ಆರ್ ಎಸ್ ರಾಜಾರಾಮ್ ಎನ್ನುವ ಅರಿವಿನ ಜೊತೆಗಾರ

ನವಕರ್ನಾಟಕವನ್ನು ಒಂದು ಮಹತ್ವದ ಸಂಸ್ಥೆಯಾಗಿ ಕಟ್ಟಲು ಕಾರಣರಾದವರಲ್ಲಿ ಆರ್ ಎಸ್ ರಾಜಾರಾಂ ಪ್ರಮುಖರು. ತಮ್ಮ 82 ನೆಯ ವಯಸ್ಸಿನಲ್ಲಿ ಅವರು ಇಲ್ಲವಾಗಿದ್ದಾರೆ. 

‘ಬಹುರೂಪಿ’ಯ ಜಿ ಎನ್ ಮೋಹನ್ ಅವರು ಈ ಹಿಂದೆ ‘ಉದಯವಾಣಿ’ಗಾಗಿ ಬರೆದ ಬರಹ ಇಲ್ಲಿದೆ- 

ಜಿ ಎನ್ ಮೋಹನ್

ಒಂದು ದಿನ ನಾನೂ ಹಾಗೂ ಲಹರಿ ವೇಲು ಮಾತನಾಡುತ್ತಾ ಕುಳಿತಿದ್ದೆವು. ನಾನು ಅವರಿಗೆ ಕೇಳಿದೆ- ಅಲ್ಲಾ ನೀವು ಕೈಯಿಟ್ಟ ಸಿ ಡಿ ಗಳೆಲ್ಲಾ ಚಿನ್ನವಾಗುತ್ತದಲ್ಲಾ ಅದು ಹೇಗೆ ಅಂತ. ಅದಕ್ಕೆ ಲಹರಿ ವೇಲು ನಕ್ಕು ‘ನನ್ನ ಕಿವಿ’ ಎಂದರು. ನಾನು ಇದೇನಪ್ಪಾ ಲಹರಿ ಕಂಪನಿಯ ಸಿ ಡಿ ಯಶಸ್ಸಿಗೂ, ವೇಲು ಅವರ ಕಿವಿಗೂ ಎತ್ತಣಿಂದೆತ್ತ ಸಂಬಂಧ ?ಎಂದು ಯೋಚಿಸುತ್ತಿದ್ದೆ. ಅವರು ಹೇಳಿದರು- ‘ಈ ಕಿವಿ ನನ್ನ ಆಸ್ತಿ. ಒಂದು ಹಾಡು ಕೇಳಿದ ತಕ್ಷಣ ಈ ಕಿವಿಗೆ ಗೊತ್ತಾಗಿ ಹೋಗುತ್ತದೆ ಇದು ಕ್ಲಿಕ್ ಆಗುತ್ತದೋ ಇಲ್ಲವೋ ಅಂತ. ಮತ್ತು ನಾನು ಈ ಕಿವಿಯನ್ನು ಎಂದೂ ಕಲುಷಿತಗೊಳ್ಳಲು ಬಿಟ್ಟಿಲ್’ ಎಂದರು.

