧ್ಯ? ಅವರ ನೇತೃತ್ವ ಮತ್ತು ಬೆಂಬಲಗಳ ಅಭಾವವನ್ನು ನಾವು ಅನುಭವಿಸಿದರೂ, ನಮ್ಮ ಪ್ರತಿಭೆಗಳನ್ನು ಗುರುತಿಸಿ, ಪೋಷಿಸಿ, ಫಲಿಸುವಂತೆ ಮಾಡಿದ ಅವರ ವ್ಯಕ್ತಿತ್ವದ ಉಜ್ವಲವಾದ ಪಾರ್ಶ್ವವನ್ನು ಮಾತ್ರ ನಾವು ಕಾಣಬಲ್ಲೆವು.

ನಮ್ಮ ವೃತ್ತಿಜೀವನದಲ್ಲಿನ ಯಶಸ್ಸಿಗೆ ಕಾರಣೀಭೂತವಾದದ್ದು ಗಾಯಕಶ್ರೇಷ್ಠನ ಮುಂಗಾಣ್ಕೆಯೇ.”
ಆಸ್ಪತ್ರೆಯಲ್ಲಿದ್ದ ಶ್ರೀಕಂಠನ್ ತಮ್ಮ ಮೊಮ್ಮಗ ಅಚಿಂತ್ಯನ ವಿಷಯದಲ್ಲಿ ತೋರಿಸಿದ ಉತ್ಸಾಹವನ್ನೇ ಗಮನಿಸಿ. ಅವರ ಮರಣಕ್ಕೆ ನಾಲ್ಕು ದಿನಗಳ ಮೊದಲು ಅಚಿಂತ್ಯ ಕೇಳಿದ್ದ- “ಹೇಗಿದ್ದೀರಿ ತಾತ? ನಿಮ್ಮ ಧ್ವನಿ ಹೇಗಿದೆ?” ಇದಕ್ಕೆ ಉತ್ತರರೂಪದಲ್ಲಿ ಆ ಗಾನತಪಸ್ವಿ ಬೇಗಡೆ ರಾಗವನ್ನು ಹಾಡಿದ್ದರು! “ಅವರ ಎದೆಗಾರಿಕೆ ಎಂಥದ್ದೆ೦ದರೆ, ಸಂಗೀತದ ಕುರಿತಾದ ಅವರ ಭಾವನೆ ಅನೇಕರಿಗೆ ಅರ್ಥವಾಗುತ್ತಿರಲಿಲ್ಲ. ೨೦೧೪ನೆಯ ಜನವರಿಯಲ್ಲಿ ನಾವು ಕಛೇರಿಗಳಿಗೆಂದು ಉಡುಪಿ ಮತ್ತು ಹೈದ್ರಾಬಾದ್ ಗಳಿಗೆ ತೆರಳಿದ್ದೆವು. ಫೆಬ್ರುವರಿ ೫ನೇ ತೇದಿಯಂದು ಬೆಂಗಳೂರಿನ ರಾಗಿಗುಡ್ಡದಲ್ಲಿ ಅವರು ಎರಡೂವರೆ ಗಂಟೆಗಳ ಕಾಲ ದೇವರನಾಮಗಳ ಕಛೇರಿಯನ್ನು ನಡೆಸಿಕೊಟ್ಟರು. ಇದೇ ಅವರ ಅಂತಿಮ ಸಾರ್ವಜನಿಕ ಕಛೇರಿಯಾಯಿತು. ಆದರೆ ಫೆಬ್ರುವರಿ ೧೧ನೆಯ ದಿನಾಂಕದ೦ದು ಅವರು ತಮ್ಮ ಮೊಮ್ಮಗ ಧ್ಯಾನ್ ನ ಉಪನಯನದಲ್ಲಿ ಹಾಡಿದರು. ಈ ಮೂಲಕ ತಾವು ಕೊನೆಯವರೆಗೂ ಹಾಡುತ್ತಿರಬೇಕು ಎನ್ನುವ ಅವರ ಅಭೀಪ್ಸೆ ಫಲಿಸಿತು.” ಎನ್ನುವುದು ರಮಾಕಾಂತ್ ಅವರ ವಿವರಣೆ.