ಈ ಮಾತು ಮತ್ತೆ ನೆನಪಿಗೆ ಬಂದದ್ದು ಆರ್ ಎಸ್ ರಾಜಾರಾಮ್ ಅವರ ಪತ್ರವೊಂದು ನನ್ನ ತೆಕ್ಕೆ ಸೇರಿದಾಗ. ನವಕರ್ನಾಟಕದ ಜೊತೆಗೆ ಐದು ದಶಕದ ಸುಧೀರ್ಘ ನಂಟು ಹೊಂದಿದ್ದ ರಾಜಾರಾಮ್ ತಮ್ಮ ಆರೋಗ್ಯ ಹಾಗೂ ವಯಸ್ಸಿನ ಕಾರಣದಿಂದ ತಮ್ಮ ಜವಾಬ್ದಾರಿಯಿಂದ ಬಿಡುಗಡೆ ಹೊಂದುತ್ತಿದ್ದಾರೆ. ನವಕರ್ನಾಟಕ ಎಂದರೆ ರಾಜಾರಾಮ್, ರಾಜಾರಾಮ್ ಎಂದರೆ ನವಕರ್ನಾಟಕ ಎಂದು ಸುಮಾರು ಜನ ಹೇಳಿಬಿಡುತ್ತಾರೆ. ತಪ್ಪು, ಅದು ಖಂಡಿತಾ ತಪ್ಪು. ನನಗೆ ರಾಜಾರಾಮ್ ಎಂದರೆ ನವಕರ್ನಾಟಕ ಮಾತ್ರವಲ್ಲ ಅವರು ನನ್ನ ಯೌವನ, ರಾಜಾರಾಮ್ ಎಂದರೆ ನನ್ನ ದಶಕಗಳ ಅರಿವು, ರಾಜಾರಾಮ್ ಎಂದರೆ ಅದು ನನ್ನ ನೋಟ ಕೂಡಾ. ರಾಜಾರಾಮ್ ಎಂದಾಕ್ಷಣ ನನಗೆ ಅದು ನವಕರ್ನಾಟಕ ಮಾತ್ರವಲ್ಲ, ಸೋವಿಯತ್ ದೇಶ, ಬ್ರೆಕ್ಟ್, ಗಾರ್ಕಿ, ಟಾಲ್ಸ್ಟಾಯ್, ಚೆ ಗೆವಾರ, ಜಗತ್ತಿನ ಅಷ್ಟೂ ದೇಶಗಳ ಕಥೆಗಾರರು, ರಾಹುಲ ಸಾಂಕೃತ್ಯಾಯನ, ಜಾಗತೀಕರಣ, ಡಂಕೆಲ್ ಪ್ರಸ್ತಾವನೆ, ಜಿ ರಾಮಕೃಷ್ಣ.. ಹೀಗೆ ಎಲ್ಲವೂ. ಎಲ್ಲರೂ..

ಆರ್ ಎಸ್ ರಾಜಾರಾಮ್ ಅವರಿಗೆ ಒಂದು ಹಸ್ತಪ್ರತಿ ಕೈನಲ್ಲಿ ಹಿಡಿದುಕೊಂಡರೆ ಇದು ಎಲ್ಲಿಯವರೆಗೆ ಹೋಗಿ ಮುಟ್ಟುವ ತಾಖತ್ತು ಇದೆ ಎಂದು ಗೊತ್ತಾಗಿ ಹೋಗುತ್ತಿತ್ತು. ಅಷ್ಟೇ ಆಗಿದ್ದರೆ ಅವರು ಒಬ್ಬ ಪುಸ್ತಕದಂಗಡಿಯ ಮುಖ್ಯಸ್ಥ ಎಂದು ಮಾತ್ರ ಕರೆಸಿಕೊಳ್ಳುತ್ತಿದ್ದರು ಆದರೆ ಅವರಿಗೆ ಆ ಪುಸ್ತಕ ಉಂಟು ಮಾಡಬಹುದಾದ ಕಂಪನಗಳೂ ಅರ್ಥವಾಗಿಬಿಡುತ್ತಿತ್ತು. ಈ ಕಾರಣಕ್ಕಾಗಿಯೇ ಅವರು ಅರಿವಿನ ಜೊತೆಗಾರರೂ ಆದರು.

ಒಂದು ಪೀಳಿಗೆ ಇವತ್ತು ಹೋರಾಟದ ಸ್ಪೂರ್ತಿ ಪಡೆದಿದ್ದರೆ, ಓದಿನ ರುಚಿ ಹತ್ತಿಸಿಕೊಂಡಿದ್ದರೆ, ಸಮಾಜವನ್ನು ಸರಿಯಾಗಿ ಅರ್ಥೈಸಿಕೊಂಡಿದ್ದರೆ, ಜಾಗತೀಕರಣ ಉಂಟು ಮಾಡುವ ತಲ್ಲಣಗಳನ್ನು ತಿಳಿದಿದ್ದರೆ ಖಂಡಿತಾ ಅದರ ಹಿಂದೆ ರಾಜಾರಾಮ್ ಹಾಗೂ ನವಕರ್ನಾಟಕದ ಪಾತ್ರ ಇದ್ದೆ ಇದೆ. ‘ಪುಸ್ತಕವೆಂದರೆ ಪುಸ್ತಕವಲ್ಲ ಅರಿವಿನ ಗೂಡು, ಚಿಲಿ ಪಿಲಿ ಎನ್ನುತ್ತಾ ಮೇಲಕ್ಕೆ ಹಾರುವ ಹಕ್ಕಿಯ ಹಾಡು ಕೇಳು..’ ಎನ್ನುವ ಕವಿತೆ ಸಾಲು ಯಾಕೋ ತುಂಬಾ ನೆನಪಾಗುತ್ತಿದೆ. ಅದಕ್ಕೆ ಕಾರಣ ಮತ್ತೆ ರಾಜಾರಾಮ್ ಅವರೇ..

ಒಂದು ದಿನ ನಾನೂ ಅವರೂ ಉಳ್ಳಾಲದ, ಯಾರೂ ಸುಳಿಯದ ಕಡಲ ದಂಡೆಯಲ್ಲಿ ಕುಳಿತಿದ್ದೆವು, ಜೊತೆಗೆ ಎ ಆರ್ ಉಡುಪ, ಎನ್ ಎಸ್ ವೆಂಕಟರಾಮ್, ಎನ್ ಕೆ ವಸಂತಲಕ್ಷ್ಮಿ ಹೀಗೆ ಒಂದಷ್ಟು ಆತ್ಮೀಯರು. ಸೂರ್ಯ ಜಾರಿ ಹೋಗಿ ಸುಮಾರು ಹೊತ್ತಾಗಿತ್ತು. ನನ್ನೊಡನೆ ಮಾತನಾಡುತ್ತಿದ್ದ ರಾಜಾರಾಮ್ ‘ಮೋಹನ್ ಆ ನಕ್ಷತ್ರಗಳನ್ನ ನೋಡಿ.. ಇಲ್ಲಿ ಹಾರುತ್ತಿರುವ ಮಿಂಚು ಹುಳ ನೋಡಿ.. ಅವಕ್ಕೆ ಈ ಕತ್ತಲೆಯನ್ನೇ ಒದ್ದು ಓಡಿಸುತ್ತೇನೆ ಎನ್ನುವ ವಿಶ್ವಾಸ ಇದೆ ಆಲ್ವಾ’ ಎಂದರು. ನಾನು ಅವರತ್ತ ತಿರುಗಿದೆ. ‘ಪುಸ್ತಕಗಳೂ ಅಷ್ಟೇ, ದೊಡ್ಡ ಅಂಧಕಾರವನ್ನು ಓಡಿಸುವ ಕೆಲಸ ಮಾಡಬೇಕು ಆ ನಕ್ಷತ್ರಗಳಂತೆ, ಈ ಮಿಣುಕು ಹುಳದಷ್ಟಾದರೂ..’ ಎಂದರು

ಅವರು ಅದೇ ಕೆಲಸ ಮಾಡಿದರು. ಸತತವಾಗಿ ೫ ದಶಕದ ಕಾಲ ಅವರು ನಕ್ಷತ್ರಗಳನ್ನು ಹುಡುಕಿದರು ಮಿಣುಕು ಹುಳದ ಬೆಂಬತ್ತಿದರು ಆ ಮೂಲಕ ಸಮಾಜದ ನಡುವಿನ ಅಂಧಕಾರಕ್ಕೆ ಒಂದಿಷ್ಟಾದರೂ ಅರಿವಿನ ಬೆಳಕು ಕೊಡಲು ಯತ್ನಿಸಿದರು. ನವಕರ್ನಾಟಕ ಎನ್ನುವ ಕ್ಯಾನವಾಸ್ ನೊಳಗೆ ಜಗತ್ತಿನ ಎಷ್ಟೆಲ್ಲಾ ಲೇಖಕರನ್ನು ಸೇರಿಸಿದರು, ದೇಶದ ಎಷ್ಟೆಲ್ಲಾ ಸುಡು ವಿಷಯಗಳನ್ನು ತಂದಿಟ್ಟರು, ಎಷ್ಟೆಲ್ಲಾ ದೇಶಗಳನ್ನು ಪರಿಚಯಿಸಿದರು. ಎಷ್ಟೆಲ್ಲಾ ಹೋರಾಟಗಳನ್ನು ಪರಿಚಯಿಸಿದರು, ಎಷ್ಟೆಲ್ಲಾ ಸೌಹಾರ್ದ ಚಳವಳಿಗಳನ್ನು ಪರಿಚಯಿಸಿದರು.

ದಕ್ಷಿಣ ಕನ್ನಡದ ಅಂಗಳದಲ್ಲಿದ್ದ ರಾಜಾರಾಮ್ ಬಿ ವಿ ಕಕ್ಕಿಲ್ಲಾಯರ ಹೋರಾಟದ ರೀತಿಗೆ ಮಾರುಹೋದರು. ಪುತ್ತೂರಿನಲ್ಲಿ ರೈತ ಕಾರ್ಮಿಕರ ಸಂಘಟನೆ ಆರಂಭಿಸಿದರು. ಅಲ್ಲಿಂದ ತಲುಪಿಕೊಂಡಿದ್ದು ಬೆಂಗಳೂರಿನ ನವಕರ್ನಾಟಕವನ್ನು. ಬಿ ವಿ ಕಕ್ಕಿಲ್ಲಾಯ ಅವರ ಕಣ್ಣೋಟದ ಫಲವಾಗಿ ಆರಂಭಗೊಂಡ ನವಕರ್ನಾಟಕ ಪ್ರಕಾಶನಕ್ಕೆ ರಾಜಾರಾಮ್ ಪ್ರವೇಶ ಕೊಟ್ಟರು. ‘ಜನಶಕ್ತಿ’ ಮುದ್ರಣಾಲಯವನ್ನು ಯಶಸ್ವಿಯಾಗಿ ನಿರ್ವಹಿಸಿದರು. ನವಕರ್ನಾಟಕದ ಮುಖ್ಯಸ್ಥರಾಗಿದ್ದ ಎಸ್ ಆರ್ ಭಟ್ ನಿವೃತ್ತರಾದಾಗ ೧೯೭೨ ರಲ್ಲಿ ರಾಜಾರಾಮ್ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕರಾಗಿ ಅದರ ಚುಕ್ಕಾಣಿ ಹಿಡಿದರು.

ಆ ನಂತರದ್ದು ನಮ್ಮೆಲ್ಲರ ಕಣ್ಣ ಮುಂದಿದೆ. ಕ್ಯೂಬಾ ಪ್ರವಾಸ ಕಥನ ಬರೆಯುವಾಗ ಗೂಗಲ್ ಇಲ್ಲದ ಕಾಲದಲ್ಲಿ ಕ್ಯೂಬಾದ ಕಥೆಗಳನ್ನು ಕೈಗಿಟ್ಟದ್ದು ಇದೇ ನವಕರ್ನಾಟಕ. ಡಂಕೆಲ್ ಪ್ರಸ್ತಾವನೆ- ಹಾಗೆಂದರೇನು? ಎಂದು ಎಲ್ಲರೂ ಕೇಳುತ್ತಿದ್ದಾಗ ನವಕರ್ನಾಟಕ ನನ್ನ ಬಳಿ ಮಾಧ್ಯಮದ ಮೇಲೆ ಡಂಕೆಲ್ ಪ್ರಸ್ತಾವನೆ ಮಾಡುವ ದಾಳಿಯ ಬಗೆಗಿನ ಎರಡು ಕೃತಿಗಳನ್ನು ಬರೆಸಿತು. ಸ್ವಾತಂತ್ರ್ಯೋತ್ತರ ಭಾರತದ ಅವಲೋಕನ ಸರಣಿಯಂತೂ ಇವತ್ತಿಗೂ ಭಾರತ ಅರ್ಥವಾಗದವರಿಗೆ, ಅರ್ಥವಾದವರಿಗೂ ಇರುವ ಬೆಳಕಿನ ಹಣತೆಗಳು.

ರಾಜಾರಾಮ್ ಗೆ ಚೆನ್ನಾಗಿ ಗೊತ್ತು. ಇನ್ನು ಉರಿಯುವ ಪಂಜನ್ನು ನಮ್ಮ ನಂತರದ ಪೀಳಿಗೆಗೆ ದಾಟಿಸಬೇಕು ಎಂದು. ನನ್ನ ಮಗಳೊಂದಿಗೆ ಒಂದು ದಿನ ನವಕರ್ನಾಟಕದ ಬಾಗಿಲು ಬಡಿದೆ. ಅವರು ಹತ್ತೆಂಟು ಪುಸ್ತಕಗಳನ್ನು ಸಡಗರದಿಂದ ತಾವೇ ಆಯ್ದೂ ಆಯ್ದೂ ಅವಳ ಕೈಗಿಟ್ಟಿದ್ದರು. ಈ ಅನುಭವ ಮಕ್ಕಳೊಂದಿಗೆ ನವಕರ್ನಾಟಕಕ್ಕೆ ಹೋದ ಎಲ್ಲರಿಗೂ ಆಗಿದೆ.ಈಗ ನೋಡಿದರೆ ಅಷ್ಟೇ ಪ್ರೀತಿಯಿಂದ ನವಕರ್ನಾಟಕದ ಜವಾಬ್ದಾರಿಯನ್ನೇ ನಂತರದ ಪೀಳಿಗೆಯ ಕೈಗಿಟ್ಟುಬಿಟ್ಟಿದ್ದಾರೆ. ಡಾ ಸಿದ್ಧನಗೌಡ ಪಾಟೀಲ್, ಎ ಆರ್ ಉಡುಪ ಅವರ ಕೈಗೆ ರಿಲೇ ಓಟದ ಬೇಟನ್ ಕೊಟ್ಟಿದ್ದಾರೆ.

ತಕ್ಕಡಿ ಹಿಡಿದು ವ್ಯಾಪಾರಕ್ಕೆ ಕೂತ ಪ್ರಕಾಶಕರ ನಡುವೆ ಪುಸ್ತಕ ಎನ್ನುವುದು ವಿಚಾರದ ದೊಂದಿ ಎಂದು ಅರ್ಥೈಸಿದ ರಾಜಾರಾಮ್ ಪುಸ್ತಕ ಲೋಕಕ್ಕೆ ಒಂದು ಘನತೆ ತಂದುಕೊಟ್ಟವರು. ಪುಸ್ತಕದ ಘಮ ನಿಮ್ಮ ಸುತ್ತಾ ಆಡುತ್ತಲೇ ಇರಲಿ..

‍ಲೇಖಕರು Admin

August 17, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ರಾಮನಗರದತ್ತ.. ಕಾವ್ಯ ಯಾನ

ರಾಮನಗರದತ್ತ.. ಕಾವ್ಯ ಯಾನ

ಕಾವ್ಯ ಸಂಸ್ಕೃತಿ ಯಾನಜನರೆಡೆಗೆ ಕಾವ್ಯ ಮೂರನೇ ಕಾವ್ಯ ಯಾನವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಕಲಬುರಗಿಯ ನನ್ನೆಲ್ಲ ಗೆಳೆಯರಿಗೆ ಧನ್ಯವಾದಗಳು...

ನೀವಿಂಗ ಕರೆದರೆ ನಾ ಹೆಂಗಾ ಬರಬೇಕು..

ನೀವಿಂಗ ಕರೆದರೆ ನಾ ಹೆಂಗಾ ಬರಬೇಕು..

-ಎಸ್. ಕೆ ಉಮೇಶ್ ** ಪೊರಕೆಯ ಹಾಡು ನಾಟಕ ಮೂರು ದಿನದಲ್ಲಿ ಉತ್ತರ ಕರ್ನಾಟಕದಲ್ಲಿ ನಾಲ್ಕು ಪ್ರದರ್ಶನಗಳು ಕಂಡಿವೆ. ನಾಲ್ಕನೇ ಪ್ರದರ್ಶನ...

3 ಪ್ರತಿಕ್ರಿಯೆಗಳು

  1. Dr. Chandra Aithal

    ಒಳ್ಳೆಯ ಲೇಖನ. ಮೋಹನ್ ಅವರೇ, ನಿಮ್ಮನ್ನು ಇ-ಮೇಲ್ ಮೂಲಕ ಸಂಪರ್ಕಿಸಲು ಸಾಧ್ಯವಾ? ಡಿಸೆಂಬರ ಅಂತ್ಯ, ಜನವರಿ ಮೊದಲಿಗೆ ನಿಮ್ಮನ್ನು ಸಂಪರ್ಕಿಸಬೇಕೆಂದಿದೆ.

    ಚಂದ್ರ ಐತಾಳ
    ಲಾಸ್ ಏಂಜಲ್ಸ್
    ಅಮೆರಿಕ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This