ತನ್ನ ಶಕ್ತಿಯನ್ನು ಕಾಪಾಡಿಕೊಳ್ಳಲು ಸಂಗೀತವನ್ನೇ ಉಸಿರಾಡಿದ ಅವರನ್ನು ನಾನೊಮ್ಮೆ ಕೇಳಿದ್ದೆ, ಅವರು ತಮ್ಮ ಅಗಾಧವಾದ ನಾದತೃಷೆಯನ್ನು ತೃಪ್ತಿಪಡಿಸಿಕೊಳ್ಳುವುದಕ್ಕಾಗಿ ಮತ್ತೆ ಜನ್ಮ ತಳೆಯಲು ಬಯಸುತ್ತಾರೆಯೆ ಎಂದು. ‘ಸಪ್ತಸ್ವರಗಳನ್ನು ಒಂದೇ ಜನ್ಮದಲ್ಲಿ ಅರಿತುಕೊಳ್ಳಲು ಸಾಧ್ಯವೆ?’ ಎಂದು ಕೇಳಿದ ತ್ಯಾಗರಾಜರ ನಮ್ರತೆ ಮತ್ತು ಪ್ರಾಮಾಣಿಕತೆಯ ಕುರಿತು ನಾನು ಸದಾ ಧ್ಯಾನ ಮಾಡಿದ್ದೇನೆ. ಸಂತ ತ್ಯಾಗರಾಜರ ಈ ಕೃತಿ ಅತ್ಯಂತ ಅರ್ಥಗರ್ಭಿತವಾಗಿದೆ. ಸಂಗೀತದಲ್ಲಿ ಭಗವಂತನನ್ನು ಅನುಭವಿಸುವವರು ಮಾತ್ರ ಹೀಗೆ ಹೇಳಬಲ್ಲರು. ನಾವು ಅಪೇಕ್ಷಿಸುವ ನಾದಾನುಭವವನ್ನು ಪಡೆಯಲು ಎಷ್ಟು ಜನ್ಮಗಳು ಸಂದರೂ ಕಡಿಮೆಯೇ. ಆದರೆ ನಾನು ಪರಮತೃಪ್ತನಾಗಿದ್ದೇನೆ. ಆದ್ದರಿಂದ ನನಗೆ ಮತ್ತೊಂದು ಜನ್ಮ ಬೇಡ” ಎಂದು ಕೈ ಮುಗಿಯುತ್ತ ನುಡಿಯುತ್ತಾರೆ ಶ್ರೀಕಂಠನ್. “ಆದರೆ ಭಗವಂತ ನನಗೆ ಇನ್ನೊಂದು ಜನ್ಮವನ್ನು ಕರುಣಿಸಲು ಬಯಸಿದ್ದೇ ಆದಲ್ಲಿ, ನಾನು ಪುನಃ ರುದ್ರಪಟ್ಣದಲ್ಲೇ ಜನಿಸುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ!”

೨೦೨೦ರತ್ತ ಚುರುಕು ನಡೆ
ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಶ್ರೀಕಂಠನ್ ರವರು ಎಲ್ಲರಿಂದ ಬೀಳ್ಗೊಂಡಿದ್ದ್ದ ಕರ್ನಾಟಕದ ಮಧುರ ದನಿ. ಆರ್.ಕೆ.ಶ್ರೀಕಂಠನ್ ಟ್ರಸ್ಟ್ನ ಅಧ್ಯಕ್ಷರಾದ ರಮಾಕಾಂತ್ ಹೇಳುತ್ತಾರೆ- “ಇದು ನಮ್ಮ ಕರ್ತವ್ಯವಾದ್ದರಿಂದ ನಾವು ದಂತಕತೆಯನ್ನು ಮುಂದಕ್ಕೊಯ್ಯಬೇಕು. ನಮ್ಮ ತಂದೆಯವರ ಸಾಂಗೀತಿಕ ಪ್ರಯತ್ನಗಳನ್ನು ದಾಖಲಿಸುವುದಕ್ಕಾಗಿ ಟ್ರಸ್ಟ್ ಒಂದು ಶ್ರೇಯಾಂಕವನ್ನು ಗಳಿಸುವುದಾದರೆ, ಅದು ಅವರ ೯೪ನೆಯ ಜನ್ಮದಿನದಂದು ಅವರಿಗೆ ಸಮರ್ಪಿಸಿದ ‘ವಾಯ್ಸ್ ಆಫ್ ಅ ಜೆನೆರೇಶನ್’ ಪುಸ್ತಕ ಎನ್ನಬೇಕು. ಇದು ನಾದದ ಧ್ಯೇಯಕ್ಕಾಗಿ ಶ್ರಮಿಸಿದ ಅವಿಶ್ರಾಂತ ಮನುಷ್ಯನೊಬ್ಬನ ಕತೆ, ಸಂಗೀತದ ಪರಿಶುದ್ಧತೆಗಾಗಿ ತಾನು ಮಾಡಿದ ತಪೋಮಯ ಪ್ರಯತ್ನಗಳನ್ನು ಪ್ರಮಾಣೀಕರಿಸಲು ಎಂದೂ ಆತುರಪಡದ ವ್ಯಕ್ತಿಯೊಬ್ಬನ ಕತೆ.

ಈಗ ಶ್ರೀಕಂಠನ್ ಅವರ ಹಿರಿಯ ಶಿಷ್ಯರ ತಂಡಕ್ಕೆ ಸೇರಿದ ವಿದುಷಿ ಮತ್ತು ಗಾಯಕಿ ಟಿ.ಎಸ್.ಸತ್ಯವತಿಯವರ ನೇತೃತ್ವದಲ್ಲಿ ಈ ಪುಸ್ತಕದ ಕನ್ನಡದ ಅವತರಣಿಕೆಯನ್ನು ಕರ್ನಾಟಕದ ಮೇರುಪ್ರತಿಭೆಗೆ ಅವರ ಶತಮಾನೋತ್ಸವದ ಶುಭಾರಂಭದ ಕುರುಹಾಗಿ ಮತ್ತು ಶ್ರದ್ಧಾ ನಿವೇದನೆಯಾಗಿ ಸಲ್ಲಿಸಲು ಹರ್ಷವೆನಿಸುತ್ತದೆ” ಎನ್ನುತ್ತಾರೆ ರಮಾಕಾಂತ್.

‘ಕರ್ನಾಟಕ ಸಂಗೀತದ ಭೀಷ್ಮಪಿತಾಮಹ’ ಎಂದೇ ಪ್ರಸಿದ್ಧರಾದ ಶ್ರೀಕಂಠನ್ ರವರು ಧರ್ಮಧ್ವಜಿತ್ವದ ಸೋಂಕೇ ಇಲ್ಲದ ಋಜುಸ್ವಭಾವದ ಭಕ್ತರು. ಗರುಡ ಪಕ್ಷಿಯ ತೆರೆದ ರೆಕ್ಕೆಗಳ ಮತ್ತು ನಿರಂತರವಾಗಿ ವಿಸ್ತಾರಗೊಳ್ಳುವ ವಟವೃಕ್ಷದ ಶಾಖೋಪಶಾಖೆಗಳ ಸೊಬಗನ್ನು ಎಷ್ಟೆಂದು ವರ್ಣಿಸುವುದು? ತಮ್ಮ ಗುರುಗಳ ಕುರಿತ ನನ್ನ ಈ ಪ್ರಶ್ನೆಗೆ ಟಿ.ಎಸ್.ಸತ್ಯವತಿಯವರು ನೀಡಿದ ಉತ್ತರ ನೇರವೂ ಸರಳವೂ ಆಗಿದೆ- “ವಟವೃಕ್ಷವನ್ನು ಈಗ ಕನ್ನಡದಲ್ಲೂ ವಿವರಿಸಿ ಪ್ರಕಾಶಿಸಬೇಕು. ಅವರ ಹಿರಿಯ ಶಿಷ್ಯೆಯಾಗಿ ಇದನ್ನು ಸಾಧಿಸಿ ಸಂಗೀತ ಪ್ರಪಂಚಕ್ಕೆ ಅವರ ಶತಮಾನೋತ್ಸವದ ಶುಭಸಂದರ್ಭದಲ್ಲಿ ಅರ್ಪಿಸುವುದು ನನ್ನ ಕರ್ತವ್ಯ.” ಶ್ರೀಕಂಠನ್ ಅವರ ಸಂಗೀತ ಜೀವಕಳೆಯಿಂದ ಕೂಡಿ ಮುಂದುವರಿದಿದೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

July 22, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: